ತಂತ್ರಜ್ಞಾನದಲ್ಲಿ ಹಿಂದುಳಿಯುವ ಯಾವ ಭಾಷೆಯೂ ಏಳಿಗೆ ಹೊಂದುವುದು ಸಾಧ್ಯವಿಲ ಎಂಬ ವಾತಾವರಣ ಈಗ ನಿರ್ಮಾಣವಾಗಿದೆ. ಕನ್ನಡಕ್ಕೂ ಇದು ಅನ್ವಯ. ತಂತ್ರಾಂಶ ವಿಚಾರದಲ್ಲಿ ಕನ್ನಡದಲ್ಲಿ ಹಲವು ಕೆಲಸಗಳು ಆಗಿದ್ದರೂ, ತುರ್ತಾಗಿ ಗಮನಹರಿಸಬೇಕಾದ ಕೆಲ ಸಂಗತಿಗಳಿವೆ.
ಗಣಕಯಂತ್ರದ ಬಳಕೆಯು ಇಂದು ಸರ್ವವ್ಯಾಪಿಯಾಗುತ್ತಿದೆ. ಆದರೆ ಈಗ ಇದರ ಬಳಕೆಯಲ್ಲಿ ಇಂಗ್ಲಿಷಿನದ್ದೇ ಸಿಂಹಪಾಲು. ಎಷ್ಟೋ ಮಂದಿ ತಾವು ಗಣಕಯಂತ್ರಗಳನ್ನು ಬಳಸುವುದರಿಂದ ಇಂಗ್ಲಿಷ್ ಅನಿವಾರ್ಯ, ಹಾಗಾಗಿ ಕನ್ನಡವನ್ನು ಬಳಸದವರಾಗಿದ್ದೇವೆ ಎಂಬ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ, ಕರ್ನಾಟಕದ ಆಡಳಿತ ಭಾಷೆ ಕನ್ನಡವಾದುದರಿಂದ ಸರ್ಕಾರದ ಎಲ್ಲ ವ್ಯವಹಾರ ಮತ್ತು ಎಲ್ಲ ಹಂತಗಳಲ್ಲಿ ಕನ್ನಡವನ್ನು ಬಳಸಲೇಬೇಕೆಂಬ ಸರ್ಕಾರಿ ಆದೇಶವಿದ್ದರೂ, ಗಣಕಯಂತ್ರದಲ್ಲಿ ಮತ್ತು ವ್ಯವಹಾರಗಳಲ್ಲಿ ಕನ್ನಡದ ಬಳಕೆ ಕುಂಟುತ್ತಿದೆ ಮತ್ತು ಹಿಂದೆ ಬಿದ್ದಿದೆ. ಹಿಂದೆ ಬೆರಳಚ್ಚು ಯಂತ್ರಗಳು ಬಂದು ಒಮ್ಮಿಂದೊಮ್ಮೆಲೇ ಕಚೇರಿಗಳಲ್ಲಿ ಕನ್ನಡವನ್ನು ಓಡಿಸಿ ಇಂಗ್ಲಿಷಿನ ಪ್ರತಿಷ್ಠಾಪನೆ ಮಾಡಿದುವು. ಕನ್ನಡದ ಬೆರಳಚ್ಚು ಯಂತ್ರಗಳು ಬಂದು ಕನ್ನಡವು ಮತ್ತೆ ತನ್ನ ಸ್ಥಾನವನ್ನು ಸ್ವಲ್ಪವಾದರೂ ಕಂಡುಕೊಳ್ಳಲು ಅನೇಕ ವರ್ಷಗಳೇ ಹಿಡಿದುವು. ಇದೇ ಪರಿಸ್ಥಿತಿ ಗಣಕಯಂತ್ರದ ಆಗಮನದಿಂದಾಗಿ ತಲೆದೋರಲು ನಾವು ಬಿಡಬಾರದು. ಬ್ಯಾಂಕ್, ವಿದ್ಯಾಸಂಸ್ಥೆ, ವಾಣಿಜ್ಯಸಂಸ್ಥೆ ಮೊದಲಾದೆಡೆ ವ್ಯವಹಾರಗಳಿಗಾಗಿ ಗಣಕಯಂತ್ರಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸಿದ ಉದಾಹರಣೆಗಳು ಹಲವಾರು ಇದ್ದರೂ ಜನರ ಮನೋಭಾವದಲ್ಲಿ ಪರಿವರ್ತನೆ ಗಮನೀಯವಾಗಿ ಕಡಿಮೆಯಿದೆ.
ಕನ್ನಡವು ಆಡಳಿತ ಭಾಷೆಯಾಗದಿದ್ದರೆ ಅದು ಸಂಸ್ಕøತದಂತೆ `ಮೃತಭಾಷೆ’ಯಾಗುತ್ತದೆಂದು ಹಿಂದೆ ಹಿರಿಯ ವಿಜ್ಞಾನಿ ಡಾ.ರಾಜಾ ರಾಮಣ್ಣ ಎಚ್ಚರಿಕೆಯ ಗಂಟೆ ಬಾರಿಸಿದ್ದರು. ಇಂದು ಎಲ್ಲ ಕ್ಷೇತ್ರಗಳಲ್ಲೂ ಗಣಕಯಂತ್ರಗಳು ಬಳಸಲ್ಪಡುತ್ತಿವೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಈ ಬೆಳವಣಿಗೆ ಸಹಜ. ಆದರೆ ಕನ್ನಡವನ್ನು ಗಣಕಯಂತ್ರದೊಡನೆ ಬಳಸಲು ಸಾಧ್ಯವಿಲ್ಲವೆಂಬ ಅಜ್ಞಾನದಿಂದ ನಾವು ಮುಕ್ತರಾಗಿ, ಅದರ ಬಳಕೆಯ ಹೆಚ್ಚಳದೊಡನೆ ಅವುಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚು ಮಾಡದಿದ್ದರೆ, ಕನ್ನಡವು ವ್ಯವಹಾರದ ಆಡಳಿತದ ಭಾಷೆಯ ಸ್ಥಾನದಿಂದ ಕೆಳಗಿಳಿದು ಬರೇ ಆಡುಭಾಷೆಯಾಗಿ ಮನೆಯ ಮಾತಾಗಿ ಮಾತ್ರ ಉಳಿಯುತ್ತದೆ. ಅದರ ಬೆಳವಣಿಗೆ ನಿಧಾನವಾಗಿ ಕುಂಠಿತಗೊಂಡು, ಅದು ಸತ್ವಹೀನವಾಗಿ, ಮಸುಕಾಗಿ, `ಮೃತಭಾಷೆ’ಯಾದರೆ ಅಚ್ಚರಿಯಿಲ್ಲ. ಹಾಗಾಗಲು ಕನ್ನಡಿಗರಾದ ನಾವು ಅವಕಾಶ ಕೊಡಬಾರದು.
ಕನ್ನಡ ತಂತ್ರಾಂಶದ ಅತ್ಯವಶ್ಯಕತೆಯ ಕುರಿತು ಪೂರ್ಣಚಂದ್ರ ತೇಜಸ್ವಿಯವರ ಅಭಿಪ್ರಾಯ ಹೀಗಿತ್ತು: “… ಒಂದು ಭಾಷೆಯ ಅಳಿವು-ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾದಂತೆ, ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ… ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ, ಚಳವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ… ಕಂಪ್ಯೂಟರ್ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸರ್ವವ್ಯಾಪಿಯಾಗಿ ಆವರಿಸುತ್ತಿದೆ. ನಾವು ಕಂಪ್ಯೂಟರಿನಲ್ಲಿ ಇಂಗ್ಲಿಷ್ ಭಾಷೆಯಷ್ಟೇ ಸರ್ವ ಸಮರ್ಥವಾಗಿ ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ…. ವಾಣಿಜ್ಯ ಮತ್ತು ಆಡಳಿತವೇ ನಮ್ಮ ದೈನಂದಿನ ವ್ಯವಹಾರಗಳ ಮುಕ್ಕಾಲು ಅಂಶವಾಗಿರುವುದರಿಂದ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕನ್ನಡವನ್ನು ಸಮರ್ಥವಾಗಿ ಉಪಯೋಗಿಸಲಾಗದಿದ್ದರೆ ಕನ್ನಡದ ದಿನಬಳಕೆ ಸಂಪೂರ್ಣ ಸ್ಥಗಿತವಾಗುವುದರಿಂದ ಅತ್ಯಗತ್ಯವಾದ ಎಲ್ಲ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸುವುದು ಅಗತ್ಯ…”
ಭಾರತೀಯ ಭಾಷಾ ಕಂಪ್ಯೂಟಿಂಗ್ (Indic Computing)
ವಿಶ್ವದ ಜನಸಂಖ್ಯೆ 720 ಕೋಟಿ ಮತ್ತು ಭಾರತದ್ದು 120 ಕೋಟಿ. ಅಂದರೆ, ವಿಶ್ವದ ಜನಸಂಖ್ಯೆಯ ಶೇ.5.5 ಜನರು ಭಾರತದಲ್ಲಿದ್ದಾರೆ. ಆದರೆ ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳ ಪಾಲು ಶೇ.0.1ಕ್ಕಿಂತಲೂ ಕಮ್ಮಿ. ಭಾರತದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಆರ್ಥಿಕ ಗಾತ್ರವು 11,800 ಕೋಟಿ ಡಾಲರ್ ಇದ್ದು, ಅದರಲ್ಲಿ ನಿರ್ಯಾತವು 8,600 ಕೋಟಿ ಡಾಲರ್ ಮತ್ತು ಸ್ವದೇಶಿ ಮಾರುಕಟ್ಟೆ ಪಾಲು 3,200 ಕೋಟಿ ಡಾಲರ್ ಮಾತ್ರ. ದೇಶದೊಳಗೆ ಮಾಹಿತಿ ತಂತ್ರಜ್ಞಾನದ ಬಳಕೆ ಎಷ್ಟು ಕಮ್ಮಿ ಮತ್ತು ಎಷ್ಟು ಅಪಾರ ಬೆಳವಣಿಗೆಗೆ ಸಾಧ್ಯತೆಯಿದೆ ಎಂಬುದನ್ನು ಇದು ಸೂಚಿಸುತ್ತದೆ.
ಭಾರತದ ಅಂತರ್ಜಾಲ ಮತ್ತು ಮಾಹಿತಿ ತಂತ್ರಜ್ಞಾನ ಸಾಧನಗಳು ಇಂಗ್ಲಿಷಿನಷ್ಟು ಸುಲಲಿತವಾಗಿ ಭಾರತೀಯ ಭಾಷೆಗಳನ್ನು ಬಳಸಲು ಅಸಮರ್ಥವಾಗಿರುವುದರಿಂದ ಡಿಜಿಟಲ್ ತಾರತಮ್ಯ (ಡಿಜಿಟಲ್ ಡಿವೈಡ್) ತೀವ್ರವಾಗಿದೆ. ಇದೂ ಅಲ್ಲದೆ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಬಳಸುವ ಶೇ.42 ಜನರು ಇಂಗ್ಲಿಷ್ ಬಳಸಲು ಹಿಂಜರಿಯುತ್ತಾರೆ ಮತ್ತು ತಮ್ಮ ಭಾಷೆಯಲ್ಲಿ ಬಳಸಲು ಬಯಸುತ್ತಾರೆ ಎಂಬುದು ಹಲವು ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಹೀಗಾಗಿ ಭಾರತೀಯ ಭಾಷೆಗಳಲ್ಲಿ ಮಾಹಿತಿ ತಂತ್ರಜ್ಞಾನ ಬಳಸುವುದು ಸಾಧ್ಯವಾದಾಗ ಅದರ ಸ್ವದೇಶೀ ಮಾರುಕಟ್ಟೆ ಕೂಡ ಬೆಳೆಯುತ್ತದೆ, ಮತ್ತು ಇ-ಆಡಳಿತವನ್ನು ಹೆಚ್ಚು ಅರ್ಥಪೂರ್ಣವಾಗಿಸಿ ಡಿಜಿಟಲ್ ಡಿವೈಡನ್ನು ಕಮ್ಮಿಮಾಡುವುದು ಸಾಧ್ಯವಾಗುತ್ತದೆ.
ಭಾರತೀಯ ಭಾಷಾ ಕಂಪ್ಯೂಟಿಂಗಿಗೆ ಇದು ಸಕಾಲ ಎನ್ನುವುದಕ್ಕೆ ಕಾರಣಗಳು:
1.ಅಂತರ್ಜಾಲದ ತೀವ್ರ ಬೆಳವಣಿಗೆ,
2.ಸರ್ಕಾರ ನೀಡಿರುವ ಆದ್ಯತೆ (68 ಕೋಟಿ ರೂಪಾಯಿ ಹೂಡಿಕೆ)
3.ಭಾರತೀಯ ಭಾಷಾ ತಂತ್ರಜ್ಞಾನದ ಬೆಳವಣಿಗೆ (TDIL&Technology Development in Indian languages) ಇದರ ಮೂಲಕ)
4.ಖಾಸಗಿ ಕ್ಷೇತ್ರದವರು ಕೂಡ ಪ್ರವೇಶಿಸಲು ಆಸಕ್ತರಾಗಿದ್ದಾರೆ.
5.ಮೊಬೈಲ್ ಮೊದಲಾದ ಹಾರ್ಡ್‍ವೇರ್ ಸಂಸ್ಥೆಗಳು ವ್ಯಾಪಾರೀ ಉದ್ದೇಶದಿಂದ ಭಾರತೀಯ ಭಾಷೆಗಳನ್ನು ತಮ್ಮ ಸಾಧನಗಳಲ್ಲಿ ನೀಡುತ್ತಿದ್ದಾರೆ.
6.ಗ್ರಾಮೀಣ ಭಾರತದ ಜನಸಂಖ್ಯೆಯ ಶೇ.70 ಜನರಲ್ಲಿ ಶೇ.4.6 ಮಂದಿ ಮಾತ್ರ ಅಂತರ್ಜಾಲ ಬಳಸಿದರೆ, ನಗರವಾಸಿಗಳಲ್ಲಿ ಶೇ.32 ಜನರು ಬಳಸುತ್ತಾರೆ.
ಭಾರತೀಯ ಭಾಷಾ ಕಂಪ್ಯೂಟಿಂಗಿನ ಪ್ರಸಕ್ತ ಪರಿಸ್ಥಿತಿ
ಅನೇಕ ಸೌಲಭ್ಯಗಳು ಲಭ್ಯವಿದ್ದರೂ ಅವೆಲ್ಲ ಹರಡಿಹೋಗಿವೆ. ಭಾರತೀಯ ಭಾಷೆಯಲ್ಲಿ ಸುಲಲಿತವಾಗಿ ಕಂಪ್ಯೂಟಿಂಗ್ ಮಾಡಬೇಕೆಂದಿದ್ದವರಿಗೆ, ಇಂಗ್ಲಿಷ್ ಭಾಷೆಯಲ್ಲಿರುವಂತೆ, ಒಂದೇ ಕಡೆಯಲ್ಲಿ ಬೇಕಾದುದೆಲ್ಲವೂ ಲಭ್ಯವಿಲ್ಲ. ಉದಾಹರಣೆಗೆ ಫಾಂಟುಗಳನ್ನು ಒಂದು ಕಡೆಯಿಂದ, ಕೀ ಬೋರ್ಡುಗಳನ್ನು ಇನ್ನೊಂದು ಕಡೆಯಿಂದ, ಶಬ್ದಕೋಶವನ್ನು ಮತ್ತೊಂದು ಕಡೆಯಿಂದ, ತಂತ್ರಾಂಶವನ್ನು ಮಗದೊಂದು ಕಡೆಯಿಂದ ಪಡೆದುಕೊಂಡು ಮುಂದುವರಿಯುವ ಕಷ್ಟವಿದೆ. ಇದು ಅಡುಗೆಯ ಪದಾರ್ಥಗಳನ್ನು ಪಡೆಯಲು 10 ಅಂಗಡಿಗಳಿಗೆ ಓಡಾಡಬೇಕಾದ ಕಷ್ಟದಂತೆ. ಗ್ರಾಮೀಣ ಪ್ರದೇಶದ 80 ಕೋಟಿ ಭಾರತೀಯರು ಡಿಜಿಟಲï ತಾರತಮ್ಯದಿಂದ ಪಾರಾಗುವಂತೆ ಮಾಡಲು, ಇಂಗ್ಲಿಷಿನಲ್ಲಿ ಹೇಗೆ ಸುಲಭಸಾಧ್ಯವಾಗುತ್ತದೆಯೋ ಹಾಗೆಯೇ ಭಾರತೀಯ ಭಾಷೆಗಳನ್ನು ಬಳಸಿ ಅಂತರ್ಜಾಲ ಮತ್ತು ಕಂಪ್ಯೂಟರಿನ ಸಾಧನಗಳನ್ನು ಬಳಸಲು ಸಾಧ್ಯವಾಗಬೇಕು.
ಒಂದು ಆದರ್ಶ ಭಾರತೀಯ ಭಾಷಾ ಕಂಪ್ಯೂಟಿಂಗ್ ವ್ಯವಸ್ಥೆ ಈ ರೀತಿ ಇರಬೇಕು:
1.ಪಿಸಿ, ಲ್ಯಾಪ್‍ಟಾಪ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನನ್ನು ಖರೀದಿಸಿದಾಗ ಅದರಲ್ಲಿ ಇಂಗ್ಲಿಷನ್ನು ಬಳಸುವುದು ಎಷ್ಟು ಸರಳವೋ ಅಷ್ಟೇ ಸುಲಭವಾಗಿ ಮತ್ತು ಸರಳವಾಗಿ ಭಾರತೀಯ ಭಾಷೆಯನ್ನು ಬಳಸಲು ಸಾಧ್ಯವಾಗಬೇಕು.
2.ಇಂಗ್ಲಿಷಿನಲ್ಲಿ ಸುಲಭವಾಗಿ ಮಾಡುವಂತೆ ಭಾರತೀಯ ಭಾಷೆಗಳಲ್ಲಿ ಕೂಡ ಅಡಕವಿಷಯವನ್ನು ಊಡುವುದು, ಹುಡುಕುವುದು, ಕ್ರಮಬದ್ಧಗೊಳಿಸುವುದು, ಹಂಚಿಕೊಳ್ಳುವುದು ಸಾಧ್ಯವಾಗಬೇಕು.
3.ಭಾರತೀಯ ಭಾಷೆಗಳಲ್ಲಿ ಅಕ್ಷರಜಾಣ(OCR), ಅನುವಾದಿಸುವ ತಂತ್ರಾಂಶ ಮೊದಲಾದವು ಸಾಮಾನ್ಯ ಬೆಲೆಗೆ ಕೊಳ್ಳಲು ದೊರೆಯುವಂತಿರಬೇಕು.
ಭಾರತೀಯ ಭಾಷಾ ಕಂಪ್ಯೂಟಿಂಗಿನಿಂದ ಸ್ವದೇಶಿ ಕೈಗಾರಿಕೆಗಳಿಗೆ ಒದಗಿಬರುವ ಪ್ರಯೋಜನಗಳು:
1.ಭಾರತೀಯ ಭಾಷಾ ಕಿರುತಂತ್ರಾಂಶ (App)ಗಳನ್ನು ತಯಾರಿಸುವ ಉದ್ಯಮಶೀಲತೆ: ಪ್ರತಿ ತಿಂಗಳು ಸುಮಾರು 40 ಲಕ್ಷ ಜನರು ಅಂತರ್ಜಾಲ ಸೇವೆ ಪಡೆಯಲು ನೋಂದಣಿ ಮಾಡಿಕೊಳ್ಳುತ್ತಾರೆ. ಹಾಗಾಗಿ ಶಬ್ದಕೋಶ, ಸುದ್ದಿವಿಶೇಷಗಳು, ಭಾರತೀಯ ಭಾಷಾ ಕೀಬೋರ್ಡುಗಳು, ಅನುವಾದ ಮಾಡುವುದು, ವಿಡಿಯೋಗಳನ್ನು ಬಿತ್ತರಿಸುವುದು- ಇವೇ ಮೊದಲಾದ ಕಿರುತಂತ್ರಾಂಶಗಳನ್ನು ತಯಾರಿಸುವ ಅಗತ್ಯ ತಲೆದೋರುತ್ತದೆ.
2. ಇ-ಆಡಳಿತ
ಜನರು ಸ್ಮಾರ್ಟ್ ಫೋನುಗಳನ್ನು ಬಳಸಿ ದಾಖಲೆಗಳನ್ನು ತಾವಿರುವ ಸ್ಥಳಕ್ಕೆ ತರಿಸಿಕೊಂಡು ಬಿಲ್ಲಿನ ಹಣ, ಕಂದಾಯ ಮೊದಲಾದವುಗಳನ್ನು ನೇರವಾಗಿ ಕಳಿಸಬಹುದು. ಸರ್ಕಾರವು ತನ್ನ ಕೇಂದ್ರ ಸ್ಥಾನದಿಂದ ಕೃಷಿ, ಉದ್ಯೋಗ ವಿವರ, ನ್ಯಾಯಾಲಯ ಸಂಬಂಧಿತ ಮಾಹಿತಿ, ಪಿಂಚಣಿ ಮೊದಲಾದ ಉಪಯುಕ್ತ ಮಾಹಿತಿಗಳನ್ನು ಭಾರತೀಯ ಭಾಷೆಗಳಲ್ಲಿ ಜನರಿಗೆ ಅಥವಾ ಜಿಲ್ಲಾ, ತಾಲೂಕು, ಗ್ರಾಮಗಳ ಅಧಿಕಾರಿಗಳಿಗೆ ಕಳಿಸಬಹುದು, ಅಲ್ಲಿಂದ ಅವಶ್ಯಕ ಮಾಹಿತಿಗಳನ್ನು ತರಿಸಿಕೊಳ್ಳಬಹುದು ಮತ್ತು ಕ್ಷಿಪ್ರವಾಗಿ ಸಹಾಯವು ತಲಪುವಂತೆ ಮಾಡಬಹುದು. ಈ ಮೂಲಕ ಆಡಳಿತವು ಪ್ರಜೆಗಳ ಹತ್ತಿರ ಹೋಗುವುದು ಸಾಧ್ಯವಾಗುತ್ತದೆ.
3.ಸ್ವದೇಶಿ ಸಾಫ್ಟ್‌ವೇರ್ ಉದ್ಯಮಗಳ ಬೆಳವಣಿಗೆ: ನಾವಿಂದು ಜೀವಿಸುತ್ತಿರುವ ಬಹುಭಾಷಾ ಜಗತ್ತಿನಲ್ಲಿ ವ್ಯಾಪಾರವ್ಯವಹಾರಗಳ ಜಾಗತೀಕರಣ ಮತ್ತು ಮಾಹಿತಿ ತಂತ್ರಾಂಶಗಳ ಭಾಷಾಮಾಧ್ಯಮದ ವ್ಯಷ್ಟೀಕರಣ (ಪ್ರಾಂತೀಕರಣ, ಸ್ಥಳೀಕರಣ) ಇವೆರಡನ್ನೂ ಬೆಸೆಯುವ ಕೌಶಲ ಬೇಕಾಗುತ್ತದೆ. ಈ ಪರಿಕಲ್ಪನೆಯನ್ನು ಮುಂದೆ ಇತರ ದೇಶಗಳಿಗೆ ನೀಡಲು ಭಾರತೀಯ ಸಾಫ್ಟ್‌ವೇರ್ ಉದ್ಯಮಗಳಿಗೆ ಸಾಧ್ಯವಾಗುತ್ತದೆ.
4.ಭಾರತದಲ್ಲಿ ಮಾಹಿತಿಯ ನಿರಂತರ ಪ್ರವಾಹ: ಅಂತರ್ಜಾಲ ಮತ್ತು ಮಾಹಿತಿ ತಂತ್ರಜ್ಞಾನಗಳು ಆರ್ಥಿಕತೆಯ ಪ್ರವರ್ಧಕಗಳು. ದೇಶ ಒಪ್ಪಿಕೊಂಡ 22 ಭಾರತೀಯ ಭಾಷೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಸುಲಲಿತವಾಗಿ ಬಳಸುವುದು ಸಾಧ್ಯವಾದರೆ, ಹೆಚ್ಚಿನ ಭಾರತೀಯರು ತಂತಮ್ಮ ಭಾಷೆಗಳಲ್ಲಿ ಸುದ್ದಿ, ಮಾಹಿತಿ ಪಡೆಯುವುದಲ್ಲದೆ ಇ-ಕಾಮರ್ಸ್, ಪ್ರಯಾಣದ ಕಾದಿರಿಸುವಿಕೆ ಮೊದಲಾದ ಸೇವೆಗಳನ್ನು ಬಳಸುವುದೂ ಸಾಧ್ಯವಾಗುತ್ತದೆ. ಅಂತರ್ಜಾಲದ ಮೂಲಕ ಭಾರತದ 22 ಭಾಷೆಗಳ ಭಾಷಾಂತರವನ್ನು ಒದಗಿಸುವುದು ಸಾಧ್ಯವಾದರೆ ಅದರಿಂದ ಕೃಷಿಕರಿಗೆ, ಕುಶಲಕರ್ಮಿಗಳಿಗೆ ಹೊಸಹೊಸ ಮಾರುಕಟ್ಟೆಗಳನ್ನು ಹುಡುಕುವುದು ಸುಲಭವಾಗುತ್ತದೆ.
5.ನವೀನತೆ ಮತ್ತು ಸೃಜನಶೀಲತೆ: ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಭಾರತೀಯ ಭಾಷೆಗಳನ್ನು ಸುಲಲಿತವಾಗಿ ಬಳಸಲು ಸಾಧ್ಯವಾದರೆ, ಆಗ ಕಿರುತಂತ್ರಾಂಶ ತಯಾರಕರು ಹಳ್ಳಿಗರಿಗೆ ಪ್ರಯೋಜನಕಾರಿಯಾದವುಗಳನ್ನು ತಯಾರಿಸಲು ಮನಮಾಡುತ್ತಾರೆ. ಹೀಗಾಗಿ ಭಾರತೀಯ ಭಾಷೆಯ ಕಂಪ್ಯೂಟಿಂಗ್ ಸುಲಭವಾದಾಗ ಹೆಚ್ಚಿನ ಭಾರತೀಯರು ಮಾಹಿತಿ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ ಮತ್ತು ಆಯಾ ಭಾಷಿಗರು ತಮಗೆ ಬೇಕಾದುದನ್ನು ತಾವೇ ಮಾಡಲು ಹೊರಡುತ್ತಾರೆ. ಇದರಿಂದ ಸೃಜನಶೀಲತೆಯ ವಿಕೇಂದ್ರೀಕರಣವಾಗುತ್ತದೆ.
6.ಸಂಸ್ಕೃತಿಯ ಉಳಿವು: ಡಿಜಿಟಲ್ ತಂತ್ರಜ್ಞಾನದೊಡನೆ ಹೊಂದಾಣಿಕೆ ಮಾಡಿಕೊಳ್ಳದ ಭಾಷೆ ಅವಸಾನದತ್ತ ಸಾಗುವುದರಲ್ಲಿ ಸಂದೇಹವಿಲ್ಲ. ಭಾಷೆಯೊಂದು ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ತನ್ನ ಸಂಸ್ಕೃತಿಗೆ ಸಂಬಂಧಿಸಿದ ಅಮೂಲ್ಯ ಸಂಗೀತ, ಸಾಹಿತ್ಯ, ಕಲಾವಸ್ತುಗಳನ್ನು ಸಂಗ್ರಹಿಸಿಟ್ಟು ಮುಂದಿನ ಜನಾಂಗಕ್ಕೆ ಬಿಟ್ಟುಹೋಗಲು ಸಾಧ್ಯವಾಗುತ್ತದೆ. ಅಲ್ಲದೆ ಈ ತಂತ್ರಜ್ಞಾನದ ಸಹಾಯದಿಂದ ಸಂಸ್ಕೃತಿಯ ಮಾದರಿಗಳನ್ನು ಭಾರತದಾದ್ಯಂತ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಭಾರತೀಯ ಭಾಷಾ ಕಂಪ್ಯೂಟಿಂಗಿನ ಮುಖ್ಯ ವಾರಸುದಾರರು:
1.ಸರ್ಕಾರ, 2.ತಂತ್ರಾಂಶದ ಕೈಗಾರಿಕೆಗಳು, 3.ಅಂತರ್ಜಾಲದ ಉದ್ಯಮಿಗಳು, 4.ಹಾರ್ಡ್‍ವೇರ್ ಕೈಗಾರಿಕೆಗಳು, 5.ಮುಕ್ತ ತಂತ್ರಾಂಶದ ಸಂಘಟನೆಗಳು, 6.ದೂರಸಂಪರ್ಕ ಜಾಲದ ಸಂಸ್ಥೆಗಳು, 7.ಸಾಮಾನ್ಯ ಪ್ರಜೆಗಳು
ಸರ್ಕಾರಿ ಅನುದಾನಿತ ಭಾರತೀಯ ಭಾಷಾ ತಂತ್ರಜ್ಞಾನ ಸಂಸ್ಥೆಗಳು ಮಾಡಬೇಕಾದುದು:
1.ಜನರ ಹಣ ಜನರತ್ತ ಹೋಗುವಂತೆ ಮಾಡುವುದು, 2.ಭಾರತೀಯ ಭಾಷಾ ಅಕ್ಷರ ವಿನ್ಯಾಸಗಳ ಸರ್ವತ್ರ ಬಳಕೆ, 3.ಅಕ್ಷರಜಾಣ (OCR) ಮೊದಲಾದ ತಂತ್ರಾಂಶಗಳ ಮಾಡಲು ಸಂಪನ್ಮೂಲ, 4.ವಿದೇಶದ ಸಂಸ್ಥೆಗಳ ಮೇಲಣ ಅವಲಂಬನೆ ಕಮ್ಮಿಮಾಡುವುದು, 5.ಡಿಜಿಟಲ್ ಪ್ರತ್ಯೇಕತೆಗಳ ನಡುವೆ ಸೇತುವೆ.
ದೇಶದ ಅಭಿವೃದ್ಧಿಗಾಗಿ ಭಾರತೀಯ ಭಾಷಾ ಕಂಪ್ಯೂಟಿಂಗನ್ನು ಪ್ರಬಲವಾಗಿಸುವ ಮಾರ್ಗ:
1.ಸಂಶೋಧನೆ, 2.ಪ್ರಚಾರ, 3.ಸರ್ಕಾರಿ ಕಾರ್ಯನೀತಿ, 4.ತಂತ್ರಜ್ಞಾನ.
(ಲೇಖಕರು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ)
======
ಕನ್ನಡ ತಂತ್ರಾಂಶ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ
2009ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ `ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ’ಯ ರಚನೆಗೆ ಕಾರಣೀಭೂತರಾದರು. ಈ ಸಮಿತಿಯ ಅಧ್ಯಕ್ಷನಾಗಿ ನಾನು ಹಾಗೂ ಸಮಿತಿಯ ಸದಸ್ಯರಾಗಿ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮತ್ತು ವಿಷಯತಜ್ಞರಾದ ಅನಂತ ಕೊಪ್ಪರ್, ಡಾ. ಯು. ಬಿ. ಪವನಜ, ಜಿ. ಎನ್. ನರಸಿಂಹಮೂರ್ತಿ, ಸುರೇಶ್ ಮೇಟಿ, ಎನ್.ಎ.ಎಂ. ಇಸ್ಮಾಯಿಲï ಮತ್ತು ಎನ್. ಅನ್ಬರಸನ್ ನೇಮಿಸಲ್ಪಟ್ಟರು. ಈ ಸಮಿತಿಯು ಏಪ್ರಿಲ್ 2010ರಲ್ಲಿ ಕನ್ನಡ ತಂತ್ರಾಂಶದ ಸರ್ವತೋಮುಖ ಅಭಿವೃದ್ಧಿಗಾಗಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಒಪ್ಪಿಸಿತು. ಅದರ ಆಧಾರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮೊದಲ ಹಂತದಲ್ಲಿ ಈ ನಾಲ್ಕು ಕನ್ನಡ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗಾಗಿ ಬಿಡುಗಡೆಗೊಳಿಸಿದೆ : 1.ಯೂನಿಕೋಡ್ ಆಧಾರಿತ 12 ಬಗೆಯ ಅಕ್ಷರ ವಿನ್ಯಾಸಗಳು, 2.ಯೂನಿಕೋಡ್ ಆಧಾರಿತ ಪರಿವರ್ತಕಗಳು, 3.ಯೂನಿಕೋಡ್ ಆಧಾರಿತ ಬ್ರೈಲ್ ಕನ್ನಡ ತಂತ್ರಾಂಶ, 4.ಮೊಬೈಲುಗಳಲ್ಲಿ ಬಳಕೆಗಾಗಿ ಯೂನಿಕೋಡ್ ಆಧಾರಿತ ಕನ್ನಡ ತಂತ್ರಾಂಶ.
ಮುಂದಿನ ಹಂತಗಳಲ್ಲಿ ಕನ್ನಡಿಗರಿಗೆ ದೊರೆಯಬೇಕಾದ ಕನ್ನಡ ತಂತ್ರಾಂಶಗಳ ವಿವರಗಳನ್ನು ಹೀಗೆ ಹೆಸರಿಸಬಹುದು: 1.ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR), 2. ಪರಿಪೂರ್ಣವಾದ ಲಿನಕ್ಸ್ ಆಧಾರಿತ ಕನ್ನಡ ತಂತ್ರಾಂಶ, 3. ಕನ್ನಡ ವಾಸ್ತವೋಪಮ ವಿಶ್ವವಿದ್ಯಾಲಯ ( Virtual University), 4. ಕನ್ನಡ ವಿಕಿಪೀಡಿಯಾ (ಅಂತಜಾಲದಲ್ಲಿ ಕನ್ನಡ ವಿಶ್ವಕೋಶ), 5. ಕನ್ನಡ ಪ್ರಕಟಣೋದ್ಯಮ ಕ್ಷೇತ್ರ (ಡಿ.ಟಿ.ಪಿ), 6. ಕನ್ನಡ ಸಹಜ ಭಾಷಾ ಸಂಸ್ಕರಣೆ (Natural Language Processing), 7. ಕನ್ನಡ ಧ್ವನಿ ಸಂಸ್ಕರಣೆ, 8. ಕನ್ನಡ ಕಲಿಕಾ ತಂತ್ರಾಂಶ.
ಯೂನಿಕೋಡ್‍ಗೆ ಕೋಡು ಮೂಡಲಿ
ರಾಜ್ಯಮಟ್ಟದಲ್ಲಿ ಸರ್ಕಾರಿ ಸಂಬಂಧಿತ ಕಾರ್ಯಗಳಿಗಾಗಿ ಕನ್ನಡವನ್ನು ಕಂಪ್ಯೂಟರ್ ಮತ್ತು ಅಂತರ್ಜಾಲದಲ್ಲಿ ಬಳಸುವಾಗ ಯೂನಿಕೋಡ್ ಶಿಷ್ಟತೆಯು ಕಡ್ಡಾಯ ಮತ್ತು ಕನ್ನಡದ ಎಲ್ಲ ಕೆಲಸಗಳು ಮತ್ತು ಅಂತರ್ಜಾಲ ತಾಣಗಳು ಇನ್ನು ಮುಂದೆ ಯುನಿಕೋಡಿನಲ್ಲೇ ಇರುವುದು ಅಗತ್ಯ. ಸದ್ಯಕ್ಕೆ ಮೈಕ್ರೋಸಾಫ್ಟಿನ ತುಂಗಾ, ಏರಿಯಲ್ ಯೂನಿಕೋಡ್ ಎಂಎಸ್ ಮತ್ತು ಭಾರತೀಯ ವಿಜ್ಞಾನ ಮಂದಿರದ ಕೇದಿಗೆ, ಸಂಪಿಗೆ, ಮತ್ತು ಮಲ್ಲಿಗೆ ಉಚಿತ ಯೂನಿಕೋಡ್ ಫಾಂಟುಗಳಲ್ಲದೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಇತ್ತೀಚೆಗೆ ಬಿಡುಗಡೆಗೊಳಿಸಿದ ನಾಲ್ಕು ವಿಧದ, ಪೂರ್ಣಚಂದ್ರ ತೇಜಸ್ವಿ ಹೆಸರಿನ ಉಚಿತ ಫಾಂಟುಗಳು ಲಭ್ಯವಿವೆ. ಇವುಗಳನ್ನು ಸಂದರ್ಭೋಚಿತವಾಗಿ ಬಳಸಬಹುದು.
ಸರ್ಕಾರದ ವಿವಿಧ ಇಲಾಖೆಗಳು ಪದಸಂಸ್ಕರಣೆಗೂ ಯೂನಿಕೋಡ್ ಶಿಷ್ಟತೆಯನ್ನು ಬಳಸುವುದು ಕಡ್ಡಾಯವಾಗಬೇಕು. ಡಿಟಿಪಿ ಸಂದರ್ಭದಲ್ಲಿ ಮಾತ್ರ ಹಳೆಯ ಅಕ್ಷರಶೈಲಿಗಳನ್ನು ಬಳಸಬಹುದು. ಆದರೆ ಮೂಲ ದಾಖಲೆಯನ್ನು ಯೂನಿಕೋಡಿನಲ್ಲಿಯೇ ಸಿದ್ಧಪಡಿಸಿ ಅದನ್ನು ಡಿಟಿಪಿ ಮಾಡುವ ಸಂದರ್ಭದಲ್ಲಿ ಮಾತ್ರ ಮುದ್ರಣಾನುಕೂಲಿ ಅಕ್ಷರಶೈಲಿಗೆ ಪರಿವರ್ತಿಸಿ ಬಳಸಬಹುದು ಅಥವಾ ಲಭ್ಯವಿರುವ ನವ್ಯ/ಸೂಕ್ತ ವಿಧಾನ ಬಳಸಬಹುದು.
ಕೇಂದ್ರ ಮತ್ತು ರಾಜ್ಯಗಳಲ್ಲಿ ಯೂನಿಕೋಡ್ ಬಳಕೆ
ಕೇಂದ್ರ ಗೃಹ ಮಂತ್ರಾಲಯದ ಆಫೀಷಿಯಲ್ ಲಾಂಗ್ವೇಜ್ ಟೆಕ್ನಿಕಲ್ ಸೆಲ್ (ಸರ್ಕಾರಿ ಆದೇಶ ನಂ. 12015/7/2008-ಓಎಲ್(ಟಿಸಿ) ಯೂನಿಕೋಡ್ ಆಧರಿತ ಹಿಂದಿ ಲಿಪಿಯನ್ನು ಬಳಸಬೇಕೆಂದೂ, INSCRIPT ಕೀಲಿಮಣೆ ಅಥವಾ ಇತರ ಸೂಕ್ತ ಕೀಲಿಮಣೆ ಬಳಸುವುದೆಂದೂ, ಕೇಂದ್ರ ಮಾಹಿತಿ ತಂತ್ರಜ್ಞಾನ ವಿಭಾಗವು ಒದಗಿಸಿರುವ 160 ಹಿಂದಿ ಅಕ್ಷರಶೈಲಿಗಳನ್ನು ಬಳಸಬಹುದೆಂದೂ, ಹಳೆಯ ಅಕ್ಷರಶೈಲಿಯ ಕಡತಗಳನ್ನು ಯೂನಿಕೋಡ್ ಕಡತಗಳಾಗಿ ಪರಿವರ್ತಿಸಲು ಪರಿವರ್ತನ 2.0ನ್ನು ಬಳಸಬಹುದೆಂದೂ ಸೂಚಿಸಿದೆ.
ತಮಿಳುನಾಡು: ಹಿಂದೆ ಪ್ರಚಲಿತವಿದ್ದ 8-ಬಿಟ್ ಇದರ ಬದಲು 16-ಬಿಟ್ ಇದನ್ನು ಅಕ್ಷರ ವಿನ್ಯಾಸಕ್ಕೆ ಬಳಸುವುದಾಗಿಯೂ, ತಮಿಳು ಭಾಷೆಯ ಬಳಕೆಯನ್ನು ಬೆಂಬಲಿಸುವಲ್ಲಿ ಯೂನಿಕೋಡನ್ನು ಕಡ್ಡಾಯವಾಗಿ ಮತ್ತು ಮುಖ್ಯವಾಗಿ ಬಳಸಬೇಕೆಂದೂ, ಬಳಕೆ ಅಸಾಧ್ಯವಾದ ಎಡೆಗಳಲ್ಲಿ ಮಾತ್ರ TACE-16 ಬಳಸಬೇಕೆಂದು ಆಜ್ಞೆ ಹೊರಡಿಸಿದೆ (ಸರ್ಕಾರಿ ಆದೇಶ ಜಿ.ಒ.(ಎಮ್.ಎಸ್) ನಂ.29, ದಿನಾಂಕ 23-06-2010). ಅಲ್ಲದೆ ವಿಶ್ರಾಂತ ನ್ಯಾಯಾಧೀಶ ಎಸ್.ಮೋಹನ್ ಅವರ ಅಧ್ಯಕ್ಷತೆಯಲ್ಲಿ 14 ಮಂದಿ ಸದಸ್ಯರ ಒಂದು ಸಮಿತಿಯನ್ನು ನೇಮಿಸಿ, ಯೂನಿಕೋಡ್ ಮೂಲಕ ತಮಿಳು ಭಾಷೆಯ ಬಳಕೆಗಾಗಿ ಯೂನಿಕೋಡ್ ಶಿಷ್ಟತೆಯ ಅನುಷ್ಠಾನದಲ್ಲಿ ಎದುರಾಗುವ ಮುಖ್ಯ ವಿಷಯಗಳನ್ನು ಕ್ರೋಡೀಕರಿಸುವುದು, ಮತ್ತು ಯೂನಿಕೋಡಿನ ಕುರಿತಾಗಿ ಸರ್ಕಾರಕ್ಕೆ ಸಲಹೆ ಕೊಡಲು ಒಂದು ಯೂನಿಕೋಡ್ ಕನ್ಸಾರ್ಟಿಯಮ್ ಸ್ಥಾಪಿಸುವುದು- ಇವುಗಳ ಕುರಿತು ತಜ್ಞ ಅಭಿಪ್ರಾಯ ನೀಡಲು ಸೂಚಿಸಿದೆ.
ಕೇರಳ: (1). ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಡ್ಡಾಯವಾಗಿ ಮಲೆಯಾಳಂ ಯೂನಿಕೋಡನ್ನು ಕಂಪ್ಯೂಟರುಗಳಲ್ಲಿ ಬಳಸಬೇಕೆಂದು ಆಜ್ಞೆ ಹೊರಡಿಸಿತು (ಸರ್ಕಾರಿ ಆದೇಶ ಜಿ.ಒ.(ಎಮ್.ಎಸ್.) 31/08/ಐಟಿಡಿ, ದಿನಾಂಕ 21-08-2008). (2). ಮುಕ್ತ ತಂತ್ರಾಂಶದ ವಿಶ್ವಗುರು ರಿಚರ್ಡ್ ಎಂ. ಸ್ಟಾಲ್ಮನ್ ಇವರು ಕೇರಳಕ್ಕೆ ಭೇಟಿಕೊಟ್ಟ ಬಳಿಕ, ಅವರಿಂದ ಪ್ರಭಾವಿತವಾದ ಕೇರಳ ಸರ್ಕಾರವು ರಾಜ್ಯದ 12,500 ಪ್ರೌಢಶಾಲೆಗಳಲ್ಲಿ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಮೈಕ್ರೋಸಾಫ್ಟಿನ ವಿಂಡೋಸ್‍ಗೆ ಬದಲು ಲಿನಕ್ಸ್ ಕಾರ್ಯಾಚರಣೆ ವ್ಯವಸ್ಥೆಯನ್ನು ಮಾಹಿತಿ ತಂತ್ರಜ್ಞಾನ ಕಲಿಕೆಗೆ ಬಳಸಬೇಕೆಂದೂ, ಪ್ರಾಕ್ಟಿಕಲ್ ಪರೀಕ್ಷೆಯನ್ನು ಲಿನಕ್ಸ್ ವ್ಯವಸ್ಥೆಯಲ್ಲೇ ತೆಗೆದುಕೊಳ್ಳಬೇಕೆಂದೂ ಆದೇಶ ಹೊರಡಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿತು.
ಮಹಾರಾಷ್ಟ್ರ: ಯೂನಿಕೋಡ್ ಆಧರಿತ ಮರಾಠಿ ಅಕ್ಷರವಿನ್ಯಾಸವನ್ನು ಬಳಸಲು ನಿರ್ಧರಿಸುವುದಾಗಿಯೂ, ಇದಕ್ಕೆ ಸಂಬಂಧಿಸಿದಂತೆ ಮರಾಠಿ ಯೂನಿಕೋಡಿನ ಕೆಲಸವು ಶೇ.70 ಸಂಪೂರ್ಣಗೊಂಡಿರುವುದಾಗಿಯೂ ಮಹಾರಾಷ್ಟ್ರ ಸರ್ಕಾರವು 27-07-2010ರಂದು ಹೇಳಿತ್ತು.