ಕಾಂಗ್ರೆಸ್ ಪ್ರಚಾರ ಜಾಹೀರಾತುಗಳಲ್ಲಿ ಯುವ ಸಮುದಾಯದ ಜತೆ ನಿಂತ ರಾಹುಲ್ `ನಾನಲ್ಲ, ನಾವು’ ಎನ್ನುತ್ತಿದ್ದಾರಲ್ಲ ಆ ನಾವುಗಳು ಯಾರು? ಹೈಕೋರ್ಟು, ಸುಪ್ರೀಂ ಕೋರ್ಟು, ವಿಶೇಷ ತನಿಖಾ ತಂಡಗಳೆಲ್ಲ ಕ್ಲೀನ್‍ಚಿಟ್ ಕೊಟ್ಟ ನಂತರವೂ ಅದೇ ವ್ಯಕ್ತಿ ಕೊಲೆಗಡುಕ, ಸಾವಿನ ವ್ಯಾಪಾರಿ ಅಂತ ಜರಿಯಲು ಇವರ್ಯಾರು?
ನರೇಂದ್ರ ಮೋದಿ ಪ್ರಧಾನಿ ಆಗುವುದನ್ನು ಶತಾಯಗತಾಯ ತಡೆಯಲೇಬೇಕು, ಅದಿಲ್ಲದೇ ಹೋದರೆ ದೇಶದಲ್ಲಿ ಅನಾಹುತವೇ ನಡೆದುಹೋಗುತ್ತದೆ ಅಂತ ಮೊನ್ನೆ ಮೊನ್ನೆ ನಮ್ಮ ಪ್ರಸಿದ್ಧ ಸಾಹಿತಿಗಳೆಲ್ಲ ಸೇರಿ ತೀರ್ಮಾನ ಕೊಟ್ಟುಬಿಟ್ಟರಲ್ಲ, ಅದು ಸಾಹಿತ್ಯ ಲೋಕದಲ್ಲಿ ಒಂದು ರೀತಿಯ ತಿಕ್ಕಾಟ, ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದು ಮೋದಿ ವಿರೋಧಿಸುವ ಒಂದಂಶದ ಕಾರ್ಯಕ್ರಮ ಆಗುವ ಬದಲು ದೇಶದ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ, ದೇಶದ ರಾಜಕೀಯ ಭವಿಷ್ಯ ನಿರ್ಣಯಿಸುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಹಿಂದಿನ ಸರ್ಕಾರಗಳು ನಿರ್ವಹಿಸಿದ ನೈಜ ಪಾತ್ರ, ಜನರು ಮತ್ತು ರಾಜಕಾರಣಿಗಳು ವಹಿಸಬೇಕಿರುವ ಮುನ್ನೆಚ್ಚರಿಕೆ, ಜವಾಬ್ದಾರಿಗಳ ಕುರಿತು ಗಂಭೀರ ಚರ್ಚೆ ಹುಟ್ಟುಹಾಕಿದ್ದರೆ ಸ್ವಾಗತಾರ್ಹವಾಗುತ್ತಿತ್ತು. ಆದರೆ ವಾಸ್ತವದಲ್ಲಿ ಹಾಗಾಗಲೇ ಇಲ್ಲ. ಬರೀ ದ್ವಂದ್ವ ಮತ್ತು ಕೆಸರೆರಚಾಟಕ್ಕೆ ಸೀಮಿತವಾಗಿ ಹೋಯಿತು.
ಆ ಕುರಿತೇ ಆಲೋಚನೆ ಮಾಡುತ್ತಿದ್ದೆ. ಅದೇ ವೇಳೆಗೆ ಪರಿಚಯದವರೊಬ್ಬರ ಫೋನ್ ಬಂತು. ಅವರು ದೆಹಲಿಯಿಂದ ಕರೆ ಮಾಡಿದ್ದರು. “ಅನಂತಮೂರ್ತಿಯವರು ಹೇಳಿಕೆ ಬದಲಾಯಿಸಿದ್ದು ಗೊತ್ತಾಯಿತಾ?” ಅಂತ ಥಟ್ಟನೆ ಕೇಳಿದರು. “ಆಂ ಏನು?” ಅಂದೆ. “ಅದೇ ಕೆಲ ತಿಂಗಳ ಹಿಂದೆ ಅವರು ಹೇಳಿದ್ದರಲ್ಲಾ, ಮೋದಿ ಆಳುವ ದೇಶದಲ್ಲಿ ನಾನಿರುವುದಿಲ್ಲ ಅಂತ, ಅದು ಭಾವಾವೇಶದಿಂದ ಹೇಳಿದ್ದು, ಆದರೆ ವಾಸ್ತವದಲ್ಲಿ ಮೋದಿ ಪ್ರಧಾನಿ ಆದರೂ ದೇಶ ಬಿಡುವ ಪ್ರಶ್ನೆಯೇ ಇಲ್ಲ ಅಂತ ಅನಂತಮೂರ್ತಿ ಹೇಳಿದರು” ಅಂತ ತಾಜಾ ಬಾತ್ಮೆ ಒಪ್ಪಿಸಿದರು. ಅಷ್ಟಕ್ಕೇ ಅವರು ಸುಮ್ಮನಾಗಲಿಲ್ಲ, ಬಹುಶಃ ಮೋದಿ ಪ್ರಧಾನಿ ಆಗೇ ಆಗುತ್ತಾರೆ ಅಂತ ದೆಹಲಿಗೆ ಬಂದ ನಂತರ ಅನಂತಮೂರ್ತಿಯವರಿಗೆ ಮನವರಿಕೆ ಆಗಿರಬೇಕು, ಹೀಗಾಗಿ ಹೇಳಿಕೆ ಬದಲಿಸಿದರೆಂದು ತೋರುತ್ತದೆ ಎಂದರು.
“ಛೇ.. ಅನಂತಮೂರ್ತಿಯವರ ವಿಷಯದಲ್ಲಿ ಹೀಗೆಲ್ಲ ಮಾತನಾಡುವುದು ಸರಿ ಅಲ್ಲ, ಅವರದು ಈಗ ಒಂಥರಾ ಮಗುವಿನ ಮನಸ್ಸು ಇದ್ದ ಹಾಗೇ, ಅಲ್ಲದೇ ಅಂಥ ಹಿರಿಯರನ್ನು ವಿಮರ್ಶಿಸಲು ನಾವ್ಯಾರು?” ಅಂದೆ…
ಅದಕ್ಕೂ ನನ್ನ ಸ್ನೇಹಿತರು ಒಪ್ಪುವ ಲಕ್ಷಣ ಕಾಣಿಸಲಿಲ್ಲ. ಅವರು ಒಂದು ರೀತಿಯಲ್ಲಿ ಸುದೀರ್ಘ ಚರ್ಚೆಗೇ ಅಣಿಯಾಗಿ ನಿಂತಂತಿತ್ತು. “ಹಾಗಿದ್ದರೆ ಮೋದಿ ಮಾನಸಿಕ ಭ್ರಷ್ಟ ಅಂತ ಅನಂತಮೂರ್ತಿಯವರು ತೀರ್ಮಾನ ಕೊಟ್ಟುಬಿಡುವುದೇ? ಅದಕ್ಕಾಗಿ ಅವರು ದೇಶದ ಪ್ರಧಾನಿ ಆಗಬಾರದು ಅನ್ನುವುದು ಎಷ್ಟರಮಟ್ಟಿಗೆ ಸರಿ? ಇವರೇನಾದರೂ ಮೋದಿ ಮನಸ್ಸಿನ ಒಳಹೊಕ್ಕು ನೋಡಿದ್ದಾರೆಯೇ? ಕಾಯಾ-ವಾಚಾ-ಮನಸಾ ಕಡುಭ್ರಷ್ಟರ ಪಾಳಯದಲ್ಲಿ ನಿಂತು ಮೋದಿ ಮಾನಸಿಕ ಭ್ರಷ್ಟ ಎಂಬುದು ಯಾವ ಸೀಮೆಯ ನ್ಯಾಯ” ಅಂತ ಶುರು ಮಾಡಿಕೊಂಡ ಅವರು ಒಂದರ ಮೇಲೊಂದರಂತೆ ಪ್ರಶ್ನೆಗಳನ್ನು ಕೇಳುತ್ತ, ಅದಕ್ಕೆ ವಿವರಣೆಯನ್ನೂ ಕೊಡುತ್ತ ಹೋದರು. ಕೇಳುವ ಸರದಿ ಮಾತ್ರ ನನ್ನದಾಯಿತು. ಅವರ ಮಾತುಗಳನ್ನು ಅವರಾಡಿದ ರೀತಿಯಲ್ಲೇ ನಿಮ್ಮ ಮುಂದಿಡುತ್ತಿದ್ದೇನೆ. ಓದಿಕೊಳ್ಳಿ.
***
ನಾವು ಅಂದರೆ ಯಾರು?: ಪ್ರಧಾನಿ ಪಟ್ಟಕ್ಕೆ ಮೋದಿಗಿಂತ ರಾಹುಲ್ ಗಾಂಧಿಯೇ ವಾಸಿ ಅಂತ ಅನಂತಮೂರ್ತಿ ಹೇಳುತ್ತಿದ್ದಾರಲ್ಲ, ಅದೇ ರಾಹುಲ್ `ನಾನಲ್ಲ, ನಾವು’ ಅಂತ ಜಾಹೀರಾತಿನಲ್ಲಿ ಪೋಸ್ ಕೊಡುತ್ತಿದ್ದಾರಲ್ಲ ಏನದರ ಅರ್ಥ ಎಂದು ಯಾರಾದರೂ ಯೋಚನೆ ಮಾಡಿದ್ದಾರಾ?
ಈ ಪರಿ ಯಾಮಾರಿಸುವುದು ಸರೀನಾ? ದೇಶದ ಜನರು ಅಂದರೆ ಬುದ್ದುಗಳು ಅಂತ ತೀರ್ಮಾನಿಸಿಬಿಟ್ಟ ಹಾಗಿದೆಯಲ್ಲ.. ಚುನಾವಣಾ ಪ್ರಚಾರಕ್ಕಾಗಿ ಹಾಕಿರುವ ಕಾಂಗ್ರೆಸ್ ಫ್ಲೆಕ್ಸ್ ಮತ್ತು ಹೋರ್ಡಿಂಗ್‍ಗಳನ್ನು ಒಮ್ಮೆ ನೋಡಿ. `ನಾನಲ್ಲ, ನಾವು’ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಫೋಟೊ ಇರುವ ಹೋರ್ಡಿಂಗ್‍ಗಳನ್ನು ಹಾಕಿದ್ದಾರಲ್ಲ, ಅದು ಮೋದಿಯ ಕುರಿತೇ ಹೇಳಿದ್ದು, ಹಾಗಿದ್ದರೆ ನಾವು ಅಂದರೆ ಯಾರು, ರಾಹುಲ್, ಸೋನಿಯಾ, ಪ್ರಿಯಾಂಕಾ, ರಾಬರ್ಟ್ ವಾದ್ರಾ..ಮುಂದೆ ಅವರ ಮಕ್ಕಳು,,, ಹಿಂದಕ್ಕೆ ಹೋದರೆ ರಾಜೀವ್, ಇಂದಿರಾ…ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಅಲ್ಲ, ಇನ್ನು ಪ್ರಣಬ್, ಪವಾರ್, ಚಿದಂಬರಂ, ಶಿಂಧೆ ಇತ್ಯಾದಿಗಳ ಮಾತೆಲ್ಲಿ…ನಾವು ಅನ್ನುವ ಪದಕ್ಕೆ ಏನರ್ಥ? ಇಂಥ ಮಾತನ್ನು ಒಪ್ಪಿಕೊಳ್ಳಬೇಕಾ?
ವಿಭಜಕರು ಯಾರು?: ಮೊದಲು ಈ ದೇಶವನ್ನು ಒಂದುಗೂಡಿಸಿದ ವಂದೇಮಾತರಂ, ನಂತರ ಭಾರತದಿಂದ ಪಾಕಿಸ್ತಾನ, ನಂತರ ಶಾಶ್ವತವಾಗಿ ಹಿಂದು ಮುಸ್ಲಿಂ ಮತ್ತು ದೇಶದಲ್ಲಿರುವ ನೂರಾರು ಜಾತಿ, ಮತ, ಪಂಥಗಳನ್ನೆಲ್ಲ ಒಡೆದು, ಬೇರ್ಪಡಿಸಿ, ಕಿತ್ತಾಟಕ್ಕೆ ಹಚ್ಚಿ ಕಾಲಕಾಲಕ್ಕೆ ಕುರ್ಚಿ ಭದ್ರಪಡಿಸಿಕೊಳ್ಳುತ್ತ ಬಂದವರು ಯಾರು?
ಸಾಮಾಜಿಕ ನ್ಯಾಯಕ್ಕೆ ಕೊಡುವ ಬೆಲೆ ಇದೇನಾ?: ಸ್ವಾತಂತ್ರೃಬಂದ ಹೊಸ್ತಿಲಲ್ಲೇ ದಲಿತರ ಧ್ವನಿಯಾದ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಹೊಸಕಿ ಹಾಕಿದವರಿಂದ ಸಾಮಾಜಿಕ ನ್ಯಾಯದ ಉಪದೇಶ ಹೇಳಿಸಿಕೊಳ್ಳಬೇಕೇ? ಇಷ್ಟು ವರ್ಷಗಳ ಪರ್ಯಂತ ಎಷ್ಟು ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕಿದೆ, ಎಷ್ಟು ಮಂದಿ ದಲಿತರು ಎಐಸಿಸಿ ಅಧ್ಯಕ್ಷರಾಗಿದ್ದಾರೆ, ಪ್ರಧಾನಿಗಳಾಗಿದ್ದಾರೆ? ಯಾವುದೇ ಕೌಟುಂಬಿಕ ಹಿನ್ನೆಲೆ ಇಲ್ಲದೆ, ಬಾಲಕನಿದ್ದಾಗಲೇ ಸರ್ಕಾರಿ ಸಾರಿಗೆ ಸಂಸ್ಥೆಯ ಕ್ಯಾಂಟೀನ್‍ನಲ್ಲಿ ಚಹಾ ಮಾರಿಕೊಂಡಿದ್ದ ಓರ್ವ ಹಿಂದುಳಿದ ವರ್ಗದ ಹುಡುಗ ಕೇವಲ ಸ್ವ ಸಾಮಥ್ರ್ಯದ ಮೇಲೆ ಪ್ರಧಾನಿ ಪಟ್ಟದ ಹತ್ತಿರಕ್ಕೆ ಬಂದು ನಿಂತರೆ ಆತನಿಗೆ ಸುಕಾಸುಮ್ಮನೆ ಅಡ್ಡಗಾಲು ಹಾಕುವುದು ಯಾವ ಸೀಮೆಯ ಸಾಮಾಜಿಕ ನ್ಯಾಯ ಸ್ವಾಮಿ?
ಸಾವಿನ ವ್ಯಾಪಾರಿಯೇ?: ಈ ಮಾತನ್ನು ಯಾರು ಹೇಳಿದ್ದು? ಸುಪ್ರಿಂ ಕೋರ್ಟ್‍ನಿಂದ ನೇಮಕವಾದ ವಿಶೇಷ ತನಿಖಾ ತಂಡ(ಎಸ್‍ಐಟಿ), ಗುಜರಾತ್ ಹೈಕೋರ್ಟ್, ಸಿಬಿಐ, ಕೊನೆಗೆ ಸುಪ್ರೀಂ ಕೋರ್ಟ್? ಎಲ್ಲ ರೀತಿಯ ತನಿಖೆಯಲ್ಲೂ ಮೋದಿಗೆ ಕ್ಲೀನ್‍ಚಿಟ್ ಸಿಕ್ಕಿದೆ. ಆದರೂ ಮೋದಿ ಸಾವಿನ ವ್ಯಾಪಾರಿ ಅಂತ ಸೋನಿಯಾ ಮತ್ತು ಕಾಂಗ್ರೆಸ್‍ನ ಇತರ ನಾಯಕರು ಯಾಕೆ ಹೇಳುತ್ತಾರೆ. ಅದು ನ್ಯಾಯಾಂಗಕ್ಕೆ ಮಾಡುವ ಅಪಚಾರ ಅಲ್ಲವೇನು? ಸೋನಿಯಾ ಹೇಳಿದ್ದನ್ನೇ ಇಂದು ಮೋದಿ ವಿರೋಧಿಗಳೆಲ್ಲರೂ ಜಪ ಮಾಡುತ್ತಿದ್ದಾರೆ ತಾನೆ? ಇದ್ಯಾವ ಸಂಭಾವಿತತನ!
ಯುದ್ಧ ಆಗುವುದು ನಿಜವೇ?: ದಿನವೂ ಸಾಯುವುದಕ್ಕಿಂತ ಒಮ್ಮೆ ಯುದ್ಧ ಮಾಡಿ ವೀರಮರಣ ಅಪ್ಪುವುದು ಲೇಸು ತಾನೆ.. ಮೋದಿ ಬರುವ ಮೊದಲು ಈ ದೇಶದಲ್ಲಿ ಪಾಕಿಸ್ತಾನದೊಂದಿಗೆ ನಾಲ್ಕು ಯುದ್ಧ, ಚೀನಾದೊಂದಿಗೆ ಒಂದು ಹೀನಾಯ ಯುದ್ಧ, ದಿನವೂ ನಡೆಯುತ್ತಿರುವ ಛಾಯಾ ಯುದ್ಧ, ಕ್ಷಣಕ್ಷಣಕ್ಕೂ ಭಯೋತ್ಪಾದಕರ ದಾಳಿ ಇದಕ್ಕೆಲ್ಲ ಯಾರು ಕಾರಣ? ಉಗ್ರರ ದಮನಕ್ಕೆ ಇದ್ದ ಒಂದೇ ಒಂದು ಅಸ್ತ್ರ `ಪೋಟಾ ಕಾಯ್ದೆ’ಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದವರು ಯಾರು? ಯಾವ ಕಾರಣಕ್ಕೆ ? ಭಯೋತ್ಪಾದಕರಲ್ಲಿ ಹಿಂದು ಮುಸ್ಲಿಂ ಭೇದವೆಣಿಸಿದ್ದು, ಭಯೋತ್ಪಾದನೆ ಆರೋಪದಡಿ ಬಂಧಿತರಾದವರಿಗೆ ವಕಾಲತ್ತಿನ ನೆರವು ಕೊಡಿ ಅಂತ ಸುತ್ತೋಲೆ ಹೊರಡಿಸಿದ್ದು ಯಾವ ಸರ್ಕಾರ? ಇದರಿಂದ ದೇಶಕ್ಕೇನು ಒಳ್ಳೆಯದಾಗುತ್ತದೆ?
ಗೋಧ್ರೋತ್ತರ ಗಲಭೆಯನ್ನು ಮರೆಯಬಾರದೆ?: ಮೋದಿ ಹುಟ್ಟುವ ಮೊದಲೇ ಈ ದೇಶದಲ್ಲಿ ಪ್ರತ್ಯೇಕತಾ ಮನೋಭಾವ ಬೆಳೆದಿರಲಿಲ್ಲವೇ? ಗೋಧ್ರೋತ್ತರ ಗಲಭೆ ಬಗ್ಗೆ ಮಾತನಾಡುವಾಗ ಗೋಧ್ರಾ ಹತ್ಯಾಕಾಂಡ ಮರೆಯುವುದೇಕೆ? ಜಾಣ ಮರೆವೇ? ಮೋದಿ ಗುಜರಾತಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಪೂರ್ವದಲ್ಲಿ ಎಷ್ಟು ದಂಗೆಗಳಾಗಿವೆ, ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆಂಬ ಲೆಕ್ಕ ಗೊತ್ತಿಲ್ಲವೇ? ಗೋಧ್ರೋತ್ತರ ಗಲಭೆ ತಡೆಯಲು ಮೋದಿ ಸರ್ಕಾರ ಕಫ್ರ್ಯೂ ಹಾಕಿರಲಿಲ್ಲವೇ? ಕಂಡಲ್ಲಿ ಗುಂಡಿಕ್ಕಲು ಆದೇಶಿಸಿರಲಿಲ್ಲವೇ? ಘಜನಿ, ಘೋರಿ ಮರೆತಿದ್ದೇವೆ, ಬಾಬರನನ್ನು ಕ್ಷಮಿಸಬೇಕೆನ್ನುತ್ತೇವೆ, ಅಂಥ ಬ್ರಿಟಿಷರನ್ನೇ ಕ್ಷಮಿಸಿ ಅವರ ರಕ್ತಮಾಂಸಗಳನ್ನೇ ನರನಾಡಿಗಳಲ್ಲಿ ಪ್ರವಹಿಸಿಕೊಂಡಿದ್ದೇವೆ. ಇಂದಿರಾ ಹತ್ಯೆಯ ಪ್ರತೀಕಾರಕ್ಕಾಗಿ ನಡೆದ ಸಿಖ್ ಹತ್ಯಾಕಾಂಡ ಏನೂ ಅಲ್ಲ, ಅದೊಂದು ಸ್ವಾಭಾವಿಕ ಘಟನೆ ಅಂತ ಮೈಕೊಡವಿಕೊಂಡಿದ್ದೇವೆ. ಹಾಗಿದ್ದರೆ ಗೋಧ್ರೋತ್ತರ ಗಲಭೆಯನ್ನೂ ಮರೆಯಬಾರದೇ?
ಮುಸ್ಲಿಮರು ನಿಜಕ್ಕೂ ಭಯಭೀತರಾಗಿದ್ದಾರಾ?: “ನೋಡಿ ಇತಿಹಾಸದ ಪ್ರಮಾದಕ್ಕೆ ಬೇಕಾದಷ್ಟು ಕಾರಣಗಳಿರುತ್ತವೆ. ಅದನ್ನು ಕೆದಕಲು ಹೋಗಬಾರದು. ಇಂದು ನಾನು ಗುಜರಾತಿನವನು ಅನ್ನಲು ಹೆಮ್ಮೆಯಾಗುತ್ತದೆ. ಗುಜರಾತ್ ಚೆನ್ನಾಗಿ ಅಭಿವೃದ್ಧಿಯಾದರೆ ಅದರ ಪಾಲು ಎಲ್ಲರಿಗೂ ಸಿಗುತ್ತದೆ. ಮೋದಿ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುವುದರಲ್ಲಿ ಮುಸ್ಲಿಮರ ಪಾಲು ದೊಡ್ಡದಿದೆ” ಅಂತ ಮೊಹಸಿನ್ ಶೇಖ್ ಎಂಬ 56 ವರ್ಷ ವಯಸ್ಸಿನ ಕುಶಲಕಲೆ ಉದ್ಯಮಿಯೊಬ್ಬ ಖ್ಯಾತ ಅಂತಾರಾಷ್ಟ್ರೀಯ ನಿಯತಕಾಲಿಕೆ `ಟೈಮ್’ಗೆ ನೀಡಿದ ಸಂದರ್ಶನದಲ್ಲಿ ಅದರ ವರದಿಗಾರ ಸಗೀರ್ ಮಹೀದ್‍ಗೆ ಒಂದು ವರ್ಷದ ಹಿಂದೆ ಹೇಳಿದ್ದನ್ನು ಓದಿದ್ದೀರಾ?
ಯಾರು ಭ್ರಷ್ಟರು ಸ್ವಾಮಿ?: ಮೋದಿಗೆ ಸಂಸಾರ ಇದೆಯೇ? ತನ್ನ ಮಗ-ಮಗಳನ್ನೇ ಮುಂದೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಅಂತ ಅವರು ಹೇಳಬಹುದೇ? ಕೈ-ಮೈಗೆ ಭ್ರಷ್ಟಾಚಾರದ ಕೆಸರನ್ನು ಮೆತ್ತಿಕೊಂಡಿದ್ದಾರೆಯೇ? 2ಜಿ ಹಗರಣದ 1,76,000 ಕೋಟಿ ರೂ., ಕಾಮನ್‍ವೆಲ್ತ್ ಕರ್ಮಕಾಂಡದ 86,000 ಕೋಟಿ, ಕಲ್ಲಿದ್ದಲು, ಗೊಬ್ಬರ, ಅಕ್ಕಿ, ಹೆಲಿಕಾಪ್ಟರ್ ಖರೀದಿ ಹಗರಣ ಇತ್ಯಾದಿಗಳ ಲೆಕ್ಕ ಎಷ್ಟು ಸಾವಿರ ಲಕ್ಷ ಕೋಟಿ ರೂಪಾಯಿ…. ಅದರಲ್ಲಿ ಒಂದು ಬಿಡಿಗಾಸಾದರೂ ಮೋದಿ ಜೇಬು ಸೇರಿದೆಯೇ? ಮೋದಿ ಅದ್ಹೇಗೆ ಭ್ರಷ್ಟರಾಗುತ್ತಾರೆ ನೀವೇ ಹೇಳಿ.
ಗುಜರಾತ್ ಅಭಿವೃದ್ಧಿ ಎಂಬುದು ಮುಖವಾಡವೇ?: ವೀರೇಂದ್ರ ಮಹೈಸ್ಕರ್ ಅನ್ನುವವರು ಹೇಳಿದ ಮಾತನ್ನೇ ಇಲ್ಲಿ ಯಥಾವತ್ತಾಗಿ ಉಲ್ಲೇಖಿಸುತ್ತೇನೆ…ಮಹೈಸ್ಕರ್ ಅವರು ಐಆರ್‍ಬಿ ರಸ್ತೆ ನಿರ್ಮಾಣ ಕಂಪನಿಯ ಸಿಇಒ. ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಗುಜರಾತ್ ಸರ್ಕಾರ ಟೆಂಡರ್ ಕರೆಯುತ್ತದೆ. ಸಾವಿರ ಕೋಟಿ ರೂಪಾಯಿ ಬಿಡ್ ಅದು. ಒಬ್ಬನೇ ಒಬ್ಬ ಸರ್ಕಾರಿ ಮಧ್ಯವರ್ತಿಗೆ ಒಂದು ಕಪ್ ಚಹಾವನ್ನೂ ಕುಡಿಸಿಲ್ಲ, ಗುದ್ದಲಿ ಪೂಜೆ, ಉದ್ಘಾಟನೆ ಅಂತೆಲ್ಲ ಒಬ್ಬನೇ ಒಬ್ಬ ರಾಜಕಾರಣಿ ಜತೆ ನಿಂತು ಫೋಟೊ ತೆಗೆಸಿಕೊಂಡಿಲ್ಲ- ಅಲ್ಲಿನ ಮೇಯರ್ ಯಾರೆಂಬುದು ಈಗಲೂ ನಮಗೆ ಗೊತ್ತಿಲ್ಲ. ಗುತ್ತಿಗೆ-ಒಪ್ಪಂದ ಎಲ್ಲವೂ ಆನ್‍ಲೈನ್‍ನಲ್ಲೇ ಆಯಿತು. ಎಲ್ಲವೂ ಖುಲ್ಲಂ ಖುಲ್ಲ…ತೊಂದರೆ ತಾಪತ್ರಯ ವಿಳಂಬ ಯಾವುದೂ ಕಾಡಲಿಲ್ಲ ಅಂತ ಮಾಹೈಸ್ಕರ್ ವಿವರಿಸುತ್ತಾರೆ. ಇದು ಒಂದು ಸ್ಯಾಂಪಲ್ ಅಷ್ಟೆ. ದೇಶದ ಆರ್ಥಿಕ ಬೆಳವಣಿಗೆ ದರ ಶೇ. 7.8 ಇರುವಾಗ, ಗುಜರಾತ್ ಅಭಿವೃದ್ಧಿ ದರ ಶೇ.13.4ರಷ್ಟಿದೆ. ಎಲ್ಲೆಡೆ ಉತ್ತಮ ರಸ್ತೆ, ಸೇತುವೆ, 24 ತಾಸು ವಿದ್ಯುತ್, ಸೌರಾಷ್ಟ್ರ, ಕಚ್ಛ್‍ನಂತಹ ಬರಡು ಭೂಮಿಯೂ ಇಂದು ನೀರಾವರಿಯಿಂದ ತಂಪು ತಂಪು. ಅವೆರಡೇ ವಲಯದಲ್ಲಿ 1,13,738 ಚೆಕ್ ಡ್ಯಾಂಗಳು ಅಂದರೆ ಸುಮ್ಮನೇನಾ? ಇದೆಲ್ಲ ಕೇವಲ ಹತ್ತು ವರ್ಷಗಳಲ್ಲಿ ಆದ ಬದಲಾವಣೆ.
ಅಧಿಕಾರ ದುರ್ಬಳಕೆ ಆರೋಪ ನಿಜವೇ?: ಮೋದಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಅಂತ ಕಳೆದ ಒಂಭತ್ತು ವರ್ಷದ ನಂತರ ಆರೋಪ ಮಾಡಿದ್ದು ಒಬ್ಬನೇ ಒಬ್ಬ ಅಧಿಕಾರಿ. ಅದು ಸಂಜೀವ ಭಟ್ ಎಂಬ ಐಪಿಎಸ್ ಆಫೀಸರ್-ಮುಂದೇನಾಯಿತು? ಆತನ ಪತ್ನಿ ಶ್ವೇತಾ ಭಟ್ ಮಣಿನಗರದಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಸೆಣೆಸಿದರು. ಅಲ್ಲಿಗೆ ಒಂದು ಅನುಮಾನ ಬಟಾಬಯಲಾಯಿತು.
ಮಹಿಳಾ ಸುರಕ್ಷೆಯ ಹಕೀಕತ್ತೇನು?: ನಿರ್ಭಯಾ ಅತ್ಯಾಚಾರ ನಡೆದದ್ದು ಯಾರ ಸರ್ಕಾರದ ಮೂಗಿನ ನೇರಕ್ಕೆ. ದೇಶದ ರಾಜಧಾನಿ ದೆಹಲಿಯಿಂದ ಹಿಡಿದು ದಿನಂಪ್ರತಿ ನಡೆಯುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಲೆಕ್ಕವಿದೆಯೇ? ಭಾರತ ರೇಪಿಸ್ಟ್ ಕಂಟ್ರಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೆ ಗುರಿಯಾಗಿದ್ದು ಸಾಕಾಗದೇ? ಮಹಿಳಾ ಮೀಸಲಾತಿಗೆ ಅಡ್ಡಿಯಾಗಿರುವುದು ಯಾರು? ನಿರುದ್ಯೋಗ, ಬಡತನ ನಿವಾರಣೆಗೆ ಅರವತ್ತು ವರ್ಷ ಅಧಿಕಾರ ಕೊಟ್ಟದ್ದು ಸಾಲದೆ? ಬೆಲೆ ಏರಿಕೆ, ಹಣದುಬ್ಬರವನ್ನು ಯಾಕೆ ತಹಬಂದಿಗೆ ತರಲಾಗುತ್ತಿಲ್ಲ? ಮೋದಿ ಒಂದಲ್ಲ ನಾಲ್ಕು ಬಾರಿ ಜನರ ವಿಶ್ವಾಸ ಗಳಿಸಿ ಗೆದ್ದಮೇಲೂ ಬರೀ ಪುಕ್ಕಟೆ ಆರೋಪ ಮಾಡುವುದು ಪ್ರಜಾತಂತ್ರದ ಹರಣ ಅಲ್ಲದೇ ಮತ್ತೇನು? `ಮೋದಿ ರ್ಯಾಲಿಗೆ ಅಷ್ಟೇ ಏಕೆ ಬುಡಬುಡಿಕೆಯವರು ಬಂದರೂ ಜನಸೇರುತ್ತಾರೆ’ ಅಂತ ಅನಂತಮೂರ್ತಿಯವರು ಹೇಳುತ್ತಾರಲ್ಲ, ಆ ಮಾತಿನ ಅರ್ಥವೇನು? ಯಾರಿಗೆ ಅಪಮಾನ ಮಾಡುತ್ತಿದ್ದಾರೆ ಇವರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಂಥ ಅಮೆರಿಕವೇ ಮೋದಿ ಪ್ರಧಾನಿಯಾಗುವುದಾದರೆ ಆಗಲಿ ಬಿಡಿ ಎಂದು ಹೇಳಿ ಆ ದೇಶದ ಪ್ರತಿನಿಧಿ ನ್ಯಾನ್ಸಿ ಪಾವೆಲ್ ಗುಜರಾತಿಗೆ ಬಂದು ಮೋದಿಯವರಿಗೆ ಷೇಕ್ ಹ್ಯಾಂಡ್ ಮಾಡ್ತಾರೆ ಅಂದಮೇಲೆ ಅನಂತಮೂರ್ತಿಯವರು `ಮೋದಿ ಆಳುವ ದೇಶಬಿಟ್ಟು ಹೋಗುವುದಿಲ್ಲ’ ಅಂತ ಹೇಳಿಕೊಂಡದ್ದರ ಹಿನ್ನೆಲೆಯನ್ನು ಕೆದಕದೇ ಇರುವುದೇ ಲೇಸುಬಿಡಿ ಅಂತ ಒಂದೇ ಸಮನೆ ಉಸುರಿದರು.
***
ಒಟ್ಟಿನಲ್ಲಿ ನನ್ನ ಪಾಲಿಗೆ ಅದು ಮೋದಿ, ಗುಜರಾತ್ ಸರ್ಕಾರದ ಸಾಧನೆ ಮತ್ತು ಮೋದಿ ವಿರೋಧಿಗಳ ನಡವಳಿಕೆಗಳ ಕುರಿತು ಒಂದು ಟೆಲಿಫೋನಿಕ್ ಲೆಕ್ಚರ್ ಕೇಳಿದ ಅನುಭವ!
ಮಾತುಕತೆ ಮುಗಿದರೂ ಬಹಳ ಹೊತ್ತು ಹಾಗೇ ಯೋಚನೆ ಮಾಡುತ್ತ ಕುಳಿತೆ. ಸಾಹಿತ್ಯದ ಹಿನ್ನೆಲೆಯಿಂದಲೇ ಬಂದು ಸಂಸತ್ತು ಪ್ರವೇಶಿಸಿದ ಹರೀಂದ್ರನಾಥ ಚಟ್ಟೋಪಾಧ್ಯಾಯ, ದಿನಕರ ದೇಸಾಯಿ, ಚುನಾವಣಾ ರಾಜಕೀಯದಲ್ಲಿ ಸೋತರೂ ಅಚ್ಚಳಿಯದೇ ಮನಸ್ಸಿನಲ್ಲಿ ಉಳಿಯುವ ಗೋಪಾಲಕೃಷ್ಣ ಅಡಿಗರು, ಶಿವರಾಮ ಕಾರಂತರ ಇತಿಹಾಸ ಕಣ್ಣಮುಂದೆ ಹಾದು ಹೋಯಿತು. ಕಾರಂತರಂತೂ ಪರಿಸರ ಹೋರಾಟಕ್ಕೆ ಜೀವತುಂಬಲೆಂದೇ ಅಂದು ಚುನಾವಣಾ ಅಖಾಡಕ್ಕಿಳಿದಿದ್ದರು. ಮುಖ್ಯವಾಗಿ ಅವರ್ಯಾರೂ ಆಗಿನ ಜನರ ಮನಸ್ಸಿನಲ್ಲಿ ಬೇಸರವನ್ನುಂಟುಮಾಡಿರಲಿಲ್ಲ, ಈ ಪರಿ ಟೀಕೆಗೂ ಗುರಿಯಾಗಿರಲಿಲ್ಲ ಅಲ್ಲವೇ? ಬೇರೆ ಎಲ್ಲರನ್ನೂ ಬಿಟ್ಟುಬಿಡಿ, ಅನಂತಮೂರ್ತಿಯವರೊಬ್ಬರಾದರೂ ಯಾವುದೋ ಒಂದು ಪಕ್ಷದ ವಕ್ತಾರರಾಗುವ ಬದಲು ಜನಪರ ರಾಜಕಾರಣಕ್ಕೆ ಮಾರ್ಗದರ್ಶಕರಾಗಬಹುದಿತ್ತು. ಅಂಥ ಒಂದು ಅವಕಾಶವನ್ನು ಅವರೂ ಮತ್ತು ರಾಜಕೀಯ ಪಕ್ಷಗಳೂ ಮಿಸ್ ಮಾಡಿಕೊಂಡವು.