ಕಮಲದ ತುಮುಲ ಕೊನೆಯಾಗಲು ಸಾಧ್ಯವೆ?

ಈಗಿನ ಸನ್ನಿವೇಶದಲ್ಲಿ ಆಡ್ವಾಣಿ ಮತ್ತು ಮೋದಿ ಪಾಳಯದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಮುಖ್ಯವಲ್ಲ. ಬದಲಾಗಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅದರ ಬೆನ್ನಲ್ಲೇ ನಡೆದ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ ಯಾವ ಪಾಠ ಕಲಿಯುತ್ತದೆ ಎಂಬುದು ಪ್ರಮುಖ ಸಂಗತಿ.

LK-Advaniಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇನ್ನು ಮುಂದೆ ಪಕ್ಷದ ಆಂತರಿಕ ಭಿನ್ನಮತ ನಿಭಾಯಿಸುವುದೇ ದೊಡ್ಡ ತಲೆಬೇನೆಯಾಗುತ್ತದೆ ನೋಡಿ. ಪ್ರಧಾನಿ ಯಾದವನಿಗೆ ಜನರ ನಿರೀಕ್ಷೆಗೆ ತಕ್ಕಂತೆ ದೇಶ ಆಳುವುದು ಒಂದು ಸವಾಲಾದರೆ ಅತೃಪ್ತಿಯಿಂದ ಬಳಲುವ ಹತ್ತಾರು ನಾಯಕರನ್ನು ಸಂಭಾಳಿಸುವುದು ಮತ್ತೊಂದು ಸವಾಲಾದರೆ ಅಚ್ಚರಿಪಡಬೇಕಿಲ್ಲ. ವಯೋವೃದ್ಧ ನಾಯಕರಾದ ಲಾಲ್​ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ ಮೊದಲಾದವರು ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಹಣಿಯಲು ಒಂದು ಅವಕಾಶಕ್ಕಾಗಿ ಹೋದ ಲೋಕಸಭಾ ಚುನಾವಣೆ ಪೂರ್ವದಿಂದಲೇ ಕಾದಿದ್ದರು. ವಯಸ್ಸಾದ ಕಾರಣಕ್ಕಾಗಿ ಪಕ್ಷದಲ್ಲಿ ತಾವು ಮೂಲೆಗುಂಪಾಗುತ್ತಿದ್ದೇವೆ ಎಂಬುದು ಇವರ ಸಹನೆಯ ಕಟ್ಟೆ ಒಡೆಯಲು ಒಂದು ಕಾರಣವಾದರೆ, ಕಳೆದ ಲೋಕಸಭಾ ಚುನಾವಣೆ ವೇಳೆ ತಮ್ಮ ಅಭಿಪ್ರಾಯಗಳಿಗೆ ಕಿಂಚಿತ್ತೂ ಮನ್ನಣೆ ಸಿಗಲಿಲ್ಲ ಎಂಬುದು ಮುಖ್ಯ ಕಾರಣ. ಒಂದು ವೇಳೆ ಇವರ ಕಣಿ ಕೇಳಿದ್ದರೆ ಅದೇನು ಲಾಭವಾಗುತ್ತಿತ್ತು ಎಂಬುದು ಬೇರೆ ವಿಚಾರ.

ಲೋಕಸಭಾ ಚುನಾವಣೆಯಲ್ಲೇ ಮೋದಿ ಮುಗ್ಗರಿಸುತ್ತಾ ರೆಂಬುದು ಆಡ್ವಾಣಿ, ಜೋಷಿ, ಯಶವಂತ ಸಿನ್ಹಾ, ಹಿಮಾಚಲದ ಮಾಜಿ ಸಿಎಂ ಶಾಂತಕುಮಾರ್, ಶತ್ರುಘ್ನ ಸಿನ್ಹಾ ಮುಂತಾದವರ ನಿರೀಕ್ಷೆಯಾಗಿತ್ತು. ಆದರೆ ಆದದ್ದೇ ಬೇರೆ. ಮೋದಿ ಮತ್ತು ಷಾ ವೇಗಕ್ಕೆ ಬ್ರೇಕ್ ಹಾಕಲು ಸದವಕಾಶಕ್ಕೆ ಕಾದಿದ್ದವರಿಗೆ ಸಮಾಧಾನ ನೀಡಿದ್ದು ವರ್ಷದ ಹಿಂದೆ ನಡೆದ ದೆಹಲಿ ವಿಧಾನಸಭಾ ಚುನಾವಣೆ. ಆಗಲೇ ಬಿಜೆಪಿಯೊಳಗಿನ ಅತೃಪ್ತಿ ಸ್ಪೋಟವಾಗುತ್ತದೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಒಂದು ಹಂತದಲ್ಲಿ ಪಕ್ಷದ ಮೇಲ್​ಸ್ತರದಲ್ಲಿ ಅಪಸ್ವರ ಕೇಳಿಬಂತೇ ಹೊರತು ಅದು ಬಹಿರಂಗಗೊಳ್ಳಲಿಲ್ಲ. ಅದಕ್ಕೆ ಕಾರಣ ಸ್ಪಷ್ಟ. ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಷಾ ಜೋಡಿಗೆ ಆಗಷ್ಟೇ ಅಭೂತಪೂರ್ವ ಗೆಲುವು ಸಿಕ್ಕಿತ್ತು. ಆಡ್ವಾಣಿ ಒಬ್ಬರಲ್ಲ ಅಂಥ ನೂರು ಮಂದಿ ನಾಯಕರು ಮೋದಿ ವಿರುದ್ಧ ಮಾತನಾಡಿದರೂ ಯಾರೊಬ್ಬರೂ ಕೇಳಿಸಿಕೊಳ್ಳಲು ತಯಾರಿರಲಿಲ್ಲ. ಅದು ಅತೃಪ್ತ ನಾಯಕರಿಗೆ ಚೆನ್ನಾಗಿ ಗೊತ್ತಿತ್ತು. ಹಾಗೆ ಮಾಡಿದ್ದರೆ ಅದಾಗಲೇ ಮಸುಕಾಗಿದ್ದ ಆಡ್ವಾಣಿಯವರ ಪ್ರತಿಷ್ಠೆ ಮತ್ತಷ್ಟು ಕಳಾಹೀನ ಆಗುತ್ತಿತ್ತು.

ಆದರೆ ಈಗ ಪರಿಸ್ಥಿತಿ ಆಗಿನಂತಿಲ್ಲ. ಒಂದೆಡೆ ಕಾಂಗ್ರೆಸ್ ಪಕ್ಷ ಸಾವರಿಸಿ ಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳು ಬೇಷರತ್ತಾಗಿ ಕಾಂಗ್ರೆಸ್ಸಿನೊಂದಿಗೆ ರಾಜಿ ಮಾಡಿಕೊಂಡಿವೆ. ಅದು ಅನಾಯಾಸವಾಗಿ ಕಾಂಗ್ರೆಸ್ಸಿಗೆ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಅನುಕೂಲ ವಾಗುತ್ತಿದೆ. ಮತ್ತೊಂದು ಕಡೆ ಜಾತ್ಯತೀತ ಹಣೆಪಟ್ಟಿಯ ಸಾಹಿತಿಗಳು, ಚಿಂತಕರು ಅಸಹಿಷ್ಣುತೆಯ ಬೊಬ್ಬೆ ಹಾಕಿ ಮೋದಿ ಸರ್ಕಾರದ ವಿರೋಧಿ ಶಕ್ತಿಗಳಿಗೆ ಬಲ ತುಂಬುತ್ತಿದ್ದಾರೆ. ಸಾಹಿತಿಗಳ ಈ ಕೆಲಸ ಸರ್ಕಾರದ ವರ್ಚಸ್ಸನ್ನು ಸಾಕಷ್ಟು ಘಾಸಿಗೊಳಿಸಿದೆ. ಎಷ್ಟೆಂದರೆ ಅಸಹಿಷ್ಣುತೆಯ ಗುಲ್ಲು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೋದಿ ಸರ್ಕಾರದ ಘನತೆಗೆ ಪೆಟ್ಟು ನೀಡಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಸಹಿಷ್ಣುತೆ ವಿರುದ್ಧ, ಕೋಮು ಸಾಮರಸ್ಯ ಕಾಪಾಡುವ ಕುರಿತು ಇತ್ತೀಚೆಗೆ ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ. ಅದರ ಜೊತೆಗೇ ಮೋದಿ ದೇಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ವಿದೇಶ ಸುತ್ತುವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ ಎಂಬ ಟೀಕೆಯೂ ಬಲಗೊಳ್ಳುತ್ತಿದೆ. ಈ ಹೇಳಿಕೆಗೆ ರ್ತಾಕ ತಳಹದಿ ಇಲ್ಲದಿರಬಹುದು, ಆದರೆ ದೇಶದಲ್ಲಿ ಸರ್ಕಾರದ ಬಗ್ಗೆ ನಕಾರಾತ್ಮಕ ಧೋರಣೆ ಬೆಳೆಯಲು ಇಂಥ ಹೇಳಿಕೆಯೂ ಅವಕಾಶ ಮಾಡಿಕೊಡುತ್ತದೆ.

ಅಷ್ಟು ಸಾಲದ್ದಕ್ಕೆ, ಸರ್ಕಾರ ಬಂದು ಒಂದೂವರೆ ವರ್ಷ ಕಳೆದರೂ ಕಣ್ಣಿಗೆ ಕಾಣಿಸುವಂಥ, ಜನಕ್ಕೆ ನೇರವಾಗಿ ಪ್ರಯೋಜನ ಆಗುವಂಥ ಒಂದೂ ಕೆಲಸ ಆಗುತ್ತಿಲ್ಲ ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿಬರತೊಡಗಿದೆ. ಇಷ್ಟೆಲ್ಲ ತಲೆಬೇನೆಯ ನಡುವೆ ಬಿಹಾರ ಚುನಾವಣೆಯಲ್ಲಿ ಮೋದಿ ಮತ್ತು ಷಾ ಲೆಕ್ಕಾಚಾರ ಬುಡಮೇಲಾಗಿದೆ. ಆಡ್ವಾಣಿ ಗುಂಪಿನವರು ಬಿಹಾರ ಫಲಿತಾಂಶವನ್ನೇ ಗುರಾಣಿ ಮಾಡಿಕೊಂಡು ಅಖಾಡಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ. ಇದು ಮೋದಿಗೆ ನಿಜವಾದ ಸವಾಲು.

ರಾಜಕೀಯದಲ್ಲಿ ಲೆಕ್ಕಾಚಾರಗಳು ಎಷ್ಟು ವಿಚಿತ್ರ ನೋಡಿ. ವಾಸ್ತವದ ನೆಲೆಯಲ್ಲಿ ನೋಡಿದರೆ ಆಡ್ವಾಣಿಯವರು ಮೋದಿ ಮತ್ತು ಷಾ ಮೇಲೆ ಮುನಿಸಿಕೊಳ್ಳಲು ಕಾರಣವೇ ಇರಲಿಲ್ಲ. ಈಗ ಮೋದಿ ಅಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ನಿಜವೇ ಆಗಿದ್ದರೂ ದೇಶದ ಉದ್ದಗಲಕ್ಕೆ ಪಕ್ಷಕ್ಕೆ ನೆಲೆ ಕಲ್ಪಿಸಿದ್ದು ಆಡ್ವಾಣಿ. ಅದರಲ್ಲಿ ಎರಡನೇ ಮಾತೇ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಮತ್ತು ಆಡ್ವಾಣಿ ಇಬ್ಬರೂ ಸಮಕಾಲೀನ ನಾಯಕರೇ ಆದರೂ ನೈತಿಕತೆ, ತತ್ತ್ವ-ಸಿದ್ಧಾಂತದ ಬದ್ಧತೆ ಮತ್ತು ಪಕ್ಷ ಸಂಘಟನೆ ದೃಷ್ಟಿಯಿಂದ ವಾಜಪೇಯಿಗಿಂತಲೂ ಆಡ್ವಾಣಿ ಎತ್ತರದಲ್ಲಿ ನಿಲ್ಲುತ್ತಾರೆ. ಆಡ್ವಾಣಿ ಹಿಂದು ರಾಷ್ಟ್ರೀಯತೆ ಪ್ರತಿಪಾದಿಸಿದ್ದರ ಮತ್ತು ವಾಜಪೇಯಿ ಸದಾ ಕಾಲ ಎಲ್ಲ ಕಡೆಯೂ ಸಲ್ಲುವ ವ್ಯಕ್ತಿತ್ವ ರೂಪಿಸಿಕೊಂಡಿದ್ದರ ಪರಿಣಾಮವಾಗಿ ಮಿತ್ರಪಕ್ಷಗಳ ಬೆಂಬಲದಿಂದ ಬಿಜೆಪಿ ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ವಾಜಪೇಯಿ ಅವರೇ ಪ್ರಧಾನಿ ಅಭ್ಯರ್ಥಿಯಾದರು. ಹೀಗಾಗಿ ಸಾಂವಿಧಾನಿಕ ಮಾನ್ಯತೆ ಇಲ್ಲದ ಉಪಪ್ರಧಾನಿ ಪದವಿಗೇ ಆಡ್ವಾಣಿ ತೃಪ್ತಿಪಡಬೇಕಾಗಿ ಬಂತು. ಒಂದೊಮ್ಮೆ ವಾಜಪೇಯಿ ಉದಾರವಾಗಿ ಆಲೋಚಿಸಿದ್ದರೆ, ಅಧಿಕಾರದ ಕೊನೆಗಾಲದಲ್ಲಿ ಕೆಲ ತಿಂಗಳುಗಳ ಮಟ್ಟಿಗಾದರೂ ಆಡ್ವಾಣಿಗೆ ಪ್ರಧಾನಿ ಪಟ್ಟ ಬಿಟ್ಟುಕೊಡಬಹುದಿತ್ತು. ಹಾಗೆ ಮಾಡಿದ್ದರೆ ಈ ದೇಶದ ಅತ್ಯುನ್ನತ ಪದವಿಗೇರಲು ಹೋರಾಟ, ತ್ಯಾಗ ಮಾಡಿದ ಆಡ್ವಾಣಿಗೆ ವಾಜಪೇಯಿ ತಕ್ಕ ಇನಾಮು ನೀಡಿದಂತಾಗುತ್ತಿತ್ತು; ವಾಜಪೇಯಿ ಈಗಿನದಕ್ಕಿಂತಲೂ ಹೆಚ್ಚು ಔನ್ನತ್ಯಕ್ಕೆ ಏರುತ್ತಿದ್ದರು.

ಆಡ್ವಾಣಿಯವರ ದುರ್ದೈವ ನೋಡಿ. ತೀವ್ರ ಅನಾರೋಗ್ಯ ಸಮಸ್ಯೆ ಬಾಧಿಸಿದರೂ ವಾಜಪೇಯಿ ಅಧಿಕಾರ ತ್ಯಾಗಕ್ಕೆ ಮುಂದಾಗಲಿಲ್ಲ. ‘ಐ ಆಮ್ ನಾಟ್ ಟಾಯರ್ಡ್, ಐ ವಿಲ್ ನಾಟ್ ರಿಟಾಯರ್ಡ್’ ಅನ್ನುತ್ತಲೇ ಅಧಿಕಾರದ ಕೊನೆಯ ದಿನದವರೆಗೆ ಉಳಿದುಕೊಂಡರು. ಅದಕ್ಕಿಂತ ಹೆಚ್ಚಾಗಿ ಕೆಲವರ ಮಾತು ಕೇಳಿಕೊಂಡು ಆರು ತಿಂಗಳು ಮುಂಚಿತವಾಗಿ ಚುನಾವಣೆ ಮಾಡಿ ಪ್ರಮಾದ ಮಾಡಿದರು.

ಎನ್​ಡಿಎ ಸೋತಿತು. ಅದಾಗಲೇ ವಯಸ್ಸಾಗಿದ್ದ ಆಡ್ವಾಣಿಯವರು ಪ್ರಧಾನಿ ಆಗುವ ಅವಕಾಶ ಶಾಶ್ವತವಾಗಿ ತಪ್ಪಿಹೋಯಿತು. ವಿಶೇಷ ಎಂದರೆ ಆಡ್ವಾಣಿಯವರು ಎಲ್ಲೂ ವಾಜಪೇಯಿ ವಿರುದ್ಧ ಅತೃಪ್ತಿ ಹೊರಹಾಕಲಿಲ್ಲ. ಹಾಗೆ ಮಾಡಲು ಸಾಧ್ಯವೂ ಇಲ್ಲ. ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕೆಂಬುದು ಆಡ್ವಾಣಿ ಕನಸಾಗಿತ್ತು. ಅದಕ್ಕಿಂತ ಹೆಚ್ಚಾಗಿ ಜನಸಂಘದ ಸಂಸ್ಥಾಪಕರಾಗಿದ್ದ ಶ್ಯಾಮಾ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಹಾಗೂ ಲಕ್ಷಾಂತರ ಕಾರ್ಯಕರ್ತರ ಬಹುದಿನಗಳ ಆಸೆಯಾಗಿತ್ತು. ಅದನ್ನು ಈಡೇರಿಸಿದ್ದು ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೋಡಿ. ತಾನು ಕಟ್ಟಿ ಬೆಳೆಸಿದ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂತಲ್ಲ, ಇನ್ನು ಯಾರು ಬೇಕಾದರೂ ಪ್ರಧಾನಿ ಆಗಲಿ, ಮಂತ್ರಿಗಳಾಗಲಿ, ಚೆನ್ನಾಗಿ ದೇಶ ಆಳಲಿ ಎಂದುಕೊಂಡು ಆಡ್ವಾಣಿಯವರು ಅತೃಪ್ತಿಯನ್ನು ನುಂಗಿಕೊಳ್ಳಬಹುದಿತ್ತು. ಮುಖ್ಯವಾಗಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದ ಸಂದರ್ಭದಲ್ಲಿ ಅವರಂಥ ಹಿರಿಯ ನಾಯಕರು ತಮ್ಮ ಅನುಭವವನ್ನು ಸರ್ಕಾರಕ್ಕೆ ಧಾರೆ ಎರೆದು ಮಾರ್ಗದರ್ಶನ ಮಾಡಿ, ಪ್ರೀತಿ, ವಾತ್ಸಲ್ಯ ತೋರಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಅಷ್ಟೇ ಅಲ್ಲ, ಮೋದಿ ಮತ್ತು ಷಾ ಜೋಡಿ ಕ್ರಮಬದ್ಧ ಕಾರ್ಯತಂತ್ರದ ಮೂಲಕ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಹೊಸದೊಂದು ವೇಗವನ್ನೇ ನೀಡಿತು. ಪರಿಣಾಮ ದಾಖಲೆ ಪ್ರಮಾಣದಲ್ಲಿ ಬಿಜೆಪಿಗೆ ಸದಸ್ಯರ ಸೇರ್ಪಡೆಯಾಯಿತು. ಇದನ್ನೆಲ್ಲ ಗಮನಿಸಬೇಕಲ್ಲವಾ? ಆದರೆ ಆಗಿದ್ದೆಲ್ಲ ತಿರುವುಮುರುವು.

ಈಗಿನ ಸನ್ನಿವೇಶದಲ್ಲಿ ಆಡ್ವಾಣಿ ಮತ್ತು ಮೋದಿ ಪಾಳಯದ ನಡುವೆ ಯಾವ ಗುಂಪಿನ ಕೈ ಮೇಲಾಗುತ್ತದೆ ಎಂಬುದು ಮುಖ್ಯ ವಿಷಯವಲ್ಲ. ಬದಲಾಗಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅದರ ಬೆನ್ನಲ್ಲೇ ನಡೆದ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ ಮುಂದೆ ಯಾವ ಪಾಠ ಕಲಿಯುತ್ತದೆ ಎಂಬುದು ಪ್ರಮುಖ ಸಂಗತಿ.

ಲೋಕಸಭಾ ಚುನಾವಣೆಯ ಲೆಕ್ಕಾಚಾರವೇ ಬೇರೆ, ವಿಧಾನಸಭೆ ಇತ್ಯಾದಿ ಸ್ಥಳೀಯ ಚುನಾವಣೆಗಳ ಲೆಕ್ಕಾಚಾರಗಳೇ ಬೇರೆ. ಸ್ಥಳೀಯ ಚುನಾವಣೆ ಗೆಲ್ಲಲು ತಳಮಟ್ಟದ ನಾಯಕತ್ವ ಬೇಕು. ಸ್ಥಳೀಯ ಬೇಡಿಕೆಗಳಿಗೆ ಆದ್ಯತೆ ಸಿಗಬೇಕು. ಇದು ದೇಶದ ಸಾಮಾನ್ಯ ಮತದಾರರಿಗೆ ಗೊತ್ತಿದೆ. ಆ ಸಂಗತಿಯನ್ನು ಚಾಣಾಕ್ಷ ಮೋದಿ, ಅಮಿತ್ ಷಾ ಆದಿಯಾಗಿ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ?

ರಾಜಕಾರಣದಲ್ಲಿ ಅಂಬೆಗಾಲಿಡುತ್ತಿರುವ ಅರವಿಂದ ಕೇಜ್ರಿವಾಲ್, ಜಂಗಲ್​ರಾಜ್ ಕುಖ್ಯಾತಿಯ ಲಾಲು ಪ್ರಸಾದ್ ಅವರಿಗೆ ಗೊತ್ತಿರುವ ರಾಜಕೀಯ ಸಮೀಕರಣ ಘಟಾನುಘಟಿ ಬಿಜೆಪಿ ನಾಯಕರ ತಿಳಿವಳಿಕೆಗೆ ನಿಲುಕದೆ ಹೋಯಿತೇ? ಯೋಚಿಸಿದರೆ ಇಲ್ಲೊಂದಿಷ್ಟು ಹೊಳಹುಗಳನ್ನು ಗಮನಿಸಬಹುದು.

ಸಂಘಟನಾತ್ಮಕ ದೌರ್ಬಲ್ಯ: ದೆಹಲಿ ಇರಲಿ, ಬಿಹಾರ ಇರಲಿ. ಬಿಜೆಪಿಯನ್ನು ಸೋಲಿಸಿದ್ದು ವಿರೋಧಿಗಳಲ್ಲ. ಅನುಕೂಲಸಿಂಧು ಮೈತ್ರಿಕೂಟಗಳಲ್ಲ. ಒಟ್ಟು ಮತದಾರರ ಪೈಕಿ ಶೇ.35ರಷ್ಟು ಮಂದಿಯನ್ನೂ ತಲುಪಲಾಗದ ಸಂಘಟನಾತ್ಮಕ ದೌರ್ಬಲ್ಯ ಬಿಜೆಪಿಯನ್ನು ಸೋಲಿಸಿತು.

ಸ್ವಂತ ನೆಲೆ ಇಲ್ಲ: ಕಾಂಗ್ರೆಸ್ ಅಥವಾ ಪ್ರಾದೇಶಿಕ ಪಕ್ಷಗಳಿಗೆ ಅವುಗಳದ್ದೇ ಆದ ಸಾಂಪ್ರದಾಯಿಕ ಮತಬ್ಯಾಂಕ್ ಇದೆ. ಅದು ಆ ಪಕ್ಷಗಳ ಕಾರ್ಯಕ್ರಮ ಆಧಾರಿತವಾದದ್ದು. ಅಲ್ಲಿ ವ್ಯಕ್ತಿ ಅಥವಾ ನಾಯಕತ್ವ ಬದಲಾಗುವುದರಿಂದ ಹೆಚ್ಚು ಏರುಪೇರಾಗದು. ಆದರೆ ಬಿಜೆಪಿ ಮತಬ್ಯಾಂಕ್ ವ್ಯಕ್ತಿ ಮತ್ತು ಸಾಂರ್ದಭಿಕ ಅಲೆಯನ್ನು ಆಧರಿಸಿದ್ದು. ಅಥವಾ ಆರೆಸ್ಸೆಸ್ ಶಕ್ತಿಯನ್ನು ಅವಲಂಬಿಸಿದ್ದು. ಒಂದು ರಾಜಕೀಯ ಪಕ್ಷವಾಗಿ ಇದು ಒಳ್ಳೆಯ ಲಕ್ಷಣವಲ್ಲ. ಅದಕ್ಕೆ ಅದರದ್ದೇ ಶಕ್ತಿ ಮತ್ತು ಯುಕ್ತಿಗಳಿರಬೇಕು.

ಐಡೆಂಟಿಟಿಯ ಅಭಾವ: ಅಮೆರಿಕ, ಚೀನಾ ಅಥವಾ ಫ್ರಾನ್ಸ್ ಯಾವುದೇ ಮುಂದುವರಿದ ದೇಶವಿರಲಿ, ಅಲ್ಲಿನ ಪಕ್ಷಗಳಿಗೆ ಎರಡು ಅಜೆಂಡಾಗಳಿರುತ್ತವೆ- ಒಂದು ವೈಚಾರಿಕ ಮತ್ತೊಂದು ಆಡಳಿತಾತ್ಮಕ. ಇಷ್ಟು ದಿನ ಕಳೆದರೂ ಬಿಜೆಪಿಗೆ ಈ ಎರಡು ವಿಷಯಗಳಲ್ಲಿ ಸ್ಪಷ್ಟತೆ ಇಲ್ಲ. ಗೆದ್ದಾಗ ಅಭಿವೃದ್ಧಿ, ಸೋತಾಗ ವೈಚಾರಿಕತೆಯ ಜಪ ಮಾಡುವ ಬಿಜೆಪಿ ತನ್ನ ಐಡೆಂಟಿಟಿಯನ್ನೇ ಕಳೆದುಕೊಂಡಿದೆ. ಗೊಂದಲ ತಾಕಲಾಟಗಳಲ್ಲಿ ನಗೆಪಾಟಲಿಗೀಡಾಗುತ್ತಿದೆ. ಕಾಂಗ್ರೆಸ್ ನೆಲೆ ಕಳೆದುಕೊಂಡಿದ್ದೂ ಇದರಿಂದಲೇ.

ಅಲೆಯೇ ನೆಲೆಯಾಗದು: ಪ್ರತಿ ಚುನಾವಣೆ ಬಂದಾಗಲೂ ಬಿಜೆಪಿ ನೆಚ್ಚಿಕೊಳ್ಳು ವುದು ಸಂಘಟನಾ ಬಲವನ್ನಲ್ಲ. ಚುನಾವಣೆ ಗೆಲ್ಲಬಲ್ಲ ನಾಯಕತ್ವವನ್ನಲ್ಲ. ಅದು ನಂಬಿ ಕುಳಿತುಕೊಳ್ಳುವುದು ಒಂದಲ್ಲ ಒಂದು ಅಲೆಯನ್ನು. ರಾಮಮಂದಿರದಿಂದ ಹಿಡಿದು ಮೋದಿ ಅಲೆಯವರೆಗೆ ಇದಕ್ಕೆ ಉದಾಹರಣೆ ಕೊಡಬಹುದು.

ಆರೆಸ್ಸೆಸ್ ಅನುಕೂಲ-ಅನನುಕೂಲ: ಆರೆಸ್ಸೆಸ್ ಸಂಘಟನಾ ಶಕ್ತಿಯೇ ಬಿಜೆಪಿಗೆ ಪ್ರಮುಖ ಆಧಾರ. ಆದರೆ ಅದನ್ನು ಬಿಜೆಪಿ ಬಳಸುವುದು ಚುನಾವಣೆ ಬಂದಾಗ ಮಾತ್ರ. ಇದರಿಂದ ಬಿಜೆಪಿ ಅನುಕೂಲ ಆಗಿದ್ದಕ್ಕಿಂತ ನೂರು ಪಟ್ಟು ಆರೆಸ್ಸೆಸ್​ಗೆ ಅನನುಕೂಲವಾಗಿದೆ. ಬಿಜೆಪಿ ಮಾಡುವ ಪ್ರಮಾದ, ಭ್ರಷ್ಟಾಚಾರಗಳ ಹೊರೆಯನ್ನು ಮಾತೃ ಸಂಘಟನೆ ಹೊರುವಂತಾಗಿದೆ. ರಾಜಕೀಯ ಕಾರಣಕ್ಕಾಗಿ ಹಿಂದು ಸಮಾಜದ ದೊಡ್ಡ ಸಮೂಹ ಆರೆಸ್ಸೆಸ್ಸನ್ನು ಅಸ್ಪ್ರಶ್ಯಭಾವದಿಂದ ನೋಡುವಂತಾಗಿದೆ. ಎಲ್ಲಕ್ಕಿಂತ ಮೂಲಭೂತವಾಗಿ ಅದು ರಾಜಕೀಯ ಪಕ್ಷವೋ ಅಥವಾ ಸಾಂಸ್ಕೃತಿಕ ಸಂಘಟನೆಯೋ ಎಂಬ ಗೊಂದಲ ನಿರ್ವಣವಾಗಿದೆ.

ಅಭಿವೃದ್ಧಿ/ಸಿದ್ಧಾಂತದಲ್ಲಿ ಸಮತ್ವವಿರಲಿ: ತಪ್ಪಿನಿಂದ ಪಾಠ ಕಲಿಯುವುದಾದರೆ ಉತ್ತಮ ಆಡಳಿತ ನೀಡಿದ ವಾಜಪೇಯಿ ಸರ್ಕಾರ ಮತ್ತೆ ಏಕೆ ಅಧಿಕಾರಕ್ಕೆ ಮರಳಲಿಲ್ಲ ಎಂಬುದನ್ನು ಕೊಂಚ ಆಲೋಚಿಸಬೇಕು. ಕಾರಣ ಇಷ್ಟೆ, ಸೈದ್ಧಾಂತಿಕ ನೆಲೆ ಮತ್ತು ಅಲೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನಂತರ ವೈಚಾರಿಕ ಅಜೆಂಡಾವನ್ನು ಸಂಪೂರ್ಣವಾಗಿ ಮರೆತುಬಿಟ್ಟಿತು. ಅದರಿಂದ ಹತಾಶರಾದ ಕಾರ್ಯಕರ್ತರೇ ಮುಂದಿನ ಚುನಾವಣೆಯಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡಲಿಲ್ಲ. ಆಗ ಬಿಜೆಪಿ ಸೋಲಿಗೆ ಅದು ಮುಖ್ಯ ಕಾರಣವಾಯಿತು.

ಬಾಯಿಗೆ ಬೀಗ ಬಿದ್ದರೆ ಚೆನ್ನ: ಬಿಜೆಪಿಯಲ್ಲಿ ಮಾಡುವವರಿಗಿಂತ ಆಡುವವರು, ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳುವವರೇ ಜಾಸ್ತಿ. ಕೆಲಸ, ವಿಚಾರಗಳ ಬದ್ಧತೆಗಿಂತ ಬಾಯಿಮಾತಿನ ಬಡಾಯಿಯವರೇ ಆ ಪಕ್ಷಕ್ಕೆ ಮುಳುವಾಗುತ್ತಿ ದ್ದಾರೆ. ಇಂದು ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿರುವವರೂ ಇವರೇ.

ಸರ್ವರ್ಸ³ಯಾಗಲಿ: ಮೂಲಭೂತವಾಗಿ ಬಿಜೆಪಿ ಮುಸ್ಲಿಮರೂ ಸೇರಿ ಸಮಾಜದ ಎಲ್ಲ ಸ್ತರ ತಲುಪಿ ಸರ್ವರ್ಸ³ಯಾಗಲಿ. ಅದು ರಾತ್ರಿ ಬೆಳಗಾಗುವುದರೊಳಗೆ ಆಗುವುದಿಲ್ಲ. ಬಾಯಿಮಾತಿನಿಂದ ಆಗುವ ಕೆಲಸವೂ ಅಲ್ಲ. ಅದಕ್ಕೊಂದು ಶ್ರಮ, ಪ್ರಾಮಾಣಿಕತೆ ಬೇಕು. ಅದಿಲ್ಲದೇ ಹೋದರೆ ಒಂದು ರಾಜಕೀಯ ಪಕ್ಷವಾಗಿ ಏನು ಮಾಡಿದರೂ ವ್ಯರ್ಥ. ಅಷ್ಟಕ್ಕೂ ಒಂದು ಚುನಾವಣೆಯ ಸೋಲಿನಿಂದ ಧೃತಿಗೆಡಬೇಕಾದ್ದೂ ಇಲ್ಲ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ ತಾನೆ? ಈ ಅಪಜಯವನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿ ಮುನ್ನಡೆಯುವ ವಿವೇಕವನ್ನು ಬಿಜೆಪಿ ನಾಯಕರು ತೋರ್ಪಡಿಸುತ್ತಾರಾ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top