ಮೋದಿ-ಷರೀಫ್ ಮಾತುಕತೆ ಹಕೀಕತ್ ಏನು?

ಪ್ರಕ್ಷುಬ್ಧಗೊಂಡ ಕಾಶ್ಮೀರದಲ್ಲಿ ರಾಜಕೀಯ ಅಧಿಕಾರ ಹಂಚಿಕೆ ಮಾಡಿಕೊಳ್ಳುವ ರಿಸ್ಕ್ ತೆಗೆದುಕೊಂಡ ಪ್ರಧಾನಿ ಮೋದಿ ಇಡೀ ಪಾಕಿಸ್ತಾನದೊಂದಿಗೆ ದ್ವಿಮುಖ ಮಾತುಕತೆಗೆ (ಸೇನೆ ಮತ್ತು ಸರ್ಕಾರ) ಸಮ್ಮಿತಿಸುವ ಮೂಲಕ ಹೊಸ ಶಕೆ ಆರಂಭಿಸಿದ್ದಾರೆಂದೇ ರಾಜತಾಂತ್ರಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪರಿಣಾಮವನ್ನು ಕಾದು ನೋಡಬೇಕಷ್ಟೆ. 

Shrif modiದೇವದುರ್ಲಭ ದೇಶಭಕ್ತ ಯೋಧರನ್ನು ನೋಡನೋಡುತ್ತಲೇ ಕಳೆದುಕೊಂಡ ನೋವು ಎಂದೂ ಮಾಯಲು ಸಾಧ್ಯವಿಲ್ಲ. ನೋವಿನ ನೆನಪಿನ ಬೆನ್ನಲ್ಲೇ ಕಾರ್ಗಿಲ್ ವಿಜಯದ ಹೆಮ್ಮೆಯ ದಿನವೂ ಬರುತ್ತದೆ. ಆ ರೋಮಾಂಚನದ ಘಳಿಗೆಗೆ ಎಂಟು ದಿನಗಳಷ್ಟೇ ಬಾಕಿ. ಕಾಲ ಎಷ್ಟು ಸರಾಗವಾಗಿ ಸರಿದು ಹೋಗುತ್ತದೆ ನೋಡಿ. ಈ ಜುಲೈ 26 ಬಂದಿತೆಂದರೆ ಕಳ್ಳ ಯುದ್ಧದಲ್ಲಿ ತೊಡಗಿದ್ದ ಪಾಕಿಗಳನ್ನು ನಮ್ಮ ವೀರಯೋಧರು ಶೌರ್ಯದಿಂದ ಹೆಡೆಮುರಿಕಟ್ಟಿ ಭರ್ತಿ ಹದಿನಾರು ವರ್ಷಗಳಾಗುತ್ತವೆ. ಇದು ಪಾಕಿಸ್ತಾನಕ್ಕೆ ಆದ ಮೊದಲ ಅಪಮಾನ, ಸೋಲು ಅಂತ ಹೇಳುವ ಹಾಗಿಲ್ಲ. ಏಕೆಂದರೆ, ಅಖಂಡ ಭಾರತ ತುಂಡಾದ ಮರುಕ್ಷಣದಿಂದಲೇ ಪಾಕಿಸ್ತಾನ ಇಂಥ ದುರ್ಬುದ್ಧಿಯನ್ನು ಮೇಲಿಂದ ಮೇಲೆ ತೋರುತ್ತಲೇ ಬರುತ್ತಿದೆ. ಅಧಿಕೃತವಾಗಿ ಹೇಳುವುದಾದರೆ ಇದು ಆ ದೇಶಕ್ಕಾದ ನಾಲ್ಕನೆಯ ಮುಖಭಂಗ. ಅನಧಿಕೃತವಾಗಿ ಅದಿನ್ನೆಷ್ಟೋ. ಅದನ್ನೇ ಛಾಯಾ ಯುದ್ಧಗಳೆಂದು ಹೇಳುವುದು. ಆ ಪದ ಪಾಕಿಸ್ತಾನಕ್ಕೆ ಹೇಳಿ ಮಾಡಿಸಿದ್ದು. ಇಷ್ಟಾದರೂ ಆ ದೇಶಕ್ಕೆ ಬುದ್ಧಿ ಬರುತ್ತಿದೆ ಎನ್ನಬಹುದೇ? ಇನ್ನು ಮುಂದೆಯೂ ಅಂತಹ ಭರವಸೆಯ ಗೆರೆ ಕಾಣಿಸುತ್ತಿಲ್ಲ ಎಂಬುದೇ ಕಳವಳಕ್ಕೆ ಈಡು ಮಾಡುವ ಸಂಗತಿ. ಅದು ಪಾಕಿಸ್ತಾನದ ಹಣೆಬರಹವೂ ಹೌದು.

ನೋವು, ನಿರಾಶೆ, ಹತಾಶೆ, ಅಪಮಾನ, ಕಿರುಕುಳಗಳು ಅದೆಷ್ಟೇ ಸಲ ಕಾಡಲಿ ಮತ್ತೆ ಮರುಕ್ಷಣದಲ್ಲಿ ಹೊಸ ಆಸೆ ಚಿಗುರುವಂತೆ ಮಾಡುವುದು ಭಾರತದ ನಾಯಕತ್ವದಲ್ಲಿ ಮನೆ ಮಾಡಿರುವ ಮನುಷ್ಯತ್ವದ ಗುಣ. ಇತ್ತೀಚೆಗೆ ಶಾಂಘೈ ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ಹಸ್ತಲಾಘವಕ್ಕೆ ಕೈ ಮುಂದೆ ಮಾಡಿದರಲ್ಲ, ಅದಕ್ಕೂ ಸಹ ಇದೇ ದೊಡ್ಡತನ ಕಾರಣ ಎಂಬುದು ರಾಜತಾಂತ್ರಿಕರ ವ್ಯಾಖ್ಯಾನ. ಅದನ್ನು ಬಿಟ್ಟರೆ ಪಾಕಿಸ್ತಾನದ ವಿಷಯದಲ್ಲಿ ಭಾರತದ ಮುಂದೆ ಸದ್ಯಕ್ಕೆ ಬೇರೆ ಆಯ್ಕೆ ಇಲ್ಲವೇ ಇಲ್ಲ ಎಂಬುದೂ ಸಹ ಅದೇ ರಾಜತಾಂತ್ರಿಕ ಪರಿಣತರ ಅಂಬೋಣ.

ಅದೊಂದು ಬೆಳವಣಿಗೆಯ ನಂತರ ಎಂತಹ ಭರವಸೆ ಹುಟ್ಟಿತು ಅಂತೀರಿ. ಮೋದಿ ಹೇಳಿದ್ದಕ್ಕೆಲ್ಲ ಪಾಕ್ ಪ್ರಧಾನಿ ನವಾಜ್ ಷರೀಫ್ ತಲೆ ಅಲ್ಲಾಡಿಸಿದರು. ಕಾಶ್ಮೀರ, ಸಿಯಾಚಿನ್ ಮತ್ತು ಸರ್ಕ್ರೀಕ್ ವಿಷಯಗಳನ್ನು ಬಿಟ್ಟು ಮಾತುಕತೆಗೆ ಕೂಡೋಣ ಬನ್ನಿ ಎಂದರೆ ಸೈ ಎಂದರು. 2008ರ ಮುಂಬೈ ದಾಳಿ ರೂವಾರಿ ಲಖ್ವಿ ಧ್ವನಿ ಮಾದರಿ ಕೊಡಿ ಎಂದರೆ ಅದಕ್ಕೂ ಮರು ಮಾತಿಲ್ಲದೆ ಒಪ್ಪಿಕೊಂಡರು ಪಾಕ್ ಪ್ರಧಾನಿ. ಮೋದಿಜೀ ಒಂದು ವರ್ಷದಲ್ಲಿ ಜಗತ್ತಿನ ಎಷ್ಟೆಲ್ಲ ದೇಶಗಳನ್ನು ನೀವು ಸುತ್ತಿ ಬಂದಿರಿ, ಹಾಗೇ ಒಮ್ಮೆ ಪಾಕಿಸ್ತಾನಕ್ಕೂ ಆಗಮನವಾಗಲಿ ಎಂದುಬಿಟ್ಟರು ಷರೀಫ್. ಮರು ಮಾತಿಲ್ಲದೆ ಮೋದಿ ಒಪ್ಪಿಗೆ ಕೊಟ್ಟೇ ಬಿಟ್ಟರು. ಮೇಲಿಂದ ಮೇಲೆ ಕಾಡಿದ ಯುದ್ಧ, ಮುರಿದುಬಿದ್ದ ಮಾತುಕತೆಗಳು ಯಾವುದೂ ಅಡ್ಡಿಬರಲಿಲ್ಲ. ಎಂತಹ ಬದಲಾವಣೆ! ಈ ಬೆಳವಣಿಗೆ ಕಂಡು ಅಮೆರಿಕ ಆದಿಯಾಗಿ ಜಗತ್ತಿನ ಹತ್ತಾರು ರಾಷ್ಟ್ರಗಳು ಭೇಷ್ ಅಂದುಬಿಟ್ಟವು. ಭಾರತದಲ್ಲೂ ಹೊಸ ಆಸೆ ಮೊಳಕೆಯೊಡೆಯಿತು.

ಆದರೆ ಆದದ್ದೇನು, ಮೋದಿ ಮತ್ತು ಷರೀಫ್ ಇನ್ನೂ ತಮ್ಮ ದೇಶಗಳಿಗೆ ವಾಪಸಾಗಿರಲಿಲ್ಲ. ಅದಾಗಲೇ ಆಡಿದ ಮಾತಿಗೆ ತದ್ವಿರುದ್ಧ ಬೆಳವಣಿಗೆಗಳಾಗತೊಡಗಿದವು. ಪಾಕಿಸ್ತಾನ, ಭಾರತ ಇನ್ನೆಂದೂ ನೇರಾನೇರ ಮುಖವನ್ನೂ ನೋಡಲಾರವು ಎಂಬಂತಹ ಮಾತುಗಳು ಕೇಳಿ ಬಂದವು. ಅದೆಲ್ಲಕ್ಕಿಂತಲೂ ಕಳವಳಕಾರಿ ಬೆಳವಣಿಗೆ ಈಗ ಎರಡು ಮೂರು ದಿನಗಳಿಂದ ಉಭಯ ದೇಶಗಳ ಗಡಿಯಲ್ಲಿ ಆಗುತ್ತಿದೆ. ಅದನ್ನು ಇಡೀ ಜಗತ್ತೇ ಗಮನಿಸುತ್ತಿದೆ ಕೂಡ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮೇಲಿಂದ ಮೇಲೆ ಕದನವಿರಾಮ ಉಲ್ಲಂಘಿಸುತ್ತಿದೆ. ಕಾರಣ ಏನು ಗೊತ್ತೇ? ಮಾಜಿ ಮಂತ್ರಿ ಗಿರಧಾರಿ ಲಾಲ್ ಡೋಗ್ರಾ ಜನ್ಮಶತಮಾನೋತ್ಸವ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಜಮ್ಮುವಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಪಾಕಿಸ್ತಾನ ರೇಂಜರ್ಸ್ ನಡೆಸಿದ ತಯಾರಿ ಅದು! ಉಪದ್ವ್ಯಾಪದ ಪರಮಾವಧಿ ಎನ್ನಲು ಅಡ್ಡಿಯಿಲ್ಲ.

ಈ ಬೆಳವಣಿಗೆಗೆ ಭಾರತ ಸರ್ಕಾರ ತಕ್ಕ ಉತ್ತರವನ್ನೇ ನೀಡಿದೆ.

ಕಾಲು ಕೆರೆದು ಮುಂದೆ ಬಂದರೆ ತಕ್ಕ ಉತ್ತರವನ್ನು ಕೊಡುತ್ತೇವೆ ಅಂತ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ನೇರಾನೇರವಾಗಿ ಹೇಳಿದ್ದಾರೆ. ಹಾಗಾ ದರೆ ಭಾರತ-ಪಾಕಿಸ್ತಾನ ಯುದ್ಧ ನಡೆದುಹೋಗುತ್ತಾ? ನೋ ಛಾನ್ಸ್… ಅದು ಮಾತಿನ ಯುದ್ಧ ಮಾತ್ರ! ಅಂತಹ ಪ್ರಸಂಗಕ್ಕೆ ಭಾರತ, ಪಾಕಿಸ್ತಾನ ಯಾವೊಂದು ರಾಷ್ಟ್ರವೂ ತಯಾರಿಲ್ಲ. ಇದೇನಿದ್ದರೂ ಕೀಟಲೆ ಮಾತ್ರ.

ಸ್ವಲ್ಪ ಹಿಂದಕ್ಕೆ ತಿರುಗಿ ನೋಡೋಣ. ಮೋದಿ-ಷರೀಫ್ ಶಾಂಘೈನಲ್ಲಿ ಮುಖಾಮುಖಿ ಆಗುವುದಕ್ಕೂ ಒಂದು ದಿನ ಮುಂಚೆ ಯಾರ್ಯಾರು ಏನೇನು ಹೇಳಿದ್ದರು ಎಂಬುದನ್ನು ಒಮ್ಮೆ ಮೆಲುಕು ಹಾಕುವುದು ಉತ್ತಮ. ಪಾಕಿಸ್ತಾನ ಗಡಿಯಲ್ಲಿ ಚಿತಾವಣೆ ನಿಲ್ಲಿಸುವವರೆಗೆ ಮಾತುಕತೆ ಅಸಾಧ್ಯದ ಮಾತು ಅಂತ ಸುಷ್ಮಾ ಸ್ವರಾಜ್ ಕಡ್ಡಿ ಮುರಿದಂತೆ ಹೇಳಿದ್ದರು. ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸದೇ ಹೋದಲ್ಲಿ ತಕ್ಕ ಪಾಠ ಕಲಿಸುವುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದರು. ಬೇಜವಾಬ್ದಾರಿ ಪಾಕಿಸ್ತಾನಕ್ಕೆ ಅದರದ್ದೇ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತೇವೆ, ಪಾಠ ಕಲಿಸುತ್ತೇವೆ ಅಂತೆಲ್ಲ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಗುಡುಗಿದ್ದರು. ಆದರೆ ಆದದ್ದೇನು? ಸುಷ್ಮಾ, ರಾಜನಾಥ್ ಮತ್ತು ಪರಿಕ್ಕರ್ ಮಾತ್ರವಲ್ಲ, ಭಾರತ ಪಾಕಿಸ್ತಾನದ ಸಂಬಂಧದ ವಿಷಯದಲ್ಲಿ ಆಸಕ್ತಿಯಿಂದ ನೋಡುತ್ತಿದ್ದ ಇಡೀ ಜಗತ್ತು ಮೂಗಿನ ಮೇಲೆ ಬೆರಳಿಟ್ಟು ಉದ್ಗಾರ ತೆಗೆಯುವಂತಹ ಸನ್ನಿವೇಶವನ್ನು ಪ್ರಧಾನಿ ಮೋದಿ ಕ್ಷಣಾರ್ಧದಲ್ಲಿ ನಿರ್ವಿುಸಿಬಿಟ್ಟರು. ಇದು ಆಗಿದ್ದು ಹೇಗೆ?

ಈ ಬೆಳವಣಿಗೆಯ ಹಿಂದೆ ಇಬ್ಬರು ವ್ಯಕ್ತಿಗಳಿದ್ದಾರೆ. ಒಬ್ಬರು ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯನ್ ಜೈಶಂಕರ್, ಮತ್ತೊಬ್ಬರು ರಕ್ಷಣಾ ಸಲಹೆಗಾರ ಅಜಿತ್ ಧೋವಲ್. ಸದಾ ಕಿರುಕುಳ ಕೊಡುತ್ತಿದ್ದ ಬಲಾಢ್ಯ ದೇಶ ಚೀನಾದ ಆಟಾಟೋಪಕ್ಕೆ ಕಡಿವಾಣ ಹಾಕುವಲ್ಲಿ ಮೋದಿಗೆ ತಂತ್ರಗಾರಿಕೆ ಕಲಿಸುತ್ತಿರುವುದು ಅಜಿತ್ ಧೋವಲ್. ಅದರ ಪರಿಣಾಮವನ್ನು ನಾವೀಗ ಕಣ್ಣಾರೆ ಕಾಣುತ್ತಿದ್ದೇವೆ. ಇದೀಗ ಪಾಕಿಸ್ತಾನವೂ ಸೇರಿ ಇಡೀ ಮುಸ್ಲಿಂ ದೇಶಗಳ ನಡುವೆ ಬಾಂಧವ್ಯದ ಕೊಂಡಿ ಬೆಸೆಯುವ ಹೊಣೆಗಾರಿಕೆಯನ್ನು ಜೈಶಂಕರ್ ಹೆಗಲಿಗೇರಿಸಿಕೊಂಡಿದ್ದಾರೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ಹೇಳುತ್ತಿವೆ. ಒಟ್ಟಾರೆ ಹೇಳುವುದಾದರೆ ವಿದೇಶಾಂಗ ವ್ಯವಹಾರ ಮತ್ತು ಅದಕ್ಕೆ ಸಂಬಂಧಿಸಿ ಭಾರತದ ನೀತಿ ನಿರೂಪಣೆ ಮಾಡುವಲ್ಲಿ ಪ್ರಧಾನಿ ಮೋದಿಗೆ ಕಣ್ಣಾದರೆ ಮತ್ತೊಬ್ಬರು ಕಿವಿಯಾಗಿದ್ದಾರೆ.

ಪಾಕಿಸ್ತಾನದ ವಿಷಯದಲ್ಲಿ ಮೋದಿ ಅಚ್ಚರಿಯ ನಿಲುವು ತಳೆಯುವುದರಲ್ಲೂ ಜೈಶಂಕರ್ ಪಾತ್ರ ಬಹಳ ದೊಡ್ಡದು. ಭಾರತವು ಬಾಂಗ್ಲಾದೇಶ, ಆಫ್ಘನ್ ಅಷ್ಟೇ ಏಕೆ ಮಧ್ಯ ಏಷ್ಯಾದ ಎಲ್ಲ ದೇಶಗಳ ಜೊತೆಗೆ ಸಂಬಂಧ ಸುಧಾರಣೆ ಮಾಡಿಕೊಳ್ಳುವ ಯತ್ನದಲ್ಲಿ ಸಾಕಷ್ಟು ಯಶಸ್ಸನ್ನು ಕಾಣುತ್ತಿದೆ. ಅದೇ ವೇಳೆ ಚೀನಾ ಮಾತ್ರ ಸದಾ ಕಣ್ಣಾಮುಚ್ಚಾಲೆ ಆಟವನ್ನೇ ಆಡುತ್ತಿದೆ. ಬಾಕಿ ನೆರೆಹೊರೆಯವರು ಭಾರತದ ಹಾದಿಗೆ ಬರಬೇಕಾದರೆ ಅದು ರಾಜತಾಂತ್ರಿಕ ಜಾಣ್ಮೆಯಿಂದ ಮಾತ್ರ ಸಾಧ್ಯ ಎಂಬುದು ಜೈಶಂಕರ್ ಮೋದಿಗೆ ಹೇಳಿದ ಕಿವಿಮಾತು. ಮುಖ್ಯವಾಗಿ ಚೀನಾದ ವ್ಯವಹಾರವನ್ನು ಸಮರ್ಥವಾಗಿ ನಿಭಾಯಿಸಬೇಕೆಂದರೆ ಪಾಕಿಸ್ತಾನದ ಜೊತೆಗೆ ಸ್ನೇಹ, ಸೌಹಾರ್ದದ ಆಹ್ವಾನವನ್ನು ಕಣ್ತೋರಿಕೆಗಾದರೂ ಕೊಡಲೇಬೇಕೆಂದು ಬಾಸ್ ನರೇಂದ್ರ ಮೋದಿಗೆ ಸಲಹೆ ಕೊಟ್ಟದ್ದು ಜೈಶಂಕರ್. ಅದಕ್ಕೆ ರಂಜಾನ್ ತಿಂಗಳಿಗಿಂತಲೂ ಪ್ರಶಸ್ತ ಮುಹೂರ್ತ ಇನ್ನೊಂದಿಲ್ಲ ಎಂದು ಹೇಳಿದ್ದೂ ಕೂಡ ಇದೇ ಜೈಶಂಕರ್ ಅವರೇನೆ. ಇಂತಹ ಅಮೂಲ್ಯ ಸಲಹೆಯ ಪರಿಣಾಮವನ್ನು ಇಲ್ಲಿ ಪ್ರತ್ಯೇಕವಾಗಿ ಹೇಳುವ ಜರೂರತ್ತಿಲ್ಲ ಅಂದುಕೊಳ್ಳುತ್ತೇನೆ.

ಇದು ಮೇಲ್ನೋಟದ ಕ್ರಿಯೆ ಮತ್ತು ಪರಿಣಾಮ. ಒಳಾಂತರ್ಯದ ಮರ್ಮ ಇದಕ್ಕಿಂತಲೂ ಕುತೂಹಲಕರವಾಗಿದೆ. ಅದನ್ನು ಆಲೋಚನೆ ಮಾಡುವುದಕ್ಕಿಂತ ಮೊದಲು ಕೆಲ ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ಮೆಲುಕು ಹಾಕೋಣ. 2008ರಲ್ಲಿ ಸರ್ವಾಧಿಕಾರಿ ಪರ್ವೆಜ್ ಮುಷರಫ್ ಆಡಳಿತ ಅಧ್ಯಾಯ ಮುಕ್ತಾಯವಾಗುವ ಹಂತದಲ್ಲಿ ಐಎಸ್​ಐ ಮುಖ್ಯಸ್ಥರಾಗಿದ್ದ ಶುಜಾ ಪಾಶಾ ಭಾರತದ ರಕ್ಷಣಾ ಸಲಹೆಗಾರರಿಗೆ ಒಂದು ಸೂಕ್ಷ್ಮ ಸಲಹೆ ನೀಡಿದ್ದರು. ಉಭಯ ದೇಶಗಳ ನಡುವಿನ ರಕ್ಷಣಾ ಇಲಾಖೆಯ ಮುಖ್ಯಸ್ಥರ ನಡುವೆ ಏರ್ಪಾಡಾಗಿದ್ದ ಇಫ್ತಾರ್ ಪಾರ್ಟಿ ವೇಳೆ ಪಾಶಾ ಒಂದು ಪ್ರಸ್ತಾಪ ಮುಂದಿಟ್ಟಿದ್ದರು. ಭಾರತದ ನಾಯಕರು ಪಾಕಿಸ್ತಾನದ ರಾಜಕೀಯ ನೇತಾರರ ಜೊತೆಗೆ ಮಾತ್ರ ಯಾಕೆ ಮಾತುಕತೆಗೆ ಮುಂದಾಗುತ್ತಾರೆ. ಅದರ ಬದಲು ಭಾರತ ಸರ್ಕಾರ ಪಾಕ್ ಸೇನೆಯ ಜೊತೆಗೆ ನೇರ ಮಾತುಕತೆ ಮಾಡಲು ಮುಂದೆ ಬರಲಿ ಎಂದು ಹೇಳಿದ್ದರು. ಈ ಮಾತು ಬಹಳ ಅರ್ಥಗರ್ಭಿತವಾದದ್ದು. ಇದೇ ಮರ್ಮವನ್ನು ಜೈಶಂಕರ್ ಪ್ರಧಾನಿ ಮೋದಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಕೆಲ ಉನ್ನತ ಮೂಲಗಳು ಹೇಳುತ್ತಿವೆ.

ಪಾಕಿಸ್ತಾನದ ದುರ್ವಿಧಿ ನೋಡಿ. ದೇಶ ಒಂದೇ ಆದರೂ ಅಲ್ಲಿನ ಸೇನೆ ಮತ್ತು ಸರ್ಕಾರದ ನಡುವೆ ಮೊದಲ ದಿನದಿಂದಲೂ ತಾಳಮೇಳವಿಲ್ಲ. ಸರ್ಕಾರ ಏತಿ ಎಂದರೆ ಅಲ್ಲಿನ ಮಿಲಿಟರಿ ಪ್ರೇತಿ ಎನ್ನುತ್ತದೆ. ಪಾಕಿಸ್ತಾನ ಸರ್ಕಾರ ಉಗ್ರರ ದಮನಕ್ಕೆ ಮುಂದಾದರೆ ಅದೇ ಉಗ್ರರ ಸಂರಕ್ಷಣೆಗೆ ಪಾಕಿಸ್ತಾನದ ಸೇನೆ ಮತ್ತು ಐಎಸ್​ಐ ಟೊಂಕಕಟ್ಟಿ ನಿಲ್ಲುತ್ತವೆ. ಈ ಮಾತಿಗೆ ಒಂದಲ್ಲ ಹತ್ತು ಉದಾಹರಣೆಯನ್ನು ಕೊಡಬಹುದು.

ಆ ದೃಷ್ಟಿಯಿಂದ ನೋಡಿದರೂ ಮೋದಿ ಮತ್ತು ಷರೀಫ್ ನಡುವಿನ ಶಾಂಘೈ ಮಾತುಕತೆ ತುಸು ಭಿನ್ನ ಅಂತಲೇ ಹೇಳಬೇಕು. ಏಕೆಂದರೆ ಮೋದಿ ಜೊತೆಗಿನ ಷರೀಫ್ ಮಾತುಕತೆಗೆ ಅಜೆಂಡಾವನ್ನು ಈ ಸಲ ಅಂತಿಮಗೊಳಿಸಿದ್ದು ಪಾಕಿಸ್ತಾನದ ಸೇನಾ ಮುಖ್ಯಸ್ಥರೇ. ಮೋದಿ ಜೊತೆ ಮಾತುಕತೆಗೆ ಕುಳಿತುಕೊಳ್ಳುವ ಮುನ್ನ ಅಜೆಂಡಾವನ್ನು ಸಿದ್ಧಗೊಳಿಸಿ ಎಂದು ಷರೀಫ್ ಸೂಚಿಸಿದ್ದು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೇನೆ. ಅದರಂತೆ ಭಾರತ ಮತ್ತು ಪಾಕಿಸ್ತಾನಗಳೆರಡನ್ನೂ ಕಾಡುತ್ತಿರುವ ಭಯೋತ್ಪಾದನೆ ಮತ್ತು ಉಭಯ ದೇಶಗಳ ನಡುವೆ ಕಂದಕಕ್ಕೆ ಕಾರಣವಾಗಿರುವ ಸೇನಾ ನಾಯಕರ ನಡುವಿನ ಅಂತರ ಕಡಿಮೆ ಮಾಡುವ ಸಂಬಂಧ ಮಾತುಕತೆ ನಡೆಸುವ ಕುರಿತು ಒಮ್ಮತಕ್ಕೆ ಬರಲಾಯಿತು. ಐಎಸ್​ಐ ಮುಖ್ಯಸ್ಥರಾಗಿದ್ದ ಶುಜಾ ಪಾಷಾ ಈ ಹಿಂದೆ ಹೇಳಿದ ಮಾತನ್ನು ನೆನಪಿಸಿಕೊಳ್ಳುವುದಾದರೆ ಭಾರತ-ಪಾಕಿಸ್ತಾನದ ನಡುವಿನ ಮಾತುಕತೆ ಫಲಪ್ರದವಾಗಲು ಈ ಸಲ ಕಾಲ ಹೆಚ್ಚು ಪಕ್ವವಾಗಿದೆ ಎಂತಲೇ ಹೇಳಬೇಕಾಗುತ್ತದೆ.

ಕಾರಣ ಇಷ್ಟೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಸುಧಾರಣೆಗೆ ಉಭಯ ರಾಷ್ಟ್ರಗಳ ಚುನಾಯಿತ ಸರ್ಕಾರಗಳ ನಡುವೆ 1947ರಿಂದಲೂ ನಡೆದ ಮಾತುಕತೆ, ಒಪ್ಪಂದಗಳಿಗೆ ಲೆಕ್ಕವೇ ಇಲ್ಲ. ಆದರೆ ಅಂತಹ ಎಲ್ಲ ಪ್ರಯತ್ನಗಳೂ ನೀರಲ್ಲಿ ಮಾಡಿದ ಹೋಮದಂತಾದ್ದು ಪಾಕಿಸ್ತಾನ ಸೇನೆಯ ದುರಹಂಕಾರ ಮತ್ತು ಮೂರ್ಖತನದಿಂದಲೇ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಸಲವೂ ಭಾರತ-ಪಾಕ್ ಮಾತುಕತೆ ಆರಂಭವಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಎಂದಿನ ಚಾಳಿ ಎನ್ನುವ ಹಾಗೆ ಗಡಿಯಲ್ಲಿ ಗುಂಡಿನ ಮೊರೆತ ಹೆಚ್ಚಾಗುತ್ತಿದೆ. ಅತ್ತ ಲಾಹೋರ್, ಇಸ್ಲಾಮಾಬಾದ್​ನಲ್ಲಿ ವ್ಯತಿರಿಕ್ತ ಸದ್ದುಗಳೇ ಹೆಚ್ಚಾಗಿ ಮೊಳಗುತ್ತಿವೆ. ಹಾಗಾದರೆ ಶಾಂಘೈನಲ್ಲಿ ಈ ಸಲ ಮಾತುಕತೆ ಅಜೆಂಡಾ ಆಖೈರುಗೊಳಿಸುವುದರಲ್ಲಿ ಪಾಕ್ ಸೇನಾ ಮುಖ್ಯಸ್ಥರ ಪಾಲೂ ಇದೆ ಎನ್ನುವುದು ಈ ಮಂದಿಗೆ ತಿಳಿಯದೇ ಹೋಯಿತೇ? ತೀರಾ ಅಚ್ಚರಿಯ ವಿಚಾರ.

ಒಂದಂತೂ ನಿಜ. ಅತ್ತ ಪಾಕ್ ಪ್ರಧಾನಿ ಮತ್ತು ಇತ್ತ ಭಾರತದ ಪ್ರಧಾನಿ ರಾಜಕೀಯ ಬಲಾಢ್ಯರು ಮತ್ತು ಪ್ರಬುದ್ಧರು. ನವಾಜ್ ಷರೀಫ್ ಈಗ ಮಾತ್ರವಲ್ಲ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ವೇಳೆಯೂ ಯಾರು ಏನೇ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಇದೇ ತೆರನಾದ ರಾಜಕೀಯ ಪ್ರಬುದ್ಧತೆ ಮೆರೆದವರು. ಹಾಗಾದರೆ ಈ ಸಲ ಭಾರತ ಪಾಕಿಸ್ತಾನಗಳ ಬಾಂಧವ್ಯದಲ್ಲಿ ಹಿಂದಿಗಿಂತಲೂ ಹೆಚ್ಚಿನ ಫಲಿತಾಂಶ ಹಾಗೂ ಪರಿಣಾಮವನ್ನು ನಾವು ನಿರೀಕ್ಷೆ ಮಾಡಬಹುದೇ? ಈ ಸಲದ ರಂಜಾನ್ ಭಾರತ ಮತ್ತು ಪಾಕಿಸ್ತಾನದ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಭ್ರಮ ನೀಡೀತೇ? ಕಾದು ನೋಡೋಣ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top