ಲಾಕ್‌ಡೌನ್‌: ಸೋಂಕು ಇಳಿಸದಿದ್ದರೆ ಭಾರತ ತ್ರಿಶಂಕು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಮೂರು ವಾರಗಳ ಲಾಕ್‌ಡೌನ್‌ ಅನ್ನು ಭಾರತ ಮುಗಿಸಿದೆ. ಮೇ 3ರವರೆಗೆ ಮತ್ತೆ ವಿಸ್ತರಿಸಲಾಗಿದೆ. ಈ ನಡುವೆ, ಲಾಕ್‌ಡೌನ್‌ನಿಂದ ಭಾರತಕ್ಕೆ ಆದ ಪ್ರಯೋಜನ ಏನು? ಲಾಕ್‌ಡೌನ್‌ ಮಾಡದಿದ್ದರೆ ಏನಾಗುತ್ತಿತ್ತು?

ಮೂರು ವಾರಗಳಿಂದ ಲಾಕ್‌ಡೌನ್‌ ಅನುಭವಿಸುತ್ತಿರುವ ಭಾರತ ಮತ್ತೂ ಹದಿನೆಂಟು ದಿನಗಳ ಲಾಕ್‌ಡೌನ್‌ಗೆ ಒಳಪಟ್ಟಿದೆ. ಈ ಅವಧಿಯಲ್ಲಿ, ಹೊಸ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೇರಳ ಕೊರೊನಾ ವೈರಸ್‌ನ್ನು ತಡೆಗಟ್ಟುವುದು ಹೇಗೆ ಎಂಬುದಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಿದೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಇದ್ದರೂ ಸೋಂಕು ಪತ್ತೆಯಲ್ಲಿ ಏರುಮುಖ ಆಗಿದೆ. ಅತ್ಯಂತ ಹೆಚ್ಚು ವೈರಸ್‌ ಹಾವಳಿ ಪೀಡಿತವಾದ 25 ದೇಶಗಳಲ್ಲಿ 16 ದೇಶಗಳು ಈಗಾಗಲೇ ಭಾರತದಂತೆ ಕನಿಷ್ಠ ಮೂರು ವಾರಗಳಿಂದ ಲಾಕ್‌ಡೌನ್‌ನಲ್ಲಿವೆ. ಈ ದೇಶಗಳಿಗೆ ಹೋಲಿಸಿದರೆ, ನಾವು ಏನು ಮಾಡಿದ್ದೇವೆ, ಮುಂದಿನ ವಾರಗಳಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಚಿತ್ರಣವೂ ಸಿಗಬಹುದು.

ದೈನಂದಿನ ಕೇಸುಗಳಲ್ಲಿ ಇಳಿಕೆ
ಭಾರತದಂತೆಯೇ ಲಾಕ್‌ಡೌನ್‌ನಲ್ಲಿರುವ, ಹೆಚ್ಚು ಸೋಂಕಿಗೀಡಾದ 16 ದೇಶಗಳ ಪೈಕಿ ಮೂರು ವಾರಗಳ ಲಾಕ್‌ಡೌನ್‌ ಬಳಿಕ ದೈನಂದಿನ ಸರಾಸರಿ ಪ್ರಕರಣಗಳ ಪತ್ತೆಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ. ಲಾಕ್‌ಡೌನ್‌ಗಿಂತ ಮೊದಲಿನ ವಾರದಲ್ಲಿ ಭಾರತದ ಸರಾಸರಿ ದೈನಿಕ ಹೆಚ್ಚಳ 21.6%ದಷ್ಟಿದ್ದರೆ, ಲಾಕ್‌ಡೌನ್‌ನ ವೇಳೆ ಶೇ.6ರಷ್ಟು ಇಳಿದು ಶೇ.15.7ಕ್ಕೆ ಬಂದಿತ್ತು.

ಕೇರಳದಲ್ಲಿ ಹೆಚ್ಚಿನ ಸಾಧನೆ
ಲಾಕ್‌ಡೌನ್‌ನಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿಅತ್ಯಂತ ಹೆಚ್ಚು ಇಳಿಮುಖ ಸಾಧನೆ ತೋರಿಸಿದ್ದು ಕೇರಳ. ಇದು ಅಲ್ಲಿನ ಹೆಚ್ಚಿನ ಪ್ರಮಾಣದ ಪರೀಕ್ಷೆ, ಸಂಪರ್ಕ ಪತ್ತೆ, ಬಿಗಿ ಲಾಕ್‌ಡೌನ್‌ ಕ್ರಮಗಳಿಂದಾಗಿ ಸಾಧ್ಯವಾಗಿದೆ. ತಮಿಳುನಾಡು, ಕರ್ನಾಟಕ, ತೆಲಂಗಾಣ, ಪಂಜಾಬ್‌, ರಾಜಸ್ಥಾನಗಳು ಕೂಡ ಈ ವಿಚಾರದಲ್ಲಿ ಗಣನೀಯ ಪ್ರಗತಿ ತೋರಿಸಿವೆ. ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಗುಜರಾತ್‌ಗಳಲ್ಲಿ ಲಾಕ್‌ಡೌನ್‌ಗೆ ಮೊದಲಿನ ವಾರದಲ್ಲಿ ಪ್ರಕರಣಗಳು ಕಂಡುಬಂದಿರಲಿಲ್ಲ. ಆದರೆ ಲಾಕ್‌ಡೌನ್‌ನ ಮೂರು ವಾರಗಳಲ್ಲಿಅಲ್ಲಿ ಪ್ರಕರಣಗಳು ರಾಕೆಟ್‌ಗಳಂತೆ ಮೇಲಕ್ಕೆ ಚಿಮ್ಮಿದ್ದವು. ಬಿಹಾರ ಮತ್ತು ಮಧ್ಯಪ್ರದೇಶಗಳ ದೈನಿಕ ಪ್ರಕರಣ ಹೆಚ್ಚಳ ರಾಷ್ಟ್ರೀಯ ಸರಾಸರಿಯಾದ 15.7%ಗಿಂತ ಅಧಿಕವಾಗಿದೆ.

ಲಾಕ್‌ಡೌನ್‌ ಮಾಡದ ದೇಶಗಳ ಕತೆ
ಅತಿ ಹೆಚ್ಚು ಸೋಂಕು ಪೀಡೆಗೆ ಒಳಗಾದ 25 ದೇಶಗಳಲ್ಲಿ, ನಾಲ್ಕು ದೇಶಗಳು ಲಾಕ್‌ಡೌನ್‌ ವಿಧಿಸಿದವು. ವಿಧಿಸದ ದೇಶಗಳಾದ ದಕ್ಷಿಣ ಕೊರಿಯಾ ಹಾಗೂ ಸ್ವೀಡನ್‌ಗಳು ತಮ್ಮಲ್ಲಿ ಸೋಂಕು ಹರಡುವಿಕೆಯನ್ನು ಗಣನೀಯವಾಗಿ ತಡೆಗಟ್ಟುವಲ್ಲಿ ಸಫಲವಾದವು. ಭಾರತದ ಲಾಕ್‌ಡೌನ್‌ನ ಮೊದಲನೇ ಹಂತ ಪೂರೈಸಿದಾಗಲೂ ಮಾಡಲು ಸಾಧ್ಯವಾಗದ ಸಾಧನೆಯನ್ನು ಈ ದೇಶಗಳು ಲಾಕ್‌ಡೌನ್‌ ಇಲ್ಲದೆಯೇ ಮಾಡಿದವು. ಆದರೆ ಜಪಾನ್‌ನಲ್ಲಿ ಮಾತ್ರ ಸೋಂಕುಗಳ ಸಂಖ್ಯೆ ಶೇಕಡ 5ರಷ್ಟು ಉಲ್ಬಣಿಸಿತು. ಟರ್ಕಿಯಲ್ಲಿ ಸೋಂಕಿತರ ಸಂಖ್ಯೆ ಅಚ್ಚರಿ ಎನ್ನಿಸುವಂತೆ ನಾಟಕೀಯವಾಗಿ ಅರ್ಧಕ್ಕರ್ಧ ಇಳಿದಿದೆ. ಆದರೆ ಇಲ್ಲಿ ಲಾಕ್‌ಡೌನ್‌ ಮೊದಲೇ ಹೆಚ್ಚಿನ ಕೇಸುಗಳು ಕಂಡುಬಂದಿದ್ದವು.

ಭಾರತದ ಮುಂದೇನು ದಾರಿ?
ಭಾರತದಷ್ಟೇ ಪ್ರಕರಣ ಪ್ರಮಾಣ ಹೊಂದಿದ್ದ ದೇಶಗಳು, ಲಾಕ್‌ಡೌನ್‌ ಸಂದರ್ಭದಲ್ಲಿ10,000 ಪ್ರಕರಣ ಸಂಖ್ಯೆ ತಲುಪಿದ್ದರೂ, ಲಾಕ್‌ಡೌನ್‌ನ ತರುವಾಯ, ಸೋಂಕು ಏರಿಕೆಯಲ್ಲಿ ಗಣನೀಯ ಇಳಿಕೆ ಮಾಡಿಕೊಂಡಿವೆ. ಕಳೆದ ಎರಡು ವಾರಗಳ ಹಿಂದೆ 10,000 ತಲುಪಿದ್ದ ದೇಶಗಳ ಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ಭಾರತ ತನ್ನ ಸೋಂಕು ಏರಿಕೆ ಪ್ರಮಾಣವನ್ನು ಇನ್ನಷ್ಟು ಇಳಿಸಿಕೊಳ್ಳುವುದು ಅಗತ್ಯವಾಗಿದೆ. ಈಗ ಇರುವ ಏರಿಕೆ ಪ್ರಮಾಣದಲ್ಲಿಯೇ ಮುಂದುವರಿದರೆ, ಮುಂದಿನ ಹದಿನೈದು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 60,000 ತಲುಪಲಿರುವುದು ಖಚಿತ.

10,000 ಪ್ರಕರಣ ತಲುಪಿದ ಸಂದರ್ಭದಲ್ಲಿ ಭಾರತದ ಬೆಳವಣಿಗೆ ದರ 13.1% ದಷ್ಟಿತ್ತು. ಉದಾಹರಣೆಗೆ, ಸ್ವಿಡ್ಜರ್‌ಲ್ಯಾಂಡ್‌, ತನ್ನ ಪ್ರಕರಣಗಳ ನಂಬರ್‌ 10,000 ತಲುಪಿದ ಬಳಿಕ ಮುಂದಿನ ಎರಡು ವಾರದಲ್ಲಿ ಸೋಂಕು ಬೆಳವಣಿಗೆಯ ದರವನ್ನು 5.8%ಕ್ಕೆ ಇಳಿಸಿಕೊಂಡಿತ್ತು. ಅದರಿಂದ ಅದು ಈಗ 24,000ದ ಹಂತಕ್ಕೆ ಬಂದು ನಿಂತಿದೆ. ಭಾರತ ಈ ಮಹಾಮಾರಿಯ ಹರಡುವಿಕೆಯನ್ನು ಈ ಹಂತದಲ್ಲಾದರೂ ನಿಲ್ಲಿಸಿದರೆ ನಿಭಾಯಿಸಲು ಸಾಧ್ಯವಿದೆ.

ಡೆನ್ಮಾರ್ಕ್‌ನ ಸಾಧನೆ
ಸೋಂಕು ಪ್ರಕರಣಗಳು 1000 ತಲುಪುವುದಕ್ಕೂ ಮೊದಲು ಲಾಕ್‌ಡೌನ್‌ ಘೋಷಿಸಿದ ದೇಶಗಳಲ್ಲಿ ಡೆನ್ಮಾರ್ಕ್ ಸಹ ಒಂದು. ಅದು ಈಗ ಸೋಂಕು ಹರಡುವಿಕೆಯ ಪ್ರಮಾಣದಲ್ಲಿ ಶೇ.58ರಷ್ಟು ಇಳಿಕೆ ಸಾಧಿಸಿದೆ.

ದಕ್ಷಿಣ ಕೊರಿಯಾದ ವಿಶೇಷ
ಲಾಕ್‌ಡೌನ್‌ ಇಲ್ಲದೇ ಸೋಂಕು ಪ್ರಕರಣಗಳನ್ನು ತಡೆಯುವಲ್ಲಿ ಗಣನೀಯ ಸಾಧನೆ ಮಾಡಿದ ದೇಶ ದಕ್ಷಿಣ ಕೊರಿಯಾ. ಭಾರತ ಲಾಕ್‌ಡೌನ್‌ ಮಾಡಿದಾಗಲೂ ಅಲ್ಲಿ ಭಾರತದಷ್ಟೇ ಪ್ರಕರಣಗಳಿದ್ದವು. ಭಾರತದ ಮೂರು ವಾರಗಳ ಲಾಕ್‌ಡೌನ್‌ ಮುಗಿದಾಗ ಎಷ್ಟು ಸೋಂಕು ಪ್ರಕರಣ ಕಾಣುತ್ತಿದೆಯೋ ಅದಕ್ಕಿಂತ ಕಡಿಮೆ ಪ್ರಕರಣಗಳನ್ನು ದಕ್ಷಿಣ ಕೊರಿಯಾ ದಾಖಲಿಸಿದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್‌, ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದವರ ಕಡ್ಡಾಯ ಪತ್ತೆ ಹಚ್ಚಿ ಕ್ವಾರಂಟೈನ್‌, ಜನತೆಯ ನಾಗರಿಕ ಪ್ರಜ್ಞೆ ಎಲ್ಲವೂ ಇದನ್ನು ಸಾಧಿಸುವಲ್ಲಿ ನೆರವಾಗಿವೆ.

ಚೀನಾದ ಕಠಿಣ ಕ್ರಮ
ಲಾಕ್‌ಡೌನ್‌ ಮುಗಿದ ಸಂದರ್ಭದಲ್ಲಿ ಹೊಸ ಪ್ರಕರಣಗಳೇ ಇಲ್ಲಎಂಬ ಸನ್ನಿವೇಶ ಸೃಷ್ಟಿಸಲು ಸಾಧ್ಯವಾಗಿರುವುದು ಚೀನಾಗೆ ಮಾತ್ರ. ಅಲ್ಲಿ ಹೊಸ ಸೋಂಕುಗಳು ಹರಡಿಲ್ಲಎಂದು ಖಾತ್ರಿಯಾದ ಬಳಿಕವಷ್ಟೇ ಜನವರಿಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ನ್ನು ತೆಗೆಯಲಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top