16 ಕಾರ್ಮಿಕರ ಬದುಕು ರೈಲಿನಡಿ ಸಿಲುಕಿ ಅಪ್ಪಚ್ಚಿ
– ಕಾಲ್ನಡಿಗೆಯಲ್ಲಿ ತವರಿಗೆ ಸಾಗುತ್ತಿದ್ದ ವಲಸಿಗರು
ಔರಂಗಾಬಾದ್: ಲಾಕ್ಡೌನ್ನಿಂದ ಕೆಲಸವಿಲ್ಲದೆ ಹತಾಶರಾಗಿ ಹೇಗಾದರೂ ಮಾಡಿ ತವರು ಸೇರಿಕೊಳ್ಳುವ ಪ್ರಯತ್ನವಾಗಿ ಕಾಲ್ನಡಿಗೆಯಲ್ಲಿ ಹೊರಟಿದ್ದ 16 ವಲಸೆ ಕಾರ್ಮಿಕರ ಬದುಕು ದಾರುಣ ಅಂತ್ಯ ಕಂಡಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಲ್ನಾದಲ್ಲಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಮಧ್ಯಪ್ರದೇಶಕ್ಕೆ ಸಾಗುತ್ತಿದ್ದಾಗ ಗುರುವಾರ ರಾತ್ರಿ ಔರಂಗಾಬಾದ್ನ ಭುಸವಾಲ್ನ ಕಾರ್ಮಾಡ್ ಎಂಬಲ್ಲಿ ಸುಸ್ತಾಯಿತು ಎಂದು ರೈಲು ಹಳಿಗೆ ತಲೆಯಾನಿಸಿ ಮಲಗಿದ್ದರು. ಈ ವೇಳೆ ಬೆಳಗ್ಗೆ 5.15ರ ಹೊತ್ತಿಗೆ ಗೂಡ್ಸ್ ರೈಲೊಂದು ಅವರ ಮೇಲೆ ಹಾದುಹೋಗಿದೆ. ರಸ್ತೆ ಮಾರ್ಗವಾಗಿ ಹೋದರೆ ಪೊಲೀಸರು ತಡೆಯುವ ಭೀತಿಯಿಂದ ಅವರು ರೈಲು ಹಳಿಯ ಮೇಲೆ ಸಾಗಿದ್ದರು. 45 ಕಿ.ಮೀ. ನಡೆದ ಬಳಿಕ ಸುಸ್ತಾಗಿ ನಿದ್ದೆಗೆ ಜಾರಿದ್ದೇ ಪ್ರಾಣಕ್ಕೆ ಎರವಾಯಿತು.
ಗೂಡ್ಸ್ ರೈಲು ಚಾಲಕ ದೂರದಿಂದಲೇ ಹಾರನ್ ಹಾಕಿದರೂ ಸುಸ್ತಾದ ಕಾರ್ಮಿಕರಿಗೆ ಎಚ್ಚರವಾಗಲಿಲ್ಲ. ಹಳಿಯಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ನಾಲ್ವರು ಬಚಾವಾಗಿದ್ದಾರೆ.
ಕರುಳು ಹಿಂಡುವ ದೃಶ್ಯ
ಕಾರ್ಮಿಕರು ರೊಟ್ಟಿ ಮತ್ತಿತರ ಆಹಾರವನ್ನು ಜತೆಗೊಯ್ದಿದ್ದರು. ರಕ್ತ ಸಿಕ್ತವಾಗಿ ಬಿದ್ದ ಮೃತದೇಹಗಳು, ಚೆಲ್ಲಾಪಿಲ್ಲಿಯಾಗಿ ಹರಡಿದ ಆಹಾರ, ಪರ್ಸ್, ಚೆಪ್ಪಲಿ, ಕೈಚೀಲಗಳು ನೋಡುಗರ ಕರುಳು ಹಿಂಡುವಂತಿತ್ತು. ರಕ್ತಸಿಕ್ತ ದೃಶ್ಯಗಳನ್ನು ನೋಡಲಾಗದೇ ನೆರೆದ ಜನ ಕಂಗಾಲಾಗಿ ಹೋದರು.
15 ಲಕ್ಷ ರೂ. ಪರಿಹಾರ
ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರಕಾರಗಳು ಮೃತರ ಕುಟುಂಬಗಳಿಗೆ ಕ್ರಮವಾಗಿ 10 ಲಕ್ಷ ರೂ. ಹಾಗೂ 5 ಲಕ್ಷ ರೂ. ಪರಿಹಾರ ಘೋಷಿಸಿವೆ.
—————–
2 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಮಹಾ ಮರು ವಲಸೆ
– ನಗರ, ಗ್ರಾಮೀಣ ಕರ್ನಾಟಕದ ಜನಜೀವನ ಏರುಪೇರು
ವಿಕ ಸುದ್ದಿಲೋಕ ಬೆಂಗಳೂರು
ಕೊರೊನಾಘಾತಕ್ಕೆ ನಾಡಿನ ಶ್ರಮಿಕ ವರ್ಗ ತತ್ತರಿಸಿದೆ. ನಗರ-ಮಹಾ ನಗರಗಳಿಂದ ಹಳ್ಳಿಗಳತ್ತ ಮಹಾ ಮರುವಲಸೆಯ ಪರ್ವ ಕಂಗೆಡಿಸುತ್ತಿದೆ. ಬೆಂಗಳೂರೊಂದರಿಂದಲೇ ಸುಮಾರು 2 ಲಕ್ಷ ಮಂದಿ ಅನ್ಯ ಜಿಲ್ಲೆ ಮತ್ತು ಪರ ರಾಜ್ಯಗಳಿಗೆ ವಾಪಸಾಗಿದ್ದಾರೆ. ಒಂದೆಡೆ ಕೋವಿಡ್ 19 ಎದುರಿಸುವ ಸವಾಲು, ಮತ್ತೊಂದೆಡೆ ಕಾರ್ಮಿಕರ ಮರು ವಲಸೆ ನಿಭಾಯಿಸಬೇಕಾದ ಮಹಾ ಸವಾಲು ರಾಜ್ಯ-ಕೇಂದ್ರ ಸರಕಾರಗಳ ಮುಂದಿದೆ. ಬೆಂಗಳೂರೊಂದಕ್ಕೇ ಸೀಮಿತವಾಗದೆ ಕೈಗಾರಿಕೆ ಹಬ್ಗಳ ವಿಕೇಂದ್ರೀಕರಣ ಮತ್ತು ಕೃಷಿಗೆ ಉತ್ತೇಜನವೊಂದೇ ಭವಿಷ್ಯದಲ್ಲಿ ಇಂಥ ಸಮಸ್ಯೆ ನಿವಾರಿಸಲು ಇರುವ ಅಂತಿಮ ದಾರಿ ಎಂಬ ಸಲಹೆ ಪರಿಣಿತರಿಂದ ಕೇಳಿ ಬಂದಿದೆ.
ನಗರಗಳಿಂದ ತವರು ತಲುಪಿರುವ ಲಕ್ಷಾಂತರ ಕಾರ್ಮಿಕರಲ್ಲಿ ಎಲ್ಲರಿಗೂ ಸ್ಥಳೀಯವಾಗಿ ಉದ್ಯೋಗ ಲಭಿಸುವುದು ಅಸಾಧ್ಯ. ಬೇರೆ ಬೇರೆ ವೃತ್ತಿಯ ಕುಶಲಕರ್ಮಿಗಳು ಕೃಷಿ ಕೆಲಸಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಜತೆಗೆ ಕೃಷಿಗೂ ಪೂರಕ ವಾತಾವರಣವಿಲ್ಲ. ಹಾಗಾಗಿ ಬಹುತೇಕ ಕಾರ್ಮಿಕರು ಮತ್ತೆ ನಗರಕ್ಕೆ ಮರಳುವುದು ಖಚಿತ. ಆದರೆ ಕೊರೊನಾ ಪೀಡೆ ರಾಜ್ಯದಲ್ಲಿ ಮತ್ತಷ್ಟು ವ್ಯಾಪಿಸುತ್ತಿರುವುದರಿಂದ ಲಕ್ಷಾಂತರ ಕಾರ್ಮಿಕರ ಅತಂತ್ರ ಸ್ಥಿತಿ ಮುಂದುವರಿಯಲಿದೆ.
ಈ ನಡುವೆ ಕುಶಲ ವೃತ್ತಿಗಳಲ್ಲಿ ಪರಿಣಿತರಾಗಿರುವ ಒಡಿಶಾ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ನ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಾಪಸಾಗಿರುವುದರಿಂದ ಬೆಂಗಳೂರಿನ ಕೈಗಾರಿಕೋದ್ಯಮ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಭಾರಿ ಏಟು ಬಿದ್ದಿದೆ.
ಮನರೇಗಾದ ಸ್ವರೂಪ ಬದಲಾಗಬೇಕಿದೆ
ಕೌಶಲ ರಹಿತ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ನೆಲೆಯಲ್ಲಿ ಮನರೇಗಾ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ) ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕೆಂಬ ಸಲಹೆ ಕೇಳಿ ಬರುತ್ತಿದೆ. ನರೇಗಾದ ಕೂಲಿ ದರವನ್ನು 249 ರೂ. ನಿಂದ 275 ರೂ.ಗೆ ಹೆಚ್ಚಿಸಿರುವುದು ಸಮಾಧಾನಕರ. ಆದರೆ, ಇಲ್ಲೊಂದು ಸವಾಲಿದೆ. ಗಾರೆ ಕೆಲಸ ಮಾಡಲು ಷಹರಗಳಿಗೆ ವಲಸೆ ಹೋಗಿದ್ದವರು ನರೇಗಾ ಕೂಲಿಗೆ ಹೊಂದಿಕೊಳ್ಳಬಹುದು. ಆದರೆ, ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಪೇಂಟರ್, ಕ್ಯಾಬ್ ಡ್ರೈವಿಂಗ್, ವಸ್ತ್ರ ವಿನ್ಯಾಸ, ಆಹಾರ ಸಂಸ್ಕರಣೆ, ಆಭರಣ, ವೆಲ್ಡರ್ ಸೇರಿದಂತೆ ವಿವಿಧ ರೀತಿಯ ಉತ್ತಮ ಸಂಪಾದನೆಯ ಕೆಲಸ ಮಾಡುತ್ತಿದ್ದವರು ಒಗ್ಗಿಕೊಳ್ಳುವುದು ಕಷ್ಟ. ನೀಲಿ ತೋಳಿನ(ಬ್ಲೂಕಾಲರ್) ಕೆಲಸಗಳೆಂದು ಪರಿಗಣಿತವಾಗಿರುವ ಈ ಕುಶಲಕರ್ಮಿಗಳಿಗೆ ತಕ್ಕಂತೆ ನರೇಗಾದ ಕಾಮಗಾರಿಗಳನ್ನು ಮರುವಿನ್ಯಾಸ ಮಾಡಬೇಕಿದೆ.
ಕೃಷಿ ಉತ್ತೇಜನ ತುರ್ತು ಅಗತ್ಯ
– ಕೃಷಿಯನ್ನು ಲಾಭದಾಯಕವಾಗಿಸಬೇಕು.
– ಲಾಭ ತಂದುಕೊಡುವ ಕೃಷಿ ಬಗ್ಗೆ ರೈತರಿಗೆ ಕರಾರುವಾಕ್ ಮಾಹಿತಿ ನೀಡಬೇಕು.
– ಮಣ್ಣಿನ ಗುಣಕ್ಕೆ ಅನುಸಾರವಾಗಿ ಪ್ರದೇಶವಾರು ಬೆಳೆ ಬೆಳೆಯಲು ಸ್ಪಷ್ಟ ನೀತಿ ರೂಪಿಸಬೇಕು.
– ‘ಕೃಷಿ ಯಂತ್ರಧಾರೆ’ಯಂತಹ ಯೋಜನೆಗೆ ಪುನಶ್ಚೇತನ.
– ರೈತರು ನಗರ ಸೇರಿಕೊಂಡಿದ್ದರಿಂದ 21 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದಿದೆ. ಇಂತಹ ಭೂಮಿಯಲ್ಲಿಬೆಳೆ ಬೆಳೆಯಲು ವಿಶೇಷ ಪ್ರೋತ್ಸಾಹ.
– ಮುಂದಿನ 3 ವರ್ಷದ ಅವಧಿಗೆ ಕೃಷಿ ಮೇಲುಸ್ತುವಾರಿಗೆ ಸಚಿವರು, ಉನ್ನತ ಅಧಿಕಾರಿಗಳ ಕಾರ್ಯಪಡೆ ರಚನೆ
– ಕೃಷಿ ಬೆಲೆ ಆಯೋಗ ಸೇರಿದಂತೆ ಕೃಷಿ ಸುಧಾರಣೆ ಸಂಬಂಧಿತ ಸಮಿತಿಗಳು ನೀಡಿದ ಅನುಷ್ಠಾನಯೋಗ್ಯ ಶಿಫಾರಸುಗಳನ್ನು ಜಾರಿಗೊಳಿಸುವುದು
– ಕಡಿಮೆ ನೀರು ಬಳಸಿ ಕೃಷಿ ಮಾಡಲು ಪ್ರೋತ್ಸಾಹಿಸುವುದು (ಉದಾಹರಣೆಗೆ ಇಸ್ರೇಲ್ ಮಾದರಿ)
ಅಸಂಘಟಿತ ಕಾರ್ಮಿಕರ ಲೆಕ್ಕವೇ ಇಲ್ಲ
ಸಂಘಟಿತ ಕಾರ್ಮಿಕರು ರಾಜ್ಯ-ಕೇಂದ್ರ ಸರಕಾರಧಿಗಳ ಚೂರುಪಾರು ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಅಸಂಘಟಿತ ವಲಯದಲ್ಲಿಭಾರಿ ಸಂಖ್ಯೆಯ ಕಾರ್ಮಿಕರಿದ್ದಾರೆ. ಇವರ ಲೆಕ್ಕವೇ ಸರಕಾರದ ಬಳಿ ಇಲ್ಲ. ಹೀಗಾಗಿ ಸರಕಾರದ ನೆರವು ಇವರ ಬ್ಯಾಂಕ್ ಖಾತೆ ತಲುಪುತ್ತಿಲ್ಲ. ರೈತರು, ಮನೆಗೆಲಸದವರು, ಚಾಲಕರು, ಕಟ್ಟಡ ಕಾರ್ಮಿಕರು ಎಷ್ಟಿದ್ದಾರೆ ಎಂಬ ಬಗ್ಗೆ ನಿಖರ ದಾಖಲೆಯೇ ಇಲ್ಲ.
ಕೇರಳ ಮಾದರಿ ಲ್ಯಾಂಡ್ ಆರ್ಮಿ
ಕೇರಳ ಮಾದರಿಯಲ್ಲಿ ಯುವಕರನ್ನು ಒಳಗೊಂಡ ‘ಲ್ಯಾಂಡ್ ಆರ್ಮಿ’ ಸಂಘಟನೆ ಕಟ್ಟಬೇಕು. ಈ ತಂಡದ ಯುವಕರನ್ನು ಕೃಷಿ ಯಂತ್ರ ಬಳಕೆಗೆ ಉತ್ತೇಜಿಸಬೇಕು. ಇನ್ನು ಐಟಿ, ಬಿಟಿ ಇನ್ನಿತರ ದೊಡ್ಡ ಉದ್ಯೋಗ ಬಿಟ್ಟು ಹಳ್ಳಿಗೆ ವಾಪಸಾದವರು ಮಾರಕಟ್ಟೆ ಜಾಲ ವಿಸ್ತರಣೆ ಇನ್ನಿತರ ಸ್ಟಾರ್ಟ್ಅಪ್ ಪ್ರಾರಂಭಿಸಲು ಪ್ರೋತ್ಸಾಹಿಸಬೇಕು.
-ಡಾ. ಪ್ರಕಾಶ್ ಕಮ್ಮರಡಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ
ಲಕ್ಷಾಂತರ ಕಾರ್ಮಿಕರು ಬೆಂಗಳೂರು ತೊರೆದಿದ್ದಾರೆ. ಕಾರ್ಮಿಕರ ತೀವ್ರ ಅಭಾವ ಉಂಟಾಗಿದೆ. ಇಲ್ಲಿಯೇ ಉಳಿಸಿಕೊಳ್ಳಲು ಮನವೊಲಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಈಗಾಗಲೇ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಿರುವ ಸಿಮೆಂಟ್, ಸ್ಟೀಲ್ ಮತ್ತು ಇನ್ನಿತರೆ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಕಾರ್ಮಿಕರ ಕೊರತೆಯಿಂದ ನಿರ್ಮಾಣ ಸಾಮಗ್ರಿ ಹಾಳಾಗುವ ಆತಂಕ ಎದುರಾಗಿದೆ.
-ಎಸ್. ಸುರೇಶ್ ಹರಿ ಬೆಂಗಳೂರು ಘಟಕದ ಅಧ್ಯಕ್ಷ, ಕ್ರೆಡಾಯ್