ಕೊರೊನಾ ಜತೆಗೇ ನಡೆಯಲಿ ಜೀವನ – ವೈರಾಣುವಿಗೆ ಹೆದರಿ ಕೂರಲಾಗದು, ಎದುರಿಸಿ ನಿಲ್ಲುವ ದೈಹಿಕ, ಮಾನಸಿಕ ಶಕ್ತಿಯೊಂದೇ ದಿವ್ಯಾಸ್ತ್ರ

– ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ

Yes, the show must go on…
ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿ ನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ.
ಕೊರೊನಾ ವೈರಸ್‌ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್‌ಗಳನ್ನು ಈ ಜಗತ್ತು ಕಂಡಿದೆ. ಕಡು ಕಷ್ಟ, ನಷ್ಟ ಅನುಭವಿಸಿದೆ. ಅಂಥ ಕಾಯಿಲೆಗಳನ್ನೂ ಅರಗಿಸಿಕೊಂಡಿದೆ, ಅವುಗಳ ವಿರುದ್ಧ ಜಯ ಸಾಧಿಸಿದೆ. ಸಿಡುಬು, ಮಾರ್ಬರ್ಗ್ ವೈರಸ್, ಎಬೋಲಾ ವೈರಸ್, ರೇಬಿಸ್, ಎಚ್ಐವಿ, ಹಂಟಾ ವೈರಸ್, ಇನ್‌ಫ್ಲುಂಯೆಜಾ, ಡೆಂಗೆ, ರೋಟಾ ವೈರಸ್, ಸಾರ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ಲೇಗ್, ಕಾಲರಾದಂಥ ಕಾಯಿಲೆಗಳು ಶತಮಾನಗಳವರೆಗೂ ನರಸಂಕುಲವನ್ನು ಹಿಂಡಿ ಹಿಪ್ಪೆ ಮಾಡಿವೆ. ಆದರೂ, ಮನುಷ್ಯ ತನ್ನ ಬದುಕನ್ನು ರೂಪಿಸಿಕೊಳ್ಳಲಿಲ್ಲವೇ? ನಾಗರಿಕತೆಯನ್ನು ವಿಸ್ತರಿಸಲಿಲ್ಲವೇ? ಅಸಾಧ್ಯವಾದುದನ್ನು ಸಾಧಿಸಲಿಲ್ಲವೇ? ಈಗಲೂ ಹಾಗೆಯೇ, ನಾವು ಈ ಕೊರೊನಾ ಜತೆಗೆ ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.
ಯಾವುದೇ ಹೊಸ ವೈರಸ್‌ನಿಂದ ಕಾಯಿಲೆ ಹುಟ್ಟಿಕೊಂಡಾಗ ಇಡೀ ಜಗತ್ತು ತಲ್ಲಣಗೊಳ್ಳುವುದು ಸಹಜ. ಈಗಲೂ ಹಾಗೆಯೇ ಆಗುತ್ತಿದೆ. ನಾವೆಲ್ಲರೂ ಭಯದಿಂದಲೇ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ. ಈ ಹಿಂದೆ ತಲ್ಲಣಗೊಳಿಸಿದ್ದ ವೈರಸ್‌ಗಳಿಗೆ ಹೋಲಿಸಿದರೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ತುಂಬ ಕಡಿಮೆ. ಫ್ಲೂನಿಂದಲೇ ಪ್ರತಿ ವರ್ಷಕ್ಕೆ 10ರಿಂದ 15 ಸಾವಿರ ಜನರು ಸಾಯುತ್ತಾರೆ, ರಸ್ತೆ ಅಪಘಾತಗಳಲ್ಲಿ ಸಾಯುವರೂ ಸಂಖ್ಯೆ ಇದಕ್ಕಿಂತ ಎರಡು ಪಟ್ಟು ಹೆಚ್ಚು. ಇದಾವುದು ನಮಗೆ ಭಯವನ್ನು ಹುಟ್ಟಿಸುವುದಿಲ್ಲ. ಹೊಸದಾಗಿ ಕಾಡುತ್ತಿರುವ ಈ ಕೊರೊನಾ ಮಾತ್ರ ಎಲ್ಲಿಲ್ಲದ ಭೀತಿಯನ್ನು ಹುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ- ಮದ್ದಿಲ್ಲದಿರುವುದು ಮತ್ತು ಅತ್ಯಂತ ವೇಗವಾಗಿ ಹರಡುವುದು. ಆದರೆ, ಒಂದು ಮಾತನ್ನು ನೆನಪಿಡಿ. ಕೊರೊನಾದಿಂದಲೇ ನಮ್ಮ ಬದುಕು ನಿಂತು ಹೋಗುವುದಿಲ್ಲ; ಜಗತ್ತು ನಾಶವಾಗುವುದಿಲ್ಲ. ವಿನಾಕಾರಣ ಭಯಪಡಬೇಕಾದ ಅಗತ್ಯವಿಲ್ಲ. ಇದೇ ಅಭಿಪ್ರಾಯವನ್ನು ಪದ್ಮಶ್ರೀ ಪುರಸ್ಕೃತ ಖ್ಯಾತ ವೈದ್ಯ ಬಿ.ಎಂ. ಹೆಗ್ಡೆ ಅವರು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಅವರು, ‘‘ಕೊರೊನಾ ಭೂತವಲ್ಲ. ಹೆದರಬೇಡಿ. ಅದೊಂದು ಕಾಯಿಲೆ. ಬರುತ್ತದೆ. ಹೋಗುತ್ತದೆ. ಹಾಗಂತ ನಿರ್ಲಕ್ಷ್ಯಮಾಡುವುದು ಬೇಡ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಎಚ್ಚರಿಕೆ ಇರಲಿ,’’ ಎನ್ನುತ್ತಾರೆ.
ಹೆಗ್ಡೆ ಅವರ ಮಾತುಗಳು ಅಕ್ಷ ರಶಃ ಸತ್ಯ. ನಮ್ಮೊಳಗೆ ಹುಟ್ಟುವ ಹೆದರಿಕೆ ನಮ್ಮನ್ನು ಕೊಂದು ಹಾಕುತ್ತದೆ. ಹಾಗಂತ, ‘ತಲೆ ಗಟ್ಟಿ ಇದೆ ಎಂದು ಬಂಡೆಗಲ್ಲಿಗೆ ಡಿಕ್ಕಿ ಹೊಡೆಯುವ ಅಗತ್ಯವಿಲ್ಲ’. ಕಾರಣವಿಲ್ಲದೇ ಕೊರೊನಾ ಕುರಿತು ಭಯಗೊಳ್ಳುವುದು ಬೇಡ. ಭವಿಷ್ಯದ ಸ್ಥಿತಿಯನ್ನು ನೆನೆದುಕೊಂಡು ನಮ್ಮೊಳಗಿನ ಧೀಃಶಕ್ತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.

ಲಾಕ್‌ಡೌನ್‌ವೊಂದೇ ಪರಿಹಾರವಲ್ಲ
ಕೊರೊನಾ ನಿಯಂತ್ರಣಕ್ಕೆ ಈಗಿರುವ ಸದ್ಯ ಪರಿಹಾರ ‘ಬ್ರೇಕ್ ದಿ ಚೈನ್’ ಅಂದರೆ, ಸೋಂಕಿತರನ್ನು ಪ್ರತ್ಯೇಕವಾಗಿಸಿ, ವೈರಸ್ ಹರಡುವುದನ್ನು ತಡೆಯುವುದು. ಅದಕ್ಕಾಗಿ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿ, ಮೂರು ಬಾರಿ ಅದನ್ನು ವಿಸ್ತರಿಸಲಾಗಿದೆ. ಆದರೆ, ಇದೊಂದೇ ಪರಿಹಾರವಲ್ಲ. ಲಾಕ್‌ಡೌನ್‌ ವಿಸ್ತರಿಸುತ್ತ ಹೋದರೆ ನಮ್ಮ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದು, ಇಡೀ ದೇಶವೇ ನರಳಬೇಕಾಗಬಹುದು. ಈಗಾಗಲೇ, ಲಾಕ್‌ಡೌನ್‌ ಎಫೆಕ್ಟ್ ಅನ್ನು ದೇಶ ಅನುಭವಿಸುತ್ತಿದೆ. ಹಾಗಾಗಿ, ನಮ್ಮ ಮುಂದಿರುವ ಏಕೈಕ ದಾರಿ, ಕೊರೊನಾದೊಂದಿಗೆ ಬದುಕುವುದು. ‘‘ನಾವಿನ್ನು ಕೊರೊನಾ ಜತೆಗಿನ ಬದುಕನ್ನು ಕಲಿಯಬೇಕಿದೆ,’’ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು ಈ ನೆಲೆಯಲ್ಲಿ. ಯಾಕೆಂದರೆ, ಲಾಕ್‌ಡೌನ್‌ ಹೊರತಾಗಿಯೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂದರೆ, ಅದು ತನ್ನ ತುತ್ತ ತುದಿ ತಲುಪಿಯೇ ಕೆಳಗಿಳಿಯುವುದು ಈಗಿನ ಟ್ರೆಂಡ್ ನೋಡಿದರೆ ಗೊತ್ತಾಗುತ್ತದೆ. ಈಗಾಗಲೇ ಚೀನಾ, ಇಟಲಿ, ಇರಾನ್, ಸ್ಪೇನ್ ರಾಷ್ಟ್ರಗಳಲ್ಲೂ ಹೀಗೆ ಆಗಿದೆ. ಅಲ್ಲೆಲ್ಲ ಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಮದ್ದಿದ್ದರೆ ಬೇರೆಯಾಗಿರುತ್ತಿತ್ತು ಕತೆ
ಒಂದು ವೇಳೆ ಕೊರೊನಾ ವೈರಸ್‌ಗೆ ಮದ್ದು ಇದ್ದರೆ ಈಗಿರುವ ಪರಿಸ್ಥಿತಿ ಉದ್ಭವ ಆಗುತ್ತಿರಲಿಲ್ಲ. ಆರ್ಥಿಕ ಕುಸಿತವೂ ಇರುತ್ತಿರಲಿಲ್ಲ. ಹಾಗಾಗಿ, ಸಾಮಾಜಿಕ ಅಂತರೊಂದಿಗೆ, ಕೊರೊನಾ ಜೊತೆಗೆ ನಮ್ಮ ಜೀವನವನ್ನು ಮರು ರೂಪಿಸಿಕೊಳ್ಳಬೇಕು. ಈಗಿರುವ ಪರಿಹಾರ ಎಂದರೆ, ಎಷ್ಟು ಸಾಧ್ಯವೇ ಅಷ್ಟು ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಡಾ. ಬಿ.ಎಂ. ಹೆಗ್ಡೆ ಅವರು ಈ ಕುರಿತು ಹೇಳಿರುವ ಸಂಗತಿಗಳು ಅನ್ವಯಕಗಳಾಗಿವೆ. ‘‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮೊದಲನೆಯದಾಗಿ ಸಾವಧಾನಿಯಾಗಿರಬೇಕು. ಮನಸ್ಸಿನಲ್ಲಿ ದ್ವೇಷ ಭಾವನೆ ಇರಬಾರದು. ಎಂಥದ್ದೇ ಸಂದರ್ಭದಲ್ಲಿ ಸಮಚಿತ್ತದಿಂದಿರಬೇಕು. ಎರಡನೆಯದಾಗಿ ಆಹಾರ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ಒಳ್ಳೆಯದು. ಮೂರನೆಯದು ವಿಶ್ರಾಂತಿ. ದೇಹಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ವಿಶ್ರಾಂತಿ ಅಗತ್ಯ. ಹೀಗೆ ಮಾಡಿದರೆ, ಖಂಡಿತವಾಗಿಯೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಒಂದೊಮ್ಮೆ ವೈರಸ್ ಸೋಂಕಿತವಾದರೂ ನಾವುದನ್ನು ಮೆಟ್ಟಿ ನಿಲ್ಲಬಹುದು’’ ಎನ್ನುತ್ತಾರೆ ಡಾ. ಬಿ.ಎಂ ಹೆಗ್ಡೆ ಅವರು.

ಉಳಿದಿರುವ ದಾರಿಗಳಾದರೂ ಯಾವುವು?
ಮದ್ದಿಲ್ಲದೇ ಕೊರೊನಾವಂತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಮಗೆ ಉಳಿದಿರುವ ದಾರಿಗಳಾದರೂ ಏನಿವೆ? ಒಂದೊ, ಕೊರೊನಾವನ್ನು ಹರ್ಡ್ ಇಮ್ಯುನಿಟಿ (ಸಮುದಾಯ ಪ್ರತಿರೋಧ ಶಕ್ತಿ) ಮೂಲಕ ತಡೆಯಬಹುದು. ಭಾರತದಂಥ ರಾಷ್ಟ್ರದಲ್ಲಿ ಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಬಲ್ಲದು. ಇದನ್ನು ಹೊರತುಪಡಿಸಿದರೆ, ಸೋಂಕು ತಗುಲಿಸಿಕೊಳ್ಳದಂತೆ ವೈಯಕ್ತಿಕ ನೆಲೆಯಲ್ಲಿ ನಾವೇ ಎಚ್ಚರ ವಹಿಸುವುದು. ಅಂದರೆ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸುವುದು. ಎಷ್ಟು ಸಾಧ್ಯವೋ ಅಷ್ಟು ಜನ ಜಂಗುಳಿಯಾಗದಂತೆ ನೋಡಿಕೊಳ್ಳುವುದು. ಮದ್ದು ಸಿಗೋವರೆಗೂ ಇವಿಷ್ಟೇ ಪರಿಹಾರಗಳು. ಅಲ್ಲಿತನಕ ನಾವು ಕೊರೊನಾದೊಂದಿಗೆ ಹೆಜ್ಜೆ ಹಾಕೋಣ.

————

ಸಕಾರಾತ್ಮಕ ಚಿಂತನೆಯೇ ಮದ್ದು
ಕೊರೊನಾ ಸೋಂಕು, ಲಾಕ್‌ಡೌನ್‌ ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕೆಲಸ ಹಾಗೂ ಆದಾಯವಿಲ್ಲದೆ ಕುಟುಂಬ ನಿರ್ವಹಣೆ ಸಂಬಂಧಿಸಿ ಆತಂಕ ಎದುರಾಗಿದೆ. ಮುಂದಿನ ದಿನಗಳನ್ನು ನಿಭಾಯಿಸುವುದು ಹೇಗೆಂಬ ಭಯದಿಂದ ಉದ್ವೇಗ, ನಿದ್ರಾಹೀನತೆ, ಖಿನ್ನತೆಯಂಥ ಸಮಸ್ಯೆಗಳು ಸಾಮಾನ್ಯ. ಮೂಡ್ ಡಿಸಾರ್ಡರ್, ಮದ್ಯಪಾನ, ಧೂಮಪಾನದಂಥ ದುಶ್ಚಟಗಳಿಗೆ ಅಂಟಿಕೊಂಡು ಹೊರಬರಲಾರದೆ ನರಳುವುದು(ಅಡಿಕ್ಷನ್), ಆನ್‌ಲೈನ್‌ ಜೂಜಾಟ, ನೀಲಿಚಿತ್ರ ವೀಕ್ಷಣೆ, ಟಿವಿ-ಮೊಬೈಲ್‌ಗಳ ಅತಿಯಾದ ಬಳಕೆಯಂತ ಹೊಸ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು, ಆತ್ಮಹತ್ಯೆಗೆ ಶರಣಾಗುವಂಥ ಪ್ರಕರಣಗಳೂ ಕಂಡುಬರುತ್ತಿವೆ. ಈ ಸ್ಥಿತಿಯಿಂದ ಹೊರಬಂದು ಕೊರೊನಾ ಭೀತಿಯ ನಡುವೆಯೂ ಉತ್ತಮ ಜೀವನ ನಡೆಸಬಹುದು.
– ಯಾವುದೇ ಸಮಸ್ಯೆಯಾದರೂ ಅದನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಮತ್ತು ಎದುರಿಸುತ್ತೇವೆ ಎಂಬುವುದರಲ್ಲಿ ಅದರ ಪರಿಹಾರವಿದೆ. ಪ್ರತಿ ವಿಷಯದಲ್ಲಿ ಧನಾತ್ಮಕತೆಯೊಂದಿಗೆ ನಿರ್ವಹಿಸಬೇಕು.
– ಕೊರೊನಾ ಭೀತಿ ನಿಮ್ಮೊಬ್ಬರಿಗೇ ಬಂದಿರುವುದಲ್ಲ. ಇದು ಪ್ರತಿಯೊಬ್ಬರ ಸಮಸ್ಯೆ. ಆದ್ದರಿಂದ ನಾನು ಹಾಗೂ ಸಮಾಜದ ಒಳಿತಿಗಾಗಿ ಹೆಜ್ಜೆ ಇಡುತ್ತೇನೆ ಎಂಬ ನಿರ್ಧಾರಕ್ಕೆ ಬನ್ನಿ
– ಕೊರೊನಾ ನಂತರದಲ್ಲಿ ವರ್ಕ್ ಫ್ರಮ್ ಹೋಂ, ಆನ್‌ಲೈನ್‌ ಕ್ಲಾಸ್‌ಗಳಿಗೆ ಆದ್ಯತೆ ದೊರೆಯಬಹುದು. ಹಾಗಾಗಿ ತಂತ್ರಜ್ಞಾದ ಸದ್ಬಳಕೆ ಹಾಗೂ ಜ್ಞಾನ ಹೆಚ್ಚಿಸಿಕೊಳ್ಳುವತ್ತ ಗಮನ ಕೊಡಿ
– ನನ್ನನ್ನು ನಾನು ಹೇಗೆ ಉತ್ತಮ ಪಡಿಸಿಕೊಳ್ಳಬೇಕು ಎಂಬುವುದರ ನಿಟ್ಟಿನಲ್ಲಿ ಹೊಸ ಆಲೋಚನೆ ಹಾಗೂ ಪರಿಹಾರಗಳನ್ನು ಹುಡುಕಿ. ಪೇಂಟಿಂಗ್‌ನಂಥ ಸೃಜನಾತ್ಮಕ ಹವ್ಯಾಸಗಳನ್ನು ಬೆಳೆಸಿಕೊಳ್ಳಿ.
– ಮಕ್ಕಳ ಮೇಲೆ ಒತ್ತಡ ಬೇಡ. ಸಮಾಧಾನವಾಗಿ ತಿಳಿಸಿಕೊಡಿ.
– ವಯಸ್ಸಾದವರಿಗೆ ಪುಸ್ತಕ ಓದುವುದು ಮತ್ತಿತರ ಹವ್ಯಾಸಗಳನ್ನು ಮುಂದುವರಿಸಲು ಬೆಂಬಲ ನೀಡಿ ಹಾಗೂ ಅವರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ದೊರಕುತ್ತದೆ ಎಂಬ ಧೈರ್ಯ ಮೂಡಿಸಿ.
– ನಿಮಗೆ ಅಥವಾ ಮನೆಯವರಿಗೆ ತಮ್ನನ್ನೇ ತಾವು ನಿರ್ವಹಣೆ ಮಾಡಿಕೊಳ್ಳಲಾಗದಷ್ಟು ಮಾನಸಿಕವಾಗಿ ತೀವ್ರ ಒತ್ತಡ ಉಂಟಾದಾಗ ತಡ ಮಾಡದೆ ಮಾನಸಿಕ ತಜ್ಞರನ್ನು ಭೇಟಿಯಾಗಿ.
– ಜಿಲ್ಲಾ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ತಜ್ಞರು ಸಿಗುತ್ತಾರೆ. ಇಲ್ಲವಾದರೆ ನಿಮ್ಹಾನ್ಸ್‌ನಿಂದ 080-46110007 ಟಾಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಖಾಸಗಿ ಆಸ್ಪತ್ರೆಗಳ
ಹೆಲ್ಪ್‌ಲೈನ್‌ ಅಥವಾ ನೇರವಾಗಿಯೂ ಸಂಪರ್ಕಿಸಬಹುದು.

-ಡಾ. ಕಣ್ಣಪ್ಪ ಶೆಟ್ಟಿ ಮಾನಸಿಕ ಆರೋಗ್ಯ ತಜ್ಞ, ಅಭಯ್ ಆಸ್ಪತ್ರೆ, ಬೆಂಗಳೂರು

ಕೊರೊನಾ ಮತ್ತು ಪ್ರಕೃತಿ ಚಿಕಿತ್ಸೆ
ಔಷಧವೇ ಆಹಾರವಾಗಿರುವ ಕಾಲಘಟ್ಟದಲ್ಲಿ ಆಹಾರವನ್ನು ಔಷಧವನ್ನಾಗಿ ಸೇವಿಸಬೇಕೆನ್ನುವ ಮಾದರಿಯ ಜೀವನಶೈಲಿ ರೂಢಿಸಿಕೊಳ್ಳಬೇಕಾಗಿದೆ. ಪ್ರಕೃತಿ ಚಿಕಿತ್ಸೆಯ ಸಿದ್ಧಾಂತದ ಪ್ರಕಾರ ಕಾಯಿಲೆಯ ಮೂಲ ಕ್ರಿಮಿಗಳಲ್ಲ, ಕ್ರಿಮಿಗಳನ್ನು ಬೆಳೆಸುವ ಕಲ್ಮಷಗಳು. ಇವುಗಳು ದೇಹದಲ್ಲಿ ಸಂಗ್ರಹಗೊಂಡು ದೇಹದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾದಾಗ ಕ್ರಿಮಿಗಳ ಸಂಖ್ಯೆ ಅಧಿಕವಾಗಿ ಕಾಯಿಲೆಗೆ ಕಾರಣವಾಗುತ್ತವೆ. ಪ್ರಾಕೃತಿಕ, ಸಂಪ್ರದಾಯಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ರೋಗದಿಂದ ರಕ್ಷ ಣೆ ಸಾಧ್ಯೆ.
– ಮನೆಯಲ್ಲೇ ತಯಾರಿಸಿದ ಆಹಾರಕ್ಕೆ, ಅದರಲ್ಲೂ ಸಸ್ಯಾಹಾರ ಸೇವನೆಗೆ ಹೆಚ್ಚಿನ ಆದ್ಯತೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ. ದಿನಕ್ಕೆ ಕನಿಷ್ಠ 3 ಲೀ. ನೀರು ಕುಡಿಯಿರಿ.
– ಪ್ರತಿದಿನ ಕನಿಷ್ಠ 4 ಬಾರಿ ಸೂರ್ಯನಮಸ್ಕಾರ, ಯೋಗಾಸನಗಳು, ಪ್ರಾಣಾಯಾಮ ಮತ್ತು 1 ಗಂಟೆ ಧ್ಯಾನ ಮಾಡಿ. ಜುನೇತಿ, ಸೂತ್ರನೇತಿ, ಕಪಾಲಭಾತಿಯನ್ನು ಅಭ್ಯಸಿಸುಬೇಕು.
– ಮಾಸ್ಕ್ ಧರಿಸುವುದು ಕಡ್ಡಾಯ. ಪ್ರತಿದಿನ ಬೆಳಗ್ಗೆ, ಸಂಜೆ ಭಸ್ತ್ರಿಕಾ, ನಾಡಿಶೋಧನ, ಭ್ರಾಮರಿಯಂತ ದೀರ್ಘ ಪ್ರಾಣಯಾಮ ಮಾಡಿ.
– ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿಣ, ಕರಿಮೆಣಸು, ತುಳಸಿ, ದಾಲ್ಚಿನ್ನಿ, ಶುಂಠಿ, ಬೆಳ್ಳುಳ್ಳಿಯ ಕಷಾಯವನ್ನು ದಿನಕ್ಕೊಮ್ಮೆ ಸೇವಿಸಿ. ರಾತ್ರಿಯಲ್ಲಿ ನೀರು ಅಥವಾ ಹಾಲಿಗೆ ಅರಿಶಿಣ ಪುಡಿ ಸೇರಿಸಿ ಬಿಸಿ ಮಾಡಿ ಕುಡಿಯಿರಿ.
– ದುಶ್ಚಟಗಳನ್ನು ತ್ಯಜಿಸುವುದು ಹಾಗೂ ದೂರವಿರುವುದು.

– ಡಾ. ಗಂಗಾಧರ ವರ್ಮಾ ಬಿ.ಆರ್, ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯ, ದಾವಣಗೆರೆ.

ಆಯುರ್ವೇದದಲ್ಲಿ ಪರಿಹಾರ
ಪ್ರಪಂಚದಲ್ಲಿ ಕೊರೊನಾಗಿಂತ ಭಯಾನಕವಾಗಿರುವ ಇನ್ನೂ ಮಾನವನ ಗಮನಕ್ಕೇ ಬಾರದ ಎಷ್ಟೋ ವೈರಾಣುಗಳಿವೆ. ಆದ್ದರಿಂದ ಅವುಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿಯುವುದು ಮನುಷ್ಯನಿಗೆ ಅನಿವಾರ್ಯ. ಅದಕ್ಕೆ ಬೇಕಾಗಿರುವುದು ಅವನ ಬಲವಾದ ರೋಗಕ್ಷ ಮತಾ ಶಕ್ತಿ. ಅದನ್ನು ಪಡೆಯುದಕ್ಕಾಗಿ ಇಡೀ ಪ್ರಪಂಚವೇ ಇಂದು ಆಯುರ್ವೇದದತ್ತ ಮುಖ ಮಾಡಿದೆ. ಸಾಮಾನ್ಯವಾಗಿ ಗಾಳಿಯಿಂದ ಹಬ್ಬುವ ರೋಗಗಳು ವಸಂತ ಋುತುವಿನಲ್ಲಿ ಅಂದರೆ ಜನವರಿಯಿಂದ ಜೂನ್ ತಿಂಗಳವರೆಗೆ ಬರುತ್ತವೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಸಂತ ಋುತುಚರ್ಯವನ್ನು ಪಾಲಿಸಬೇಕು.
– ಅರಿಷಿಣದ ಹೊಗೆ ಸೇವನೆ, ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸುವುದು, ಕಾಳುಮೆಣಸು ಇಂಗಿನ ಕಷಾಯವನ್ನು ಎರಡೆರಡು ಹನಿ ಮೂಗಿಗೆ ಬಿಟ್ಟುಕೊಳ್ಳಬೇಕು.
– ಶುಂಠಿ ಹಾಕಿ ಕುದಿಸಿದ ನೀರನ್ನು ಕುಡಿಯುವುದು. ತಣ್ಣನೆಯ ವಸ್ತುಗಳನ್ನು ಉಪಯೋಗಿಸದೇ ಇರುವುದು, ಸಿಹಿ ಮತ್ತು ಕರಿದ ಪದಾರ್ಥ ಸೇವಿಸದೇ ಇರುವುದು ಉಪಯುಕ್ತವಾಗುತ್ತದೆ.
– ಪ್ರತಿ ವರ್ಷ ವಸಂತ ಋುತುವಿನಲ್ಲಿ ಶೋಧನವಾಗಿರುವ ವಮನ, ವಿರೀಚನಗಳನ್ನು ಮಾಡಿಸಿಕೊಳ್ಳುವುದು
– ಆಹಾರ ಏರುಪೇರಾದಲ್ಲಿ, ವಾರಕ್ಕೆ 1 ದಿನ ಉಪವಾಸ ಮಾಡಿ.
– ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟು ಬೆಳಿಗ್ಗೆ ಅದಕ್ಕೆ ಜೇನು ಸೇರಿಸಿ ಕುಡಿಯಿರಿ. ಮಕ್ಕಳಿಗೆ ಪ್ರತಿ ದಿನದಂತೆ ಒಂದು ತಿಂಗಳು ಸ್ವರ್ಣ ಪ್ರಾಶನವನ್ನು ಹಾಕುವುದು
– ಚ್ಯವನಪ್ರಾಶ, ದ್ರಕ್ಷ ವಲೇಹ, ಕೂಷ್ಮಾಂಡ ರಸಾಯನ, ಆಮಲಕಿ ರಸಾಯನ ಮುಂತಾದ ಲೆಹಗಳನ್ನು ನಿತ್ಯ ಸೇವಿಸುವುದು
– ಹೋಮಗಳನ್ನು ಮಾಡುವುದು. ಇದರಿಂದ ಗಾಳಿಯು ಶುದ್ದವಾಗುತ್ತದೆ.

– ಡಾ. ಪಲ್ಲವಿ ಕೆ.ಎಸ್. ಅದ್ವೈತ ಆಯುರ್ವೇದ ಚಿಕಿತ್ಸಾಲಯ, ಶಿವಮೊಗ್ಗ

ಆಹಾರದಲ್ಲಿರಲಿ ಸೂಕ್ಷ್ಮ ಪೋಷಕಾಂಶಗಳು
ರೋಗಗಳನ್ನು ನಿಭಾಯಿಸುವಲ್ಲಿ ಆಹಾರ ಹಾಗೂ ಆಹಾರ ಪದ್ಧತಿ ಬಹುಮುಖ್ಯ. ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ಹೊರಗಿನ ಆಹಾರ ಸೇವನೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಅನುಸರಿಸುವ ಅಪಾಯವಿರುತ್ತದೆ. ಈ ಮೂಲಕ ರೋಗಕ್ಕೆ ಆಹ್ವಾನ ನೀಡುವ ಬದಲಿಗೆ ರೋಗ ನಿರೋಧಕಶಕ್ತಿ ಹೆಚ್ಚಿಸುವ ಆಹಾರ ಬಹುಮುಖ್ಯವಾಗಿದ್ದು, ಮನೆಯ ಆಹಾರ ಸೇವನೆಯನ್ನು ಮುಂದುವರಿಸಿ.
– ವಿಟಮಿನ್ ‘ಸಿ’ ಆಹಾರ: ನಿತ್ಯ 40 ಎಂಜಿ ‘ಸಿ’ ಪೋಷಕಾಂಶದ ಅಗತ್ಯ. ಸೀಬೆಹಣ್ಣು, ನೆಲ್ಲಿಕಾಯಿ, ನಿಂಬೆ ಮತ್ತಿತರ ಹುಳಿ ಅಂಶವಿರುವ ಹಣ್ಣುಗಳು, ಮಾವಿನ ಕಾಯಿ, ಕ್ಯಾಪ್ಷಿಕಂ ಮತ್ತಿತರ ತರಕಾರಿಗಳಲ್ಲಿ ಸಿಗುತ್ತದೆ.
– ಝಿಂಕ್ (ಸತು): ನಿತ್ಯ 12 ಎಂಜಿ ಸತುವಿನ ಅಂಶಗಳ ಅಗತ್ಯ. ದವಸ ಧಾನ್ಯ, ಬೇಳೆ ಸೇರಿ ವಿವಿಧ ಕಾಳುಗಳು, ಸೋಯಾಬೀನ್ಸ್, ಎಣ್ಣೇಕಾಳು
– ಮೆಗ್ನೀಷಿಯಂ: ಬಾಳೆಹಣ್ಣು, ಜೋಳ, ಕಪ್ಪು ಎಳ್ಳು, ಹಸಿರು ತರಕಾರಿಗಳಲ್ಲಿ ಹೇರಳವಾದ ಮೆಗ್ನೀಷಿಯಂ ಇರುತ್ತವೆ.
– ಎಳನೀರು, ನಿಂಬೆ ರಸ, ಮಜ್ಜಿಗೆ, ತರಕಾರಿ ಸೂಪ್‌ಗಳ ರೋಗನಿರೋಧಕ ಶಕ್ತಿ ಹೆಚ್ಚಳ.

– ಡಾ. ಉಷಾ ಹರೀಶ್ ಆಹಾರ ತಜ್ಞರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top