ಮೋದಿಗೆ ಎಷ್ಟು ಅಂಕ ಕೊಡಬೇಕೆಂದು ನೀವೇ ನಿರ್ಧರಿಸಿ

`ಇಂಡಿಯಾಸ್‌ ಚಾನ್ಸ್‌ ಟು ಫ್ಲೈ’ ಎಂದು ಜಗದ್ವಿಖ್ಯಾತ ಇಕಾನಮಿಸ್ಟ್‌ ಮ್ಯಾಗಜಿನ್‌ ಹೇಳುತ್ತದೆ. `ರಿಫಾರ್ಮರ್ ಇನ್‌ ಚೀಫ್‌’ ಎಂದು `ಟೈಮ್‌’ ಮ್ಯಾಗಜಿನ್‌ನಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಅವರು ಮೋದಿಯನ್ನು ಬಣ್ಣಿಸುತ್ತಾರೆ. ನಮ್ಮವರು `ಅಚ್ಛೇ ದಿನ್‌  ಆಗಯಾ ಕ್ಯಾ’ ಎಂದು ಕಟಕಿಯಾಡುತ್ತಾರೆ. ಈ ವೈರುಧ್ಯಕ್ಕೆ ಏನನ್ನೋಣ?

MODIಇದನ್ನು ಬೇಕಾದರೆ ಮೇ ತಿಂಗಳ ವಿಶೇಷತೆ ಅಂತ ಕರೆಯಬಹುದೇನೋ… ಒಂದೇ ತಿಂಗಳಲ್ಲಿ ಈಕಡೆ ಸಿದ್ದರಾಮಯ್ಯ ಸರ್ಕಾರ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಆ ಕಡೆ ಮೋದಿ ಸರ್ಕಾರ ಮೊದಲ ವರ್ಷದ ಸಂಭ್ರಮಾಚರಣೆಗೆ ಅಣಿಯಾಗಿದೆ.

ಹಾಗಂತ ಸಿದ್ದರಾಮಯ್ಯ ಸರ್ಕಾರಕ್ಕೂ ಮೋದಿ ಸರ್ಕಾರಕ್ಕೂ ಹೋಲಿಕೆ ಮಾಡುವುದು ಇಲ್ಲಿನ ಉದ್ದೇಶವಲ್ಲ. ಹಾಗೆ ಮಾಡುವುದು ಸರಿಯೂ ಅಲ್ಲ. ಕಾರಣ ಇಷ್ಟೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಇತಿಮಿತಿಗಳು, ಆದ್ಯತೆ, ಆಯ್ಕೆ ಹಾಗೂ ಅವಕಾಶಗಳು ಬೇರೆ ಬೇರೆ. ಇಷ್ಟಾದರೂ ಅದೇಕೋ ನಮಗೆ ಈ ಎರಡೂ ಸರ್ಕಾರಗಳ ನಡುವಿನ ತಳುಕನ್ನು ಬಿಡಿಸಲಾಗುತ್ತಿಲ್ಲ ನೋಡಿ.

ಹೋದ ವಾರ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಧನಾ ಸಮಾವೇಶ ನಡೆಯಿತಲ್ಲ, ಅಲ್ಲಿ ಕಾಂಗ್ರೆಸ್ ನಾಯಕರೆಲ್ಲ ಒಕ್ಕೊರಲಿನಿಂದ ‘ಬಿಜೆಪಿಮುಕ್ತ ಕರ್ನಾಟಕ’ ಮಾಡುತ್ತೇವೆಂದು ಘೊಷಣೆ ಮೊಳಗಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಶಾಸಕ ಸುರೇಶ್​ಕುಮಾರ್ ಅವರು ವಾಟ್ಸ್ ಆಪ್​ನಲ್ಲಿ ಒಂದು ಪ್ರತಿಕ್ರಿಯೆ ಹಂಚಿಕೊಂಡಿದ್ದರು. ‘ಸಿಎಂ ಸಿದ್ದರಾಮಯ್ಯನವರೇ ‘ರಾಜ್ಯವನ್ನು ಬಿಜೆಪಿಮುಕ್ತ ಮಾಡುವುದು ನಿಮ್ಮ ಸಂಪುಟವನ್ನು ಪರಮೇಶ್ವರಮುಕ್ತ’ ಮಾಡಿದಷ್ಟು ಸಲೀಸಲ್ಲ’ ಎಂಬುದು ಆ ಸಂದೇಶದ ಸಾರಾಂಶ. ಇಲ್ಲಿ ಕ್ರಿಯೆ ಪ್ರತಿಕ್ರಿಯೆಗಿಂತ ಈ ‘ಮುಕ್ತ ಮಾಡುವ’ ಆಲೋಚನೆ ಕಾಂಗ್ರೆಸ್ ನಾಯಕರಿಗೆ ಹೊಳೆದದ್ದೆಲ್ಲಿಂದ ಎಂಬುದು ಮೂಲಭೂತ ಪ್ರಶ್ನೆ. ನೆನಪನ್ನು ತುಸು ಹಿಂದಕ್ಕೆ ಒಯ್ದರೆ ಉತ್ತರ ಸುಲಭವಾಗಿ ಸಿಗುತ್ತದೆ. ಹೋದ ಲೋಕಸಭಾ ಚುನಾವಣೆ ವೇಳೆ ಹೊರಹೊಮ್ಮಿದ ವಿಚಾರವದು. ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಅವರು ‘ಕಾಂಗ್ರೆಸ್​ವುುಕ್ತ ಭಾರತ’ದ ಘೊಷಣೆ ಮೊಳಗಿಸಿದ್ದರು. ಅವರ ಆ ಘೊಷಣೆಗೆ ದೇಶದ ಜನರಿಂದ ಅನಿರೀಕ್ಷಿತ ಪ್ರತಿಕ್ರಿಯೆಯೂ ಸಿಕ್ಕಿತು. ಲೋಕಸಭಾ ಚುನಾವಣೆ ಮಾತ್ರವಲ್ಲ, ನಂತರ ಹರಿಯಾಣ, ಮಹಾರಾಷ್ಟ್ರ, ಜಮ್ಮು- ಕಾಶ್ಮೀರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಆ ಘೊಷಣೆ ಕೆಲಸ ಮಾಡಿತು. ಅಂದರೆ ಹೇಗೆ ಎಲ್ಲರಲ್ಲೂ ಮೋದಿ ಮೇನಿಯಾ ಆವರಿಸಿಕೊಂಡಿತ್ತು ಎಂಬುದನ್ನು ಅರಿಯಬಹುದು. ಈ ಮಾತಿಗೆ ಪೂರಕ ಎನ್ನುವ ಹಾಗೆ ಖ್ಯಾತ ಚಿಂತಕ, ಬರಹಗಾರ ಶಿವ ವಿಶ್ವನಾಥನ್ ಅವರು ಇತ್ತೀಚೆಗೆ ಹೆಸರಾಂತ ಆಂಗ್ಲ ದೈನಿಕದಲ್ಲಿ ಬರೆದ ಲೇಖನದ ಕೆಲ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವಾದೀತು. ‘ಕಳೆದ ಒಂದು ವರ್ಷದ ಮೋದಿ ಆಡಳಿತದ ದೊಡ್ಡ ಸಾಧನೆ ಎಂದರೆ ಮೋದಿ ಕನಸಿನ ಸೃಷ್ಟಿ, ಆವಿಷ್ಕಾರ ಮತ್ತು ಆ ಕನಸಿನ ಮಾರಾಟ’ ಎಂದು ಅವರು ಹೇಳುತ್ತಾರೆ. ‘ಯಾರು ಏನೇ ಹೇಳಲಿ, ಮೋದಿ ಭಾರತದಲ್ಲಿ ಒಂದು ಹೊಸ ಚಿಂತನೆಯ ಕಿಡಿಯನ್ನಂತೂ ಹೊತ್ತಿಸಿದ್ದಾರೆ. ಮೋದಿ ಒಬ್ಬ ಸಾಮಾನ್ಯ ವ್ಯಕ್ತಿ, ದೇಶಭಕ್ತ, ಒಬ್ಬ ಹಿಂದು, ನೇರ ಹೇಳುವುದಾದರೆ ‘ಮೇಡ್ ಇನ್ ಇಂಡಿಯಾ’ದ ಉತ್ಪನ್ನ. ಮೋದಿ ತನ್ನ ಮತ್ತು ಭಾರತ ದೇಶದ ಜನರೆಲ್ಲರ ಕನಸಿನ ಪ್ರತಿರೂಪ. ತನ್ನ ಮತ್ತು ತನ್ನದೇ ಜಗತ್ತಿನ ಕನಸುಗಳಿಗೆ ಮೋದಿ ಒಬ್ಬ ಮಹಾನ್ ಸೇಲ್ಸ್​ಮನ್​ರಂತೆಯೂ ಕಾಣಿಸುತ್ತಾರೆ’ ಹೀಗೆಲ್ಲ ಅವರು ಲೇಖನದಲ್ಲಿ ಹೇಳುತ್ತಾ ಹೋಗುತ್ತಾರೆ. ಇದು ದೇಶದ ಬಹುಪಾಲು ಜನರ ಅಭಿಪ್ರಾಯವೂ ಹೌದಲ್ಲವೇ?

ಮೋದಿ ಸರ್ಕಾರದ ಕುರಿತು ಚರ್ಚೆ ಮಾಡುವಾಗ ರಾಹುಲ್ ಮತ್ತು ಕಾಂಗ್ರೆಸ್ ಪಕ್ಷದ ಧೋರಣೆಯ ಬಗ್ಗೆ ಕಣ್ಣು ಹಾಯಿಸದಿರುವುದು ಹೇಗೆ? ಹೀಗಾಗಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಒಂದು ಸಂಗತಿಯನ್ನು ಇಲ್ಲಿ ಸಾಂರ್ದಭಿಕವಾಗಿ ಪ್ರಸ್ತಾಪಿಸುತ್ತೇನೆ. ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ ಮೇಲಿಂದ ಮೇಲೆ ‘ಅಚ್ಛೇ ದಿನ್ ಆಯಾ ಕ್ಯಾ?’ ಎಂದು ಕೇಳುವ ಪ್ರಶ್ನೆಗೆ ಪ್ರತಿಯಾಗಿ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಕುತೂಹಲಕರವಾಗಿದೆ. ಪ್ರಶ್ನಾವಳಿ ಹೀಗಿದೆ: ನೆಹರುಗೆ ಎಷ್ಟು ಕಾಲಾವಕಾಶ ಕೊಟ್ಟಿರಿ? ಹದಿನಾರು ವರ್ಷ 286 ದಿನಗಳು. ಇಂದಿರಾಗೆ 15 ವರ್ಷ 91 ದಿನ. ರಾಜೀವ್ ಗಾಂಧಿಗೆ ಐದು ವರ್ಷ 32 ದಿನಗಳು. ನರಸಿಂಹ ರಾವ್​ಗೆ 4 ವರ್ಷ ಹನ್ನೊಂದು ತಿಂಗಳು. ಮನಮೋಹನ ಸಿಂಗ್​ಗೆ 10 ವರ್ಷ ನಾಲ್ಕು ದಿನಗಳು. ಅಂದರೆ ಐವತ್ತಕ್ಕಿಂತ ಅಧಿಕ ವರ್ಷಗಳು ಹೀಗೇ ಕಳೆದುಹೋಗಿವೆ. ಆದರೆ ‘ನಮ್ಮ ಪಾಪು ಹನ್ನೆರಡು ತಿಂಗಳಲ್ಲಿ ‘ಅಚ್ಛೇ ದಿನ್ ಆಯಾ ಕ್ಯಾ’ ಎಂದು ಮುಗ್ಧವಾಗಿ ಕೇಳುತ್ತದೆ’ ಎಂದು ಮಾರ್ವಿುಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅದಕ್ಕಿಂತ ತಮಾಷೆಯ ಸಂಗತಿ ಮತ್ತೊಂದಿದೆ ಕೇಳಿ. ರೈತರೆಡೆಗೆ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ‘ಈ ಸೂಟು ಬೂಟಿನ ಸರ್ಕಾರಕ್ಕೆ ಬಡಬಗ್ಗರ ಬಗ್ಗೆ ಯೋಚನೆ ಮಾಡಲು ಪುರಸೊತ್ತೆಲ್ಲಿದೆ? ಮೋದಿ ಬರೀ ವಿದೇಶ ಪ್ರವಾಸದಲ್ಲೇ ಇರುತ್ತಾರೆ. ಅವರಿಗೆ ರೈತರ ಕಷ್ಟ ಆಲಿಸುವ ವ್ಯವಧಾನ ಎಲ್ಲಿದೆ? ಮಂಗೋಲಿಯಾಕ್ಕೆ ನೂರು ಕೋಟಿ ಡಾಲರ್ ಸಾಲ ಕೊಡುವ ಅವರಿಗೆ ಆತ್ಮಹತ್ಯೆಗೆ ಮುಂದಾಗಿರುವ ನಮ್ಮ ರೈತರ ಕಣ್ಣೀರೊರೆಸಲು, ಕಷ್ಟ ಆಲಿಸಲು ಎಲ್ಲಿದೆ ಪುರುಸೊತ್ತು’ ಎಂದು ಕೇಳಿದ್ದಕ್ಕೆ ‘ಅದೆಲ್ಲ ಸರಿ, ದೇಶದ ಪ್ರಧಾನಿಯಾಗಿ ಮೋದಿ ಒಂದು ವರ್ಷದಲ್ಲಿ 18 ದೇಶಗಳ ಭೇಟಿಗೆ ತೆಗೆದುಕೊಂಡದ್ದು ಒಟ್ಟು 45 ದಿನ. ಆದರೆ ರಾಹುಲ್ ಗಾಂಧಿ ಎಲ್ಲಿಗೆ, ಯಾವ ಕೆಲಸಕ್ಕೆ ಎಂಬ ವಿವರವನ್ನೂ ಕೊಡದೆ ವಿದೇಶ ಪ್ರವಾಸ ಕೈಗೊಂಡದ್ದು ಬರೋಬ್ಬರಿ 57 ದಿನ. ಇದಕ್ಕೇನಂತೀರಿ ಮಹಾರಾಯರೆ’ ಅಂತ ಜನ ಕೇಳುತ್ತಿದ್ದಾರೆ. ಇದು ನಿಜಕ್ಕೂ ಆಲೋಚಿಸಬೇಕಾದ ವಿಷಯ ತಾನೆ?

ರಾಜಕೀಯ ಚರ್ಚೆ ಬಿಡಿ. ಮೋದಿ ಸರ್ಕಾರದ ವಿಷಯಕ್ಕೆ ಬಂದಾಗ ರಾಜಕೀಯದಾಚೆಗೂ ಗಮನ ಸೆಳೆಯುವ ಹಲವು ಅಂಶಗಳಿವೆ. ಮುಖ್ಯವಾಗಿ ಕಳೆದ ಹತ್ತು ವರ್ಷಗಳ ಈಚೆಗೆ ಭಾರತದ ಪ್ರಜಾಸತ್ತೆ ಪ್ರಬುದ್ಧವಾಗುತ್ತಿರುವುದನ್ನು ನಾವು ಗಮನಿಸಬೇಕಿದೆ. ಜನರು ಯಾವುದೇ ಗೊಂದಲ, ಗೋಜಲಿಗೆ ಅವಕಾಶ ಕೊಡದೆ ತಮ್ಮ ಆಯ್ಕೆಯನ್ನು ಖಚಿತವಾಗಿ ದಾಖಲಿಸುತ್ತಾರೆಂಬುದನ್ನು ಇದೇ ಮೊದಲ ಬಾರಿಗೆ ದೇಶದ ಮತದಾರರು ತೋರಿಸಿಕೊಟ್ಟರು. ಪ್ರಜಾತಂತ್ರದ ಈ ಶಕ್ತಿ ಪ್ರದರ್ಶನಕ್ಕೆ ಕಾರಣಕರ್ತ ಮೋದಿಯೆ ಎಂದರೆ ಅತಿಶಯೋಕ್ತಿಯಾಗದು.

ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರದ ಒಂದೊಂದು ಘಟನೆಯೂ ಇಲ್ಲಿ ಮೆಲುಕು ಹಾಕುವಂಥದ್ದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೆ ‘ನಾನು ಪ್ರಧಾನ ಮಂತ್ರಿಯಲ್ಲ- ಪ್ರಧಾನ ಸೇವಕ’ ಎಂದು ಮೋದಿ ಹೇಳಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂಸತ್ತಿನ ಪಾವಟಿಗೆಗೆ ಹಣೆಹಚ್ಚಿ ಬಲಗಾಲಿಟ್ಟು ಮುನ್ನಡೆದ ಅವರು, ತಾವು ಆಡಿದ ಮಾತಿನ ತೂಕ ಹೆಚ್ಚುವಂತೆ ನೋಡಿಕೊಂಡರು. ನಮ್ಮ ವಿಧಾನಸಭೆ ಮತ್ತು ಸಂಸತ್ತಿನ ಮೆಟ್ಟಿಲು ತುಳಿಯುವ ಎಲ್ಲ ಶಾಸಕರು-ಸಂಸದರು ಇದನ್ನು ಅರಿತರೆ ದೇಶದಲ್ಲಿ ಅಚ್ಛೇ ದಿನ್ ಬರುವುದು ಎಷ್ಟು ಸಲೀಸಲ್ಲವೆ?

ಮುಖ್ಯವಾಗಿ ಎಲ್ಲರೂ ನಿರೀಕ್ಷೆ ಮಾಡಿದ್ದು ಆಡಳಿತದಲ್ಲಿ ಪಾರದರ್ಶಕತೆಯನ್ನು. ಇತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಮೋದಿ ಮುದ್ದು ಮಕ್ಕಳೊಂದಿಗೆ ಮಾತನಾಡುತ್ತ ಹೇಳಿದ ಸಂಗತಿ ಆ ನಿಟ್ಟಿನಲ್ಲಿ ಬಹಳ ಮಹತ್ವದ್ದು. ‘ಕಳೆದ ಒಂದು ವರ್ಷದ ಅವಧಿಯಲ್ಲಿ ಯಾವುದಾದರೂ ಪತ್ರಿಕೆಯಲ್ಲಿ, ಟಿವಿಯಲ್ಲಿ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ, ಹಗರಣದ ಬಗ್ಗೆ ಬರೆದದ್ದನ್ನು, ಚರ್ಚೆ ಮಾಡಿದ್ದನ್ನು ಕೇಳಿದ್ದೀರಾ? ಕಂಡಿದ್ದೀರಾ? ಇದು ನನ್ನ ಪಾಲಿನ ಹೆಮ್ಮೆ’ ಎಂದರು. ಮೋದಿ ತಮ್ಮ ಕೈ ಮತ್ತು ಬಾಯನ್ನು ಶುಚಿಯಾಗಿಟ್ಟುಕೊಂಡಿದ್ದು ಮಾತ್ರವಲ್ಲ, ಮಂತ್ರಿಗಳು, ಸಂಸದರು ಕೂಡ ಕೈ, ಬಾಯಿಗೆ ಕೊಳೆ ಮೆತ್ತಿಕೊಳ್ಳದಂತೆ ನೋಡಿಕೊಂಡದ್ದೂ ದೊಡ್ಡ ಸಾಧನೆಯೇ.

ಮೂಲಭೂತವಾಗಿ ಆಡಳಿತದಲ್ಲಿ ಬಿಗಿ ಬರಬೇಕು ಎಂಬುದು ಬಹಳ ದಿನದ ನಿರೀಕ್ಷೆಯಾಗಿತ್ತು. ಹೀಗಾಗಿ ಮಂತ್ರಿಗಳನ್ನು, ಅಧಿಕಾರಿಗಳನ್ನು, ಇತರ ಸರ್ಕಾರಿ ನೌಕರರನ್ನು ಸರಿಯಾಗಿ ದುಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದು ಮೋದಿ ಸರ್ಕಾರದ ಹಲವು ಉಪಕ್ರಮಗಳ ಪೈಕಿ ಮಹತ್ವದ್ದು. ಸಂಪುಟ ಕಾರ್ಯದರ್ಶಿಯಿಂದ ಜವಾನನವರೆಗೆ ಸರ್ಕಾರದಲ್ಲಿ ಎಲ್ಲರೂ ಸಮಾನ ಮಹತ್ವವುಳ್ಳವರು ಎಂದು ಹೇಳಿದ್ದು ಮಾತ್ರವಲ್ಲ, ಆಚರಣೆಗೆ ತರುವುದರಲ್ಲೂ ಮೋದಿ ಗೆದ್ದಿದ್ದಾರೆಂದು ಹತ್ತಿರದಿಂದ ಬಲ್ಲವರು ಹೇಳುವ ಮಾತು.

ಕಳೆದ ಚುನಾವಣೆ ನಡೆದದ್ದೇ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ವಿಷಯದ ಮೇಲೆ. ಕಳೆದ ಒಂದು ವರ್ಷದಲ್ಲಿ ಆ ಎರಡೂ ವಿಷಯಗಳಲ್ಲಿ ಗಣನೀಯ ಯಶಸ್ಸು ಗಳಿಸಿರುವುದು ಎಂಥವರಿಗೂ ಅನುಭವಕ್ಕೆ ಬರುವಂತಿದೆ.

ಇನ್ನು ಕೈಗಾರಿಕೆಗಳಿಗೆ ಮಣೆ ಹಾಕುವ ವಿಚಾರ. ಸದ್ಯದ ಪರಿಸ್ಥಿತಿಯಲ್ಲಿ ಕೈಗಾರಿಕೀಕರಣ ಬಿಟ್ಟರೆ ಭಾರತಕ್ಕೆ ಅನ್ಯಮಾರ್ಗ ಉಂಟೇನು? ನಮ್ಮ ಮುಂದಿರುವುದು ಎರಡೇ ಆಯ್ಕೆಗಳು. ಒಂದು- ಈಗ ಇದ್ದಹಾಗೆ ಇದ್ದುಕೊಂಡು ಇಲ್ಲಗಳ ಹೊದಿಕೆ ಹೊದ್ದು ಕನವರಿಸುತ್ತ, ನರಳುತ್ತಿರಬೇಕು. ಅದಿಲ್ಲ ಅಂದರೆ ದೇಶ ವಿದೇಶಗಳ ಕೈಗಾರಿಕೋದ್ಯಮಿಗಳಿಗೆ, ಕೈಗಾರಿಕೆಗಳಿಗೆ ಕೆಂಪುಹಾಸು ಹಾಕಬೇಕು. ಉದ್ಯೋಗ ಸೃಷ್ಟಿ ಮತ್ತು ಉದ್ಯಮ ಬೆಳವಣಿಗೆಗೆ ಅನ್ಯ ಮಾರ್ಗವಿಲ್ಲ. ಅಷ್ಟಕ್ಕೂ ಕೈಗಾರಿಕೀಕರಣ, ಉದಾರೀಕರಣದ ಯುಗ ಪ್ರಾರಂಭವಾದದ್ದು ಇಂದು ನಿನ್ನೆಯಲ್ಲವಲ್ಲ.

ಸೂಟು ಬೂಟು ಮತ್ತು ವಿದೇಶ ಪ್ರವಾಸ ಈಗ ಭಾರಿ ಚರ್ಚೆಯ ವಸ್ತು. ಟೀಕೆಗೆ ಅಸ್ತ್ರ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮೋದಿ, ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ನಾಯಕರನ್ನು ಆಹ್ವಾನಿಸುವ ಮೂಲಕ ವಿದೇಶ ಸಂಬಂಧ ಸುಧಾರಣೆಗೆ ಚಾಲನೆ ನೀಡಿ ಅಮೆರಿಕ ಮತ್ತು ಚೀನಾ ಅಧ್ಯಕ್ಷರನ್ನು ಕರೆದು ಆಲಿಂಗಿಸಿಕೊಂಡದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮನುಕುಲದ ಒಳಿತಿಗೆ ಇಡೀ ಜಗತ್ತು ಒಂದಾಗಬೇಕೆಂದು ಕರೆ ಕೊಟ್ಟಿದ್ದು, ಸಾಲದ್ದಕ್ಕೆ ಭೂತಾನದಿಂದ ಶುರುವಾಗಿ ದಕ್ಷಿಣ ಕೊರಿಯಾದವರೆಗೆ ತೆರಪಿಲ್ಲದೆ ಹತ್ತಾರು ದೇಶಗಳನ್ನು ಸುತ್ತಿ ಭೇಷ್ ಎನಿಸಿಕೊಂಡಿದ್ದು ಇವನ್ನೆಲ್ಲ ಗಮನಿಸಬೇಕು ತಾನೆ?

ಭೂ ಸ್ವಾಧೀನ ಮಸೂದೆ ವಿರುದ್ಧ ಇಲ್ಲಸಲ್ಲದ ಕೂಗೆದ್ದಾಗ ‘ಮನ್ ಕಿ ಬಾತ್’ನಂತಹ ರೇಡಿಯೋ ಕಾರ್ಯಕ್ರಮದ ಮುಖೇನ ಜನರನ್ನು ತಲುಪಲು ಯತ್ನಿಸಿದ್ದು ಮೋದಿ ಚಾಣಾಕ್ಷ ನಡೆಗೆ ಒಂದು ಉದಾಹರಣೆಯಷ್ಟೆ. ರಾಜಕೀಯ ಅಸ್ಥಿರತೆ, ಪ್ರಕೃತಿ ವಿಕೋಪ ಮತ್ತು ಪ್ರತ್ಯೇಕತಾವಾದಿಗಳ ಆಟಾಟೋಪದಿಂದ ಜಝುರಿತವಾದ ಕಾಶ್ಮೀರದಲ್ಲಿ ಪರಿವರ್ತನೆ ತರಲು ಸಂಕಲ್ಪಿಸಿದ ಪ್ರಧಾನಿ, ದೀಪಾವಳಿ ಸಂಭ್ರಮಾಚರಣೆಗೆ ಸಿಯಾಚಿನ್ ಪ್ರದೇಶವನ್ನು ಆಯ್ಕೆ ಮಾಡಿಕೊಂಡರು. ದೇಶ ಕಾಯುವ ಸೈನಿಕರೊಂದಿಗೆ ಹಬ್ಬ ಆಚರಿಸಿದರು. ಬಡತನದ ವಿಚಾರ ಬಂದಾಗ ‘ನಾನೂ ಬಡವ, ನಾನು ಬೇರೆಯವರಿಗಾಗಿ ಬದುಕುತ್ತೇನೆ’ ಎಂದು ಹೇಳಿ ಜನಧನ ಯೋಜನೆಯಂಥ ಎಲ್ಲರಲ್ಲೂ ಬ್ಯಾಂಕಿಂಗ್ ಸಾಕ್ಷರತೆ ತರುವ ಅಪರೂಪದ ಕಾರ್ಯಕ್ರಮದ ಜಾರಿಗೆ ಮುಂದಾದರು.

ಇನ್ನು, ‘ಸ್ವಚ್ಛ ಭಾರತ’ ಅಭಿಯಾನ ಮೂಡಿಸಿದ ಸಂಚಲನದ ಬಗ್ಗೆ ಹೇಳದೇ ಹೋದರೆ ಹೇಗೆ? ಒಬ್ಬ ಪ್ರಧಾನಿ ತಾನು ಹದಿನೆಂಟು ಗಂಟೆ ಕೆಲಸ ಮಾಡುವುದರ ಜೊತೆಗೆ ಕೋಟ್ಯಂತರ ಮನಸ್ಸುಗಳನ್ನು ಆಲೋಚನೆಗೆ ಹಚ್ಚುವುದೂ ಮುಖ್ಯ ತಾನೆ? ಆ ದೃಷ್ಟಿಯಿಂದ ಸ್ವಚ್ಛ ಭಾರತ ಅಭಿಯಾನ ನಿಜಕ್ಕೂ ಅದ್ಭುತ ಚಿಂತನೆ. ಬಸ್​ಸ್ಟ್ಯಾಂಡಿನಲ್ಲಿ ನಿಂತ ಪುಟ್ಟ ಮಗು ಕಸವನ್ನು ಎಲ್ಲಿ ಚೆಲ್ಲಬೇಕೆಂದು ಆಲೋಚಿಸುವಾಗ ಮೋದಿಯನ್ನು ನೆನಪು ಮಾಡಿಕೊಳ್ಳುವಂತಾದರೆ, ಅದು ಅಭಿಯಾನದ ಪರಿಣಾಮ ಎಂದು ಧಾರಾಳವಾಗಿ ಬಣ್ಣಿಸಬಹುದಲ್ಲವೇ? ಸಾಗಿದ್ದು ಒಂದು ವರ್ಷ. ಸಾಗಬೇಕಾದ ಹಾದಿ ಒಂದು ಯುಗ ಕಳೆದರೂ ಮುಗಿಯಲಿಕ್ಕಿಲ್ಲ. ಹಾಗಾದರೆ ‘ಕ್ಲೀನ್ ಇಂಡಿಯಾ’ ಸಾಕಾರಕ್ಕಾಗಿ ಒಂದು ಅಭಿಯಾನವಲ್ಲ, ಮ್ಯಾರಥಾನೇ ನಡೆಯಲಿ ಎಂದು ಆಶಿಸೋಣ. ಏನಂತೀರಿ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top