ಮೊದಲು ಕನ್ನಡಿಗನೋ, ಭಾರತೀಯನೋ?

ಕರ್ನಾಟಕ ಮಾತೆ ಭಾರತ ಜನನಿಯ ತನುಜಾತೆ ಎಂದ ಕುವೆಂಪು ಅವರನ್ನು ನೆನಪಿಸಿಕೊಳ್ಳೋಣ.

-ಡಾ. ರೋಹಿಣಾಕ್ಷ ಶಿರ್ಲಾಲು.

ಮೇಲ್ಸೇತುವೆಯೊಂದಕ್ಕೆ ಸ್ವಾತಂತ್ರ್ಯವೀರ ಸಾವರ್ಕರ್ ಹೆಸರು ಪ್ರಸ್ತಾಪಗೊಂಡಾಗ ಅವರು ಕನ್ನಡಿಗರಲ್ಲ, ಕರ್ನಾಟಕದೊಳಗೆ ಕನ್ನಡಿಗರ ಹೆಸರನ್ನೇ ಇಡಬೇಕು ಎಂದು ಆರಂಭಗೊಂಡ ವಾದ ‘ಮೊದಲು ನಾನು ಕನ್ನಡಿಗ, ನಂತರ ಭಾರತೀಯ, ಕರ್ನಾಟಕದಿಂದ ಭಾರತ’ ಎನ್ನುವ ಮಾತುಗಳಾಗಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ತಮ್ಮನ್ನು ತಾವು ಕನ್ನಡಪರ ಹೋರಾಟಗಾರರೆಂದು ಕರೆದುಕೊಳ್ಳುವ ಕೆಲವರು ತಮ್ಮ ಕನ್ನಡ ಹೋರಾಟದ ಮುಖವಾಣಿಯಂತೆ ಈ ಮಾತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕನ್ನಡದ ಕೆಲಸ ಭಾರತೀಯರೆಂಬ ಭಾವನೆಗೆ ಪ್ರತಿರೋಧವೇ? ಮೊದಲು ಕನ್ನಡವೋ ಭಾರತವೋ ಎನ್ನುವ ಗೊಂದಲದ ಮೂಲ ಯಾವುದು? ಈ ಗೊಂದಲವು ಅಜ್ಞಾನದಿಂದ ಹುಟ್ಟಿದ್ದೋ ಅಥವಾ ಇಂತಹ ಗೊಂದಲವನ್ನು ಮೂಡಿಸುವುದೇ ಒಂದು ಅಜೆಂಡಾವೋ? ಈ ಪ್ರಶ್ನೆಗಳು ಪ್ರಾಜ್ಞರನ್ನು ಕಾಡದಿರದು.
ಕರ್ನಾಟಕವೂ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ತಮ್ಮ ಭಾಷೆಯ ರಕ್ಷಣೆಯ ಹೆಸರಿನಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡಿರುವುದನ್ನು ನಾವು ನೋಡುತ್ತಿದ್ದೇವೆ. ಕೆಲವೇ ಕೆಲವು ಸಂಘಟನೆಗಳ ಹೊರತಾಗಿ ಬಹುತೇಕ ಸಂಘಟನೆಗಳು ಭಾಷೆಯನ್ನು ಉಳಿಸುವ ತಮ್ಮ ಕಾರ್ಯದ ಮಾಧ್ಯಮವೆಂಬಂತೆ ಬಳಸಿಕೊಳ್ಳುತ್ತಿರುವುದು ಪರಭಾಷಾ ವಿರೋಧವನ್ನು. ಈ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಹಾಗೆಂದು ಕನ್ನಡದ ಪರವಾದ ಚಟುವಟಿಕೆಗಳು ಇಂದೇನೂ ದಿಡೀರಾಗಿ ಹುಟ್ಟಿಕೊಂಡದ್ದಲ್ಲ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲೇ ಸ್ವಾತಂತ್ರ್ಯದ ಹೋರಾಟಕ್ಕೆ ಎಲ್ಲೂ ಧಕ್ಕೆಯಾಗದಂತೆ, ತಮ್ಮ ಭಾಷೆಯ ಅಸ್ಮಿತೆಯನ್ನು ಉಳಿಸುವುದಕ್ಕಾಗಿ ಕರ್ನಾಟಕ ಏಕೀಕರಣ ಹೋರಾಟವನ್ನು ಕಟ್ಟಲಾಗಿತ್ತು. ಆ ಹೋರಾಟವೇ ಭಾಷಾವಾರು ಪ್ರಾಂತ್ಯಗಳ ರಚನೆಗೆ ನಾಂದಿ ಹಾಡಿತ್ತು. ಈ ಹೋರಾಟದ ಸಂದರ್ಭದಲ್ಲಿ ಕನ್ನಡವನ್ನು ಮಾತನಾಡುವ ಭೂಭಾಗವನ್ನು ಬೇರೆ ಬೇರೆ ಆಡಳಿತ ಘಟಕಗಳೊಳಗೆ ಸೇರಿಸಿದ ಪರಿಣಾಮ ಜನರು ಎದುರಿಸುತ್ತಿರುವ ಪರಿಣಾಮವನ್ನು ಅರಿತುಕೊಂಡು ಒಂದು ಭಾಷೆಯನ್ನು ಮಾತನಾಡುವ ಜನ ಒಂದೇ ಆಡಳಿತ ಘಟಕಕ್ಕೆ ಒಳಪಡುವಂತೆ ಮಾಡುವುದು ಹೋರಾಟದ ಮೂಲ ಉದ್ದೇಶಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಅಸ್ತಿತ್ವಕ್ಕೆ ಬರುವ ಮೂಲಕ ಈ ಹೋರಾಟ ತಾರ್ಕಿಕವಾದ ಯಶಸ್ಸನ್ನು ಕಂಡಿತು. ಆದರೆ ಅಂದಿನ ಹೋರಾಟದ ಮಾದರಿಗೂ ಇಂದು ಭಾಷೆಯ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೂ ಬಹಳ ವ್ಯತ್ಯಾಸವಿದೆ.
ಕನ್ನಡಕ್ಕಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಗೆ, ಸಂಘಟನೆಗೆ ಕುವೆಂಪು ಬಹುದೊಡ್ಡ ಮಾದರಿ. ಅವರು ಕನ್ನಡ ಹೋರಾಟದ ತಾತ್ವಿಕತೆಯನ್ನು ರೂಪುಗೊಳಿಸುತ್ತಿದ್ದ ಹೊತ್ತಿಗೆ ಭಾರತದಾದ್ಯಂತ ಸ್ವಾತಂತ್ರ್ಯ ಹೋರಾಟದ ಕಾವು ತೀವ್ರಗತಿಯಲ್ಲಿತ್ತು. ಅದೇ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆಯೂ ಚಿಂತಕ ವಲಯವನ್ನು ಕಾಡಿತ್ತು. ಭಾಷೆಯ ಹೆಸರಿನ ಹೋರಾಟ ಅಂಕೆ ತಪ್ಪಿದ್ದರೆ ರಾಷ್ಟ್ರದ ಬಿಡುಗಡೆಯ ಹೋರಾಟಕ್ಕೆ ಹಿನ್ನೆಡೆಯಾಗುತ್ತಿತ್ತು. ಇದನ್ನು ಹೋರಾಟಗಾರರು ತಿಳಿದಿದ್ದರು. ಹಾಗಾಗಿ ಪ್ರಾತಃಸ್ಮರಣೀಯ ಕನ್ನಡದ ಮಹನೀಯರ ಕನ್ನಡ ಪ್ರೀತಿ ಭಾರತ ಪ್ರೀತಿಗೆ ಪ್ರತಿರೋಧದ ರೂಪದಲ್ಲಿರಲಿಲ್ಲ. ಒಂದು ಇನ್ನೊಂದರ ಅಸ್ತಿತ್ವವನ್ನು ಅಳಿಸಿ ಬೆಳೆಯಬಲ್ಲುದೆನ್ನುವ ಕ್ಷುಲ್ಲಕ ಮನಸ್ಥಿತಿ ಅವರಲ್ಲಿರಲಿಲ್ಲ. ಆದರೆ ಇಂದಿನ ಅನೇಕ ಹೋರಾಟಗಾರರ ಮಾತಿನ ಧ್ವನಿ ಭಾರತ ವಿರೋಧಿಯಾಗಿ, ಅನ್ಯಭಾಷಾ ವಿರೋಧಿಯಾಗಿ ಕಾಣಿಸಿಕೊಳ್ಳುತ್ತಿರುವುದು ಅಪಾಯಕಾರಿ. ಕನ್ನಡದ ಹೆಸರಿನ ಧ್ವನಿಯೊಂದು ಒಡಕಿನ ಧ್ವನಿಯಾಗಿ ಪ್ರತಿಧ್ವನಿಸುತ್ತಿರುವಾಗ ನಿಜವಾದ ಕನ್ನಡಪ್ರೇಮಿಗಳು ಈ ಒಡಕಿನ ಧ್ವನಿಯ ಹಿನ್ನೆಲೆಯನ್ನು ಅರಿತುಕೊಂಡು, ಮಟ್ಟಹಾಕದಿದ್ದರೆ ಮುಂದೊಂದು ದಿನ ಅದು ಪ್ರತ್ಯೇಕತೆಯ ಕೂಗಿನ ಬೀಜವಾಗುತ್ತದೆ. ಅಂತಹ ಅನೇಕ ಪ್ರತ್ಯೇಕತೆಯ ಧ್ವನಿಗಳಿಂದು ಭಾರತದೊಳಗೆ ಬಾಹ್ಯ ಶಕ್ತಿಗಳಿಂದ ಪೋಷಿಸಲ್ಪಡುತ್ತಿವೆ. ಯಾವುದೇ ಭಾಷೆಯ, ಪ್ರದೇಶದ ಅಭಿಮಾನವು ರಾಷ್ಟ್ರದ ಸಮಗ್ರತೆಗೆ, ಏಕತೆಗೆ ಧಕ್ಕೆ ತರುವ ಕುತಂತ್ರವಾಗದಂತೆ ನೋಡಿಕೊಳ್ಳುವ ಎಚ್ಚರ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು.
ಕುವೆಂಪು ಅವರ ಮಾತು ಮಾತುಗಳಲ್ಲಿ ಮೊಳಗುತ್ತಿದ್ದ ಕನ್ನಡಾಭಿಮಾನ ರಾಷ್ಟ್ರದ ಸಮಗ್ರತೆಯ ಭಾವಕ್ಕೆ ಒಂದಿನಿತೂ ಧಕ್ಕೆ ತರುವಂತಿರಲಿಲ್ಲ. ಅವರು ಹೇಳುವಂತೆ, ‘‘ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯಕ್ಕೆ ಒಂದಿನಿತೂ ವ್ಯಾಘಾತ ಒದಗುವುದಿಲ್ಲ ಎಂಬುದು ವಿದಿತವಾಗುತ್ತದೆ. ಏಕೆಂದರೆ ಭಾಷೆಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ ಬೇರೆ ಬೇರೆಯ ಪ್ರದೇಶ ಮತ್ತು ರಾಜ್ಯಗಳ ಕಲಾ ಮತ್ತು ಸಾಹಿತ್ಯಾದಿಗಳ ವಸ್ತು ಮತ್ತು ದೃಷ್ಟಿಗಳಲ್ಲಿ ಅಖಿಲ ಭಾರತೀಯವಾದ ಏಕೈಕ ಮೂಲ ಸಂಸ್ಕೃತಿಯೇ ಶೇಕಡಾ ತೊಂಬತ್ತೈದಕ್ಕಿಂತಲೂ ಹೆಚ್ಚಾಗಿ ಸರ್ವಸಾಧಾರಣವಾಗಿದೆ. ಆ ಮೂಲ ಸಂಸ್ಕೃತಿಯ ವಜ್ರ ಬೆಸುಗೆ ನಮ್ಮ ಒಗ್ಗಟ್ಟನ್ನು ಎಂದೆಂದಿಗೂ ಒಡೆಯಲು ಬಿಡುವುದಿಲ್ಲ. ಅಷ್ಟೇ ಅಲ್ಲ, ನಮಗೀಗ ಒದಗಿರುವ ರಾಜಕೀಯ ಅಖಂಡತೆಗೂ ಏಕತೆಗೂ ಮೂಲ ಕಾರಣವೂ ಆ ಅಖಿಲ ಭಾರತೀಯವಾಗಿರುವ ಸಂಸ್ಕೃತಿಯ ಮೂಲದಲ್ಲಿಯೇ ಇದೆ,’’ ಎನ್ನುತ್ತಾರೆ. ಭಾರತ ಮತ್ತು ಕರ್ನಾಟಕದ ಸಂಬಂಧದ ಸ್ವರೂಪ ಇಲ್ಲಿ ಪರಸ್ಪರ ಒಳಗೊಳ್ಳುವಿಕೆಯ ಆಯಾಮದಲ್ಲಿದೆ. ರಾಷ್ಟ್ರ ತಾಯಿಯಾಗಿ, ನಾಡು ತನುಜಾತೆಯಾಗಿ, ಹಿರಿಮಗಳಾಗಿ, ಪೆರ್ಮಗಳ್, ಪುತ್ರಿ, ಸೋದರಿಯಾಗಿ ಕಾಣಿಸಿಕೊಳ್ಳುವುದು ಇಲ್ಲಿನ ವೈಶಿಷ್ಟ್ಯ. ತಾಯಿ ಮಗಳ ಚಿತ್ರಣದೊಂದಿಗೆ, ಕನ್ನಡಮ್ಮ ಕ್ಷಾತ್ರರೂಪವನ್ನು ತಾಳುವುದಕ್ಕಾಗಿ ಭುವನೇಶ್ವರಿಯಾಗಿ, ಚಾಮುಂಡಿ ದೇವಿಯಾಗಿ, ರಾಜರಾಜೇಶ್ವರಿಯಾಗಿ ಕಾಣಿಸಿಕೊಳ್ಳುವುದನ್ನು ನೋಡಬಹುದು. ಭಾರತೀಯತ್ವದಲ್ಲಿ ಕರ್ನಾಟಕ, ಕರ್ನಾಟಕತ್ವದ ಒಳಗೆ ಭಾರತೀಯತೆಯನ್ನು ಒಳಗೊಂಡು ಅಂತಿಮವಾಗಿ ಕನ್ನಡಿಗರು, ಭಾರತೀಯರೂ ವಿಶ್ವಮಾನವರೂ ಆಗಬಹುದಾದ ತಾತ್ವಿಕತೆಯನ್ನು ಕನ್ನಡದ ಐಕ್ಯತೆಯ ಹೋರಾಟಕ್ಕೆ ನೀಡಿದ್ದರು. ಈ ತಾತ್ವಿಕತೆಯು ಕನ್ನಡಿಗನೊಬ್ಬ ಕನ್ನಡಿಗನಾಗಿರುತ್ತಲೇ ಭಾರತೀಯನೂ, ವಿಶ್ವಮಾನವನೂ ಆಗುವ ನಂಬಿಕೆಯನ್ನು ಸಮಸ್ಯಾತ್ಮಕಗೊಳಿಸುವುದಿಲ್ಲ.
ಕವಿ ಏಕತೆಯ ದರ್ಶನವನ್ನು ಸಮಗ್ರತೆಯಲ್ಲಿ ಕಾಣುತ್ತಾರೆ. ‘‘ಈ ಕರ್ನಾಟಕ ಭೌಗೋಳಿಕವಾಗಿ ಭಾರತದ ಇತರ ಪ್ರದೇಶಗಳಿಂದ ಭಿನ್ನವಾಗಿ ಕಂಡರೂ ಸಾಂಸ್ಕೃತಿಕವಾಗಿ ಅಷ್ಟೇನೂ ಭಿನ್ನವಲ್ಲ. ಆಧ್ಯಾತ್ಮಿಕವಾಗಿ ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಉಡುಗೆ-ತೊಡುಗೆ, ಉಣಿಸು, ನಡೆ-ನುಡಿಗಳಲ್ಲಿ ಪ್ರಾಂತದಿಂದ ಪ್ರಾಂತಕ್ಕೆ ಸ್ವಲ್ಪ ವ್ಯತ್ಯಾಸ ತೋರಿದರೂ ನಮ್ಮೆಲ್ಲರ ಕನಸು ಒಂದೇ, ನಮ್ಮೆಲ್ಲರ ಮನಸ್ಸು ಒಂದೇ, ನಮ್ಮೆಲ್ಲರ ಗುರಿಯೂ ಒಂದೇ. ನಾವೆಲ್ಲ ಭಾರತೀಯರು,’’ ಎನ್ನುತ್ತಾರೆ. ಈ ಕನ್ನಡ ಭಾಷೆ, ಸಂಸ್ಕೃತಿಯನ್ನು ಕುರಿತು ಚಿಂತಿಸುವುದೆಂದರೆ ಅದು ವಿಶಾಲ ನೆಲೆಯಲ್ಲಿ ಭಾರತೀಯವಾದುದರ ಚಿಂತನೆಯೇ ಆಗಿರುತ್ತದೆ. ಹಾಗಾಗಿ ಕನ್ನಡ ಪ್ರಜ್ಞೆ ಭಾರತ ಪ್ರಜ್ಞೆಯ ಪ್ರತೀಕವೇ ಹೊರತು ವಿರುದ್ಧ ಅಲ್ಲ ಎನ್ನುವುದನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. ಅವರಿಗೆ ಭಾರತ-ಕರ್ನಾಟಕ ದ್ವಂದ್ವ ಸಂಬಂಧವಾಗಿ ಕಾಣಲಿಲ್ಲ. ಅವರು ಭಾರತದ ಮೂಲಕವೇ ಕನ್ನಡ ನಾಡಿನ ಅಭಿಮಾನವನ್ನು ಮೂಡಿಸುತ್ತಾರೆ. ‘ಜೈ ಭಾರತ ಜನನಿಯ ತನುಜಾತೆ’ ಎನ್ನುವ ಮೂಲಕ ಭಾರತ-ಕರ್ನಾಟಕಗಳ ನಡುವಿನ ಬಾಂಧವ್ಯವನ್ನು ‘ತಾಯಿ-ಮಗಳು’ ಆಗಿ ಪರಿಭಾವಿಸುತ್ತಾರೆ. ಕನ್ನಡದ ಕುರಿತ ಅವರ ಚಿಂತನೆಗಳು ಭಾರತ ಒಕ್ಕೂಟಕ್ಕೆ ವಿರೋಧದ ನೆಲೆಯಲ್ಲಿ ರೂಪು ತಾಳುವುದಿಲ್ಲ. ಒಂದು ಇನ್ನೊಂದಕ್ಕೆ ಪೂರಕವಾದ ನೆಲೆಯಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತವೆ. ಭಾರತ ರಾಷ್ಟ್ರದ ಕಲ್ಪನೆಯೊಳಗೆ ಕರ್ನಾಟಕದ ಅಖಂಡತೆಯನ್ನು ಪ್ರತಿಪಾದಿಸುತ್ತಾರೆ. ಕುವೆಂಪು ಅವರೇ ಹೇಳುವಂತೆ, ‘‘ಕರ್ನಾಟಕದ ಕವಿ ತನ್ನ ಗಾಥೆಯ ಒಂದೊಂದು ಪದ್ಯದ ಕೊನೆಯ ಚರಣವನ್ನೂ; ಭಾರತದ ಏಕತ್ವ ರಕ್ಷಣೆಯ ಮಂತ್ರವನ್ನಾಗಿ ಘೋಷಿಸಿದ್ದಾನೆ. ‘ರಾಘವ ಮಧುಸೂದನರವತರಿಸಿದ ಭಾರತ ಜನನಿಯ ತನುಜಾತೆ; ಜಯಹೇ ಕರ್ನಾಟಕ ಮಾತೆ! ಕಪಿಲ ಪತಂಜಲಿ ಗೌತಮ ಜಿನನುತ ಭಾರತ ಜನನಿಯ ತನುಜಾತೆ, ಜಯಹೇ
ಕರ್ನಾಟಕ ಮಾತೆ?’ ಇಲ್ಲಿ ಕರ್ನಾಟಕ ಮಾತೆಗೆ ತನ್ನದೇ ಆಗಿರುವ ಪ್ರತ್ಯೇಕ ಅಸ್ತಿತ್ವ ಇಲ್ಲ; ಸರ್ವದಾ ತಾಯಿ ಭಾರತಿಯ ಮಗಳಾಗಿಯೇ ಇರುವುದರಿಂದ ಮಾತ್ರ ಆಕೆಯ ಅಸ್ತಿತ್ವಕ್ಕೆ ರಕ್ಷೆ ಒದಗುತ್ತದೆ. ಅದರ ಘೋಷಣೆಗೆ ಅಮೃತ ಸಹಾಯ ಲಭಿಸುತ್ತದೆ.’’
ಕನ್ನಡದ ಧ್ವನಿಯನ್ನು ಅವರು ಭಾರತೀಯತೆಯಿಂದ ಪ್ರತ್ಯೇಕಗೊಳಿಸುವುದಿಲ್ಲ. ‘‘ನಾನು ರಾಜ್ಯ ದೃಷ್ಟಿಯಿಂದ ಕರ್ನಾಟಕದವನು, ಭಾಷಾ ದೃಷ್ಟಿಯಿಂದ ಕನ್ನಡಿಗನು, ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರ ದೃಷ್ಟಿಯಿಂದ ಭಾರತೀಯನು. ನನ್ನ ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ. ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುತ್ತದೆ. ಭಾರತಿ ತಾಯಿ, ಕರ್ನಾಟಕ ಮಗಳು. ಭಾರತಕ್ಕೆ ಧಕ್ಕೆ ಒದಗಿದರೆ ಕರ್ನಾಟಕ ಉಳಿಯುವುದಿಲ್ಲ. ಮಗಳು ಕರ್ನಾಟಕಕ್ಕೆ ಕೇಡಾದರೆ ತಾಯಿ ಭರತಮಾತೆ ಸಹಿಸುವುದಿಲ್ಲ.’’ ಎನ್ನುತ್ತಾರೆ.
‘‘ಕರ್ನಾಟಕ ಎಂಬುದೇನು/ಹೆಸರೆ ಬರಿಯ ಮಣ್ಣಿಗೆ?/ಮಂತ್ರ ಕಣಾ! ಶಕ್ತಿ ಕಣಾ!/ತಾಯಿ ಕಣಾ! ದೇವಿ ಕಣಾ!/ಬೆಂಕಿ ಕಣಾ! ಸಿಡಿಲು ಕಣಾ!/ಕಾವ ಕೊಲುವ ಒಲವ ಬಲವ/ಪಡೆದ ಚಲದ ಚಂಡಿ ಕಣಾ!/ಖುಷಿಯ ಕಾಣ್ಬ ಕಣ್ಣಿಗೆ!’’(ಅಖಂಡ ಕರ್ನಾಟಕ) ಎಂದು ಕನ್ನಡದ ಹಿರಿಮೆಯನ್ನು ಕುರಿತು ಹಾಡುವ ಕವಿ ಅಷ್ಟೇ ತಾದಾತ್ಮ್ಯದಲ್ಲಿ ಭಾರತದ ಹಿತದಲ್ಲಿ ಮುಕ್ತಿಯನ್ನು ಕಾಣುತ್ತರೆ. ‘‘ಭರತ ಖಂಡದ ಹಿತವೆ/ನನ್ನ ಹಿತ ಎಂದು /ಭರತ ಮಾತೆಯ ಮತವೇ /ನನ್ನ ಮತ ಎಂದು /ಭಾರತಾಂಬೆಯ ಸುತರೆ /ಸೋದರರು ಎಂದು/ಭಾರತಾಂಬೆಯ ಮುಕ್ತಿ/ಮುಕ್ತಿ ನನಗೆಂದು’’ (ಪಾಂಚಜನ್ಯ) ಎನ್ನುವ ಧ್ವನಿ ಇಂದಿನ ಸ್ವಘೋಷಿತ ಕನ್ನಡ ಹೋರಾಟಗಾರರಲ್ಲಿ ಕಾಣಲು ಸಾಧ್ಯವೇ?
ಕನ್ನಡದ ಧ್ವನಿ ನಾವೆಲ್ಲರೂ ಭಾರತೀಯರು ಎನ್ನುವುದನ್ನು ಮರೆಯಬಾರದು. ನಮ್ಮ ಭಾಷೆ ಸಾಹಿತ್ಯಗಳು ಆ ಏಕೈಕವಾದ ಭಾರತೀಯ ಸಂಸ್ಕೃತಿ ಸಮುದ್ರದ ಬೃಹತ್ ತರಂಗಮಾತ್ರಗಳಾಗಿವೆ. ಕೇರಳ ಕರ್ನಾಟಕ ಆಂಧ್ರಾದಿ ಪ್ರದೇಶಗಳೆಲ್ಲ ಆ ಭಾರತಿಯ ಅಂಗರೂಪಗಳು. ಅಂಶರೂಪಗಳು. ಕೇರಳಾಭಿಮಾನ, ಕರ್ನಾಟಕಾಭಿಮಾನ, ಆಂಧ್ರಾಭಿಮಾನ ಇತ್ಯಾದಿ ದೇಶಭಾಷಾ ಕ್ಷೇತ್ರಾಭಿಮಾನಗಳು ದ್ವೇಷಕ್ಕಾಗಲೀ ಅಸಹನೆಗಾಗಲಿ ಅನ್ಯಾಯಕ್ಕಾಗಲಿ ಆಕ್ರಮಣ ಬುದ್ಧಿಗಾಗಲಿ ಎಡೆಗೊಡದೆ ಭಾರತಾಭಿಮಾನದ ಆಶ್ರಯದಲ್ಲಿ, ವೈಯಕ್ತಿಕವಾದ ಮತ್ತು ಅನುಚಿತವಾದ ಸ್ವಾರ್ಥತೆಗಳನ್ನು ತ್ಯಜಿಸಿ, ತಮ್ಮ ತಮ್ಮ ಏಳಿಗೆಯನ್ನು ಸಾಧಿಸಬೇಕು ಎನ್ನುವ ಕುವೆಂಪು ಅವರ ಮಾತುಗಳನ್ನು ಮರೆಯಬಾರದು.
ಕನ್ನಡ ಮತ್ತು ಭಾರತದ ನಡುವಿನ ಹೊಕ್ಕುಳು ಬಳ್ಳಿ ಸಂಬಂಧವನ್ನು ಮರೆತವರಿಂದ ಇಂದು ವಿಭಜನೆಯ ಧ್ವನಿ ಕೇಳುತ್ತಿರುವುದು. ಕನ್ನಡ ಮೊದಲೇ? ಭಾರತ ಮೊದಲೇ? ಎನ್ನುವ ಪ್ರಶ್ನೆಯಲ್ಲೇ ಒಡಕಿನ ವಾಸನೆಯಿದೆ. ಈ ಒಡಕಿನ ಭಾವ ಬ್ರಿಟಿಷರು ಬಿತ್ತಿದ ಒಡೆದು ಆಳಿದ ನೀತಿಗಿಂತ ಭಿನ್ನವೇನಲ್ಲ. ಕುವೆಂಪು ಭಾರತವನ್ನು ಕಂಡದ್ದು ಬಹುಜಿಹ್ವಾ ಭಾರತಿಯಾಗಿ. ಕನ್ನಡವೂ ಸೇರಿದಂತೆ ಎಲ್ಲಾ ದೇಶ ಭಾಷೆಗಳು ಆ ತಾಯಿಗೆ ಬೆಳಗಿದ್ದು ಏಕತೆಯ ಆರತಿಯನ್ನು ಎನ್ನುವುದನ್ನು ತಮ್ಮ ಮಾತು ಬರವಣಿಗೆಗಳಲ್ಲಿ ಸ್ಪಷ್ಟಪಡಿಸುತ್ತಾರೆ. ಜತೆಗೆ ಸಾಹಿತ್ಯದ ಜವಾಬ್ದಾರಿಯನ್ನು ನೆನಪಿಸಿಕೊಡುತ್ತಾರೆ. ‘‘ಯಾವುದಾದರೂ ಭಾಷೆಯ ಯಾವನಾದರೂ ಒಬ್ಬ ಸಾಹಿತಿ ಸೌಹಾರ್ದಕ್ಕೆ ಭಂಗತರುವ ರೀತಿಯಲ್ಲಿ ಅಪಸ್ವರವೆತ್ತಿ ಹಾಡಿದ್ದರೆ, ಅದು ಖಂಡನೀಯ. ಅದು ಅಸುರೀ ಸಾಹಿತ್ಯವಾಗುತ್ತದೆ. ನಿಜವಾದ ಸಾಹಿತ್ಯ ಐಕ್ಯಕಾರಿ. ಸಾಮರಸ್ಯ, ಸಮನ್ವಯ, ಸಹಾನುಭೂತಿ, ಸರ್ವೋದಯದ ಭಾವನೆಗಳನ್ನು ಪ್ರಚೋದಿಸುವುದೇ ದೈವೀ ಸಾಹಿತ್ಯದ ಲಕ್ಷ ಣ. ಅಸೂಯೆ, ದ್ವೇಷ, ಸ್ವಾರ್ಥ, ನಿಷ್ಕರುಣೆ, ಅನುಕಂಪರಾಹಿತ್ಯ ಇತ್ಯಾದಿಗಳನ್ನು ಕೆರಳಿಸುವ ಬರೆಹ ಅಸುರೀ ಸಾಹಿತ್ಯವಾಗುವುದರಿಂದ ಅದು ದಮನ ಯೋಗ್ಯವಾಗುತ್ತದೆ,’’ ಎಂದು ಹೇಳಿದ ಮಾತು ಇಂದಿಗೂ ಅನ್ವಯಿಸುತ್ತದೆಯಲ್ಲವೇ?
(ಲೇಖಕರು ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ, ವಾಗ್ದೇವಿ ಪ್ರಶಸ್ತಿ ಪುರಸ್ಕೃತರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top