ದುಷ್ಟ ಚೀನಾಗೆ ತಿರುಗೇಟು

– ಭಾರತ-ಚೀನಾ ಗಡಿಯಲ್ಲಿ ಯೋಧರ ಸಂಘರ್ಷ
– ಕರ್ನಲ್ ಸಹಿತ 20 ಯೋಧರು ಹುತಾತ್ಮ
– ಯುದ್ಧೋನ್ಮಾದಕ್ಕೆ ಭಾರತ ದಿಟ್ಟ ಉತ್ತರ, ಚೀನಾದ 43 ಸೈನಿಕರೂ ಬಲಿ
– ಡ್ರ್ಯಾಗನ್ ವಿರುದ್ಧ ದೇಶಾದ್ಯಂತ ಜನಾಕ್ರೋಶ

ಹೊಸದಿಲ್ಲಿ: ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ತಾರಕಕ್ಕೇರಿದೆ. ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಗಡಿಯಲ್ಲಿ ಸೋಮವಾರ ರಾತ್ರಿ ಉಭಯ ದೇಶಗಳ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಕರ್ನಲ್ ಸಮೇತ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಘರ್ಷಣೆಯಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟರೆ 17 ಮಂದಿ ಗಾಯಾಳು ಯೋಧರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚೀನಾದ ಪ್ರಚೋದನೆಗೆ ಭಾರತ ದಿಟ್ಟ ಉತ್ತರ ನೀಡಿದ್ದು ಆ ದೇಶದ 43 ಯೋಧರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಡಾಖ್ ಗಡಿಯಲ್ಲಿ ಉಂಟಾಗಿದ್ದ ಬಿಗುವಿನ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಗಳು ನಡೆಯುತ್ತಿದ್ದ ಹೊತ್ತಿನಲ್ಲೇ ಮತ್ತೆ ಗಡಿಯಲ್ಲಿ ಸಮರ ಛಾಯೆ ಮೂಡಿದೆ. ಕಮಾಂಡಿಂಗ್ ಆಫಿಸರ್ ಬಿಹಾರ ರೆಜಿಮೆಂಟ್‌ನ ಕರ್ನಲ್ ಸಂತೋಷ್ ಬಾಬು ಹಾಗೂ ಇನ್ಫೆಂಟ್ರಿ ಬೆಟಾಲಿಯನ್‌ನ ಇಬ್ಬರು ಯೋಧರು ಹುತಾತ್ಮರಲ್ಲಿ ಸೇರಿದ್ದಾರೆ.

ತುರ್ತು ಬೆಳವಣಿಗೆಗಳೇನು?
– ಸಶಸ್ತ್ರ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಮತ್ತು ಮೂರೂ ಸೇನಾಪಡೆ ಮುಖ್ಯಸ್ಥರ ಜತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ, ಪ್ರಧಾನಿಗೆ ವಸ್ತುಸ್ಥಿತಿ ವಿವರಣೆ
– ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಜತೆಯೂ ಮಾತುಕತೆ ನಡೆಸಿದ ರಾಜನಾಥ್
– ಪರಿಸ್ಥಿತಿ ತಿಳಿಗೊಳಿಸಲು ಉಭಯ ದೇಶಗಳ ಸೇನಾಧಿಕಾರಿಗಳಿಂದ ಗಲ್ವಾನ್ ಕಣಿವೆಯಲ್ಲಿ ಸರಣಿ ಸಭೆ
– ಲಡಾಖ್‌ನ ಗಡಿಯಲ್ಲಿ ಸೇನೆಯ ಸಮರ ಸನ್ನದ್ಧತೆ ಪರಿಶೀಲಿಸಿದ ರಾಜನಾಥ್
– ಭಾರತೀಯ ಸೇನೆಗೆ ದೇಶಾದ್ಯಂತ ಭಾರಿ ಬೆಂಬಲ; ಚೀನಾ ವಿರುದ್ಧ ಆಕ್ರೋಶ
– ಚೀನಾ ಮೇಲೆ ಆರ್ಥಿಕ ದಿಗ್ಬಂಧನ, ಉತ್ಪನ್ನಗಳ ನಿಷೇಧಕ್ಕೆ ಆರೆಸ್ಸೆಸ್ ಕರೆ

ಏಕಪಕ್ಷೀಯ ಕ್ರಮ ಬೇಡ ಎಂದ ಚೀನಾ
ಯೋಧರ ಸಾವಿಗೆ ಭಾರತ ಮತ್ತಷ್ಟು ಪ್ರತೀಕಾರಕ್ಕೆ ಮುಂದಾಗಬಹುದೆಂದು ಅಂದಾಜಿಸಿರುವ ಚೀನಾ, ಏಕಪಕ್ಷೀಯ ನಿರ್ಧಾರ ಬೇಡವೆಂದು ಮನವಿ ಮಾಡಿದೆ. ಎರಡೂ ಕಡೆ ಸಾವು ನೋವು ಸಂಭವಿಸಿರುವ ಹಿನ್ನೆಲೆಯಲ್ಲಿ ಯಾವುದೇ ಕ್ರಮಕ್ಕೆ ಮುನ್ನ ಯೋಚಿಸುವಂತೆ ಚೀನಾ ಹೇಳಿದೆ.

ಮುಂದಿನ ನಡೆ ಕುತೂಹಲಕರ
ಕಳೆದ ಕೆಲವು ವಾರಗಳಿಂದ ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೊ, ಗಲ್ವಾನ್ ಕಣಿವೆ, ಡೆಮ್ಚೋಕ್ ಮತ್ತು ದೌಲತ್ ಬೇಗ್ ಒಲ್ದಿ ಪ್ರದೇಶಗಳಿಂದ ಭಾರತ-ಚೀನಾ ಸೇನೆಗಳು ಮುಖಾಮುಖಿಯಾಗಿದ್ದವು. ಚೀನಾ ಸೇನೆ ಗಡಿಯಲ್ಲಿ ಹೆಚ್ಚುವರಿ ಯೋಧರ ನಿಯೋಜನೆ, ಆರ್ಟಿಲರಿ ಗನ್, ಕಾಂಬ್ಯಾಟ್ ಇನ್ಫೆಂಟ್ರಿ ವಾಹನಗಳು ಸೇರಿ ಯುದ್ಧೋಪಕರಣಗಳನ್ನು ಜಮಾವಣೆಗೊಳಿಸಿದ ಬೆನ್ನಲ್ಲೇ ಭಾರತವೂ ಅಷ್ಟೇ ದಿಟ್ಟವಾಗಿ ಬಲ ಪ್ರದರ್ಶಿಸಿತ್ತು. ಜೂನ್ 6ರಂದು ಲೇಹ್ನ 14 ಕಾರ್ಪ್ಸ್‌ನ  ಜನರಲ್ ಕಮಾಂಡಿಂಗ್ ಆಫಿಸರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ಚೀನಾದ ಟಿಬೆಟ್ ಮಿಲಿಟರಿ ಡಿಸ್ಟ್ರಿಕ್ ಮೇಜರ್ ಜನರಲ್ ಲಿಯು ಲಿನ್ 6 ಗಂಟೆ ಮಾತುಕತೆ ನಡೆಸಿದ್ದ ಬಳಿಕ ಎರಡೂ ಕಡೆ ಸೇನೆಗಳು ಹಿಂದೆ ಸರಿಯುತ್ತಿದ್ದವು. ಹೊಸ ಸಂಘರ್ಷದಿಂದ ಮುಂದಿನ ನಡೆಗಳ ಬಗ್ಗೆ ಕುತೂಹಲ ಮೂಡಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top