ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಲ್‌ಜಿ ಪಾಲಿಮರ್ಸ್ ಫ್ಯಾಕ್ಟರಿಯಲ್ಲಿ ನಡೆದ ವಿಷಾನಿಲ ದುರಂತ, ಮಧ್ಯಪ್ರದೇಶದ ಭೋಪಾಲ್ ವಿಷಾನಿಲ ದುರಂತವನ್ನು ನೆನಪಿಸಿಕೊಂಡು ಇಡೀ ದೇಶವೇ ಬೆಚ್ಚುವಂತೆ ಮಾಡಿದೆ. ಈ ಫ್ಯಾಕ್ಟರಿ ಯಾರದು, ವಿಷಾನಿಲ ಯಾವುದು, ಅದರಿಂದಾಗುವ ಪರಿಣಾಮವೇನು? ಇಲ್ಲಿದೆ ವಿವರ.
ಯಾವುದೀ ಫ್ಯಾಕ್ಟರಿ?
ವಿಷಾನಿಲ ದುರಂತ ನಡೆದ ಎಲ್‌ಜಿ ಪಾಲಿಮರ್ಸ್ ಫ್ಯಾಕ್ಟರಿ ವಿಶಾಖಪಟ್ಟಣದಿಂದ 15 ಕಿಲೋಮೀಟರ್ ದೂರದ ಗೋಪಾಲಪಟ್ಟಣಂ ಪೇಟೆಯ ಆರ್ ವೆಂಕಟಾಪುರಂ ಗ್ರಾಮದಲ್ಲಿದೆ. ಈ ಫ್ಯಾಕ್ಟರಿಯನ್ನು ಸ್ಥಾಪಿಸಿದ್ದು 1961ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಎಂಬ ಹೆಸರಿನಿಂದ, ಪಾಲಿಸ್ಟಿರೀನ್ ರಾಸಾಯನಿಕ ಉತ್ಪಾದನೆಗಾಗಿ ಆರಂಭಿಸಲಾಯಿತು. 1978ರಲ್ಲಿ ಇದನ್ನು ಯುಬಿ ಗ್ರೂಪ್‌ನ ಮೆಕ್ಡವೆಲ್ ಆ್ಯಂಡ್ ಕೋ ಕಂಪನಿಯಲ್ಲಿ ವಿಲೀನಗೊಳಿಸಲಾಯಿತು. ಇದನ್ನು 1997ರಲ್ಲಿ ದಕ್ಷಿಣ ಕೊರಿಯ ಮೂಲದ ಎಲ್‌ಜಿ ಕೆಮಿಕಲ್ಸ್ ಖರೀದಿಸಿ, ಎಲ್‌ಜಿ ಪಾಲಿಮರ್ಸ್ ಎಂದು ಮರುನಾಮಕರಣ ಮಾಡಿತು. ಈ ಕಂಪನಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಸಿ ಜನರಲ್ ಮೋಟಾರ್ಸ್ ಹಾಗೂ ವೋಕ್ಸ್‌ವ್ಯಾಗನ್‌ಗಳಿಗೆ ನೀಡುತ್ತದೆ. ಇದು ದಕ್ಷಿಣ ಕೊರಿಯದ ಅತ್ಯಂತ ದೊಡ್ಡ ಹಾಗೂ ಜಗತ್ತಿನ ಹತ್ತನೇ ದೊಡ್ಡ ಕೆಮಿಕಲ್ ಕಂಪನಿ. ನಾವು ಬಳಸುವ ‘ಎಲ್‌ಜಿʼ ಹೆಸರಿನ ಎಲೆಕ್ಟ್ರಾನಿಕ್ ಉಪಕರಣಗಳು ಕೂಡಾ ಇದೇ ಕಂಪನಿ ಗ್ರೂಪ್‌ಗೆ ಸೇರಿದ್ದು. ಇದರ ಕೇಂದ್ರ ಕಚೇರಿ ದ.ಕೊರಿಯದ ಸಿಯೋಲ್‌ನಲ್ಲಿದೆ.
ಏನು ನಡೆಯಿತು?
40 ದಿನಗಳ ಕಾಲ ಲಾಕ್‌ಡೌನ್ ಪರಿಣಾಮ ಫ್ಯಾಕ್ಟರಿ ಕೆಲಸ ನಿಲ್ಲಿಸಲಾಗಿತ್ತು. ಗುರುವಾರ ಫ್ಯಾಕ್ಟರಿಯನ್ನು ಪುನಾರಂಭಗೊಳಿಸಲು ಉದ್ದೇಶಿಸಲಾಗಿತ್ತು. ಕಾರ್ಖಾನೆಯ ಸ್ಟೋರೇಜ್ ಟ್ಯಾಂಕ್‌ನಲ್ಲಿ ಸುಮಾರು 1800 ಟನ್‌ಗಳಷ್ಟು ಸ್ಟೈರೀನ್ ಸಂಗ್ರಹವಿತ್ತು. 40 ದಿನಗಳ ಕಾಲ ಸಂಗ್ರಹಿಸಲ್ಪಟ್ಟದ್ದು ಹಾಗೂ ವಾತಾವರಣದಲ್ಲಿದ್ದ ಹೆಚ್ಚಿನ ಉಷ್ಣತಾಮಾನದಿಂದಾಗಿ ಸ್ಟೈರೀನ್‌ನ ಅದರಷ್ಟಕ್ಕೇ ಪಾಲಿಮರೀಕರಣಕ್ಕೊಳಗಾಗಿ, ವಾತಾವರಣದಲ್ಲಿ ಸೇರಿಕೊಳ್ಳಲು ಆರಂಭವಾಗಿರಬಹುದು ಎಂದು ಉದ್ಯಮ ಸಚಿವರು ಹೇಳಿದ್ದಾರೆ.
ಏನಿದು ಸ್ಟೈರೀನ್?
ಸ್ಟೈರೀನ್ ಎಂಬುದು ಬಣ್ಣವಿಲ್ಲದ ಅಥವಾ ನಸುಹಳದಿ ಬಣ್ಣವಿರಬಹುದಾದ ಒಂದು ರಾಸಾಯನಿಕ. ಇದನ್ನು ಬೆಂಜೀನ್ ರಾಸಾಯನಿಕದಿಂದ ಪಡೆಯಲಾಗುತ್ತದೆ. ರಸಾಯನಶಾಸ್ತ್ರದಲ್ಲಿ ಇದರ ಶಾಸ್ತ್ರೀಯ ಹೆಸರು ಇಥೆನೈಲ್ ಬೆಂಜೀನ್, ವಿನೈಲ್ ಬೆಂಜೀನ್ ಅಥವಾ ಫಿನೈಲ್ ಈಥೀನ್. ಇದನ್ನು ಪಾಲಿಸ್ಟೈರೀನ್ ಪ್ಲಾಸ್ಟಿಕ್, ಅಂಟು ಮತ್ತು ರೆಸಿನ್‌ಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಇದು ಗಾಳಿಯಲ್ಲಿ ಬೇಗನೆ ಆವಿಯಾಗುತ್ತದೆ. ಸ್ಟೈರೀನ್ ರಾಸಾಯನಿಕ ತೀವ್ರ ದಹನಶೀಲ. ಉರಿಯುವಾಗ ಇದು ವಿಷಕಾರಿ ಹೊಗೆಯನ್ನೂ ಹುಟ್ಟುಹಾಕುತ್ತದೆ.
ಆರೋಗ್ಯದ ಮೇಲೆ ಏನು ಪರಿಣಾಮ?
ಸ್ಟೈರೀನ್ ರಾಸಾಯನಿಕ ಚರ್ಮದ ಮೇಲೆ ಬಿದ್ದರೆ ಚರ್ಮ ಸುಟ್ಟುಹೋಗುತ್ತದೆ. ಈ ಅನಿಲವನ್ನು ಉಸಿರಾಡಿದರೆ ಕಣ್ಣೂ ಉರಿಯುತ್ತದೆ. ಗಂಟಲು ತುರಿಕೆ ಆರಂಭವಾಗುತ್ತದೆ. ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಉಸಿರಾಟಕ್ಕೆ ತೊಂದರೆಯಾಗಬಹುದು. ಹೆಚ್ಚಿನ ಪ್ರಮಾಣದಲ್ಲಿಇದು ಶ್ವಾಸಕೋಶಕ್ಕೆ ಹೋದರೆ ದೇಹದ ಪ್ರಮುಖ ನರವ್ಯವಸ್ಥೆಗೆ ಘಾಸಿಯಾಗಬಹುದು. ತಲೆನೋವು, ಸುಸ್ತು, ಅಶಕ್ತಿ, ಕಿವುಡು, ಖಿನ್ನತೆ ಇತ್ಯಾದಿ ಬಾಧಿಸಬಹುದು. ತಕ್ಷಣವೇ ಮೂರ್ಛೆ ತಪ್ಪಬಹುದು. ಲ್ಯುಕೇಮಿಯಾ, ಲಿಂಫೋಮಾ ಮೊದಲಾದ ದೀರ್ಘಕಾಲಿಕ ಕಾಯಿಲೆಗಳ ಜನನಕ್ಕೂ ಕಾರಣವಾಗಬಹುದು. ಇದರ ಹೆಚ್ಚಿನ ಅಥವಾ ನಿರಂತರ ಒಳಸೇರುವಿಕೆಯಿಂದ ಕ್ಯಾನ್ಸರ್ ಕೂಡ ಉಂಟಾಗಬಹುದು ಎಂದು ಕೆಲವು ಅಧ್ಯಯನಗಳ ಹೇಳಿವೆ. ಮನುಷ್ಯರಿಗಿಂತಲೂ ಪ್ರಾಣಿಗಳಿಗೆ ಇದು ಹೆಚ್ಚು ಅಪಾಯಕಾರಿ. ವಿಶಾಖಪಟ್ಟಣದಲ್ಲೂಸಾಕಷ್ಟು ಪಕ್ಷಿ-ಪ್ರಾಣಿಗಳು ಸತ್ತಿವೆ.
ಭೋಪಾಲ್ ಯೂನಿಯನ್ ಕಾರ್ಬೈಡ್ ವಿಷಾನಿಲ ದುರಂತ
ಜಗತ್ತಿನ ಅತಿ ಕೆಟ್ಟ ವಿಷಾನಿಲ ದುರಂತಗಳಲ್ಲೊಂದು ಎಂದು ಮಧ್ಯಪ್ರದೇಶದ ಭೋಪಾಲ್ನ ವಿಷಾನಿಲ ದುರಂತ ಕರೆಸಿಕೊಂಡಿದೆ. 1984ರ ಡಿಸೆಂಬರ್ 2ರ ಮಧ್ಯರಾತ್ರಿ ಇಲ್ಲಿನ ಯೂನಿಯನ್ ಕಾರ್ಬೈಡ್ ರಾಸಾಯನಿಕ ಕಾರ್ಖಾನೆಯಿಂದ ಮೀಥೈಲ್ ಐಸೋಸೈನೇಟ್ ಎಂಬ ರಾಸಾಯನಿಕ ಗಾಳಿಗೆ ಸೇರಿತು. ಸುತ್ತಮುತ್ತಲಿನ ಸುಮಾರು 4000 ಮಂದಿ ವಿಷಾನಿಲ ಸೇವಿಸಿ ಸತ್ತರು. ಸುಮಾರು 5 ಲಕ್ಷ ಮಂದಿ ಶಾಶ್ವತ ಅಥವಾ ಭಾಗಶಃ ಆರೋಗ್ಯ ಹಾನಿಗೀಡಾದರು. ಕಂಪನಿಯ ಸಿಇಒ ವಾರನ್ ಆಂಡರ್ಸನ್ ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾದ; ಭಾರತದ ಕಾನೂನಿನ ಕೈಗಳಿಗೆ ಸಿಗಲೇ ಇಲ್ಲ.
ಜಿಐಎಎಲ್ ಪೈಪ್‌ಲೈನ್
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಗರಂನಲ್ಲಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಜಿಐಎಎಲ್) ಭೂಗತ ಅನಿಲ ಪೈಪ್‌ಲೈನ್ 2014ರ ಜೂನ್ 27ರಂದು ಸ್ಫೋಟಗೊಂಡು ಬೆಂಕಿ ಅನಾಹುತ ಸಂಭವಿಸಿ 15 ಜನ ಸತ್ತು 40 ಮಂದಿ ಗಾಯಗೊಂಡರು. ಸ್ಫೋಟದಿಂದ ಸೃಷ್ಟಿಯಾದ ಬೆಂಕಿ ಹಲವಾರು ಎಕರೆಗಳಷ್ಟು ವ್ಯಾಪಿಸಿ ಮನೆಗಳನ್ನು ಆಹುತಿ ತೆಗೆದುಕೊಂಡಿತು.
ತಡೆಗಟ್ಟಲು ಕಾನೂನು ಇದೆಯೇ?
ಭಾರತದಲ್ಲಿ ಕೆಮಿಕಲ್ ಫ್ಯಾಕ್ಟರಿಗಳು ಹಾಗೂ ಅವುಗಳ ಉತ್ಪನ್ನಗಳ ಮೇಲೆ ನಿಗಾ ಇಡಲು ಸೂಕ್ತವಾದ ಒಂದು ಕಾನೂನು ಇಲ್ಲ. ಸದ್ಯ ಇವುಗಳ ನಿಯಂತ್ರಣಕ್ಕೆ ನೆರವಿಗೆ ಬರುವ ಕಾಯಿದೆಗಳೆಂದರೆ, 1. ಅಪಾಯಕಾರಿ ಕೆಮಿಕಲ್‌ಗಳ ಉತ್ಪಾದನೆ, ಸಂಗ್ರಹ ಮತ್ತು ಆಮದು ನಿಯಮಾವಳಿ- 1989, 1994, 2000. 2. ಓಝೋನ್ ಹಾನಿಕಾರಕ ದ್ರವ್ಯಗಳ ನಿಯಮಾವಳಿ- 2000. ಇವನ್ನು ಪರಿಸರ ಮತ್ತು ಅರಣ್ಯ ಇಲಾಖೆ ರೂಪಿಸಿದೆ. ಕೆಲವು ಅಪಾಯಕಾರಿ ಕೆಮಿಕಲ್‌ಗಳನ್ನು ಹೆಸರಿಸಿ, ಇವುಗಳಿಂದ ಯಾವುದೇ ಅಪಾಯವಾಗದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಫ್ಯಾಕ್ಟರಿಗಳು, ಕಂಪನಿಗಳು ಹಾಗೂ ಸ್ಥಳೀಯಾಡಳಿತಕ್ಕೆ ಇದು ಸೂಚಿಸುತ್ತದಷ್ಟೇ. 2019ರ ಡಿಸೆಂಬರ್‌ನಲ್ಲಿ ಕೆಮಿಕಲ್‌ಗಳ ರಾಷ್ಟ್ರೀಯ ಕ್ರಿಯಾ ಯೋಜನೆಯೊಂದನ್ನು ಇಲಾಖೆ ಸಿದ್ಧಪಡಿಸಿ ಪ್ರಕಟಿಸಿದೆ. ಸಂಬಂಧಿತ ಕಾಯಿದೆ ಯೊಂದನ್ನು ರಚಿಸುವುದು ಇದರ ಗುರಿ.
ವಿಶಾಖಪಟ್ಟಣ ಎಚ್‌ಪಿಸಿಎಲ್
ವಿಶಾಖಪಟ್ಟಣದ ಎಚ್‌ಪಿಸಿಎಲ್ ಫ್ಯಾಕ್ಟರಿಯ ಪೈಪ್‌ಲೈನ್‌ನಲ್ಲಿ ಹೈಡ್ರೋಕಾರ್ಬನ್ ಪ್ರಮಾಣದ ಹೆಚ್ಚಾದ ಪರಿಣಾಮ 2013ರ ಆಗಸ್ಟ್ 23ರಂದು ಸಂಭವಿಸಿದ ಸ್ಫೋಟದಲ್ಲಿ 23 ಮಂದಿ ಕೊಲ್ಲಲ್ಪಟ್ಟರು.
ಮಾಯಾಪುರಿ ವಿಕಿರಣ
ರಾಜಧಾನಿ ದಿಲ್ಲಿಯ ದಕ್ಷಿಣ ಪ್ರಾಂತ್ಯದ ಮಾಯಾಪುರಿ ಪ್ರದೇಶದ ತ್ಯಾಜ್ಯ ಯಾರ್ಡ್‌ನಲ್ಲಿ 2010ರಲ್ಲಿ ಕೋಬಾಲ್ಟ್-60 ಎಂಬ ವಿಕಿರಣಶೀಲ ವಸ್ತುವೊಂದು ಹೊರಬಿದ್ದು ಪಸರಿಸಲು ಆರಂಭಿಸಿತು. ಇದರಲ್ಲಿ ಒಬ್ಬಾತ ಸತ್ತು 8 ಮಂದಿ ಆಸ್ಪತ್ರೆ ಸೇರಿದರು.
ಭಿಲಾಯ್ ಉಕ್ಕಿನ ಕಾರ್ಖಾನೆ
ಚತ್ತೀಸ್‌ಗಢದ ಭಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ 2014ರ ಜೂನ್‌ನಲ್ಲಿ ಪಂಪ್‌ಹೌಸಿನ ಮೀಥೇನ್ ಅನಿಲ ಪೈಪ್‌ಲೈನ್ ಸೋರಿಕೆಯಾಗಿ ಆರು ಮಂದಿ ಸತ್ತರು. 2018ರಲ್ಲಿಇದೇ ಭಿಲಾಯ್‌ನಲ್ಲಿ ನಡೆದ ಇನ್ನೊಂದು ಇಂಥದೇ ಅನಾಹುತದಲ್ಲಿ, ಉಕ್ಕಿನ ಕಾರ್ಖಾನೆಯಲ್ಲಿ ನಡೆದ ಪೈಪ್‌ಲೈನ್ ಸ್ಫೋಟದಲ್ಲಿ 9 ಮಂದಿ ಸತ್ತು 14 ಮಂದಿ ಗಾಯಗೊಂಡರು.
ದಿಲ್ಲಿ ಗ್ಯಾಸ್ ಸೋರಿಕೆ
ತುಘಲಕಾಬಾದ್‌ನ ಡಿಪೋ ಒಂದರಲ್ಲಿ ಕಂಟೇನರ್ ಸೋರಿಕೆಯಾಗಿ 470ಕ್ಕೂ ಹೆಚ್ಚು ಶಾಲಾ ಮಕ್ಕಳು ವಿಷಾನಿಲ ಸೇವಿಸಿ ಅಸ್ವಸ್ಥರಾದರು. ಉಸಿರಾಟದ ತೊಂದರೆ, ಕಣ್ಣುರಿ, ವಾಂತಿ, ತಲೆನೋವು ಅನುಭವಿಸಿದರು. ಅದೃಷ್ಟವಶಾತ್ ಸಾವು ಸಂಭವಿಸಲಿಲ್ಲ.
ಕಾನ್ಪುರ ಅಮೋನಿಯಾ ದುರಂತ
ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಶಿವರಾಜ್ಪುರದಲ್ಲಿ ಕೋಲ್ಡ್ ಸ್ಟೋರೇಜ್ ಘಟಕವೊಂದರ ಗ್ಯಾಸ ಚೇಂಬರ್‌ನಿಂದ ಅಮೋನಿಯಾ ಅನಿಲ ಸೋರಿಕೆಯಾಯಿತು. ಕಟ್ಟಡದೊಳಗಿದ್ದ ರೈತರಲ್ಲಿ ಐವರು ಸತ್ತು ಇತರರು ಗಾಯಾಳುಗಳಾದರು.
ಯಾವುದರ ಉತ್ಪಾದನೆ?
ಹಲವು ಬಗೆಯ ಪ್ಲಾಸ್ಟಿಕ್ ಮತ್ತು ರಬ್ಬರ್‌ಗಳ ಉತ್ಪಾದನೆಯ ಸಂದರ್ಭದಲ್ಲಿ ಈ ಸ್ಟೈರೀನ್ ರಾಸಾಯನಿಕವನ್ನು ಬಳಸಲಾಗುತ್ತದೆ. ಆಹಾರ ಪದಾರ್ಥಗಳನ್ನು ಹಾಕಿಡುವ ಕಂಟೇನರ್‌ಗಳು, ಪ್ಯಾಕೇಜ್ ಸಾಮಗ್ರಿಗಳು, ಸಿಂಥೆಟಿಕ್ ಮಾರ್ಬಲ್ ನೆಲಹಾಸು, ಬಳಸಿ ಎಸೆಯಬಹುದಾದ ಟೇಬಲ್ವೇರ್ಗಳು, ಫೈಬರ್ಗ್ಲಾಸ್, ಲ್ಯಾಟೆಕ್ಸ್, ಮೌಲ್ಡೆಡ್ ಪೀಠೋಪಕರಣಗಳ ಉತ್ಪಾದನೆಯಲ್ಲಿಈ ರಾಸಾಯನಿಕ ಬಳಕೆಯಾಗುತ್ತದೆ.
ಸಹಜವಾಗಿಯೂ ಸೃಷ್ಟಿ
ಸಹಜ ವಾತಾವರಣದಲ್ಲಿ ಸ್ಟೈರೀನ್ ಅನಿಲ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಇದು ಹಾನಿಕರವಲ್ಲ. ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ, ವಾಹನಗಳ ಹೊಗೆಯಿಂದ, ತಂಬಾಕು ಹೊಗೆಯಿಂದ ಈ ಅನಿಲ ಉತ್ಪತ್ತಿಯಾಗುತ್ತದೆ. ಕೆಲವು ಹಣ್ಣು, ತರಕಾರಿ, ಮಾಂಸ, ಒಣಹಣ್ಣು, ಪಾನೀಯಗಳಲ್ಲೂ ಇದು ಅಲ್ಪಸ್ವಲ್ಪ ಇರುತ್ತದೆ.
ಅನಿಲದಿಂದ ಪಾರಾಗುವ ಬಗೆ
ಸ್ಟೈರೀನ್ ಅನಿಲದ ತೀವ್ರತೆಯನ್ನು ಹೋಗಲಾಡಿಸುವ ಆ್ಯಂಟಿಡಾಟ್‌ನಂತೆ ನೀರು ವರ್ತಿಸುತ್ತದೆ. ಈ ಅನಿಲ ಹೆಚ್ಚಾಗಿರುವ ಪ್ರದೇಶದಲ್ಲಿ ನೀರನ್ನು ಜೋರಾಗಿ ಸಿಂಪಡಿಸಿ ಇದರ ಪರಿಣಾಮ ಕುಂಠಿತಗೊಳಿಸಬಹುದು. ಅನಿಲವನ್ನು ಹೆಚ್ಚಾಗಿ ಸೇವಿಸಿದವರಿಗೆ ಸಾಕಷ್ಟು ನೀರನ್ನು ಕುಡಿಸಬೇಕು. ಅನಿಲವನ್ನು ಸೇವಿಸುವ ಸಂದರ್ಭ ಇದ್ದರೆ, ಆಮ್ಲಜನಕದ ಮಾಸ್ಕ್ ಧರಿಸಿಕೊಳ್ಳಬೇಕು. ಅಥವಾ, ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಳ್ಳಬಹುದು.