ಗಡಿಯಲ್ಲಿ ಭಾರತ ಹಿಡಿತ

– ಪೂರ್ವ ಲಡಾಖ್ ಸಂಘರ್ಷದ ಮಧ್ಯೆ ಸೇತುವೆ ಪೂರ್ಣ
– ಯುದ್ಧ ವಿಮಾನಗಳ ಹಾರಾಟ | ಚೀನಾಕ್ಕೆ ಪಾಠ ಕಲಿಸದೇ ಬಿಡಲ್ಲ: ಮೋದಿ

ಲಡಾಖ್: ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರಿದಿರುವ ಮಧ್ಯೆಯೇ, ಭಾರತೀಯ ಸೇನೆಯ ಎಂಜಿನಿಯರಿಂಗ್ ವಿಭಾಗ ಸದ್ದಿಲ್ಲದೆ ಗಲ್ವಾನ್ ನದಿಗೆ 60 ಮೀಟರ್ ಉದ್ದನೆಯ ಸೇತುವೆ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರೊಂದಿಗೆ ಈ ಸೂಕ್ಷ್ಮ ಪ್ರದೇಶದ ಮೇಲೆ ಭಾರತ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ. ಇದರ ಮಧ್ಯೆ ಭಾರತದ ಯುದ್ಧ ವಿಮಾನಗಳು ಗಡಿಯಲ್ಲಿ ಹಾರಾಟ ನಡೆಸಿ ಹದ್ದಿನ ಕಣ್ಣಿಟ್ಟಿವೆ. ಗಲ್ವಾನ್ ಕಣಿವೆಯಲ್ಲಿ ಡ್ರ್ಯಾಗನ್ ಪ್ರಾಬಲ್ಯ ನಡೆಯದು ಎಂಬ ಖಡಕ್ ಸಂದೇಶವನ್ನು ಭಾರತವು ಚೀನಾಗೆ ರವಾನಿಸಿದೆ.
ಗಲ್ವಾನ್ ನದಿ-ಶ್ಯೊಕ್ ನದಿ ಒಗ್ಗೂಡುವ ಸ್ಥಳದಿಂದ ಪೂರ್ವಕ್ಕೆ 3 ಕಿ.ಮೀ ಹಾಗೂ ಗಸ್ತು ಪಾಯಿಂಟ್ 14 (ಜೂನ್ 15ರಂದು ಮಾರಾಮಾರಿ ನಡೆದ ಸ್ಥಳ)ನಿಂದ 2 ಕಿ.ಮೀ ದೂರದಲ್ಲಿಈ ಹೊಸ ಸೇತುವೆ ನಿರ್ಮಾಣವಾಗಿದೆ. ಇದರಿಂದ ದೆಬ್ರುಕ್‌ನಿಂದ ದೌಲತ್ ಬೇಗ್ ಓಲ್ಡಿವರೆಗಿನ 255 ಕಿ.ಮೀ ಉದ್ದನೆಯ ವ್ಯೂಹಾತ್ಮಕ ರಸ್ತೆಯನ್ನು ರಕ್ಷಿಸಿಕೊಳ್ಳಲು ಭಾರತಕ್ಕೆ ನೆರವಾಗಲಿದೆ.
ಗಲ್ವಾನ್ ಕಣಿವೆ ಸಂಘರ್ಷ ನಿವಾರಣೆಗೆ ಭಾರತ-ಮತ್ತು ಚೀನಾ ಸೇನೆ ನಡುವೆ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಆರು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ. ‘‘ಲಡಾಖ್ ಸಂಘರ್ಷವು ದಕ್ಷಿಣ ಚೀನಾ ಸಮುದ್ರ ವಿವಾದವಲ್ಲ. ತಂಟೆಗೆ ಬಂದರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ,’’ ಎಂದು ಅಧಿಕಾರಿಗಳ ತಂಡವು ಚೀನಾಗೆ ಖಡಕ್ ಎಚ್ಚರಿಕೆ ನೀಡಿದೆ.

ಸೇತುವೆ ಏಕೆ ಮುಖ್ಯ?
ಹೊಸ ಸೇತುವೆಯಿಂದ ಸೇನಾ ವಾಹನಗಳು ಸುಲಭವಾಗಿ ಗಲ್ವಾನ್ ಕಣಿವೆ ತಲುಪಬಹುದು. ಮುಖ್ಯವಾಗಿ ಚೀನಾದ ಸೇನಾ ಚಲನವಲನದ ಮೇಲೆ ನಿಗಾ ಇಡಲು ಅನುಕೂಲಧಿಧಿವಾಗಲಿದೆ. ದೆಬ್ರುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿವರೆಗಿನ 255 ಕಿ.ಮೀ ಉದ್ದದ ವ್ಯೂಹಾತ್ಮಕ ರಸ್ತೆ ರಕ್ಷಿಸಿಕೊಳ್ಳಲು ಇದರಿಂದ ನೆರವಾಗಲಿದೆ. ಆಗ ಚೀನಾವು ತನ್ನ ಕೊನೆಯ ಮಿಲಿಟರಿ ಪಾಯಿಂಟ್ ಆದ ದೌಲತ್ ಬೇಗ್ ಓಲ್ಡಿ ತಲುಪಲು ಪಾಕ್ ಹಾದಿ ಹಿಡಿಯಬೇಕಾಗಿದೆ.

ವಾಯುಪಡೆ ಸನ್ನದ್ಧ
ಗಲ್ವಾನ್ ಕಣಿವೆಯಲ್ಲಿ ಚೀನಾ ಪುಂಡಾಟಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಿರ್ಧರಿಸಿರುವ ಭಾರತೀಯ ವಾಯುಪಡೆ ಯುದ್ಧ ವಿಮಾನಗಳನ್ನು ಮುನ್ನೆಲೆಗೆ ತಂದು ಸನ್ನದ್ಧವಾಗಿಸಿದೆ. ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭಡೌರಿಯಾ ಅವರು ಲೇಹ್ ಮತ್ತು ಶ್ರೀನಗರದಲ್ಲಿ ವಾಯುನೆಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಸುಖೋಯ್-30 ಎಂಕೆಐ, ಮಿರಾಜ್-2000, ಜಾಗ್ವಾರ್ ಯುದ್ಧವಿಮಾನಗಳು, ಅಪಾಚೆ ಹೆಲಿಕಾಪ್ಟರ್ ಹಾರಾಟ ನಡೆಸಿವೆ. ಪೂರ್ವ ಲಡಾಖ್‌ನಲ್ಲಿ ಯೋಧರಿಗೆ ನೆರವಾಗಲು ಅಪಾಚೆ ಕಾಪ್ಟರ್‌ಗಳನ್ನು ಗಲ್ವಾನ್ ಕಣಿವೆ ಹತ್ತಿರಕ್ಕೆ ತಂದು ನಿಲ್ಲಿಸಲಾಗಿದೆ.

ಯೋಧರ ಸೆರೆ ಹಿಡಿದಿಟ್ಟುಕೊಂಡಿಲ್ಲ
ಸಂಘರ್ಷದ ಬಳಿಕ 10 ಭಾರತೀಯ ಯೋಧರನ್ನು ಚೀನಾ ತನ್ನ ವಶದಲ್ಲಿರಿಸಿಕೊಂಡಿತ್ತು ಎಂಬ ಮಾಧ್ಯಮ ವರದಿಗಳನ್ನು ಚೀನಾ ಅಲ್ಲಗೆಳೆದಿದೆ. ಭಾರತ ವಿದೇಶಾಂಗ ಸಚಿವಾಲಯ ತನ್ನ ಎಲ್ಲ ಯೋಧರೂ ಸುರಕ್ಷಿತವಾಗಿದ್ದಾರೆಂದು ಹೇಳಿದೆ.

ನಮ್ಮ ದೇಶದ ಒಂದಿಂಚು ಭೂಭಾಗವನ್ನೂ ಚೀನಾ ಅತಿಕ್ರಮಿಸಿಲ್ಲ. ಗಡಿಯಲ್ಲಿ ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ. ಚೀನಾಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಗಡಿಗಳ ಸುರಕ್ಷತೆಗೆ ಸೇನೆಗೆ ಎಲ್ಲ ಅಧಿಕಾರ ನೀಡಿದ್ದೇವೆ.
-ಪ್ರಧಾನಿ ಮೋದಿ (ಸರ್ವಪಕ್ಷ ಸಭೆಯಲ್ಲಿಹೇಳಿಕೆ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top