ಇದು ಎಂಥಾ ಲೋಕವಯ್ಯಾ, ಎಂಥಾ ನಡೆಯಯ್ಯಾ?

        ಲೋಕಾಯುಕ್ತ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲರೂ ತಪ್ಪು ಮಾಡಿ ದಕ್ಕಿಸಿಕೊಳ್ಳುವುದು ಪಕ್ಕಕ್ಕಿರಲಿ, ಅಪವಾದ, ಅನುಮಾನಗಳಿಗೆ ಆಸ್ಪದವೇ ಇರದಂತೆ ನಡೆದುಕೊಳ್ಳುವುದು ಹೊಣೆಗಾರಿಕೆಯ ಲಕ್ಷಣ. ಜವಾಬ್ದಾರಿ ಸ್ಥಾನಗಳಲ್ಲಿರುವವರಿಂದ ಜನ ಅದನ್ನು ನಿರೀಕ್ಷಿಸಬಹುದೇ?

      Morarji RAMAKRISHNA_HEGDEನಮ್ಮ ಲೋಕಾಯುಕ್ತದ ಅಣ್ಣ ಲೋಕಪಾಲ ಅನ್ನುವುದು ಈಗಲೂ ಕಣ್ಣಿಗೆ  ಕಾಣಿಸದ ‘ಗುಡ್ಡದ ಭೂತ’ವೆ. ಹೀಗೆ ಹೇಳುವುದಕ್ಕೂ ಕಾರಣವಿದೆ. ಲೋಕಪಾಲ  ವ್ಯವಸ್ಥೆಯೊಂದು ಜಾರಿಗೆ ಬಂದರೆ ಈ ದೇಶದಲ್ಲಿ ಎಲ್ಲವೂ ಸರಿಯಾಗಿಬಿಡುತ್ತದೆ  ಎಂಬ ಹುಸಿನಂಬಿಕೆಯೊಂದು ಬೆಳೆದುಬಿಟ್ಟಿದೆ. ಅದೊಂದಾದರೆ ಸಾಕು, ವ್ಯವಸ್ಥೆಯಲ್ಲಿ  ಆಳಕ್ಕೆ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ನಿವಾಳಿಸಿಬಿಡಬಹುದು ಎಂದು  ಮಾತನಾಡುವವರೂ ನಮಗೆ ಸಿಗುತ್ತಾರೆ. ವ್ಯವಸ್ಥೆಯ ವಿಷಯದಲ್ಲಿ  ಹತಾಶೆಗೊಳಗಾದವರು ಸಹ ಇದೊಂದು ಕಟ್ಟಕಡೆಯ ಭರವಸೆ ಎಂಬಂತೆ  ಆಸೆಗಣ್ಣಿನಿಂದ ನೋಡುತ್ತಿರುತ್ತಾರೆ.

 ಅಂತಹ ಲೋಕಪಾಲದ ಅದ್ಭುತ ಕಲ್ಪನೆ ಮೊಳಕೆಯೊಡೆದದ್ದು ಅರವತ್ತರ ದಶಕದ ಆರಂಭದಲ್ಲಿ. ಅಂದು ಕೇಂದ್ರ ಕಾನೂನು ಸಚಿವರಾಗಿದ್ದ ಅಶೋಕ್​ಕುಮಾರ್ ಸೇನ್ ಅವರಿಗೆ ಮೊಟ್ಟಮೊದಲ ಬಾರಿಗೆ ಇಂತಹ ಆಲೋಚನೆ ಮೂಡಿತು. ಉನ್ನತ ಆಡಳಿತ ವ್ಯವಸ್ಥೆಯಲ್ಲಿ ಸಹಜವಾಗಿ ಕಾಣಿಸಿಕೊಳ್ಳಬಹುದಾದ ಭ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ತಡೆಯಲು ಮತ್ತು ಸಾರ್ವಜನಿಕ ಕುಂದುಕೊರತೆಯನ್ನು ಆಲಿಸಲು  ಓಂಬುಡ್ಸ್​ಮನ್ ಮಾದರಿಯಲ್ಲಿ ಬಲವಾದ ಒಂದು ವ್ಯವಸ್ಥೆ ಬೇಕು ಎಂದು ಸೇನ್ ಅಂದು ಪ್ರತಿಪಾದಿಸಿದ್ದರು. ಆದರೆ ಲೋಕಪಾಲ ಅನ್ನುವ ಪದ ಇದೆಯಲ್ಲ ಅದನ್ನು ಹುಟ್ಟುಹಾಕಿದ್ದು ಈ ಸೇನ್ ಅಲ್ಲ, ಬದಲಿಗೆ ಸಂಸದರೂ ಆಗಿದ್ದ ಜಸ್ಟಿಸ್ ಎಲ್.ಎಂ. ಸಿಂಘಿ. ಸಂಸ್ಕೃತದಲ್ಲಿ ಈ ಶಬ್ದಕ್ಕೆ ಪಾಲಕ, ಕಾಯುವವ ಎಂದೆಲ್ಲ ಅರ್ಥವಿದೆ. ಇವರಿಬ್ಬರ ಆಲೋಚನೆಗೆ ಒಟ್ಟಾರೆ ಒಂದು ಸ್ವರೂಪ ಕೊಟ್ಟವರು ಮುತ್ಸದ್ದಿ ಮುರಾರ್ಜಿ ದೇಸಾಯಿ. ಅವರ ನೇತೃತ್ವದಲ್ಲಿ ರಚನೆಯಾದ ಮೊದಲ ಆಡಳಿತ ಸುಧಾರಣಾ ಸಮಿತಿ 1966ರಲ್ಲಿ ವರದಿ ನೀಡಿತು. ‘ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗೆ ಅನುಕ್ರಮವಾಗಿ ಲೋಕಪಾಲ ಮತ್ತು ಲೋಕಾಯುಕ್ತ ಎಂಬ ಎರಡು ಹಂತದ ಸಂವಿಧಾನಬದ್ಧ ಮತ್ತು ಬಲಯುತವಾದ ಕಾವಲು ವ್ಯವಸ್ಥೆಗಳನ್ನು ರಚನೆ ಮಾಡಬೇಕು’ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಯಿತು. ಅದಕ್ಕೆ ಪೂರಕ ಎಂಬಂತೆ 1968ರಲ್ಲಿ ಖ್ಯಾತ ನ್ಯಾಯವಾದಿ ಶಾಂತಿಭೂಷಣ್ ಅವರು ಜನಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಅದಾದ ಒಂದು ವರ್ಷದ ಬಳಿಕ ಜನಲೋಕಪಾಲ ಮಸೂದೆಗೆ ಲೋಕಸಭೆ ಅಂಗೀಕಾರದ ಮುದ್ರೆಯೂ ಬಿತ್ತು. ಆದರೆ ಆ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ಸಿಗುವುದಿಲ್ಲ. ಅದು ಲೋಕಪಾಲ ಮಸೂದೆಗೆ ಎದುರಾದ ಮೊದಲ ವಿಘ್ನ. ನಂತರ ಮಸೂದೆ ಹೆಚ್ಚುಕಡಿಮೆ ಹನ್ನೊಂದು ಬಾರಿ ಸಂಸತ್ತಿನಲ್ಲಿ ಸತತವಾಗಿ ಮಂಡನೆಯಾಗಿ ತಿರಸ್ಕೃತವಾಯಿತು. ನಮ್ಮನ್ನು ಆಳುವ ಸಂಸದರು, ಸರ್ಕಾರಗಳು ಅದೆಷ್ಟು ಬುದ್ಧಿವಂತರು ಎಂದರೆ ಒಂದು ಬಾರಿಯೂ ‘ನಮಗೆ ಲೋಕಪಾಲ ಬೇಡವೇ ಬೇಡ’ ಎಂದು ನೇರವಾಗಿ ಹೇಳುವುದಿಲ್ಲ. ಆದರೆ ಲೋಕಪಾಲ ಮಸೂದೆ ಕುರಿತು ಹೆಚ್ಚು ಚರ್ಚೆ ಮಾಡಲು ಅವಕಾಶವನ್ನೇ ಕೊಡುವುದಿಲ್ಲ. ಇದರಲ್ಲಿ ಆಡಳಿತ ಪಕ್ಷ, ವಿಪಕ್ಷ ಎಂಬ ಭೇದವೇನಿಲ್ಲ. ಲೋಕಪಾಲ ಜಾರಿ ವಿಷಯದಲ್ಲಿ ಎಲ್ಲರೂ ಆ ಪರಿ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಲೇ ಬಂದರು. ಪ್ರತಿ ಬಾರಿ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಮಂಡನೆ ಆದಾಗಲೂ ಅದನ್ನು ಪರಾಮರ್ಶೆ ಮಾಡಲು ಜಂಟಿ ಸಂಸದೀಯ ಸಮಿತಿ, ಇಲಾಖೆ ಸಮಿತಿ ಮತ್ತೊಂದು ಮಗದೊಂದು ಸಮಿತಿಯ ಸುಪರ್ದಿಗೆ ವಹಿಸಿ ಸಾಗಹಾಕುತ್ತಲೇ ಬರಲಾಯಿತು.

        ಪರಿಸ್ಥಿತಿ ಬಿಗಡಾಯಿಸಿದ್ದು 2012-13ರಲ್ಲಿ. ಯುಪಿಎ ಸರ್ಕಾರದ ಸರಣಿ ಭ್ರಷ್ಟಾಚಾರ ಹಗರಣದ ಲಾಭ ತೆಗೆಯಲು ಕೆಲವರು ಆಲೋಚಿಸಿದ್ದರ ಪರಿಣಾಮ ಅದಾಗಿದ್ದರೂ ಇರಬಹುದು. ಜನಲೋಕಪಾಲ ಜಾರಿ ಆಗಲೇಬೇಕೆಂದು ಅಣ್ಣಾ ಹಜಾರೆ ಆಮರಣ ಉಪವಾಸ ಕುಳಿತುಬಿಟ್ಟರು. ಮನಮೋಹನ್ ಸಿಂಗ್ ಸರ್ಕಾರಕ್ಕೆ ವಿಧಿಯಿರಲಿಲ್ಲ. ಮುಖ್ಯವಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಅನ್ಯ ಆಯ್ಕೆ ತೋಚಲಿಲ್ಲ. ಅದೇ ಕಾರಣಕ್ಕೆ ಜನಲೋಕಪಾಲ ಮಸೂದೆಗೆ ಸಂಸತ್ತಿನ ಒಪ್ಪಿಗೆ ಸಿಗುವಂತೆ ಸ್ವತಃ ಸೋನಿಯಾ ನೋಡಿಕೊಂಡರು. ಅದು ಕಾಂಗ್ರೆಸ್ ಪಕ್ಷದ ಮುಖವುಳಿಸಿಕೊಳ್ಳುವ ಕೊನೇ ಪ್ರಯತ್ನವೂ ಆಗಿತ್ತು ಅನ್ನಿ. ಹಾಗಾದರೆ ಇಷ್ಟು ದಿನ ಏನಾಗಿತ್ತು ಧಾಡಿ ಇವರಿಗೆ? ವಿಶೇಷ ಅಂದರೆ ಎಲ್ಲ ಅಳೆದು ಸುರಿದು ಚೌಕಾಸಿ ಮಾಡಿ ನೋಡಿದ ನಂತರವೂ ಪ್ರಧಾನಮಂತ್ರಿ, ಇತರ ಮಂತ್ರಿಗಳು ಹಾಗೂ ಸಂಸದರ ವಿರುದ್ಧವೂ ಭ್ರಷ್ಟಾಚಾರದ ಪ್ರಕರಣ ದಾಖಲಿಸಲು ಅವಕಾಶ ನೀಡುವ ಪ್ರಸ್ತಾವನೆಗೂ ಒಪ್ಪಿಗೆ ಸೂಚಿಸಲಾಯಿತು. ಅದಾಗಿ ಈಗ ಹತ್ತಿರ ಹತ್ತಿರ ಎರಡು ವರ್ಷವಾಗುತ್ತ ಬಂತು. ಇರುವ ಸಣ್ಣಪುಟ್ಟ ಅಡಚಣೆಗಳನ್ನು ನಿವಾರಣೆ ಮಾಡಿಕೊಂಡು ಸೂಕ್ತ ವ್ಯಕ್ತಿಯನ್ನು ಹುಡುಕಿ ಲೋಕಪಾಲರನ್ನಾಗಿ ನೇಮಕ ಮಾಡಲು ಮೋದಿ ಸರ್ಕಾರಕ್ಕೂ ಪುರುಸೊತ್ತಾಗುತ್ತಿಲ್ಲ. ಕೆಲವೊಂದು ವಿಚಾರದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರ ನಡೆಯೂ ಒಂದೇ ತೆರನಾಗಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಲೋಕಪಾಲಕ್ಕೆ ಯಾಕಿಷ್ಟು ಉದಾಸೀನ, ಮುಂದೆ ಈ ವ್ಯವಸ್ಥೆ ಜಾರಿ ಆದರೂ ಪರಿಣಾಮ ಏನಾಗಬಹುದು, ಲೋಕಾಯುಕ್ತದಂತಹ ಸಂಸ್ಥೆ ಯಾಕಿಷ್ಟು ನರಳುತ್ತಿದೆ ಎಂಬುದರ ಒಂದು ಅಂದಾಜು ಸಿಗಲಿ ಎಂಬುದಕ್ಕಾಗಿ ಇಷ್ಟು ವಿವರಣೆ ನೀಡಬೇಕಾಯಿತು.

         ಈಗಿನ ಸಂದರ್ಭದಲ್ಲಿ ಇಲ್ಲಿ ಇನ್ನೂ ಒಂದು ಅಂಶವನ್ನು ನೆನಪು ಮಾಡಿಕೊಳ್ಳುವುದು ಉತ್ತಮ. ಆಡಳಿತ ಸುಧಾರಣಾ ಆಯೋಗವು ಲೋಕಪಾಲ ಮತ್ತು ಲೋಕಾಯುಕ್ತ ರಚನೆಗೆ ಶಿಫಾರಸು ಮಾಡುವಾಗ, ಇಂಥ ಸಂಸ್ಥೆಗಳು ದೇಶದಲ್ಲಿ, ರಾಜ್ಯಗಳಲ್ಲಿ ಯಾಕೆ ಬೇಕು ಎಂಬುದರ ಕುರಿತು ಒಂದು ಸಣ್ಣ ಟಿಪ್ಪಣಿ ನೀಡಿತ್ತು. ‘ನೊಂದ ಜನರ ಮನಸ್ಸಿನಲ್ಲಿರಬಹುದಾದ ತಾರತಮ್ಯದ ಕೊರಗನ್ನು ನಿವಾರಣೆ ಮಾಡುವುದು ಮಾತ್ರವಲ್ಲ, ಆಡಳಿತ ವ್ಯವಸ್ಥೆಯ ವಿಷಯದಲ್ಲಿ ಸಾರ್ವತ್ರಿಕ ನಂಬಿಕೆಯನ್ನು ಗಟ್ಟಿಗೊಳಿಸುವ ಸಲುವಾಗಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆಯನ್ನು ಸದಾ ಕಾಯ್ದುಕೊಳ್ಳುವ ಉದ್ದೇಶಕ್ಕಾಗಿ ಲೋಕಪಾಲ ಮತ್ತು ಲೋಕಾಯುಕ್ತದಂತಹ ಕಾವಲು ವ್ಯವಸ್ಥೆಗಳು ಬೇಕು’ ಎಂಬುದು ಆ ಟಿಪ್ಪಣಿಯ ತಿರುಳು. ಮುರಾರ್ಜಿ ಆಶಯದಂತೆ ಲೋಕಪಾಲ ವ್ಯವಸ್ಥೆ ಜಾರಿಗೆ ಬರಲಿಲ್ಲ ನಿಜ. ಆದರೆ ದೇಶದ ಇಪ್ಪತ್ತು ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂತು. ಅದಕ್ಕೆ ನಾನಾ ರಾಜ್ಯಗಳಲ್ಲಿ ಕಾಂಗ್ರೆಸ್ ಏಕಚಕ್ರಾಧಿಪತ್ಯ ಕೊನೆಗೊಂಡು ಪ್ರಾದೇಶಿಕ ಪಕ್ಷಗಳು ಶಕ್ತಿಯುತವಾಗಿ ತಲೆಯೆತ್ತಿ ನಿಂತದ್ದೂ ಒಂದು ಕಾರಣ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಹಾಗೆ ಲೋಕಾಯುಕ್ತ ರಚನೆ ಮಾಡಿದ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. 1984ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದ ಕಾಲದಲ್ಲಿ ಲೋಕಾಯುಕ್ತ ಕಾಯ್ದೆ ಜಾರಿಗೆ ಬಂತು. ಆದರೆ ಅದೇ ಲೋಕಾಯುಕ್ತದ ಅಸ್ತಿತ್ವ ಜನರ ಕಣ್ಣಿಗೆ ಕಾಣಿಸಿದ್ದು ಮಾತ್ರ ತೀರಾ ಇತ್ತೀಚಿನ ವರ್ಷಗಳಲ್ಲಿ. ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತರಾದ ನಂತರ ಸಂಸ್ಥೆ ಸದ್ದು ಮಾಡಿ ಸುದ್ದಿಯಾಯಿತು. ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಆ ಸಂಸ್ಥೆಗೆ ನಿಜವಾದ ಘನತೆ, ಗೌರವ ಮತ್ತು ವಿಶ್ವಾಸಾರ್ಹತೆ ಪ್ರಾಪ್ತವಾಯಿತು. ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಷ್ಟೂ ಕಾಲ ಭ್ರಷ್ಟರಲ್ಲಿ ನಿಜಕ್ಕೂ ನಡುಕ ಹುಟ್ಟಿಸಿದ್ದರು. ಇದು ಅತಿಶಯೋಕ್ತಿಯಲ್ಲ. ಹೀಗಾಗಿ ಇಲ್ಲೊಂದು ಸಂಗತಿಯನ್ನು ನಾವು ಗಮನಿಸಲೇಬೇಕು. ಅದೇನೆಂದರೆ ಲೋಕಾಯುಕ್ತ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಿದ್ದು ಸಂತೋಷ್ ಹೆಗ್ಡೆಯವರಂತಹ ಪ್ರಾಮಾಣಿಕ, ದಕ್ಷ ವ್ಯಕ್ತಿಯ ಕಾರಣಕ್ಕೇ ಹೊರತು ಲೋಕಾಯುಕ್ತಕ್ಕಿರುವ ಸಾಂವಿಧಾನಿಕ ಮಾನ್ಯತೆ ಮತ್ತು ಕಾಯ್ದೆ ಬಲದಿಂದಲ್ಲ ಎಂಬುದು. ಇದೊಂದು ಅತಿ ಸೂಕ್ಷ್ಮ ವಿಚಾರ. ಬಹುಶಃ ಆಗಲೇ ಕೆಲವರಿಗೆ ಹೊಳೆದಿರಬೇಕು, ಲೋಕಾಯುಕ್ತ ಅಸ್ತ್ರವನ್ನು ಮತ್ತೊಂದು ರೀತಿಯಲ್ಲೂ ಬಳಸಬಹುದು ಎಂದು. ಹೌದೋ ಅಲ್ಲವೋ ನೋಡಿ, ನಾವೀಗ ಲೋಕಾಯುಕ್ತದಂಥ ಬಲಾಢ್ಯ ಸಂಸ್ಥೆಯ ಮತ್ತೊಂದು ಮುಖವನ್ನು ಮತ್ತು ಅದರ ಕೆಟ್ಟ ಪರಿಣಾಮವನ್ನು ಪ್ರತ್ಯಕ್ಷ ನೋಡುತ್ತಿದ್ದೇವೆ. 

     ಸ್ವಲ್ಪ ಫ್ಲ್ಯಾಷ್​ಬ್ಯಾಕ್​ಗೆ ಹೋಗೋಣ. ಮೂರು ವರ್ಷದ ಹಿಂದೆ ಜನಲೋಕಪಾಲಕ್ಕೆ ಆಗ್ರಹಿಸಿ ಅಣ್ಣಾ ಹಜಾರೆ ಮತ್ತು ಕೇಜ್ರಿವಾಲ್ ದೆಹಲಿಯಲ್ಲಿ ಚಳವಳಿ ಆರಂಭಿಸಿದಾಗಲೂ ಹಲವರು ಒಂದು ಮೂಲಭೂತವಾದ ಪ್ರಶ್ನೆಯನ್ನೆತ್ತಿದ್ದರು. ಲೋಕಪಾಲ ಜಾರಿಯಾದ ಮಾತ್ರಕ್ಕೆ ಈ ದೇಶದಲ್ಲಿ ರಾಮರಾಜ್ಯ ನಿರ್ವಣವಾಗಲು ಸಾಧ್ಯವೇ? ಲೋಕಪಾಲ ಅಥವಾ ಲೋಕಾಯುಕ್ತ ವ್ಯವಸ್ಥೆಗಳನ್ನು ಯಶಸ್ವಿಗೊಳಿಸುವಷ್ಟು ನಮ್ಮ ಸಮಾಜ ಮತ್ತು ವ್ಯವಸ್ಥೆ ಪಕ್ವವಾಗಿದೆಯೇ? ಈ ಪ್ರಶ್ನೆಯನ್ನು ಹಜಾರೆ ಮತ್ತು ಕೇಜ್ರಿವಾಲ್ ಅವರಿಗೂ ಕೇಳಲಾಗಿತ್ತು. ಆದರೆ ಯಾರಿಂದಲೂ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ.

       ಹೌದೋ ಅಲ್ಲವೋ ಯೋಚನೆ ಮಾಡಿ ನೋಡಿ. ನಾವು ಇಲ್ಲಿಯವರೆಗೆ ತೀರಾ ಖಡಕ್ ತನಿಖಾ ಸಂಸ್ಥೆ ಎಂದು ನಂಬಿಕೊಂಡದ್ದು ಸಿಬಿಐ ಅನ್ನು. ಮೊದಲೆಲ್ಲ ಕೇವಲ ಆರೋಪ, ಅನುಮಾನಕ್ಕೆ ಗುರಿಯಾಗಿದ್ದ ಈ ಸಂಸ್ಥೆ ಈ ಹಿಂದಿನ ಡೈರೆಕ್ಟರ್ ರಂಜಿತ್ ಸಿನ್ಹಾ ಅಧಿಕಾರಾವಧಿಯಲ್ಲಿ ಯಾವ ಮಟ್ಟಕ್ಕೆ ತಲುಪಿತು ಎಂಬುದನ್ನು ದೇಶದ ಜನರೆಲ್ಲರೂ ಕಣ್ಣಾರೆ ಕಂಡಿದ್ದಾರೆ.

      ಅಪವಾದದ ಸರಣಿಗೆ ಕರ್ನಾಟಕ ಲೋಕಾಯುಕ್ತದ್ದು ತೀರಾ ಇತ್ತೀಚಿನ ಸೇರ್ಪಡೆ. ಆ ಬಗ್ಗೆ ಬೇರೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಈಗ ಎದ್ದಿರುವ ವಿವಾದದ ಸಂದರ್ಭದಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು ಎಂಬುದು ತನಿಖೆಯಿಂದ ಮಾತ್ರ ಗೊತ್ತಾಗಬೇಕಿರುವ ವಿಚಾರ. ಆದರೆ ಒಂದಂತೂ ನಿಜ, ಲೋಕಾಯುಕ್ತದ ಘನತೆಗೆ ಇನ್ನೆಂದೂ ರಿಪೇರಿ ಮಾಡಲಾಗದಷ್ಟು ಹಾನಿಯಾಗಿದೆ. ಲೋಕಾಯುಕ್ತ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲರೂ ತಪ್ಪು ಮಾಡಿ ದಕ್ಕಿಸಿಕೊಳ್ಳುವುದು ಪಕ್ಕಕ್ಕಿರಲಿ, ಅಪವಾದ, ಅನುಮಾನಗಳಿಗೆ ಆಸ್ಪದವೇ ಇರದಂತೆ ನಡೆದುಕೊಳ್ಳುವುದು ಹೊಣೆಗಾರಿಕೆಯ ಲಕ್ಷಣ. ಆ ನಿಟ್ಟಿನಲ್ಲಿ ಈ ಹಿಂದೆ ಲೋಕಾಯುಕ್ತರಾಗಿದ್ದ ಶಿವರಾಜ ಪಾಟೀಲರು ಒಂದೊಳ್ಳೆಯ ಪರಿಪಾಠ ಹಾಕಿಕೊಟ್ಟಿದ್ದಾರೆ. ಶಿವರಾಜ ಪಾಟೀಲರು ಮಾತ್ರವಲ್ಲ, ಹಿಂದೆ ಹವಾಲಾ ಹಗರಣದ ಆರೋಪ ಬಂದಾಗ ಎಲ್.ಕೆ. ಆಡ್ವಾಣಿ ನಡೆದುಕೊಂಡ ರೀತಿಯೂ ಸಾರ್ವಕಾಲಿಕ ಆದರ್ಶವೆ. ಆರೋಪ ಬಂದ ತಕ್ಷಣ ಆಡ್ವಾಣಿಯವರು ವಿಪಕ್ಷ ನಾಯಕನ ಸ್ಥಾನಕ್ಕೆ, ಲೋಕಸಭಾ ಸದಸ್ಯತ್ವಕ್ಕೆ ಎಲ್ಲದಕ್ಕೂ ರಾಜೀನಾಮೆ ನೀಡಿದರು. ‘ಆರೋಪಮುಕ್ತನಾಗುವವರೆಗೆ ಸಂಸತ್ತಿನ ಮೆಟ್ಟಿಲು ತುಳಿಯುವುದಿಲ್ಲ’ ಎಂದು ಶಪಥ ಮಾಡಿದರು. ಹಾಗೇ ನಡೆದುಕೊಂಡರು.

      ತಮಾಷೆ ನೋಡಿ, ಜನಲೋಕಪಾಲಕ್ಕೆ ಆಗ್ರಹಿಸಿ ಚಳವಳಿ ಮಾಡಿ ದೆಹಲಿಯಲ್ಲಿ ಅಧಿಕಾರ ಹಿಡಿದ ಕೇಜ್ರಿವಾಲ್ ತಾವೂ ಮಾಮೂಲಿ ರಾಜಕಾರಣಿಗೇನು ಕಡಿಮೆ ಇಲ್ಲ ಎಂಬುದನ್ನು ಹೆಜ್ಜೆಹೆಜ್ಜೆಗೆ ಸಾಬೀತು ಮಾಡುತ್ತಿದ್ದಾರೆ. ಕರ್ನಾಟಕ ಲೋಕಾಯುಕ್ತರಿಗೆ ಸಂಬಂಧಿಸಿ, ಆರೋಪ ಬಂದ ಮೇಲೆ ಅಧಿಕಾರದಲ್ಲಿ ಒಂದು ಕ್ಷಣವೂ ಉಳಿಯಬಾರದು ಎಂದು ಇತ್ತ ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಅತ್ತ, ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ವಸುಂಧರಾ ರಾಜೆ, ಪಂಕಜಾ ಮುಂಡೆ, ತಾವಡೆ ಮುಂತಾಗಿ ಸಾಲು ಸಾಲು ಆರೋಪ ಎದುರಿಸುತ್ತಿರುವ ಮಂತ್ರಿಗಳ ರಕ್ಷಣೆ ವಿಚಾರದಲ್ಲಿ ಆ ಪಕ್ಷದ ನಾಯಕರ ವರಸೆಯೇ ಬೇರೆ. ‘ನಮ್ಮದು ರಾಜೀನಾಮೆ ಕೊಡುವ ಸಂಸ್ಕೃತಿಯಲ್ಲ’- ಇದು ರಾಜನಾಥ್ ಸಿಂಗ್​ರಂಥವರು ಉದುರಿಸಿದ ಆಣಿಮುತ್ತು. ಹಾಗಾದರೆ ಕೇವಲ ರಾಜೀನಾಮೆ ಕೇಳುವ ಸಂಸ್ಕೃತಿಯಾ ಇವರದ್ದು? ಅಧಿಕಾರಕ್ಕೆ ಬಂದ ತಕ್ಷಣ ನೈತಿಕತೆಯ ವ್ಯಾಖ್ಯಾನವೇ ಬದಲಾಗಿ ಹೋಯಿತೇ? ವಾಸ್ತವದಲ್ಲಿ ಸಂಸ್ಕೃತಿ ಎನ್ನುವ ಪದದ ಪಾವಿತ್ರ್ಯನ್ನಾದರೂ ಕಾಪಾಡಬೇಕಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top