ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಬೇಕೆಂಬುದರಲ್ಲಿ ಯಾವ ಅನುಮಾನವಿಲ್ಲ ನಿಜ. ಎಲ್ಲರೂ ಯಾವ ಹಗರಣದಿಂದ ದೇಶದ ಬೊಕ್ಕಸ ಎಷ್ಟು ಬರಿದಾಯಿತು ಅಂತ ಮಾತ್ರ ಲೆಕ್ಕ ಹಾಕುತ್ತಿದ್ದೇವಲ್ಲ? ಹಗರಣದ ಹಿಂದಿರುವ ಕಾಣದ ಕೈನ ಕರಾಮತ್ತಿನ ಕುರಿತು ಯೋಚಿಸುವುದೇ ಇಲ್ಲವಲ್ಲ. ಕಳೆದುಕೊಂಡ ದುಡ್ಡನ್ನು ಮತ್ತೆ ಗಳಿಸಬಹುದು, ಹೋದ ಜೀವ, ಕಳೆದುಕೊಂಡ ನಾಯಕರನ್ನು ತರಲಾದೀತೇ?
ಈ ದೇಶದ ಎಲ್ಲ ದುರಂತಗಳು, ದುರ್ದೆಸೆಯ ಕೊಂಡಿ ಕೊನೆಗೆ ಹೋಗಿ ತಳುಕು ಹಾಕಿಕೊಳ್ಳುವುದು ರೋಮನ್ ಕ್ಯಾಥೋಲಿಕ್ ಕ್ರೈಸ್ತರ ತವರು ಇಟಲಿ ಮತ್ತು ಅಮೆರಿಕ ಎಂಬ ಎರಡು ದೇಶಗಳೊಂದಿಗೆ ಎಂಬುದನ್ನು ಕಾಕತಾಳೀಯ ಎನ್ನಬೇಕೋ ಅಥವಾ ಅನುಭವಿಸಲೂ ಆಗದ, ತಡೆಯಲೂ ಆಗದ ಪ್ರಾರಬ್ಧಕರ್ಮ ಎನ್ನಬೇಕೋ, ಇಲ್ಲ ಐತಿಹಾಸಿಕ ದುಃಸ್ವಪ್ನ ಅಂತ ಸುಮ್ಮನಾಗಬೇಕೋ? ನಿರ್ಣಯವನ್ನು ನಿಮಗೇ ಬಿಡುತ್ತೇನೆ.
ನೋಡಿ.. ಬೊಫೋರ್ಸ್ ಫಿರಂಗಿ ಖರೀದಿ ಹಗರಣದ ಕುರಿತು ಈಗ ಮತ್ತೆ ಹೆಚ್ಚೇನೂ ಹೇಳುವ ಜರೂರತ್ತಿಲ್ಲ. ಆ ಬಗ್ಗೆ ಎಲ್ಲರಿಗೂ ಸಾಕಷ್ಟು ಗೊತ್ತಿದೆ. ಭಾರತದಲ್ಲಿ ಭ್ರಷ್ಟಾಚಾರ ಹಗರಣದ ಕುರಿತು ಭಯಂಕರ ಚರ್ಚೆಗೆ ಕಾರಣವಾಗಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಸ್ಥಿತ್ಯಂತರಗಳಿಗೆ ಕಾರಣವಾದ ಮೊದಲ ಪ್ರಕರಣ ಅದು ಅಂದರೆ ತಪ್ಪಲ್ಲ. ನಾವು ಈಗ ಏನಾದರೂ ಭ್ರಷ್ಟಾಚಾರ ವಿರೋಧಿ ಹೋರಾಟದ ಇತಿಹಾಸವನ್ನು ದಾಖಲಿಸುವುದಾದರೆ ಬೊಫೋರ್ಸ್ ಹಗರಣ ಬಯಲಿಗೆ ಬಂದಲ್ಲಿಂದಲೇ ಲೆಕ್ಕಹಾಕಬೇಕು. ರಾಜೀವ್ ಗಾಂಧಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದು ಬೊಫೋರ್ಸ್ ಫಿರಂಗಿ ಖರೀದಿ ಹಗರಣದ ಆಳ ಅಗಲವನ್ನು ಸಮೀಪದಿಂದ ತಿಳಿದುಕೊಂಡು, ಕೊನೆಗೆ ಬೇಸತ್ತು ಪ್ರಧಾನಿ ರಾಜೀವ್ ಗಾಂಧಿ ವಿರುದ್ಧವೇ ಬಂಡಾಯವೆದ್ದ ವಿ.ಪಿ.ಸಿಂಗ್ ಅವರನ್ನೇ ನಾವು ಭ್ರಷ್ಟಾಚಾರ ವಿರೋಧಿ ಹೋರಾಟದ ಮೊದಲ ಕ್ರುಸೇಡರ್ ಅಂತ ಕರೆಯಬೇಕು. ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್ ಅವರೆಲ್ಲ ಭ್ರಷ್ಟಾಚಾರದ ವಿರುದ್ಧ ಆಲೋಚನೆ ಮಾಡುವುದಕ್ಕೆ ಎಷ್ಟೋ ವರ್ಷ ಮೊದಲೇ ವಿ.ಪಿ.ಸಿಂಗ್ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಬಿರುಗಾಳಿ ಎಬ್ಬಿಸಿದ್ದರು. ಎಂಭತ್ತರ ದಶಕದ ಕೊನೆಯಲ್ಲಿ ದೇಶದಲ್ಲಿ ಹೊಸ ಸಂಚಲನ ಉಂಟುಮಾಡಿದ ಆ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯಕ್ಕೆ ಮಂಗಳ ಹಾಡಿದ್ದು ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಪ್ರಬಲವಾಗಿ ಬೆಳೆಯುವುದಕ್ಕೂ ನಾಂದಿ ಆಯಿತು ಅನ್ನಿ.
ಅದೆಲ್ಲವೂ ಸರಿ, ಬೊಫೋರ್ಸ್ ಹಗರಣ ಬೆಳಕಿಗೆ ಬಂದು ರಾಜಕೀಯವಾಗಿ ಏನೆಲ್ಲ ಏರುಪೇರು ಆಯಿತು ಖರೆ, ಆದರೆ ದೇಶದ ವ್ಯವಹಾರದಲ್ಲಿ, ಆಡಳಿತ ವ್ಯವಸ್ಥೆ ಮೇಲೆ ಇಟಲಿಯ ಮಾಂತ್ರಿಕ ಶಕ್ತಿಯ ಕೈಚಳಕಕ್ಕೆ ಏನಾದರೂ ಕಡಿವಾಣ ಬಿತ್ತೇ? ಖಂಡಿತ ಇಲ್ಲ, ಆ ಕಾಣದ ಕೈ ನಡೆಸುವ ಕರಾಮತ್ತು ಬೊಫೋರ್ಸ್ ಹಗರಣದಿಂದ ಹಿಡಿದು ಇದೀಗ ಕೆಲ ತಿಂಗಳ ಹಿಂದೆ ಸಿಬಿಐ ತನಿಖೆಗೆ ಒಪ್ಪಿಸಿರುವ ಅಗಸ್ತಾ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದವರೆಗೂ ಯಾವುದೇ ಅಡೆತಡೆ ಇಲ್ಲದೆ ಮುಂದುವರಿದುಕೊಂಡು ಬಂದಿದೆಯಲ್ಲ ಅದನ್ನು ಚಮತ್ಕಾರ ಅನ್ನಬೇಕೋ, ಷಡ್ಯಂತ್ರ ಅನ್ನಬೇಕೋ ಅಥವಾ ನಿಶ್ಚಿತ ಯೋಜನೆಯ ಫಲ ಅನ್ನಬೇಕೋ? ಅಚ್ಚರಿಯಾಗುತ್ತದೆಯಲ್ಲವೇ?
ದೇಶದಲ್ಲಿ ಯಾವುದೇ ಹಗರಣ ಬೆಳಕಿಗೆ ಬಂದಾಗಲೂ ವಿರೋಧಿಗಳ ಕಣ್ಣು, ಟೀಕಿಸುವವರ ಮನಸ್ಸು ದೃಷ್ಟಿ ಹಾಯಿಸುವುದು ಪಡೆದುಕೊಂಡ ಕಿಕ್‍ಬ್ಯಾಕ್ ಹಣ ಎಷ್ಟು, ಯಾರು ಎಷ್ಟು ಹಣವನ್ನು ಜೇಬಿಗೆ ಇಳಿಸಿದರು ಅನ್ನುವುದರ ಕುರಿತು ಮಾತ್ರ. ಅವರನ್ನು ಜೈಲಿಗೆ ಕಳಿಸಿ, ಇವರನ್ನು ಚುನಾವಣೆಯಲ್ಲಿ ಸೋಲಿಸಿ ಎಂಬ ಬೊಬ್ಬೆ ಹಾಕಿ ಸುಮ್ಮನಾಗುತ್ತೇವೆ. ಹಾಗಾಗಿ ನಮಗೆ ಕಾಣಿಸುವುದು ಬೊಫೋರ್ಸ್ ಲೆಕ್ಕ ಅರವತ್ತೆರಡು ಕೋಟಿ, 2ಜಿ ಹಗರಣದ ಮೊತ್ತ ಅಷ್ಟು ಸಾವಿರ ಕೋಟಿ, ಕಾಮನ್‍ವೆಲ್ತ್ ಕರ್ಮಕಾಂಡ ಇಷ್ಟು ಸಹಸ್ರ ಕೋಟಿ, ಅಗಸ್ತಾ ಹೆಲಿಕಾಪ್ಟರ್ ಹಗರಣದ ಮೊತ್ತ ಇಂತಿಷ್ಟು ಕೋಟಿ ಅನ್ನುವ ದುಡ್ಡಿನ ಲೆಕ್ಕಾಚಾರ ಮಾತ್ರ. ಅದರಾಚೆಗೆ ನಾವು ಮತ್ತು ನಮಗೆ ಸಮಾಧಾನ ಹೇಳುವ ತನಿಖಾ ಸಂಸ್ಥೆಗಳು ಗಮನ ಹರಿಸುವುದು, ಪತ್ತೆ ಮಾಡುವುದು, ಬೆನ್ನು ಹತ್ತಿ ಭೇದಿಸಲು ಸಾಧ್ಯವಾಗಿದೆಯೇ? ಕಳೆದುಕೊಂಡ ಹಣವನ್ನು ಮತ್ತಿನ್ನೆಲ್ಲೋ ದುಡಿಯಬಹುದು. ಭಾರತದಂತಹ ದೊಡ್ಡ ದೇಶಕ್ಕೆ ಸಾವಿರ, ಲಕ್ಷ ಕೋಟಿಗಳೆಲ್ಲ ಯಾವ ಲೆಕ್ಕವೂ ಅಲ್ಲ. ಆದರೆ ಈ ದೇಶದ ಅಂತಸ್ಸತ್ವದ ಒರತೆಯನ್ನೇ ಬತ್ತಿಸಿಬಿಟ್ಟರೆ, ಈ ದೇಶವನ್ನು ಒಂದರಿಂದ ಮತ್ತೊಂದು ನೆಗೆತದ ಎತ್ತರಕ್ಕೆ ಚಿಮ್ಮಿಸಬಲ್ಲ ಶಕ್ತಿಶಾಲಿ ನಾಯಕರ ರಕ್ತ ಮಾಂಸಗಳನ್ನೇ ಹೀರಿಬಿಟ್ಟರೆ ಅದನ್ನು ಮತ್ತೆಲ್ಲಿಂದ ತರುವುದು? ಶಾಸ್ತ್ರಿ, ಇಂದಿರಾ ಗಾಂಧಿಯಿಂದ ಹಿಡಿದು ರಾಜೀವ್ ಗಾಂಧಿಯವರೆಗಿನ ರಾಜಕೀಯ ಹತ್ಯೆಗಳ ಸರಣಿಯನ್ನೊಮ್ಮೆ ಕಣ್ಮುಂದೆ ತಂದುಕೊಳ್ಳಿ ಈ ಸಂಗತಿ ಮತ್ತಷ್ಟು ಸ್ಪಷ್ಟವಾಗಿ ಮನವರಿಕೆ ಆಗಬಹುದು.
ಒಂದು ಸಂಗತಿ ನಿಜ. ರಾಜೀವ್ ಹತ್ಯೆಯ ಹಿಂದೆ ಶ್ರೀಲಂಕಾ ತಮಿಳು ಉಗ್ರ ಸಂಘಟನೆ ಎಲ್‍ಟಿಟಿಇ ಕೈವಾಡ ಇತ್ತೆಂಬ ಹೇಳಿಕೆಗೆ ಯಾರ ತಕರಾರೂ ಇಲ್ಲ. ಸಿಬಿಐ, ವಿಶೇಷ ತನಿಖಾದಳ, ಜಸ್ಟಿಸ್ ಜೈನ್ ಕಮಿಷನ್, ವರ್ಮಾ ಕಮಿಷನ್ ಎಲ್ಲವೂ ಮೇಲ್ನೋಟಕ್ಕೆ ಹೇಳಿದ್ದು ಅದನ್ನೇ. ಆದರೆ ರಾಜೀವ್ ಹತ್ಯೆಯ ಕಾಲಕ್ಕೆ ಸಿಬಿಐ ಡೈರೆಕ್ಟರ್ ಆಗಿದ್ದು, ಮುತುವರ್ಜಿಯಿಂದ ಹತ್ಯೆ ತನಿಖೆಯ ಉಸ್ತುವಾರಿ ವಹಿಸಿದ್ದ ವಿಜಯಕರಣ್, ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದ ಮಾಜಿ ದಕ್ಷ ಪೆÇಲೀಸ್ ಅಧಿಕಾರಿ ಕಾರ್ತಿಕೇಯನ್, ಎಲ್ಲಾ ಆಯೋಗಗಳು ಹೇಳಿದ ಮತ್ತೊಂದು ಸಂಗತಿ ಎಲ್ಲೂ ಬಹಿರಂಗ ಆಗಲೇ ಇಲ್ಲವಲ್ಲ. ಅದು ರಾಜೀವ್ ಹತ್ಯೆಯ ಹಿಂದೆ ಎಲ್‍ಟಿಟಿಇಗೆ ಹೊರತಾದ ಬೇರೊಂದು ಕಾರಣ ಇದೆ ಎಂಬುದು. ಆದರೆ ಆ ಬಗ್ಗೆ ಯಾರೊಬ್ಬರೂ, ರಾಜೀವ್ ಗಾಂಧಿಯ ಸ್ವಂತ ಪರಿವಾರದವರು, ಕಾಂಗ್ರೆಸ್ ಪಕ್ಷದ ಉತ್ತರಾಧಿಕಾರಿಗಳಿಂದ ಹಿಡಿದು ಯಾರೊಬ್ಬರೂ ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲವಲ್ಲ. ಯಾಕೆ ಹೀಗೆ? ಹಾಗೆ ಯೋಚನೆ ಮಾಡುವುದಾದರೆ ರಾಜೀವ್ ಹತ್ಯೆಯ ಒಳಸಂಚಿನ ಪರಮಸತ್ಯ ಕತೆ ಏನು ಎಂಬುದರ ಕುರಿತು ಫ್ರೆಂಚ್ ಗುಪ್ತಚರ ದಳ ಸಂಗ್ರಹಿಸಿಟ್ಟುಕೊಂಡಿರುವ ದಾಖಲೆ ಏನು ಹೇಳುತ್ತದೆ ಎಂಬುದರ ಮೇಲೆ ಒಮ್ಮೆ ಕಣ್ಣಾಡಿಸಿ. ಸಂಚಿನ ಮೂಲ ಎಲ್ಲಿ ಎಂಬುದನ್ನು ಹುಡುಕಲು ಮತ್ತೆಲ್ಲೂ ತಡಕಾಡುವ ಅಗತ್ಯ ಬೀಳುವುದಿಲ್ಲ.
ರಾಜೀವ್ ಹತ್ಯೆಯ ಸೂತ್ರಧಾರ ಬೊಫೋರ್ಸ್ ಹಗರಣದ ಸೂತ್ರಧಾರ ಒಟ್ಟಾವಿಯೋ ಕ್ವಟ್ರೋಚಿ ಎಂದರೆ ಯಾರಾದರೂ ಬೆಚ್ಚಿ ಬೀಳುವುದಿಲ್ಲವೇ? ಮತ್ತೆ ಇಟಲಿ ಮೂಲದ ನಂಟು… ಆತ ರಾಜೀವ್ ಕುಟುಂಬಕ್ಕೆ ಅತ್ಯಂತ ಆಪ್ತನಾಗಿದ್ದವ. ಅದೇ ಆಪ್ತತೆ ಸರ್ಕಾರದ ಮಟ್ಟದಲ್ಲಿ ಎಲ್ಲ ಕೆಲಸಕಾರ್ಯಗಳಲ್ಲೂ ಕೈಯಾಡಿಸುವ ಮಟ್ಟಕ್ಕೆ ಒಯ್ದಿತ್ತು. ಆದರೆ ಯಾವಾಗ ಬೊಫೋರ್ಸ್ ಹಗರಣ ಬಯಲಿಗೆ ಬಂದು ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತೋ ಅದೇ ಮಿತ್ರ ಪರಮಶತ್ರುವಾಗಿ ಹೋದ. ಆ ಕ್ಷಣಕ್ಕೆ ಕ್ವಟ್ರೋಚಿ ಮತ್ತು ಆತನ ಸೂತ್ರಧಾರರಿಗೆ ದೇಶ ಮಾತ್ರವಲ್ಲ, ಇಡೀ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯುವ ಒಂದು ಸಂದರ್ಭ ಸೃಷ್ಟಿಸುವುದು ಮುಖ್ಯವಾಗಿತ್ತು. ಹಗರಣದ ತನಿಖೆಯ ಉರುಳು ದಿನದಿಂದ ದಿನಕ್ಕೆ ಬಿಗಿಯಾಗತೊಡಗಿತ್ತು. ಅದು ಸಂಚುಕೋರರ ಉಸಿರುಗಟ್ಟುವಂತೆ ಮಾಡಿತ್ತು. ಆ ಕಡೆ ಎಲ್‍ಟಿಟಿಇ ನಾಯಕರು ರಾಜೀವ್ ಕಳಿಸಿದ್ದ ಭಾರತದ ಶಾಂತಿಪಾಲನಾ ಪಡೆ (ಐಪಿಕೆಎಫ್) ದಾಳಿಯಿಂದ ಬಚಾವಾಗುವುದರ ಜತೆಗೆ, ಅಷ್ಟೊತ್ತಿಗಾಗಲೇ ಜಾಫ್ನಾ ದ್ವೀಪಪ್ರದೇಶದಲ್ಲಿ ಆಗಿದ್ದ ಸಾವುನೋವುಗಳಿಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಚಡಪಡಿಸುತ್ತಿದ್ದರು. ಅದರ ಫಲವಾಗಿಯೇ ಪ್ಯಾರಿಸ್‍ನಲ್ಲಿ ನಡೆದದ್ದು ಒಟ್ಟಾವಿಯೋ ಕ್ವಟ್ರೋಚಿ ಮತ್ತು ಎಲ್‍ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್ ಲೆಫ್ಟಿನೆಂಟ್ ಬಾಲಸಿಂಘಂ ನಟೇಶನ್ ಭೇಟಿ. ಪ್ಯಾರಿಸ್‍ನ ಸ್ಟಾರ್ ಹೋಟೆಲ್‍ವೊಂದರಲ್ಲಿ ಕುಳಿತ ಕ್ವಟ್ರೋಚಿ ಡಾಲರ್‍ಗಳಿಂದ ತುಂಬಿದ ಸೂಟ್‍ಕೇಸನ್ನು `ಹಸಿದ ವ್ಯಾಘ್ರ’ ಬಾಲಸಿಂಘಂ ಕೈಗಿಡುತ್ತಾರೆ. ಅದು ರಾಜೀವ್ ಹತ್ಯೆಗೆ ಕ್ವಟ್ರೋಚಿ ನೀಡಿದ ಮೊದಲ ಭಕ್ಷೀಸು. ಅದರ ಜತೆಗೇ ಎಲ್‍ಟಿಟಿಇಗೆ ಸಿಕ್ಕಿದ್ದು ರಾಜೀವ್ ಇಲ್ಲದ ಮೇಲೆ ಭಾರತೀಯ ಸೇನೆಯ ಭಯವಿನ್ನೆಲ್ಲಿ ಎನ್ನುವ ಕ್ರಿಮಿನಲ್ ಆಲೋಚನೆ!
ಫ್ರಾನ್ಸ್‍ನ ಸ್ಟಾರ್ ಹೋಟೆಲ್‍ಗಳಲ್ಲಿ ವಿದೇಶಿ ಆಗಂತುಕರು ನಡೆಸುವ ಪ್ರತಿಯೊಂದು ಸಭೆ ಮತ್ತು ಚರ್ಚೆಯ ಆಡಿಯೋ-ವಿಡಿಯೋವನ್ನು ಗೌಪ್ಯವಾಗಿ ರೆಕಾರ್ಡಿಂಗ್ ಮಾಡುವುದು ಅಲ್ಲಿನ ಗುಪ್ತಚರ ದಳದ ಕಡ್ಡಾಯ ನಿಯಮ. ಹೀಗಾಗಿ ಕ್ವಟ್ರೋಚಿ ಮತ್ತು ಬಾಲಸಿಂಘಂ ನಡುವೆ ಏನೇನು ಮಾತುಕತೆ ನಡೆಯಿತು, ಯಾವ ನಿರ್ಣಯ ಆಯಿತು ಎಂಬ ದಾಖಲೆ ಫ್ರಾನ್ಸ್ ಸರ್ಕಾರಕ್ಕೆ ಅನಾಯಾಸವಾಗಿ ಸಿಕ್ಕಿತು. ಆ ದಾಖಲೆ ಅಲ್ಲಿನ ಸರ್ಕಾರದ ಬಳಿ ಈಗಲೂ ಇದೆ. ಅದನ್ನು ಕೇಳುವವರು ಯಾರು, ಕೆದಕುವವರು ಯಾರು? ಯಾರಿಗೆ ಆ ಬಗ್ಗೆ ಆಸಕ್ತಿಯಿದೆ ಹೇಳಿ.
ಸ್ವೀಡಿಶ್ ಯುದ್ಧ ಸಾಮಗ್ರಿ ತಯಾರಿಕಾ ಕಂಪೆನಿಯ ಬೊಫೋರ್ಸ್ ಫಿರಂಗಿ ಹಗರಣಕ್ಕೂ ಅದರ ಬೆನ್ನಲ್ಲೇ ನಡೆದ ರಾಜೀವ್ ಹತ್ಯೆಗೂ ಒಂದಕ್ಕೊಂದು ನಿಕಟ ನಂಟಿದೆ ಎಂಬ ಥಿಯರಿಗೆ ಇಂಬು ನೀಡುವ ಮತ್ತೊಂದು ಪುರಾವೆಯಿದೆ ಕೇಳಿ. ರಾಜೀವ್ ಹತ್ಯೆಗೂ ಮೊದಲು, ಭಾರತದಲ್ಲಿ ಬೊಫೋರ್ಸ್ ಹಗರಣ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ವೇಳೆಗೆ ಸರಿಯಾಗಿ ಸ್ವೀಡನ್ ಪ್ರಧಾನಿ ಒಲ್ಫ್ ಪಾಮ್ ಹಂತಕರ ಗುಂಡಿಗೆ ಬಲಿಯಾಗುತ್ತಾರೆ. ಸರಳತೆ ಮತ್ತು ದಕ್ಷತೆಗೆ ಹೆಸರಾಗಿದ್ದವರು ಪಾಮ್. ದೇಶದ ಪ್ರಧಾನಿಯಾಗಿದ್ದ ಒಲ್ಫ್ ಪತ್ನಿ ಜತೆ ಸಿನಿಮಾ ನೋಡಿಕೊಂಡು ಕಾಲ್ನಡಿಗೆಯಲ್ಲೇ ಮನೆಗೆ ವಾಪಸಾಗುತ್ತಿದ್ದಾಗ ಹಿಂದಿನಿಂದ ಬಂದ ಬಂದೂಕುಧಾರಿಗಳು ಸ್ಟಾಕ್‍ಹೋಮ್‍ನ ಬೀದಿಯಲ್ಲಿ ಒಲ್ಫ್‍ರನ್ನು ಹತ್ಯೆ ಮಾಡುತ್ತಾರೆ. ಹತ್ಯೆಯಾಗುವ ದಿನ ಸಾಯಂಕಾಲ ಒಲ್ಫ್ ಪತ್ನಿ ಲಿಸ್‍ಬೆಟ್ ಪಾಮ್‍ಗೆ ಯಾರೋ ಫೋನ್ ಮಾಡಿ “ `ಪ್ರೊಡೆಮಾ ಮೊಜಾವಿತ್’ ಎಂಬ ಸ್ವೀಡಿಶ್ ಕಾಮಿಡಿ ಸಿನಿಮಾ ಬಹಳ ಚೆನ್ನಾಗಿದೆ, ನೀವು ನೋಡಲೇಬೇಕು” ಎಂದು ಹೇಳುತ್ತಾರೆ. ಗಡಿಬಿಡಿಯಲ್ಲಿ ಬಾಡಿಗಾರ್ಡ್‍ಗಳನ್ನೂ ಜತೆಗೆ ಕರೆದೊಯ್ಯದೆ ಸಿನಿಮಾ ನೋಡಲು ಹೋಗುತ್ತಾರೆ ಒಲ್ಫ್ ಜೋಡಿ. ಇವರು ಥಿಯೇಟರ್‍ಗೆ ಹೋಗುವ ಹೊತ್ತಿಗೆ ಟಿಕೆಟ್ ಕೂಡ ಮುಗಿದುಹೋಗಿರುತ್ತದೆ. ದೇಶದ ಪ್ರಧಾನಿ ಬಂದಿದ್ದಾರೆಂಬ ಕಾರಣಕ್ಕೆ ಥಿಯೇಟರಿನಲ್ಲಿ ಆಸನ ಮಾಡಿಕೊಡಲಾಗುತ್ತದೆ. ಸಿನಿಮಾ ನೋಡಿ ಖುಷಿಪಟ್ಟರು. ಅಲ್ಲಿಂದ ಮನೆಗೆ ವಾಪಸ್ ಬರುವಾಗ ಹಂತಕರು ಒಲ್ಫ್ ಮತ್ತು ಲಿಸ್‍ಬೆಟ್ ಇಬ್ಬರ ಮೇಲೂ ಗುಂಡಿನ ದಾಳಿ ಮಾಡುತ್ತಾರೆ. ಮಿಸೆಸ್ ಒಲ್ಫ್ ಹೇಗೋ ಬದುಕುಳಿಯುತ್ತಾರೆ. ಆದರೆ ಹತ್ಯೆ ಸಂಚು ಇಂದಿಗೂ ನಿಗೂಢ. ಹೇಗಿದೆ ಚಮತ್ಕಾರ, ಎಲ್ಲಿಯ ಮೂಲ?!
ಎಲ್‍ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್, 1991ರ ರಾಜೀವ್ ಹತ್ಯೆ ಕಾಲಕ್ಕೆ ಶ್ರೀಲಂಕಾದ ಅಧ್ಯಕ್ಷರಾಗಿದ್ದ ರಣಸಿಂಘೆ ಪ್ರೇಮದಾಸ, ಎಲ್‍ಟಿಟಿಇ ಸಿಪಾಯಿಗಳಾಗಿದ್ದ ಶಿವರಸನ್, ಕುಮಾರಪದ್ಮನಾಭನ್, ಧನು, ನಳಿನಿ ಎಲ್ಲರೂ ರಾಜೀವ್ ಹತ್ಯೆ ಸಂಚನ್ನು ಯೋಜಿಸಿದಂತೆ ಜಾರಿ ಮಾಡಿದ ಹಂತಕರು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಹತ್ಯೆ ಸಂಚಿನ ಮೂಲ ಎಲ್ಲಿದೆ, ಅದರ ಸೂತ್ರಧಾರರು ಯಾರು, ರಾಜೀವ್ ಶತ್ರುಗಳು ಪರಸ್ಪರ ಗೊತ್ತಿಲ್ಲದಂತೆ ಬೇರೆ ಬೇರೆ ತಂಡಗಳಲ್ಲಿ ಕಾರ್ಯಾಚರಿಸುತ್ತಿದ್ದರೇ? ಇವೆಲ್ಲವಕ್ಕೂ ಹತ್ಯೆ ಕುರಿತು ತನಿಖೆ ನಡೆಸಿದ ಏಜೆನ್ಸಿಗಳು, ಸಿಬಿಐ ಇತ್ಯಾದಿ ಉನ್ನತ ತನಿಖಾ ಸಂಸ್ಥೆಗಳ ಮಾಜಿ ಅಧಿಕಾರಿಗಳು ಏನೇನು ಹೇಳಿದ್ದಾರೆ, ಬರೆದಿದ್ದಾರೆ? ಯಾವೆಲ್ಲ ಪಾತ್ರಗಳು ಒಂದು ಹತ್ಯಾಸಂಚಿನ ನಾಟಕದ ಅಂಕದ ಮೇಲೆ ಬಂದು ಹೋಗುತ್ತವೆ ಎಂಬುದು ನಿಜಕ್ಕೂ ಇಂಟರೆಸ್ಟಿಂಗ್….