ಚೀನಾಗೆ ಸಿಂಹಸ್ವಪ್ನ ಬಿಹಾರ ರೆಜಿಮೆಂಟ್

ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೈನ್ಯದ ಬಿಹಾರ್ ರೆಜಿಮೆಂಟ್‌ನ ಯೋಧರ ದಿಟ್ಟತನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿಹಾರ್ ರೆಜಿಮೆಂಟ್‌ನ ಇತಿಹಾಸ, ಅದು ಮಾಡಿದ ಸಾಧನೆಗಳನ್ನು ತಿಳಿಯೋಣ ಬನ್ನಿ.

ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಸೈನಿಕರ ನಡುವೆ ನಡೆದ ತಿಕ್ಕಾಟದ ವೇಳೆ ಅಲ್ಲಿದ್ದ ಭಾರತದ ಕಡೆಯ ಸೇನಾಯೋಧರು ಪ್ರದರ್ಶಿಸಿದ್ದು ಬರಿಯ ಧೈರ್ಯ, ಹೋರಾಟದ ಕೆಚ್ಚೆದೆ ಮಾತ್ರವಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ದುಶ್ಶಾಸನನ ಎದೆ ಸೀಳಿದ ಸಂದರ್ಭದಲ್ಲಿ ಭೀಮಸೇನ ಪ್ರದರ್ಶಿಸಿದಂಥ ಭೀಭತ್ಸ ಸನ್ನಿವೇಶವನ್ನೇ ನಮ್ಮ ಯೋಧರು ಅಲ್ಲಿ ಸೃಷ್ಟಿಸಿದ್ದರು ಎಂಬುದು ತಡವಾಗಿ ಗೊತ್ತಾಗಿದೆ. ಇಂಥದೊಂದು ರಣೋತ್ಸಾಹ ಪ್ರದರ್ಶಿಸಿದ ಬಿಹಾರ್ ರೆಜಿಮೆಂಟ್‌ಗೆ ಈಗ ಭಾರತೀಯ ಸೇನೆಯ ಉತ್ತರ ವಿಭಾಗ (ನಾರ್ದರ್ನ್ ಕಮಾಂಡ್) ಒಂದು ಗೌರವಾಭಿನಂದನೆಯ ವಿಡಿಯೋ ನಿರ್ಮಿಸಿ ಟ್ವಿಟರ್‌ನಲ್ಲಿ ಹರಿಬಿಟ್ಟಿದೆ. ‘‘ಧ್ರುವ ವಾರಿಯರ್ಸ್ ಮತ್ತು ಬಿಹಾರ್ ರೆಜಿಮೆಂಟ್. ಹೋರಾಡುವುದಕ್ಕಾಗಿಯೇ ಹುಟ್ಟಿದವರು. ಇವರು ಬಾವಲಿಗಳಲ್ಲ, ಬ್ಯಾಟ್‌ಮ್ಯಾನ್‌ಗಳು. ಸೋಮವಾರದ ನಂತರ ಮಂಗಳವಾರ ಬಂದೇ ಬರುತ್ತದೆ. ಬಜರಂಗ ಬಲಿಗೆ ಜಯವಾಗಲಿ,’’ ಎಂದು ಈ ಟ್ವೀಟರ್‌ನಲ್ಲಿ ಸೇನೆ ಹೇಳಿದೆ.

ಅಂದು ಏನು ನಡೆಯಿತು?
ಪಾಯಿಂಟ್ 14ರಲ್ಲಿ ನೆಟ್ಟಿದ್ದ ಚೀನಾ ಟೆಂಟನ್ನು ತೆರವು ಮಾಡಲು ಬಿಹಾರ್ ರೆಜಿಮೆಂಟ್‌ನ ಕರ್ನಲ್ ಬಿ.ಸಂತೋಷ್ ಬಾಬು ಹೋಗಿದ್ದರು. ಆಗ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಚೀನಾ ಸೈನಿಕರು, ಸಂತೋಷ್‌‌ ಬಾಬು ಮೇಲೆ ಏಕಾಏಕಿ ಕೈ ಮಾಡಿ, ಅವರನ್ನು ಕೆಳಗೆ ತಳ್ಳಿದ್ದರು. ನಂತರ ಜೊತೆಗಿದ್ದ ಸೈನಿಕರಿಗೆ ಮೊಳೆ ಹುಗಿದ ಕಟ್ಟಿಗೆಗಳು, ಕಲ್ಲುಗಳಿಂದ ಥಳಿಸಿದ್ದರು. ಸಂತೋಷ್‌ ಬಾಬು ಅಸುನೀಗಿದ್ದು ಗೊತ್ತಾದಾಗ ಅವರ ಜೊತೆಗಿದ್ದ ಬಿಹಾರ ರೆಜಿಮೆಂಟಿನ ಯೋಧರ ರಕ್ತ ಕುದಿಯಲಾರಂಭಿಸಿತು. ರಣಭಯಂಕರವಾಗಿ ಯುದ್ಧದ ಕೂಗು ಹಾಕುತ್ತಾ ಚೀನಾ ಸೈನಿಕರ ಮೇಲೆ ಬಿದ್ದರು. ಏನಾಗುತ್ತಿದೆ ಎಂದು ಅರ್ಥವಾಗುವ ಮುನ್ನವೇ ಚೀನಾ ಸೈನಿಕರ ಕೈಯಲ್ಲಿದ್ದ ಆಯುಧಗಳನ್ನೇ ಕಸಿದುಕೊಂಡು, ಅವರ ಕಠಾರಿ ಮತ್ತಿತರ ಆಯುಧಗಳನ್ನೂ ಕಸಿದುಕೊಂಡು ಬೀಸಲಾರಂಭಿಸಿದರು. ಜೊತೆಗೆ, ಇಂದಿನ ಮಿಲಿಟರಿಯಲ್ಲಿ ಬೇರ್ಯಾರೂ ಬಳಸದ ಕೆಲವು ಆದಿವಾಸಿ ಯುದ್ಧಕಲೆಗಳನ್ನೂ ಬಳಸಿದರು. ಉದಾಹರಣೆಗೆ, ಶತ್ರುವಿನ ಕತ್ತನ್ನು ಹಿಡಿದು ನೂರೆಂಬತ್ತು ಡಿಗ್ರಿ ತಿರುಗಿಸಿಬಿಡುವುದು. ಶತ್ರು ಕ್ಷಣದಲ್ಲೇ ಸತ್ತುಹೋಗಿಬಿಡುತ್ತಾನೆ. ಚೀನಾ ಸೇನೆಯ ಕನಿಷ್ಠ 18 ಯೋಧರು ಹೀಗೆ ಕುತ್ತಿಗೆ ತಿರುಗಿಸಿಕೊಂಡು ಸತ್ತು ಹೋಗಿದ್ದಾರೆ. ಇನ್ನು ಹಲವರ ಮುಖಗಳು, ಬಿಹಾರಿ ಯೋಧರು ಜಜ್ಜಿದ ರಭಸಕ್ಕೆ ಗುರುತು ಹಿಡಿಯಲಾರದಷ್ಟು ಅಪ್ಪಚ್ಚಿಯಾಗಿವೆ. ತೋಳುಗಳು ತಿರುಚಿಕೊಂಡಿವೆ. ಗಲ್ವಾನ್ ನದಿಯ ದಂಡೆ ಹಾಗೂ ಪಾಯಿಂಟ್ 14ರ ಸುತ್ತಮುತ್ತ ಎಲ್ಲೆಲ್ಲೂ ಚೀನೀ ಸೈನಿಕರ ದೇಹಗಳು ಚೆಲ್ಲಾಚೆದುರಾಗಿ ಬಿದ್ದಿದ್ದವು.
ಸುಮಾರು 60 ಯೋಧರು ಹೀಗೆ ಚೀನೀ ಸೈನಿಕರ ಮೇಲೆ ನುಗ್ಗಿ ದಾಳಿ ಮಾಡಿದ್ದಾರೆ. ಕರ್ನಲ್ ಹತ್ಯೆ ಅವರಲ್ಲಿ ಎಷ್ಟು ರೊಚ್ಚು ತುಂಬಿತ್ತು ಎಂದರೆ, ಈ ಕದನ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದಿದೆ. ಚೀನೀ ಸೈನಿಕರು ಈ ರೋಷಾವೇಶ ಕಂಡು ಸ್ಥಳದಿಂದ ಓಡಿಹೋಗಿದ್ದಾರೆ. ಅವರನ್ನು ಭಾರತೀಯ ಸೈನಿಕರು ಅಟ್ಟಿಸಿಕೊಂಡು ಹೋಗಿದ್ದರು.

ಬ್ರಿಟಿಷರು ಸ್ಥಾಪಿಸಿದ ತುಕಡಿ
ಬಿಹಾರ್ ರೆಜಿಮೆಂಟ್‌ನ ಮೂಲಸ್ಥಾನ ಬಿಹಾರ್ ರೆಜಿಮೆಂಟಲ್ ಸೆಂಟರ್ ಪಟನಾದ ದಾನಾಪುರ್ ಕಂಟೋನ್ಮೆಂಟ್‌ನಲ್ಲಿದೆ. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಲ್ಲಿ ಈ ಬಿಹಾರಿಗಳು ಬಹಳ ಬೇಕಾದವರಾಗಿದ್ದರು. ಭಾರತದಲ್ಲಿ ಬ್ರಿಟಿಷರ ಮೊದಲ ವಸಾಹತು ಸ್ಥಾಪಿಸಿದ ಲಾರ್ಡ್ ರಾಬರ್ಟ್ ಕ್ಲೈವ್, 1758ರಲ್ಲೇ ಬಿಹಾರಿಗಳ ಶೌರ್ಯ ಅರಿತು 34ನೇ ಸಿಪಾಯಿ ಬಟಾಲಿಯನ್ ರಚಿಸಿದ್ದ. ಇದು ಭೋಜಪುರ ಜಿಲ್ಲೆಯೊಂದರಿಂದಲೇ ಬಂದಿತ್ತು. ಶಹಾಬಾದ್ ಮತ್ತು ಮುಂಗೆರ್ ಪ್ರದೇಶಗಳು ಇನ್ನಿತರ ಯೋಧರ ನೆಲೆಗಳಾಗಿದ್ದವು. ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಅವರ ಸೈನ್ಯ ಕಾದಾಡಿದ ಬುಕ್ಸಾರ್, ಕರ್ನಾಟಕದ ಹಲವು ಮತ್ತು ಮರಾಠ ಕದನಗಳಲ್ಲಿ ಭಾಗವಹಿಸಿತ್ತು. ಸಮುದ್ರದಾಚೆಗೆ ಮಲಯಾ, ಸುಮಾತ್ರ, ಈಜಿಪ್ಟ್ ಮುಂತಾದ ಕಡೆಗಳಿಗೂ ಕಳಿಸಲ್ಪಟ್ಟು ತನ್ನ ಶೌರ್ಯವನ್ನು ತೋರಿತ್ತು.

ವಿಕ್ರಮಾದಿತ್ಯ ಅರ್ಪಣೆ
ಭಾರತ ನೌಕಾಪಡೆಯ ಅತಿ ದೊಡ್ಡ ಸಮರನೌಕೆ, ಯುದ್ಧವಿಮಾನ ಕ್ಯಾರಿಯರ್ ವಿಕ್ರಮಾದಿತ್ಯವನ್ನು ಬಿಹಾರ್
ತುಕಡಿಗೆ ಸಮರ್ಪಿಸಲಾಗಿದೆ. ಭಾರತೀಯ ಸೈನ್ಯದಲ್ಲೇ ಅತಿ ಹೆಚ್ಚಿನ ರಾಷ್ಟ್ರೀಯ ರೈಫಲ್ಸ್ ಬಟಾಲಿಯನ್(ನಾಲ್ಕು)ಗಳು ಈ ರೆಜಿಮೆಂಟ್‌ನಲ್ಲಿವೆ.

1857ರ ದಂಗೆ
ಬ್ರಿಟಿಷರ ವಿರುದ್ಧ ಭಾರತದಲ್ಲಿ ದಾಖಲಾದ ಮೊತ್ತಮೊದಲ ದಂಗೆಯಾದ, ಸಿಪಾಯಿ ದಂಗೆ ಎಂದೇ ಕರೆಯಲ್ಪಟ್ಟ 1857ರ ಸಮರದಲ್ಲಿ, ಆಂಗ್ಲರ ವಿರುದ್ಧ ರೊಚ್ಚಿಗೆದ್ದು ಹೋರಾಡಿದ ಸೈನ್ಯದ ತುಕಡಿಗಳಲ್ಲಿ ಬಿಹಾರ್ ರೆಜಿಮೆಂಟ್ ಒಂದು. ಕಾಡತೂಸುಗಳಿಗೆ ಹಸುವಿನ ಕೊಬ್ಬು ಸವರುವುದನ್ನು ಇವರು ಪ್ರಬಲವಾಗಿ ವಿರೋಧಿಸಿ ಹೋರಾಡಿದರು. ಇಬ್ಬರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಬಿರ್ಸಾ ಮುಂಡಾ ಮತ್ತು ಕನ್ವರ್ ಸಿಂಗ್ ಕೂಡ ಈ ಪ್ರಾಂತ್ಯದಿಂದಲೇ ಬಂದವರಾಗಿದ್ದರು. ಬಿಹಾರಿಗಳ ಈ ಆಂತರಿಕ ದಂಗೆಯಿಂದ ಅಪ್ರತಿಭರಾದ ಬ್ರಿಟಿಷರು, ಮುಂದೆ ಬಿಹಾರಿಗಳು ಸೇನೆ ಸೇರುವುದಕ್ಕೆ ತಡೆ ಹಾಕಿದರು.

ಪ್ರಮುಖ ಯುದ್ಧಗಳಲ್ಲಿ ಭಾಗಿ
ಭಾರತ ಕಂಡ ಮೊದಲ ಯುದ್ಧದಲ್ಲೇ ಬಿಹರಿ ತುಕಡಿ ಭಾಗವಹಿಸಿತ್ತು. 1947ರಲ್ಲಿ ಭಾರತ ವಿಭಜನೆಗೊಂಡು ಎರಡು ದೇಶಗಳಾದಾಗ, ಕ್ಷಿಪ್ರ ಅವಧಿಯಲ್ಲಿ ಪಾಕಿಸ್ತಾನ 1948ರಲ್ಲಿ ಭಾರತದ ಮೇಲೆ ಬಿದ್ದಿತ್ತು. ಆಗ ಕಾಶ್ಮೀರದಲ್ಲಿ ಭಾರತದ ಕಾಲಾಳುಗಳಾಗಿ ಮಹತ್ವದ ಹೋರಾಟ ನೀಡಿ ಪಠಾಣ ಸೈನಿಕರನ್ನು ಹಿಮ್ಮೆಟ್ಟಿಸಿದವರು ಇವರೇ. 1965ರಲ್ಲಿ ಭಾರತ- ಪಾಕ್ ಯುದ್ಧ ನಡೆದಾಗ, ಬಿಹಾರ ರೆಜಿಮೆಂಟ್ ಬೆಡೋರಿಯನ್ನು ವಶಪಡಿಸಿಕೊಂಡು ಹಾಜಿ ಪೀರ್ ಪಾಸ್ ತನಕ ಮುನ್ನಡೆದಿತ್ತು. 1971ರಲ್ಲಿ ನಡೆದ ಬಾಂಗ್ಲಾದೇಶ ಮುಕ್ತಿ ಸಮರದಲ್ಲಿ 10 ಬಿಹಾರ್ ತುಕಡಿ ಅಖೌರದಲ್ಲಿ ನೀಡಿದ ಶೌರ್ಯಮಯ ಹೋರಾಟಕ್ಕಾಗಿ ಅದೇ ಹೆಸರಿನ ಗೌರವನ್ನು ತನ್ನದಾಗಿಸಿಕೊಂಡಿತು. ಅದರ ಕಮಾಂಡಿಂಗ್ ಆಫೀಸರ್ ಪಿ.ಸಿ.ಸಾಹ್ನಿಗೆ ವೀರಚಕ್ರ ಕೊಡಲ್ಪಟ್ಟಿತ್ತು. ಅದೇ ಯುದ್ಧದಲ್ಲಿ 11 ಬಿಹಾರ್ ತುಕಡಿಯು ಸಮುದ್ರದ ಮೂಲಕ ಕಾಕ್ಸ್ ಬಜಾರ್ಗೆ ನುಗ್ಗಿ, ಅಲ್ಲಿಂದ ಬರ್ಮಾಗೆ ಪರಾರಿಯಾಗಲಿದ್ದ ಪಾಕ್ ತುಕಡಿಯನ್ನು ತಡೆದಿತ್ತು.

ಶಾಂತಿ ಸ್ಥಾಪನಾ ಪಡೆ
ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ಭಾರತ ಕಳುಹಿಸುವ ಶಾಂತಿಪಾಲನಾ ಪಡೆಯಲ್ಲಿ ಬಿಹಾರಿ ರೆಜಿಮೆಂಟ್ ಪ್ರಮುಖ ಪಾಲು ಪಡೆಯುತ್ತ ಬಂದಿದೆ. 1993-94ರಲ್ಲಿ ಸೊಮಾಲಿಯಾ, 2004, 09, ಹಾಗೂ 2014ರಲ್ಲಿ ಕಾಂಗೋದಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ.

ಕಾರ್ಗಿಲ್‌ನ ಯೋಧರು
1999ರಲ್ಲಿ ಪಾಕಿಸ್ತಾನದ ಸೈನಿಕರು ಚಳಿಗಾಲದಲ್ಲಿ ಕಳ್ಳರಂತೆ ಬಂದು ಭಾರತದ ನೆಲವನ್ನು ವಶಪಡಿಸಿಟ್ಟುಕೊಂಡಾಗ, ಅವುಗಳನ್ನು ಮರಳಿ ಪಡೆಯಲು ನಡೆಸಿದ ಹೋರಾಟದಲ್ಲಿ ಇವರು ಧೀರೋದಾತ್ತ ಸಮರಕೌಶಲವನ್ನೇ ಪ್ರದರ್ಶಿಸಿದರು. ಜುಬೆರ್ ಹಿಲ್ ಮತ್ತು ತರು ಎಂಬ ಎರಡು ಶಿಖರಗಳನ್ನು ಇವರೇ ಪಾಕ್ ಸೈನಿಕರಿಂದ ಮರಳಿ ಕಿತ್ತುಕೊಂಡರು. ಇದರಲ್ಲಿ ಹಲವು ಗೌರವಗಳು ಈ ಬಟಾಲಿಯನ್ ಪಾಲಾದವು.

ಪ್ರಶಸ್ತಿ ಪುರಸ್ಕಾರಗಳು
ಭಾರತೀಯ ಸೈನ್ಯದಲ್ಲಿ ಹೆಚ್ಚಿನ ಗೌರವ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಪಡೆಯಿದು. ಇದುವರೆಗೆ 7 ಅಶೋಕ ಚಕ್ರಗಳು, 35 ಪರಮವಿಶಿಷ್ಟ ಸೇವಾ ಫಲಕ, 9 ಮಹಾವೀರಚಕ್ರ, 21 ಕೀರ್ತಿ ಚಕ್ರ, 49 ಅತಿವಿಶಿಷ್ಟ ಸೇವಾ ಫಲಕ, 49 ವೀರಚಕ್ರ, 70 ಶೌರ್ಯಚಕ್ರ- ಇನ್ನೂ ಹತ್ತಾರು ಬಗೆಯ ಫಲಕ, ಮೆಡಲ್, ಗೌರವಗಳನ್ನು ಗಳಿಸಿದೆ. 26/11ರ ಮುಂಬಯಿ ಭಯೋತ್ಪಾದಕ ದಾಳಿಯ ವೇಳೆ ಶೌರ್ಯ ಪ್ರದರ್ಶಿಸಿ ಮಡಿದ ಸಂದೀಪ್ ಉನ್ನಿಕೃಷ್ಣನ್ ಇದೇ ಪಡೆಯವರಾಗಿದ್ದು, ಅಶೋಕಚಕ್ರ ಪಡೆದಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top