ಮೋದಿ ಗೆಲ್ಲಿಸಲು ಅದೆಷ್ಟು ಕಾರಣಗಳಿದ್ದವು ಗೊತ್ತೇ?

ಒಂದು ಸ್ಥಿರ ಸರ್ಕಾರಕ್ಕೆ, ಸಮರ್ಥ ನಾಯಕತ್ವಕ್ಕೆ ಜನಾದೇಶ ನೀಡಿದ ಭಾರತದ ಮತದಾರರಿಗೆ ಏನು ಹೇಳಿದರೂ, ಎಷ್ಟು ಹೇಳಿದರೂ ಸಾಲದು. ಇನ್ನಾದರೂ ಮೋದಿ ಟೀಕಾಕಾರರು ಮತ್ತು ರಾಜಕೀಯ ಎದುರಾಳಿಗಳು ಆಲೋಚನಾ ಕ್ರಮವನ್ನು ಬದಲಿಸಿಕೊಳ್ಳುತ್ತಾರೆಂದು ಆಶಿಸೋಣವೇ?

BJP Leader Narendra Modi Campaigns In Gujarat

ಅಂತೂಇಂತೂ ಸೋನಿಯಾ ಕನಸು ನನಸಾಯಿತು ಬಿಡಿ. ಇದೇನಾಶ್ಚರ್ಯ ಅಂತೀರಾ? ಗುಜರಾತ್ ಸಿಎಂ ಪಟ್ಟದಿಂದ ಮೋದಿಯವರನ್ನು ಪದಚ್ಯುತಗೊಳಿಸಲು ಕಳೆದ ಹತ್ತು ವರ್ಷದಿಂದ ಅವರು ಪಣ ತೊಟ್ಟಿದ್ದರು. ಆ ಕನಸೀಗ ನನಸಾಗಿದೆ! ಈ ಗೆಲುವು ಮೋದಿ ಮತ್ತು ಮೋದಿ ಒಬ್ಬರದೇ ಗೆಲುವು. ಶಬಾಷ್ ಅನ್ನಬಾರದೆ… ಮೋದಿ ನಿಜಕ್ಕೂ ಗಟ್ಟಿಗ ಕಣ್ರಿ. ಅದೆಂಥಾ ದೈತ್ಯ ಶಕ್ತಿ ಅಂತೀನಿ. `ಮನುಷ್ಯನಿಗೆ ಶಾರೀರಿಕವಾಗಿ ಆಗುವ ದಣಿವು ದಣಿವಲ್ಲ, ಅದೇ ಮಾನಸಿಕವಾಗಿ ಹೈರಾಣಾಗುವುದು ಮನುಷ್ಯನನ್ನು ಜರ್ಝರಿತನನ್ನಾಗಿ ಮಾಡಿಬಿಡುತ್ತದೆ, ಮುಂದೆಂದೂ ಮೇಲೇಳದಂತೆ ಕೆಳಕ್ಕೆ ತಳ್ಳಿಬಿಡುತ್ತದೆ’ ಅಂತ ತಿಳಿದವರು ಹೇಳುತ್ತಾರೆ. ಈ ಮನುಷ್ಯನಿಗೆ ಶಾರೀರಿಕವಾಗಿಯೂ ದಣಿವಿಲ್ಲ, ಮಾನಸಿಕವಾಗಿಯೂ ದಣಿವಿಲ್ಲ. ಸುಸ್ತು, ಸೊರಗು, ಹತಾಶೆ.. ಊಹೂಂ.. ಏನನ್ನೂ ಕೇಳಲೇಬೇಡಿ.

ಮೋದಿ ಬಿಜೆಪಿಯಲ್ಲಿ ಏಕಾಂಗಿಯಾಗಿ ರಾಜಕೀಯ ಗುದ್ದಾಟ ಶುರುಮಾಡಿ ಹತ್ತಿರ ಹತ್ತಿರ ಹದಿನಾಲ್ಕು ವರ್ಷ ಆಯಿತು. ಅದಕ್ಕಿಂತ ಹಿಂದಿನದ್ದೆಲ್ಲ ಇಲ್ಲಿ ಅಪ್ರಸ್ತುತ. ಅಂದಿನಿಂದ ಇಂದಿನವರೆಗೆ ಅವರದ್ದು ಅಕ್ಷರಶಃ ಹೋರಾಟ ಮತ್ತು ಹೋರಾಟ ಮಾತ್ರ. ಆದರೆ ಇಟ್ಟ ಹೆಜ್ಜೆ ಹಿಂದಿಟ್ಟ ಉದಾಹರಣೆ ಸಿಗುವುದಿಲ್ಲ. ಆರಂಭ ಆಗಿದ್ದೇ ಹಾಗೆ. 2000ನೇ ಇಸವಿ, ಆಗಿನ ಗುಜರಾತ್ ಸಿಎಂ ಕೇಶುಭಾಯಿ ಪಟೇಲ್‍ಗೆ ಆರೋಗ್ಯ ಕೈಕೊಡತೊಡಗಿತ್ತು. ಸ್ವತಃ ಕೇಶುಭಾಯಿ, ಅವರ ಸಂಪುಟದ ಹಲವು ಮಂತ್ರಿಗಳ ವಿರುದ್ಧ ಒಂದಾದ ಮೇಲೊಂದು ಭ್ರಷ್ಟಾಚಾರದ ಆಪಾದನೆ ಕೇಳಿಬರತೊಡಗಿತ್ತು. ಅದೇ ವೇಳೆಗೆ ಸರಿಯಾಗಿ 2001ರ ಜನವರಿಯಲ್ಲಿ ಭೀಕರ ಭೂಕಂಪ ಸಂಭವಿಸಿತು. ಸುಮಾರು 21 ಜಿಲ್ಲೆಗಳು ನಾಮಾವಶೇಷವಾದವು. ಲಕ್ಷಾಂತರ ಜನ ಮನೆಮಠ ಕಳೆದುಕೊಂಡರು, ಸಾವಿರಾರು ಮಂದಿ ಪ್ರಾಣ ಬಿಟ್ಟರು. ಪರಿಸ್ಥಿತಿ ನಿಭಾಯಿಸಲು ಕೇಶುಭಾಯಿ ಸರ್ಕಾರ ಸೋತುಹೋಯಿತು. ಗುಜರಾತ್ ಸರ್ಕಾರದ ನೇತೃತ್ವ ಬದಲಿಸಲೇಬೇಕಾದ ಸಂದಿಗ್ಧಕ್ಕೆ ಬಿಜೆಪಿ ವರಿಷ್ಠರು ಸಿಲುಕಿದರು. ಆಗ ಕಣ್ಣೆದುರಿಗೆ ಬಂದ ಹೆಸರು ನರೇಂದ್ರ ಮೋದಿ. ಮೋದಿ ಆ ಹೊತ್ತಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿಯಲ್ಲಿ ಸ್ಥಾಪಿತರಾಗಿದ್ದರು. ಈಗ ಮಾತ್ರವಲ್ಲ, ಆಗಲೂ ಮೋದಿಗೆ ಸಿಎಂ ಪಟ್ಟ ಕೊಡಲು ಆಡ್ವಾಣಿಗೆ ಸುತಾರಾಂ ಇಷ್ಟವಿರಲಿಲ್ಲ. ಆಡಳಿತದ ಅನುಭವ ಇಲ್ಲ ಎಂಬುದಕ್ಕಾಗಿ ಮೋದಿ ಕೈಗೆ ಸರ್ಕಾರದ ಚುಕ್ಕಾಣಿ ಕೊಡಲು ಆಡ್ವಾಣಿ ತಯಾರಿರಲಿಲ್ಲ. ಅದಕ್ಕಾಗಿ ಅವರೊಂದು ಪ್ರಸ್ತಾಪ ಮುಂದಿಟ್ಟಿದ್ದರು. ಮೋದಿಯನ್ನು ಕೇಶುಭಾಯಿ ಪಟೇಲ್ ಕೈಕೆಳಗೆ ಉಪಮುಖ್ಯಮಂತ್ರಿ ಮಾಡೋಣ ಅಂತ. ಆಗ ಮೋದಿ ಕಡ್ಡಿಮುರಿದಂತೆ ಹೇಳಿಬಿಟ್ಟಿದ್ದರು: “ಕೊಡುವುದಿದ್ದರೆ ಸಂಪೂರ್ಣ ಜವಾಬ್ದಾರಿ ಕೊಡಿ, ನೀವಿಟ್ಟ ವಿಶ್ವಾಸಕ್ಕೆ ಮುಕ್ಕಾಗದಂತೆ ಕೆಲಸ ಮಾಡಿ ತೋರಿಸುತ್ತೇನೆ. ಒಮ್ಮೆ ಹಾಗೆ ಮಾಡದೇ ಹೋದರೆ ನನ್ನದೇನೂ ತಕರಾರಿಲ್ಲ. ಉಪಮುಖ್ಯಮಂತ್ರಿಯಾದರೆ ಬೇರೆಯವರಿಗೆ ಅಂಟಿಕೊಂಡ ಕೊಳೆಯನ್ನು ನಾನೂ ಅಂಟಿಸಿಕೊಂಡು ಬರಬೇಕಾಗುತ್ತದೆಯೇ ಹೊರತು ಬೇರೇನೂ ಸಾಧನೆ ಆಗುವುದಿಲ್ಲ. ಯೋಚನೆ ಮಾಡಿ, ನಿರ್ಣಯ ತಗೊಳ್ಳಿ, ನನಗೆ ಪಕ್ಷದ ಕೆಲಸವನ್ನಾದರೂ ಕೊಡಿ, ಸರ್ಕಾರ ನಡೆಸುವ ಹೊಣೆಗಾರಿಕೆಯನ್ನಾದರೂ ಕೊಡಿ, ಯಾವುದಾದರೂ ಅಡ್ಡಿಯಿಲ್ಲ”. ಹಾಗೆ ಹೇಳುವ ಮುನ್ನ ಮೋದಿಗೆ ಗುಜರಾತ್ ಬಿಜೆಪಿಯ ನಾಡಿಮಿಡಿತ ಸಂಪೂರ್ಣ ಗೊತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಶಂಕರ್ ಸಿಂಘ್ ವಾಘೇಲಾ ಮತ್ತು ಕೇಶುಭಾಯಿ ಪಟೇಲ್ ನಡುವಿನ ಬಣ ಜಗಳದಿಂದ ಜರ್ಝರಿತವಾಗಿದ್ದ ಬಿಜೆಪಿಯನ್ನು 1995 ಮತ್ತು 1998ರ ಚುನಾವಣೆಯಲ್ಲಿ ಎಲೆಮರೆಯ ಕಾಯಿಯಂತೆ ಇದ್ದುಕೊಂಡು ಪಕ್ಷದ ಮರ್ಯಾದೆ ಕಾಪಾಡಿದವರು ಅವರೇ ಆಗಿದ್ದರು. ಮೋದಿಯ ನಿಷ್ಠುರ ಮಾತಿಗೆ ಮರುಮಾತಾಡುವ ಸ್ಥಿತಿಯಲ್ಲಿ ಆಡ್ವಾಣಿಯಾಗಲಿ ಮತ್ತೊಬ್ಬರಾಗಲಿ ಇರಲಿಲ್ಲ. ಮೋದಿಯನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಲಾಯಿತು. ಅದರ ಪರಿಣಾಮವನ್ನು ಈಗ ಎಲ್ಲರೂ ನೋಡುತ್ತಿದ್ದೇವಲ್ಲ. ಮುಖ್ಯಮಂತ್ರಿ ಗಾದಿ ಮೋದಿ ಪಾಲಿಗೆ ಅಕ್ಷರಶಃ ಮುಳ್ಳಿನ ಹಾಸಿಗೆ. ಒಂದೆಡೆ ಕೇಶುಭಾಯಿ ಮತ್ತು ವಾಘೇಲಾ ಬಂಡಾಯದ ಕಾಟ. ಮತ್ತೊಂದೆಡೆ ಭುಜ್ ಭೂಕಂಪದಿಂದ ಜರ್ಝರಿತವಾದ ಗುಜರಾತನ್ನು ಮರುನಿರ್ಮಾಣ ಮಾಡುವ ಸವಾಲು. ಅದು ಸಾಲದ್ದಕ್ಕೆ ಮೋದಿ ಅಧಿಕಾರ ವಹಿಸಿಕೊಂಡ ಕ್ಷಣದಿಂದ 2007ರವರೆಗೆ ಸತತ ಏಳು ವರ್ಷಗಳ ಕಾಲ ರಾಜ್ಯವನ್ನು ಭೀಕರ ಬರಗಾಲ ಕಾಡಿತು. ಬಿಜೆಪಿ ನಾಯಕರ ಜತೆಗೆ ಪ್ರಕೃತಿಯೂ ಮೋದಿ ಸತ್ವಪರೀಕ್ಷೆಗೆ ನಿಂತುಬಿಟ್ಟಿತ್ತು. ಆದರೆ ಗುಜರಾತನ್ನು ವಿಶ್ವದ ನಕಾಶೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ಮೋದಿ ಸಂಕಲ್ಪಕ್ಕೆ ಏನಾದರೂ ಚ್ಯುತಿ ಆಯಿತೇ? ಅದೇನು ಮೋಡಿ ಮಾಡಿದರು ಹಾಗಾದರೆ?

ಗೋಧ್ರೋತ್ತರ ಗಲಭೆ ವಿಚಾರ ಇಟ್ಟುಕೊಂಡು ಮೋದಿಯನ್ನು ಹಣಿಯಲು ಯಾರೆಲ್ಲ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಗುಜರಾತ್ ಹೈಕೋರ್ಟ್, ಸುಪ್ರಿಂಕೋರ್ಟ್ ಮತ್ತು ಅದು ನೇಮಿಸಿದ ವಿಶೇಷ ತನಿಖಾ ತಂಡಗಳೆಲ್ಲವೂ ಮೋದಿಗೆ ಕ್ಲೀನ್‍ಚಿಟ್ ಕೊಟ್ಟವು. ಒಂದಲ್ಲ ಎರಡಲ್ಲ ನಾಲ್ಕು ಬಾರಿ ಮೋದಿ ಪರ ಗುಜರಾತ್ ಜನಾದೇಶ ನೀಡಿತು. ಆದರೂ ಸಹ ಟೀಕಾಕಾರರಿಗೆ ಮಾತ್ರ ಆ ಕುರಿತು ಕಣ್ಣು-ಕಿವಿ ತೆರೆದು ನೋಡುವ, ಕೇಳುವ ಮನಸ್ಸು ಬರಲಿಲ್ಲ. ಅಂದು ಆರಂಭವಾದ ಗೋಧ್ರೋತ್ತರ ಅಸ್ತ್ರವನ್ನೇ ಈ ಚುನಾವಣೆಯವರೆಗೂ ಝಳಪಿಸಲಾಯಿತು. ಗೋಧ್ರೋತ್ತರ ಗಲಭೆ ಕುರಿತು ನೀವೇಕೆ ಮೌನ ವಹಿಸಿದ್ದೀರಿ ಎಂದು ಇತ್ತೀಚೆಗೆ ಟಿವಿ ವಾಹಿನಿಯೊಂದು ಕೇಳಿದಾಗ ಮೋದಿ ನೀಡಿದ ಉತ್ತರ ಬಹಳ ಚೆನ್ನಾಗಿದೆ. “ಯಾವುದರ ಕುರಿತೂ ನಾನು ಮೌನವಹಿಸುವ ಪ್ರಶ್ನೆಯಿಲ್ಲ. ಗುಜರಾತ್ ಗಲಭೆಗೆ ಸಂಬಂಧಿಸಿ 2007ರವರೆಗೂ ನಾನು ದೇಶದ ಎಲ್ಲ ಕಡೆ ಹಾದಿಬೀದಿಯಲ್ಲಿ ನಿಂತು ಕೇಳಿದವರಿಗೂ ಉತ್ತರಿಸಿದ್ದೇನೆ. ಆದರೆ ಯಾರೊಬ್ಬರೂ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಮುದ್ದಾಂ ತಯಾರಿಲ್ಲ ಎಂಬುದು ಗೊತ್ತಾಯಿತು. ಕೆಲವರಿಗೆ ಗೋಧ್ರಾ ವಿಷಯವಿಟ್ಟುಕೊಂಡು ಬೇಳೆ ಬೇಯಿಸಿಕೊಳ್ಳಬೇಕಾಗಿದೆ ಅಷ್ಟೆ, ಇದರ ಹಿಂದೆ ಕಾಣದ ಕೈಯ ಷಡ್ಯಂತ್ರವಿರುವುದು ಖಾತ್ರಿ ಆದ ಮೇಲೆ ಆ ಬಗ್ಗೆ ಮಾತಾಡುವುದನ್ನು ನಿಲ್ಲಿಸಿದ್ದೇನೆ, ನಾನೀಗ ಬೆಂಕಿಯಲ್ಲಿ ಒರೆಹಚ್ಚಿದ ಚಿನ್ನದಂತೆ ಪರಿಶುದ್ಧನಾಗಿ ನಿಮ್ಮೆದುರಿಗೆ ನಿಂತಿದ್ದೇನೆ” ಅಂದರು. ಅಷ್ಟಾದರೂ ಯಾರೆಲ್ಲ ಈಗಲೂ ಏನೇನು ಹೇಳುತ್ತಿದ್ದಾರೆ ಗೊತ್ತಿದೆಯಲ್ಲ? ನರಹರ, ನರಹಂತಕ, ಸಾವಿನ ವ್ಯಾಪಾರಿ, ಮಮತಾ ಬ್ಯಾನರ್ಜಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯನ್ನು ಕತ್ತೆ ಅಂತ ಜರಿದರು. ಪರಿಣಾಮ ಏನಾಯಿತು?

ಇಲ್ಲಷ್ಟೇ ಅಲ್ಲ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಐರೋಪ್ಯ ದೇಶಗಳಲ್ಲೂ ಮೋದಿ ವಿರುದ್ಧ ಕೆಲವರು ಕತ್ತಿ ಮಸೆದರು. ಧಾರ್ಮಿಕ ಸ್ವಾತಂತ್ರೃ ಹರಣ ಮಾಡಿದವರು, ನರಮೇಧ ಮಾಡಿದವರು ಅಂತ ಹುಯಿಲೆಬ್ಬಿಸಿದರು. ಅದರ ಪರಿಣಾಮ ಮೋದಿ ಜತೆ ಯಾವುದೇ ಸಂಬಂಧ ಹೊಂದುವುದಿಲ್ಲ ಎಂದು ಇಂಗ್ಲೆಂಡ್ ಸರ್ಕಾರ ಘೋಷಿಸಿತು. ಅಮೆರಿಕ ಸರ್ಕಾರ ಮೋದಿಗೆ ವೀಸಾ ನೀಡಲು ನಿರಾಕರಿಸಿ ಅಪಮಾನ ಮಾಡಿತು. ಆದರೇನಾಯಿತು, ಗುಜರಾತ್ ಆಕರ್ಷಣೆ, ಮೋದಿ ಮ್ಯಾಜಿಕ್ಕನ್ನು ಯಾರಾದರೂ ತಡೆಯಲಾದೀತೇ? ತನ್ನ ಮಾತನ್ನು ತಾನೇ ನುಂಗಿಕೊಂಡು ಇಂಗ್ಲೆಂಡ್ ಸರ್ಕಾರ 2012ರಲ್ಲಿ ಗುಜರಾತ್ ಸರ್ಕಾರದ ಜತೆ ಉದ್ಯಮ ಸಹಕಾರಕ್ಕೆ ಕೈಚಾಚಿತು. ಅದರ ಬೆನ್ನಲ್ಲೇ ಆಸ್ಟ್ರೇಲಿಯಾ ಮತ್ತು ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಗುಜರಾತ್ ಸರ್ಕಾರದೊಂದಿಗೆ ಔದ್ಯಮಿಕ ಸಂಬಂಧ ವೃದ್ಧಿಗೆ ಮುಂದೆ ಬಂದವು. ಭಾರತೀಯ ಮೂಲದ ಸ್ವಘೋಷಿತ ಬುದ್ಧಿಜೀವಿ ಜೋನ್ ಪ್ರಭುದಾಸನಂಥವರ ಬೊಬ್ಬೆ ಕೇಳಿಕೊಂಡು ಸಾಮಾನ್ಯ ಪ್ರವಾಸಿ ವೀಸಾ ನಿರಾಕರಿಸಿದ ಅಮೆರಿಕ ಈಗ ಮೋದಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುವ ಮಾತನಾಡುತ್ತಿದೆ. ಹತ್ತು ವರ್ಷಗಳ ನಂತರ, ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಪೆÇವೆಲ್ ಮೋದಿ ಭೇಟಿ ಮಾಡಿ ಸ್ನೇಹಹಸ್ತ ಚಾಚಲು ಮುಂದೆ ಬಂದರಲ್ಲವೇ? ಇನ್ನು ಒಬಾಮಾ ಕೂಡ ಕೈಚಾಚುವ ದಿನ ದೂರವಿಲ್ಲ.

ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಡಿಯೋರಾದಲ್ಲಿ ಬಿಜೆಪಿ ಹಿರಿಯ ನಾಯಕ ಕಲ್‍ರಾಜ್ ಮಿಶ್ರಾ ಪರ ಪ್ರಚಾರ ರ್ಯಾಲಿಯಲ್ಲಿ ಭಾಷಣ ಮಾಡುತ್ತ ಮೋದಿ ಒಂದು ಘಟನೆ ನೆನೆಸಿಕೊಂಡು ಭಾವುಕರಾದರು. “1975ರಲ್ಲಿ ಕಲ್‍ರಾಜ್ ಮಿಶ್ರಾ ಪಕ್ಷದ ಪ್ರಚಾರಕ್ಕಾಗಿ ಗುಜರಾತಿಗೆ ಬಂದಿದ್ದರು. ಆಗ ನಾನೊಬ್ಬ ಚಹಾ ಕೊಡುವ ಹುಡುಗ. ಮಿಶ್ರಾಗೆ ನಾನು ಚಹಾ ಕೊಟ್ಟು ಸೇವೆ ಮಾಡಿದ್ದೆ. ಇಂದು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಅದೇ ಕಲ್‍ರಾಜ್‍ಜಿ ಪರ ಪ್ರಚಾರಕ್ಕೆ ಬಂದಿದ್ದೇನೆ” ಎಂದ ಮೋದಿ ಒಂದುಕ್ಷಣ ಮೌನವಾದರು. ಪರಿವರ್ತನೆ, ಸಾಮಾಜಿಕ ನ್ಯಾಯ, ಜನಸಾಮಾನ್ಯನ ಕೈಗೆ ಅಧಿಕಾರ ಎಂಬೆಲ್ಲ ಹೇಳಿಕೆಗಳಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ?

ವಾರಾಣಸಿಯಲ್ಲಿ ಕೇಜ್ರಿವಾಲ್ ನಿಮ್ಮನ್ನು ಸೋಲಿಸಲು ಪಣತೊಟ್ಟಿದ್ದಾರಲ್ಲ ಅಂತ ಮಾಧ್ಯಮದವರು ಕೇಳಿದ್ದಕ್ಕೆ ಮೋದಿ ಥಟ್ಟಂತ ಕೊಟ್ಟ ಉತ್ತರ ಬಹಳ ಚೆನ್ನಾಗಿತ್ತು. “ಒಂದು ವಿಷಯ ತಿಳಿದುಕೊಳ್ಳಿ, ನಾನಿಲ್ಲಿ ಯಾರನ್ನೋ ಸೋಲಿಸಲು ಬಂದಿಲ್ಲ, ವಾರಾಣಸಿ ಜನರ ಹೃದಯ ಗೆಲ್ಲಲು, ಆ ಮೂಲಕ ಇಡೀ ದೇಶದ ಜನರ ಮನಗೆಲ್ಲಲು ಬಂದಿದ್ದೇನೆ” ಅಂದರು. ಒಂದು ಸಂಗತಿಯನ್ನು ಮುಖ್ಯವಾಗಿ ಗಮನಿಸಬೇಕು. ಯಾರು ಎಷ್ಟೇ ಜರಿಯಲಿ, ಕೆಣಕಲಿ, ಕೀಟಲೆ ಮಾಡಲಿ ಮೋದಿ ಒಮ್ಮೆಯೂ ಕೂಡ ನಾಲಗೆ ತಪ್ಪಿ, ತೂಕತಪ್ಪಿ ಮಾತನಾಡಲಿಲ್ಲ. ಉತ್ತರ ಕೊಡಬೇಕಾದವರಿಗೆ ಉತ್ತರ ಕೊಟ್ಟರು. ಅಲಕ್ಷಿಸಬೇಕಾದವರನ್ನು ಬುದ್ಧಿಪೂರ್ವಕವಾಗಿ ಅಲಕ್ಷಿಸಿದರು. ಬಹುಶಃ ಈ ವಿಷಯದಲ್ಲಿ ಕೇಜ್ರಿವಾಲ್ ಹತಾಶೆ ಅನುಭವಿಸುತ್ತಿರಬೇಕು. `ಚಹಾ ಮಾರುವ ಹುಡುಗ ದೇಶ ಆಳುವುದು ಅಸಾಧ್ಯ’ ಎಂದು ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ಹೇಳಿದ್ದೇ ತಡ, ದೇಶದ ನಾಲ್ಕು ಸಾವಿರ ಊರು, ಪಟ್ಟಣಗಳಲ್ಲಿ ಚಾಯ್‍ಪೇ ಚರ್ಚಾ ಕಾರ್ಯಕ್ರಮ ಹಮ್ಮಿಕೊಂಡು ಐವತ್ತು ಲಕ್ಷ ಜನರನ್ನು ಮೋದಿ ತಲುಪಿದರು. ಇದು ಮೋದಿ ಸವಾಲನ್ನು ಸ್ವೀಕರಿಸುವ ಸ್ಟೈಲು.

ಮೋದಿ ರಾಷ್ಟ್ರರಾಜಕಾರಣದ ಮಹಾದ್ವಾರಕ್ಕೆ ಬಂದು ತಲುಪಿದ್ದು ಹೋದ ವರ್ಷದ ಸೆಪ್ಟೆಂಬರ್ 13ರಂದು. ಅಂದಿನಿಂದ ಇಲ್ಲಿಯವರೆಗೆ ಮೋದಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ದೇಶದ ಇಂಚಿಂಚು ನೆಲವನ್ನೂ ಸುತ್ತಿದರು. ಅವರ ಬಾಯಿಗೆ ವಿಶ್ರಾಂತಿ ಅಂತ ಸಿಕ್ಕಿದ್ದು ಮೊನ್ನೆ ಮೇ 10ರ ಸಂಜೆ ಐದು ಗಂಟೆಗೆ. ಪರಿಸ್ಥಿತಿ ಹೇಗಾಯಿತು ಅಂದರೆ ಈ ಹಿಂದೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದ ನಾಯಕರೂ, “ಮೋದಿಯನ್ನು ಪ್ರಧಾನಿ ಮಾಡಲು ನನಗೊಂದು ವೋಟು ಕೊಡಿ” ಅಂತ ಕೇಳಬೇಕಾಗಿ ಬಂತು. ಇದಕ್ಕೆ ಮೋದಿಯ ಆಕ್ರಮಣಕಾರಿ ಪ್ರವೃತ್ತಿ ಕಾರಣ ಎನ್ನಬೇಕೇ ಅಥವಾ ಬಿಜೆಪಿ ಸಂಘಟನೆ ಅಭಾವ, ಸ್ಥಳೀಯ ನಾಯಕರ ಶಕ್ತಿ ಸಾಮಥ್ರ್ಯದ ಅಭಾವ ಕಾರಣ ಅನ್ನಬೇಕೋ? ತನಗೆ ಮಾತ್ರ ಜೈಕಾರ ಹಾಕಿ ಅಂತ ಮೋದಿ ಏನಾದರೂ ಜನತೆಗೆ ಕೇಳಿಕೊಂಡಿದ್ದರೇ? ಪಕ್ಷದಲ್ಲಿ ತಾವು ಮೂಲೆಗುಂಪಾದೆವು ಎಂದು ಕೊರಗುವವರು ಈ ಪ್ರಶ್ನೆಗಳನ್ನು ಕೇಳಿಕೊಂಡರೆ ಒಳಿತಲ್ಲವೇ?

ಅದಕ್ಕೇ ಹೇಳುವುದು, ಮೋದಿಗೆ ಇಲ್ಲಿಯವರೆಗಿನದ್ದು ಸವಾಲಲ್ಲ, ಇನ್ನು ಮುಂದಿನದ್ದು. ವಿಘ್ನಸಂತೋಷಿಗಳನ್ನು ಸಂತೈಸುವುದಿದೆಯಲ್ಲ ಅದು ನಿಜವಾದ ಸವಾಲು. ಪಕ್ಷ, ಕಾಲೆಳೆಯುವ ನಾಯಕತ್ವವನ್ನೆಲ್ಲ ಮೀರಿ ನಿಂತು ದೇಶ ಮುನ್ನಡೆಸುವುದಿದೆಯಲ್ಲ ಅದು ದೊಡ್ಡ ಸವಾಲು. ದೇಶದ ಜನರಿಗೆ ಸ್ಪಷ್ಟವಾಗಿ ಗೊತ್ತಿತ್ತು, ನಮಗೆ ಬೇಕಿರುವುದು ಮುಖವಾಡ ಹಾಕಿದ, ಅಳುಬುರುಕ ನಾಯಕತ್ವ ಅಲ್ಲ, ಬಕೀಟು ಹಿಡಿಯುವವರಿಗೆ, ಒಡ್ಡೋಲಗದವರಿಗೆ ಮಣೆ ಹಾಕುವ ನಾಯಕತ್ವ ಅಲ್ಲ, ಬದಲಾಗಿ ದೂರದೃಷ್ಟಿ-ಚಿಂತನೆ ಜತೆಗೆ, ಸಂಕಲ್ಪಶಕ್ತಿ ಹೊಂದಿರುವ ಸಮರ್ಪಣಾ ಮನೋಭಾವದ, ಲವಲೇಶದಷ್ಟೂ ಕೌಟುಂಬಿಕ ಸ್ವಾರ್ಥದ ಯೋಚನೆ ಮಾಡದ, ಎಲ್ಲಕ್ಕಿಂತ ಮುಖ್ಯವಾಗಿ ಶುದ್ಧ ಹಸ್ತದ, ಸಮರ್ಥ ನಾಯಕತ್ವ ಬೇಕು ಅಂತ. ಬಹುಶಃ ಅದೆಲ್ಲವನ್ನೂ ಈ ದೇಶದ ಜನ ಮೋದಿಯವರಲ್ಲಿ ಕಂಡುಕೊಂಡರು ಅಂತ ತೋರುತ್ತದೆ. ಅದಕ್ಕಾಗಿ ಯಾರು ಏನೇ ಹೇಳಿದರೂ ಅದನ್ನು ಕೇಳಿಸಿಕೊಳ್ಳಲು ಜನರು ತಯಾರಿರಲಿಲ್ಲ. ಈಗ ಹೇಳಿ, ನಿಜವಾದ ಬುದ್ಧಿಜೀವಿಗಳು ಯಾರು? ತಮಗೆ ತಾವೇ ಹಣೆಪಟ್ಟಿ ಅಂಟಿಸಿಕೊಂಡವರೋ ಅಥವಾ ಸ್ಥಿರ ಸರ್ಕಾರಕ್ಕೆ ಮುನ್ನುಡಿ ಬರೆದ ಕೋಟಿ ಕೋಟಿ ಪ್ರಬುದ್ಧ ಮತದಾರರೋ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top