ನೆಹರೂ ಕುಟುಂಬಕ್ಕೆ ಮತ್ತೆ ತನಿಖೆಯ ಸಂಕಟ

ನೆಹರೂ ಕುಟುಂಬದ ಒಡೆತನದಲ್ಲಿರುವ ಮೂರು ಟ್ರಸ್ಟ್‌ಗಳ ಹಣಕಾಸಿನ ವ್ಯವಹಾರದ ಬಗೆಗೆ ತನಿಖೆ ನಡೆಸಲು ಗೃಹ ಇಲಾಖೆ ನಿರ್ದೇಶನ ನೀಡಿದೆ. ಯಾವುವೀ ಟ್ರಸ್ಟ್‌ಗಳು? ಇದರ ಹಿನ್ನೆಲೆಯೇನು?

ಯಾರ ತನಿಖೆ?
ನೆಹರೂ ಕುಟುಂಬದ ಒಡೆತನದಲ್ಲಿರುವ ಮೂರು ಟ್ರಸ್ಟ್‌ಗಳ ಹಣದ ವ್ಯವಹಾರ- ಅವ್ಯವಹಾರದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್‌-ಸಚಿವಾಲಯ ಸಮಿತಿಯನ್ನು ರಚಿಸಿದೆ. ಹವಾಲಾ ವ್ಯವಹಾರ ತಡೆ ತಡೆ ಕಾಯಿದೆ (ಪಿಎಂಎಲ್‌ಎ), ಆದಾಯ ತೆರಿಗೆ ಕಾಯಿದೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ)ಗಳ ಅಡಿಯಲ್ಲಿ ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ತನಿಖೆಯ ನೇತೃತ್ವ ವಹಿಸಲಿದ್ದಾರೆ. ಗೃಹ ಸಚಿವಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಗಳು ಸಮಿತಿಯಲ್ಲಿದ್ದಾರೆ.

ಟ್ರಸ್ಟ್‌ಗಳು ಯಾವುವು?
ಮೂರು ಟ್ರಸ್ಟ್‌ಗಳು- ರಾಜೀವ್‌ ಗಾಂಧಿ ಫೌಂಡೇಶನ್‌ (ಆರ್‌ಜಿಎಫ್‌), ರಾಜೀವ್‌ ಗಾಂಧಿ ಚಾರಿಟೇಬಲ್‌ ಟ್ರಸ್ಟ್‌ (ಆರ್‌ಜಿಸಿಟಿ) ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್‌ ಟ್ರಸ್ಟ್‌ (ಐಜಿಎಂಟಿ). ಆರ್‌ಜಿಎಫ್‌ ಹಾಗೂ ಆರ್‌ಜಿಸಿಟಿಗೆ ಸೋನಿಯಾ ಗಾಂಧಿ ಅಧ್ಯಕ್ಷರು. ಇವೆರಡೂ ಸಂಘಟನೆಗಳಿಗೆ ರಾಹುಲ್‌ ಗಾಂಧಿ ಟ್ರಸ್ಟಿ.

ಪಿಎಂ ನಿಧಿಯಿಂದ ವರ್ಗಾವಣೆ
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇತ್ತೀಚೆಗೆ ತಮ್ಮ ಟ್ವಿಟ್ಟರ್‌ನಲ್ಲಿ ಈ ಮೂರೂ ಟ್ರಸ್ಟ್‌ಗಳ ಹಣದ ವ್ಯವಹಾರ ಕಾಯಿದೆಯ ನಿಯಮಗಳನ್ನು ಮೀರಿದೆ ಎಂದು ಟ್ವೀಟ್‌ ಮಾಡಿದ್ದರು. ಯುಪಿಎ ಅಧಿಕಾರಾವಧಿಯಲ್ಲಿ (2007-08), ಪ್ರಧಾನ ಮಂತ್ರಿ ರಾಷ್ಟ್ರೀಯ ಹಣಕಾಸು ನಿಧಿಗೆ ಬಂದ ಹಣವನ್ನು ಆರ್‌ಜಿಎಫ್‌ಗೆ ವರ್ಗಾಯಿಸಲಾಗಿದೆ ಎಂದು ದೂರಿದ್ದರು. ‘‘ಆಗ ಪ್ರಧಾನ ಮಂತ್ರಿ ಹಣಕಾಸು ನಿಧಿಯನ್ನೂ ಸೋನಿಯಾ ಅವರೇ ನೋಡಿಕೊಳ್ಳುತ್ತಿದ್ದರು. ಆರ್‌ಜಿಎಫ್‌ಗೂ ಸೋನಿಯಾರೇ ಅಧ್ಯಕ್ಷರಾಗಿದ್ದರು. ಇದೊಂದು ನೈತಿಕತೆಯಿಲ್ಲದ, ಪಾರದರ್ಶಕತೆಯಿಲ್ಲದ ನಡೆ,’’ ಎಂದು ನಡ್ಡಾ ಟೀಕಿಸಿದ್ದರು. ‘‘ದೇಶದ ಜನತೆ ದುಡಿದು ಗಳಿಸಿದ ಹಣವನ್ನು ನಿರಾಶ್ರಿತರಿಗೆ ಕೊಡಲೆಂದು ಪಿಎಂ ನಿಧಿಗೆ ನೀಡಿದ್ದರೆ, ಅದನ್ನು ಕುಟುಂಬದ ಟ್ರಸ್ಟ್‌ಗೆ ಕೊಟ್ಟುಕೊಂಡಿರುವುದು ವಂಚನೆ,’’ ಎಂದು ಟೀಕಿಸಿದ್ದರು.

ಚೀನಾದಿಂದಲೂ ದೇಣಿಗೆ
ಕೇಂದ್ರ ಟೆಲಿಕಾಂ ಸಚಿವ ರವಿಶಂಕರ ಪ್ರಸಾದ್‌ ಅವರು, ತಮ್ಮ ಟ್ವೀಟ್‌ನಲ್ಲಿ, ಆರ್‌ಜಿಎಫ್‌ಗೆ ಚೀನಾದ ಹಣಕಾಸು ಬಂದಿರುವುದರ ಕುರಿತು ಬೆಳಕು ಚೆಲ್ಲಿದ್ದರು. ‘‘2005-06ರ ಅವಧಿಯಲ್ಲಿ, ಚೀನಾದ ರಾಯಭಾರ ಕಚೇರಿಯು ರಾಜೀವ್‌ ಗಾಂಧಿ ಫೌಂಡೇಶನ್‌ಗೆ ಹಣ ನೀಡಿತ್ತು. ಈ ದೇಣಿಗೆ ಯಾಕೆ ಪಡೆಯಲಾಯಿತು ಎಂಬುದು ದೇಶಕ್ಕೆ ಗೊತ್ತಾಗಬೇಕು,’’ ಎಂದಿದ್ದರು.

ಚಿದಂಬರಂ ಸಮರ್ಥನೆ
ನಡ್ಡಾ ಹಾಗೂ ರವಿಶಂಕರ ಪ್ರಸಾದ್‌ ಅವರ ಆರೋಪಗಳಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರು ಟ್ವೀಟ್‌ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ‘‘ಪಿಎಂ ಹಣಕಾಸು ನಿಧಿಯಿಂದ ಆರ್‌ಜಿಎಫ್‌ಗೆ ಪಡೆಯಲಾದ 20 ಲಕ್ಷ ರೂಪಾಯಿ ಹಣವನ್ನು 2005ರ ಸುನಾಮಿ ಪರಿಹಾರ ಕಾರ್ಯಗಳಲ್ಲಿ ಅಂಡಮಾನ್‌ ಹಾಗೂ ನಿಕೋಬಾರ್‌ ದ್ವೀಪದಲ್ಲಿ ಪೂರ್ತಿ ವೆಚ್ಚ ಮಾಡಲಾಗಿದೆ ಎಂಬುದನ್ನು ಬಿಜೆಪಿ ಯಾಕೆ ಅಡಗಿಸಿಡುತ್ತಿದೆ?’’ ಎಂದು ಪ್ರಶ್ನಿಸಿದ್ದಾರೆ. ‘‘15 ವರ್ಷಗಳ ಹಿಂದೆ ಚೀನಾ ರಾಯಭಾರ ಕಚೇರಿಯಿಂದ ಆರ್‌ಜಿಎಫ್‌ ಪಡೆದ ಹಣಕ್ಕೂ 2020ರಲ್ಲಿ ಮೋದಿ ಸರಕಾರದ ಅವಧಿಯಲ್ಲಿ ಚೀನಾ ಮಾಡಿದ ಆಕ್ರಮಣಕ್ಕೂ ಸಂಬಂಧವೇನು? ಒಂದು ವೇಳೆ ಚೀನಾದಿಂದ ಪಡೆದ ಹಣವನ್ನು ಟ್ರಸ್ಟ್‌ ಹಿಂದಿರುಗಿಸಿದರೆ, ಚೀನಾದಿಂದ ಆಕ್ರಮಣಕ್ಕೊಳಗಾದ ಪ್ರಾಂತ್ಯಗಳು ಮುಕ್ತವಾಗುತ್ತವೆ ಎಂದು ಪ್ರಧಾನಿ ಭರವಸೆ ಕೊಡುವರೇ?’’ ಎಂದು ಪ್ರಶ್ನಿಸಿದ್ದಾರೆ.

ಬೆಳಕಿಗೆ ಬಂದದ್ದು ಹೇಗೆ?
ಈ ಟ್ರಸ್ಟ್‌ಗಳ ಹಣದ ವ್ಯವಹಾರದ ಬಗ್ಗೆ ಮೊದಲ ಸುಳಿವು ಸಿಕ್ಕಿದ್ದು ಗೃಹ ಸಚಿವಾಲಯ ನಡೆಸಿದ ತನಿಖೆಯೊಂದರಿಂದ. ಮುಸ್ಲಿಂ ಮೂಲಭೂತವಾದಿ ನಾಯಕ ಝಕೀರ್‌ ನಾಯಕ್‌ನ ಭಯೋತ್ಪಾದನೆ ಚಟುವಟಿಕೆ ಹಾಗೂ ವಿದೇಶಿ ಹಣದ ಅವ್ಯವಹಾರಗಳ ಬಗ್ಗೆ ದೇಶದ ಉನ್ನತ ತನಿಖಾ ಸಂಸ್ಥೆಗಳು ತನಿಖೆ ನಡೆಸಲು ಆರಂಭಿಸಿದಾಗ, ಆತನ ಎನ್‌ಜಿಒ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಶನ್‌, 2011ರಲ್ಲಿ ರಾಜೀವ್‌ ಗಾಂಧಿ ಫೌಂಡೇಶನ್‌ಗೆ 50 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದುದು ಕಂಡುಬಂದಿತ್ತು. ತನಿಖೆ ಆರಂಭವಾದಾಗ ಆರ್‌ಜಿಎಫ್‌ ಅಷ್ಟೂ ಹಣವನ್ನು ಆ ಎನ್‌ಜಿಒಗೆ ವಾಪಸ್‌ ನೀಡಿತ್ತು.

ರಾಜೀವ್‌ ಗಾಂಧಿ ಫೌಂಡೇಶನ್‌
ಇದನ್ನು 1991ರ ಜೂನ್‌ 21ರಂದು ಸ್ಥಾಪಿಸಲಾಯಿತು. 1991ರಿಂದ 2009ರವರೆಗೆ ಆರೋಗ್ಯ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರಿಗೆ ಸಹಾಯ, ಪಂಚಾಯ್‌ರಾಜ್‌, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಲೈಬ್ರರಿ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿತು. ನಂತರ ಶಿಕ್ಷಣವನ್ನು ಕೇಂದ್ರೀಕರಿಸಿತು. ಸೋನಿಯಾ ಗಾಂಧಿ ಇದರ ಅಧ್ಯಕ್ಷರು. ಮನಮೋಹನ್‌ ಸಿಂಗ್‌, ಚಿದಂಬರಂ, ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯಾ, ರಾಹುಲ್‌ ಗಾಂಧಿ, ಸುಮನ್‌ ದುಬೆ, ಅಶೋಕ್‌ ಗಂಗೂಲಿ, ಪ್ರಿಯಾಂಕ ವಾದ್ರಾ ಇದರ ಟ್ರಸ್ಟಿಗಳು.

ರಾಜೀವ್‌ ಗಾಂಧಿ ಚಾರಿಟೇಬಲ್‌ ಟ್ರಸ್ಟ್‌
ಇದೊಂದು ಲಾಭರಹಿತ ಸಂಸ್ಥೆ. 2002ರಲ್ಲಿ ಸ್ಥಾಪನೆಯಾಗಿತ್ತು. ದೇಶದ ದುರ್ಬಲರ ಕಲ್ಯಾಣ, ಗ್ರಾಮೀಣ ಬಡಜನತೆಯ ಸೇವೆಗಾಗಿ ಸ್ಥಾಪನೆಯಾಗಿದೆ. ಸದ್ಯ ಉತ್ತರ ಪ್ರದೇಶ ಹಾಗೂ ಹರಿಯಾಣಗಳ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶಗಳ 42 ಜಿಲ್ಲೆಗಳಲ್ಲಿ ಎರಡು ಬೃಹತ್‌ ಸೇವಾ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿವೆ- ರಾಜೀವ್‌ ಗಾಂಧಿ ಮಹಿಳಾ ವಿಕಾಸ್‌ ಪರಿಯೋಜನಾ ಮತ್ತು ಇಂದಿರಾ ಗಾಂಧಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ.

ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್‌
2001ರಲ್ಲಿ ಇದು ಕೆಲಸ ಆರಂಭಿಸಿತು. ಮೊದಲು ಕಲಾ ಮತ್ತು ವಿಜ್ಞಾನ ಕೇಂದ್ರದ ಮೂಲಕ ಕೆಲಸ ಆರಂಭಿಸಿ, ನಂತರ ದಂತವಿಜ್ಞಾನ ಕಾಲೇಜು, ಇಂಜಿನಿಯರಿಂಗ್‌ ಕಾಲೇಜು, ಪ್ಯಾರಾಮೆಡಿಕಲ್‌ ಕಾಲೇಜು, ಫಾರ್ಮಸಿ ಕಾಲೇಜು, ಪಾಲಿಟೆಕ್ನಿಕ್‌ಗಳನ್ನು ಸ್ಥಾಪಿಸಿದೆ. ಸಾಮಾಜಿಕ ಮತ್ತು ರಾಜಕೀಯ ನೇತಾರ ಕೆ.ಎಂ.ಪರೀತ್‌ ಅವರು ಇದರ ಅಧ್ಯಕ್ಷರಾಗಿದ್ದಾರೆ. ಐಜಿಎಂಟಿಗೆ ಸೋನಿಯಾ ಗಾಂಧಿ ಮೇಲ್ವಿಚಾರಕರಾಗಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ವಿವಾದ
ನೆಹರೂ ಕುಟುಂಬದ ಒಡೆತನದಲ್ಲಿರುವ ಯಂಗ್‌ ಇಂಡಿಯನ್‌ ಟ್ರಸ್ಟ್‌ನಿಂದ ಈಗ ನಡೆಸಲ್ಪಡುತ್ತಿರುವ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆಯ ವಹಿವಾಟಿನಲ್ಲಿ ಭಾರಿ ವಂಚನೆ ನಡೆದಿದೆ ಎಂದು ರಾಜಕೀಯ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಒಂದು ಕೇಸು ದಾಖಲಿಸಿದ್ದು, ಅದು ಕೋರ್ಟ್‌ನಲ್ಲಿದೆ. ಕಾಂಗ್ರೆಸ್‌ ಪಕ್ಷ ಈ ಪತ್ರಿಕೆಗೆ 90 ಕೋಟಿ ರೂ.ಗಳಷ್ಟು ಸಾಲ ನೀಡಿದ್ದು, ಪಾವತಿಯ ಬಗ್ಗೆ ಯಾವುದೇ ವಹಿವಾಟು ಆಗಿಲ್ಲ. ಹೀಗಾಗಿ ಇದು ತೆರಿಗೆ ವಂಚನೆ. ಇದರ ಜೊತೆಗೆ, ಸುಮಾರು 5000 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಕೇವಲ 50 ಲಕ್ಷ ರೂ.ಗೆ ಖರೀದಿ ಮಾಡಿದಂತೆ ತೋರಿಸಿ ವಂಚಿಸಲಾಗಿದೆ ಎಂದು ಆರೋಪ. ಇದೂ ತನಿಖೆಯಲ್ಲಿದೆ.

ಅಳಿಯನ ಹಗರಣ
ಹಲವಾರು ಹಣದ ವಹಿವಾಟು ಹಾಗು ಹವಾಲಾ ಪ್ರಕರಣಗಳಲ್ಲಿ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕ ವಾದ್ರಾ ಅವರ ಪತಿ ರಾಬರ್ಟ್‌ ವಾದ್ರಾ ಅವರ ತನಿಖೆ ಜಾರಿ ನಿರ್ದೇಶನಾಲಯದಲ್ಲಿ ನಡೆಯುತ್ತಿದೆ. ಲಂಡನ್‌ನಲ್ಲಿರುವ ಸುಮಾರು 110 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯ ಹಣದ ವಹಿವಾಟು, ಬಿಕಾನೇರ್‌ನಲ್ಲಿ ಕೋಟಿಗಟ್ಟಲೆ ಮೌಲ್ಯದ ಭೂಮಿಯನ್ನು ಚಿಲ್ಲರೆ ಮೌಲ್ಯಕ್ಕೆ ಖರೀದಿಸಿದ ಪ್ರಕರಣ, 2009ರಲ್ಲಿ ಯುಪಿಎ ಸರಕಾರ ಮಾಡಿಕೊಂಡ ಪೆಟ್ರೋಲಿಯಂ ಒಪ್ಪಂದಗಳಲ್ಲಿ ಕಿಕ್‌ಬ್ಯಾಕ್‌ ಪಡೆದ ಆರೋಪ- ಇವೆಲ್ಲವೂ ವಾದ್ರಾ ಮೇಲಿವೆ. ಇಡಿ ಈಗಾಗಲೇ ವಾದ್ರಾರನ್ನು ಬಂಧಿಸಿ ಗಂಟೆಗಟ್ಟಲೆ ತನಿಖೆಗೊಳಪಡಿಸಿದ್ದು, ಜಾಮೀನಿನಡಿ ವಾದ್ರಾ ಹೊರಬಂದಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top