ಕನ್ನಡಕ್ಕಾಗಿ ಕೈ ಎತ್ತೋಣ ಬನ್ನಿ

Kannada Logoನ್ನಡದ ಪಾಲಿಗೆ ಅಸ್ತಿತ್ವದ ಆತಂಕ ಕಾಡುತ್ತಿರುವ ದಿನಗಳಿವು ಎಂಬ ಭಾವನೆ ಬಲಗೊಳ್ಳುತ್ತಿದೆ. ಆ ವಿಚಾರದಲ್ಲಿ ಈ ಸಲದ ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ರಚನಾತ್ಮಕ ಚರ್ಚೆ ಮತ್ತು ಅಗತ್ಯ ನಿರ್ಣಯಗಳಾಗಿರುವುದು ಒಂದು ಉತ್ತಮ ಬೆಳವಣಿಗೆ. ವಿಶೇಷ ಅಂದರೆ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯಕ್ಕೆ ಪೂರಕವಾಗಿ `ವಿಜಯವಾಣಿ’ ಒಂದು ಮುಂಚೂಣಿ ಪತ್ರಿಕೆಯಾಗಿ ವಿಶಿಷ್ಟವಾಗಿ ಆಲೋಚಿಸಿದ್ದು ಲಕ್ಷಾಂತರ ಓದುಗರ ಮನಸ್ಸಿನಲ್ಲಿ ಅಚ್ಚಾಗಿರಲು ಸಾಕು. ಸದಾ ಹೊಸತನ, ಹೊಸ ಪ್ರಯೋಗ, ನವೀನ ಚಿಂತನೆ, ಜನಪರ ಆಲೋಚನೆಗಳಿಂದ ಅಲ್ಪಾವಧಿಯಲ್ಲಿ ಕನ್ನಡ ನಾಡಿನ ಉದ್ದಗಲಕ್ಕೂ ಮನೆಮಾತಾಗಿರುವ ಪತ್ರಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಸಿದ್ಧಲಿಂಗಯ್ಯ, ಕನ್ನಡಪರ ಕಾಳಜಿಯುಳ್ಳ ಜನಪ್ರಿಯ ಬರಹಗಾರರಾದ ಕೆ. ಸತ್ಯನಾರಾಯಣ ಮತ್ತು ಮೂಡ್ನಾಕೂಡು ಚಿನ್ನಸ್ವಾಮಿಯವರೊಂದಿಗೆ ಸಂವಾದ ನಡೆಸಿದ್ದರ ಕುರಿತು ಇಲ್ಲಿ ಪ್ರಸ್ತಾಪಿಸಲೇಬೇಕು. ಕನ್ನಡ ಉಳಿಯಬೇಕಾದರೆ `ಕನ್ನಡ ಕರ್ನಾಟಕದಲ್ಲಿ ರಾಜಕೀಯ ಅಜೆಂಡಾ ಆಗಬೇಕು’ ಎಂಬ ಅಭಿಪ್ರಾಯ ಆ ಸಂವಾದದಲ್ಲಿ ಮೂರ್ತರೂಪ ಪಡೆಯಿತು. `ಕನ್ನಡ ರಾಜಕೀಯ ಅಜೆಂಡಾ ಆಗಲಿ’ಎಂಬ ಶೀರ್ಷಿಕೆಯಲ್ಲಿ ಪತ್ರಿಕೆಯ ಸಾಪ್ತಾಹಿಕ ಪುರವಣಿ `ವಿಜಯ ವಿಹಾರ’ವನ್ನು ಸಮ್ಮೇಳನಕ್ಕೆ ವಿಶೇಷವಾಗಿ ಸಮರ್ಪಿಸಿದ್ದು ಲಕ್ಷಾಂತರ ಓದುಗರ ಹಾಗೂ ಕನ್ನಡ ಕಾಳಜಿಯುಳ್ಳವರ ಮೆಚ್ಚುಗೆಗೆ ಪಾತ್ರವಾಯಿತು.

ನಾವೀಗ ಆ ಚರ್ಚೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಂಕಲ್ಪಿಸಿದ್ದೇವೆ. ನಮ್ಮ ಆಲೋಚನೆ ನಿರ್ದಿಷ್ಟ ಕಾಲಮಿತಿಯಲ್ಲಿ ಬೇರೆ ಬೇರೆ ಸ್ತರಗಳಲ್ಲಿ ಕಾರ್ಯಗತಗೊಳ್ಳಲಿದೆ. ಆರಂಭದಲ್ಲಿ ಕಾರ್ಯಸಾಧ್ಯ ನೆಲೆಯಲ್ಲಿ ಕನ್ನಡತನ ಕಾಯ್ದುಕೊಳ್ಳುವ ಕುರಿತು ಕನ್ನಡದ ಮೇರು ಬರಹಗಾರರು ಮತ್ತು ತಜ್ಞ ಲೇಖಕರು ಆಯ್ದ ವಿಷಯಗಳ ಮೇಲೆ ಲೇಖನ ಸರಣಿ ಬರೆದು ರಚನಾತ್ಮಕ ಚರ್ಚೆಗೆ ಮುನ್ನುಡಿ ಬರೆಯಲಿದ್ದಾರೆ. ಆ ಕೆಲಸ ಇಂದಿನಿಂದಲೇ ಆರಂಭವಾಗಿದೆ ಕೂಡ.

ಒಂದು ಭಾಷೆ ಜೀವಂತವಾಗಿ ಉಳಿಯಬೇಕಾದರೆ ಅದು ಪರಿಣಾಮಕಾರಿ ಸಂವಹನ, ಸಂಪರ್ಕ ಮಾಧ್ಯಮವಾಗುವ ಸಾಮಥ್ರ್ಯ ಹೊಂದಿರುವುದು ಅನಿವಾರ್ಯ. ಅಂತಹ ಭಾಷೆಗೆ ಒಂದು ಘನ ಸಾಂಸ್ಕøತಿಕ ತಳಹದಿಯೂ ಇರಬೇಕು. ಸ್ಥಳೀಯ ಜನಜೀವನದೊಂದಿಗೆ ಭಾವನಾತ್ಮಕವಾಗಿ ಅದು ಬೆಸೆದುಕೊಂಡಿರಬೇಕು. ಕನ್ನಡದ ಆ ವೈವಿಧ್ಯವನ್ನು ಉಳಿಸಿಕೊಳ್ಳುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆಯೇ? ಕನ್ನಡವನ್ನು ವಿಜ್ಞಾನ, ತಂತ್ರಜ್ಞಾನಗಳಿಗೂ ಅಣಿಗೊಳಿಸುವ ಕಾರ್ಯ ಆಗುವುದು ಬೇಡವೇ? ಕನ್ನಡತನ ಕಾಯ್ದುಕೊಳ್ಳುವ ಸಂದರ್ಭದಲ್ಲಿ ಕನ್ನಡಿಗರ ಪಾತ್ರವೇನು? ಕನ್ನಡಿಗರಲ್ಲಿ ಭಾಷೆ ಮತ್ತು ಸಂಸ್ಕøತಿಯ ಜಾಗೃತಿ ಇನ್ನೂ ಹೆಚ್ಚಾಗಬೇಕೇ? ಈ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಾತ್ರಗಳೇನು? ಅನ್ಯ ಪ್ರಾದೇಶಿಕ ಭಾಷೆಗಳ ಸ್ಥಿತಿಗತಿಗಳೇನು? ಭಾರತದಂತಹ ಭಾಷಾವೈವಿಧ್ಯದ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಒಗ್ಗೂಡಬೇಕೇ? ಭಾಷಾ ಉಳಿವಿಗೆ ಕಾನೂನಿನ ರಕ್ಷಣೆ ಬೇಕೇ? ಇತ್ಯಾದಿ ವಿಷಯಗಳ ಮೇಲೆ ಲೇಖಕರು ತಮ್ಮ ಬರಹಗಳಲ್ಲಿ ಬೆಳಕು ಚೆಲ್ಲಲಿದ್ದಾರೆ.

ಲೇಖನ ಸರಣಿಯ ಬಳಿಕ ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಹೃದಯ ಕನ್ನಡಿಗರು ಮತು ಕನ್ನಡಪರ ಚಿಂತಕರೊಂದಿಗೆ ಸಂವಾದ ನಡೆಸಲೂ ತೀರ್ಮಾನಿಸಲಾಗಿದೆ. ಇದೊಂದು ದೊಡ್ಡ ಅಭಿಯಾನದ ರೂಪ ಪಡೆಯಬೇಕೆಂಬುದು ನಮ್ಮ ಆಸೆ. ಅದಕ್ಕೆ ಪೂರಕವಾಗಿ ಲಕ್ಷಾಂತರ ಕನ್ನಡಿಗರು ಇದರಲ್ಲಿ ಕೈಜೋಡಿಸಿ ಹೃದಯಾಂತರಾಳದಲ್ಲಿರುವ ಕನ್ನಡತನಕ್ಕೆ ಧ್ವನಿರೂಪ, ಅಕ್ಷರರೂಪ ಕೊಡುತ್ತಾರೆಂಬ ನಂಬಿಕೆ-ವಿಶ್ವಾಸವೂ ನಮಗಿದೆ. ಸಂವಾದದ ಸಂದರ್ಭದಲ್ಲಿ ಹೊಮ್ಮುವ ಅಭಿಪ್ರಾಯ ದಾಖಲೆ ರೂಪದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೂ ತಲುಪಲಿದೆ. ಆಸಕ್ತರ ಪಾಲಿಗೆ ಸಾರ್ವಕಾಲಿಕ ದಾಖಲೆಯೂ ಆಗಲಿದೆ. ಪ್ರಾದೇಶಿಕ ಭಾಷೆ ಮತ್ತು ಸಂಸ್ಕøತಿಯ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಧ್ವನಿಯೇ ಇತರ ರಾಜ್ಯಗಳಿಗೆ ಮಾದರಿಯಾಗುವುದಾದರೆ ಅದಕ್ಕಿಂತ ಸಂತಸ ಮತ್ತು ಯಶಸ್ಸು ಬೇರೇನಿದೆ, ಅಲ್ಲವೇ? ನಮ್ಮ ಈ ಹೆಜ್ಜೆಯಲ್ಲಿ ಆ ಆಶಯವಿದೆ.

ಒಟ್ಟಾರೆ ಹೇಳುವುದಾದರೆ, ಕನ್ನಡ ಕೆಲಸಕ್ಕೆ ರಚನಾತ್ಮಕ-ದೂರಗಾಮಿ ಚಿಂತನೆ ನಡೆಯಬೇಕು ಎಂಬುದು ಪತ್ರಿಕೆಯ ಒತ್ತಾಸೆ. ಕನ್ನಡ ಭಾಷೆ, ಪತ್ರಿಕಾ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿರುವ ವಿಆರ್‍ಎಲ್ ಸಮೂಹ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಈ ಕೈಂಕರ್ಯದಲ್ಲಿ ಕೈಜೋಡಿಸಲು ನಾಡಿನ ಹಲವು ಚಿಂತಕರು ಮುಂದೆ ಬಂದಿದ್ದಾರೆ. ಸಹೃದಯದ ಎಲ್ಲ ಕನ್ನಡಿಗರು ನಮ್ಮೊಂದಿಗೆ ಹೆಗಲಿಗೆ ಹೆಗಲುಗೊಡುತ್ತಾರೆ, ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಾರೆಂಬ ವಿಶ್ವಾಸ ನಮ್ಮದು.
ಸಿರಿಗನ್ನಡಂ ಗೆಲ್ಗೆ- ಸಿರಿಗನ್ನಡಂ ಬಾಳ್ಗೆ ಎಂಬುದು ನಮ್ಮೆಲ್ಲರ ಒಕ್ಕೊರಲ ಧ್ವನಿಯಾಗಲಿ. ಜೀವನಧ್ಯೇಯವಾಗಲಿ.

ಎಲ್ಲರಿಗೂ ವಂದನೆಗಳು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top