– ಲಾಕ್ಡೌನ್ ಮತ್ತಷ್ಟು ಸಡಿಲ | ಮೇ 25 ರಿಂದ ದೇಶೀಯ ವಿಮಾನ ಹಾರಾಟ
– ಕೈಗಾರಿಕೆಗಳಿಗೆ 9.25% ಬಡ್ಡಿಯಲ್ಲಿ ಸಾಲ | ವಯೋವಂದನಾ ವಿಸ್ತರಣೆ.
ಹೊಸದಿಲ್ಲಿ: ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆಯ ಭಾಗವಾಗಿ ಸರಕಾರ ಮತ್ತಷ್ಟು ಉಪಕ್ರಮಗಳನ್ನು ಪ್ರಕಟಿಸಿದೆ. ಇದರ ಭಾಗವಾಗಿ ಸೋಮವಾರದಿಂದ (ಮೇ 25) ದೇಶಾದ್ಯಂತ ದೇಶೀಯ ವಿಮಾನಗಳ ಸೇವೆ ಆರಂಭವಾಗಲಿದೆ.
‘‘ಹಂತ ಹಂತವಾಗಿ ವಿಮಾನಯಾನ ಆರಂಭವಾಗಲಿದೆ. ಈ ಬಗ್ಗೆ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಏರ್ಪೋರ್ಟ್ಗಳಿಗೆ ಮಾಹಿತಿ ನೀಡಿ, ಸೋಮವಾರದ ವೇಳೆಗೆ ಹಾರಾಟಕ್ಕೆ ಸಜ್ಜಾಗುವಂತೆ ಸೂಚಿಸಲಾಗಿದೆ. ಪ್ರಯಾಣಿಕರ ಸಂಚಾರಕ್ಕೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು,’’ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರು ಬುಧವಾರ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿಯಲ್ಲಿ ಇನ್ನು ಮುಂದೆ ವಿಮಾನ ಪ್ರಯಾಣವು ವಿಭಿನ್ನವಾಗಿರಲಿದ್ದು ಪ್ರಯಾಣಿಕರು, ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳು ಹಲವು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಲೇಬೇಕು. ಪ್ರಯಾಣಿಕರಿಗೆ ಆರೋಗ್ಯ ದೃಢೀಕರಣಕ್ಕೆ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ ಮಾಡುವ ಸಾಧ್ಯತೆಗಳಿವೆ. ಸೋಂಕುನಿವಾರಕ ಸುರಂಗಗಳನ್ನು ವಿಮಾನ ನಿಲ್ದಾಣಗಳ ಬಳಿ ನಿರ್ಮಾಣ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿವೆ.
ರಾಜ್ಯಗಳ ಅನುಮತಿಗೆ ಮನವಿ
ವಿಮಾನ ಹಾರಾಟಕ್ಕೆ ರಾಜ್ಯ ಸರಕಾರಗಳ ಸಹಕಾರ ಅತ್ಯಗತ್ಯ. ಏರ್ಪೋರ್ಟ್ಗಳ ಕಾರ್ಯನಿರ್ವಹಣೆಗೆ ರಾಜ್ಯಗಳು ಅನುಮತಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಬೆಂಗಳೂರು, ದಿಲ್ಲಿ ಮುಂಬಯಿ ಸೇರಿದಂತೆ ಬಹುತೇಕ ಮಹಾನಗರಗಳು ರೆಡ್ಝೋನ್ನಲ್ಲಿ ಇರುವುದರಿಂದ ರಾಜ್ಯ ಸರಕಾರಗಳ ಅನುಮತಿ ನಿರ್ಣಾಯಕವಾಗಲಿದೆ.
ವಯೋ ವಂದನ ವಿಸ್ತರಣೆ
ಹಿರಿಯ ನಾಗರಿಕರಿಗೆ ನೆರವಾಗುವ ಪ್ರಧಾನಮಂತ್ರಿ ವಯೋ ವಂದನಾ ಪಿಂಚಣಿ ಯೋಜನೆಯನ್ನು (ಪಿಎಂವಿವಿವೈ) 2023ರ ಮಾ.31ರ ತನಕ ವಿಸ್ತರಿಸಲು ಕೇಂದ್ರ ಸಂಪುಟ ತೀರ್ಮಾನಿಸಿದೆ. ಹೂಡಿಕೆ ಮೂಲಕ ಹೆಚ್ಚಿನ ಬಡ್ಡಿ ಆದಾಯ ಗಳಿಸಲು ಹಿರಿಯ ನಾಗರಿಕರಿಗೆ ಯೋಜನೆ ನೆರವಾಗಲಿದೆ.
ನರೇಗಾಗೆ ಹೆಚ್ಚಿದ ಬೇಡಿಕೆ
ಇಡೀ ರಾಜ್ಯ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಧ್ಯೆಯೇ ಗ್ರಾಮೀಣ ಕರ್ನಾಟಕದಲ್ಲಿ ಆಶಾದಾಯಕ ಬೆಳವಣಿಗೆ ಆರಂಭವಾಗಿದ್ದು, ಬುಧವಾರ ಒಂದೇ ದಿನ 9.5 ಲಕ್ಷ ಜನರು ನರೇಗಾ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಂಭವನೀಯ ಹೊಸ ನಿಯಮಗಳು
– ವಿಮಾನಯಾನಿಗಳಿಗೆ ಒಂದೇ ಬ್ಯಾಗ್ ತರಲು ಅವಕಾಶ
– ಹಿಂದಿಗಿಂತ 2 ಗಂಟೆ ಮೊದಲು ನಿಲ್ದಾಣಕ್ಕೆ ಬರಬೇಕು
– ಪ್ರವೇಶ/ನಿರ್ಗಮನದ ವೇಳೆ ಥರ್ಮಲ್ ಸ್ಕ್ಯಾನ್
– ಆರೋಗ್ಯ ಸೇತು ಆ್ಯಪ್, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
– ಆನ್ಲೈನ್ನಲ್ಲೇ ಚೆಕ್-ಇನ್, ಬೋರ್ಡಿಂಗ್ ಪಾಸ್
– ಚೆಕ್-ಇನ್, ವೇಟಿಂಗ್ ಎಲ್ಲೆಡೆ ಸಾಮಾಜಿಕ ಅಂತರ
– 80 ವರ್ಷಕ್ಕೂ ಮೇಲ್ಪಟ್ಟವರಿಗೆ ಪ್ರಯಾಣ ನಿರ್ಬಂಧ
– ಮುಂದಿನ 6 ಗಂಟೆಯಲ್ಲಿ ಹೊರಡಲಿರುವ ವಿಮಾನ ಪ್ರಯಾಣಿಕರಿಗಷ್ಟೇ ಏರ್ಪೋರ್ಟ್ಗೆ ಅನುಮತಿ
ಎಂಎಸ್ಎಂಇ ಪ್ಯಾಕೇಜ್ಗೆ ಅಸ್ತು
ಕೇಂದ್ರದ 20 ಲಕ್ಷ ಕೋಟಿ ರೂ. ‘ಅನಿರ್ಭರ ಭಾರತ್’ ಪ್ಯಾಕೇಜ್ ಭಾಗವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್ಎಂಇ) 3 ಲಕ್ಷ ಕೋಟಿ ರೂ. ಅಡಮಾನ ರಹಿತ ಸಾಲ ನೀಡುವ ಯೋಜನೆಗೆ ಬುಧವಾರ ಕೇಂದ್ರ ಸಂಪುಟದ ಅನುಮೋದನೆ ದೊರೆತಿದೆ. ಈ ಸಾಲಕ್ಕೆ ಶೇ.9.25ರ ಬಡ್ಡಿಯನ್ನು ನಿಗದಿ ಮಾಡಲಾಗಿದೆ.
ಕ್ರೀಡೆಗಳಿಗೆ ಅನುಮತಿ
ಕಬಡ್ಡಿ, ಜಿಮ್ ಮತ್ತು ಈಜು ಹೊರತಾಗಿ ಉಳಿದೆಲ್ಲಾ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.