ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮೂವರು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 503ಕ್ಕೇರಿದೆ. ಬೆಂಗಳೂರು ನಗರದಲ್ಲಿ ಸೋಂಕಿತ ಮಹಿಳೆ ಭಾನುವಾರ ಕೊನೆಯುಸಿರೆಳೆದ್ದಾರೆ. ಕೆಲ ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಭಾನುವಾರ ಮಾತ್ರ ಅತಿ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ಕಂಡು ಬಂದಿರುವುದು ಕರ್ನಾಟಕದಲ್ಲಿ ನಿರಾಳ ಭಾವ ಮೂಡಿಸಿದೆ.
ಕಲಬುರಗಿಯಲ್ಲಿ 2 ಹಾಗೂ ದಕ್ಷಿಣ ಕನ್ನಡದಲ್ಲಿ1 ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನ ಹಂಪಿನಗರದ ನಿವಾಸಿ, 45 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಸಿರಾಟದ ತೀವ್ರ ತೊಂದರೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರನ್ನು ಏ.24 ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೊರೊನಾ ಸೋಂಕು ಕೂಡ ಇರುವುದು ಪರೀಕ್ಷಾ ವರದಿಯಲ್ಲಿ ದೃಢಪಟ್ಟಿತ್ತು.
ಆಕೆಯ ಆರೋಗ್ಯ ಕ್ಷೀಣಿಸುತ್ತಲೇ ಹೋಗಿದ್ದರಿಂದ ಐಸಿಯುನಲ್ಲಿರಿಸಲಾಗಿತ್ತು. ಈ ಹಿಂದೆ ಕ್ಷಯ ರೋಗದಿಂದಲೂ ಬಳಲಿದ್ದರು. ಜತೆಗೆ ಮಧುಮೇಹ ಕೂಡ ಇತ್ತು. ಇವರ ಪತಿ ಕೆಲ ದಿನಗಳ ಹಿಂದಷ್ಟೇ ಮೂತ್ರಪಿಂಡ ಸಮಸ್ಯೆಗೊಳಗಾಗಿ ಮೃತರಾಗಿದ್ದರು.
ಕಲಬುರಗಿಯಲ್ಲಿ ಬೇರೊಬ್ಬ ರೋಗಿಯ (422) ಸಂಪರ್ಕದಿಂದ 65 ವರ್ಷದ ವೃದ್ಧೆಗೆ ಸೋಂಕು ತಗುಲಿದೆ. ಇದೇ ರೀತಿ ಬೇರೊಬ್ಬ ರೋಗಿಯ (425) ದ್ವಿತೀಯ ಸಂಪರ್ಕ ಹೊಂದಿದ್ದ ಏಳು ವರ್ಷದ ಬಾಲಕನಿಗೆ ಸೋಂಕು ಖಚಿತವಾಗಿದೆ. ದಕ್ಷಿಣ ಕನ್ನಡದ ಪಾಣೆ ಮಂಗಳೂರಿನ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಈಕೆಗೆ ಬೇರೆ ರೋಗಿಯಿಂದ (432) ಸೋಂಕು ತಗುಲಿದೆ. ಒಟ್ಟು ಸೋಂಕಿತರಲ್ಲಿ ಈವರೆಗೆ 182 ಮಂದಿ ಗುಣಮುಖರಾಗಿದ್ದಾರೆ.
ಭಾನುವಾರ 24 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6 ಮಂದಿಯ ಸ್ಥಿತಿ ಗಂಭೀರವಾಗಿರುವುದರಿಂದ ಐಸಿಯುನಲ್ಲಿ ಇರಿಸಲಾಗಿದೆ. ಬೆಂಗಳೂರಿನಲ್ಲಿ 8, ಮೈಸೂರು, ಬಾಗಲಕೋಟೆ, ಮಂಡ್ಯದಲ್ಲಿ ತಲಾ ನಾಲ್ವರು ಹಾಗೂ ಬೆಳಗಾವಿ, ಬಳ್ಳಾರಿಯಲ್ಲಿ ತಲಾ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.