ಭಾರತ ಜತೆ ನೇರವಾಗಿ ಮುಖಾಮುಖಿಯಾಗದ ಚೀನಾ ದೇಶವು ನೇಪಾಳ, ಪಾಕಿಸ್ತಾನಗಳ ಮೂಲಕ ಗಡಿಯಲ್ಲಿ ತಂಟೆಯನ್ನು ಜೀವಂತವಾಗಿಟ್ಟಿರುತ್ತದೆ. ಭಾರತದಲ್ಲಿರುವ ಗಡಿಗಳನ್ನು ತನ್ನದೆಂದು ನೇಪಾಳ ಹೊಸ ನಕಾಶೆಯನ್ನು ಬಿಡುಗಡೆ ಮಾಡಿದ್ದು, ಈ ನಡೆಯ ಹಿಂದೆ ಚೀನಾದ ಕುಮ್ಮಕ್ಕಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.
ಭಾರತದ ಗಡಿಯಲ್ಲಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರಾ ಪ್ರದೇಶಗಳನ್ನು ತನ್ನದೆಂದು ಸಾಬೀತುಪಡಿಸಲು ಈ ಪ್ರದೇಶಗಳನ್ನು ಒಳಗೊಂಡ ಹೊಸ ರಾಜಕೀಯ ನಕಾಶೆಯನ್ನು ನೇಪಾಳ ಬಿಡುಗಡೆ ಮಾಡಿದೆ. ಈ ಮೂಲಕ ಭಾರತ ಮತ್ತು ನೇಪಾಳ ಮಧ್ಯೆ ಗಡಿ ಸಮಸ್ಯೆ ತಲೆದೋರಿದೆ. ಈ ಮೂರೂ ಪ್ರದೇಶಗಳನ್ನು ತನ್ನದೆಂದು ಹೇಳುತ್ತಿರುವ ನೇಪಾಳ ಇದಕ್ಕಾಗಿ ಸಂಸತ್ತಿನಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲು ಮುಂದಾಗಿದ್ದು, ಈ ಬಗ್ಗೆ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿದೆ.
ಕಾಲಾಪಾನಿ ಭೂ ವಿವಾದವು ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವಾಗಿದೆ ಎಂದು ಚೀನಾ ಮಂಗಳವಾರಷ್ಟೇ ಹೇಳಿದೆ. ಆದರೆ, ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನರವಾನೆ ಅವರ ಎಣಿಕೆಯ ನಂಬಿಕೆಯೇ ಬೇರೆಯದ್ದಾಗಿದೆ. ನೇಪಾಳದ ನಡೆಯ ಹಿಂದೆ ಚೀನಾದ ಕೈವಾಡ ಇರಬಹುದು ಎಂಬುದು ಅವರ ಅಂದಾಜು. ಯಾಕೆಂದರೆ, ದಾರ್ಚುಲಾದಿಂದ ಲಿಪುಲೇಖ ಪಾಸ್ಗೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆಯನ್ನು ಭಾರತ ಇತ್ತೀಚೆಗಷ್ಟೇ ಉದ್ಘಾಟನೆ ಮಾಡಿತ್ತು. ನೇಪಾಳವು ಇದನ್ನು ವಿರೋಧಿಸಿತ್ತು. ಆಗ ಸೇನಾ ಮುಖ್ಯಸ್ಥ ಎಂ ಎಂ ನರವಾನೆ ಅವರು, ‘‘ನೇಪಾಳದ ಹಿಂದೆ ಬೇರೋಬ್ಬರ ಆಕ್ಷೇಪ ಅಡಗಿದೆ,’’ ಎಂದು ಕಳೆದ ವಾರ ಹೇಳಿದ್ದರು. ಇಲ್ಲಿ‘ಬೇರೊಬ್ಬರು’ ಎಂದು ಚೀನಾ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಈ ಹಿಂದಿನ ಕತೆ ಏನು?
ಭಾರತ ಮತ್ತು ನೇಪಾಳ 1,800 ಕಿ.ಮೀ ಗಡಿಯನ್ನು ಹಂಚಿಕೊಂಡಿವೆ. ಕಳೆದ ವರ್ಷ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಹೊಸ ರಾಜಕೀಯ ನಕಾಶೆಯನ್ನು ಬಿಡುಗಡೆ ಮಾಡಿದಾಗ ಅದರಲ್ಲಿನೇಪಾಳದ ಗಡಿ ಹಂಚಿಕೊಂಡಿರುವ ಕಾಲಾಪಾನಿ ಮತ್ತು ಲಿಪುಲೇಖ ಪ್ರದೇಶಗಳನ್ನು ಸೇರ್ಪಡೆ ಮಾಡಿತ್ತು. ಆದರೆ, ತನ್ನ ಗಡಿಯನ್ನು ನೇಪಾಳದೊಂದಿಗೆ ಪರಿಷ್ಕರಿಸಿಲ್ಲ ಎಂದು ಭಾರತವು ಸ್ಪಷ್ಟಪಡಿಸಿತ್ತು. ಕೈಲಾಸ ಮಾನಸ ಸರೋವರ ಮಾರ್ಗ ಮತ್ತು ಲಿಪುಲೇಖ ಪಾಸ್ ಸಂಪರ್ಕಿಸುವ ರಸ್ತೆಯನ್ನು ಭಾರತ ಉದ್ಘಾಟಿಸಿದ ಮೇಲಂತೂ ನೇಪಾಳ ಹಾಗೂ ಭಾರತದ ಮಧ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇತಿಹಾಸ ಏನು ಹೇಳುತ್ತದೆ?
ಕಾಲಾಪಾನಿಯು ಚೀನಾ-ನೇಪಾಳ-ಭಾರತವನ್ನು ಒಳಗೊಂಡಿರುವ 372 ಕಿ.ಮೀ ವಿಸ್ತಾರದ ಜಂಕ್ಷ ನ್ ಆಗಿದೆ. ಕಾಲಾಪಾನಿ ಉತ್ತರಾಖಂಡದ ಭಾಗ ಎಂದು ಭಾರತ ಹೇಳಿದರೆ, ನೇಪಾಳ ಆ ಪ್ರದೇಶವನ್ನು ತನ್ನ ನಕಾಶೆಗೆ ಸೇರ್ಪಡೆ ಮಾಡಿಕೊಂಡಿದೆ. 1816ರಲ್ಲಿ ನೇಪಾಳ ಮತ್ತು ಬ್ರಿಟಿಷ್ ಇಂಡಿಯಾ ಮಾಡಿಕೊಂಡಿದ್ದ ಸುಗೌಳಿ ಒಪ್ಪಂದದ ಪ್ರಕಾರ, ಕಾಲಾಪಾನಿ ಪ್ರದೇಶದ ಮೂಲಕ ಹರಿಯುವ ಮಹಾಕಾಳಿ ನದಿಯೇ ಉಭಯ ರಾಷ್ಟ್ರಗಳ ನಡುವಿನ ಗಡಿ ಎಂದು ಹೇಳಲಾಗಿತ್ತು. ಹೀಗಿದ್ದಾಗ್ಯೂ, ಅನೇಕ ಉಪನದಿಗಳನ್ನು ಹೊಂದಿರುವ ಮಹಾಕಾಳಿ ನದಿಯ ಉಗಮ ಸ್ಥಾನವನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬ್ರಿಟಿಷ್ ಸರ್ವೇಯರ್ಗಳು ಗುರುತಿಸಿದ್ದರು. ಆದರೆ, ವಿವಾದಿತ ಪ್ರದೇಶದ ಪಶ್ಚಿಮಕ್ಕೆ ಮುಖ್ಯ ನದಿಯ ಮೂಲ ಇದೆ. ಅದು ನೇಪಾಳ ವ್ಯಾಪ್ತಿಯಲ್ಲಿರುವುದರಿಂದ ಕಾಲಾಪಾನಿ ಸಹಜವಾಗಿಯೇ ತನ್ನದು ಎಂದು ಹೇಳಿಕೊಂಡಿತ್ತು. ಆ ಪ್ರದೇಶವು ತನ್ನದು ಎಂದು ಹೇಳಿಕೊಳ್ಳಲು ಭಾರತದ ಕೂಡ ಅನೇಕ ಕಡೆ ನದಿಯ ಉಗಮ ಸ್ಥಾನವನ್ನು ಗುರುತಿಸಿದೆ.