ವೈದ್ಯಕೀಯ ಸನ್ನದ್ಧತೆ ಅಗತ್ಯ: ಆರೋಗ್ಯ ಸೇವೆಯ ಗುಣಮಟ್ಟ ಪರೀಕ್ಷೆಯಾಗಲಿದೆ

ನಮ್ಮ ವೈದ್ಯಕೀಯ ವ್ಯವಸ್ಥೆ ಎಷ್ಟು ದೃಢವಾಗಿದೆ ಎಂಬ ಪರೀಕ್ಷೆಗೆ ರಂಗ ಸಜ್ಜಾಗುತ್ತಿರುವಂತಿದೆ. ಕಳೆದೆರಡು ದಿನಗಳಲ್ಲಿ ದಿನವಹಿ ಆರುನೂರಕ್ಕೂ ಹೆಚ್ಚು ಕೋವಿಡ್‌-19 ಕೇಸುಗಳು ದಾಖಲಾಗಿವೆ. ಮಾರ್ಚ್‌ 24ರಿಂದಲೇ ಲಾಕ್‌ಡೌನ್‌ ಘೋಷಿಸಿದ್ದರೂ ಈಗಾಗಲೇ ವೈರಸ್‌ ಅಜ್ಞಾತ ದಾರಿಗಳಲ್ಲಿ ಹಲವರನ್ನು ತಲುಪಿರುವ ಶಂಕೆ ಇದ್ದು, ಮುಂದಿನ ವಾರದಲ್ಲಿ ಅದರ ನಿಜಸಂಖ್ಯೆ ಗೊತ್ತಾಗಲಿದೆ. ದೇಶದಲ್ಲಿ ವೈರಸ್‌ ಹರಡುವಿಕೆ ಈ ವಾರದಲ್ಲಿ ಇಳಿಯಬಹುದೆಂಬ ಭರವಸೆ ನಮಗೆ ಅಗತ್ಯ; ಆದರೆ ಲಕ್ಷಾಂತರ ರೋಗಿಗಳ ಸಂಖ್ಯೆ ಹಾಗೂ ಅವರಿಂದ ನಮ್ಮ ಆರೋಗ್ಯ ಸೇವೆಯ ಮೇಲೆ ಆಗಬಹುದಾದ ಒತ್ತಡದ ‘ಅತ್ಯಂತ ಕೆಟ್ಟ ಸ್ಥಿತಿ’ಯನ್ನೂ ತಜ್ಞರು ಈಗಾಗಲೇ ಊಹಿಸಿಕೊಂಡಿದ್ದು ನಮ್ಮ ಸಿದ್ಧತೆ ಆ ದಿಕ್ಕಿನಲ್ಲೇ ಇರಬೇಕಿದೆ. ನಮ್ಮ ಆರೋಗ್ಯ ಸೇವೆ ಆ ನಿಟ್ಟಿನಲ್ಲಿ ಎಷ್ಟು ಸನ್ನದ್ಧವಾಗಿದೆ ಎಂಬ ಪ್ರಶ್ನೆ ಕೇಳಿಕೊಂಡರೆ ನಿರಾಶೆಯ ಉತ್ತರ ಸಿಗಬಹುದು.
ಮುಖ್ಯವಾಗಿ, ಸೋಂಕು ಬಲುಬೇಗನೆ ಹಲವು ಪಟ್ಟಾಗಿ ಬೆಳೆಯುವುದರಿಂದ ಇದ್ದಕ್ಕಿದ್ದಂತೆ ಬರುವ ಸಾವಿರಾರು ರೋಗಿಗಳನ್ನು ಏಕಕಾಲಕ್ಕೆ ಚಿಕಿತ್ಸೆಗೆ ಒಳಪಡಿಸುವುದೇ ಆಸ್ಪತ್ರೆಗಳ ಮುಂದಿನ ಸವಾಲು. ಇದಕ್ಕೆ ಬೇಕಾದ ವೈದ್ಯರು- ನರ್ಸ್‌ಗಳ ಸಂಖ್ಯೆ, ಬೆಡ್‌ಗಳು, ವೈದ್ಯಕೀಯ ಪರಿಕರಗಳು, ಮುಖ್ಯವಾಗಿ ತುರ್ತು ಸ್ಥಿತಿಯಲ್ಲಿ ಬಳಸಬೇಕಾದ ವೆಂಟಿಲೇಟರ್‌ಗಳು ನಮ್ಮಲ್ಲಿ ಇದೆಯೇ ಎಂಬ ಪ್ರಶ್ನೆ ಏಳುತ್ತದೆ. ಸರಕಾರಗಳೇನೋ ನಾವು ಎಂಥ ಸ್ಥಿತಿಗೂ ಸಿದ್ಧ ಎಂದು ಹೇಳಿವೆ. ಅಷ್ಟರಿಂದಲೇ ಪ್ರಜೆಗಳಲ್ಲಿ ಭರವಸೆ ಮೂಡಲಾರದು. ಯಾಕೆಂದರೆ ತಿಂಗಳುಗಟ್ಟಳೆ ವೈದ್ಯರಿಲ್ಲದೆ, ಔಷಧವಿಲ್ಲದೆ ಇರುವ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಇದ್ದಕ್ಕಿದ್ದಂತೆ ಸನ್ನದ್ಧ ಎಂದರೆ ಯಾರು ನಂಬುತ್ತಾರೆ? ಗ್ರಾಮೀಣ ಪ್ರದೇಶಗಳು ಸರಕಾರಿ ಆಸ್ಪತ್ರೆಗಳನ್ನು ನೆಚ್ಚಿಕೊಂಡಿವೆ. ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳು ಇವೆಯಾದರೂ, ಅವು ಬಡವರಿಗೆ ಲಭ್ಯವಿಲ್ಲ. ತುರ್ತು ಸ್ಥಿತಿಯಲ್ಲಿ ಇವುಗಳ ಸೇವೆಯನ್ನು ಬಳಸಿಕೊಳ್ಳುವುದಾಗಿ ಸರಕಾರ ಭರವಸೆ ನೀಡಿರುವುದು ಸದ್ಯಕ್ಕೆ ಆಶಾಕಿರಣ. ಇಂಥ ಸಂಕಷ್ಟದ ಸಂದರ್ಭದಲ್ಲಿ ನಮ್ಮ ರಾಜಕೀಯ ಇಚ್ಛಾಶಕ್ತಿ, ಸನ್ನದ್ಧತೆಗಳ ಪ್ರದರ್ಶನವಾಗಬೇಕಾಗುತ್ತದೆ.
ಇದು ನಾವು ನಿಜಕ್ಕೂ ಪಾಠ ಕಲಿಯಬೇಕಾದ ಸನ್ನಿವೇಶ. ಸರಕಾರಿ ವ್ಯವಸ್ಥೆಯಲ್ಲಿ ವೈದ್ಯಕೀಯ ಸಿಬ್ಬಂದಿ, ಉಪಕರಣಗಳು, ಔಷಧಗಳು ಕಡಿಮೆ ಎಂಬುದನ್ನು ಒಪ್ಪಿಕೊಳ್ಳಬೇಕು. ಇದನ್ನು ಉತ್ತಮಪಡಿಸಲು ವೇಳೆ ಬಂದಿದೆ. ನಮ್ಮ ಆರೋಗ್ಯ ಸೇವೆಯನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕಟ್ಟಿಕೊಳ್ಳಲು ಇದು ತಕ್ಕ ವೇಳೆ. ಸರಕಾರಿ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲು ನಮ್ಮ ತರುಣ ಜನಾಂಗ, ತಜ್ಞ ವೈದ್ಯರು ಯಾಕೆ ಮುಂದೆ ಬರುತ್ತಿಲ್ಲ ಎಂಬ ಪ್ರಶ್ನೆಯನ್ನೂ ಕೇಳಿಕೊಂಡು, ಅದಕ್ಕೆ ಪರಿಹಾರವನ್ನೂ ಕಂಡುಕೊಳ್ಳಬೇಕಿದೆ. ಸರಕಾರ ಹಾಗೂ ಸಮುದಾಯದ ಸೂಧಿರ್ತಿ ಪ್ರೋತ್ಸಾಹಗಳು ಈಗಾಗಲೇ ಬಹಳ ಸಂಖ್ಯೆಯಲ್ಲಿರುವ ವೈದ್ಯಕೀಯ ತರಬೇತಿ ಪಡೆದ ಯುವಜನತೆಯಲ್ಲಿ ಹೊಸ ಸೂಧಿರ್ತಿ ತುಂಬಿ, ಸೋಂಕಿನ ವಿರುದ್ಧದ ಹೋರಾಟಕ್ಕೆ ಅವರನ್ನು ತೊಡಗಿಸಬಲ್ಲವು. ಆಸ್ಪತ್ರೆಗಳನ್ನು ಸುಸ್ಥಿತಿಯಲ್ಲಿಡುವುದು, ಸಾಕಷ್ಟು ಸಿಬ್ಬಂದಿಗಳನ್ನು ಒದಗಿಸುವುದು, ಜನೌಷಧಿಗಳ ಪೂರೈಕೆ, ಉತ್ತಮ ಗುಣಮಟ್ಟದ ಉಪಕರಣಗಳ ಒದಗಣೆ, ತಜ್ಞ ವೈದ್ಯರು ಸರಕಾರಿ ಸೇವೆಯತ್ತ ಮುಖ ಮಾಡುವಂಥ ಸನ್ನಿವೇಶ ನಿರ್ಮಾಣ, ಇವುಗಳೆಲ್ಲ ಕಾಲಕ್ರಮೇಣ ಆಗಬೇಕಿವೆ. ಸದ್ಯ, ಬಾಗಿಲು ಬಡಿಯುತ್ತಿರುವ ಮಹಾಮಾರಿಯನ್ನು ಓಡಿಸುವುದಕ್ಕಾಗಿ ಅಗತ್ಯ ಕ್ರಮಗಳಾಗಬೇಕಿವೆ. ಲಭ್ಯವಿರುವ ಎಲ್ಲ ತುರ್ತು ಆರೋಗ್ಯ ಸೇವೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡುವುದು, ವೆಂಟಿಲೇಟರ್‌ಗಳ ಪೂರೈಕೆ, ಈಗಾಗಲೇ ವೈದ್ಯಕೀಯ ಪದವಿ ಪಡೆದಿರುವ ಯುವಜನರನ್ನು ತಜ್ಞರ ಮಾರ್ಗದರ್ಶನದಲ್ಲಿ ಕಾಯಿಲೆ ಎದುರಿಸುವ ಹೋರಾಟಕ್ಕೆ ಮುಂಚೂಣಿಗೆ ಬಿಡುವುದು, ಪರೀಕ್ಷೆ ಕಿಟ್‌ಗಳು ಪೂರೈಕೆ, ಅಗ್ಗದ ಕಿಟ್‌ಗಳು ಹಾಗೂ ವೆಂಟಿಲೇಟರ್‌ಗಳ ಆವಿಷ್ಕಾರ ಹಾಗೂ ದೊಡ್ಡ ಪ್ರಮಾಣದ ತಯಾರಿಗೆ ಪ್ರೋತ್ಸಾಹ ಇವುಗಳೆಲ್ಲ ನಡೆಯಬೇಕಿವೆ. ಸಿದ್ಧತೆ ವ್ಯರ್ಥವಾದರೂ ಚಿಂತೆಯಿಲ್ಲ. ಪ್ರಜೆಗಳ ಪ್ರಾಣ ಮುಖ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top