ಉತ್ತೇಜನಕಾರಿ ಕೈಗಾರಿಕಾ ನೀತಿ – ಕೊರೊನೋತ್ತರ ದಿನಗಳಿಗೆ ಭರವಸೆಯ ಬೆಳಕು

ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸುವ ಮಹತ್ವಾಕಾಂಕ್ಷೆಯ ನೂತನ ಕೈಗಾರಿಕಾ ನೀತಿ 2020-25ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಈ ನೂತನ ನೀತಿಯ ಫಲವಾಗಿ 5 ವರ್ಷದಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ. ಬೆಂಗಳೂರು ಹೊರತು ಪಡಿಸಿ 2ನೇ ಮತ್ತು 3ನೇ ಹಂತದ ನಗರಗಳಿಗೂ ಉದ್ಯಮ ವಲಯ ವಿಸ್ತರಿಸಲು ಈ ನೀತಿ ಸಹಾಯಕವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ವರ್ಷಾಂತ್ಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಶ್ವ ಬಂಡವಾಳ ಹೂಡಿಕೆ ಸಮಾವೇಶಕ್ಕೂ ಇದರಿಂದ ಸಹಾಯವಾಗಲಿದೆ.
ಕೊರೊನಾ ಕಾಲಘಟ್ಟದಲ್ಲಿ ಬಳಲಿ ಸೋತಿರುವ ಉದ್ಯಮಗಳಿಗೆ ತಕ್ಷಣದ ಹಾಗೂ ದೂರಗಾಮಿ ಉತ್ತೇಜನ ನೀಡುವ ಹಲವು ಕ್ರಮಗಳನ್ನು ಈ ನೀತಿಯಲ್ಲಿ ಘೋಷಿಸಲಾಗಿದೆ. ಉದಾಹರಣೆಗೆ ಎಂಎಸ್‌ಎಂಇಗಳಿಗೆ ಪ್ರೋತ್ಸಾಹಿಸಲು ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಶೇ.30ರಷ್ಟು ಜಮೀನು ಹಂಚಿಕೆ; ತಂತ್ರಜ್ಞಾನದ ಉನ್ನತೀಕರಣಕ್ಕೆ ಬೆಂಬಲ, ಉತ್ಪಾದನಾ ಶ್ರೇಷ್ಠತಾ ಪ್ರಶಸ್ತಿ, ವಹಿವಾಟು ಆಧರಿಸಿ ಗರಿಷ್ಠ 5 ವರ್ಷಕ್ಕೆ ಅನ್ವಯವಾಗುವಂತೆ ವಾರ್ಷಿಕ ಶೇ.1.75ರಿಂದ ಶೇ.2.5 ಪ್ರೋತ್ಸಾಹ ಧನ ಇತ್ಯಾದಿ. ಕೈಗಾರಿಕೆಗಾಗಿ ಪರಿಸರವನ್ನು ಸಶಕ್ತಗೊಳಿಸುವುದು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಿಂದುಳಿದ ಜಿಲ್ಲೆಗಳಲ್ಲೂ ಹೂಡಿಕೆ ಮಾಡಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ಕೈಗಾರಿಕೆಯಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಅವುಗಳನ್ನು ಝೋನ್‌ 1 ಮತ್ತು 2ಕ್ಕೆ ಸೇರಿಸುವುದು ಒಳ್ಳೆಯ ಉಪಕ್ರಮ.
ಕೊರೊನೋತ್ತರ ಕೈಗಾರಿಕಾ ಸನ್ನಿವೇಶದ ಶೀಘ್ರ ಬೆಳವಣಿಗೆಗಾಗಿ ಸರಕಾರ ಕೈಗೊಂಡಿರುವ ಹಲವು ಉಪಕ್ರಮಗಳಲ್ಲಿ ಇದೂ ಒಂದು. ಕೈಗಾರಿಕಾ ಮೂಲಸೌಲಭ್ಯ ಕಾಯಿದೆ ತಿದ್ದುಪಡಿ ಹಾಗೂ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ- ಇನ್ನಿತರ ಕ್ರಮಗಳಾಗಿವೆ. ಆಟೊಮೊಬೈಲ್ಸ್‌, ಆಟೊ ಕಾಂಪೊನೆಂಟ್ಸ್‌, ಫಾರ್ಮಾಸ್ಯೂಟಿಕಲ್ಸ್‌, ಮೆಡಿಕಲ್‌ ಡಿವೈಸಸ್‌, ಎಂಜಿನಿಯರಿಂಗ್‌ ಮತ್ತು ಮೆಷಿನ್‌ ಟೂಲ್ಸ್‌, ನಾಲೇಜ್ಡ್‌ ಬೇಸ್ಡ್‌ ಇಂಡಸ್ಟ್ರೀಸ್‌, ಲಾಜಿಸ್ಟಿಕ್‌, ನವೀಕರಿಸಬಹುದಾದ ಇಂಧನ ಮೂಲ, ಏರೋಸ್ಪೇಸ್‌, ಡಿಫೆನ್ಸ್‌ ಮತ್ತು ಎಲೆಕ್ಟ್ರಿಕ್‌ ವೆಹಿಕಲ್ಸ್‌ ವಿಭಾಗ ಇತ್ಯಾದಿಗಳ ಭವಿಷ್ಯದ ರಂಗಗಳಾಗಿದ್ದು, ಇಲ್ಲಿ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ದುಡಿಯಬಲ್ಲ ಕನ್ನಡಿಗರಿಗೆ ಅವಕಾಶ ನೀಡಲು ಉದ್ಯಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಒಟ್ಟಾರೆಯಾಗಿ ಶೇ.70ರಷ್ಟು ಮೀಸಲು ಕಲ್ಪಿಸುವ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ. ಇದು ಎಷ್ಟೋ ವರ್ಷಗಳಿಂದ ಬಾಕಿಯಿರುವ ಸರೋಜಿನಿ ಮಹಿಷಿ ವರದಿಯ ಜಾರಿಯ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ.
ನೂತನ ನೀತಿಯನ್ನು ಗರಿಷ್ಠ ಪ್ರಾಮಾಣಿಕತೆ, ಪಾರದರ್ಶಕತೆಗಳನ್ನು ಅನುಷ್ಠಾನ ಮಾಡುವುದರಿಂದ ರಾಜ್ಯಕ್ಕೆ ತುಂಬಾ ಲಾಭವೇ ಆಗಲಿದೆ. ಕೊರೊನಾ ಹಾಗೂ ಲಾಕ್‌ಡೌನ್‌ಗಳಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಖಂಡಿತವಾಗಿಯೂ ಕ್ರಾಂತಿಕಾರಕವಾದ ಒಂದು ಕೈಗಾರಿಕಾ ನೀತಿಯ ಅಗತ್ಯವಿದ್ದೇ ಇದೆ. ಅದನ್ನು ಈ ನೀತಿ ಈಡೇರಿಸಲಿದೆ. ಹಿಂದುಳಿದ ಜಿಲ್ಲೆ, ತಾಲೂಕುಗಳಲ್ಲಿ ವಿಶೇಷ ಹೂಡಿಕೆ ವಲಯ ರಚನೆ, ರಾಜ್ಯಾದ್ಯಂತ 7ರಿಂದ 8 ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ನಿರ್ಮಾಣ, ಖಾಸಗಿ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣಕ್ಕೆ ಅವಕಾಶ, ನೀಡುವುದರಿಂದ ಉದ್ಯಮಾಕಾಂಕ್ಷಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುದ್ರಾಂಕ ಶುಲ್ಕ ವಿನಾಯಿತಿ, ನೋಂದಣಿ ಶುಲ್ಕ ರಿಯಾಯಿತಿ, ಭೂಪರಿವರ್ತನಾ ಶುಲ್ಕ ಮರುಪಾವತಿ, ಸೂಕ್ಷ ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್‌ ತೆರಿಗೆ ವಿನಾಯಿತಿ, ಎಸ್‌ಸಿ, ಎಸ್‌ಟಿ, ಮಹಿಳೆ, ಅಲ್ಪಸಂಖ್ಯಾತರು, ವಿಕಲಚೇತನರು, ಮಾಜಿ ಸೈನಿಕರಿಗೆ ವಿಶೇಷ ಪ್ರೋತ್ಸಾಹ ಇತ್ಯಾದಿಗಳಿಂದ ಹೊಸದಾಗಿ ಈ ವಲಯದಲ್ಲಿ ತೊಡಗಿಕೊಳ್ಳುವವರಿಗೆ ನೈತಿಕ ಬಲ ನೀಡಿದಂತಾಗುತ್ತದೆ. ಈ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಗರಿಷ್ಠ ಬೆಂಬಲವನ್ನು ನೀಡಬೇಕಿದೆ. ನೀತಿ ಕಾಗದದಲ್ಲಷ್ಟೇ ಉಳಿಯದೆ ಕೆಲಸದಲ್ಲೂ ಕಾಣಿಸಿಕೊಳ್ಳಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top