ನಿಜ ಏನೆಂಬುದು ಗೊತ್ತಿದ್ದರೂ ಅದನ್ನು ನುಂಗಲೂ ಆಗದ, ಉಗುಳಲೂ ಆಗದ ಉಭಯಸಂಕಟಕ್ಕೆ ಸಿಲುಕಿದ ಇಂದಿರಾ ತಮ್ಮನ್ನೇ ತಾವು ದುರಂತಕ್ಕೆ ಒಡ್ಡಿಕೊಂಡರೇ? ಹೌದು ಎನ್ನುವುದಕ್ಕೆ ಹಲವಾರು ಪುರಾವೆಗಳು ಸಿಗುತ್ತವೆ.
ಇಂದಿರಾ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆದ ನಷ್ಟ ಅನ್ನಬಹುದೇ? ಖಂಡಿತ ಅಲ್ಲ, ಅದು ಇಡೀ ದೇಶಕ್ಕೆ ಆದ ನಷ್ಟ! ನಷ್ಟ ಅನ್ನುವುದಕ್ಕಿಂತ ಅದೊಂದು ದೊಡ್ಡ ಆಘಾತ. ಈಗ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರುವ ಸ್ಥಿತಿಯನ್ನು ಒಮ್ಮೆ ಅವಲೋಕಿಸಿದರೆ ಈ ಮಾತು ಹೆಚ್ಚು ಸುಲಭವಾಗಿ ಅರ್ಥ ಆಗಬಹುದು. ಆದರೇನು ಮಾಡುವುದು, ಇಂದಿರಾರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ. ಧವನ್ ಮತ್ತು ಅವರ ಗೌಪ್ಯ ಸೂತ್ರಧಾರರಿಗೆ ಒಂದು ಕ್ಷಣವೂ ಹಾಗೆ ಅನ್ನಿಸಲೇ ಇಲ್ಲವಲ್ಲ! ಧವನ್ ಬಗ್ಗೆ ಇನ್ನೆಷ್ಟು ಅಂತ ಹೇಳುವುದು? ಹೇಳುವಷ್ಟನ್ನು ಕಳೆದ ವಾರದ ಅಂಕಣದಲ್ಲೇ ಹೇಳಿಯಾಗಿದೆ. ಈ ವಾರ `ಐರನ್ ಲೇಡಿ’ ಇಂದಿರಾ ಜೀವನದ ಮತ್ತೊಂದು ನಾಟಕೀಯ ಪ್ರಸಂಗದ ಬಗ್ಗೆ ಹೇಳುತ್ತಿದ್ದೇನೆ.
ಮೇ 24, 1971, ಬಾಂಗ್ಲಾ ಯುದ್ಧದ ಸಂದರ್ಭ. ಪರಿಸ್ಥಿತಿ ಸ್ವಲ್ಪ ಉದ್ವಿಗ್ನವಾಗಿಯೇ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಸೇನೆಯ ಮಾಜಿ ಕ್ಯಾಪ್ಟನ್ ಮತ್ತು ಗುಪ್ತಚರ ಅಧಿಕಾರಿ ರುಸ್ತಮ್ ಸುಹ್ರಬ್ ನಗರವಾಲಾ ಎಂಬಾತ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಧ್ವನಿಯನ್ನು ಅನುಕರಿಸಿ ಸಂಸತ್ ಭವನ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಫೋನ್ ಮಾಡುತ್ತಾನೆ. ಆ ಕಡೆ ಬ್ಯಾಂಕ್‍ನ ಚೀಫ್ ಕ್ಯಾಷಿಯರ್ ವೇದಪ್ರಕಾಶ ಮಲ್ಹೋತ್ರಾ ಫೋನ್ ಕಾಲ್ ರಿಸೀವ್ ಮಾಡುತ್ತಾರೆ. ಓರ್ವ ಬಾಂಗ್ಲಾದೇಶಿ ಪ್ರಜೆ ಬರುತ್ತಾನೆ ಆತನಿಗೆ ಅರವತ್ತು ಲಕ್ಷ ರೂಪಾಯಿ ಕೊಟ್ಟು ಕಳಿಸಿ ಅಂತ `ಇಂದಿರಾ’ ಕ್ಯಾಷಿಯರ್‍ಗೆ ಹೇಳುತ್ತಾರೆ. `ಇಂದಿರಾ’ ಫೋನ್ ಬಂದಿದ್ದೇ ತಡ ಮಲ್ಹೋತ್ರಾ ಹಿಂದೆಮುಂದೆ ನೋಡದೆ ಅನಾಮತ್ತಾಗಿ ಅರವತ್ತು ಲಕ್ಷ ರೂಪಾಯಿಯನ್ನು ಅಲ್ಲಿಗೆ ಬಂದ ವ್ಯಕ್ತಿಯ ಕೈಗಿಟ್ಟು ಕಳಿಸಿಕೊಡುತ್ತಾರೆ. “ಇಂದಿರಾ ಆದೇಶದಂತೆ ಅವರು ಕಳಿಸಿದ ವ್ಯಕ್ತಿಗೆ ಅರವತ್ತು ಲಕ್ಷ ರೂಪಾಯಿ ಕೊಟ್ಟು ಕಳಿಸಿದ್ದೇನೆ” ಅಂತ ಇಂದಿರಾರ ಪ್ರಧಾನ ಕಾರ್ಯದರ್ಶಿ ಪಿ.ಎನ್.ಹಕ್ಸರ್‍ಗೆ ಕೆಲ ಹೊತ್ತಿನ ಬಳಿಕ ಮಲ್ಹೋತ್ರಾ ಖುದ್ದಾಗಿ ಹೋಗಿ ತಿಳಿಸುತ್ತಾರೆ. ಆಗಲೇ ಮಲ್ಹೋತ್ರಾಗೆ ಗೊತ್ತಾದದ್ದು ತಾನು ಯಾಮಾರಿದ್ದೇನೆ ಅಂತ. ಕ್ಯಾಷಿಯರ್ ಮಲ್ಹೋತ್ರಾ ಮಾತು ಕೇಳಿ ಹಕ್ಸರ್ ಕೂಡ ದಂಗಾಗಿ ಹೋಗುತ್ತಾರೆ. ಹಕ್ಸರ್ ಈ ಆಘಾತಕಾರಿ ವಿಚಾರವನ್ನು ಇಂದಿರಾಗೆ ಮುಟ್ಟಿಸುತ್ತಾರೆ. ಆ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಇಂದಿರಾ ಮೆತ್ತಗೆ ಸೂಚಿಸುತ್ತಾರೆ. ನಂತರ ಡಿ.ಕೆ.ಕಶ್ಯಪ್ ಎಂಬ ದಕ್ಷ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಶುರುವಾಗುತ್ತದೆ. ಕಶ್ಯಪ್ ಮುಂದೆ ಕೆಲವೇ ದಿನಗಳಲ್ಲಿ ಅಕಸ್ಮಾತ್ತಾಗಿ ಸಾವನಪ್ಪುತ್ತಾರೆ. ಇವೆಲ್ಲ ಒಂದು ಕತೆ.
ಸುಮ್ಮನೇ ಕುಳಿತು ಆಲೋಚನೆ ಮಾಡಿದರೆ ಎಂಥವನನ್ನೇ ಆದರೂ ಕಾಡುವ ಪ್ರಶ್ನೆ ಅಂದರೆ, ನಗರವಾಲಾ ಎಂಬಾತ ಇಂದಿರಾ ಗಾಂಧಿಯವರ ಧ್ವನಿ ಅನುಕರಣೆ ಮಾಡಲು ಸಾಧ್ಯವಾ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಪ್ರಧಾನ ಕ್ಯಾಷಿಯರ್ ಮಲ್ಹೋತ್ರಾ ಏನನ್ನೂ ಪ್ರಶ್ನಿಸದೆ ಒಂದಲ್ಲ ಎರಡಲ್ಲ ಅರವತ್ತು ಲಕ್ಷ ರೂಪಾಯಿಯನ್ನು ಸಂಬಂಧಸೂತ್ರ ಕೇಳದೆ, ಪೂರ್ವಾಪರ ವಿಚಾರಿಸದೆ ಯಾರೋ ಒಬ್ಬ ಯಃಕಶ್ಚಿತ್ ವ್ಯಕ್ತಿಗೆ ಕೊಟ್ಟು ಕಳಿಸಲು ಸಾಧ್ಯವೇ? ಹಾಗಿದ್ದರೆ ಫೋನ್ ಮಾಡಿ ಬ್ಯಾಂಕ್‍ನಿಂದ ಕ್ಯಾಷ್ ತರಿಸಿಕೊಳ್ಳುವ ಪರಿಪಾಠವನ್ನು ಇಂದಿರಾ ಗಾಂಧಿ ಮೊದಲಿನಿಂದಲೂ ರೂಢಿಸಿಕೊಂಡಿದ್ದರೇ? ಅದು ನಿಜ ಅಂತಿಟ್ಟುಕೊಳ್ಳಿ. ಆ ವಿಷಯ ಮನೆ ಮಂದಿಗೆ ಬಿಟ್ಟು ಹೊರಗಿನವರಿಗೆ ಗೊತ್ತಿರಲು ಹೇಗೆ ಸಾಧ್ಯ? ಬ್ಯಾಂಕ್ ಕ್ಯಾಷಿಯರ್‍ಗೆ ಫೋನ್ ಬಂದದ್ದು ಇಂದಿರಾರ ಪರ್ಸನಲ್ ರೂಂನಲ್ಲಿದ್ದ ಟೆಲಿ ಫೋನ್ ನಂಬರಿಂದ. ಇಂದಿರಾರ ಮನೆಯ ಆವರಣವನ್ನೇ ಯಾರೂ ಸುಲಭದಲ್ಲಿ ಪ್ರವೇಶಿಸುವ ಹಾಗಿರಲಿಲ್ಲ, ಅಷ್ಟು ಟೈಟ್ ಸೆಕ್ಯುರಿಟಿ ಇರುವ ಜಾಗ. ಹೇಳಿಕೇಳಿ ದೇಶದ ಪ್ರಧಾನಿ ನಿವಾಸ. ಅಂದಮೇಲೆ ಅವರ ಪರ್ಸನಲ್ ರೂಮಿಗೆ ಹೊರಗಿನವರು ಪ್ರವೇಶ ಮಾಡುವುದು ಸಾಧ್ಯವೇ? ಹಾಗಿದ್ದರೆ ಆ ದೂರವಾಣಿಯಿಂದ ಮನೆ ಮಂದಿಯನ್ನು ಬಿಟ್ಟು ಬೇರೆಯವರು ಫೋನ್ ಮಾಡಿದ್ದು ಹೇಗೆ? ಇಂದಿರಾ ಪರ್ಸನಲ್ ರೂಮಿಗೆ ಎಂಟ್ರಿ ಪಡೆದು ಇಂದಿರಾರ ಧ್ವನಿಯನ್ನೇ ಅನುಕರಣೆ ಮಾಡಿ ನಗರವಾಲಾ ಬ್ಯಾಂಕ್‍ಗೆ ಫೋನ್ ಮಾಡುವ ಕತೆಯನ್ನು ನಂಬುವುದಾದರೂ ಹೇಗೆ? ನಾಟ್ ಪಾಸಿಬಲ್!
ಆಯಿತು, ನಗರವಾಲಾಗೆ ಇಂದಿರಾ ಮನೆಯೊಳಗೆ ಪ್ರವೇಶ ಇತ್ತು ಅಂತಲೇ ಇಟ್ಟುಕೊಳ್ಳೋಣ. ಹಾಗಾದರೆ ನಗರವಾಲಾ ಇಂದಿರಾಗೆ ವಿಶ್ವಾಸಘಾತ ಮಾಡಿರಬಹುದೇ? ನಂಬಲಾಗುತ್ತಿಲ್ಲ. ನಗರವಾಲಾ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದವರು. ಸೇವೆಯಲ್ಲಿದ್ದಾಗ ದಕ್ಷತೆ ವಿಚಾರದಲ್ಲಿ ಎಲ್ಲೂ ಕೊಂಕಿದ ಉದಾಹರಣೆ ಸಿಗುವುದಿಲ್ಲ. ಹಾಗಿದ್ದರೆ ತಾನು ದೇಶದ ಪ್ರಧಾನಿಯ ಧ್ವನಿಯನ್ನೇ ಅನುಕರಣೆ ಮಾಡಿ ಅಷ್ಟು ದೊಡ್ಡ ಮೊತ್ತದ ಹಣ ಡ್ರಾ ಮಾಡಿದರೆ ಮುಂದೇನು ಗತಿಯಾಗುತ್ತದೆ ಎಂಬುದರ ಕನಿಷ್ಠ ಅರಿವು ಅವರಿಗೆ ಇಲ್ಲದಿರಲು ಸಾಧ್ಯವೇ? ಆದರೆ ನಗರವಾಲಾ ಬ್ಯಾಂಕ್‍ನಿಂದ ದುಡ್ಡು ತರಿಸಿದ್ದು ಮಾತ್ರ ನಿಜ. ಹಾಗಿದ್ದರೆ ನಗರವಾಲಾ ಇಷ್ಟೆಲ್ಲ ಸರ್ಕಸ್ ಮಾಡುವುದರ ಹಿಂದೆ ಯಾರದ್ದೋ ಬಲವಾದ ಕುಮ್ಮಕ್ಕು, ಬೆಂಬಲ ಇದ್ದಿರಲೇಬೇಕಲ್ಲ. ಖಂಡಿತವಾಗಿ ಅದು ಇಂದಿರಾ ಆಗಿರಲು ಸಾಧ್ಯವಿಲ್ಲ. ಹಾಗಿದ್ದರೆ ಯಾರು? ಉತ್ತರವಿಲ್ಲದ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ.
ಯಾರೋ ಒಬ್ಬರು ಪರಿಸ್ಥಿತಿಯ ದುರ್ಲಾಭ ಮಾಡಿಕೊಂಡಿದ್ದಾರೆ ಅಂತಲೇ ಇಟ್ಟುಕೊಳ್ಳೋಣ. ದೂರಸಂಪರ್ಕ ಇಲಾಖೆಯಿಂದ ದೂರವಾಣಿ ಕರೆ ತನಿಖೆ ಮಾಡಿಸಬಹುದಿತ್ತಲ್ಲ. ಬ್ಯಾಂಕ್ ಕ್ಯಾಷಿಯರ್‍ಗೆ ಫೋನ್ ಬಂದದ್ದಂತೂ ನೂರಕ್ಕೆ ನೂರು ಸತ್ಯ. ಫೋನ್ನಲ್ಲಿ ಕೇಳಿಸಿದ್ದು ಒಂದು ಹೆಣ್ಣಿನ ಧ್ವನಿ. ಅದಕ್ಕೆ ಇಂದಿರಾ ಧ್ವನಿಯ ಹೋಲಿಕೆ ಇದೆ ಎಂದು ಕ್ಯಾಷಿಯರ್ ಹೇಳುತ್ತಾರೆ. ತಾನು ಫೋನ್ ಮಾಡಿಲ್ಲ ಎಂಬುದು ಇಂದಿರಾಗೆ ಪಕ್ಕಾ ಇತ್ತು. ಹಾಗಾದರೆ ಇಂದಿರಾ ಬೆಡ್ ರೂಂನಿಂದ ಬ್ಯಾಂಕ್‍ಗೆ ಫೋನ್ ಮಾಡಿದ ಆ ಹೆಣ್ಣು ಧ್ವನಿ ಯಾರದು? ಅದ್ಯಾರದ್ದು ಅಂತ ಆಮೇಲೆ ಇಂದಿರಾಗೆ ಗೊತ್ತಾಯಿತೇ? ಗೊತ್ತಾದ ಮೇಲೆ ಯಾರ ಮುಂದೆಯೂ ಅದನ್ನು ಹೇಳಿಕೊಳ್ಳಲಾಗದ ಉಭಯಸಂಕಟಕ್ಕೆ ಇಂದಿರಾ ಸಿಲುಕಿದರೇ? ಹೌದು ಎನ್ನುವುದಕ್ಕೆ ಹಲವಾರು ಪುರಾವೆಗಳು ಸಿಗುತ್ತವೆ.
ಕ್ಯಾಷಿಯರ್ ಮಲ್ಹೋತ್ರಾ ಕ್ಯಾಶ್ ಡ್ರಾ ಮಾಡಿ ಕೊಟ್ಟು ಕಳಿಸಿದ್ದು ಗುಪ್ತಚರ ದಳದ ತನಿಖೆಯಿಂದ ಪ್ರೂವ್ ಆಯಿತು. ಮಲ್ಹೋತ್ರಾ ತನಿಖಾಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಒಂದೇ-“ ನಾನು ಇಂದಿರಾರ ಫೋನ್ನಿಂದ ಕರೆ ಸ್ವೀಕರಿಸಿದ್ದು ನಿಜ. ಅದು ಇಂದಿರಾರ ಧ್ವನಿಯ ಹಾಗೇ ಇತ್ತು”. ಇಂದಿರಾ ಬ್ಯಾಂಕ್‍ಗೆ ಫೋನ್ ಮಾಡಿಲ್ಲ ಎಂದ ಮೇಲೆ ಮುಂದೆ ಅನುಮಾನದ ಬೆರಳು ಹೊರಳುವುದು ನಗರವಾಲಾ ಕಡೆಗೆ. ತರ್ಕ ಮಾಡುತ್ತ ಹೋದರೆ ನಗರವಾಲಾ ಇರಲಿಕ್ಕಿಲ್ಲ ಎಂದು ಒಳಮನಸ್ಸು ಹೇಳುತ್ತದೆ. ಹಾಗಾದರೆ ಮತ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.
ಬಹುಶಃ ನಿಜ ಹಕೀಕತ್ ಏನೆಂಬುದು ಇಂದಿರಾಗೂ ಗೊತ್ತಿತ್ತು. ಯಾಕೆ ಗೊತ್ತೇ? ಮೋಸದಿಂದ ಹಣ ಡ್ರಾ ಮಾಡಿರುವುದು ಗೊತ್ತಾದ ಕೆಲವೇ ಘಂಟೆಗಳಲ್ಲಿ ಮಲ್ಹೋತ್ರಾ ಮತ್ತು ನಗರವಾಲಾ ಇಬ್ಬರ ಬಂಧನವೂ ಆಗುತ್ತದೆ. ಪೊಲೀಸ್ ಠಾಣೆಯಲ್ಲೇ ಗೌಪ್ಯ ವಿಚಾರಣೆಯ ಶಾಸ್ತ್ರ ಮುಗಿಸಲಾಗುತ್ತದೆ. ಅದರ ಬೆನ್ನಲ್ಲೇ ತನಿಖಾ ಪ್ರಕ್ರಿಯೆಯನ್ನು ಬರ್ಖಾಸ್ತುಗೊಳಿಸಲು ಇಂದಿರಾ ಮೊಗಮ್ಮಾಗಿ ಸೂಚನೆ ಕೊಡುತ್ತಾರೆ. ಹಾಗಿದ್ದರೆ ಇದಕ್ಕೆಲ್ಲ ಏನು ಕಾರಣ? ಹಣ ಡ್ರಾ ಮಾಡಿದ ಸುದ್ದಿ ತಿಳಿದು ದಂಗಾದ ಇಂದಿರಾ ತಕ್ಷಣ ತನಿಖೆಗೆ ಆದೇಶ ಮಾಡುತ್ತಾರೆ. ತನಿಖೆಯ ವೇಳೆ ಪ್ರಾಥಮಿಕ ಮಾಹಿತಿ ಸಿಗುತ್ತಿದ್ದಂತೆ “ಸಾಕು ನಿಲ್ಲಿಸಿ ತನಿಖೆಯನ್ನು” ಎಂದು ಅದೇ ಇಂದಿರಾ ಹೇಳುತ್ತಾರೆ ಅಂದರೆ ಏನರ್ಥ? ಇಂದಿರಾಗೆ ತೀರಾ ಹತ್ತಿರದಲ್ಲಿರುವವರು ಆ ಘಟನೆಯ ಹಿಂದಿದ್ದಾರೆಂದು ಊಹಿಸಬಹುದಲ್ಲವೇ.
ಅಚ್ಚರಿಯ ಸಂಗತಿ ಎಂದರೆ ನಗರವಾಲಾ ಪ್ರಕರಣದ ಗಂಭೀರ ತನಿಖೆಗೆ ಮುಂದೆಂದೂ ಇಂದಿರಾ ತಯಾರಾಗುವುದಿಲ್ಲ. ಪೊಲೀಸ್ ಅಧಿಕಾರಿ ಡಿ.ಕೆ.ಕಶ್ಯಪ್ ನೇತೃತ್ವದಲ್ಲಿ ಒಂದು ಕಣ್ತೋರಿಕೆಯ ತನಿಖಾ ತಂಡ ರಚಿಸಿದರಾದರೂ ತಕ್ಷಣ ತನಿಖೆ ಸಾಕು ಎಂಬ ತೀರ್ಮಾನಕ್ಕೆ ಇಂದಿರಾ ಬಂದುಬಿಡುತ್ತಾರೆ. ಅಷ್ಟೇ ಸಾಲದ್ದಕ್ಕೆ ಸ್ವತಃ ಇಂದಿರಾ ಸೂಚನೆ ಮೇರೆಗೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ತನಿಖಾಧಿಕಾರಿ ಡಿ.ಕೆ.ಕಶ್ಯಪ್ ಮುಂದೆ ಕೆಲವೇ ದಿನಗಳಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಮತ್ತೊಂದು ಅನುಮಾನಾಸ್ಪದ ಸಾವು ಅಷ್ಟೆ.
ಮುಂದೆ 1977ರ ಜೂನ್ 19ರಂದು ಆಗಿನ ಜನತಾ ಪಾರ್ಟಿ ಸರ್ಕಾರ ಜಸ್ಟಿಸ್ ಪಿ.ಜಗನ್‍ಮೋಹನ ರೆಡ್ಡಿ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಕ ಮಾಡುತ್ತದೆ. ಆದರೆ ಆ ಸಮಿತಿಯಿಂದಲೂ ಪ್ರಕರಣದ ಸತ್ಯಾಂಶ ಹೊರಬರುವುದೇ ಇಲ್ಲ. ಬದಲಾಗಿ ಪ್ರಕರಣಕ್ಕೆ ಸಂಬಂಧಿಸಿ ಒಂದಿಷ್ಟು ವಿಷಯಗಳನ್ನು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿ ಜಸ್ಟಿಸ್ ರೆಡ್ಡಿ ಸುಮ್ಮನಾಗುತ್ತಾರೆ.
ಜಗನ್‍ಮೋಹನ ರೆಡ್ಡಿ ಸಮಿತಿ ಕಲೆಹಾಕಿದ ಒಂದು ಅಚ್ಚರಿಯ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಏನೆಂದರೆ ಯಾವ ಬ್ಯಾಂಕ್ ಶಾಖೆಯಿಂದ ಇಂದಿರಾ ಹೆಸರಲ್ಲಿ ದುಡ್ಡು ಡ್ರಾ ಆಗಿರುತ್ತದೋ ಆ ಶಾಖೆಯಲ್ಲಿ ಇಂದಿರಾರ ಬ್ಯಾಂಕ್ ಅಕೌಂಟೇ ಇರಲಿಲ್ಲ! ಇದು ಇಡೀ ಪ್ರಕರಣವನ್ನು ಮತ್ತಷ್ಟು ಗೋಜಲಾಗಿಸುತ್ತದೆ. ಹಣ ಲಪಟಾಯಿಸಿದ ಪ್ರಕರಣಕ್ಕೆ ಜೈಲು ಸೇರಿದ್ದ ರುಸ್ತಮ್ ನಗರವಾಲಾ, ಜಸ್ಟಿಸ್ ರೆಡ್ಡಿ ಸಮಿತಿ ಮುಂದೆ ಕೆಲ ಸತ್ಯಾಂಶಗಳನ್ನು ನಿವೇದಿಸಿಕೊಳ್ಳಲು ಬಯಸುತ್ತಾರೆ. ಜೈಲಿಂದಲೇ ನ್ಯಾ.ಜಗನ್‍ಮೋಹನ ರೆಡ್ಡಿಯವರಿಗೆ ಪತ್ರ ಬರೆದು ಆ ದಿನ ಏನೇನಾಯಿತು, ಯಾಕೆ ಹಾಗಾಯಿತು ಎಂಬುದನ್ನು ಖುದ್ದಾಗಿ ಹೇಳಿಕೊಳ್ಳಲು ಒಂದು ಅವಕಾಶ ಕೊಡಿ ಅಂತ ಕೇಳಿಕೊಳ್ಳುತ್ತಾರೆ. ಆದರೆ ಅಂತಹ ಅವಕಾಶ ನೀಡಲು ಜಸ್ಟಿಸ್ ರೆಡ್ಡಿ ನಿರಾಕರಿಸುತ್ತಾರೆ.
ನಗರವಾಲಾ ಪತ್ರಕ್ಕೆ ಜಸ್ಟಿಸ್ ಪಿ.ಜಗನ್‍ಮೋಹನ ರೆಡ್ಡಿ ಏನು ಹೇಳಿದರು ಗೊತ್ತೇ? “ಪತ್ರದಲ್ಲಿ ನಗರವಾಲಾ ಉಲ್ಲೇಖಿಸಿದ ಅಂಶಗಳಿಗೆ ಯಾವುದೇ ಪೂರಕ ಸಾಕ್ಷೃ ಇಲ್ಲದೇ ಇರುವುದರಿಂದ ಆ ಹೇಳಿಕೆಯನ್ನು ತಿರಸ್ಕರಿಸಬೇಕು” ಎಂದುಬಿಟ್ಟರು. ಹಾಗಿದ್ದರೆ ನಗರವಾಲಾ ಪತ್ರದಲ್ಲಿ ಏನು ಹೇಳಿದ್ದರು, ಯಾರ ಕೈವಾಡದ ಬಗ್ಗೆ ಹೇಳಿದ್ದರು. ಬ್ಯಾಂಕ್‍ಗೆ ಹೋಗಿ ದುಡ್ಡು ತರಲು ಹೇಳಿದವರಾರು, ಕ್ಯಾಷಿಯರ್‍ಗೆ ಫೋನ್ ಮಾಡಿ ದುಡ್ಡು ಕಳಿಸಿ ಅಂತ ಹೇಳಿದ ಹೆಣ್ಣು ಧ್ವನಿ ಯಾರದ್ದು ಅನ್ನುವುದನ್ನೆಲ್ಲ ಅವರು ತೋಡಿಕೊಂಡಿದ್ದರೇ? ಕೊನೆಗೂ ಸತ್ಯ ಗೊತ್ತಾಗುವುದಿಲ್ಲ. ಒಮ್ಮೆ ನಗರವಾಲಾ ಅಹವಾಲು ಹೇಳಿಕೊಳ್ಳುವುದಕ್ಕೆ ಅವಕಾಶ ನೀಡಿದ್ದರೆ ಪ್ರಕರಣದ ಅಸಲಿ ವಿಚಾರ ಹೊರಬರುತ್ತಿತ್ತೋ ಏನೋ? ಅದು ಹೊರಬಂದರೆ ದೇಶದಲ್ಲಿ ಅಲ್ಲೋಲಕಲ್ಲೋಲ ಆಗುತ್ತಿತ್ತೇ? ಆ ಪ್ರಕರಣದ `ಸೂತ್ರಧಾರ’ರು ಯಾರೆಂಬುದು ಬಹಿರಂಗವಾಗಿದ್ದರೆ ನಗರವಾಲಾ ಪ್ರಕರಣಕ್ಕೆ ಮಾತ್ರವಲ್ಲ, ಮುಂದೆ ಘಟಿಸಿದ ಇಂದಿರಾ ಹತ್ಯೆ ಪ್ರಕರಣಕ್ಕೂ ಹೊಸ ತಿರುವು ಸಿಕ್ಕರೂ ಸಿಗುವ ಚಾನ್ಸ್ ಇತ್ತು. ಆದರೆ ಅದ್ಯಾವುದಕ್ಕೂ ಅವಕಾಶ ಸಿಗುವುದೇ ಇಲ್ಲ. ಮುಂದೆ ಕೆಲವೇ ದಿನಗಳಲ್ಲಿ ನಗರವಾಲಾ ಹೃದಯಾಘಾತದಿಂದ ಜೈಲಲ್ಲೇ ಕೊನೆಯುಸಿರೆಳೆಯುತ್ತಾರೆ. ಅಲ್ಲಿಗೆ ಪ್ರಕರಣಕ್ಕೆ ಕೊನೇ ಮೊಳೆ ಹೊಡೆದಂತಾಗುತ್ತದೆ.
ನಗರವಾಲಾ ಪ್ರಕರಣದ ಹೂರಣ ಹೊರಗೆಳೆಯುವ ಪ್ರಯತ್ನ ಅಷ್ಟಕ್ಕೇ ನಿಲ್ಲುವುದಿಲ್ಲ. ಡಿ.ಕೆ.ಕಶ್ಯಪ್ ತನಿಖಾ ತಂಡ ಮತ್ತು ಜಸ್ಟಿಸ್ ಜಗನ್‍ಮೋಹನ ರೆಡ್ಡಿ ಸಮಿತಿ ಕಲೆ ಹಾಕಿದ ಮಾಹಿತಿ ಕೊಡುವಂತೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಪದಮ್ ರೋಷಾ ಮೂರ್ನಾಲ್ಕು ವರ್ಷಗಳ ಹಿಂದೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುತ್ತಾರೆ. ಅದಕ್ಕೆ ಸರ್ಕಾರ ಕೊಟ್ಟ ಉತ್ತರ ಏನು ಗೊತ್ತೇ? 30 ವರ್ಷಗಳಷ್ಟು ಹಿಂದಿನ ಘಟನೆಯ ಮಾಹಿತಿಯನ್ನು ಕೊಡುವುದಕ್ಕೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅವಕಾಶ ಇಲ್ಲ ಎಂಬ ಸಬೂಬು ಕೊಡಲಾಗುತ್ತದೆ. ಹಾಗಿದ್ದರೆ 30 ವರ್ಷದಷ್ಟು ಹಳೆಯ ಪ್ರಕರಣದ ಮಾಹಿತಿ ಕೊಡಬಾರದು ಅಂತ ನಿಯಮ ಇದೆಯಾ? ಕೇಳುವವರು ಹೇಳುವವರು ಯಾರು? ಒಂದಂತೂ ಖರೆ, ಇಂದಿರಾ ಆಯಿತು, ಸಂಜಯ್ ಆಯಿತು, ರಾಜೀವ್ ಆಯಿತು, ಪೈಲಟ್, ಸಿಂಧಿಯಾ… ಕಳೆದುಕೊಂಡ ರತ್ನಗಳು ಒಂದೇ ಎರಡೇ? ಹಾಗಿದ್ದರೆ ಈ ಘನಘೋರ ಹಾನಿ ಸರಣಿಗೆ ಕೊನೆ ಯಾವಾಗ?