ವಲಸೆ ಕಾರ್ಮಿಕರ ತಲ್ಲಣ – ಇನ್ನಷ್ಟು ವ್ಯವಸ್ಥಿತ ಪ್ರಯಾಣ ಬೇಕಿತ್ತು

ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಭಾನುವಾರ ಒಂದೇ ದಿನ ಸುಮಾರು 12 ಸಾವಿರ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದು, ಮುಂದಿನ ಕೆಲ ದಿನಗಳಲ್ಲಿ ಒಂದು ಲಕ್ಷದಷ್ಟು ಮಂದಿ ಊರು ಬಿಡಬಹುದು ಎಂಬ ಅಂದಾಜಿದೆ. ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಕಾರ್ಮಿಕರು ತಮ್ಮ ಹೆಂಡತಿ, ಮಕ್ಕಳೊಂದಿಗೆ ಬಂದು ಕೂತಿದ್ದಾರೆ. ಇವರನ್ನು ಯಾವುದೇ ಗೊಂದಲ, ಗದ್ದಲಗಳಿಲ್ಲದೆ ಊರಿಗೆ ಕಳುಹಿಸಲು ಸರಕಾರ ಹರಸಾಹಸ ಪಡುತ್ತಿದೆ. ಹಲವು ಸಂಸ್ಥೆಗಳು ಇವರಿಗೆ ಉಚಿತ ಊಟ ಮತ್ತು ನೀರು ನೀಡುತ್ತಿರುವುದರಿಂದ ಕನಿಷ್ಠ ಹಸಿದು ಪ್ರಾಣ ಬಿಡುವುದು ತಪ್ಪಿದೆ. ‘ಊರಲ್ಲಿ ನೌಕರಿ ಇಲ್ಲದಿದ್ರೂ ಹೊಟ್ಟೆಪಾಡು ಹೇಗೋ ನಡೆದೀತು’ ಎಂಬ ಭಾವನೆಯೇ ಎಲ್ಲರಲ್ಲಿ ಪ್ರಧಾನವಾಗಿದೆ.
ಆರಂಭದಲ್ಲಿ ಕಾರ್ಮಿಕರಿಗೆ ಸರಕಾರ ದುಪ್ಪಟ್ಟು ಪ್ರಯಾಣ ದರ ವಿಧಿಸಿತ್ತು. ದುಡಿಮೆಯಿಲ್ಲದೆ, ಇರಲು ನೆಲೆಯಿಲ್ಲದೆ ಇಲ್ಲಿಂದ ಪಾರಾದರೆ ಸಾಕೆಂದು ಹೊರಟಿರುವ ಬಡವರಿಂದ ದುಪ್ಪಟ್ಟು ಟಿಕೆಟ್‌ ಶುಲ್ಕ ವಸೂಲಿ ಮಾಡಲು ಹೊರಟ ಸರಕಾರದ ಕ್ರಮ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್‌ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಬಳಸಿಕೊಳ್ಳಲು ಒಂದು ಕೋಟಿಯ ಚೆಕ್‌ ನೀಡಿದ ಬಳಿಕ ಎಚ್ಚೆತ್ತುಕೊಂಡ ಸರಕಾರ ಮೂರು ದಿನ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದೆ. ಒಡಿಶಾ, ಬಿಹಾರ, ಜಾರ್ಖಂಡ್‌ಗಳಿಂದ ಸರಕಾರ ಕರೆತಂದಿದ್ದ ಕಾರ್ಮಿಕರನ್ನು ವಾಪಸ್‌ ಕಳಿಸಲು ಉಚಿತ ರೈಲಿನ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರು ಮಾತ್ರ ಕೇವಲ 30 ಮಂದಿ ಪ್ರಯಾಣಿಸಬಹುದಾದ ಬಸ್ಸುಗಳಲ್ಲಿ ತಮ್ಮೂರಿಗೆ ಹೋಗಲು ಬಿಸಿಲಿನಲ್ಲಿ ಸಂಸಾರ ಹಾಗೂ ಗಂಟುಮೂಟೆಗಳ ಸಮೇತ ಕಾಯಬೇಕಾಗಿದೆ.
ಯಾವ ರೀತಿಯಿಂದ ನೋಡಿದರೂ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಸಕಾಲಿಕವಾಗಿ ಬರುತ್ತಿವೆ ಎನಿಸುತ್ತಿಲ್ಲ. ದುಡಿಮೆ, ಆಹಾರವಿಲ್ಲದವರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಬೇಕಾಗಿದ್ದ ಸರಕಾರ ಅದನ್ನು ಮಾಡಲಿಲ್ಲ. ಹೀಗೆ ಕಾರ್ಮಿಕರನ್ನು ವಾಪಸ್‌ ಕಳಿಸಲು ನಲುವತ್ತು ದಿನಗಳ ಕಾಲ ಅವರನ್ನು ರಾಜಧಾನಿಯಲ್ಲಿ ಎಲ್ಲೆಲ್ಲೋ ಕೊಳೆ ಹಾಕಬೇಕಾಗಿರಲಿಲ್ಲ. ತವರಿಗೆ ಮರಳುತ್ತಿರುವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರು. ಸೋಮವಾರದಿಂದ ಕೆಲಸ, ಮಾಲೀಕರಿಂದ ಬಾಕಿ ವೇತನ ಪಾವತಿ, ಆಹಾರ ಸಾಮಗ್ರಿ ನೀಡುವುದಾಗಿ ಸರಕಾರ ನೀಡಿದ ಭರವಸೆಗೆ ಇವರು ಮನಸೋತಿಲ್ಲ. ಒಟ್ಟಾರೆ ವ್ಯವಸ್ಥೆಯ ಮೇಲೆಯೇ ಇವರಿಗೆ ನಂಬಿಕೆ ಹೊರಟುಹೋದಂತಿದೆ. ಕೆಲಸದ ಗ್ಯಾರಂಟಿ ಇಲ್ಲದೆ ಹೋದಾಗ ಇಂಥ ಮಾತುಗಳು ಇಲ್ಲೇ ಇದ್ದು ಸಾಯಿರಿ ಎಂದು ಹೇಳಿದಂತೆ ಕೇಳಿಸಬಹುದು.
ಇಷ್ಟೊಂದು ಮಂದಿ ಒಂದೇ ಸಲ ಊರಿಗೆ ಧಾವಿಸಬಹುದು ಎಂಬ ನಿರೀಕ್ಷೆ ಗುಪ್ತಚರ ಇಲಾಖೆಯನ್ನು ಹೊಂದಿರುವ ಸರಕಾರಕ್ಕೆ ಇರಲಿಲ್ಲವೇ? ಇಂಥ ಸನ್ನಿವೇಶದಲ್ಲಿ ಅದು ಕ್ರಿಯಾಶೀಲವಾಗದೆ ಇದ್ದರೆ ಇನ್ನು ಯಾವಾಗ? ಅದೃಷ್ಟವಶಾತ್‌, ಕಾರ್ಮಿಕರು ತಮ್ಮ ಹಸಿವು ಅಸಹಾಯಕತೆಗಳನ್ನು ರಟ್ಟೆಗೆ ತಂದುಕೊಳ್ಳದೆ ಸಂಯಮ ಕಾಪಾಡಿದ್ದಾರೆ. ಇಂಥ ಹೊತ್ತಿನಲ್ಲಿ ಕಾಲ್ತುಳಿತವೂ ಆಗಬಹುದಿತ್ತು. ಇಷ್ಟೊಂದು ಜನ ಸೇರಿದಾಗ ಅದು ಸೋಂಕು ಹರಡುವ ತಾಣವೂ ಆಗಬಹುದು. ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ವಿಭಾಗ ಬಸ್‌ ನಿಲ್ದಾಣಗಳಿವೆ. ಆಯಾ ಜಿಲ್ಲೆಗಳ ಕಾರ್ಮಿಕರಿಗೆ ಅಲ್ಲಲ್ಲಿಂದಲೇ ಬಸ್‌ ವ್ಯವಸ್ಥೆಯನ್ನು ವಿಕೇಂದ್ರೀಕರಿಸಬಹುದಿತ್ತು. ಆರೋಗ್ಯ ಪರಿಶೀಲನೆಯನ್ನು ಇನ್ನೊಂದಿಷ್ಟು ಬಿಗಿಗೊಳಿಸಬಹುದಿತ್ತು. ಸಂಬಂಧಪಟ್ಟ ಇಲಾಖೆಗಳ ಸಚಿವರು ಮೊದಲೇ ಸ್ಥಳಕ್ಕೆ ಭೇಟಿ ನೀಡಿ ಜನರ ಸಂಕಟ ಅರಿಯಬೇಕಿತ್ತು.
ಇಷ್ಟೊಂದು ಸಂಖ್ಯೆಯಲ್ಲಿ ಊರಿಗೆ ಮರಳುವ ಕಾರ್ಮಿಕರ ಮರುವಲಸೆಯಿಂದಾಗಿ ಊರುಗಳಲ್ಲಿ ಏನಾಗಲಿದೆ, ಬೆಂಗಳೂರಿನ ನಿರ್ಮಾಣ ಹಾಗೂ ಉತ್ಪಾದಕ ಚಟುವಟಿಕೆಗಳಿಗೆ ಮುಂದಿನ ದಿನಗಳಲ್ಲಿ ಏನು ಸಂಭವಿಸಲಿದೆ ಎಂಬುದನ್ನು ಕೂಡ ಯಾರೂ ಊಹಿಸಿದಂತಿಲ್ಲ. ಊರಿಗೆ ಮರಳುತ್ತಿರುವವರಲ್ಲಿ ಸೋಂಕಿನ ಭಯವಿಲ್ಲ; ಹಸಿವಿನ ತಲ್ಲಣ ಮಾತ್ರ ಇದೆ ಎಂಬ ಸೂಕ್ಷ್ಮವನ್ನು ನಮ್ಮ ಆಡಳಿತ ವ್ಯವಸ್ಥೆ ಅರ್ಥ ಮಾಡಿಕೊಳ್ಳಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top