ರಾಹುಲ್ ಗಾಂಧಿ ಒಂದೋ ಪೂರ್ಣಾವಧಿ ರಾಜಕಾರಣಿ ಆಗಬೇಕು. ಅಥವಾ ಸಂಪೂರ್ಣವಾಗಿ ರಾಜಕೀಯ ತೊರೆಯಬೇಕು. ಅದಿಲ್ಲದೇ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲವೇ ಇಲ್ಲ.
ಇವತ್ತು ರಾಹುಲ್ ಗಾಂಧಿ ಸ್ಥಿತಿ, ಬಿದ್ದವನ ಮೇಲೊಂದು ಕಲ್ಲು ಎನ್ನುವಂತಾಗಿದೆ. ಆ ಕಡೆಯಿಂದ ಈ ಕಡೆಯಿಂದ ಬೀಸುತ್ತಿರುವ ಹೊಡೆತಕ್ಕೆ ಸಿಲುಕಿ ಅವರು ಅಪ್ಪಚ್ಚಿಯಾಗುತ್ತಿದ್ದಾರೆ. ಪಕ್ಷದ ಈ ಪಾಟಿ ಸೋಲಿಗೆ ರಾಹುಲ್ ಗಾಂಧಿಯೇ ಕಾರಣ ಅಂತ ಮರಿಪುಢಾರಿಗಳಿಂದ ಹಿಡಿದು ಕಮಲನಾಥ, ಗುಲಾಮ್ ನಬಿ ಆಜಾದರಂಥ ಹಿರಿತಲೆಗಳವರೆಗೆ ಎಲ್ಲರೂ ಮುರಕೊಂಡು ಬೀಳುತ್ತಿದ್ದಾರೆ. ಬಹುಶಃ ಇಂತಹ ಒಂದು ಸನ್ನಿವೇಶ ಕಾಂಗ್ರೆಸ್ ಇತಿಹಾಸದಲ್ಲೇ ಮೊದಲು. ನೆಹರು-ಗಾಂಧಿ ಕುಟುಂಬದವರನ್ನು ಈ ಪರಿ ಟೀಕಿಸುವುದನ್ನು ಕಂಡೂ ಇರಲಿಲ್ಲ, ಕೇಳಿಯೂ ಇರಲಿಲ್ಲ. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆಯೇ ಅನ್ನಿ.
ಹಾಗೂಹೀಗೂ ಉಸಿರುಗಟ್ಟಿ ಅಸಹನೆಯನ್ನು ತಡೆಹಿಡಿದುಕೊಂಡಿದ್ದವರು, ಚುನಾವಣಾ ಫಲಿತಾಂಶ ಬರುತ್ತಲೇ ನೇರವಾಗಿ ರಾಹುಲ್ ವಿರುದ್ಧ, ಪರೋಕ್ಷವಾಗಿ ಸೋನಿಯಾ ವಿರುದ್ಧ ಹೊಟ್ಟೆಯ ಆಳದಲ್ಲಿದ್ದ ನಂಜನ್ನೆಲ್ಲ ಆಚೆ ಹಾಕುತ್ತಿದ್ದಾರೆ. ಕೆಲವರು ನೇರವಾಗಿ ರಾಹುಲ್ ವಿರುದ್ಧ ಮಾತನಾಡುತ್ತಿದ್ದಾರೆ. ಇನ್ನು ಹಲವರು, ಪ್ರಿಯಾಂಕಾನೂ ಪಕ್ಷದ ಕೆಲಸಕ್ಕೆ ಬರಲಿ ಎನ್ನುವ ಮೂಲಕ, `ನಿಮ್ಮೊಬ್ಬರಿಂದಲೇ ಆ ಕೆಲಸ ಅಸಾಧ್ಯ’ ಅನ್ನುವ ಸಂದೇಶವನ್ನು ರಾಹುಲ್ಗೆ ರವಾನಿಸುತ್ತಿದ್ದಾರೆ. ಪಕ್ಷದ ಸೋಲಿನ ಪರಾಮರ್ಶೆ ಆಗಬೇಕು ಅಂತ ರಾಹುಲ್ ಹೇಳಿದರೆ, `ನೀವೇ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಿ’ ಅಂತ ಆಜಾದ್ ಮತ್ತು ಕಮಲನಾಥರಂಥ ಸೋನಿಯಾನಿಷ್ಠರೂ ರಪಕ್ಕಂತ ಜಾಡಿಸುತ್ತಿದ್ದಾರೆ. ಕಾಂಗ್ರೆಸ್ ಸೋಲಿಗೆ ಕಾರಣ ಹುಡುಕಿ ಅಂತ ರಾಹುಲ್ ಪತ್ರ ಬರೆದರೆ, `ಇದನ್ನೆಲ್ಲ ನಮ್ಮಹತ್ರ ಕೇಳುವುದಕ್ಕೆ ಇವರ್ಯಾರು. ಯಾವುದಕ್ಕೂ ರೀತಿರಿವಾಜು ಬೇಡವೇ. ಈ ಬಚ್ಚಾನಿಂದ ನಾವು ಇವನ್ನೆಲ್ಲ ಹೇಳಿಸಿಕೊಳ್ಳಬೇಕೇ? ನಮ್ಮಂಥ ಹಿರಿಯರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನುವುದನ್ನು ಸೋನಿಯಾರನ್ನು ನೋಡಿ ಕಲಿತುಕೊಳ್ಳಲಿ’ ಅಂತ ತಿರುಗೇಟು ನೀಡಿದರು. ಆಗ ಸ್ವತಃ ಸೋನಿಯಾ ಎಲ್ಲರನ್ನೂ ಸಮಾಧಾನಪಡಿಸಬೇಕಾಯಿತು. ಒಂದೆಡೆ ಸೋಲಿನ ಅಪಮಾನ. ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ ವಿರುದ್ಧವೇ ಸಿಡಿದೇಳುತ್ತಿರುವವರನ್ನು ಸಂತೈಸುವ ದರ್ದು. ಯಾಕೆ ಇದೆಲ್ಲ. ಇಷ್ಟು ವರ್ಷ ಪಕ್ಷದ ಚುಕ್ಕಾಣಿ ಹಿಡಿದು ಕುಳಿತಿದ್ದರಿಂದ ಈಗ ಅನುಭವಿಸುವುದು ಅನಿವಾರ್ಯ. ಒಂದು ರೀತಿಯಲ್ಲಿ, ಐತಿಹಾಸಿಕ ಪ್ರಮಾದಗಳ ಬಾಕಿ ಒಂದೇ ಸಲಕ್ಕೆ ಚುಕ್ತಾ ಆಗುತ್ತಿರುವ ಹಾಗಿದೆ.
ಸೋಲಿನ ಮರ್ಮಾಘಾತದ ಪರಿಣಾಮ ಕಾಂಗ್ರೆಸ್ನಲ್ಲಿ ಎಂತಹ ಸನ್ನಿವೇಶ ಇದೆಯೆಂದರೆ, ಒಂದುವೇಳೆ ಸಾಕ್ಷಾತ್ ಪರಬ್ರಹ್ಮನೇ ಪ್ರತ್ಯಕ್ಷವಾಗಿ, `ಈ ಸೋಲಿನಿಂದ ಕಂಗಾಲಾಗಬೇಡಿ, ಮುಂದೆ ನಿಮ್ಮ ಪಕ್ಷಕ್ಕೂ ಒಳ್ಳೆಯ ಕಾಲ ಬರಲಿದೆ. ತಪ್ಪಿದ್ದೆಲ್ಲಿ ಎಂದು ಆಲೋಚಿಸಿ ಪಕ್ಷ ಕಟ್ಟಲು ಟೊಂಕ ಕಟ್ಟಿ’ ಎಂದು ತಲೆ ನೇವರಿಸಿ, ಕೈಹಿಡಿದು ಮೇಲೆತ್ತಲು ಮುಂದಾದರೂ ಸಹ ಕಾಂಗ್ರೆಸ್ಸಿಗರು ನಂಬುವ ಸ್ಥಿತಿಯಲ್ಲಿಲ್ಲ. ಪಕ್ಷದ ಈ ಸ್ಥಿತಿಗೆ ಕೇವಲ ಮನಮೋಹನ್ ಸಿಂಗ್ ಸರ್ಕಾರದ ನಿಸ್ತೇಜ ಆಡಳಿತವೊಂದೇ ಕಾರಣವೇ? ಅಥವಾ ಪಕ್ಷ ಸತತವಾಗಿ ತಪ್ಪಿ ನಡೆದದ್ದರ ಒಟ್ಟಾರೆ ಪರಿಣಾಮವೇ? ದಾರಿ ತಪ್ಪಿದ್ದೆಲ್ಲಿ ಅಂತ ಕಾಂಗ್ರೆಸ್ಸಿಗರು ಈಗಲಾದರೂ ಪರಾಮರ್ಶಿಸುವುದು ಒಳ್ಳೆಯದು.
ಪಕ್ಷವನ್ನು ಪುನರುತ್ಥಾನಗೊಳಿಸುವ ಮನಸ್ಸಿದ್ದರೆ, ದೇಶಕ್ಕೆ ಸ್ವಾತಂತ್ರೃಬರುವ ಘಳಿಗೆಯಲ್ಲಿ ಮತ್ತು ಆ ನಂತರದ ವರ್ಷಗಳಲ್ಲಿ ಎಲ್ಲೆಲ್ಲಿ ತಪ್ಪಿದೆವು ಎಂಬುದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಅವಲೋಕನ ಮಾಡಿಕೊಳ್ಳಬೇಕು. ಅದಕ್ಕೆ ಕಾರಣಗಳೆಷ್ಟಿವೆ ಅಂದರೆ….
* ಗಾಂಧೀಜಿ ಚಿಂತನೆಗಳಾದ ಸಮಾನ ನಾಗರಿಕ ಸಂಹಿತೆ, ಗೋ ಹತ್ಯಾನಿಷೇಧ, ಪಾನನಿಷೇಧದಂತಹ ಮಹತ್ವದ ಸಂಗತಿಗಳನ್ನೇ ಸರ್ಕಾರಗಳು ಬೇಕಾದರೆ ಅನುಸರಿಸಬಹುದು, ಬೇಡವಾದರೆ ಬಿಡಬಹುದು ಎಂದು ಸಂವಿಧಾನದಲ್ಲಿ ಹೇಳಿದ್ದು ತಪ್ಪಲ್ಲವೇ? ಈ ಮುನ್ಸೂಚನೆ ಸಿಕ್ಕಿದ್ದರಿಂದಲೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಅಂತ ಗಾಂಧೀಜಿ ಹೇಳಿರಬಹುದೇ?
* ಧರ್ಮದ ಹೆಸರಲ್ಲಿ ದೇಶ ವಿಭಜನೆಗೊಂಡು ಪಾಕಿಸ್ತಾನ ನಿರ್ಮಾಣದ ಬಳಿಕವೂ ಭಾರತದ ಸಾಂಸ್ಕøತಿಕ ಐಡೆಂಟಿಟಿಗೆ ಸೆಕ್ಯುಲರಿಸಂ ಎಂಬ ಭ್ರಮೆಯ ಹೊದಿಕೆ ಹಾಕಿ ಮುಚ್ಚಿಡಲು ಕಸರತ್ತು ನಡೆಸಿದ್ದನ್ನು ಒಪ್ಪಬಹುದೇ?
* ಶಾಶ್ವತ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಏಕೈಕ ಉದ್ದೇಶದಿಂದ ಭಾರತೀಯರಲ್ಲಿ ಅಲ್ಪಸಂಖ್ಯಾತರು-ಬಹುಸಂಖ್ಯಾತರೆಂಬ ಬಹುದೊಡ್ಡ ಕಂದಕ ತೋಡಿದ್ದು ಸರಿಯೇ?
* ಇಷ್ಟು ವರ್ಷ ಅಲ್ಪಸಂಖ್ಯಾತರ ಹಿತದ ಜಪ ಮಾಡಿದ ನಂತರವೂ, ಆ ಸಮುದಾಯದವರ ಜೀವನಮಟ್ಟ ಒಂದು ಗುಲಗುಂಜಿಯಷ್ಟಾದರೂ ಸುಧಾರಿಸಿದೆಯೇ? ಅದನ್ನು ಯೋಚನೆ ಮಾಡಿದರೆ ಮುಸ್ಲಿಮರು ಮತ್ತೆ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಳ್ಳಬಹುದೇ?
* ಸ್ವಾತಂತ್ರೃದ ಬಳಿಕ ಐನೂರಕ್ಕೂ ಹೆಚ್ಚು ಭಾಷಾವಾರು ಪ್ರಾಂತ್ಯಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿಕೊಳ್ಳುವಾಗ ಕಾಶ್ಮೀರವನ್ನು ಮಾತ್ರ ಪ್ರತ್ಯೇಕವಾಗಿಡಲು ಹೋದದ್ದನ್ನು ಯಾರಾದರೂ ಒಪ್ಪಬಹುದೇ? ಮುಸ್ಲಿಂ ಸಮುದಾಯವನ್ನು ಓಲೈಸಲು ಮಾಡಿದ ಘೋರ ಪ್ರಮಾದದಿಂದ ಆಗಿರುವ ಪ್ರಾಣಹಾನಿ, ಧನಹಾನಿ, ಸೈನಿಕ ಹಾನಿಯೆಷ್ಟು? ಭಾರತದ ಇಂದಿನ ಅಸ್ಥಿರತೆಗೆ, ಅಭದ್ರತೆಗೆ ಕಾಶ್ಮೀರವೆಂಬ ಕೆಂಡವೇ ಕಾರಣವಲ್ಲವೇ? ತಪ್ಪಿನ ಅರಿವಿದ್ದೂ ಅದನ್ನು ತಿದ್ದಿಕೊಳ್ಳುವ ದೊಡ್ಡಗುಣ ತೋರಲು ಈಗಲೂ ಮನಸ್ಸು ಮಾಡದಮೇಲೆ ದೇಶದ ಜನರು ಕಾಂಗ್ರೆಸ್ ಪಕ್ಷವನ್ನೇಕೆ ಬೆಂಬಲಿಸಬೇಕು?
* ಬಡವರ, ಅಲ್ಪಸಂಖ್ಯಾತರ ಕಲ್ಯಾಣದ ವಿಷಯದಲ್ಲಿ ಕಾಂಗ್ರೆಸ್ ಕೊಟ್ಟ ಭರವಸೆಗಳಿಗೆ ಲೆಕ್ಕವುಂಟೇ? ಬಡತನ ನಿರ್ಮೂಲನೆಗೆ ರೂಪಿಸಿದ ಯೋಜನೆಗಳಿಗೆ, ಹರಿಸಿದ ಹಣದ ಹೊಳೆಗೆ ಅಳತೆ ಮಾಪನವಿಲ್ಲ. ಗರೀಬೀ ಹಠಾವೋ, ಇಪ್ಪತ್ತು ಅಂಶದ ಕಾರ್ಯಕ್ರಮ ಮತ್ತೊಂದು ಮಗದೊಂದು ಘೋಷಣೆ ಮೊಳಗಿಸಿ ನಲ್ವತ್ತು ವರ್ಷಗಳ ನಂತರವೂ ಬಡವರಿಗೆ ಅನ್ನ ಕೊಡಲು ಆಹಾರ ಭದ್ರತಾ ಕಾಯ್ದೆ ಜಾರಿಮಾಡಬೇಕಿದೆ ಎಂದರೆ ಸರ್ಕಾರದ ಯೋಜನೆಗಳೆಲ್ಲ ತಲುಪಬೇಕಾದವರಿಗೆ ತಲುಪಿಲ್ಲ ಅಂತಲೇ ಅಲ್ಲವೇ? ಬಡತನ ನಿರ್ಮೂಲನೆ ಕುರಿತ ಮೂಲಚಿಂತನೆಯಲ್ಲೇ ಲೋಪವಿರುವುದನ್ನು ಈಗಾದರೂ ಅರಿಯಬೇಡವೇ?
* ಕಾಂಗ್ರೆಸ್ನಂತಹ ದೊಡ್ಡ ಪಕ್ಷವನ್ನು ಒಂದು ಮನೆತನದ ಚರಣಕ್ಕೆ ಒಪ್ಪಿಸಿದ್ದು ಘನಘೋರ ಪ್ರಮಾದ ಅಂತ ಈಗ ಅನ್ನಿಸುತ್ತಿರಬೇಕಲ್ಲವೇ? ನೆಹರು ನಂತರ ಇಂದಿರಾ, ಇಂದಿರಾ ನಂತರ ರಾಜೀವ್, ರಾಜೀವ್ ನಂತರ ಸೋನಿಯಾರನ್ನು ತಲೆಬಾಗಿಸಿ ಅಪ್ಪಿಕೊಳ್ಳುತ್ತ ಬಂದ ಪಕ್ಷಕ್ಕೆ ಮುಂದೆ ಯಾರು ದಿಕ್ಕು? ಈ ಅಪಾಯವನ್ನು ಬುಡದಲ್ಲೇ ಊಹಿಸಿಕೊಳ್ಳಲಿಲ್ಲ ಏಕೆ? ಕಾಂಗ್ರೆಸ್ನ ಮೊದಲ ಕುಟುಂಬ ಪರ್ಯಾಯ ನಾಯಕತ್ವವನ್ನೂ ಬೆಳೆಸಲಿಲ್ಲ, ಸ್ವತಂತ್ರವಾಗಿ ಬೆಳೆಯಲು ಹಂಬಲಿಸಿದವರನ್ನೂ ಸಹಿಸಲಿಲ್ಲ. ಅದು ಸರಿಯೇ?
* ಸಂಸತ್ತಿನಲ್ಲಿ ಕಾಂಗ್ರೆಸ್ ಪಾರಮ್ಯವೇ ಇದ್ದಾಗ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಿರಿ. ಹತ್ತು ಹಲವು ರಾಜ್ಯಸರ್ಕಾರಗಳನ್ನು ರಾತ್ರೋರಾತ್ರಿ ಬರ್ಖಾಸ್ತು ಮಾಡಿದಿರಿ. ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಗಾಳಿಗೆ ತೂರಿದಿರಿ. ಅದೆಲ್ಲದರ ಒಟ್ಟು ಪರಿಣಾಮ ಈಗ ಹೊರೆಯಾಗುತ್ತಿದೆ ಅಂತ ಅನ್ನಿಸಿರಬೇಕಲ್ಲವೇ?
* 1975ರಲ್ಲಿ ತುರ್ತುಪರಿಸ್ಥಿತಿ ಹೇರಿದ ದಿನದಿಂದಲೇ ಕಾಂಗ್ರೆಸ್ ಪಕ್ಷದ ಅವನತಿ ಶುರುವಾಯಿತು ಎಂಬುದನ್ನು ಒಪ್ಪಿಕೊಳ್ಳುತ್ತೀರಾ? ಆ ನಂತರ ಮೇಲಿಂದ ಮೇಲೆ ಪಕ್ಷ ಸೋಲುತ್ತಲೇ ಬಂದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಯಾಕೆ ಆತ್ಮಾವಲೋಕನಕ್ಕೆ ಮುಂದಾಗಲಿಲ್ಲ?
* ಕಾಂಗ್ರೆಸ್ ಆಡಳಿತ ಕಾಲದುದ್ದಕ್ಕೂ ಸುಮಾರು 450ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಿಗೆ ನೆಹರು, ಇಂದಿರಾ ಮತ್ತು ರಾಜೀವ್ ಹೆಸರನ್ನೇ ನಾಮಕರಣ ಮಾಡಿದಿರಿ. ಇದರಿಂದ ಪಕ್ಷಕ್ಕೆ ಈಗಲೂ ಮುಜುಗರ ಆಗುತ್ತಿಲ್ಲವೇ?
* ಚುನಾವಣೆ ಹತ್ತಿರ ಬಂದಾಗ ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಪಾಲರನ್ನು ನೇಮಿಸುವ ಮಾತನಾಡಿದಿರಿ. ನಿಮ್ಮ ಸರ್ಕಾರದ ಮಂತ್ರಿಗಳೇ ಭಯಂಕರ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಯಾಕೆ ಮೌನ ವಹಿಸಿದಿರಿ. ಭ್ರಷ್ಟಾಚಾರ ಆರೋಪದಲ್ಲಿ ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟವರಿಗೂ ಯಾಕೆ ಪಕ್ಷದ ಟಿಕೆಟ್ ಕೊಟ್ಟಿರಿ? ಭ್ರಷ್ಟಾತಿಭ್ರಷ್ಟ ಡಿಎಂಕೆ, ಆರ್ಜೆಡಿಯಂತಹ ಪಕ್ಷಗಳೊಂದಿಗೆ ಯಾಕೆ ದೋಸ್ತಿ ಮುಂದುವರೆಸಿದಿರಿ? ಇಷ್ಟಾದಮೇಲೂ ಪಾರದರ್ಶಕ ಆಡಳಿತ ನೀಡುವ ನಿಮ್ಮ ಮಾತನ್ನು ಜನ ನಂಬಬೇಕಿತ್ತೇ?
* ವಿದೇಶಗಳಲ್ಲಿ ಬಚ್ಚಿಟ್ಟ ಕಪ್ಪುಹಣ ವಾಪಸು ತರಲು ಆಗ್ರಹಿಸಿ ಬಾಬಾ ರಾಮದೇವ್ ಚಳವಳಿ ಆರಂಭಿಸಿದರೆ ಒಂದೆಡೆ ಅವರೊಂದಿಗೆ ಸಂಧಾನದ ಪ್ರಹಸನ ನಡೆಸುತ್ತ, ಮತ್ತೊಂದೆಡೆ ರಾತ್ರೋರಾತ್ರಿ ಅವರನ್ನು ಬಂಧಿಸಿ ಜನಹೋರಾಟವನ್ನು ಹತ್ತಿಕ್ಕಲು ಹೋದಿರಿ. ಕಾಂಗ್ರೆಸ್ ಸರ್ಕಾರದ ಅವಸಾನಕ್ಕೆ ಅದೇ ಮೂಲ ಕಾರಣ ಆಯಿತು ಅಂತ ಈಗಲೂ ಅನ್ನಿಸುತ್ತಿಲ್ಲವೇ?
* ಅಭಿವೃದ್ಧಿಯ ಬಗ್ಗೆ ಈಗ ಮಾತನಾಡಿದರೆ ಏನು ಬಂತು. ಅರವತ್ತೈದು ವರ್ಷಗಳಲ್ಲಿ, ಐವತ್ತೈದು ವರ್ಷಕಾಲ ಕಾಂಗ್ರೆಸ್ ಪಕ್ಷವೇ ದೇಶವನ್ನಾಳಿದ್ದು. ದೇಶದಲ್ಲಿ ಹೇಳಿಕೊಳ್ಳುವಂತಹ ರಸ್ತೆ, ಹೆದ್ದಾರಿ, ಮೂಲಸೌಕರ್ಯ ಒದಗಿಸಿಕೊಡಲು ಸಾಧ್ಯವಾಯಿತೇ? ಅಲ್ಲೋ ಇಲ್ಲೋ ಅಲ್ಪಸ್ವಲ್ಪ ಆದದ್ದಾದರೆ ಅದು ಯಾರ ಆಡಳಿತದ ಕಾಲದಲ್ಲಿ? ಶಿಕ್ಷಣ, ಉದ್ಯಮ, ವಿಜ್ಞಾನ-ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದ ಬೆಳವಣಿಗೆ ಜಾಗತಿಕ ಸ್ಪರ್ಧೆಗೆ ಅನುಗುಣವಾಗಿದೆಯೇ? ಇಷ್ಟು ವರ್ಷ ಕಳೆದರೂ ಮುಕ್ಕಾಲುಪಾಲು ಹಳ್ಳಿಗಳಿಗೆ ಸರ್ವಋತು ರಸ್ತೆಯಿಲ್ಲ, ಶುದ್ಧ ಕುಡಿಯುವ ನೀರಿಲ್ಲ, ಶೌಚಾಲಯಗಳಿಲ್ಲ. ಎಲ್ಲವೂ ಇಲ್ಲ..! ಇದಕ್ಕೆಲ್ಲ ಇಚ್ಛಾಶಕ್ತಿಯ ಕೊರತೆಯಲ್ಲದೇ ಬೇರೇನು ಕಾರಣವಿದೆ ನೀವೇ ಹೇಳಿ.
* ಕೈಗಾರಿಕೆಗಳಿಗೆ ಸಿಗಬೇಕಾದ ಉತ್ತೇಜನ ಸಿಕ್ಕಿಲ್ಲ. ಡಾಲರ್ ಎದುರು ರೂಪಾಯಿ ತಲೆತಗ್ಗಿಸಿ ಕುಳಿತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಬಡ-ಮಧ್ಯಮ ವರ್ಗದವರು ಬದುಕಲು ಪರದಾಡುತ್ತಿದ್ದಾರೆ. ಇದೆಲ್ಲವನ್ನು ಕಂಡೂ ಕಾಣದಂತೆ ಕುಳಿತದ್ದು ತಪ್ಪಲ್ಲವೇ? ಇಷ್ಟುವರ್ಷ ಆಳಿದ ಪಕ್ಷದ ಮುಂದೆ ದೇಶದ ಆರ್ಥಿಕ, ಸಾಮಾಜಿಕ ಸುಧಾರಣೆ ಚಿಂತನೆಯ ನೀಲನಕ್ಷೆಯೇ ಇಲ್ಲ ಅಂದರೆ ಹೇಗೆ?
* ಮಹಿಳಾ ಸಬಲೀಕರಣ, ಸ್ವಾತಂತ್ರೃ, ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಕುರಿತು ಮಾತನಾಡುತ್ತಿರುವಾಗಲೇ ಗಲ್ಲಿಗಲ್ಲಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಅವ್ಯಾಹತವಾಗುತ್ತಿದೆ. ಯಾಕೆ ಹೀಗೆ ಅಂತ ಆಲೋಚನೆ ಮಾಡಿದ್ದೀರಾ?
* ಚುನಾವಣೆ ಮುಂದಿಟ್ಟುಕೊಂಡು ಮೋದಿ ಜನರಿಗೆ ಅಭಿವೃದ್ಧಿಯ ಕನಸು ಕಟ್ಟಿಕೊಟ್ಟರೆ, ನೀವು ಗೋಧ್ರೋತ್ತರ ಗಲಭೆಯ ಹಳೇ ಕ್ಯಾಸೆಟ್ಟನ್ನೇ ಹಾಕಿಕೊಂಡು ಕನವರಿಸಿದಿರಿ. ಈ ಹಿಂದೆ ಮೂರು ಬಾರಿ ನಿಮ್ಮ ವಾದವನ್ನು ಗುಜರಾತ್ ಜನರು ತಿರಸ್ಕರಿಸಿದಾಗಲೇ ನಿಮ್ಮ ಆಲೋಚನಾಕ್ರಮವನ್ನು ಬದಲಿಸಿಕೊಳ್ಳಬೇಕಿತ್ತಲ್ಲವೇ?
* ಈ ಸಲದ ಚುನಾವಣೆ ಒಂದು ಸ್ಪಷ್ಟ ಸಂದೇಶ ನೀಡಿದೆ. ಅದೆಂದರೆ ಈ ದೇಶದ ಜನ ಸೆಕ್ಯುಲರಿಸಂನ ಭ್ರಮೆಯ ಪೆÇರೆ ಕಳಚಿಕೊಂಡು ಆಚೆ ಬಂದಿದ್ದಾರೆ. ಇಷ್ಟು ವರ್ಷಗಳ ನಂತರ ಜನರಿಗೆ ಅರ್ಥವಾಗಿದೆ, ನಮ್ಮ ಹೊಟ್ಟೆ ಹೊರೆಯುವುದು ಇಸಂ, ಸಿದ್ಧಾಂತಗಳಲ್ಲ ಎಂದು. ಅವರಿಗೆ ಬೇಕಿರುವುದು ನೆಮ್ಮದಿಯ ಬದುಕು, ಉತ್ತಮ ಜೀವನಮಟ್ಟ ಮಾತ್ರ. ಇದನ್ನು ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳೂ ಅರ್ಥ ಮಾಡಿಕೊಳ್ಳಬೇಕು.
* ಕೊನೇ ಮಾತು, ರಾಹುಲ್ ಗಾಂಧಿ ಒಂದೋ ಪೂರ್ಣಾವಧಿ ರಾಜಕಾರಣಿ ಆಗಬೇಕು. ಅಥವಾ ಸಂಪೂರ್ಣವಾಗಿ ರಾಜಕೀಯ ತೊರೆಯಬೇಕು. ಅದಿಲ್ಲದೇ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲವೇ ಇಲ್ಲ.
* ಜನರಿಗೆ ಸೋನಿಯಾ, ರಾಹುಲ್, ಪ್ರಿಯಾಂಕಾ ಅಥವಾ ಮೋದಿ ಇವರಾರೂ ಮುಖ್ಯವಲ್ಲ. ಅವರು ಹೇಗೆ ಆಡಳಿತ ಕೊಡುತ್ತಾರೆ, ಯಾವ ಚಿಂತನೆಯನ್ನು ಮುಂದಿಡುತ್ತಾರೆಂಬುದು ಮುಖ್ಯ. ಇಂದು ಮೋದಿವಾದವನ್ನು ಜನರು ಒಪ್ಪಿಕೊಂಡಿದ್ದಾರೆ. ಮುಂದೆ, ಮೋದಿಯವರನ್ನು ಮೀರಿಸುವ ಮತ್ತೊಬ್ಬ ನಾಯಕ ಬಂದರೆ ಆತನನ್ನೂ ಜನರು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಜನರ ಆಲೋಚನಾಕ್ರಮ ಮತ್ತು ಜೀವನವಿಧಾನ ಎರಡೂ ವೇಗವಾಗಿ ಬದಲಾಗುತ್ತಿವೆ. ಇದನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳುತ್ತಾರಾ?
ಯಾಕೆ ಇಷ್ಟೆಲ್ಲ ಹೇಳಬೇಕಾಯಿತು ಅಂದರೆ, ಐವತ್ತು ವರ್ಷ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುವವರೇ ಇರಲಿಲ್ಲ. ಅದಕ್ಕಿಂತ ದುರಂತ ಅಂದರೆ ಕಳೆದ ಹತ್ತು ವರ್ಷ ದೇಶದಲ್ಲಿ ಒಂದು ಸರ್ಕಾರವಿದೆಯೆಂಬುದೇ ಅನುಭವಕ್ಕೆ ಬರುತ್ತಿರಲಿಲ್ಲ. ಈಗ ಅದೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿಪಕ್ಷದ ಸ್ಥಾನಮಾನವೂ ಇಲ್ಲ. ಹೀಗಿರುವಾಗ ಕಾಂಗ್ರೆಸ್ನ ಜಾಹೀರಾತು ತಂತ್ರಗಾರಿಕೆ ಸರಿ ಇರಲಿಲ್ಲ, ಮೋದಿಗೆ ಪ್ರಚಾರಕ್ಕೆ ಸಮನಾಗಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗಲಿಲ್ಲ, ಜಾಹೀರಾತು ಏಜೆನ್ಸಿ ಸರಿ ಕೆಲಸ ಮಾಡಲಿಲ್ಲ ಅನ್ನುತ್ತ, ಸೋಲಿಗೆ ಕಾರಣ ಹುಡುಕಿಕೊಡಿ ಎಂದು ಪತ್ರದ ಮೇಲೆ ಪತ್ರ ಗೀಚುತ್ತ ಕುಳಿತರೆ ಪಕ್ಷವನ್ನು ಮತ್ತೆ ಎತ್ತಿ ನಿಲ್ಲಿಸಲು ಸಾಧ್ಯವಾದೀತೇ? ಉತ್ತಮ ಕಾರ್ಯಕ್ರಮ, ಉದಾತ್ತ ಚಿಂತನೆ ಮತ್ತು ದೂರದೃಷ್ಟಿಯುಳ್ಳ ಸಮರ್ಥ ನಾಯಕತ್ವ ಬೆಳೆಸಿಕೊಳ್ಳುವುದರ ಹೊರತಾಗಿ ಕಾಂಗ್ರೆಸ್ ಪಕ್ಷಕ್ಕೆ ಈಗ ಬಂದಿರುವ ಕಾಯಿಲೆಗೆ ಬೇರೆ ಮದ್ದು ಸಿಗಲಾರದೇನೋ?