ಚೀನಾವನ್ನು ಕಟ್ಟಿ ಹಾಕೋಣ – ಆರ್ಥಿಕ, ರಾಜತಾಂತ್ರಿಕ ಮಾರ್ಗವೇ ಸೂಕ್ತ

ಐದು ವಾರಗಳಿಂದ ಪೂರ್ವ ಲಡಾಖ್ ಗಡಿಯಲ್ಲಿ ನಿಂತಿದ್ದ ಭಾರತ ಮತ್ತು ಚೀನಾ ಸೇನಾಪಡೆಗಳು ಹಿಂದೆ ಸರಿಯುತ್ತಿದ್ದ ಹೊತ್ತಿನಲ್ಲಿಯೇ ಸಂಘರ್ಷ ಭುಗಿಲೆದ್ದಿದ್ದು, ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಗಡಿ ಸಂಘರ್ಷ ಶಮನಗೊಳಿಸಲು ರಾಜತಾಂತ್ರಿಕ ಮತ್ತು ಸೇನಾಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮತ್ತೆ ಉದ್ವಿಗ್ನತೆ ತಲೆದೋರಿರುವುದು ಗಡಿ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ.
ಚೀನಾ ಭಾರತದ ಜೊತೆಗೆ ಗಡಿಯ ವಿಚಾರದಲ್ಲಿ ನಿತ್ಯ ರಂಪಾಟ ಮಾಡಿಕೊಂಡೇ ಬರುತ್ತಿದೆ. ಜೊತೆಗೆ, ಪಾಕಿಸ್ತಾನ ಮತ್ತು ನೇಪಾಳದಂಥ ರಾಷ್ಟ್ರಗಳನ್ನೂ ಭಾರತದ ವಿರುದ್ಧ ಎತ್ತಿಕಟ್ಟುತ್ತಿದೆ. ಇಷ್ಟಾಗಿಯೂ ಚೀನಾದ ವಿಸ್ತರಣಾ ನೀತಿಯನ್ನು ಸೇನಾ ಬಲದ ಮೂಲಕ ಹಿಮ್ಮೆಟ್ಟಿಸುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ. ಹಾಗಂತ, ‘ತಲೆ ಗಟ್ಟಿ ಇದೆ ಎಂದು ಬಂಡೆಗೆ ಗುದ್ದಬೇಕಿಲ್ಲ’. ಚೀನಾದ ವಿರುದ್ಧ ಸೇನಾ ಪ್ರಾಬಲ್ಯ ಮಾತ್ರವಲ್ಲದೇ, ರಾಜತಾಂತ್ರಿಕ ಮತ್ತು ಆರ್ಥಿಕ ನೀತಿಗಳ ಮೂಲಕ ಅದನ್ನು ಸದ್ದಡಗಿಸುವುದೇ ಜಾಣತನ ಎನಿಸಿಕೊಳ್ಳುತ್ತದೆ.
ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ಚೀನಾ ಇಡೀ ವಿಶ್ವದ ಕೆಂಗೆಣ್ಣಿಗೆ ಗುರಿಯಾಗಿದೆ. ಈ ವೈರಾಣು ಇಡೀ ಪ್ರಪಂಚದಾದ್ಯಂತ ಹರಡಲು ಚೀನಾ ಮರೆ ಮಾಚಿದ ಮಾಹಿತಿಯೇ ಕಾರಣ ಎಂಬುದು ಬಹುತೇಕ ರಾಷ್ಟ್ರಗಳ ಆರೋಪ. ಹಾಗಾಗಿ, ಅದು ಈಗ ಅಕ್ಷರಶಃ ಅಂತಾರಾಷ್ಟ್ರೀಯವಾಗಿ ಏಕಾಂಗಿಯಾಗಿದೆ. ಇದೇ ಪರಿಸ್ಥಿತಿಯನ್ನು ಭಾರತವು ತನ್ನ ಪರವಾಗಿಸಿಕೊಂಡು ರಾಜತಾಂತ್ರಿಕವಾಗಿ ಚೀನಾವನ್ನು ಹಣಿಯುವ ಕೆಲಸಕ್ಕೆ ಮುಂದಾಗಬೇಕು. ಚೀನಾದ ವಿರುದ್ಧ ಒಂದು ಕೂಟವನ್ನು ರಚಿಸಲು ಇದು ಸೂಕ್ತ ಸಮಯವಾಗಿದೆ.
ಇನ್ನು ಆರ್ಥಿಕ ನೆಲೆಯಲ್ಲಿ ನೋಡುವುದಾದರೆ, ಚೀನಾಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದೆ. ವರ್ಷಕ್ಕೆ ಭಾರತವು ಚೀನಾದಿಂದ 5.60 ಲಕ್ಷ ಕೋಟಿ ರೂಪಾಯಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ, ರಫ್ತು ಮೌಲ್ಯ ಕೇವಲ 1.34 ಲಕ್ಷ ಕೋಟಿ ರೂ. ಅದರರ್ಥ ಚೀನಾದ ವ್ಯಾಪಾರ ವಹಿವಾಟಿಗೆ ಬಲವಾದ ಪೆಟ್ಟು ನೀಡಿದರೆ ಸಹಜವಾಗಿಯೇ ಅದರ ಶಕ್ತಿ ಉಡುಗಿಹೋಗಲಿದೆ. ಆದರೆ, ಇದು ಅಷ್ಟು ಸರಳವೂ ಅಲ್ಲ. ಹಾಗಂತ ಅಸಾಧ್ಯವಾದುದು ಏನಲ್ಲ. ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ನೀತಿಯೇ ಇದಕ್ಕೆ ರಾಮಬಾಣವಾಗಬಲ್ಲದು. ಪ್ರತಿ ಭಾರತೀಯ ಚೀನಿ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಇದನ್ನು ಸಾಕಾರಗೊಳಿಸಬಹುದು. ಹೊಸ ಕಾಲದ ಯುದ್ಧವೆಂದರೆ ರಣಾಂಗಣದಲ್ಲಿ ನಿಂತು ಪರಸ್ಪರ ಸೆಣೆಸಾಡುವುದಲ್ಲ. ಬದಲಾಗಿ ಆರ್ಥಿಕವಾಗಿ ಒಂದು ದೇಶದ ಶಕ್ತಿಯನ್ನು ಕುಂದಿಸುವುದೇ ಆಗಿದೆ. ಆ ಹಾದಿಯನ್ನು ಭಾರತ ತುಳಿಯುವ ಕಾಲ ಸನ್ನಿಹಿತವಾಗಿದೆ. ಇದು ಕೇವಲ ಸರಕಾರದಿಂದ ಮಾತ್ರವೇ ಆಗುವಂಥದ್ದಲ್ಲ. ಇದಕ್ಕೆ ಪ್ರತಿ ನಾಗರಿಕನ ಸಹಭಾಗಿತ್ವ ಅಗತ್ಯ.
ಇನ್ನು ಮಿಲಿಟರಿ ಸಾಮರ್ಥ್ಯವು ಚೀನಾಗಿಂತ ತೀರಾ ಕಡಿಮೆ ಏನಿಲ್ಲ. 1962ರ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಅಜಗಜಾಂತರವಿದೆ. ಅಂದು ಕೂಡ ಗಡಿಯನ್ನು ನೆಪವಾಗಿಟ್ಟು ಚೀನಾ ಯುದ್ಧ ಸಾರಿತು. ಆ ವೇಳೆ ಭಾರತಕ್ಕೆ ಹಿನ್ನಡೆಯಾಗಿತ್ತು ಎಂಬುದು ಸತ್ಯ. ಆದರೆ, ಇದೀಗ 1962ರ ಭಾರತವೂ ಇಲ್ಲ; ಜಗತ್ತೂ ಇಲ್ಲ; ಎಲ್ಲವೂ ಬದಲಾಗಿದೆ. ಏಟಿಗೆ ಎದಿರೇಟು ನೀಡುವ ಶಕ್ತಿ, ಸಾಮರ್ಥ್ಯ ಹೊಸ ಭಾರತಕ್ಕಿದೆ. ಹಾಗಾಗಿ ಪದೇ ಪದೇ ಗಡಿ ವಿಷಯವಾಗಿ ಕಾಲುಕೆರೆದು ಜಗಳಕ್ಕೆ ನಿಲ್ಲುವ ಚಾಳಿಯನ್ನು ಚೀನಾ ಕೈಬಿಡಬೇಕು. ಅಂತಾರಾಷ್ಟ್ರೀಯವಾಗಿ ಅನೇಕ ಸಂಗತಿಗಳಲ್ಲಿ ಚೀನಾಗೆ ಪ್ರತ್ಯುತ್ತರವನ್ನು ನೀಡಿದ ಏಕೈಕ ರಾಷ್ಟ್ರ ಭಾರತ. ಚೀನಾದ ಮಹತ್ವಾಕಾಂಕ್ಷೆಯ ಒಬಿಆರ್‌ಒ, ಮುಕ್ತ ವ್ಯಾಪಾರ ಒಪ್ಪಂದ ಆರ್‌ಸಿಇಪಿಗೆ ವಿರೋಧ, ಅಮೆರಿಕದ ಪರ ನಿಲುವು ಸೇರಿದಂತೆ ಅನೇಕ ಬಾರಿ ಚೀನಾಗೆ ಭಾರತ ಠಕ್ಕರ್ ನೀಡಿದೆ. ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಗಡಿಯಲ್ಲಿ ಸಂಘರ್ಷ ಮಾಡುವುದನ್ನು ಚೀನಾ ಇನ್ನು ಬಿಡುವುದು ಒಳ್ಳೆಯದು. ಜಗತ್ತು ಈಗ ಮತ್ತಷ್ಟು ಬದಲಾಗಿದೆ. ಇದನ್ನು ಅರಿತು ಚೀನಾ ಸಂಘರ್ಷಕ್ಕಿಂತ ಸ್ನೇಹ, ಪ್ರಜಾಸತ್ತಾತ್ಮಕ ತತ್ವವನ್ನು ಅರಿಯವುದು ಒಳ್ಳೆಯದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top