ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ರಾಜ್ಯ ಸರಕಾರ ಉಳಿದೆಡೆ ಲಾಕ್‌ಡೌನ್ ಅನ್ನು ಬಹುತೇಕ ಸಡಿಲಿಸಿದೆ. ಸೋಂಕು ಹರಡುವಿಕೆಯ ಸರಪಣಿ ಮುರಿಯಲು ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದು, ಮಾಲ್, ಸಿನಿಮಾ, ಹೋಟೆಲ್‌ಗಳ ತೆರೆಯುವಿಕೆಗೆ ನಿರ್ಬಂಧವಿದೆ. ರಾಜ್ಯದೊಳಗಿನ ರೈಲು ಸಂಚಾರವಿದ್ದರೂ ಮೆಟ್ರೋ ಓಡಾಡುವುದಿಲ್ಲ. ಅಂತಾರಾಜ್ಯ ಪ್ರಯಾಣ ಮುಕ್ತವಲ್ಲ. ಅಂತರ್‌ಜಿಲ್ಲಾ ಪ್ರಯಾಣ ಮಾಡಬಹುದು. ಹವಾನಿಯಂತ್ರಿತ ಬಸ್‌ಗಳ ಹೊರತಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ಎಲ್ಲ ಬಸ್ ಸಂಚಾರ ಶುರುವಾಗಲಿದೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ ಓಡಾಡಲಿವೆ. ಸೆಲೂನ್ ಸಹಿತ ಎಲ್ಲಾ ಅಂಗಡಿ, ಮುಂಗಟ್ಟು ತೆರೆಯಬಹುದು. ಕೆಲವು ಕಡೆ ಭಾಗಶಃ ವ್ಯಾಪಾರ ವಹಿವಾಟಿಗೆ ಅವಕಾಶವಿದೆ; ಉದಾಹರಣೆಗೆ ಹೋಟೆಲ್‌ಗಳು ಪಾರ್ಸೆಲ್ ಮಾತ್ರ ನೀಡಬಹುದು. ಪಾರ್ಕ್‌ಗಳು ಸೀಮಿತ ಅವಧಿಗೆ ತೆರೆಯಲಿವೆ. ಆಟೋ, ಟ್ಯಾಕ್ಸಿ, ಬಸ್‌ಗಳಲ್ಲಿ ಅಂತರ ಕಾದುಕೊಂಡು ಪ್ರಯಾಣಿಸಬೇಕು ಇತ್ಯಾದಿ.
ಲಾಕ್‌ಡೌನ್ ತೆರವು ಮಾಡಲು ಸೂಕ್ತ ಕಾಲ ಇದಾಗಿರಲಿಲ್ಲ ಎಂಬುದನ್ನು ತಜ್ಞರೂ ಒಪ್ಪುತ್ತಾರೆ. ಯಾಕೆಂದರೆ ಸೋಂಕು ಹೆಚ್ಚು ಹೆಚ್ಚಾಗಿ ಪತ್ತೆಯಾಗುತ್ತಿದೆ. ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದಾಗ 51ರಷ್ಟಿದ್ದ ಸೊಂಕಿನ ಪ್ರಮಾಣ ಈಗ ಒಂದು ಲಕ್ಷದ ಸಮೀಪ ಬಂದಿದೆ. ಸೋಮವಾರ ಒಂದೇ ದಿನ 99 ಸೋಂಕುಗಳು ಪತ್ತೆಯಾಗಿದ್ದು, ಇನ್ನಷ್ಟು ಕಠಿಣ ನಿಗಾ ವ್ಯವಸ್ಥೆಯ ಅವಶ್ಯಕತೆಯನ್ನು ಒತ್ತಿ ಹೇಳಿದಂತಿದೆ. ಆದರೆ ಎರಡು ತಿಂಗಳ ಲಾಕ್‌ಡೌನ್‌ನ ಪರಿಣಾಮ ದೇಶ ಹಾಗೂ ರಾಜ್ಯದ ಆರ್ಥಿಕತೆ ದಾರುಣ ಕುಸಿತ ಕಂಡಿದ್ದು, ಉದ್ಯೋಗನಷ್ಟ, ಸಂಬಳ ಕಡಿತ, ಸಾಲಸೋಲ, ಹಸಿವಿನ ಸನ್ನಿವೇಶ ಸೃಷ್ಟಿಯಾಗಿದೆ. ವ್ಯಾಪಾರ ವಹಿವಾಟನ್ನು ಮರಳಿ ತೆರೆಯಲೇಬೇಕಾದ ಸಂದರ್ಭ ಬಂದಿದೆ. ಇದನ್ನು ಸರಕಾರ ಮನಃಪೂರ್ವಕವಾಗಿ ಮಾಡುತ್ತಿಲ್ಲ.
ಸರಕಾರ ಮುಕ್ತ ಚಟುವಟಿಕೆಗೆ ಒಪ್ಪಿಗೆ ನೀಡುವುದರೊಂದಿಗೆ, ಸೋಂಕು ನಿಯಂತ್ರಣದ ಜವಾಬ್ದಾರಿಯನ್ನೂ ಜನಸಮೂಹದ ಹೆಗಲಿಗೇರಿಸಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈಗ ಯಾವುದೇ ನಿರ್ಬಂಧ ಇಲ್ಲವೆಂದು ಮನಸೋಇಚ್ಛೆ ಓಡಾಡುವುದು, ಜನಜಂಗುಳಿ ಸೇರುವುದು, ಅಂತರ ಕಾಪಾಡಿಕೊಳ್ಳದಿರುವುದು, ಸ್ವಚ್ಛತೆಯ ಪ್ರಜ್ಞೆ ಕೈಬಿಡುವುದು ಮುಂತಾದವುಗಳಿಂದ ಅಪಾಯ ಖಚಿತ. ಕೋವಿಡ್ ಸೋಂಕು ಇನ್ನೂ ತನ್ನ ಶಿಖರ ಮುಟ್ಟಿಲ್ಲ ಹಾಗೂ ಇಳಿಯುವ ಸೂಚನೆ ತೋರಿಸಿಲ್ಲ; ಲಕ್ಷಣಗಳಿಲ್ಲದ ಸೋಂಕಿತರು ನಮ್ಮ ನಡುವೆ ಓಡಾಡಿ ಸೋಂಕು ಹಬ್ಬಿಸುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ ಕೋವಿಡ್ ತಡೆಗೆ ನಾವು ಮೊದಲಿನಿಂದ ಅನುಸರಿಸಿಕೊಂಡು ಬಂದ ಎಲ್ಲ ಎಚ್ಚರಿಕೆ ಕ್ರಮಗಳನ್ನು ನಾವು ಇನ್ನು ಮುಂದೆಯೂ ಪಾಲಿಸಿಕೊಂಡು ಹೋಗಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರಿಗೆ ಪ್ರಯಾಣದಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸೋಂಕು ಲಕ್ಷಣಗಳಿದ್ದರೆ ಮನೆಯಲ್ಲೇ ಪ್ರತ್ಯೇಕ ಉಳಿಯುವುದು, ಅನಗತ್ಯ ಓಡಾಡದೆ ಇರುವುದು, ಭಾನುವಾರ ಮನೆಯಲ್ಲೇ ಉಳಿಯುವುದು, ಸಾಧ್ಯವಿದ್ದಲ್ಲಿ ವರ್ಕ್ ಫ್ರಮ್ ಹೋಮ್ ಮಾಡುವುದು ಮದುವೆ ಮುಂತಾದ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಸರಳವಾಗಿ ಆಚರಿಸುವುದು- ಇವುಗಳೆಲ್ಲ ಅಗತ್ಯ.
ಕೋವಿಡ್ ವೈರಾಣು ನಮ್ಮೊಡನೆ ಬಹುಕಾಲ ಉಳಿಯಲಿದೆ ಎಂದು ತಜ್ಞರು ಹೇಳಿದ್ದಾರೆ. ಲಸಿಕೆ ಸೃಷ್ಟಿಗೆ ಬಹುಕಾಲ ತಗುಲಲಿದೆ. ಹೀಗಾಗಿ ಅದರೊಂದಿಗೆ ಹೊಂದಿಕೊಂಡು ಬಾಳುವುದು ಅನಿವಾರ್ಯವಾಗಲಿದೆ. ಈ ಸೋಂಕಿಗೆ ಸುಲಭವಾಗಿ ಬಲಿಯಾಗಬಲ್ಲ ವೃದ್ಧರು, ಕಾಯಿಲೆ ಪೀಡಿತರು, ಮಕ್ಕಳನ್ನು ಹೆಚ್ಚು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಹೆಚ್ಚಿನ ಆರೋಗ್ಯವಂತರೇ ತಮಗೆ ಅಪಾಯವಿಲ್ಲವೆಂಬ ಭಂಡ ಧೈರ್ಯದಿಂದ ವೈರಾಣು ವಾಹಕಗಳಾಗಿ ಪರಿವರ್ತಿತರಾಗಬಲ್ಲ ವಿಲಕ್ಷಣ ಸನ್ನಿವೇಶ ಇಲ್ಲಿದೆ. ಈಗ ವೈದ್ಯರು, ಪೊಲೀಸರಷ್ಟೇ ಕೊರೊನಾ ವಾರಿಯರ್ಸ್‌ಗಳಲ್ಲ; ಪ್ರತಿಯೊಬ್ಬರೂ ವಾರಿಯರ್ಸ್‌ಗಳೇ ಆಗಬೇಕಾದ ತುರ್ತು ಇದೆ. ನಮ್ಮ ಹೊಣೆಯರಿತು ನಡೆದು ಈ ಸೋಂಕನ್ನು ದೂರವಿಡೋಣ.