ಅಂತ್ಯಕ್ರಿಯೆ ಮಾನವೀಯ ಆಗಿರಲಿ

– ಕೊರೊನಾ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಅನಗತ್ಯ ಭಯ ಬೇಡ
– ಸುರಕ್ಷಿತ ಕ್ರಮದೊಂದಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರೆ ಅಪಾಯವಿಲ್ಲ.

ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾ ಸೋಂಕಿನಿಂದ ದಾರುಣವಾಗಿ ಮೃತಪಡುವವರ ಅಂತಿಮ ಸಂಸ್ಕಾರ ಪ್ರಕ್ರಿಯೆ ಮತ್ತಷ್ಟು ದಯನೀಯವಾಗುತ್ತಿದೆ. ಶವ ಸಂಸ್ಕಾರದಿಂದ ರೋಗ ಹರಡಬಹುದೆಂಬ ಅನಗತ್ಯ ಭೀತಿ ಜನರಲ್ಲಿ ಆವರಿಸಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಅಂತ್ಯಸಂಸ್ಕಾರದ ವೇಳೆ ಸಮೀಪದ ಬಂಧುಗಳು ಸುರಕ್ಷಿತ ಕ್ರಮಗಳೊಂದಿಗೆ ಭಾಗವಹಿಸಬಹುದು ಎಂಬ ಅಂಶ ಕೇಂದ್ರ ಸರಕಾರದ ಮಾರ್ಗಸೂಚಿಯಲ್ಲೇ ಇದೆ. ಸುರಕ್ಷಿತ ವಿಧಾನ ಅನುಸರಿಸಿ ಸಮೀಪದ ಬಂಧುಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರೆ ಯಾವ ಅಪಾಯವೂ ಇಲ್ಲ ಎಂದು ತಜ್ಞ ವೈದ್ಯರೇ ಹೇಳುತ್ತಿದ್ದಾರೆ. ಹಾಗಾಗಿ ಜನ ಮಾನವೀಯತೆಯಿಂದ ವರ್ತಿಸಬೇಕಿದೆ.
ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ವೇಳೆ ಜನಜಾಗೃತಿ ಕೊರತೆಯಿಂದಾಗಿ ಹಲವೆಡೆ ಪ್ರತಿಭಟನೆಗಳಾಗುತ್ತಿವೆ. ಇನ್ನೊಂದೆಡೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡದ ಕಾರಣ ಒಂದೇ ಗುಂಡಿಯಲ್ಲಿ ಹಲವು ಮೃತ ದೇಹಗಳನ್ನು ಮುಚ್ಚಿ ಹಾಕಿದ ಘಟನೆಯೂ ನಡೆದಿದೆ. ಬಸ್ ತಂಗುದಾಣದಲ್ಲಿ ಮೃತ ಶರೀರ ಬಿಟ್ಟು ಹೋದ ದುರ್ಘಟನೆಯೂ ನಡೆದಿದೆ. ಶವಗಳನ್ನು ಅರೆಬೆಂದ ಸ್ಥಿತಿಯಲ್ಲಿ ಬಿಟ್ಟು ಹೋದದ್ದೂ ಇದೆ. ಇವೆಲ್ಲವೂ ಕೋವಿಡ್‌ನಿಂದ ಎದುರಾಗಿರುವ ದಾರುಣ ಸ್ಥಿತಿಯನ್ನು ತೋರಿಸುತ್ತಿದೆ.
ಇಡೀ ಜಗತ್ತನೇ ನಲುಗಿಸಿರುವ ಕಾಯಿಲೆ ಕೋವಿಡ್‌ನಿಂದ ವಿಪತ್ತು ಬಂದಿರುವುದು ನಿಜ. ಆದರೆ, ಇಂತಹ ಸಂದರ್ಭದಲ್ಲಿ ಮನುಷ್ಯತ್ವ ಕಳೆದುಕೊಳ್ಳುವುದು ಮನುಕುಲಕ್ಕೆ ಶೋಭೆ ತರುವುದಿಲ್ಲ. ಅಂತ್ಯ ಸಂಸ್ಕಾರದ ವಿಧಿವಿಧಾನದ ಬಗ್ಗೆ ಸರಕಾರದ ಗೈಡ್‌ಲೈನ್ಸ್‌ ಪಾಲಿಸಿದರೆ ಈ ಸಮಸ್ಯೆ ಖಂಡಿತ ಇತ್ಯರ್ಥಗೊಳ್ಳಲಿದೆ. ಅಂದರೆ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡವರಿಗೆ ಗೌರವದಿಂದ ಅಂತ್ಯ ಸಂಸ್ಕಾರ ನಡೆಸಬೇಕಿದೆ. ಈ ಸಂಬಂಧ ಪ್ರಜ್ಞಾವಂತ ಸಮಾಜ ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಸರಕಾರಿ ಸಿಬ್ಬಂದಿಯನ್ನು ದೂರುವ ಮೊದಲು ನಾವು ಹೃದಯವಂತಿಕೆ ತೋರಬೇಕಿದೆ ಎಂಬ ಅಭಿಮತ ವ್ಯಕ್ತವಾಗುತ್ತಿದೆ.

ಕೇಂದ್ರ ಸರಕಾರದ ಮಾರ್ಗಸೂಚಿ ಏನು?
– ಮೃತರ ಅಂತ್ಯ ಸಂಸ್ಕಾರವನ್ನು ಅವರ ಕುಟುಂಬದ ಸಂಪ್ರದಾಯದ ಪ್ರಕಾರ ನಡೆಸಬಹುದು.
– ಮೃತ ದೇಹವನ್ನು ದಹಿಸಲು ಮತ್ತು ಹೂಳಲು ಅವಕಾಶವಿದೆ.
– ಸೋಂಕು ಹರಡದ ಕಾರಣ ಚಿತಾಭಸ್ಮ ಸಂಗ್ರಹಿಸಬಹುದು.
– ಕುಟುಂಬ ಸದಸ್ಯರು ಮೃತ ದೇಹ ಸ್ಪರ್ಶಿಸಲು, ಮುತ್ತಿಕ್ಕಲು, ಅಪ್ಪಿಕೊಳ್ಳಲು ಅವಕಾಶವಿಲ್ಲ.
– ಶ್ವಾಸಕೋಶದ ಸಮಸ್ಯೆ ಇನ್ನಿತರ ಗಂಭೀರ ಕಾಯಿಲೆ ಇರುವವರು ಭಾಗಿಯಾಗಬಾರದು.
– ಚಿತಾಗಾರದ ಸಿಬ್ಬಂದಿ ಮಾಸ್ಕ್, ಕೈಗವಸು ಧರಿಸಿರಬೇಕು.
– ಸ್ಮಶಾನದಲ್ಲಿ ಮೃತ ದೇಹದ ಮುಖ ವೀಕ್ಷಣೆಗೆ ಅನುವು ಮಾಡಿಕೊಡಬಹುದು. ಈ ಸಂಬಂಧ ಮುಖದ ಮೇಲಿನ ಬಟ್ಟೆ ಸರಿಸುವವರು ಸುರಕ್ಷತಾ ಕ್ರಮ ಕೈಗೊಂಡಿರಬೇಕು.
– ಮೃತ ದೇಹವನ್ನು ಮುಟ್ಟುವುದರ ಹೊರತಾಗಿ ಧರ್ಮಗ್ರಂಥ ಪಠಣ, ಪವಿತ್ರ ಜಲ ಪ್ರೋಕ್ಷಣೆ ಇನ್ನಿತರ ಅಂತಿಮ ವಿಧಿ ಕೈಗೊಳ್ಳಲು ಅಡ್ಡಿಯಿಲ್ಲ.

ಜನ ಹೆದರಬೇಕಿಲ್ಲ
ಕೋವಿಡ್‌ನಿಂದ ಮೃತರಾದವರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಜನರು ಭಯ ಪಡುವ ಅಗತ್ಯವಿಲ್ಲ. ಮಾರ್ಗ ಸೂಚಿ ಪ್ರಕಾರ ವೈಜ್ಞಾನಿಕವಾಗಿ ಈ ಪ್ರಕ್ರಿಯೆ ನಡೆಸಿದರೆ ಯಾವ ತೊಂದರೆ ಇಲ್ಲ. ಸೋಂಕು ಹರಡುವ ಅಪಾಯವೂ ಇರುವುದಿಲ್ಲ. ಹಾಗಾಗಿ ಅಂತ್ಯವಿಧಿ ಕೈಗೊಳ್ಳುವಾಗ ವಿರೋಧಿಸುವುದು ಸರಿಯಲ್ಲ. ಆದರೆ ನಗರ, ಪಟ್ಟಣಗಳಲ್ಲಿ ಸ್ಥಳೀಯ ಆಡಳಿತದ ಸುಪರ್ದಿಯ ಚಿತಾಗಾರ, ಸ್ಮಶಾನದಲ್ಲಿ ಈ ಪ್ರಕ್ರಿಯೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ಊರ ಹೊರಗಿನ ರುದ್ರಭೂಮಿಯಲ್ಲಿ ಈ ಪ್ರಕ್ರಿಯೆ ಮಾಡಬೇಕಾಗುತ್ತದೆ. ಇದರ ಉಲ್ಲಂಘನೆಯಾಗದಂತೆ ಜನರು ನೋಡಿಕೊಳ್ಳಬೇಕಾಗುತ್ತದೆ.

ರಾಜ್ಯ ಸರಕಾರ ಏನು ಮಾಡಬೇಕು?
ಕೇಂದ್ರ ಸರಕಾರದ ಮಾರ್ಗಸೂಚಿಯನ್ನೇ ರಾಜ್ಯ ಸರಕಾರವೂ ಅನುಸರಿಸಿದೆ. ಆದರೆ, ಈ ಗೈಡ್‌ಲೈನ್ಸ್‌ನ  ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ. ಇದೂ ಕೂಡ ಸಮಸ್ಯೆಯ ಮೂಲವಾಗಿದೆ. ಹಾಗಾಗಿ ರಾಜ್ಯ ಸರಕಾರ ಈ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಬೆಂಗಳೂರು ಮಹಾನಗರದಿಂದ ಹಳ್ಳಿಯವರೆಗೂ ಒಂದೇ ರೀತಿಯ ಮಾರ್ಗಸೂಚಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಹೂಳುವುದು ಹಾಗೂ ಸುಡುವ ಕ್ರಿಯೆಗೆ ಅನುಸರಿಸುವ ಕ್ರಮಗಳ ಬಗ್ಗೆ ಜಾಗೃತಿಯಾಗಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಈ ವಿಚಾರದಲ್ಲಿ ತೊಂದರೆಯಾದಾಗ ಸ್ಥಳೀಯ ಆಡಳಿತದ ಮಧ್ಯೆ ಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಗೊಳಿಸಲು ಸ್ಪಂದಿಸುವ ಕೆಲಸ ತಕ್ಷಣ ಆಗಬೇಕು.
——————-

ಕೋವಿಡ್ ವೈರಾಣುವಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಅಡ್ಡಿಪಡಿಸಬಾರದು. ಮಾನವೀಯತೆ ದೃಷ್ಟಿಯಿಂದ ಸೋಂಕಿತರ ಅಂತ್ಯಕ್ರಿಯೆ ನಡೆಸಬೇಕು.
-ಗುರುಮಹಾಂತ ಶ್ರೀಗಳು ವಿಜಯ ಮಹಾಂತೇಶ ಮಠ, ಇಳಕಲ್.

ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಮಾರ್ಗಸೂಚಿ ಪ್ರಕಾರ ನೆರವೇರಿಸಲಾಗುತ್ತದೆ. ಮಣ್ಣಿನಲ್ಲಿ ಹೂಳಲು ಮತ್ತು ಸುಡುವುದಕ್ಕೂ ಅವಕಾಶವಿದೆ. ಆಯಾ ಕುಟುಂಬಗಳ ಪದ್ಧತಿ ಅನುಸಾರ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ಅಂತ್ಯ ಸಂಸ್ಕಾರ ಮಾಡುವ ಸಿಬ್ಬಂದಿ ಎಲ್ಲ ಸುರಕ್ಷತಾ ಕ್ರಮ ಕೈಗೊಂಡಿರುತ್ತಾರೆ. ಜನ ಅನಗತ್ಯವಾಗಿ ಹೆದರಬೇಕಿಲ್ಲ.
-ಡಾ. ಕೆ.ಎಸ್.ಸಂಜಯ್, ನಿರ್ದೇಶಕ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಆಸ್ಪತ್ರೆ.

ಮನುಷ್ಯ ಹುಟ್ಟಿದಾಗ ಎಷ್ಟು ಬೆಲೆ ಇರುತ್ತದೋ, ಮೃತ ಪಟ್ಟ ಬಳಿಕವೂ ಅಷ್ಟೆ ಬೆಲೆ ಇರುತ್ತದೆ. ಯಾರದ್ದೇ ಶವ ಆಗಿರಲಿ ಅದಕ್ಕೆ ಗೌರವ ನೀಡಬೇಕು. ಕೋವಿಡ್‌ನಿಂದ ಮೃತಪಟ್ಟವರು ನಮ್ಮವರೇ ಅಲ್ಲವೆ? ಸಾರ್ವಜನಿಕರು ವಿರೋಧ ಮಾಡುವುದಕ್ಕಿಂತ ಸುಮ್ಮನೆ ತಮ್ಮ ತಮ್ಮ ಮನೆಯಲ್ಲಿದ್ದರೆ ಸಾಕಲ್ಲವೆ?
-ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ.

ಕೊರೊನಾ ಸೋಂಕಿಗೆ ಒಳಗಾದ ರೋಗಿ ಮೃತಪಟ್ಟಾಗ ದೇಹದಿಂದ ವೈರಾಣು ಹರಡದಂತೆ ಸೋಂಕು ನಿವಾರಕ ಕ್ರಮ ಕೈಗೊಳ್ಳಲಾಗುತ್ತದೆ. ನಂತರ ದೇಹವನ್ನು ಅಂತ್ಯ ಸಂಸ್ಕಾರಕ್ಕೆ ಕಳುಹಿಸಲಾಗುತ್ತದೆ. ಇಡೀ ಪ್ರಕ್ರಿಯೆ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತದೆ. ಯಾರೂ ಹೆದರಬೇಕಿಲ್ಲ.
– ಡಾ. ಎಸ್.ವೆಂಕಟರಾಘವ್, ಪ್ರಾಧ್ಯಾಪಕ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ.

ಕೋವಿಡ್‌ನಿಂದ ಮೃತ ಪಟ್ಟವರೆಲ್ಲರು ನಮ್ಮ ಬಂಧುಗಳೇ ಅಲ್ಲವೆ? ನಮ್ಮ ಮನೆಯವರೆ ಯಾರಾದರೂ ಮೃತ ಪಟ್ಟಿದ್ದರೆ, ಇದೇ ರೀತಿ ವಿರೋಧ ವ್ಯಕ್ತ ಪಡಿಸಲು ಸಾಧ್ಯವೆ? ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಬೇಕಿರುವುದು ನಮ್ಮಲ್ಲರ ಆಧ್ಯ ಕರ್ತವ್ಯ. ಇದು ಸರಕಾರದ ಕೆಲಸವಲ್ಲ.
-ಡಿ.ಕೆ.ಸುರೇಶ್, ಸಂಸದ

ಕೊರೊನಾ ಸೋಂಕಿನ ವಿಷಯದಲ್ಲಿ ಜಾತಿ, ಧರ್ಮ, ಆಚರಣೆ ಎಲ್ಲವನ್ನು ಬದಿಗಿಟ್ಟು, ಸಮುದಾಯದ ಹಿತದೃಷ್ಟಿಯಿಂದ ವೈದ್ಯಕೀಯ ನಿಯಮಾವಳಿ ಅನ್ವಯವೇ ಶವಸಂಸ್ಕಾರ ನಡೆಸಬೇಕು.
– ರೂಪಾ ಹಾಸನ, ಸಾಹಿತಿ

ಯಾವುದೇ ಧರ್ಮದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಲ್ಲಿ ಶವಸಂಸ್ಕಾರಕ್ಕೆ ಸರಕಾರ ಷರತ್ತು ವಿಧಿಸಿ ವಾರಸುದಾರರಿಗೆ ಶವ ನೀಡಬೇಕು. ಆಗ ವಿವಾದ ಆಗದು.
-ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಇಹಲೋಕ ತ್ಯಜಿಸಿದ ವ್ಯಕ್ತಿಗಳ ಬಗ್ಗೆ ಹೀನಾಯ ದೃಷ್ಟಿ ಸರಿಯಲ್ಲ. ಪ್ರಾಣಿಗಳಿಗಿಂತ ಕಡೆಯಾಗಿ ನೋಡಬಾರದು, ಗೌರವಯುತ ಶವ ಸಂಸ್ಕಾರಕ್ಕೆ ಅವಕಾಶ ದೊರೆಯಬೇಕು. ಸುರಕ್ಷ ತೆ ಮುಖ್ಯವಾಗಿರುವುದರಿಂದ ಸುರಕ್ಷತಾ ಕ್ರಮಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ನೀಡಬೇಕು.
– ಇಬ್ರಾಹಿಂ ಸುತಾರ, ಖ್ಯಾತ ಪ್ರವಚನಕಾರ, ಮಹಾಲಿಂಗಪುರ

ಸಾವು ಎಲ್ಲರಿಗೂ ಬರುತ್ತದೆ. ಸತ್ತ ಮನುಷ್ಯನಿಗೆ ಗೌರವಯುತವಾದ ಬೀಳ್ಕೊಡುಗೆ ದೊರೆಯಬೇಕು. ವೈದ್ಯಕೀಯ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಕೂಡಾ ಬೇಕಾಬಿಟ್ಟಿ ಅಂತ್ಯಕ್ರಿಯೆ ಮಾಡಬಾರದು. ಹೀಗೆ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರು

ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ. ಮಾನವೀಧಿಯತೆ ದೃಷ್ಟಿಯಿಂದ ಸೋಂಕಿತರನ್ನು ಕಾಣಬೇಕು. ಅವರನ್ನು ಯಾವುದೇ ಕಾರಣಕ್ಕೂ ದೂಷಿಸಬಾರದು. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಜಿಲ್ಲಾಡಳಿತದಿಂದ ಮಾಡಲಾಗುವುದು.
-ಆರ್.ಲತಾ, ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top