ದೇಶದಲ್ಲೇ ಮೊದಲ ಕೊರೊನಾ ಸಾವು ಸಂಭವಿಸಿದ್ದು ಕಲಬುರಗಿಯಲ್ಲಿ. ಮಾರ್ಚ್ 9ರಂದು ಮೊದಲ ಪ್ರಕರಣ ದಾಖಲಾಗಿ ಹಲವು ವಾರಗಳ ಕಾಲ ರಾಜ್ಯ ಸೋಂಕಿನ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಮುಂದಿನ ದಿನಗಳಲ್ಲಿ ಭಾರಿ ಅಪಾಯ ಕಾದಿದೆ ಎನ್ನುವ ಸಂಕೇತವೊಂದು ಆಗ ದೊರಕಿತ್ತು. ಆದರೆ, ರಾಜ್ಯದ ಸರಕಾರ, ಅಧಿಕಾರಿಗಳು ಮತ್ತು ಜನರ ಸಂಘಟಿತ ಪ್ರಯತ್ನದ ಫಲವಾಗಿ ದೇಶದಲ್ಲೇ ಕೊರೊನಾ ಅತ್ಯಂತ ನಿಯಂತ್ರಣದಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ಗುಜರಾತ್, ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದರೆ, ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದಲ್ಲಿ ಈಗ ಕರ್ನಾಟಕಕ್ಕೆ 12ನೇ ಸ್ಥಾನ. 512 ಪ್ರಕರಣಗಳಲ್ಲಿ 193 ಮಂದಿ ಆಗಲೇ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಕಳೆದ ಎರಡು ದಿನಗಳಲ್ಲಿ ದಾಖಲಾದ ಪಾಸಿಟಿವ್ ಪ್ರಕರಣಗಳು ಕೇವಲ 11. ಅದು ಕೂಡಾ ರೆಡ್ ಜೋನ್ಗೆ ಸೀಮಿತವಾಗಿಯಷ್ಟೇ ಹೊಸ ಪ್ರಕರಣಗಳು ವರದಿಯಾಗುತ್ತಿವೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ಸಂಪುಟ ಸನ್ನಿವೇಶಕ್ಕೆ ತಕ್ಕಂತೆ ತೆಗೆದುಕೊಂಡ ನಿರ್ಧಾರಗಳು, ಜನರ ಸಹಕಾರ, ವೈದ್ಯಕೀಯ, ಪೊಲೀಸ್ ಸಿಬ್ಬಂದಿಯ ಸಹಕಾರದಿಂದ ಇದು ಸಾಧ್ಯವಾಗಿದೆ.
ಲಾಕ್ಡೌನ್ ಮೊದಲೇ ಬಂದ್ : ದೇಶದಲ್ಲಿ ಲಾಕ್ಡೌನ್ ಘೋಷಣೆಗೆ ಮುನ್ನವೇ ರಾಜ್ಯದಲ್ಲಿ ಬಹುತೇಕ ಎಲ್ಲ ವ್ಯವಸ್ಥೆಗಳನ್ನು ಬಂದ್ ಮಾಡಿದ್ದು ಗಂಭೀರತೆಯನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಪುರಾವೆ.
ಟಾಸ್ಕ್ಫೋರ್ಸ್ ಬೆಂಗಾವಲು: ಡಾ. ದೇವಿ ಶೆಟ್ಟಿ ಮತ್ತು ಡಾ. ಸುದರ್ಶನ್ ಬಲ್ಲಾಳ ನೇತೃತ್ವದಲ್ಲಿ ಎರಡು ಟಾಸ್ಕ್ಫೋರ್ಸ್ ರಚಿಸಿ, ಅದರ ಶಿಫಾರಸಿನಂತೆ ಹೆಜ್ಜೆ ಇಟ್ಟಿದ್ದು ರಾಜ್ಯಕ್ಕೆ ಲಾಭವಾಯಿತು.
ಆಸ್ಪತ್ರೆಗಳು, ವಾರ್ರೂಮ್: ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ನಿಯೋಜನೆ. ಪ್ರತ್ಯೇಕ ವಾರ್ ರೂಮ್ ಮೂಲಕ ಎಲ್ಲ ಚಟುವಟಿಕೆಗಳ ಮೇಲೆ ನಿಗಾ.
ಸಂಪರ್ಕಿತರ ಯಶಸ್ವಿ ಪತ್ತೆ: ಕೇಸು ಪತ್ತೆಯಾದ ಕೂಡಲೇ ಟ್ರಾವೆಲ್ ಹಿಸ್ಟರಿ ಬೆನ್ನತ್ತಿ, ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ಗೆ ಒಳಪಡಿಸಿದ್ದರಿಂದ ಸೋಂಕು ಹರಡುವಿಕೆಗೆ ಕಡಿವಾಣ.
ಜನರ ಅಪೂರ್ವ ಸ್ಪಂದನ: ಸಿಎಂ ಸೂಚನೆ ಮತ್ತು ಪ್ರಧಾನಿ ಮನವಿಗೆ ಇಡೀ ರಾಜ್ಯದ 95% ಜನರು ಸ್ಪಂದಿಸಿ, ಮನೆಯೊಳಗೇ ಉಳಿದು ಬೆಂಬಲ ಸೂಚಿಸಿದರು. ಕೆಲವೇ ಅಹಿತಕರ ಘಟನೆಗಳು ನಡೆದವು.
ತುರ್ತು ಚಿಕಿತ್ಸೆ, ಭರವಸೆ ದುಬೈಯಿಂದ ಬಂದವರನ್ನು ಆರಂಭಿಕ ಹಂತದಲ್ಲೇ ಚಿಕಿತ್ಸೆಗೆ ಒಳಪಡಿಸಿದ್ದು, ಸೋಂಕಿತರಲ್ಲಿ ಭರವಸೆ ತುಂಬಿದ್ದರಿಂದ ಗುಣಮುಖ ವೇಗ ಹೆಚ್ಚಳ.
ಸೀಲ್ಡೌನ್, ಕಂಟೈನ್ಮೆಂಟ್: ಒಂದೇ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾದಾಗ ಸೀಲ್ಡೌನ್ ಮಾಡುವುದು, ಕಂಟೈನ್ಮೆಂಟ್ ಏರಿಯಾಗಳೆಂದು ಗುರುತಿಸಿ ಎಲ್ಲ ರೀತಿಯ ಕಟ್ಟೆಚ್ಚರಗಳನ್ನು ವಹಿಸಿದ್ದು.
ಡಿಸಿ, ಎಸ್ಪಿಗಳ ಕಟ್ಟುನಿಟ್ಟು ಕೆಲವು ಡಿಸಿಗಳು ಯಾರ ಮಾತನ್ನೂ ಕೇಳದೆ ಲಾಕ್ಡೌನ್ ಪಾಲನೆ ಮಾಡಿದ್ದರಿಂದ ಸುಮಾರು 11 ಜಿಲ್ಲೆಗಳಲ್ಲಿ ಒಂದೇ ಒಂದು ಪ್ರಕರಣವೂ ವರದಿಯಾಗಲಿಲ್ಲ.
ಜನರ ಸ್ವಯಂ ಲಾಕ್ಡೌನ್: ರಾಜ್ಯದ ಹಲವಾರು ಕಡೆಗಳಲ್ಲಿಜನರೇ ಸ್ವತಃ ತಮ್ಮ ಬಡಾವಣೆಗೆ, ತಮ್ಮ ಊರಿಗೆ ಬೇಲಿ ಹಾಕಿಕೊಂಡು ಸೋಂಕಿತರ ಪ್ರವೇಶವನ್ನು ತಪ್ಪಿಸಲು ಯತ್ನಿಸಿದರು.
ಜನರ ತಪಾಸಣೆ -1,40,485,
ನಿಗಾದಲ್ಲಿ -23,942, ಒಟ್ಟು ಪರೀಕ್ಷೆ -45,685, ಸೋಂಕಿತರು- 512, ಗುಣಮುಖ -193, ಸಾವು- 20.
12ನೇ ಸ್ಥಾನದಲ್ಲಿ ಕರ್ನಾಟಕ.
ರಾಜ್ಯಗಳು – ಸೋಂಕು – ಸಾವು
ಮಹಾರಾಷ್ಟ್ರ- 8,068 – 342
ಗುಜರಾತ್ – 3,548 – 162
ದಿಲ್ಲಿ – 2918 – 54
ರಾಜಸ್ಥಾನ – 2,234 – 46
ಮ.ಪ್ರದೇಶ – 2,090 – 103
ತಮಿಳುನಾಡು – 1,937 – 24
ಉ.ಪ್ರದೇಶ – 1,873 – 30
ಆಂಧ್ರ ಪ್ರದೇಶ – 1,177 – 31
ತೆಲಂಗಾಣ – 1,003 – 25
ಪ.ಬಂಗಾಳ – 649 – 20
ಜಮ್ಮು-ಕಾಶ್ಮೀರ – 546 – 17
ಕರ್ನಾಟಕ – 512 – 20