ಸಣ್ಣ ಮತ್ತು ಮಧ್ಯಮ ಉದ್ದಿಮೆ ಎನಿಸಿಕೊಳ್ಳಲು ಹೂಡಿಕೆ ಮತ್ತು ವಹಿವಾಟು ಅರ್ಹತೆಯ ಮಿತಿಯನ್ನು ಗಮನಾರ್ಹವಾಗಿ ವಿಸ್ತರಿಸುವ ಮೂಲಕ ‘ಆತ್ಮನಿರ್ಭರ ಭಾರತ್ ಪ್ಯಾಕೇಜ್’ನಲ್ಲಿ ಇಂಡಸ್ಟ್ರಿಯ ಭವಿಷ್ಯದ ವಿಕಾಸಕ್ಕೆ ಉತ್ತೇಜನ ನೀಡಲಾಗಿದೆ. ಹೀಗಿದ್ದರೂ, ವರ್ತಮಾನದ ಕೊರೊನಾ ಬಿಕ್ಕಟ್ಟು ಎದುರಿಸಲು ನೇರ ನೆರವನ್ನೂ ಹೆಚ್ಚಿಸಬಹುದಿತ್ತು ಎನ್ನುತ್ತಾರೆ ತಜ್ಞರು.
– ಶೇ.30.54 ಜಿಡಿಪಿಯಲ್ಲಿ ಎಂಎಸ್ಎಂಇ ಪಾಲು
– 11 ಕೋಟಿ ಎಂಎಸ್ಎಂಇ ವಲಯ ಸೃಷ್ಟಿಸಿರುವ ಉದ್ಯೋಗ
(ಆತ್ಮ ನಿರ್ಭರ್ ಭಾರತ್- ಭಾಗ 2)
‘ಸಣ್ಣದಾಗಿರುವುದು ಚೆಂದ’ ನುಡಿಗಟ್ಟು ಸಣ್ಣ ಉದ್ದಿಮೆಗಳ ಬೆಳವಣಿಗೆಯ ದೃಷ್ಟಿಯಿಂದ ಸೂಕ್ತವಲ್ಲ. ಸಣ್ಣ ಉದ್ದಿಮೆ ದೊಡ್ಡದಾಗಿ ವಿಕಾಸವಾದರೆ ಮಾತ್ರ ಉಳಿದುಕೊಳ್ಳುತ್ತದೆ. ಆತ್ಮನಿರ್ಭರ್ ಭಾರತ್ ಪ್ಯಾಕೇಜ್ನಲ್ಲಿ 10 ಕೋಟಿ ರೂ. ಹೂಡಿಕೆ ಮತ್ತು 50 ಕೋಟಿ ರೂ. ತನಕ ವಹಿವಾಟು ಹೊಂದಿರುವ ಕಾರ್ಖಾನೆಯನ್ನೂ ಸಣ್ಣ ಉದ್ದಿಮೆ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಚಿಕ್ಕ ಉದ್ದಿಮೆಗಳ ಭವಿಷ್ಯದ ಬೆಳವಣಿಗೆಗೆ ನೆರವು ಸಿಗಲಿದೆ.
ಜತೆಗೆ 3 ಲಕ್ಷ ಕೋಟಿ ರೂ. ಜಾಮೀನು ಮುಕ್ತ ಸಾಲ, ಗ್ಲೋಬಲ್ ಟೆಂಡರ್ಗಳಲ್ಲಿ ಆದ್ಯತೆ ಇತ್ಯಾದಿ ನೆರವುಗಳನ್ನು ಪ್ರಕಟಿಸುವ ಮೂಲಕ ಕೇಂದ್ರ ಸರಕಾರ, ಅವುಗಳ ವಿಕಾಸಕ್ಕೆ ಆದ್ಯತೆ ನೀಡಿದೆ. ಹೀಗಿದ್ದರೂ, ಸಣ್ಣ ಉದ್ದಿಮೆಗಳಿಗೂ ನೇರ ನಗದು ವಿತರಣೆ ಮುಂತಾದ ತಕ್ಷಣದ ನೆರವು ಕೊಡಬೇಕಿತ್ತು ಎನ್ನುತ್ತಾರೆ ಕೈಗಾರಿಕಾ ತಜ್ಞರು.
‘‘ಸಣ್ಣ, ಮಧ್ಯಮ ಉದ್ದಿಮೆಗಳಿಗೆ ಒಟ್ಟು 3 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ. ಹಾಗೆಯೇ ಎನ್ಬಿಎಫ್ಸಿ ಗಳಿಗೆ ಕ್ರೆಡಿಟ್ ಮತ್ತು ಈಕ್ವಿಟಿ ಮೂಲಕ ನೆರವು ನೀಡಲಿದ್ದಾರೆ. ಆದರೆ ಇಲ್ಲಿ ಎಚ್ಚರಿಕೆಯ ಒಂದು ಮಾತನ್ನ ಹೇಳಲೇಬೇಕಿದೆ. ಇಂತಹ ಸಾಲ ನೀಡುವಾಗ ಯಾವುದೇ ರೀತಿಯ ಕೋಲಾಟರಲ್ ಸೆಕ್ಯುರಿಟಿ, ಅಂದರೆ ಯಾವುದೇ ರೀತಿಯ ಆಸ್ತಿಯನ್ನು ಅಡವಿಡುವುದು ಬೇಕಿಲ್ಲ. ಹೀಗೆ ಕೊಟ್ಟ ಸಾಲ ಮುಂಬರುವ ಮೂರು ನಾಲ್ಕು ವರ್ಷದಲ್ಲಿ ವಸೂಲಾಗದೆ ಉಳಿದರೆ ಸವಾಲಾದೀತು,’’ ಎನ್ನುತ್ತಾರೆ ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ.
ಪ್ಯಾಕೇಜ್ನಲ್ಲಿ ಇನ್ನೇನಿರಬೇಕಿತ್ತು?
– ಸಣ್ಣ ಉದ್ದಿಮೆಗಳಿಗೆ ಲಾಕ್ಡೌನ್ ಪರಿಣಾಮ 2 ತಿಂಗಳು ವಹಿವಾಟು, ಆದಾಯ ಇರಲಿಲ್ಲವಾದ್ದರಿಂದ ನಗದು ನೆರವು ಉದ್ಯೋಗಿಗಳ ಸಂಬಳ ವಿತರಣೆಗೆ ಸಹಾಯ
– ಹಾಲಿ ಸಾಲಕ್ಕೆ ಸಂಬಂಧಿಸಿ ಕನಿಷ್ಠ ಮೂರು ತಿಂಗಳಿನ ಬಡ್ಡಿ ಮನ್ನಾ ಮಾಡಬಹುದಿತ್ತು
– 15,000 ರೂ. ಮಾಸಿಕ ವೇತನದ ಮಿತಿ ಇಟ್ಟು ಪಿಎಫ್ ಕಾಂಟ್ರಿಬ್ಯೂಷನ್ ಪಾವತಿಸುವ ಸರಕಾರದ ಕೊಡುಗೆ ಹೆಚ್ಚಿನ ಪ್ರಯೋಜನವಾಗದು.
ದೀರ್ಘಕಾಲೀನ ದೃಷ್ಟಿಯಿಂದ ಅತಿ ಉತ್ತಮವಾದ ಪ್ಯಾಕೇಜ್ ಇದು. ಆದರೆ ಈ ಪರಿಸ್ಥಿತಿಯಲ್ಲಿ ಸಣ್ಣ ಉದ್ದಿಮೆಗೆ ತಕ್ಷಣದ ನೆರವನ್ನು ನೀಡಿದ್ದರೆ ಒಳ್ಳೆಯದಿತ್ತು. 40 ದಿನಗಳ ಲಾಕ್ಡೌನ್ನಿಂದ ಉದ್ದಿಮೆಗಳು ತೀವ್ರ ಬಳಲಿವೆ. ಇನ್ನಾದರೂ ಮಾಡಬಹುದು ಎಂಬ ನಿರೀಕ್ಷೆ ಇದೆ.
-ಆರ್. ರಾಜು ಅಧ್ಯಕ್ಷ, ಕಾಸಿಯಾ
ಸಣ್ಣ ಉದ್ದಿಮೆಗೆ ಕೊಟ್ಟಿದ್ದೇನು?
– 3 ಲಕ್ಷ ಕೋಟಿ ರೂ. ಜಾಮೀನು ಮುಕ್ತ ಸಾಲ
– 4 ವರ್ಷಗಳ ಅವಧಿಗೆ ಸಾಲ, 12 ತಿಂಗಳು ಇಎಂಐ ಕಟ್ಟಬೇಕಿಲ್ಲ
– ಎಂಎಸ್ಎಂಇಗಳಿಗೆ 50,000 ಕೋಟಿ ಈಕ್ವಿಟಿ ನೆರವು
– ಎನ್ಬಿಎಫ್ಸಿ ಗಳಿಗೆ 30,000 ಕೋಟಿ
– ಸರಕಾರಿ ಟೆಂಡರ್ಗಳಲ್ಲಿ 200 ಕೋಟಿ ತನಕ ಸಣ್ಣ ಮತ್ತು ಮಧ್ಯಮ ಉದ್ದಿಮೆಗೆ ಮೀಸಲು
ಹೊಸ ವ್ಯಾಖ್ಯಾನದ ಲಾಭವೇನು?
ಸಣ್ಣ ಉದ್ದಿಮೆಯು 10 ಕೋಟಿ ರೂ. ಹೂಡಿಕೆ ಮತ್ತು 50 ಕೋಟಿ ರೂ. ವಹಿವಾಟು ನಡೆಸುವ ತನಕವೂ ಸಣ್ಣ ಉದ್ದಿಮೆಗೆ ಲಭಿಸುವ ರಿಯಾಯಿತಿ, ಸೌಲಭ್ಯಗಳನ್ನು ಪಡೆಯಲಿದೆ. ಈ ಹಿಂದೆ ಹೂಡಿಕೆಯು 5 ಕೋಟಿ ರೂ. ಒಳಗೆ ಇರಬೇಕಿತ್ತು.
50 ಕೋಟಿ ರೂ. ಹೂಡಿಕೆ ಮತ್ತು 200 ಕೋಟಿ ರೂ. ವಹಿವಾಟು ಹೊಂದಿರುವ ಕಂಪನಿಗಳೂ ಮಧ್ಯಮ ಉದ್ದಿಮೆ ಎನಿಸಲಿದೆ. ಹೀಗಾಗಿ ಮಧ್ಯಮ ವಲಯದ ಇಂಡಸ್ಟ್ರಿಗಳ ಪ್ರಗತಿಗೆ ಉತ್ತೇಜನ ಸಿಕ್ಕಂತಾಗಿದೆ.