ಉಪನ್ಯಾಸಕರ ನೇಮಕ ನಿರಾಳ – ಸಿಎಂ ಅಸ್ತು | 2 ದಿನದಲ್ಲಿ ಕೌನ್ಸೆಲಿಂಗ್ ದಿನಾಂಕ ಪ್ರಕಟ

ವಿಕ ಸುದ್ದಿಲೋಕ ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕೌನ್ಸೆಲಿಂಗ್ ನಡೆಸಲು ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಇನ್ನು ಎರಡು ದಿನದ ಒಳಗೆ ಕೌನ್ಸೆಲಿಂಗ್ ದಿನಾಂಕ ಘೋಷಿಸಲಾಗುತ್ತದೆ ಎಂದು ಸಿಎಂ ಅವರ ಕಚೇರಿ ಮೂಲಗಳು ಖಚಿತ ಪಡಿಸಿವೆ. ಉಪನ್ಯಾಸಕರ ಸ್ಥಳ ನಿಯುಕ್ತಿಗಾಗಿ ಕೌನ್ಸೆಲಿಂಗ್ ನಡೆಸಲು ಆರ್ಥಿಕ ಇಲಾಖೆಧಿಯಿಂದಲೂ ಹಸಿರು ನಿಶಾನೆ ದೊರೆತಿದೆ. ಇದರೊಂದಿಗೆ ಉಪನ್ಯಾಸಕರ ಹುದ್ದೆ ಭರ್ತಿಗೆ ಹಿಡಿದಿದ್ದ ಗ್ರಹಣ ಸರಿಯುವ ಕಾಲ ಸನ್ನಿಹಿತವಾಗಿದೆ. ಇದರೊಂದಿಗೆ ಉಪನ್ಯಾಸಕ ಹುದ್ದೆ ಕನಸು ಹೊತ್ತು
6 ವರ್ಷಗಳ ಚಾತಕ ಪಕ್ಷಿಗಳಂತೆ ಕಾದಿದ್ದ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಿರಾಳರಾಗಿದ್ದಾರೆ. ಕಡೆಯ ಕ್ಷಣದಲ್ಲಿ ಕೌನ್ಸೆಲಿಂಗ್ ರದ್ದು ಮಾಡಿದ್ದರಿಂದ ಉಂಟಾಗಿದ್ದ ಗೊಂದಲಕ್ಕೂ ತೆರೆ ಬಿದ್ದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಒಟ್ಟು 1,203 ಉಪನ್ಯಾಸಕರ ಹುದ್ದೆಗಳ ಭರ್ತಿ ಪ್ರಕ್ರಿಯೆ ಕಳೆದ 6 ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಿರುವ ಉಪನ್ಯಾಸಕರಿಗೆ ಸ್ಥಳ ನಿಯೋಜನೆ ಮಾಡಲು ಜು.8ರಂದು ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿತ್ತು. ಆದರೆ, ಕೋವಿಡ್-19ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸರಕಾರ 2020-21ನೇ ಸಾಲಿಗೆ ಎಲ್ಲಾನೇಮಕಾತಿ ಪ್ರಕ್ರಿಯೆಗಳನ್ನು ಜು.7ರಂದು ರದ್ದುಗೊಳಿಸಿತ್ತು. ಉಪನ್ಯಾಸಕರ ಕೌನ್ಸೆಲಿಂಗ್ ಕೂಡ ರದ್ದಾಗಿತ್ತು. ಸರಕಾರದ ಈ ನಿರ್ಧಾರದಿಂದಾಗಿ ಹುದ್ದೆ ಆಕಾಂಕ್ಷಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿತ್ತು. ಈ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ವಿಕ ವರದಿಗೆ ಸರಕಾರ ಸ್ಪಂದನೆ ಪಿಯು ಉಪನ್ಯಾಸಕರ ನೇಮಕಾತಿ ವಿಳಂಬದ ಬಗ್ಗೆ ‘ವಿಜಯ ಕರ್ನಾಟಕ’ದಲ್ಲಿ ಜು.13ರಂದು ವಿಸ್ತೃತ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ನೇಮಕ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ  ಸೂಚಿಸಿದ್ದರು. ಈ ಕುರಿತು ಶಿಕ್ಷಣ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top