ಚೀನಾದ ದಾಹ ಮಣಿಸಿದ ಭಾರತದ ವ್ಯೂಹ

– ಡ್ರ್ಯಾಗನ್ ದೇಶದ ಕ್ಷುದ್ರತನಕ್ಕೆ ಎದುರೇಟು ನೀಡಲು ಮುಂದಾಗಿದೆ ಅಂತಾರಾಷ್ಟ್ರೀಯ ಸಮುದಾಯ.

– ಹರಿಪ್ರಕಾಶ್ ಕೋಣೆಮನೆ.

ಇದುವರೆಗೆ ಭಾರತದ ಪಾಲಿಗೆ ಗಡಿಯಲ್ಲಿ ಮತ್ತು ಉಡಿಯಲ್ಲಿ ಕಟ್ಟಿಕೊಂಡ ಕೆಂಡದಂತಿದ್ದ ಚೀನಾ, ಈಗ ಕರಕಲಾದ ಇದ್ದಿಲಿನಂತಾಗಿದೆ ಎಂದರೆ ಉತ್ಪ್ರೇಕ್ಷೆ ಆಗದು. ಅಮೆರಿಕಾಗೆ ಸಡ್ಡು ಹೊಡೆದು ಜಾಗತಿಕ ಪರ್ಯಾಯ ಶಕ್ತಿಯಾಗುವೆ ಎಂದು ಜಗತ್ತಿನ ಎದುರು ಬೀಗುತ್ತಿದ್ದ ಆ ರಾಷ್ಟ್ರ ಸದ್ಯಕ್ಕಂತೂ ಏಕಾಂಗಿಯಾಗಿದೆ. ಸ್ವಾರಸ್ಯ ಎಂದರೆ, ಚೀನಾ ವಿರುದ್ಧವೇ ಜಾಗತಿಕ ಒಕ್ಕೂಟ ರಚನೆಯಾಗುವ ಮುನ್ಸೂಚನೆಗಳು ಕಾಣುತ್ತಿವೆ. ನಿಜವಾಗಿಯೂ ಚೀನಾಗೆ ಜಾಗತಿಕ ಶಕ್ತಿಯಾಗುವ ಅರ್ಹತೆ ಮತ್ತು ಯೋಗ್ಯತೆ ಇತ್ತೇ? ಇತಿಹಾಸ ಮೆಲುಕು ಹಾಕುತ್ತ, ವರ್ತಮಾನವನ್ನು ವಿಶ್ಲೇಷಿಸುತ್ತಾ, ಭವಿಷ್ಯದ ದೃಷ್ಟಿಯಿಂದ ಒಂದು ವಸ್ತುನಿಷ್ಠ ಅವಲೋಕನ ಮಾಡೋಣ ಬನ್ನಿ.

ಚೀನಾ ಹುಲಿಯೋ, ಇಲಿಯೋ?
1965ರ ಘಟನೆ. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ತೋರಿದ ಅಸಡ್ಡೆ ಹಾಗೂ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಕೃಷ್ಣ ಮೆನನ್ ಅವರ ದೌರ್ಬಲ್ಯಗಳ ಕಾರಣದಿಂದಾಗಿ, ಚೀನಾ ಜತೆ ನಡೆದ ಯುದ್ಧದಲ್ಲಿ ಭಾರತ ಸೋಲು ಅನುಭವಿಸಿತು ಎಂಬುದು ಎಲ್ಲರಿಗೂ ಗೊತ್ತಿರುವ ಇತಿಹಾಸ.
ಯುದ್ಧ ಗೆದ್ದ ಅಮಲಿನಲ್ಲಿದ್ದ ಚೀನಾ ಭಾರತದ ಅವಿಭಾಜ್ಯ ಅಂಗವಾಗಿದ್ದ ಸಿಕ್ಕಿಂ(ಆಗ ಭಾರತದ ಅರಸೊತ್ತಿಗೆ ಪ್ರಾಂತ್ಯ) ಮೇಲೆ ಆಕ್ರಮಣ ಮಾಡಲು ಹೊಂಚು ಹಾಕಿತ್ತು. ಇದಕ್ಕಾಗಿ ಚೀನಾ ಅತ್ಯಂತ ಕ್ಷುಲ್ಲಕ ಹಾಗೂ ಬಾಲಿಶವಾದ ನೆಪವನ್ನು ಒಡ್ಡಿತು. ‘‘ಯುದ್ಧಾ ನಂತರ ಭಾರತದ ಸೈನಿಕರು ಚೀನಾದ 800 ಕುರಿ ಹಾಗೂ 59 ಯಾಕ್(ಚಮರಿ ಮೃಗ)ಗಳನ್ನು ಕಳವು ಮಾಡಿದ್ದಾರೆ,’’ ಎಂದು ಆರೋಪಿಸಿ ಭಾರತ ಸರಕಾರಕ್ಕೆ ಪತ್ರ ಬರೆಯಿತು. ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ಅಂದಿನ ಸರಕಾರ ತಲೆಕೆಡಿಸಿಕೊಂಡು ಕುಳಿತಿದ್ದಾಗ, ಅಂದಿನ ಜನಸಂಘದ ಅಗ್ರಪಂಕ್ತಿಯ ನೇತಾರ, 42ರ ಹರೆಯದ ಸಂಸದ ಅಟಲ್ ಬಿಹಾರಿ ವಾಜಪೇಯಿ ಅವರು ದಿಲ್ಲಿಯಲ್ಲಿದ್ದ ಚೀನಾ ದೂತಾವಾಸಕ್ಕೆ 800 ಕುರಿಗಳನ್ನು ನುಗ್ಗಿಸಿ ಪ್ರತಿಭಟಿಸಿದರು. ‘ಈಟ್ ಮೀ, ಬಟ್ ಸೇವ್ ದಿ ವರ್ಲ್ಡ್’(ನನ್ನನ್ನು ತಿನ್ನಿ ಅಭ್ಯಂತರವಿಲ್ಲ. ಆದರೆ, ಜಗತ್ತನ್ನು ರಕ್ಷಿಸಿ) ಎಂದು ಕುರಿಗಳ ಕುತ್ತಿಗೆಗೆ ನೇತುಹಾಕಿದ ಪ್ಲೇಕಾರ್ಡ್ ಚೀನಾ ದೇಶದ ನೀಚತನವನ್ನೇ ಅನಾವರಣಗೊಳಿಸಿತ್ತು !
ಚೀನಾ ವಿರುದ್ಧ ಅಟಲ್ ನಡೆಸಿದ ಕುರಿ ಪ್ರತಿಭಟನೆ, ಆ ದೇಶದ ನಡವಳಿಕೆ ಕುರಿತು ಜಾಗತಿಕ ಚರ್ಚೆಗೆ ನಾಂದಿ ಹಾಡಿತು. ಇದರಿಂದ ಚೀನಾಗೆ ತೀವ್ರ ಮುಜುಗರವಾಗಿ ಚಡಪಡಿಸಿತು. ಬಳಿಕ ಭಾರತಕ್ಕೆ ಮತ್ತೊದು ಪತ್ರ ಬರೆದು, ಕುರಿ ಪ್ರತಿಭಟನೆಯ ಹಿಂದೆ ಸರಕಾರದ ಕುಮ್ಮಕ್ಕಿದೆ ಎಂದು ಆರೋಪಿಸಿತು. ಪತ್ರಕ್ಕೆ ಆಗಿನ ಸರಕಾರ ಒಂದು ಖಡಕ್ ಉತ್ತರವನ್ನೂ ಬರೆಯಲಿಲ್ಲ ಎಂಬುದು ಬೇರೆ ವಿಚಾರ. ಚೀನಾದ ಈ ಮುಜುಗರದ ಹಿಂದೆ, ಪ್ರಕರಣದಲ್ಲಿ ನಾನು ಸೋಲುಂಡೆ ಎಂಬ ಹಿಂಜರಿಕೆ ಹಾಗೂ ಅವಮಾನವನ್ನು ಗಮನಿಸಬೇಕು !
ಇದರ ಬೆನ್ನಲ್ಲೇ, ‘‘ಟಿಬೆಟಿನಿಂದ ಚೀನಾದ ನಾಲ್ವರು ಪ್ರಜೆಗಳನ್ನು ಭಾರತ ಅಪಹರಿಸಿದೆ. ಅವರನ್ನು ವಾಪಸ್ ನಮಗೆ ಒಪ್ಪಿಸಿ,’’ ಎಂದು ಚೀನಾ ಇನ್ನೊಂದು ರಗಳೆ ತೆಗೆಯಿತು. ವಾಸ್ತವದಲ್ಲಿ ಆ ಪ್ರಜೆಗಳು ಚೀನಾಗೆ ಬೇಕಾಗಿರಲಿಲ್ಲ. ಚೀನಾ ಸೈನಿಕರು ನಡೆಸುತ್ತಿದ್ದ ದೌರ್ಜನ್ಯವನ್ನು ಪ್ರತಿಭಟಿಸಿ ಟಿಬೆಟಿನ ಇಬ್ಬರು ಮಹಿಳೆಯರು ಭಾರತಕ್ಕೆ ಬಂದು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು. ಈ ಮಹಿಳೆಯರು ಎಲ್ಲಿ ಭಾರತದ ಬಲ ತಮಗಿದೆ ಎಂದು, ತನ್ನ ಸೈನಿಕರು ಎಸಗಿದ ದೌರ್ಜನ್ಯವನ್ನು ಜಗಜ್ಜಾಹೀರು ಮಾಡುತ್ತಾರೆ ಎಂಬ ಭಯ ಚೀನಾಗೆ ಕಾಡಿತ್ತು. ಇಂಥಾ ಎಲ್ಲ ಘಟನೆಗಳು ಆ ದೇಶದ ಕ್ಷುದ್ರತನ ಹಾಗೂ ಪುಕ್ಕಲುತನಕ್ಕೆ ಸಾಕ್ಷಿಯಂತಿವೆ. ಆಷ್ಟೇ ಏಕೆ ಉಯಿಘರ ಮುಸ್ಲಿಮರ ಕಂಡರೆ ಭಯ, ಮಾಧ್ಯಮದ ಭಯ, ನೆರೆ ದೇಶ ರಸ್ತೆ ನಿರ್ಮಿಸಿಕೊಂಡರೆ ಭಯ, ಒಟ್ಟಿನಲ್ಲಿ ಭಯದಲ್ಲೇ ಆ ದೇಶ ಎಲ್ಲ ಅವಾಂತರ ಮಾಡಿಕೊಳ್ಳುತ್ತಿದೆ!

ಚೀನಾ ಗೆದ್ದದ್ದೆಷ್ಟು, ಸೋತದ್ದೆಷ್ಟು?
1962ರ ಯುದ್ಧದಲ್ಲಿ ಚೀನಾ ವಿರುದ್ಧ ಭಾರತ ಸೋಲುಂಡ ಕಥಾನಕವನ್ನು ಪದೇ ಪದೆ ನೆನಪಿಸಿಕೊಳ್ಳುತ್ತಿರುತ್ತೇವೆ. ಆದರೆ ನೆನಪಿರಲಿ – ಭಾರತದ ವಿರುದ್ಧ ಚೀನಾ ಗೆದ್ದಿರುವುದು ಒಂದು ಬಾರಿ ಮಾತ್ರ. ಅನೇಕ ಬಾರಿ ಅದು ಸೋಲು ಕಂಡಿದೆ. ಇತ್ತೀಚಿನ ವರ್ಷಗಳಲ್ಲಂತೂ ಚೀನಾಗೆ ಮರೆಯಲಾಗದ ಮರ್ಮಾಘಾತಗಳನ್ನು ಭಾರತ ನೀಡುತ್ತಲೇ ಬಂದಿದೆ.
ಅರವತ್ತೆರಡರ ವಿಜಯೋನ್ಮಾದದಲ್ಲಿದ್ದ ಚೀನಾ 1967ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಸಿಕ್ಕಿಂನ ನಾಟುಲಾದಲ್ಲಿ ಅತಿಕ್ರಮಣಕ್ಕೆ ಯತ್ನಿಸಿತು. ಆ ಎರಡೂ ಸಂದರ್ಭಗಳಲ್ಲಿ ಭಾರತೀಯ ಸೇನೆ ಚೀನಾಗೆ ತಕ್ಕ ಉತ್ತರ ನೀಡಿತು. ಪರಿಣಾಮ ಚೀನಾ ಪಡೆಗಳು ತೆಪ್ಪಗೆ ಬಾಲ ಮುರಿದುಕೊಂಡು ಹಿಂದೆ ಸರಿದವು. ಒಂದು ವಿಷಯ ಗೊತ್ತಿರಲಿ, ಆಗ ನಡೆದ ಘರ್ಷಣೆಯಲ್ಲಿ ಚೀನಾದ 400 ಯೋಧರು ಪ್ರಾಣ ಕಳೆದುಕೊಂಡರು. ಇದು ರಕ್ಷಣಾ ಇಲಾಖೆಯ ಅಧಿಕೃತ ದಾಖಲೆಯಲ್ಲಿದೆ.
ಹುಟ್ಟುಗುಣ ಸುಟ್ಟರೂ ಹೋಗದು ಎಂಬಂತೆ ಚೀನಾ 1967ರ ಅಕ್ಟೋಬರ್ 1ರಂದು ಚೋಲಾ ಸೆಕ್ಟರ್‌ನಲ್ಲಿ ಮತ್ತೆ ಅತಿಕ್ರಮಣಕ್ಕೆ ಮುಂದಾಯಿತು. ಆಗಲೂ ಅದಕ್ಕೆ ಯಶಸ್ಸು ಸಿಗಲಿಲ್ಲ. ನಾಟುಲಾ ಘರ್ಷಣೆಯ 20 ವರ್ಷಗಳ ತರುವಾಯ 1987ರಲ್ಲಿ ಅರುಣಾಚಲ ಪ್ರದೇಶಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಿದ್ದನ್ನು ಆಕ್ಷೇಪಿಸಿ, ಆ ರಾಜ್ಯದ ಗಡಿಯ ಸಮ್ದುರಾಂಗ್‌ನಲ್ಲಿ ಚೀನಾ ಸೇನಾ ಜಮಾವಣೆ ಮಾಡಿತು. ಈಗ ಗಲ್ವಾನ್ ಕಣಿವೆಯಲ್ಲಿ ಮಾಡಿದಂತೆಯೇ ಆಗ ಅರುಣಾಚಲದ ಸಮ್ದುರಾಂಗ ಕಣಿವೆಯಲ್ಲಿ ಒಳಗೆ ಬಂದು ಭಾರತದ ಭೂ ಭಾಗದಲ್ಲಿ ಚೀನಾ ಸೇನೆ ಡೇರೆ ಹಾಕಿತು. ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾಯಿತು. ಆ ಕ್ಷಣದಲ್ಲಿ ಭಾರತೀಯ ಸೇನೆಯ ಅಂದಿನ ಮುಖ್ಯಸ್ಥ ಕೆ.ಸುಂದರ್ಜಿ ಆಪರೇಶನ್ ಫಾಲ್ಕನ್ ಕೈಗೆತ್ತಿಕೊಂಡರು. ಆಗ ಭಾರತೀಯ ಸೇನೆಯನ್ನು ನೇರಾನೇರ ಎದುರಿಸಲಾಗದೆ ಚೀನಾ ಬಂದ ಹಾದಿಯಲ್ಲಿ ವಾಪಸಾಯಿತು. ಅಷ್ಟು ಮಾತ್ರವಲ್ಲ, ಆ ಒಂದು ಬೆಳವಣಿಗೆ ಭಾರತ ಚೀನಾ ಗಡಿ ನಿಯಂತ್ರಣ ರೇಖೆಗುಂಟ ಶಾಂತಿ ಕಾಪಾಡುವ ಒಪ್ಪಂದಕ್ಕೆ 1993ರಲ್ಲಿ ಸಹಿ ಹಾಕಲು ಕಾರಣವಾಯಿತು.
ಭಾರತ ಭೂತಾನ್ ಗಡಿಯ ಡೋಕ್ಲಂನಲ್ಲಿ ಭಾರತ ತನ್ನ ಭೂ ಪ್ರದೇಶದಲ್ಲಿ ಹೆದ್ದಾರಿ ಕಾರ್ಯ ಕೈಗೆತ್ತಿಕೊಂಡಿದ್ದನ್ನು ವಿರೋಧಿಸಿ 2017ರ ಜೂನ್‌ನಲ್ಲಿ ಚೀನಾ ಸೇನೆ ಅತಿಕ್ರಮಣಕ್ಕೆ ಮುಂದಾಯಿತು. ಭಾರತದ ದಿಟ್ಟ ಉತ್ತರಕ್ಕೆ ಹೆದರಿದ ಚೀನ 72 ದಿನಗಳ ಬಳಿಕ ಹಿಂದಡಿ ಇಡಲೇಬೇಕಾಗಿ ಬಂತು. ಈ ಎಲ್ಲವೂ ಚೀನಾದ ಸೋಲುಗಳೇ !
ಈ ಎಲ್ಲ ಸಮರದ ಮಾತುಗಳ ನಡುವೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚೀನಾದ ಪ್ರಭಾವವನ್ನು ಭಾರತ ಮಣಿಸಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಚೀನಾ ಕೆಲಸ ಮಾಡುತ್ತಿರುವುದರ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಕಾಯಂ ಸದಸ್ಯ ಆಗುವುದಕ್ಕೆ ಚೀನಾ ಮೊದಲಿನಿಂದಲೂ ಅಡ್ಡಗಾಲು ಹಾಕುತ್ತಲೇ ಇದೆ. ಆದರೂ ವಾರದ ಹಿಂದಷ್ಟೇ ಭಾರತ ಎಂಟನೇ ಬಾರಿಗೆ ಕಾಯಮೇತರ ಸದಸ್ಯ ರಾಷ್ಟ್ರದ ಸ್ಥಾನ ಪಡೆದುಕೊಂಡಿದೆ.

ತ್ರಿವಳಿಕೂಟಕ್ಕೆ ಶರಣಾದ ಚೀನಾ
ಈಗ ವರ್ತಮಾನಕ್ಕೆ ಬನ್ನಿ. ಕಳೆದ ಜುಲೈ 6ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ಯಿ ನಡುವೆ ನಡೆದ ಮಾತುಕತೆ ಬಳಿಕ ಗಲ್ವಾನದಲ್ಲಿ ಮಾತ್ರವಲ್ಲ, ಪೆಂಗಾಂಗ್ ಸರೋವರದಿಂದ ಚೀನದ ಸೇನೆ ಹಿಂದಕ್ಕೆ ಸರಿಯುವ ತೀರ್ಮಾನಕ್ಕೆ ಬಂತು. ಇದೇ ಮಾತುಕತೆಯ ಪರಿಣಾಮ ಲಡಾಕ್‌ನಲ್ಲಿ ಭಾರತ ಮತ್ತು ಚೀನಾದ ಸೇನೆಯ ನಡುವೆ ಮೂರು ಕಿಮೀ ಬಫರ್ ಝೋನ್ ನಿರ್ಮಾಣ ಮಾಡಬೇಕೆಂಬ ತೀರ್ಮಾನಕ್ಕೂ ಬರಲಾಗಿದೆ. ಗಡಿ ನಿಯಂತ್ರಣ ರೇಖೆಗುಂಟ ಎರಡೂ ಕಡೆಯಿಂದಲೂ ಟೆಂಟ್‌ಗಳನ್ನು ತೆರವು ಮಾಡಲು ನಿರ್ಧರಿಸಲಾಯಿತು. ಒಟ್ಟಿನಲ್ಲಿ ಯುದ್ಧೋನ್ಮಾದದಲ್ಲಿ ಬಂದ ಚೀನಾಸೇನೆ ಬರಿಗೈಲಿ ಹಿಂದಿರುಗಬೇಕಾಗಿ ಬಂತು.

ಅಖಾಡಕ್ಕಿಳಿದ ಅಮೆರಿಕ
ಚೀನಾದ ಕಮ್ಯುನಿಸ್ಟ್ ಸರಕಾರದ ಮನಸ್ಥಿತಿಯೇ ರೋಗಗ್ರಸ್ತ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಕಾಂಪಿಯೋ ಹೇಳಿದರು. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಲು ಚೀನಾ ಸೇನೆಯೆ ಕಾರಣ ಎಂದು ತರಾಟೆಗೆ ತೆಗೆದುಕೊಂಡರು. ಈ ನಡುವೆ, ಬೇರೊಂದು ನೆಪದಲ್ಲಿ ದಕ್ಷಿಣ ಚೀನಾ ಸಾಗರದ ಬಳಿ ಅಮೆರಿಕಾ ತನ್ನ ಎರಡು ಯುದ್ಧನೌಕೆಗಳನ್ನು ಕಳುಹಿಸಿ ಎಚ್ಚರಿಕೆಯ ಸಂದೇಶ ನೀಡಿದೆ.

ಆಪದ್ಬಾಂಧವನಾದ ರಷ್ಯಾ
ಈ ನಡುವೆ ರಷ್ಯಾ ಒಲಿಸಿಕೊಳ್ಳಲು ಮುಂದಾದ ಚೀನಾ, ಭಾರತಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಬಾರದೆಂಬ ಮನವಿಯನ್ನು ಆ ದೇಶದ ಮುಂದಿಟ್ಟಿತು. ಆದರೆ ಆಗಿದ್ದೇ ಬೇರೆ. ಚೀನಾದ ಮನವಿಯನ್ನು ರಷ್ಯಾ ತಿರಸ್ಕರಿಸಿದ್ದು ಮಾತ್ರವಲ್ಲ, ನಿಗದಿತ ಅವಧಿಗೆ ಮುನ್ನವೇ ಭಾರತಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದಾಗಿ ಘೋಷಿಸಿತು. ಬೆನ್ನಲ್ಲೇ ಪ್ರಧಾನಿ ಮೋದಿ ಭಾರತ ರಷ್ಯಾ ಜಂಟಿಯಾಗಿ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿಯನ್ನು ಕಾರ್ಯಾಚರಣೆಗಿಳಿಸುವ ತೀರ್ಮಾನ ತೆಗೆದುಕೊಂಡರು.

ಚೀನಾ ವಿರುದ್ಧ ನೆರೆಹೊರೆ ದೇಶಗಳು
ಕಮ್ಯುನಿಸ್ಟ್ ಚೀನಾ ವಿರುದ್ಧ ಈಗ ಜಗತ್ತಿನ ನಾನಾ ದೇಶಗಳು ಒಂದಾಗುತ್ತಿರುವ ಮುನ್ಸೂಚನೆ ದಟ್ಟವಾಗಿ ಕಾಣುತ್ತಿದೆ. ಅಮೆರಿಕಾಗೆ ಸೆಡ್ಡು ಹೊಡೆಯಲು ಚೀನಾ ಹೊರಟಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಉಪಟಳದ ಕುರಿತು ಜಪಾನ್ ಹಾಗೂ ಇತರ ದಕ್ಷಿಣ ಏಷ್ಯಾದ ರಾಷ್ಟ್ರಗಳು ಕಳವಳಗೊಂಡಿವೆ. ಚೀನಾದ ಸಾಗರ ದುಸ್ಸಾಹಸದ ಬಗ್ಗೆ ತೈವಾನ್ ಮತ್ತು ವಿಯೆಟ್ನಾಂ ಇತ್ತೀಚೆಗಷ್ಟೇ ತಕರಾರು ತೆಗೆದಿವೆ. ಬಹು ಕಾಲದಿಂದಲೂ ಚೀನಾ ನೆರೆಯ ಆರಕ್ಕೂ ಹೆಚ್ಚು ದೇಶಗಳೊಂದಿಗೆ ಗಡಿತಂಟೆ ಹೊಂದಿದೆ. ತೈವಾನ್ ದೇಶಕ್ಕೆ ಮಾನ್ಯತೆ ಕೊಡಲು ಒಪ್ಪುತ್ತಿಲ್ಲ. ಗಲ್ವಾನ ಗಡಿ ಘರ್ಷಣೆ ಸಮಯದಲ್ಲೇ ತೈವಾನ್‌ನಲ್ಲಿ ಚೀನಾದ ವಾಯುಪಡೆ ವಿಮಾನಗಳು ಆ ದೇಶದ ಗಡಿ ಉಲ್ಲಂಘಿಸಿವೆ. ದಕ್ಷಿಣ ಏಷ್ಯಾ ಸಮುದ್ರದ ತೈಲ ನಿಕ್ಷೇಪದ ಸಲುವಾಗಿ ಆರಕ್ಕೂ ಹೆಚ್ಚು ದೇಶಗಳೊಡನೆ ಚೀನಾ ಸಂಘರ್ಷಕ್ಕಿಳಿದಿದೆ.
ಚೀನಾದ ಮಾಧ್ಯಮಗಳೇ ಹೇಳುವ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಪ್ರಭಾವಳಿ ವಿಸ್ತರಿಸುವ ಯೋಜನೆ ವಿಫಲವಾಗುತ್ತಿದೆ. ಏಷ್ಯದ ದೈತ್ಯನ ಎದುರಿಸಲು ಕಳೆದ ಜೂನ್‌ನಲ್ಲಷ್ಟೇ 12 ರಾಷ್ಟ್ರಗಳ ರಾಜಕೀಯ ಒಕ್ಕೂಟ ರಚನೆ ಆಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೆಚ್ಚಿರುವ ಪಾಕ್ ಕೂಡ ಚೀನಾದ ಜತೆ ಗಟ್ಟಿಯಾಗಿ ನಿಂತಿಲ್ಲ.
ಈ ನಡುವೆ ಹೊಸ ಮಿತ್ರರ ಕಂಡುಕೊಳ್ಳುವ ಚೀನಾದ ಪ್ರಯತ್ನವೂ ಸೋಲುತ್ತಿದೆ. ನೇಪಾಳ ಇದಕ್ಕೆ ತಾಜಾ ಉದಾಹರಣೆ. ಅಮೆರಿಕದ ಮಿತ್ರರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲೂ ಅದು ಪರಾಭವ ಕಾಣುತ್ತಿದೆ. ಕೊರೊನಾ ವೈರಸ್ ಹರಡಲು ಚೀನಾ ಕಾರಣ ಎಂಬ ಹಣೆಪಟ್ಟಿಯನ್ನು ಐರೋಪ್ಯ ಒಕ್ಕೂಟ ಈಗಾಗಲೇ ಚೀನಾಗೆ ಕಟ್ಟಿದೆ. ಇದರಿಂದ ಚೀನಾದ ಹುವೆಯಿ ಕಂಪೆನಿ ನಿರ್ಮಿಸಲು ಉದ್ದೇಶಿಸಿರುವ 5ಜಿ ಮೂಲಸೌಕರ್ಯ ನಿರ್ಮಾಣಕ್ಕೆ ಅನುಮತಿ ಕೊಡುವುದನ್ನು ಹಲವು ದೇಶಗಳು ಮರುಪರಿಶೀಲನೆ ಮಾಡುತ್ತಿವೆ.

ವ್ಯಾಪಾರೋದ್ಯಮವೂ ಬಲವಾದ ಅಸ್ತ್ರ
ನಮ್ಮ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳುವ ಪ್ರಕಾರ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಲು ವ್ಯಾಪಾರೋದ್ಯಮವೂ ನಮಗೆ ಒಂದು ಅಸ್ತ್ರ. ಭಾರತಕ್ಕೆ ಚೀನಾದ ರಫ್ತಿನ ಪ್ರಮಾಣ ಶೇ. 13.7ರಷ್ಟಿದ್ದರೆ, ಆಮದಿನ ಪ್ರಮಾಣ ಶೇ.5.1 ಮಾತ್ರ. ಈ ಬ್ಯಾಲೆನ್ಸ್ ಆಫ್ ಟ್ರೇಡ್ ಸಹಜವಾಗಿಯೇ ಚೀನಾದ ಪರ ಇದೆ.
ಭಾರತಕ್ಕೆ ಉತ್ಪಾದನೆ ಸಾಮರ್ಥ್ಯ ಕಡಿಮೆ ಇರುವುದರಿಂದ ಸಹಜವಾಗಿ ಚೀನಾವನ್ನು ಆಶ್ರಯಿಸಿದೆ. ಇದಕ್ಕೆ ಪರಿಹಾರ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ. ಜಗತ್ತಿನಲ್ಲಿ ಮಾರಾಟವಾಗುವ ಶೇ.70ರಷ್ಟು ಎಸಿ, ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್‌ಗಳನ್ನು ಚೀನಾ ಉತ್ಪಾದನೆ ಮಾಡುತ್ತದೆ. ವ್ಯೂಹಾತ್ಮಕ ತಂತ್ರಗಾರಿಕೆ ತಜ್ಞರು ಹೇಳುವ ಪ್ರಕಾರ ಚೀನಾ ಭಾರತದ ರಕ್ಷ ಣಾ ವೆಚ್ಚಕ್ಕೆ ಸರಿಸಮನಾದ ಟ್ರೇಡ್ ಸರ್ಪ್ಲಸ್ ಹೊಂದಿದೆ.
ಲಡಾಕ್ ಗಡಿಯಲ್ಲಿ ಉದ್ವಿಗ್ನತೆ ತಲೆದೋರುವುದಕ್ಕಿಂತ ಕೆಲ ದಿನಗಳ ಮೊದಲು ಜೂನ್ 16ರಂದು ಚೀನಾದ ಗ್ರೇಟ್ ವಾಲ್ಮೋಟಾರ್ ಕಂಪೆನಿ ಮಹಾರಾಷ್ಟ್ರದೊಂದಿಗೆ 1 ಬಿಲಿಯನ್ ಡಾಲರ್ ಹೂಡಿಕೆಯ ಒಪ್ಪಂದ ಮಾಡಿಕೊಂಡಿತ್ತು. ಟೆನ್ಸೆಂಟ್ ಮತ್ತು ಅಲಿಬಾಬಾ ಕಂಪೆನಿಗಳು ಭಾರತದ ಪ್ರಮುಖ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಪ್ರಮುಖ ಹೂಡಿಕೆದಾರರು. 20 ಯೂನಿಕಾರ್ನ್ ಕಂಪನಿಗಳ ಪೈಕಿ 15ರಲ್ಲಿ ಚೀನಾದ ಹೂಡಿಕೆಧಿಯಿದೆ. ಈಗ ಭಾರತ ಆ ಎಲ್ಲ ಕಂಪೆನಿಗಳ ಪರಾಮರ್ಶೆ ಮಾಡುತ್ತಿದೆ. ಅನುಮತಿ ವಿಳಂಬ, ವೀಸಾ ವಿಳಂಬದಂತಹ ಕಣ್ಣಿಗೆ ಕಾಣದ ಅಡೆತಡೆಗಳನ್ನು ಹಾಕಬಹುದಾಗಿದೆ. ಈ ಹಿಂದಿನ ಸರಕಾರಗಳ ತಪ್ಪು ಉತ್ಪಾದನಾ ನೀತಿಯಿಂದಾಗಿ ಎಲ್ಲವೂ ಹಾಳಾಗಿತ್ತು. ಸರಕಾರ ಈಗ ಅದಕ್ಕೆ ಉತ್ತೇಜನ ನೀಡಿ ಸರಿಪಡಿಸುತ್ತಿದೆ. ಚೀನಾದ ಕಡಿಮೆ ವೆಚ್ಚದ ಉತ್ಪಾದನೆಗೆ ಪರ್ಯಾಯವಾಗಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ, ಚೀನಾವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top