ಮುಂದಿನ ದಿನಗಳಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ. ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ, ಅನ್‌ಲಾಕ್ 1.0 ಜಾರಿಯ ಪರಿಣಾಮ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು 15 ರಾಜ್ಯಗಳ ಸಿಎಂಗಳೊಂದಿಗೆ ಬುಧವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಕೋವಿಡ್ ಸಂದರ್ಭ ಬಳಸಿಕೊಂಡು ಆರೋಗ್ಯ ಸೇವೆಗಳ ವಿಸ್ತರಣೆಗೆ ನಾವು ಒತ್ತು ನೀಡಬೇಕೆಂಬ ಆಶಯವನ್ನೂ ಅವರು ಪ್ರತಿಪಾದಿಸಿದ್ದಾರೆ. ಮತ್ತೊಮ್ಮೆ ಲಾಕ್‌ಡೌನ್ ಮಾಡಲಾಗುವುದಿಲ್ಲ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.
ಆರ್ಥಿಕತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರಕಾರ ಆತ್ಮನಿರ್ಭರ ಪ್ಯಾಕೇಜ್ ಘೋಷಿಸಿದೆ. ಇದರಿಂದ ಆರ್ಥಿಕ ಚಟುವಟಿಕೆ ಚುರುಕಾಗಬಹುದು ಎಂಬ ವಿಶ್ವಾಸವಿದೆ. ಆದರೆ ಈ ಪ್ಯಾಕೇಜ್‌ನ ನಾನಾ ಅಂಗಗಳು ನೇರವಾಗಿ ಪ್ರಜೆಗಳ ಕೈಗೆ ಲಾಭ ಮಾಡಿಕೊಡುವಂತಿಲ್ಲ. ಉದಾಹರಣೆಗೆ, ಸಾಲದ ಇಎಂಐಗಳ ಮೇಲೆ ನೀಡಲಾಗಿರುವ ಪಾವತಿ ಮುಂದೂಡಿಕೆ ಸೌಲಭ್ಯದಿಂದ ಗ್ರಾಹಕರಿಗೆ ಹೆಚ್ಚಿನ ಲಾಭವೇನಿಲ್ಲ ಹಾಗೂ ಇದರಿಂದ ಇಎಂಐ ಹಾಗೂ ಬಡ್ಡಿ ಹೊರೆ ಹೆಚ್ಚಲಿದೆ ಎಂಬುದು ಕೂಡ ಗೊತ್ತಾಗಿದೆ. ಇಎಂಐ ಸಲ್ಲಿಕೆಯ ಅವಧಿಯನ್ನು ಮಂದೂಡಿದ ಬಳಿಕ ಅದೇ ಅವಧಿಗೆ ಬಡ್ಡಿ ದರವನ್ನು ವಿಧಿಸಿದರೆ, ಮುಂದೂಡಿಕೆಯ ಉದ್ದೇಶ ಈಡೇರಿದಂತಾಗುವುದಿಲ್ಲ. ಹೀಗಾಗಿ ಬಡ್ಡಿ ವಿಧಿಸುವುದರಲ್ಲಿ ಅರ್ಥವಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಕೇಂದ್ರವನ್ನು ಟೀಕಿಸಿದೆ. ಇಂಥ ಕ್ರಮಗಳು ಆರ್ಥಿಕ ಪುನಶ್ಚೇತನದಲ್ಲಿ ಎಷ್ಟರ ಮಟ್ಟಿಗೆ ಪಾತ್ರ ವಹಿಸುತ್ತವೆ ಎಂಬುದು ಕೂಡ ವಿವಾದಾಸ್ಪದ.
ಪ್ಯಾಕೇಜ್ ಘೋಷಿಸಿದರೆ ಸಾಲದು, ಅದನ್ನು ಜಾರಿ ಮಾಡುವಲ್ಲಿ ಕೇಂದ್ರ ಸರಕಾರ ನಿರ್ಣಯಾತ್ಮಕವಾದ ಒಂದು ನಾಯಕತ್ವವನ್ನು ತೆಗೆದುಕೊಳ್ಳಬೇಕು. ಹಾಗೆಯೇ ರಾಜ್ಯ ಸರಕಾರಗಳು ಕೂಡ ಅದನ್ನು ಪಡೆಯುವುದರ ಜೊತೆಗೆ ನಾಡು ಕಟ್ಟುವಲ್ಲಿ ಕೇಂದ್ರಕ್ಕೆ ಸಮಗ್ರ ಸಹಕಾರವನ್ನು ಒದಗಿಸಬೇಕು. ಒಗ್ಗಟ್ಟಂತೂ ಇಂಥ ಸಂದರ್ಭದಲ್ಲಿ ಅತ್ಯವಶ್ಯಕ. ತಾವು ಕೈಗೊಂಡ ಕ್ರಮಗಳನ್ನು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾನ್ಫರೆನ್ಸ್ ಸಂದರ್ಭದಲ್ಲಿ ನೀಡಿದ್ದಾರೆ. ರಾಜ್ಯದಲ್ಲಿ ನಡೆಸಿದ ಮನೆ ಮನೆ ಸಮೀಕ್ಷೆ, ಸೋಂಕು ತಗುಲುವ ಸಾಧ್ಯತೆಯಿರುವ ವ್ಯಕ್ತಿಗಳ ಮಾಹಿತಿ, ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳ, ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸಲು ಟೆಲಿ ಐಸಿಯು ವ್ಯವಸ್ಥೆ ಇತ್ಯಾದಿ ಮಾಹಿತಿ ನೀಡಿದ್ದಾರೆ. ಕೋವಿಡ್ ನಿಯಂತ್ರಣದ ಸಂದರ್ಭದಲ್ಲಂತೂ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಹೊಂದಿರುವ ಬಲಿಷ್ಠ ಅಧಿಕಾರದ ಗುರುತ್ವ ಈ ಸಂದರ್ಭದಲ್ಲಿ ಪರಿಣಾಮಕಾರಿ ಆಗಿದೆ. ಈ ಬಲವನ್ನು ಕೇಂದ್ರ ಸರಕಾರ ಗೌರವಿಸಿ, ಮುಂದಿನ ದಿನಗಳಲ್ಲಿ, ಆರ್ಥಿಕ ವ್ಯವಸ್ಥೆಯ ಪುನಶ್ಚೇತನ ಸಂದರ್ಭದಲ್ಲಿ ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಮುಂದಾಗಬೇಕು.
ಆರ್ಥಿಕ ವ್ಯವಸ್ಥೆಯ ಚೇತರಿಕೆ ವಿಚಾರವನ್ನು ನಾವು ಮಾತಾಡುತ್ತಿರುವ ಸಂದರ್ಭದಲ್ಲಿಯೇ ಕೋವಿಡ್ ಸೋಂಕು ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕಿದೆ. ಈ ಸೋಂಕು ನಮ್ಮ ಜೊತೆಗೆ ಇನ್ನೂ ಬಹಳ ಕಾಲ ಇರಲಿದ್ದು, ಅದರೊಂದಿಗೆ ಹೋರಾಡುತ್ತಲೇ ನಾವು ಬದುಕು ಕಟ್ಟಿಕೊಳ್ಳಬೇಕಿದೆ ಎಂಬುದನ್ನು ಪ್ರಧಾನಿ ಹೇಳಿದ್ದಾರೆ. ಆದರೆ ಆರ್ಥಿಕ ಪುನಾರಚನೆಯಲ್ಲಿ ಒಂದು ದೂರದೃಷ್ಟಿಯ ಕೊರತೆಯಿದೆ. ಕೇಂದ್ರ ಕೇವಲ ಉಪದೇಶ ನೀಡಿದರೆ ಸಾಲದು; ಹಾಗೇ ರಾಜ್ಯಗಳು ಕೇವಲ ಕೈಯೊಡ್ಡಿದರೆ ಸಾಲದು. ಉದ್ಯಮಗಳನ್ನು ಪುನಶ್ಚೇತನಗೊಳಿಸುವ, ಅವುಗಳನ್ನು ಎರಡು ಮತ್ತು ಮೂರನೇ ಹಂತದ ನಗರಗಳಿಗೆ ವಿಸ್ತರಿಸುವ, ಗ್ರಾಮೀಣ ಪ್ರದೇಶಗಳಲ್ಲೂ ಉದ್ಯೋಗ ಸೃಷ್ಟಿಸುವ, ದುಡಿಯುವ ಜನತೆಗೆ ದುಡಿದ ಹಣ ಕೈಯಲ್ಲಿ ಉಳಿಯುವಂತೆ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆಗ ಆತ್ಮನಿರ್ಭರತೆಯ ಹಾದಿ ಸುಗಮವಾಗಬಹುದು.