ಮನೆಯಿಂದ ಕೆಲಸ ಮಾಡುವುದು, ವರ್ಕಿಂಗ್ ಫ್ರಮ್ ಹೋಮ್, ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ವಿಷಯವೇನೂ ಅಲ್ಲ. ವಾರಕ್ಕೊಂದು ದಿನವೋ ತಿಂಗಳಿಗೆರಡು ದಿನವೋ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಅನೇಕ ಸಂಸ್ಥೆಗಳು ಬಹಳ ವರ್ಷಗಳಿಂದಲೇ ತಮ್ಮ ಉದ್ಯೋಗಿಗಳಿಗೆ ನೀಡುತ್ತ ಬಂದಿವೆ. ಆಫೀಸಿಗೆ ಹೋಗುವ ಅಗತ್ಯವೇ ಇಲ್ಲದೆ, ಸದಾಕಾಲವೂ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿರುವ ಸಂಸ್ಥೆಗಳೂ ಇವೆ.
ಈ ರೀತಿ ಕೆಲವರಿಗಷ್ಟೇ ಸೀಮಿತವಾಗಿದ್ದ ಸೌಲಭ್ಯವನ್ನು ಎಲ್ಲರಿಗೂ ವಿಸ್ತರಿಸಿದ್ದು, ಐಚ್ಛಿಕವಾಗಿದ್ದುದನ್ನು ಕಡ್ಡಾಯವಾಗಿಸಿದ್ದು ಕೋವಿಡ್-19ರ ಹೆಚ್ಚುಗಾರಿಕೆ. ಕಣ್ಣಿಗೆ ಕಾಣದ ಪುಟಾಣಿ ವೈರಸ್ ಒಂದು ವಿಶ್ವದೆಲ್ಲೆಡೆಯ ಶಾಲೆ, ಕಾಲೇಜು, ಕಚೇರಿ, ಕಾರ್ಖಾನೆಗಳನ್ನು ದಿಢೀರನೆ ಮುಚ್ಚಿಸಿದಾಗ ಎಲ್ಲರಿಗೂ ಎಲ್ಲೆಲ್ಲೂ ಸಿಕ್ಕಿದ್ದು ಒಂದೇ ಆಯ್ಕೆ – ವರ್ಕ್ ಫ್ರಮ್ ಹೋಮ್. ಬಾಹ್ಯ ಜಗತ್ತು ದಿಢೀರನೆ ಬದಲಾದರೂ ಹಲವು ಉದ್ಯೋಗಿಗಳ ಕಚೇರಿ ಕೆಲಸಕ್ಕೆ, ಮಕ್ಕಳ ಆಟಪಾಠಗಳಿಗೆ ಹೆಚ್ಚಿನ ತೊಂದರೆ ಆಗದಂತೆ ಈ ವ್ಯವಸ್ಥೆ ನೋಡಿಕೊಂಡಿದೆ. ಕಚೇರಿಯ ಮೀಟಿಂಗುಗಳಿಂದ ಪ್ರಾರಂಭಿಸಿ ಮಕ್ಕಳ ಪಾಠದವರೆಗೆ ಅನೇಕ ಕೆಲಸಗಳು ಮನೆಯಿಂದಲೇ ನಡೆಯುವುದನ್ನು ಸಾಧ್ಯವಾಗಿಸಿದೆ.
ಇದೀಗ ನಮ್ಮೆಲ್ಲರ ಮನೆಗಳಲ್ಲಿ ಕಾಣುತ್ತಿರುವುದು ಇದರದೇ ಪರಿಣಾಮ. ಪತಿಪತ್ನಿಯರಿಬ್ಬರೂ ದುಡಿಯುತ್ತಿರುವ ಮನೆಗಳಲ್ಲಿ, ಗಂಡ ಒಂದು ಮೂಲೆಯನ್ನು ತನ್ನ ಆಫೀಸನ್ನಾಗಿ ಮಾಡಿಕೊಂಡರೆ ಇನ್ನೊಂದು ಮೂಲೆ ಹೆಂಡತಿಯ ಆಫೀಸ್ ಆಗಿ ಬದಲಾಗಿದೆ. ಮಕ್ಕಳೇನು ಕಡಿಮೆ, ಅವರು ಇನ್ನೊಂದು ಮೂಲೆಯಲ್ಲಿ ಕುಳಿತು ತಮ್ಮ ಆಟವನ್ನೋ ಪಾಠವನ್ನೋ ನೋಡಿಕೊಳ್ಳುತ್ತಿದ್ದಾರೆ. ಎಲ್ಲರ ಕೈಯಲ್ಲೂ ಒಂದೊಂದು ಕಂಪ್ಯೂಟರ್ (ಅಥವಾ ಮೊಬೈಲ್ ಅಥವಾ ಟ್ಯಾಬ್ಲೆಟ್) ಇದೆ ಮತ್ತು ಎಲ್ಲರೂ ಅಂತರಜಾಲ ಸಂಪರ್ಕಕ್ಕೆ ಅಂಟಿಕೊಂಡಿದ್ದಾರೆ!
ನೆಟ್‌ವರ್ಕ್ ಎಂಬ ಒಳತಂತು: ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕಚೇರಿಗಳಿರುವ ಬಹುತೇಕ ಸಂಸ್ಥೆಗಳಲ್ಲಿ ದೈನಂದಿನ ವ್ಯವಹಾರ ನಡೆಯುವುದು ಕಂಪ್ಯೂಟರ್ ಜಾಲಗಳ (ನೆಟ್‌ವರ್ಕ್) ಮೂಲಕವೇ. ಬೆಂಗಳೂರಿನ ಪೀಣ್ಯದಲ್ಲಿ ಕಾರ್ಖಾನೆ, ಜೆಸಿ ರಸ್ತೆಯಲ್ಲಿ ಮಾರಾಟ ಮಳಿಗೆ ಇರುವ ಸಂಸ್ಥೆಯ ಸರ್ವರುಗಳೆಲ್ಲ ಬನಶಂಕರಿಯ ಕಚೇರಿಯಲ್ಲಿರುವುದು ಖಂಡಿತಾ ಸಾಧ್ಯ. ಜೆಸಿ ರಸ್ತೆಯಲ್ಲಿರುವ ಉದ್ಯೋಗಿ ಆ ಸರ್ವರುಗಳನ್ನು ತನ್ನ ಮಳಿಗೆಯಿಂದ ಸಂಪರ್ಕಿಸಬಹುದಾದರೆ, ಒಂದಷ್ಟು ಹೆಚ್ಚುವರಿ ವ್ಯವಸ್ಥೆ ಮಾಡಿಕೊಡುವ ಮೂಲಕ ಆತನ ಮನೆಯಿಂದಲೂ ಅದೇ ರೀತಿಯ ಸಂಪರ್ಕವನ್ನು ಸಾಧ್ಯವಾಗಿಸಬಹುದು. ಇದಕ್ಕೆಲ್ಲ ಅಂತರಜಾಲದ ಮೂಲಸೌಕರ್ಯ ಬಳಕೆಯಾಗುವುದರಿಂದ, ಪೀಣ್ಯ-ಜೆಸಿ ರಸ್ತೆಯ ಬದಲು ಸಂಸ್ಥೆಯ ಉಪಸ್ಥಿತಿ ಫಿಲಿಪೈನ್ಸ್-ಜಪಾನ್‌ಗಳಲ್ಲಿದ್ದರೂ ಇಂಥದ್ದೇ ಸೌಲಭ್ಯ ಒದಗಿಸುವುದು ಸಾಧ್ಯವಾಗುತ್ತದೆ.
ವರ್ಕ್ ಫ್ರಮ್ ಹೋಮ್ ಪರಿಕಲ್ಪನೆಯ ಹೂರಣ ಇಷ್ಟೇ. ಒಂದು ಸಂಸ್ಥೆಯ ಉದ್ಯೋಗಿಗಳು ಆ ಸಂಸ್ಥೆಯ ಕಂಪ್ಯೂಟರ್ ವ್ಯವಸ್ಥೆಯನ್ನು ತಾವು ಇರುವ ಸ್ಥಳದಿಂದಲೇ ಸಂಪರ್ಕಿಸುವುದನ್ನು ಇದು ಸಾಧ್ಯವಾಗಿಸುತ್ತದೆ. ಆದರೆ ಸಾಮಾನ್ಯ ಬಳಕೆದಾರರು ಜಿಮೇಲನ್ನೋ ಫೇಸ್‌ಬುಕ್ಕನ್ನೋ ಬಳಸುವುದಕ್ಕಿಂತ ಇದು ಕೊಂಚ ಭಿನ್ನ. ಏಕೆಂದರೆ, ಸಂಸ್ಥೆಯ ಆಂತರಿಕ ವಿಷಯಗಳ ಗೌಪ್ಯತೆ ಕಾಪಾಡಿಕೊಳ್ಳಲು ಇಲ್ಲಿ ಹೆಚ್ಚಿನ ಸುರಕ್ಷತೆ ಅಗತ್ಯವಿರುತ್ತದೆ.
ಇದಕ್ಕಾಗಿ ವಿಪಿಎನ್ ಎಂಬ ಇನ್ನೊಂದು ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಸಾರ್ವಜನಿಕ ಜಾಲವಾದ ಅಂತರಜಾಲದಲ್ಲಿ, ತಮಗೆ ಮಾತ್ರ ಪ್ರವೇಶವಿರುವ ಒಂದು ವರ್ಚುಯಲ್ ಜಾಲವನ್ನು ಸೃಷ್ಟಿಸಿಕೊಂಡು ಮನೆಯಲ್ಲಿರುವ ಉದ್ಯೋಗಿಗೂ ಕಚೇರಿಯಲ್ಲಿರುವ ಕಂಪ್ಯೂಟರಿಗೂ ನಡುವೆ ಸಂಪರ್ಕ ಸಾಧ್ಯವಾಗಿಸುವುದು ಇದರ ಹೆಗ್ಗಳಿಕೆ. ಕೋವಿಡ್-19 ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಕೆಲಸಮಾಡುತ್ತಿರುವ ಬಹಳಷ್ಟು ಉದ್ಯೋಗಿಗಳು ತಮ್ಮ ಸಂಸ್ಥೆಯ ಆಂತರಿಕ ಜಾಲವನ್ನು ಸಂಪರ್ಕಿಸಲು ಇದೇ ಪರಿಕಲ್ಪನೆಯನ್ನು ಬಳಸುತ್ತಿದ್ದಾರೆ.
ಸಂಸ್ಥೆಯ ಕಂಪ್ಯೂಟರನ್ನು ಸಂಪರ್ಕಿಸುವುದಷ್ಟೇ ಅಲ್ಲ, ಬೇರೆಬೇರೆ ಸ್ಥಳಗಳಲ್ಲಿರುವ ಉದ್ಯೋಗಿಗಳು ವರ್ಚುಯಲ್ ಜಗತ್ತಿನಲ್ಲಿ ಒಟ್ಟು ಸೇರಿ ಮಾತನಾಡುವ, ತಮ್ಮ ಕಡತಗಳನ್ನು ಪರಸ್ಪರ ಹಂಚಿಕೊಳ್ಳುವ ಅವಕಾಶಗಳನ್ನೂ ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಕಲ್ಪಿಸಿಕೊಡುತ್ತವೆ. ಇಂತಹ ಸವಲತ್ತುಗಳು ಕಂಪ್ಯೂಟರಿನಲ್ಲಿ ಮಾತ್ರವೇ ಅಲ್ಲದೆ ಮೊಬೈಲಿನಲ್ಲೂ ಈಗಾಗಲೇ ಲಭ್ಯವಿರುವುದರಿಂದ ಉದ್ಯೋಗಿಗಳು ಮನೆಯ ಮೇಜಿನ ಮುಂದೆ ಕುಳಿತುಕೊಂಡು ಮಾತ್ರವೇ ಅಲ್ಲದೆ ತಾರಸಿಯ ಮೇಲೆ ವಾಕಿಂಗ್ ಮಾಡುತ್ತಲೂ ತಮ್ಮ ಮೀಟಿಂಗುಗಳಲ್ಲಿ ಭಾಗವಹಿಸುವುದು ಸಾಧ್ಯವಾಗಿದೆ. ಕಚೇರಿಯಲ್ಲಿ ಕುಳಿತು ಮೀಟಿಂಗಿನಲ್ಲಿ ಭಾಗವಹಿಸುವಾಗಲೂ ಬೇರೆಬೇರೆ ಉದ್ಯೋಗಿಗಳು ಬೇರೆಬೇರೆ ಸ್ಥಳಗಳಲ್ಲಿರುವುದು ಸಾಮಾನ್ಯವಾದ್ದರಿಂದ ಬನಶಂಕರಿಯ ಕಚೇರಿಯಿಂದ ಕೆಲಸಮಾಡುವುದಕ್ಕೂ ಹೊಸಕೆರೆಹಳ್ಳಿಯ ಮನೆಯಲ್ಲಿ ಕುಳಿತಿರುವುದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಎಂದೇ ಹೇಳಬಹುದು.
ಮನೆಯಿಂದ ಕೆಲಸಮಾಡುವ ಈ ಪರಿಕಲ್ಪನೆ ಮಾಹಿತಿ ತಂತ್ರಜ್ಞಾನದ ಅನೇಕ ಸವಲತ್ತುಗಳನ್ನು ಬಳಸುತ್ತದೆ, ನಿಜ. ಆದರೆ ವರ್ಕ್ ಫ್ರಮ್ ಹೋಮ್ ಸೌಲಭ್ಯ ಕೇವಲ ಅದೊಂದೇ ಕ್ಷೇತ್ರದ ಉದ್ಯೋಗಿಗಳಿಗೆ ಮಾತ್ರ ಸೀಮಿತವೇನಲ್ಲ. ಅಕೌಂಟ್ಸ್, ಎಚ್‌ಆರ್, ಫೈನಾನ್ಸ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಕಸ್ಟಮರ್ ಸರ್ವಿಸ್ ಮುಂತಾದ ಹಲವು ಕ್ಷೇತ್ರಗಳಲ್ಲಿ ತಮ್ಮ ಕೆಲಸಗಳಿಗೆ ಪ್ರಮುಖವಾಗಿ ಕಂಪ್ಯೂಟರನ್ನೇ ಬಳಸುವ ಅನೇಕ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಲಾಕ್‌ಡೌನ್‌ಗೆ ಮೊದಲಿನಿಂದಲೂ ಇದೆ. ಸದ್ಯದ ಲಾಕ್‌ಡೌನ್ ಅಂತಹ ಎಲ್ಲರ ಕಚೇರಿಗಳನ್ನೂ ಬಲವಂತವಾಗಿ ಅವರವರ ಮನೆಗಳಿಗೆ ಕಳುಹಿಸಿಕೊಟ್ಟಿದೆ. ಅದರ ಜೊತೆಗೆ, ಇಷ್ಟೆಲ್ಲ ಸಂಸ್ಥೆಗಳ ಇಷ್ಟೆಲ್ಲ ಜನರು ಇದ್ದಕ್ಕಿದ್ದಂತೆ ಮನೆಗಳಿಂದಲೇ ಕೆಲಸಮಾಡುತ್ತಿರುವ ಇಂದಿನ ಪರಿಸ್ಥಿತಿಯ ಅನುಭವ ಮುಂದೆ ಇಡೀ ಔದ್ಯೋಗಿಕ ಜಗತ್ತನ್ನೇ ಬದಲಿಸಲಿದೆಯೇ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ಪಾಠಕ್ಕೂ ಆಟಕ್ಕೂ ಟೆಕ್
ಈವರೆಗೆ ಹೆಚ್ಚಾಗಿ ಕಚೇರಿ ಕೆಲಸಕ್ಕೆ ಮಾತ್ರವೇ ಸೀಮಿತವಾಗಿದ್ದ ಮಾಹಿತಿ ತಂತ್ರಜ್ಞಾನದ ಅನೇಕ ಸವಲತ್ತುಗಳನ್ನು ಮಕ್ಕಳಿಗೆ ಪಾಠ ಹೇಳುವಂತಹ ಉದ್ದೇಶಗಳಿಗೂ ಬಳಸಲು ಸದ್ಯದ ಲಾಕ್‌ಡೌನ್ ಪ್ರೇರಣೆ ನೀಡಿದೆ. ಮೊಬೈಲನ್ನೂ ಟ್ಯಾಬ್ಲೆಟ್ಟನ್ನೂ ಹೆಚ್ಚು ಸಮಯ ಬಳಸಿದರೆ ಬೈಯುತ್ತಿದ್ದ ಅಪ್ಪ-ಅಮ್ಮಂದಿರೇ ಆ ಸಾಧನಗಳನ್ನು ಮಕ್ಕಳ ಕೈಗೆ ಕೊಟ್ಟು ಕೂರಿಸುವಂತಹ ಸನ್ನಿವೇಶ ಇದರಿಂದಾಗಿ ಸೃಷ್ಟಿಯಾಗಿದೆ. ಇದರ ಜೊತೆಯಲ್ಲಿ ಇಂತಹ ಸವಲತ್ತುಗಳನ್ನು ಸಂಪೂರ್ಣ ಹೊಸದಾದ ಸನ್ನಿವೇಶಗಳಲ್ಲೂ ಬಳಸಲಾಗುತ್ತಿದೆ. ಸಂಬಂಧಿಕರು-ಸ್ನೇಹಿತರ ಜೊತೆ ಹೌಸಿ ಆಟ ಆಡಲು, ದೂರದೂರವಿರುವ ಆಪ್ತರೆಲ್ಲ ಒಟ್ಟು ಸೇರಿ ಹರಟೆ ಹೊಡೆಯಲು ವೀಡಿಯೊ ಕಾನ್ಫರೆನ್ಸ್‌ನಂತಹ ಸೌಲಭ್ಯಗಳನ್ನು ಬಳಸುತ್ತಿರುವುದು ಇದಕ್ಕೆ ಉದಾಹರಣೆ. ಕಚೇರಿಯ ಗೆಳೆಯರೂ ಕಡಿಮೆಯೇನಲ್ಲ, ಕೆಫೆಟೇರಿಯಾದಲ್ಲಿ ಕಾಫಿ ಲೋಟ ಹಿಡಿದು ನಡೆಸುತ್ತಿದ್ದ ಹರಟೆಯನ್ನು ಅವರೂ ಈಗ ವರ್ಚುಯಲ್ ಲೋಕಕ್ಕೆ ಕರೆತಂದಿದ್ದಾರೆ!
ವರ್ಕ್ ಫ್ರಮ್ ಹೋಮ್ ಶಬ್ದಕೋಶ
ಟೆಲಿಕಮ್ಯೂಟ್: ಕಮ್ಯೂಟ್ ಎಂದರೆ ಪ್ರತಿನಿತ್ಯದ ಪ್ರಯಾಣ. ಬಸ್ಸಿನಲ್ಲೋ ಕಾರಿನಲ್ಲೋ ಕಚೇರಿಗೆ ಹೋಗಿ ಕೆಲಸಮಾಡುವ ಬದಲು ದೂರಸಂಪರ್ಕದ ಸೌಲಭ್ಯಗಳನ್ನು (ದೂರವಾಣಿ, ಅಂತರಜಾಲ ಇತ್ಯಾದಿ) ಬಳಸಿಕೊಂಡು ಆ ಕೆಲಸವನ್ನೆಲ್ಲ ಮನೆಯಿಂದಲೇ ಮಾಡುವುದು ಟೆಲಿಕಮ್ಯೂಟ್ – ದೂರಸಂಪರ್ಕ ತಂತ್ರಜ್ಞಾನ ಬಳಸುವ ವರ್ಚುಯಲ್ ಪಯಣ!
ಕಾನ್ಫರೆನ್ಸ್: ಮನೆಯಲ್ಲೇ ಕುಳಿತು, ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಂಡು, ಇತರರೊಡನೆ ನಡೆಸುವ ಮಾತುಕತೆಯೇ ಕಾನ್ಫರೆನ್ಸ್. ಧ್ವನಿರೂಪದ ವಿನಿಮಯಕ್ಕಷ್ಟೇ ಸೀಮಿತವಾದರೆ ಇದು ಟೆಲಿಕಾನ್ಫರೆನ್ಸ್, ಕ್ಯಾಮೆರಾ ಬಳಸಿ ಪರಸ್ಪರರ ವೀಡಿಯೊ ನೋಡಿಕೊಂಡು ಮಾತನಾಡುವುದಾದರೆ ವೀಡಿಯೊ ಕಾನ್ಫರೆನ್ಸ್!
ಸ್ಕ್ರೀನ್ ಶೇರಿಂಗ್: ಒಬ್ಬ ಬಳಕೆದಾರರ ಕಂಪ್ಯೂಟರ್ ಪರದೆಯ ಮೇಲೆ ಏನು ನಡೆಯುತ್ತಿದೆ ಎನ್ನುವುದನ್ನು ತಂತ್ರಾಂಶದ ಸಹಾಯದಿಂದ ಇತರರಿಗೂ ತೋರಿಸುವುದನ್ನು ಸ್ಕ್ರೀನ್ ಶೇರಿಂಗ್ ಎಂದು ಕರೆಯುತ್ತಾರೆ. ಈ ಹಂಚಿಕೆ ಇಬ್ಬರು ಬಳಕೆದಾರರ ನಡುವೆ ನಡೆಯಬಹುದು, ಅಥವಾ ದೊಡ್ಡ ಸಂಖ್ಯೆಯ ಬಳಕೆದಾರರ ನಡುವಿನ ಕಾನ್ಫರೆನ್ಸ್‌ನಲ್ಲೂ ಆಗಬಹುದು.
ಹೋಮ್ ಆಫೀಸ್: ಸೀಮಿತ ಅವಧಿಗೆ ಮಾತ್ರವೇ ಆದರೆ ಯಾವ ಮೂಲೆಯಲ್ಲಿ ಕುಳಿತು ಬೇಕಾದರೂ ಕೆಲಸ ಮಾಡಬಹುದು. ಆದರೆ ವರ್ಕ್ ಫ್ರಮ್ ಹೋಮ್ ಅವಧಿ ದೀರ್ಘವಾಗಿದ್ದರೆ ಹೀಗೆ ಎಲ್ಲೆಲ್ಲೋ ಕುಳಿತು ಕೆಲಸ ಮಾಡುವುದು ಕಷ್ಟ. ಇದನ್ನು ತಪ್ಪಿಸಲೆಂದು ಮನೆಯಲ್ಲೇ ರೂಪಿಸಿಕೊಳ್ಳುವ ಕೆಲಸದ ಸ್ಥಳವೇ ಹೋಮ್ ಆಫೀಸ್.
ರಿಮೋಟ್ ವರ್ಕಿಂಗ್: ಕೆಲಸ ಮಾಡಲು ಕಚೇರಿಗೇ ಹೋಗಬೇಕು ಎನ್ನುವುದು ಹಳೆಯ ವಿಷಯ. ಉದ್ಯೋಗಿಗಳು ಎಲ್ಲಿದ್ದಾರೋ, ಎಲ್ಲಿರಲು ಇಷ್ಟಪಡುತ್ತಾರೋ ಅಲ್ಲಿಂದಲೇ ಕೆಲಸ ಮಾಡುವ ಅವಕಾಶ ಕೊಡುವುದು ಇಂದಿನ ಪ್ರವೃತ್ತಿ. ಇಲ್ಲಿ ಉದ್ಯೋಗಿಗಳು ಕಚೇರಿಯಿಂದ ದೂರವಾಗಿದ್ದುಕೊಂಡು (ರಿಮೋಟ್) ಕೆಲಸ ಮಾಡುವುದರಿಂದ ಇದು ರಿಮೋಟ್ ವರ್ಕಿಂಗ್!
ಫ್ಲೆಕ್ಸಿ-ಟೈಮ್: ಎಲ್ಲಿಂದ ಬೇಕಾದರೂ ಕೆಲಸಮಾಡಬಹುದು ಎನ್ನುವ ಹಾಗೆ ಯಾವ ಸಮಯದಲ್ಲಿ ಬೇಕಾದರೂ ಕೆಲಸ ಮಾಡಬಹುದು ಎನ್ನುವ ಸೌಲಭ್ಯವನ್ನು ಕೆಲವು ಸಂಸ್ಥೆಗಳು ಉದ್ಯೋಗಿಗಳಿಗೆ ನೀಡುತ್ತಿವೆ. ಪ್ರತಿದಿನ ಯಾವ ಅವಧಿಯಲ್ಲಿ ಕೆಲಸ ಮಾಡುತ್ತೇವೆಂದು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಉದ್ಯೋಗಿಗಳಿಗೆ ನೀಡುವ ಈ ವ್ಯವಸ್ಥೆಯೇ ಫ್ಲೆಕ್ಸಿ-ಟೈಮ್.