ಸಂಕಷ್ಟಗಳ ನಡುವೆ ಬದುಕುವುದು ಹೇಗೆ? – ಜೀವನಪೂರ್ತಿ ದಿಗ್ಬಂಧನದಲ್ಲಿದ್ದರೂ ಸೋಲೊಪ್ಪಿಕೊಳ್ಳದಿರುವಿಕೆ ಈತ ಕಲಿಸಿದ ಪಾಠ

– ಎನ್ ರವಿಶಂಕರ್.
ದಿಗ್ಬಂಧನ 3.0 ಮುಗಿದು, ನಾಲ್ಕನೆಯದನ್ನು ಎದುರುಗೊಳ್ಳುತ್ತಿರುವ ಹೊತ್ತಿನಲ್ಲಿ ಕೊರೊನಾ ವಿರುದ್ಧದ ನಮ್ಮ ಹೋರಾಟದ ಪರಿಭಾಷೆ ಬದಲಾಗಿದೆ. ಕೊರೊನಾ ತೊಲಗಿಸೋಣ, ಹೊಡೆದೋಡಿಸೋಣ, ಬಗ್ಗು ಬಡಿಯೋಣ, ನಿಗ್ರಹಿಸೋಣ ಎಂಬಿತ್ಯಾದಿಯಾದ ಈವರೆಗೂ ಇದ್ದ ‘ಸಮರದ ಭಾಷೆ’ ಬದಲಾಗಿ, ಹೊಂದಾಣಿಕೆಯ ಭಾಷೆಗೆ ದಾರಿ ಮಾಡಿಕೊಟ್ಟಿದೆ. ನಾವು ಈ ವೈರಸ್‌ನೊಡನೆ ಹೊಂದಿಕೊಂಡು ಬಾಳು ಕಟ್ಟಿಕೊಳ್ಳಬೇಕು. ಇದು ನಮ್ಮೊಡನೆಯೇ ಬಹುಕಾಲ ಇರುತ್ತದೆ ಎನ್ನುವ ಪರಿಸ್ಥಿತಿಗೆ ಒಗ್ಗಿಕೊಂಡು, ನಮ್ಮ ಜೀವನಶೈಲಿಯಲ್ಲಿ ಅದಕ್ಕನುಗುಣವಾದ ಬದಲಾವಣೆಗಳನ್ನು ತಂದುಕೊಳ್ಳಬೇಕು. ಹೀಗೆ, ಬಿಕ್ಕಟ್ಟಿನಲ್ಲಿ ಬದಲಾಗುತ್ತಿರುವ ಭಾಷ್ಯವನ್ನು ಗಮನಿಸುತ್ತಾ, ಇಡೀ ವಿಶ್ವ ಈಗ ಎದುರಿಸುತ್ತಿರುವ ತಲ್ಲಣ ಮುಗಿದ ಮೇಲೆ, ನಾವು ಇನ್ನೂ ಬಲಿಷ್ಠರಾಗಿ ಹೊರಹೊಮ್ಮಲಿದ್ದೇವೆಯೋ ಅಥವ ದುರ್ಬಲರಾಗಲಿದ್ದೇವೆಯೋ ಎಂಬ ಜಿಜ್ಞಾಸೆ ಮೂಡಿತು. ಬಲಿಷ್ಠರಾಗುತ್ತೇವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಮ್ಮಲ್ಲಿ ಆತ್ಮವಿಶ್ವಾಸ ತುಂಬಲು ಯತ್ನಿಸುತ್ತಿದ್ದಾರೆ. ಆದರೆ, ಈ ಪ್ರಮಾಣದ ಬಿಕ್ಕಟ್ಟಿನಿಂದ ನಾವು ಬಲಿಷ್ಠರಾಗಲು ಹೇಗೆ ಸಾಧ್ಯ? ಅಥವ, ಬದಲಾದ ವರಸೆಯಲ್ಲಿ ಇದಕ್ಕೆ ಹೊಂದಿಕೊಂಡು ಬದುಕು ಕಟ್ಟಿಕೊಳ್ಳಲು ಹೇಗೆ ಸಾಧ್ಯ?
ಬಿಕ್ಕಟ್ಟುಗಳು ಮನುಷ್ಯನನ್ನು ದುರ್ಬಲಗೊಳಿಸುತ್ತವೆಯೋ ಇಲ್ಲ ಸಬಲಗೊಳಿಸುತ್ತವೆಯೋ ಎಂದು ಯೋಚಿಸುತ್ತಿರುವಾಗ ನನ್ನ ಪತ್ನಿ ನನ್ನ ಮಕ್ಕಳಿಗೆ ಆಗಿಂದಾಗ್ಗೆ ಹೇಳುವ ಕಥೆಯೊಂದು ನೆನಪಾಯಿತು! ಸಣ್ಣಪುಟ್ಟ ವಿಷಯಗಳ ಬಗ್ಗೆ ನನ್ನ ಮಕ್ಕಳು ದೂರು ತಂದಾಗ, ಅವರಲ್ಲಿ ಸಮಸ್ಯೆಯ ಬಗ್ಗೆ ಸರಿಯಾದ ದೃಷ್ಟಿಕೋನ/ಪರ್ಸ್ಪೆಕ್ಟಿವ್‌ ಬರುವಂತೆ ಮಾಡುವಲ್ಲಿ ಈ ಕಥೆ ಸಹಾಯಕವಾಗಿರುವುದನ್ನು ಕಂಡಿದ್ದೇನೆ. ಈ ಕಥೆಯ ಪರಿಷ್ಕೃತ ರೂಪ ಇಂತಿದೆ-
ಕಥೆ: ಗುರುವಿನ ತಿರುಮಂತ್ರ!
ತಾನು, ಹೆಂಡತಿ ಹಾಗು ಇತ್ತೀಚೆಗೆ ಹುಟ್ಟಿದ್ದ ಮಗು- ಈ ಸಂಸಾರವಿದ್ದ ವ್ಯಕ್ತಿಯೊಬ್ಬನಿಗೆ ತಾನು ವಾಸಿಸುತ್ತಿದ್ದ ಮನೆ ಬಹಳ ಇಕ್ಕಟ್ಟಾಯಿತೆಂದು ಅನ್ನಿಸತೊಡಗಿತು. ತನ್ನ ಸಮಸ್ಯೆಗಳನ್ನೆಲ್ಲ ಗುರುಗಳ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳುವ ಪರಿಪಾಠವಿದ್ದ ಈತ, ತನ್ನ ಮನೆ ಚಿಕ್ಕದೆನಿಸತೊಡಗಿದ ಸಮಸ್ಯೆಯನ್ನೂ ಗುರುಗಳ ಮುಂದಿಡಲು ನಿರ್ಧರಿಸಿದ. ‘‘ಸ್ವಾಮಿ, ನಾನು ಬ್ರಹ್ಮಚಾರಿಯಾಗಿದ್ದಾಗ ಈ ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದುಕೊಂಡೆ. ಮದುವೆಯ ನಂತರ ಬದಲಾಯಿಸೋಣವೆಂದುಕೊಂಡೆ. ಆದರೆ ಮದುವೆಯ ದೆಸೆಯಿಂದ ಖರ್ಚು ಹೆಚ್ಚಾಗಿ, ಮನೆ ಬದಲಾಯಿಸಲಾಗಲಿಲ್ಲ. ಇಬ್ಬರೂ ಇಲ್ಲೇ ಹೇಗೋ ಕಾಲ ತಳ್ಳಿದೆವು. ಈಗ ಮಗುವೂ ಆಗಿರುವುದರಿಂದ, ಸ್ಥಳದ ಆಭಾವ ಮತ್ತಷ್ಟು ಕಾಡುತ್ತಿದೆ. ಬೇರೆ ಮನೆ ದುಬಾರಿ. ಜೊತೆಗೆ, ಈ ಮನೆಯಲ್ಲಿ ನನಗೆ ಸಾಕಷ್ಟು ಒಳ್ಳೆಯದಾಗಿರುವುದರಿಂದ ಇದನ್ನು ಬಿಡಲೂ ಇಷ್ಟವಿಲ್ಲ. ಏನು ಮಾಡಲಿ?’’
ಇವನ ಸಂಕಷ್ಟವನ್ನು ಆಲಿಸಿದ ಗುರುಗಳು, ಸ್ವಲ್ಪ ಯೋಚಿಸಿ, ‘‘ಒಂದು ಕೆಲಸ ಮಾಡು. ನಿನ್ನ ಮನೆಯೊಳಗೆ ಒಂದು ಹಸುವನ್ನು ಸಾಕು. ಒಂದು ತಿಂಗಳ ನಂತರ ಬಂದು ನನ್ನನ್ನು ಕಾಣು,’’ ಎಂದರು. ಹಸುವನ್ನು ಸಾಕುವುದು ಅದು ಹೇಗೆ ಸ್ಥಳದ ಇಕ್ಕಟ್ಟಿನ ಸಮಸ್ಯೆಯನ್ನು ಪರಿಹರಿಸೀತು ಎನ್ನುವುದು ಇವನಿಗೆ ಅರ್ಥವಾಗದಿದ್ದರೂ, ಗುರುಗಳ ಮಾತನ್ನು ಮೀರುವಂತಿಲ್ಲವಾದ್ದರಿಂದ ಒಪ್ಪಿಕೊಂಡು, ಹಸುವನ್ನು ಖರೀದಿಸಿ ಮನೆಗೆ ಹೋದ.
ತಿಂಗಳು ಮುಗಿಯುತ್ತಿದ್ದಂತೆಯೇ ಗುರುಗಳ ಮುಂದೆ ಮತ್ತೆ ಹಾಜರಾದ. ‘‘ಮಹಾಸ್ವಾಮಿ, ತಮ್ಮ ಮಾತಿನಂತೆ ಹಸು ಕೊಂಡೊಯ್ದೆ. ಮನೆಯ ಮುಖ್ಯಭಾಗವನ್ನು ಹಸು ಆಕ್ರಮಿಸಿಕೊಂಡಿದೆ. ಸಣ್ಣ ಒಳಕೊಠಡಿಯಲ್ಲಿ ನಾವಿದ್ದೇವೆ. ನಮ್ಮ ಅರ್ಧ ದಿನವೆಲ್ಲ ಹಸುವಿನ ಶುಶ್ರೂಷೆಗೇ ಮೀಸಲಾಗಿದೆ. ನಮ್ಮ ಮಗುವಿಗೆ ತಾಜಾ ಹಾಲು ದೊರೆಯುತ್ತಿದೆ ಎನ್ನುವ ಒಂದು ಲಾಭವನ್ನು ಬಿಟ್ಟರೆ, ಮಿಕ್ಕಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ದಯವಿಟ್ಟು ನನ್ನನ್ನು ರಕ್ಷಿಸಿ.’’ ಗುರುಗಳು ಎಂದಿನಂತೆ ಶಾಂತಚಿತ್ತರಾಗಿ ನುಡಿದರು, ‘‘ನೀನು ಒಂದು ನಾಯಿ ಮತ್ತು ಒಂದು ಬೆಕ್ಕನ್ನು ಮನೆಗೆ ತೆಗೆದುಕೊಂಡು ಹೋಗು. ಒಂದು ತಿಂಗಳ ನಂತರ ಬಾ.’’ ಇವನಿಗೆ ಇದು ಪರಿಹಾರದಂತೆ ಕಾಣದಿದ್ದರೂ, ಕಟ್ಟಕಡೆಯ ಬಾರಿ ಗುರುಗಳ ಮಾತನ್ನು ಕೇಳಲು ನಿರ್ಧರಿಸಿ, ನಾಯಿ, ಬೆಕ್ಕುಗಳನ್ನು ಮನೆಗೆ ಕೊಂಡೊಯ್ದ.
ಈ ಬಾರಿ ಒಂದು ತಿಂಗಳು ಕಾಯಲಾಗದೆ, ಒಂದೇ ವಾರಕ್ಕೆ ಗುರುಗಳ ಬಳಿಗೆ ಬಂದು, ಕೋಪದಿಂದ, ‘‘ಗುರುಗಳೇ, ನಿಮ್ಮ ಮಾತು ಕೇಳಿ ನಾನು ಹಾಳಾದೆ. ನಾಯಿ, ಬೆಕ್ಕುಗಳನ್ನು ತಂದ ದಿನವೇ, ಅವುಗಳ ಕಿತ್ತಾಟವನ್ನು ನೋಡಲಾಗದೆ, ನನ್ನ ಹೆಂಡತಿ ಮಗುವನ್ನೂ ಕರೆದುಕೊಂಡು ತವರಿಗೆ ಹೊರಟುಹೋದಳು. ಹಸು, ನಾಯಿ, ಬೆಕ್ಕನ್ನು ನಡುಮನೆಯಲ್ಲಿ ಬಿಟ್ಟು, ಅವುಗಳ ಭಯದಿಂದಾಗಿ, ನಾನು ಕೊಠಡಿಯೊಳಗೆ ಬೀಗ ಹಾಕಿಕೊಂಡು ಮಲಗುತ್ತಿದ್ದೇನೆ. ನನ್ನ ಮನೆಯಲ್ಲಿ ನಾನೇ ಬಂಧಿಯಾಗಿದ್ದೇನೆ. ಜೀವನ ನಿಜಕ್ಕೂ ದುಸ್ತರವಾಗಿದೆ. ನನಗೇಕೆ ಈ ಶಿಕ್ಷೆ?’’ ಎಂದೆಲ್ಲಾ ಹಾರಾಡಿದ.
ಹಸನ್ಮುಖಿ ಗುರುಗಳು, ‘‘ಕೊನೆಯ ಬಾರಿ ನನ್ನ ಮಾತನ್ನು ಕೇಳು. ಹಸು, ನಾಯಿ, ಬೆಕ್ಕನ್ನು ಯಾರಿಗಾದರೂ ಕೊಟ್ಟುಬಿಡು. ಈ ವಿಷಯವನ್ನು ಹೆಂಡತಿಗೆ ತಿಳಿಸು. ನಿನಗೆ ಶುಭವಾಗುತ್ತದೆ,’’ ಎಂದರು. ಕಡೆಯ ಪಕ್ಷ ಹಸು, ನಾಯಿ, ಬೆಕ್ಕನ್ನು ಹೊರಗೆ ಹಾಕಲು ಹೇಳಿದರಲ್ಲ ಎಂದುಕೊಂಡು, ಗುರುಗಳು ಹೇಳಿದ್ದನ್ನು ಅನುಸರಿಸಿದ. ವಾರದ ನಂತರ ಹಿಂದಿರುಗಿ, ‘‘ಕ್ಷ ಮಿಸಿ ಗುರುಗಳೆ. ನಿಮ್ಮ ಮಾತಿನ ಮರ್ಮ ನನಗೆ ಈಗ ಅರ್ಥವಾಯಿತು. ಆಕಳು, ನಾಯಿ, ಬೆಕ್ಕನ್ನು ಮನೆಯಿಂದ ಹೊರಗೆ ಕಳಿಸಿದ ಮೇಲೆ, ನನ್ನ ಮನೆಯಲ್ಲಿ ನಮ್ಮ ನೆಮ್ಮದಿಯ ಜೀವನಕ್ಕೆ ಸಾಕಾಗುವಷ್ಟು ಜಾಗ ಇದೆ ಎನ್ನುವುದರ ಅರಿವಾಯಿತು. ಅವಶ್ಯಕತೆಯಿರದ ಭೋಗವೊಂದನ್ನು ಅರಸಿ ಹೊರಟಿದ್ದವನ ಕಣ್ಣು ತೆರೆಸಿದಿರಿ. ನನ್ನ ಮನೆಯಲ್ಲಿ ನಾನು ಸುಖವಾಗಿದ್ದೇನೆ,’’ ಎಂದ.
ಎಲ್ಲ ಸಂಕಷ್ಟಗಳೂ ನಮಗೆ ಇದೇ ಪಾಠವನ್ನು ಕಲಿಸುತ್ತವೆ. ಬಿಕ್ಕಟ್ಟು ಇತ್ಯರ್ಥವಾದ ಮೇಲೆ, ಜೀವನ ಯಥಾಸ್ಥಿತಿಗೆ ಮರಳಿದರೂ ಸಾಕು, ಎಷ್ಟೋ ನಿರಾಳವೆನಿಸುತ್ತದೆ. ಸಂಕಟದ ನಂತರದ ದಿನಗಳಲ್ಲಿ ನಮ್ಮ ರೆಸಿಲಿಯನ್ಸ್/ ಅಂತಃಶಕ್ತಿ ಹೆಚ್ಚುತ್ತದೆ. ಇನ್ನಷ್ಟು ಬಲಿಷ್ಠರಾಗುತ್ತೇವೆ.
ಇದು ಕಥೆಯಾಯ್ತು. ಆದರೆ, , Facts are stranger than fiction ಎನ್ನುವಂತೆ, ವಾಸ್ತವ, ಕಾಲ್ಪನಿಕ ಕಥೆಗಳಿಗಿಂತಲೂ ವಿಚಿತ್ರವಾಗಿರುತ್ತದೆ. ಕೆಲವೊಮ್ಮೆ ಭೀಕರವಾಗಿರುತ್ತದೆ. ಈಗಲೂ ಅನಾವರಣಗೊಳ್ಳುತ್ತಿರುವ ಅಂಥದ್ದೊಂದು ಸತ್ಯಕಥೆ ಇಲ್ಲಿದೆ –

ಸತ್ಯಕಥೆ: ಮಹಾದಿಗ್ಬಂಧನ ಅನುಭವಿಸುತ್ತಿರುವ ಅಯ್ಯಪ್ಪ
ಎರಡು ವಾರದ ಕೆಳಗೆ ನನಗೆ ಕರೆ ಮಾಡಿ, ನನ್ನ ಅಂಕಣಗಳ ಅಭಿಮಾನಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರ ನಿಜಜೀವನದ ಕಥೆ ಮನಕಲಕುವಂಥದ್ದು. 28 ವರ್ಷ ವಯಸ್ಸಿನ ಅಯ್ಯಪ್ಪ ಭಜೆಂತ್ರಿ ರಾಯಚೂರಿನ ಮಾನ್ವಿ ತಾಲೂಕಿನ ನಕ್ಕುಂದ ಗ್ರಾಮದವರು. ಅಲ್ಲಿಗೆ ಹತ್ತಿರದ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕಾರ್ಯದಕ್ಷತೆಯಿಂದ ಸುತ್ತಮುತ್ತಲಿನವರ ಪ್ರೀತಿ, ಗೌರವಗಳನ್ನು ಸಂಪಾದಿಸಿದ್ದಾರೆ.
ತೀರಾ ಬಡತನದ ಕುಟುಂಬದಲ್ಲಿ ಜನಿಸಿದ ಅಯ್ಯಪ್ಪ ಒಂದನೇ ತರಗತಿ ಓದುವಾಗಲೇ ತಂದೆ ತೀರಿಕೊಂಡರು. ಓದಿನಲ್ಲಿ ಸದಾ ಮುಂದಿದ್ದ ಬುದ್ಧಿವಂತ ಹುಡುಗನನ್ನು ತಾಯಿ ಮತ್ತು ಸಹೋದರಿಯರು ಕಷ್ಟಪಟ್ಟು ಓದಿಸಿದರು. ಒಂದರಿಂದ ಎಂಟನೇ ತರಗತಿಯವರೆಗೆ ಕ್ಲಾಸ್-ಟಾಪರ್ ಆಗಿದ್ದ ಅಯ್ಯಪ್ಪ ಬಿಡುವಿನ ವೇಳೆಯಲ್ಲಿ ಗೆಳೆಯರಿಗೂ ಪಾಠ ಹೇಳಿಕೊಡುತ್ತಿದ್ದರು. ಹೈಸ್ಕೂಲಿನಲ್ಲಿದ್ದ ಅಯ್ಯಪ್ಪ ನಿಧಾನವಾಗಿ ದೈಹಿಕವಾಗಿ ನಿಶ್ಯಕ್ತರಾಗತೊಡಗಿದ್ದರು. ನಡೆಯಲು ಗೋಡೆಯ ಅಥವ ಇತರ ಸಹಪಾಠಿಗಳ ಸಹಾಯ ಬೇಕಾಗುವಷ್ಟು ಅವರಿಗೆ ಬಲಹೀನತೆ ಕಾಡತೊಡಗಿತ್ತು. ಆದರೂ ಧೃತಿಗೆಡದೆ ಎಸ್ಸೆಸ್ಸೆಲ್ಸಿಯಲ್ಲಿ 82% ಗಳಿಸುವುದರೊಂದಿಗೆ ತರಗತಿಗೆ ಎರಡನೇ ಸ್ಥಾನ ಗಳಿಸಿದರು. ಮುಂದೆ, ಸಿಂಧನೂರಿನಲ್ಲಿ ಕಾಮರ್ಸ್‌ನಲ್ಲಿ ಪಿಯುಸಿ ಮಾಡುತ್ತಿರುವಾಗ ಇವರು ಸಹಪಾಠಿಗಳಿಗೆ ಪಾಠ ಹೇಳಿಕೊಡುತ್ತಿದ್ದುದನ್ನು ನೋಡಿ ಬೆರಗಾಗಿದ್ದ ಉಪನ್ಯಾಸಕರು, ‘‘ನೀನು ದೇಶದಲ್ಲೇ ಅತಿದೊಡ್ಡ ಐಎಎಸ್ ಅಧಿಕಾರಿ ಆಗುತ್ತೀಯೆ,’’ ಎಂದು ಪ್ರಶಂಸಿಸಿದ್ದರಂತೆ. ಪಿಯುಸಿಯಲ್ಲಿ 80% ಪಡೆದು ಕಾಲೇಜು ಸೇರುವ ವೇಳೆಗೆ ವೀಲ್‌ಚೇರ್‌ಗೆ ಸೀಮಿತವಾಗುವ ಮಟ್ಟಿಗೆ ಬಲಹೀನರಾಗಿದ್ದರು. ಛಲಬಿಡದೆ ಸರಾಸರಿ 83% ಗಳಿಸಿ, ಮುಂದೆ ಐಎಎಸ್ ಓದಲು ತಯಾರಾಗುತ್ತಿದ್ದ ಅಯ್ಯಪ್ಪನವರನ್ನು ಕಾಯಿಲೆ ಒಳಗಿನಿಂದಲೇ ತಿನ್ನುತ್ತಿತ್ತು. ದೂರಶಿಕ್ಷ ಣದಲ್ಲಿ ಎಂಎ ಮುಗಿಸಿ ನೌಕರಿಯ ಪ್ರಯತ್ನ ಮಾಡುವ ವೇಳೆಗೆ ಅವರಿಗಿರುವ ಕಾಯಿಲೆ ಏನೆಂಬುದು ಪತ್ತೆಯಾಯಿತು.
Spinal Muscular Atrophy (SMA) ನರಗಳು ಮತ್ತು ಸ್ನಾಯುಗಳನ್ನು ಬಾಧಿಸುವ ಅನುವಂಶಿಕ ಕಾಯಿಲೆ. ಈ ಕಾಯಿಲೆ ಸಾಮಾನ್ಯವಾಗಿ ನವಜಾತ ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಮಕ್ಕಳು ಸಾಮಾನ್ಯವಾಗಿ ನಾಲ್ಕು ವರ್ಷ ತುಂಬುವುದರೊಳಗೆ ಅಸುನೀಗುತ್ತಾರೆ. ಅಯ್ಯಪ್ಪನವರಿಗಿರುವುದು ವಯಸ್ಕರನ್ನು ಕಾಡುವ SMA. ಈ ಕಾಯಿಲೆಗೊಳಗಾದವರ ನರ ಮತ್ತು ಸ್ನಾಯುಗಳು ದಿನೇದಿನೆ ಕ್ಷೀಣಿಸುತ್ತಾ ದೇಹ ದುರ್ಬಲವಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ, ಈಗ ಅಯ್ಯಪ್ಪನವರು ಸ್ನಾನ, ಬಟ್ಟೆ ಧರಿಸುವುದು ಇತ್ಯಾದಿ ಮೂಲಕೆಲಸಗಳನ್ನೂ ಸ್ವಂತವಾಗಿ ಮಾಡಿಕೊಳ್ಳಲಾರರು. ತಮ್ಮನ ಸಹಾಯದೊಂದಿಗೆ ವೀಲ್‌ಚೇರ್‌ ಮೇಲೆ ಕುಳಿತು ಇವರ ಜೀವನ!
ಆಸೆಗಳಿವೆ, ಬೌದ್ಧಿಕ ಸಾಮರ್ಥ್ಯವಿದೆ, ಅದಮ್ಯ ಛಲವಿದೆ, ಜೀವನೋತ್ಸಾಹವಿದೆ. ಆದರೆ, ದೇಹ ಸಹಕರಿಸುತ್ತಿಲ್ಲ. ಬದಲಿಗೆ ನಿತ್ಯವೂ ಕ್ಷೀಣಿಸುತ್ತಿದೆ ಮತ್ತು ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಇದು ಅವನತಿಯೆಡೆಗಿನ ಇಳಿಜಾರಿನ ಪ್ರಯಾಣ ಎಂದು ಗೊತ್ತಿದ್ದರೂ ಅಯ್ಯಪ್ಪನವರ ಚೈತನ್ಯ ಬತ್ತಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ, ‘‘ಒಂದೆರಡು ತಿಂಗಳ ಕ್ವಾರಂಟೈನ್‌ಗೆ ಜನ ದಿಕ್ಕೆಟ್ಟಿದ್ದಾರೆ. ಕೊರೊನಾ ಸೋಂಕು ತಗುಲಿತೆಂದು ಆತ್ಮಹತ್ಯೆ ಮಾಡಿಕೊಂಡವರ ವರದಿಗಳನ್ನೂ ನೋಡುತ್ತಿದ್ದೇವೆ. ನನ್ನದು ಜೀವನಪರ್ಯಂತ ದಿಗ್ಬಂಧನ. ಆದರೆ ನಾನು ಸೋಲೊಪ್ಪಿಕೊಳ್ಳುವುದಿಲ್ಲ. ಇನ್ನೂ ಸಾಧಿಸಲು, ಜನರ ಸೇವೆ ಮಾಡಲು ಪ್ರಯತ್ನಿಸುತ್ತೇನೆ.’’
ಅಯ್ಯಪ್ಪನವರ ಕರುಣಾಜನಕ ಕಥೆ ಕೇಳಿ, ನಾವೇನು ಮಾಡಬಹುದು? ಕೊರೊನಾ ಸೋಂಕಿಗೆ ಮದ್ದು ಕಂಡುಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ವೈದ್ಯಕೀಯ ಜಗತ್ತು ಅತಿಶೀಘ್ರದಲ್ಲೇ SMA ನಂತಹ ಕಾಯಿಲೆಗೂ ಔಷಧ ಸಂಶೋಧಿಸಲಿ. ಅದು, ಆದಷ್ಟು ಬೇಗನೆ ತಮ್ಮ ದೇಹದಲ್ಲಿಯೇ ಬಂಧಿಯಾಗಿರುವ ಅಯ್ಯಪ್ಪನಂತವರನ್ನು ತಲುಪಲಿ ಎಂದು ಹಾರೈಸಬಹುದು, ಅಷ್ಟೆ! ಅಥವ, ಅವರಿಂದ ಪ್ರೇರಣೆ ಪಡೆಯಬಹುದು. ನಾವು ನಮ್ಮ ಸುತ್ತಲೂ ನಿರ್ಮಿಸಿಕೊಂಡಿರುವ ಕಾಲ್ಪನಿಕ ಕೋಟೆಗಳಿಂದ ಹೊರಬರಬಹುದು. ನಮ್ಮ ಆತ್ಮವಿಶ್ವಾಸವನ್ನು ಹದ್ದುಬಸ್ತಿನಲ್ಲಿಟ್ಟಿರುವ ಸುಳ್ಳು-ಸಂಕೋಲೆಗಳನ್ನು ಕಳಚಬಹುದು. ನಮ್ಮ ಸಂಪೂರ್ಣ ಸಾಧ್ಯತೆಗಳನ್ನು (potential) ಸಾಕಾರವಾಗಿಸಿಕೊಳ್ಳಲು ಪ್ರಯತ್ನಿಸಬಹುದು. ಅಯ್ಯಪ್ಪನವರು ನಮ್ಮಿಂದ ಅದನ್ನೇ ನಿರೀಕ್ಷಿಸುತ್ತಾರೆ.
ಇನ್ನು ಈ ಹೊತ್ತಿನ ಕೊರೊನಾ ಸಂಕಷ್ಟದ ವಿಷಯಕ್ಕೆ ಹಿಂದಿರುಗುವುದಾದರೆ, ಈ ಎರಡೂ ಕಥೆಗಳಿಂದ ನಮಗೆ ಒಂದೇ ತತ್ವ ಸಿದ್ಧಿಸುತ್ತದೆ. ಸಂಕಷ್ಟಗಳೊಡನೆ ಹೊಂದಿಕೊಂಡು ಬಾಳು ಕಟ್ಟಿಕೊಳ್ಳಬೇಕು. ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಸಾಧ್ಯತೆಗಳು ಅಪಾರ. ಸಂಕಷ್ಟಗಳು ತಾತ್ಕಾಲಿಕ. ಸಂಕೋಲೆಗಳು ಕಾಲ್ಪನಿಕ. ನಮ್ಮ ಊಹೆಗೂ ಮೀರಿ ನಾವು ಸಬಲರು, ಸಶಕ್ತರು ಹಾಗೂ ಬಲಿಷ್ಠರು!

(ಲೇಖಕರು ಸಂವಹನ ಸಲಹೆಗಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top