ಕನ್ನಡ ಮಾಧ್ಯಮ ಶಾಲೆ ಬಲಗೊಳಿಸಲು ಇದು ಸಕಾಲ

– ಮಾತೃಭಾಷೆಯೇ ಬೋಧನಾ ಮಾಧ್ಯಮ ಎಂಬ ಆಂಧ್ರ ಹೈಕೋರ್ಟ್ ತೀರ್ಪು ಕಣ್ಣು ತೆರೆಸಲಿ -ನಿರಂಜನಾರಾಧ್ಯ ವಿ.ಪಿ.
ಆಂಧ್ರಪ್ರದೇಶ ಸರಕಾರವು ತನ್ನ ರಾಜ್ಯದಲ್ಲಿನ ಎಲ್ಲಾ ಮಾತೃಭಾಷಾ ಮಾಧ್ಯಮದ ಶಾಲೆಗಳನ್ನು ಆಂಗ್ಲಭಾಷೆಯ ಬೋಧನಾ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಮಹತ್ವದ ಎರಡು ಸರಕಾರಿ ಆದೇಶಗಳನ್ನು ಆಂಧ್ರಪ್ರದೇಶದ ಹೈಕೋರ್ಟ್ ರದ್ದುಪಡಿಸಿ, ಏಪ್ರಿಲ್ 15ರಂದು ಐತಿಹಾಸಿಕ ತೀರ್ಪು ನೀಡಿದೆ. ವಿಪುಲವಾಗಿ ಲಭ್ಯವಿರುವ ಐತಿಹಾಸಿಕ ಪುರಾವೆ, ಸಂಶೋಧನೆ ಹಾಗೂ ಕಾನೂನಿನ ಅಂಶಗಳನ್ನು ಕಡೆಗಣಿಸಿ, ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮನಬಂದಂತೆ ನೀತಿಗಳನ್ನು ರೂಪಿಸುವ ಸರಕಾರಗಳಿಗೆ ಈ ತೀರ್ಪು ಒಂದು ಉತ್ತಮ ಪಾಠವಾಗಲಿದೆ.
ವಿಶೇಷವೆಂದರೆ ಹೈಕೋರ್ಟ್ ಈ ಮಹತ್ವದ ತೀರ್ಪು ವಿಷಯವನ್ನು ಪರಿಭಾವಿಸಿದ ರೀತಿ, ವಿಶ್ಲೇಷಿದ ಕ್ರಮ, ತಮ್ಮ ಮುಂದಿದ್ದ ಅತ್ಯಂತ ಮಹತ್ವದ ವಿಷಯವನ್ನು ಅರ್ಥೈಸಿ ನಿರ್ಣಯಿಸಲು ಅವಲೋಕಿಸಿದ ಸಂಶೋಧನಾ ದಸ್ತಾವೇಜುಗಳು ಮತ್ತು ವಿಧಾನ ಅನುಕರಣೀಯ. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದ ಈ ತೀರ್ಪು, ಈ ಹಿಂದಿನ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ತೀರ್ಪಿಗಿಂತಲೂ ಹೆಚ್ಚು ವೈಜ್ಞಾನಿಕ ಹಾಗೂ ವಸ್ತುನಿಷ್ಠ ತೀರ್ಪು ಎಂಬುದು ಗಮನಾರ್ಹ. ವಿಭಾಗೀಯ ಪೀಠದಲ್ಲಿದ್ದ ಮುಖ್ಯ ನ್ಯಾ. ಜೆ.ಕೆ. ಮಹೇಶ್ವರಿ ಮತ್ತು ನ್ಯಾ. ನಿನಾಲ ಜಯಸೂರ್ಯರವರಿದ್ದ ಪೀಠ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ವಿಚಾರಣೆಗೆ ಸಂಬಂಧಿಸಿದಂತೆ ಈ ತೀರ್ಪು ನೀಡಿದೆ.
ನಮಗೆಲ್ಲ ತಿಳಿದಿರುವಂತೆ, ಆಂಧ್ರಪ್ರದೇಶ ಸರಕಾರವು ತನ್ನ 2020-21 ನೇ ಶೈಕ್ಷಣಿಕ ವರ್ಷದಿಂದ ಎಲ್ಲಾ ಆಡಳಿತ ಮಂಡಳಿಗಳ ನಿರ್ವಹಣೆಯಡಿಯಲ್ಲಿರುವ ಪ್ರಾಥಮಿಕ, ಉನ್ನತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಒಂದರಿಂದ ಆರನೇ ತರಗತಿಯವರೆಗಿನ ಎಲ್ಲಾ ತರಗತಿಗಳನ್ನು ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತಿಸುವ ಮತ್ತು ಕ್ರಮೇಣವಾಗಿ ಉಳಿದ ತರಗತಿಗಳನ್ನು ಕೂಡ ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತಿಸುವ ಶಾಲಾ ಶಿಕ್ಷಣ ಆಯುಕ್ತರ ಪ್ರಸ್ತಾವನೆಯನ್ನು ಒಪ್ಪಿ ಸರಕಾರಿ ಆದೇಶವನ್ನು ಹೊರಡಿಸಿತ್ತು . ಜೊತೆಗೆ, ತೆಲುಗು ಮತ್ತು ಉರ್ದು ಭಾಷೆಯನ್ನು ಒಂದು ಕಡ್ಡಾಯ ವಿಷಯವಾಗಿ ಬೋಧಿಸಲಾಗುವುದು ಎಂದು ತಿಳಿಸಿತ್ತು. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಈ ದಾವೆಯ ವಿಚಾರಣೆ ಪ್ರಾರಂಭಿಸಿದ ನ್ಯಾಯಪೀಠವು, ಪ್ರಾರಂಭದಲ್ಲಿ ಅರ್ಜಿದಾರರ ಪರ ಮತ್ತು ಪ್ರತಿವಾದಿಗಳ ಚರ್ಚೆಗಳನ್ನು ಆಲಿಸಿದ ನಂತರ ಈ ಮಹತ್ವದ ವಿಷಯದಲ್ಲಿ ತೀರ್ಪು ನೀಡಲು ಐದು ಪ್ರಮುಖ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಅಭಿಪ್ರಾಯಪಟ್ಟಿತು.
ಅವುಗಳೆಂದರೆ, ಭಾರತದಲ್ಲಿ ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಬೋಧನಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯಪೂರ್ವ ಐತಿಹಾಸಿಕ ಹೊಳಹುಗಳು ಯಾವವು?, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಮಾತೃಭಾಷೆ/ಸ್ಥಳೀಯಭಾಷೆ/ ಹಿಂದಿ ಅಭಿವೃದ್ಧಿ ಕುರಿತಂತೆ ಗಣ್ಯರ ಅಭಿಪ್ರಾಯಗಳೇನು?, ಭಾರತದಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಪ್ರಾಥಮಿಕ ಹಂತದ ಶಿಕ್ಷ ಣ ಬೋಧನಾ ಮಾಧ್ಯಮಕ್ಕೆ ಸಂಬಂಧಿಸಿದ ಸ್ವಾತಂತ್ರ್ಯೋತ್ತರ ಬೆಳವಣಿಗೆಗಳು ಯಾವವು?, ಕೇಂದ್ರ ಹಾಗೂ ರಾಜ್ಯಶಾಸನಗಳು ಮತ್ತು ನಿಯಮಗಳ ಜೊತೆಗೆ ಮಕ್ಕಳ ಶಿಕ್ಷ ಣದ ಹಕ್ಕಿಗೆ ಸಂಬಂಧಿಸಿದ ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳು ಯಾವವು? ಮತ್ತು ಆಂಧ್ರಪ್ರದೇಶ ಸರಕಾರವು ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಬೋಧನಾ ಮಾಧ್ಯಮವನ್ನು ಇಂಗ್ಲಿಷ್‌ಗೆ ಪರಿವರ್ತಿಸುವ ಕುರಿತು 2019ರ ನ.11ರಂದು ಹೊರಡಿಸಿದ ಆದೇಶವು ಬೋಧನಾ ಮಾಧ್ಯಮದ ಐತಿಹಾಸಿಕ ಹಿನ್ನೆಲೆ, ಕಾನೂನಿನ ನಿಬಂಧನೆಗಳು ಹಾಗೂ ಕೇಂದ್ರ ಸರಕಾರದ ನೀತಿಗಳಿಗೆ ಅನುಗುಣವಾಗಿದೆಯೇ ಅಥವಾ ವಿರುದ್ಧವಾಗಿದೆಯೇ?
ಈ ಪ್ರಮುಖ ಐದು ಪ್ರಶ್ನೆಗಳನ್ನು ಲಭ್ಯವಿರುವ ಸಂಶೋಧನೆಯ ಸಾಕ್ಷ್ಯಾಧಾರ ಮತ್ತು ದಸ್ತಾವೇಜುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವಿಮರ್ಶಿಸಿದ ನ್ಯಾಯಾಲಯವು, ಶಿಕ್ಷಣ ಮಾಧ್ಯಮದ ಪ್ರಶ್ನೆಯನ್ನು ಸಂವಿಧಾನದ ಮೂಲಭೂತ ಹಕ್ಕಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಶವನ್ನು ಪ್ರಧಾನ ಅಂಶವನ್ನಾಗಿರಿಸಿಕೊಂಡು ಅದರ ಸುತ್ತ ವ್ಯಾಪಕ ಚರ್ಚೆ ನಡೆಸಿದೆ. ಸರಕಾರವು ಭಾಷಾ ಮಾಧ್ಯಮದ ವಿಷಯಕ್ಕೆ ಸಂಬಂಧಿಸಿದಂತೆ ಆದೇಶಗಳನ್ನು ಹೊರಡಿಸುವ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತದೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವವನ್ನು ತಿಳಿಯಲು, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಡೆದ ಚರ್ಚೆಗಳು ದೇಶದ ನಾಗರಿಕರಿಗೆ ಶಿಕ್ಷ ಣ ನೀಡುವ ಬೋಧನಾ ಮಾಧ್ಯಮ, ಅಭಿವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಯಾವುದೇ ಸಂದೇಹವಿಲ್ಲದೆ ಒಪ್ಪಿಕೊಳ್ಳಬಹುದು. ಯಾವುದೇ ನಾಗರಿಕನು ತನ್ನ ಅಭಿಪ್ರಾಯಗಳನ್ನು ತಾನು ಶಿಕ್ಷ ಣ ಪಡೆದ ಭಾಷೆಯಲ್ಲಿ ಮುಕ್ತವಾಗಿ ವ್ಯಕ್ತಪಡಿಸುವಲ್ಲಿ ಉತ್ತಮ ಅವಕಾಶದ ಹೊಂದಿರಲು ಸಾಧ್ಯವೆಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ.

ಖಾತರಿಪಡಿಸಿದ ಹಕ್ಕು
ಈ ಅಂಶಗಳ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ನಾಗರಿಕನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹೊಂದಿದ್ದಾನೆ. ಮಾತೃಭಾಷೆಯಲ್ಲಿ ಅಥವಾ ಸಂವಿಧಾನದ ಅನುಬಂಧದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಭಾಷೆಗಳಲ್ಲಿ ಬೋಧನಾ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕನ್ನು ಒಳಗೊಂಡಿದೆ. ಆದ್ದರಿಂದ, ಶಾಲಾ ಶಿಕ್ಷಣದಲ್ಲಿ ಬೋಧನಾ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕು ಸಂವಿಧಾನದ ಪರಿಚ್ಛೇದ 19 (1) (ಎ) ಅಡಿಯಲ್ಲಿ ಖಾತರಿಪಡಿಸಿದ ಹಕ್ಕು ಎಂದು ತೀರ್ಮಾನಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನದ ಪರಿಚ್ಛೇದ 19 (1) (ಜಿ) ಗೆ ಸಂಬಂಧಿಸಿದಂತೆ ನ್ಯಾಯಾಲಯವು ಮತ್ತೊಂದು ಮಹತ್ವದ ಅಂಶವನ್ನು ಸ್ಪಷ್ಟಪಡಿಸಿದೆ. ಅದೆಂದರೆ, ಪರಿಚ್ಛೇದ 19 (1) (ಜಿ) ಅನ್ವಯ ನಾಗರಿಕನು ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಅಥವಾ ವ್ಯವಹಾರವನ್ನು ಕೈಗೊಳ್ಳಬಹುದು. ಆದರೆ, ರಾಜ್ಯವು ಜನರ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಮತ್ತು ವ್ಯವಹಾರವನ್ನು ಕೈಗೊಂಡರೆ, ಅಂತಹ ಸಂದರ್ಭದಲ್ಲಿ ರಾಜ್ಯವು ಸಮಂಜಸವಾದ ನಿರ್ಬಂಧವನ್ನು ವಿಧಿಸಬಹುದು ಎಂಬುದನ್ನು ಎತ್ತಿಹಿಡಿದಿದೆ. ಇದರ ಅನ್ವಯ, ಖಾಸಗಿ ಶಾಲೆಗಳು ಆಂಗ್ಲಮಾಧ್ಯಮ ಶಿಕ್ಷಣ ಒದಗಿಸುವುದನ್ನು ರಾಜ್ಯ ನಿರ್ಬಂಧಿಸಲಾಗದು ಎಂಬ ತಪ್ಪು ಅಭಿಪ್ರಾಯವನ್ನು ನ್ಯಾಯಾಲಯ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ತಂದಿದೆ.

ಮಕ್ಕಳ ಸರ್ವತೋಮುಖ ಅಭಿವೃದ್ಧಿ
ಶಿಕ್ಷಣ ಹಕ್ಕು ಕಾಯಿದೆ ಬಗ್ಗೆ ವಿಷದವಾಗಿ ಪ್ರಸ್ತಾಪಿಸಿರುವ ನ್ಯಾಯಾಲಯವು, ಪ್ರಕರಣ 29ರಲ್ಲಿ ನಿರ್ದಿಷ್ಟಪಡಿಸಿದಂತೆ ಶೈಕ್ಷಣಿಕ ಪ್ರಾಧಿಕಾರವು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ 29 (2) (ಎ)ರಿಂದ(ಎಚ್)ನಲ್ಲಿ ನಿರ್ದಿಷ್ಟಪಡಿಸಿದ ಮಾನದಂಡಗಳ ಮಹತ್ವ ಎತ್ತಿಹಿಡಿದಿದೆ. ಶಿಕ್ಷಣ ಮಾಧ್ಯಮವು ಮಗುವಿನ ಮಾತೃಭಾಷೆಯಲ್ಲಿ ಇರುವುದರಿಂದ ಮಗುವನ್ನು ಭಯ, ಆಘಾತ ಮತ್ತು ಆತಂಕಗಳಿಂದ ಮುಕ್ತಗೊಳಿಸಿ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಅನುಗುಣವಾಗಿ ಮುಕ್ತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಈ ಅಂಶಗಳು ಅವಿಭಾಜ್ಯ ಅವಶ್ಯಕತೆಗಳಾಗಿರುತ್ತವೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದೆ.

ಬೋಧನಾ ಮಾಧ್ಯಮ ಸ್ಪಷ್ಟತೆ
ಅಂತಿಮವಾಗಿ ಘನ ನ್ಯಾಯಾಲಯವು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಇತಿಹಾಸ; ರಾಜ್ಯಗಳ ಪುನರ್‌ ಸಂಘಟನಾ ವರದಿ; 1968,1986, 1992(ಪರಿಷ್ಕೃತ) ಮತ್ತು 2020ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಹಾಗೂ ಇತರೆ ಹಲವಾರು ವರದಿಗಳ ಶಿಫಾರಸುಗಳನ್ನು ಆಧರಿಸಿ, ಶಾಲೆಗಳಲ್ಲಿ ಬೋಧನಾ ಮಾಧ್ಯಮವು, ನಿರ್ದಿಷ್ಟವಾಗಿ, 1ರಿಂದ 8ನೇ ತರಗತಿಗಳವರೆಗೆ ಮಾತೃಭಾಷೆಯಲ್ಲಿರಬೇಕು ಎಂದು ನಿಸ್ಸಂದಿಗ್ಧವಾಗಿ ಗುರುತಿಸಲಾಗಿದೆ ಎಂಬ ಅಂಶವನ್ನು ಅಗತ್ಯ ಉಲ್ಲೇಖ ಮತ್ತು ಆಯ್ದ ಭಾಗಗಳನ್ನು ಉದ್ಧರಿಸುವ ಮೂಲಕ ಸರಕಾರಗಳಿಗೆ ಮನದಟ್ಟು ಮಾಡಿಕೊಟ್ಟಿದೆ. ದೇಶದ ಇತಿಹಾಸ, ರಾಷ್ಟ್ರೀಯ ಶಿಕ್ಷಣ ನೀತಿಗಳು, ಆರ್‌ಟಿಇ ಕಾಯಿದೆಯ ಮತ್ತು ಸಂವಿಧಾನದ ಮೂಲಭೂತ ಆಶಯ ಮತ್ತು ಹಕ್ಕಿಗೆ ವಿರುದ್ಧವಾಗಿರುವ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ಮಹತ್ವ ತೀರ್ಪು ನೀಡಿದೆ. ಇದರಿಂದ, ಆಂಧ್ರ ಪ್ರದೇಶ ಸರಕಾರವು ಎಲ್ಲಾ ತೆಲುಗು ಹಾಗೂ ಉರ್ದು ಶಾಲೆಗಳನ್ನು ಸಾಮೂಹಿಕವಾಗಿ ಆಂಗ್ಲಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವ ಅವೈಜ್ಞಾನಿಕ ನಿರ್ಧಾರಕ್ಕೆ ಹಿನ್ನಡೆಯಾಗಿದೆ.

ಹಿಂದಿನ ಸರಕಾರದ ನಿರ್ಧಾರ ತಪ್ಪು
ತಜ್ಞರ ಬಲವಾದ ವಿರೋಧದ ನಡುವೆಯೂ ಮೊಂಡುತನಕ್ಕೆ ಬಿದ್ದು ನಮ್ಮ ರಾಜ್ಯದಲ್ಲಿ1000 ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರವನ್ನು ಪರೋಕ್ಷವಾಗಿ ಈ ತೀರ್ಪು ತಪ್ಪು ಎಂದು ಸಾರಿದೆ. ಹಿಂದಿನ ಸರಕಾರದ ತೀರ್ಮಾನವನ್ನು ಅಸಿಂಧುಗೊಳಿಸದೆ, ಅದೇ ನಿರ್ಧಾರವನ್ನು ಮುಂದುವರಿಸಿ ಮತ್ತೆ 1000 ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ತೆರೆಮರೆಯ ಪ್ರಸ್ತಾಪ ಹೊಂದಿರುವ ಈಗಿನ ಯಡಿಯೂರಪ್ಪ ಅವರ ಸರಕಾರ, ಈಗಲಾದರೂ ನಿರ್ಧಾರವನ್ನು ಕೈಬಿಟ್ಟು ಕನ್ನಡ ಮಾಧ್ಯಮದ ಶಾಲೆಗಳನ್ನು ಬಲವರ್ಧನೆಗೊಳಿಸುವ ಜೊತೆಗೆ ಆಂಗ್ಲಭಾಷೆಯನ್ನು ಒಂದು ಭಾಷೆಯನ್ನಾಗಿ ಪ್ರಭುತ್ವದ ಮಟ್ಟಕ್ಕೆ ಕಲಿಸುವ ಬಗ್ಗೆ ಗಂಭೀರವಾಗಿ ಯೋಚಿಸುವ ಸಂದರ್ಭ ಇದಾಗಿದೆ. ಜೊತೆಗೆ, ದಿನದಿಂದ ದಿನಕ್ಕೆ ಅಣಬೆಯಂತೆ ಹೆಚ್ಚುತ್ತಿರುವ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವ ಬಗ್ಗೆಯೂ ಪುನರ್ ಯೋಚಿಸಬೇಕಾಗಿದೆ.

(ಲೇಖಕರು ಅಭಿವೃದ್ಧಿ ಶಿಕ್ಷ ಣ ತಜ್ಞರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top