ಚೀನಾ ಸೊಕ್ಕಿಗೆ ಭಾರತ ಸಡ್ಡು

– ಭಾರತ- ಆಸ್ಪ್ರೇಲಿಯಾ ವರ್ಚುವಲ್ ಶೃಂಗ. 
– ವ್ಯೂಹಾತ್ಮಕ ಒಪ್ಪಂದಕ್ಕೆ ಉಭಯ ದೇಶಗಳ ಸಹಿ. 
– ಪರಸ್ಪರ ಸೇನಾ ನೆಲೆ ಬಳಸಿಕೊಳ್ಳಲು ಸಮ್ಮತಿ | ಡ್ರ್ಯಾಗನ್‌ಗೆ ಅಂಕುಶ. 

ಹೊಸದಿಲ್ಲಿ: ಚೀನಾ ಗಡಿಯಲ್ಲಿ ಕದನ ಕಾರ್ಮೋಡಗಳು ಎದ್ದಿರುವಾಗಲೇ ಭಾರತವು ಸೇನಾ ನೆಲೆಗಳನ್ನು ಬಳಸಿಕೊಳ್ಳುವ ಕುರಿತು ಆಸ್ಪ್ರೇಲಿಯಾ ಜತೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ವಿಶ್ವದ ಗಮನ ಸೆಳೆದಿದೆ.
ಗಡಿ ಸಾರ್ವಭೌಮತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಖಚಿತಪಡಿಸುತ್ತ ಬಂದಿರುವ ಭಾರತ, ಲಡಾಖ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಉತ್ತರಿಸಲು ತನ್ನದೇ ಆದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿಯೇ ಗುರುವಾರ ಆಸ್ಪ್ರೇಲಿಯಾ ಜತೆ ಐತಿಹಾಸಿಕ ಮೈಲುಗಲ್ಲಿನ ‘ಮ್ಯೂಚುವಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್’ (ಎಂಎಲ್ಎಸ್ಎ) ಒಪ್ಪಂದ ಮಾಡಿಕೊಂಡಿದೆ.
ಉಭಯ ದೇಶಗಳ ನಡುವೆ ಇದೇ ಮೊದಲ ಬಾರಿ ನಡೆದ ‘ವರ್ಚುವಲ್ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಲವು ವಿಷಯಗಳ ಕುರಿತು ಚರ್ಚಿಸಿದರು. ನಂತರ ಉಭಯ ನಾಯಕರು ಎಂಎಲ್ಎಸ್ಎ ಒಪ್ಪಂದಕ್ಕೆ ಸಹಿ ಹಾಕಿದರು. ಎರಡು ಬಲಿಷ್ಠ ದೇಶಗಳ ನಡುವೆ ಏರ್ಪಟ್ಟ ‘ಮ್ಯೂಚುವಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್’ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದೆ. ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ ಮತ್ತು ರಕ್ಷಣಾ ಸಾಮಗ್ರಿಗಳ ಸಾಗಣೆಗಾಗಿ ಪರಸ್ಪರ ತಮ್ಮ ಸೇನಾ ನೆಲೆಗಳನ್ನು ಬಳಸಿಕೊಳ್ಳಬಹುದಾಗಿದೆ. ಇದು ರಕ್ಷಣಾ ವಲಯ ಮಹತ್ವದ ಸಹಕಾರ ಒಪ್ಪಂದ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತ ಅಮೆರಿಕ, ಫ್ರಾನ್ಸ್ ಮತ್ತು ಸಿಂಗಾಪುರ ಜತೆಗೂ ಇಂತಹ ಒಪ್ಪಂದ ಮಾಡಿಕೊಂಡಿದೆ.

ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ಸಮಗ್ರ ಕಾರ್ಯತಂತ್ರ ಸಹಭಾಗಿತ್ವವು ಹೊಸ ಸಾಧ್ಯತೆಗಳತ್ತ ಸಾಗಲು ನೆರವಾಗಲಿದೆ. ಇದು ಆರಂಭವಷ್ಟೇ. ಇನ್ನೂ ಎತ್ತರಕ್ಕೆ ಏರುವ ಗುರಿ ನಮ್ಮದು.
-ನರೇಂದ್ರ ಮೋದಿ, ಪ್ರಧಾನಿ

ಭಾರತದ ಜತೆಗಿನ ಸ್ನೇಹದ ಪಾಲುದಾರಿಕೆ, ಪರಸ್ಪರ ನಂಬಿಕೆ, ಮೌಲ್ಯಗಳ ವಿನಿಮಯ ಮತ್ತು ಸಾಮಾನ್ಯ ಹಿತಾಸಕ್ತಿಗಳು ಇನ್ನಷ್ಟು ನಿಕಟವಾಗಿ ಕೆಲಸ ಮಾಡಲು ಪ್ರೇರಣೆ ನೀಡಿದೆ.
-ಸ್ಕಾಟ್ ಮಾರಿಸನ್, ಆಸಿಸ್ ಪ್ರಧಾನಿ

ಭಯೋತ್ಪಾದನೆ ನಿಗ್ರಹಕ್ಕೆ ನಿರ್ಧಾರ
ಭಯೋತ್ಪಾದನೆಯನ್ನು ಜಾಗತಿಕ ಶಾಂತಿ ಮತ್ತು ಆರ್ಥಿಕ ಅಭ್ಯುದಯದ ಶತ್ರು ಎಂದು ಪರಿಗಣಿಸಲಾಗಿದ್ದು, ಇದನ್ನು ಮಟ್ಟ ಹಾಕಲು ಕಠಿಣ ಕ್ರಮಗಳ ಅಗತ್ಯ ಇದೆ ಎಂದು ಉಭಯ ದೇಶಗಳು ತೀರ್ಮಾನಿಸಿವೆ. ಹಿಂಸಾತ್ಮಕ ಪ್ರತಿರೋಧ, ಬಂಡುಕೋರ ವರ್ತನೆ, ಉಗ್ರರಿಗೆ ಹಣಕಾಸು ನೆರವು ಹಾಗೂ ಅವರಿಗೆ ಆಶ್ರಯ ಕಲ್ಪಿಸುವ ಉದ್ಧಟತನವನ್ನು ಹತ್ತಿಕ್ಕುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಚೀನಾವನ್ನು ಮಣಿಸುವ ತಂತ್ರ
– ಆಸ್ಪ್ರೇಲಿಯಾ ಜತೆ ಮಾಡಿಕೊಂಡಿರುವ ರಕ್ಷಣಾ ಒಪ್ಪಂದದ ಹಿಂದಿನ ಟಾರ್ಗೆಟ್ ಚೀನಾ.
– ರಕ್ಷಣಾ ಸಾಮಗ್ರಿಗಳ ಸಾಗಣೆಗೆ ಪರಸ್ಪರ ಸೇನೆ, ನೌಕಾ, ವಾಯುನೆಲೆಗಳ ಬಳಕೆಗೆ ಸಮ್ಮತಿ.
– ಉಭಯ ದೇಶಗಳ ಪಡೆಗಳ ನಡುವೆ ತಂತ್ರಜ್ಞಾನ ವಿನಿಮಯ ಮತ್ತು ವೈದ್ಯಕೀಯ ಸೇವೆ ಬಳಕೆ.
– ದಕ್ಷಿಣದ ಕಡಲ ನೆಲೆಗಳ ಮೇಲೆ ಹಿಡಿತ ಸಾಧಿಸುತ್ತಿರುವ ಚೀನಾ ಕಟ್ಟಿಹಾಕಲು ಭಾರತಕ್ಕೆ ಅನುಕೂಲ.
– ವಾಸ್ತವ ಗಡಿ ನಿಯಂತ್ರಣ ರೇಖೆಯತ್ತ ತಗಾದೆ ತೆಗೆಯುವ ಡ್ರ್ಯಾಗನ್ ಮಣಿಸಲು ಬಲ

ಆರು ಒಪ್ಪಂದಗಳಿಗೆ ಸಹಿ
ರಕ್ಷಣೆಯ ಜತೆಗೆ ಸೈಬರ್ ತಂತ್ರಜ್ಞಾನ ಸಂವರ್ಧನೆ, ಗಣಿಗಾರಿಕೆ ಮತ್ತು ಖನಿಜಗಳು, ಮಿಲಿಟರಿ ತಂತ್ರಜ್ಞಾನ, ವೃತ್ತಿ ಶಿಕ್ಷಣ ಮತ್ತು ನೀರು ನಿರ್ವಹಣೆ ವಲಯದ ಸಹಕಾರ ಕುರಿತ ಒಟ್ಟು ಏಳು ಒಪ್ಪಂದಗಳಿಗೆ ಭಾರತ-ಆಸ್ಪ್ರೇಲಿಯಾ ಸಹಿ ಹಾಕಿವೆ.

ಸಮೋಸಾ, ಖಿಚಡಿ ಪ್ರಸ್ತಾವ!
ಮುಂದಿನ ಸಲ ಖುದ್ದಾಗಿ ನಿಮ್ಮನ್ನು ಭೇಟಿ ಮಾಡುವಷ್ಟರಲ್ಲಿ ಗುಜರಾತಿ ಶೈಲಿಯ ಖಿಚಡಿ ಮಾಡುವುದನ್ನು ಕಲಿಯುತ್ತೇನೆ ಎಂದು ಹೇಳುವ ಮೂಲಕ ಮಾರಿಸನ್ ಅವರು ಮೋದಿ ಮನ ಗೆದ್ದರು. ಇದೇ ವೇಳೆ ಅವರು ನಿಮ್ಮ ಆತ್ಮೀಯ ಅಪ್ಪುಗೆಯನ್ನು ಮಿಸ್ ಮಾಡಿಕೊಂಡಿರುವುದಕ್ಕೆ ಬೇಸರವಾಗಿದೆ ಎಂದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top