ಹೊಸ ಗೆಳೆಯ ಆಸ್ಪ್ರೇಲಿಯ – ಕಿರಿಕಿರಿಯ ನೆರೆಹೊರೆಗೊಂದು ಎಚ್ಚರಿಕೆ

ಭಾರತವು ಆಸ್ಪ್ರೇಲಿಯದ ಜೊತೆ ಮಹತ್ವದ ಒಂದು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ. ಇನ್ನು ಮುಂದೆ ಭಾರತ ಹಾಗೂ ಆಸ್ಪ್ರೇಲಿಯ ಪರಸ್ಪರರ ನೆಲಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದು. ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ‘ಆನ್‌ಲೈನ್‌ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡು, ರಕ್ಷಣೆ ಸೇರಿ ಏಳು ಕ್ಷೇತ್ರಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ‘ಮ್ಯೂಚುವಲ್‌ ಲಾಜಿಸ್ಟಿಕ್ಸ್‌ ಸಪೋರ್ಟ್‌ ಅಗ್ರಿಮೆಂಟ್‌’ ಕ್ರಾಂತಿಕಾರಕವಾಗಿದ್ದು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ ಮತ್ತು ರಕ್ಷಣಾ ಸಾಮಗ್ರಿಗಳ ಸಾಗಣೆಗೆ ಪರಸ್ಪರ ಸೇನಾ ನೆಲೆಗಳನ್ನು ಬಳಸಿಕೊಳ್ಳಬಹುದು. ಅಮೆರಿಕ, ಫ್ರಾನ್ಸ್‌ ಮತ್ತು ಸಿಂಗಾಪುರಗಳ ಜತೆಗೂ ಭಾರತಕ್ಕೆ ಈ ಒಪ್ಪಂದವಿದೆ.
ಬಂಗಾಳ ಕೊಲ್ಲಿಯಲ್ಲಿ ಇತ್ತೀಚೆಗೆ ಚೀನಾ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದು, ಶ್ರೀಲಂಕಾ, ಮಲೇಷಿಯಾ ಮುಂತಾದ ದೇಶಗಳನ್ನು ಸಾಲದ ಬಲೆಯಲ್ಲಿ ಕೆಡವಿ ವ್ಯೂಹಾತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಮಾಡುತ್ತಿತ್ತು. ಅಲ್ಲಿ ರಕ್ಷಣಾ ನೆಲೆಗಳನ್ನು ಸ್ಥಾಪಿಸುತ್ತಿತ್ತು. ಚೀನಾದ ಈ ಕುತ್ಸಿತ ಕಾರ್ಯಾಚರಣೆಯ ಹಿನ್ನೆಲೆ, ಇಂಡೋ ಪೆಸಿಫಿಕ್‌ ಮಹಾಸಮುದ್ರ ಪ್ರಾಂತ್ಯದಲ್ಲಿ ಭಾರತವನ್ನು ದುರ್ಬಲಗೊಳಿಸುವುದೇ ಆಗಿದೆ. ಇತ್ತೀಚೆಗೆ ಲಡಾಕ್‌ ವಲಯದ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಮೂರು ಕಡೆಗಳಲ್ಲಿ ಭಾರತದ ಜೊತೆಗೆ ಚೀನಾ ಸೈನಿಕರು ಕಾಲು ಕೆದರಿ ಜಗಳಕ್ಕೆ ಮುಂದಾಗಿದ್ದರು. ಅಂತಾರಾಷ್ಟ್ರೀಯ ವಾಣಿಜ್ಯ- ವ್ಯೂಹಾತ್ಮಕ ವಲಯದಲ್ಲಿ ತನಗೆ ಸೋಲಾಗುವ ಸೂಚನೆ ಕಂಡುಬಂದಾಗಲೆಲ್ಲ ಚೀನಾ ಇಂಥ ಆಕ್ರಮಣಕಾರಿ ನಡೆಗಳಿಗೆ ಮುಂದಾಗುವುದು ಅದರ ಹಳೇ ಚಾಳಿ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಭಾರತ, ಅದರ ಆಕ್ರಮಣಶೀಲ ನಡೆಗೆ ಸರಿಯಾದ ಪ್ರತ್ಯುತ್ತರ­ವನ್ನೂ ನೀಡುವುದರ ಜೊತೆಗೆ, ಚೀನಾದ ಹಡಗುಗಳಿಗೆ ಸೂಕ್ತ ಬಂದರುಕಟ್ಟೆಯಾಗಬಹುದಾಗಿದ್ದ ಆಸ್ಪ್ರೇಲಿಯಾದ ಜೊತೆಗೆ ಗಟ್ಟಿ ಸಂಬಂಧ ಕುದುರಿಸಿಕೊಳ್ಳುವ ಮೂಲಕ ಬೇರೆ ನೆಲೆಯ ಉತ್ತರವನ್ನೇ ನೀಡಿದೆ.
ಬಲಿಷ್ಠ ಚೀನಾದ ಕುತಂತ್ರ ಹಾಗೂ ಆಕ್ರಮಣಶೀಲತೆಗಳಿಗೆ ಉತ್ತರಿಸಲು ಇಂಥ ಹಲವು ಉಪಕ್ರಮಗಳು ಅಗತ್ಯವಿವೆ. ಅಮೆರಿಕದ ಜೊತೆಗೆ ಭಾರತದ ಸಂಬಂಧ ಹೆಚ್ಚು ಹೆಚ್ಚು ಸುಧಾರಿಸಿದ್ದು, ಗ್ಯಾಲ್ವನ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಸಹಾಯಕ್ಕೆ ತಾನು ಸಿದ್ಧ ಎಂದು ಟ್ರಂಪ್‌ ಹೇಳಿದ್ದರು. ಜಿ7 ದೇಶಗಳ ಒಕ್ಕೂಟದಲ್ಲಿ ಭಾರತವನ್ನೂ ಸೇರಿಸಬೇಕು ಎಂದು ಅಮೆರಿಕದ ಅಧ್ಯಕ್ಷರು ಇತ್ತೀಚೆಗೆ ಹೇಳಿರುವುದು ಗಮನಾರ್ಹ. ಜುಲೈ ಅಂತ್ಯದ ವೇಳೆಗೆ ಫ್ರಾನ್ಸ್‌ನಿಂದ ಮೊದಲ ಹಂತದ ರಫೇಲ್‌ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಇದರ ಜೊತೆಗೆ ಸ್ವದೇಶಿ ಫೈಟರ್‌ ಜೆಟ್‌ಗಳಾದ ತೇಜಸ್‌ ಉತ್ಪಾದನೆಗೂ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದ್ದು, ರಕ್ಷಣಾ ನಡೆಯ ಜೊತೆಗೆ ಆತ್ಮನಿರ್ಭರ ಕಾರ್ಯಕ್ರಮಕ್ಕೆ ಉತ್ತೇಜನವೂ ಆಗಿದೆ. ವ್ಯೂಹಾತ್ಮಕವಾಗಿ ಇಂಡೋ ಪೆಸಿಫಿಕ್‌ ದೇಶಗಳಿಗೆ ಭಾರತ ಹೆಚ್ಚು ಹತ್ತಿರವಾಗುತ್ತಿದ್ದು, ಇಂಥ ಒಪ್ಪಂದಗಳ ಮೂಲಕ ಚೀನಾವನ್ನು ಒಂಟಿಯಾಗಿಸುವತ್ತ ಹೆಜ್ಜೆ ಹಾಕುತ್ತಿದೆ. ಫ್ರಾನ್ಸ್‌, ಆಸ್ಪ್ರೇಲಿಯ ಹಾಗೂ ಅಮೆರಿಕಗಳ ಜೊತೆಗಿನ ಮಿತ್ರತ್ವವು ಭಾರತದ ಹೊಸ ನೀತಿಯಾಗಿಯೂ ಚೀನಾವನ್ನು ಎದುರಿಸಲು ಉಪಯುಕ್ತವಾಗಿದೆ.
ಪಕ್ಕದಲ್ಲಿ ಚೀನಾದಂಥ ವಿಕ್ಷಿಪ್ತ ದೇಶ, ಪಾಕಿಸ್ತಾನದಂಥ ಭಯೋತ್ಪಾದಕ ದೇಶಗಳನ್ನು ಇಟ್ಟುಕೊಂಡ ದೇಶಕ್ಕೆ ಸರಿಯಾದ ಮಿತ್ರರು ಇಲ್ಲದೆ ಹೋದರೆ ಕಷ್ಟವೇ. ಕಳೆದ ಕೆಲವು ದಶಕಗಳಲ್ಲಿ ಭಾರತಕ್ಕೆ ರಷ್ಯಾ ಈ ಪಾತ್ರವನ್ನು ನಿರ್ವಹಿಸಿತ್ತು. ಇತ್ತೀಚೆಗೆ ಬದಲಾದ ಜಾಗತಿಕ ರಾಜಕೀಯ ಸಮೀಕರಣಗಳು, ಮಾರುಕಟ್ಟೆ ಬೆಳವಣಿಗೆಗಳು ನಮ್ಮನ್ನು ಅಮೆರಿಕ, ಆಸ್ಪ್ರೇಲಿಯ ಸೇರಿದಂತೆ ಇತರ ದೇಶಗಳೊಂದಿಗೆ ಬಾಂಧವ್ಯ ಗಟ್ಟಿಗೊಳಿಸಲು ಪ್ರೇರೇಪಿಸಿವೆ. ವ್ಯಾಪಾರ- ರಕ್ಷಣಾ ಒಪ್ಪಂದಗಳು, ಚಟುವಟಿಕೆಗಳು ಪರಸ್ಪರ ಹೆಚ್ಚುತ್ತ ಹೋದಂತೆ ಭದ್ರತಾ ಆತಂಕಗಳು ಕಡಿಮೆಯಾಗುತ್ತವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top