ಕೃಷಿ ಉತ್ಪನ್ನಕ್ಕೆ ಹೊಡೆತ – ಹೋಟೆಲ್‌ಗೆ ಸಿಗದ ಗ್ರೀನ್ ಸಿಗ್ನಲ್, ಕೃಷಿಕರಿಗೆ ನಿರಾಸೆ

– ಅಕ್ಕಿ, ತರಕಾರಿ, ಹಾಲು ಇತ್ಯಾದಿ ಆಹಾರ ಉತ್ಪನ್ನಗಳಿಗಿಲ್ಲ ಬೇಡಿಕೆ.     

ಯಳನಾಡು ಮಂಜು, ದಾವಣಗೆರೆ.
ಲಾಕ್‌ಡೌನ್‌ ಮುಗಿದ ನಂತರ ಬಹುತೇಕ ವಸ್ತುಗಳ ಬೆಲೆ ಗಗನ ಮುಖಿ ಆಗುತ್ತಿದೆ. ಸಿಮೆಂಟ್, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳಿಂದ ಹಿಡಿದು ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ತನಕ ಪ್ರಮುಖ ಉತ್ಪನ್ನಗಳ ದರ ಜಂಪ್ ಆಗಿದೆ. ಆದರೆ ಆಹಾರ ಉತ್ಪನ್ನಗಳ ಬೆಲೆ ಮಾತ್ರ ಕುಸಿಯತ್ತಿದ್ದು, ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಬಹುತೇಕ ಕೊರೊನಾ ನಿರ್ಬಂಧ ತೆರವಾದರೂ ಹೋಟೆಲ್ ಉದ್ಯಮಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಗದ ಕಾರಣ ಕೃಷಿ ಉತ್ಪನ್ನಗಳಿಗೆ ಡಿಮ್ಯಾಂಡ್ ಇಲ್ಲದಂತಾಗಿದೆ. ಲಾಕ್ ಓಪನ್ ಬಳಿಕವಾದರೂ ಬೇಡಿಕೆಯ ನಿರೀಕ್ಷೆಯಲ್ಲಿದ್ದ ಆಹಾರ ಪದಾರ್ಥಗಳಿಗೆ ನಿರೀಕ್ಷಿತ ಬೇಡಿಕೆ ಬಾರದೆ ಬೆಲೆ ಇಲ್ಲದಂತಾಗಿದೆ. ಮುಖ್ಯವಾಗಿ ಅಕ್ಕಿ, ತರಕಾರಿ, ಹಣ್ಣು, ಹಾಲಿನ ಉತ್ಪನ್ನಗಳಿಗೆ ಒಂದಿಷ್ಟು ಮೌಲ್ಯ ತಂದು ಕೊಡುತ್ತಿರುವುದೇ ಹೋಟೆಲ್ ಉದ್ಯಮ. ಆಹಾರ ಉತ್ಪನ್ನಗಳಿಗೆ ಪೂರಕವಾದ ಈ ಉದ್ಯಮ ಯಾವಾಗ ಆರಂಭ ಆಗುತ್ತದೋ ಎಂದು ಹೋಟೆಲ್ ಉದ್ಯಮಿಗಳು ಕಾಯುತ್ತಿದ್ದರೆ, ಇನ್ನೊಂದೆಡೆ ರೈತರು ಕೂಡ ಇದನ್ನೇ ಎದುರು ನೋಡುತ್ತಿದ್ದಾರೆ. ರಾಜ್ಯದಲ್ಲಿ30 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಇವು ಪೂರ್ಣ ಪ್ರಮಾಣದಲ್ಲಿ ಬಾಗಿಲು ತೆರೆದರೆ ಮಾತ್ರ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಕುದುರಲಿದೆ.

ಬೇಡಿಕೆ ಇಲ್ಲ
ಪೂರ್ಣ ಪ್ರಮಾಣದಲ್ಲಿ ಹೋಟೆಲ್ ಓಪನ್ ಇಲ್ಲದಿರುವುದು ಪ್ರಮುಖವಾಗಿ ಅಕ್ಕಿ ಮಾರುಕಟ್ಟೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಶೇ.30ಕ್ಕೂ ಹೆಚ್ಚು ಅಕ್ಕಿಯ ವಹಿವಾಟಿಗೆ ಇದರಿಂದ ಹೊಡೆತ ಬಿದ್ದಿದೆ ಎಂದು ಅಕ್ಕಿ ಗಿರಣಿ ಮಾಲೀಕರು, ವ್ಯಾಪಾರಿಗಳು ಹೇಳುತ್ತಿದ್ದಾರೆ. ಈರುಳ್ಳಿ ಸೇರಿದಂತೆ ತರಕಾರಿಗೂ ಇದೇ ಪರಿಸ್ಥಿತಿ ಬಂದಿದೆ. ಬಹುತೇಕ ಉತ್ಪನ್ನಗಳು ದಾಸ್ತಾನು ಸಾಧ್ಯವಿಲ್ಲದೆ ಅಂದಂದೇ ಬಿಕರಿ ಆಗುವಂತಾಗಿದೆ. ಬೇಡಿಕೆ ಇಲ್ಲದ ಕಾರಣ ರೈತರಿಂದ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ತರಕಾರಿ ಖರೀದಿಸುತ್ತಿಲ್ಲ.
ಅಕ್ಕಿ ಗೋದಾಮುಗಳಲ್ಲಿಯೇ ಉಳಿದಿದ್ದು, ಹಳೆಯ ಸ್ಟಾಕ್ ಖಾಲಿಯೇ ಆಗಿಲ್ಲ. ಆದರೆ ಈಗ ಮತ್ತೆ ಭತ್ತದ ಸುಗ್ಗಿ ಬಂದಿದ್ದು, ಮಾರುಕಟ್ಟೆ ಉತ್ಪನ್ನ ದಾಂಗುಡಿಯಿಡುತ್ತಿದೆ. ಇನ್ನೊಂದೆಡೆ ಬೆಲೆಯಿಲ್ಲಎಂದು ರೈತರು ಒಕ್ಕೊರಲಿನಿಂದ ಅಳಲು ತೋಡಿಕೊಳ್ಳುತ್ತಿದ್ದಾರೆ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಮಾಡಲು ಸರಕಾರ ಮುಂದಾಗಿದೆ.
ಲಾಕ್‌ಡೌನ್‌ ಮುಗಿದ ನಂತರ ಮೊಬೈಲ್, ಕಂಪ್ಯೂಟರ್, ಸಿಮೆಂಟ್, ಕಬ್ಬಿಣ ಸೇರಿ ಎಲ್ಲ ದೊಡ್ಡ ಕಂಪನಿಗಳು ಕೊರೊನಾದಿಂದ ತಮಗೆ ಆದ ನಷ್ಟ ತುಂಬಿಕೊಳ್ಳಲು ಉತ್ಪನ್ನಗಳ ಬೆಲೆ ಹೆಚ್ಚಿಸಿವೆ. ಆದರೆ ಆ ಭಾಗ್ಯ ಈ ಕ್ಷೇತ್ರಗಳಿಗೆ ಇಲ್ಲದಂತಾಗಿದೆ.

ಅಕ್ಕಿಗೆ ಕುಸಿದ ಬೇಡಿಕೆ
ಇಷ್ಟು ದಿನ ಕೊರೊನಾ ಲಾಕ್‌ಡೌನ್‌ ಕಾರಣ ಲಾಕ್ ಮಾಡಿಕೊಂಡಿದ್ದ ಜಿಲ್ಲೆಯ ಅಕ್ಕಿ ಗಿರಣಿಗಳು ಈಗ ಓಪನ್ ಆಗಿವೆ. ಆದರೆ ಅಕ್ಕಿಗೆ ಈಗ ಬೇಡಿಕೆಯೇ ಇಲ್ಲದೇ ಮಾರುಕಟ್ಟೆ ಕುಸಿದಿದೆ. ಪ್ರಧಾನಿ ಮೋದಿ ಲಾಕ್‌ಡೌನ್‌ ಘೋಷಣೆ ಮಾಡಿದ ಮೊದಲ ವಾರ ಸಖತ್ ಬೇಡಿಕೆ ಇತ್ತು. ಅಕ್ಕಿ ಮುಂದೆ ಸಿಗಲಿಕ್ಕಿಲ್ಲಎಂದು ಭಾವಿಸಿ ಜನ ಒಂದಷ್ಟು ಅಕ್ಕಿ ಜಾಸ್ತಿಯೇ ಖರೀದಿಸಿ ಸ್ಟಾಕ್ ಮಾಡಿಕೊಂಡಿದ್ದರು. ಈ ನಡುವೆ ದಾನಿಗಳು ಕೂಡ ಅಕ್ಕಿ ಖರೀದಿಸಿ ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ದಿನಸಿ ಜತೆ ಅಕ್ಕಿ ಪಾಕೇಟ್‌ಗಳನ್ನೂ ದಾನ ಕೊಟ್ಟರು. ಆದರೀಗ ಅಕ್ಕಿಯ ಬೇಡಿಕೆ ಕುಸಿದಿದೆ. ದರದಲ್ಲಿಸದ್ಯ ಅಂಥ ವ್ಯತ್ಯಾಸವಾಗಿಲ್ಲ.

ಹೋಟೆಲ್ ಉದ್ಯಮ ಬಂದ್ ಆಗಿರುವುದರಿಂದ ಮತ್ತು ಶುಭ ಸಮಾರಂಭಗಳು ನಡೆಯದ ಕಾರಣ ಅಕ್ಕಿಯ ವಹಿವಾಟಿನಲ್ಲಿ ಶೇ.30ರಷ್ಟು ಪ್ರಮಾಣದಲ್ಲಿಕುಸಿತವಾಗಿದೆ. ಇದರ ಪರಿಣಾಮ ರೈತರ ಮೇಲೂ ಬಿದ್ದಿದ್ದು, ಭತ್ತಕ್ಕೆ ಬೆಲೆ ಇಲ್ಲದಂತಾಗಿದೆ.
– ವಾಗೀಶ್ ಸ್ವಾಮಿ, ಅಕ್ಕಿ ಗಿರಣಿ ಮಾಲೀಕ

ಲಾಕ್‌ಡೌನ್‌ ನಂತರ ಹಾಲು, ಹಾಲಿನ ಉತ್ಪನ್ನಗಳ ಮಾರಾಟ ಚೇತರಿಸಿದೆ. ಆದರೆ ಹೋಟೆಲ್ ಇನ್ನಿತರೆ ಪೂರಕ ಉದ್ಯಮಗಳು ಆರಂಭವಾದರೆ ಮಾತ್ರ ಮಾರಾಟ ಸಹಜ ಸ್ಥಿತಿಗೆ ಬರಲಿದೆ.
-ಬಸವರಾಜ್, ಎಂಡಿ, ಶಿಮುಲ್

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top