‘ಹೊಗಳಿಕೆಯ ಹೊನ್ನಶೂಲಕೆ ಹೆದರುವೆ’

ಭಾಗ 2

ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಐವತ್ತು ವರ್ಷಗಳಾಗುತ್ತಿವೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೆಗ್ಗಡೆಯವರು ಹಲವು ಸಂಗತಿಗಳ ಕುರಿತು ವಿವರವಾಗಿ ಮಾತನಾಡಿದ್ದಾರೆ.

# ತಮ್ಮ ಸೇವೆಯ ಕಾರಣಕ್ಕೆ, ಧರ್ಮಸ್ಥಳದ ಕ್ಷೇತ್ರದ ಮಹಿಮೆಯ ಕಾರಣಕ್ಕೆ ಅಪಾರ ಹೊಗಳಿಕೆ ಕೇಳಿಬರುತ್ತಿರುತ್ತದೆ. ಇದನ್ನು ತಾವು ಹೇಗೆ ಸ್ವೀಕರಿಸುತ್ತೀರಿ?

ಇಂತಹ ಹೊಗಳಿಕೆಗಳಿಂದ ಭಯವಾಗುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಸೇವೆಯ ಅವಕಾಶಗಳು ಸಾಕಷ್ಟಿವೆ. ಇನ್ನೂ ನೂರು ಕೆಲಸಗಳನ್ನು ನಾವು ಮಾಡಬಹುದು. ಕಳೆದ ಎರಡು ವರ್ಷದಿಂದ ಕೆರೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ಈ ಕಾರ್ಯದಲ್ಲಿ ಆಯಾ ಊರಿನ ಜನ ಒಟ್ಟಾಗುತ್ತಾರೆ, ತಾವೇ ಬಂಡವಾಳ ಹಾಕುತ್ತಾರೆ. ಅಲ್ಲಿಯ ಶಾಸಕರು, ಸಂಸದರೂ ನೆರವು ನೀಡುತ್ತಾರೆ. ಕೆರೆ ಅಭಿವೃದ್ಧಿ ಆಲೋಚನೆ ಮೂಡಿದ್ದು ನಮ್ಮ ಶ್ರೀಮತಿಯವರಿಗೆ. ಹಾಗೆಯೇ ಸೀಡ್ ಬಾಲ್ ಕಲ್ಪನೆ ಕೂಡ ಅವರದ್ದೇ. ಒಂದು ಮಣ್ಣಿನ ಉಂಡೆ ಮಾಡಿ ಅದರೊಳಗೆ ಒಂದೆರಡು ಬೀಜಗಳನ್ನು ಇಟ್ಟು ಬಳಸಿದರೆ ಅದರಿಂದ ಲಕ್ಷಾಂತರ ಗಿಡಗಳು ಹುಟ್ಟಿಕೊಳ್ಳಬಹುದು. ಕಳೆದ ವರ್ಷ ಸುಮಾರು 23 ಲಕ್ಷ ಬೀಜದ ಮಣ್ಣಿನ ಉಂಡೆಗಳನ್ನು ವಿತರಿಸಿ ಪ್ರಕೃತಿಯಲ್ಲಿ ಹಾಕಿದ್ದೇವೆ. ಹಾಗೆಯೇ ನಮ್ಮ ಕಾರ್ಯಕರ್ತರು

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಣ್ಣಿನ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿಯ ಬದಲು ತೆಂಗಿನಕಾಯಿ ಗಣೇಶನನ್ನು ಮಾಡಿ ಅದನ್ನೇ ಪೂಜೆ ಮಾಡಿ ವಿಸರ್ಜನೆ ಮಾಡುವ ವಿಧಾನವೊಂದನ್ನು ರೂಪಿಸಿದ್ದಾರೆ. ಇಂಥ ಕಾರ್ಯ ನಿರಂತರ.

# ಧರ್ಮಸ್ಥಳದಲ್ಲಿ ನಡೆಯುವ ನ್ಯಾಯ ತೀರ್ವನದಲ್ಲಿ ಹುಯಿಲನ್ನು ಹೇಳಿಕೊಳ್ಳುವಂಥದು ಅಂತ ಇದೆ. ಏನಿದು? ಏನಿದರ ವಿಶೇಷತೆ?

ಹುಯ್ಲಿಡುವುದು ಎಂದರೆ ನ್ಯಾಯಕ್ಕಾಗಿ ಮೊರೆ ಇಡುವುದು ಎಂದರ್ಥ. ಒಬ್ಬ ವ್ಯಕ್ತಿ ಅಸಹಾಯಕನಾದ ಸಂದರ್ಭದಲ್ಲಿ ದೇವರಿಗೆ ಮೊರೆ ಇಡುವುದಕ್ಕೆ ಹುಯ್ಲಿಡುವುದು ಎನ್ನಲಾಗುತ್ತದೆ. ಈ ಹುಯ್ಲಿನಲ್ಲಿ ಎರಡು ರೀತಿ ಇದೆ. ಒಂದು ತಕ್ಷಣದ ಪ್ರತಿಕ್ರಿಯೆ. ಇದರಲ್ಲಿ ಆಗುತ್ತಿರುವ ಅನ್ಯಾಯ ಅಧರ್ಮ ಕೂಡಲೇ ನಿಲ್ಲುವಂಥದ್ದು. ಇನ್ನೊಂದು ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಮಾಡುವಂಥದ್ದು. ಇದು ತಕ್ಷಣಕ್ಕೆ ಅಲ್ಲದಿದ್ದರೂ ಮಂಜುನಾಥನಲ್ಲಿ ಸಂಪೂರ್ಣ ಶರಣಾಗತನಾಗಿ ನ್ಯಾಯಕ್ಕಾಗಿ ಮೊರೆಹೋಗುವುದಾಗಿದೆ. ಅನ್ಯಾಯ ಮಾಡಿದವರನ್ನು ದೇವರು ನೋಡಿಕೊಳ್ಳಲಿ ಎಂದು ದೇವರ ಮುಂದೆ ಆಣೆ ಮಾಡುವ ವಿಧಾನವೂ ಇದೆ. ಮತ್ತೊಂದು ಪ್ರಮಾಣ ಮಾಡುವುದು. ಇದರಲ್ಲಿ ಎರಡು ವ್ಯಕ್ತಿ ಅಥವಾ ಪಕ್ಷದ ಮಧ್ಯೆ ಜಿಜ್ಞಾಸೆ ಬಂದಾಗ ತೀರ್ವನಕ್ಕಾಗಿ ಮಂಜುನಾಥನ ಮೊರೆ ಹೋಗುವುದಾಗಿದೆ. ಕೊನೆಯದ್ದು ಶಾಪ. ಇದರಲ್ಲಿ ನಮ್ಮ ಕೈ ಮೀರಿ ಹೋದ ಸಂದರ್ಭದಲ್ಲಿ ಆಡಿದ ಮಾತು ಶಾಪವಾಗಿ ಪರಿಣಮಿಸಿರುತ್ತದೆ. ಇದನ್ನು ಬಾಯಲ್ಲಿ ಹೇಳಬೇಕಾದ್ದಿಲ್ಲ, ಹಿರಿಯರ ಕಣ್ಣೀರಿನಿಂದಲೂ ಶಾಪ ಬಂದಿರಬಹುದು. ಆದ್ದರಿಂದ ಹಿರಿಯರನ್ನು ಗೌರವಿಸಬೇಕು, ಸಂಬಂಧಗಳಲ್ಲಿ ಇರುವ ಮೌಲ್ಯಗಳನ್ನು ಗೌರವಿಸಬೇಕು.

# ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ ಮತ್ತು ಮಾಹಿತಿ ಯುಗವನ್ನು ಗಮನದಲ್ಲಿಟ್ಟುಕೊಂಡು ಇನ್ನು 10 ರಿಂದ 15 ವರ್ಷದಲ್ಲಿ ದೇವಸ್ಥಾನದ ಮತ್ತು ಇತರ ಸಂಘ ಸಂಸ್ಥೆಗಳನ್ನು ಅಣಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಏನಾದರು ವಿಶೇಷ ಯೋಜನೆ ಅಥವಾ ಆಲೋಚನೆ ಇದೆಯಾ?

ಖಂಡಿತಾ ಇದೆ. ನನ್ನ ದೃಷ್ಟಿಯಲ್ಲಿ ವಿಜ್ಞಾನ ನಮ್ಮ ಸೇವಕ. ನಾವು ವಿಜ್ಞಾನದ ಸೇವಕರಾಗಬಾರದು. ನಮ್ಮ ಆಯುರ್ವೆದ ಆಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳನ್ನು ಇಟ್ಟುಕೊಂಡಿದ್ದೇವೆ. ನಿಖರವಾದ ಕಾರಣ ಕಂಡುಕೊಳ್ಳಲು ಅದನ್ನು ಬಳಸಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಇಂದು ನಮ್ಮಲ್ಲಿರುವ 37 ಲಕ್ಷ ಸದಸ್ಯರಲ್ಲಿ ಯಾರು ಏನು ಮಾಡಬೇಕು ಮತ್ತು ಏನು ಮಾಡುತ್ತಿದ್ದಾರೆ ಎಂಬುದನ್ನು ಮೊಬೈಲ್​ನ ಮೂಲಕ ತಿಳಿದುಕೊಳ್ಳುವ ವ್ಯವಸ್ಥೆ ಇದೆ.

# ಇಂದಿನ ಸ್ಟಾರ್ಟಪ್ ಯುಗದಲ್ಲಿ ಹೊಸ ಹೊಸ ಉದ್ಯಮಗಳ ಸ್ಥಾಪನೆ ಮಹತ್ವ ಪಡೆಯುತ್ತಿದೆ. ಧರ್ಮಸ್ಥಳದ ದೇವಾಲಯ ಮತ್ತು ಇದರ ಸಂಸ್ಥೆಗಳು ಈ ನವೋದ್ಯಮಗಳ ನಕ್ಷೆಯಲ್ಲಿ ಗುರುತಿಸಿಕೊಳ್ಳಲು ಏನಾದರೂ ಯೋಜನೆ ನಿಮ್ಮಲ್ಲಿದೆಯಾ?

ಮುಖ್ಯವಾಗಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಾವಿದನ್ನು ಪ್ರೋತ್ಸಾಹಿಸುತ್ತಿದ್ದೇವೆ. ಉದಾಹರಣೆಗೆ ಇಂಜಿನಿಯರಿಂಗ್ ಕಾಲೇಜು, ಡಿಪ್ಲೊಮಾ ಮತ್ತು ಐ.ಟಿ.ಐ. ಈ ಮೂರು ಸಂಸ್ಥೆಗಳಲ್ಲಿ ಸ್ಟಾರ್ಟಪ್​ಗಳಿಗೆ ಅವಕಾಶವಿದೆ. ಜತೆಗೆ ಸ್ಟಾರ್ಟಪ್​ಗಳಿಗೆ ನಾವು ಪ್ರೋತ್ಸಾಹ ಕೊಡುತ್ತಿದ್ದೇವೆ. ನಮ್ಮ ರುಡ್​ಸೆಟ್ ಕೂಡ ಒಂದರ್ಥದಲ್ಲಿ ಸ್ಟಾರ್ಟಪ್ ಸಂಸ್ಥೆಯೇ. ಯಾರೂ ಮಾಡದೇ ಇರುವಂಥ ಕೆಲಸಗಳನ್ನು ನಾವು ಇವುಗಳಲ್ಲಿ ಅಳವಡಿಸಿಕೊಳ್ಳಬೇಕು.

# ಧರ್ಮಸ್ಥಳ ಇಂದು ಹಲವು ಮುಖಗಳಲ್ಲಿ ಬೆಳೆಯುತ್ತಾ ಇದೆ. ಇದರ ಘನ ಉದ್ದೇಶದ ಜತೆಗೆ ಮೌಲ್ಯಗಳ ಅನುಸರಣೆಯಲ್ಲಿ ಅದೇ ತಾಜಾತನವನ್ನು ಇಂದಿಗೂ ಉಳಿಸಿಕೊಳ್ಳಲು ಸಾಧ್ಯವಾಗಿದೆಯಾ?

ಮೂಲ ಸ್ಪೂರ್ತಿ ಏನಿತ್ತೋ ಇಂದಿಗೂ ಅದು ಹಾಗೆಯೇ ಇದೆ ಮುಂದೆಯೂ ಹಾಗೇ ಇರುತ್ತದೆ. ನಮ್ಮ ಆರ್ಥಿಕ ಸಂಪನ್ಮೂಲಗಳು ಹೆಚ್ಚಿದಂತೆಲ್ಲ ಅದನ್ನು ವಿಸ್ತಾರ ಮಾಡುತ್ತಾ ಬರುತ್ತಿದ್ದೇವೆ. ನಮ್ಮ ತಂದೆಯವರ ಕಾಲದಲ್ಲಿ ಕೇವಲ ಎರಡು ಹೈಸ್ಕೂಲ್ ಮತ್ತು ಒಂದು ಕಾಲೇಜಿತ್ತು. ಇವತ್ತು ಸುಮಾರು 60 ಸಂಸ್ಥೆಗಳಾಗಿವೆ.

# ಟೀಕೆ, ವಿಮರ್ಶೆಗಳಿಗೆ ಸೂರ್ಯ ಚಂದ್ರರು ಕೂಡ ಹೊರತಲ್ಲ. ತಮ್ಮ ವಿಚಾರದಲ್ಲೂ ಆ ರೀತಿಯಾದಂತಹ ಸಂದರ್ಭದಲ್ಲಿ ಅದನ್ನು ಹೇಗೆ ಸ್ವೀಕರಿಸುತ್ತೀರಾ?

ಆರೋಪ ಎನ್ನುವ ಶಬ್ದದಲ್ಲಿ ಎರಡು ಅರ್ಥವಿರುತ್ತದೆ. ಒಂದು ಸತ್ವಪೂರ್ಣವಾದದ್ದು ಮತ್ತು ಸತ್ಯದ್ದು. ಇನ್ನೊಂದು ಅಸೂಯೆ ಮತ್ತು ದ್ವೇಷದಿಂದ ಬರುವಂತಹದ್ದು. ಇವೆರಡರಿಂದ ಮಹಾತ್ಮರು ಕೂಡ ತಪ್ಪಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಟೀಕೆ ಮತ್ತು ವಿಮರ್ಶೆಗಳನ್ನು ಸ್ವೀಕರಿಸಲೇ ಬೇಕು. ಯಾರು ಪ್ರಶಂಸೆಗಳನ್ನು ಸ್ವೀಕರಿಸಲು ಸಿದ್ಧರಿರುತ್ತಾರೋ ಅವರು ದೂಷಣೆಗಳನ್ನು ಸ್ವೀಕರಿಸಲೂ ಸಿದ್ಧರಿರಬೇಕು.

# ನೀವೊಬ್ಬ ಕ್ರಿಯಾಶೀಲ ಫೋಟೋಗ್ರಾಫರ್ ಸಹ ಹೌದು. ಹಾಗೆಯೇ ಇಲ್ಲಿಯ ವಸ್ತು ಸಂಗ್ರಹಾಲಯದ ಕಲ್ಪನೆಯೂ ನಿಮ್ಮ ಕ್ರಿಯಾಶೀಲತೆಯ ಸಂಕೇತ. ಆ ಕುರಿತು ತಿಳಿಸುವಿರಾ?

ನಾನು ಬದುಕನ್ನು ಪ್ರೀತಿಸುತ್ತೇನೆ. ಪ್ರೀತಿಗಿಂತ ಪ್ರಿಯವಾದ ವಸ್ತು ಇನ್ನೊಂದಿಲ್ಲ. ಅದೇ ರೀತಿಯಲ್ಲಿ ನಾನು ಪ್ರಕೃತಿಯನ್ನು ಆರಾಧಿಸುತ್ತೇನೆ. ನನ್ನ ಕುತೂಹಲವೇನೆಂದರೆ, ಈ ಚಿಂತನೆಯಿಂದ ವಿಜ್ಞಾನ ಹೇಗೆ ಬೆಳೆಯಿತು ಎನ್ನುವುದು. ಹಾಗಾಗಿ ವಸ್ತು ಸಂಗ್ರಹಾಲಯ, ಕಾರುಗಳ ಸಂಗ್ರಹಾಲಯವನ್ನು ಸಹ ಬೆಳೆಸಿದೆ. ನನಗೆ ಕಾರುಗಳನ್ನು ನೋಡುವಾಗ ಅದರ ಬಾಹ್ಯ ಸೌಂದರ್ಯಕ್ಕಿಂತ ಅದರ ಒಳಗಿನ ಮೆಕ್ಯಾನಿಸಂ ಬಗ್ಗೆ ಹೆಚ್ಚು ಕುತೂಹಲ ಮೂಡುತ್ತದೆ. ಫೋಟೋಗ್ರಫಿ ನನಗೆ ಮೊದಲಿನಿಂದಲೂ ಬಹಳ ಪ್ರೀತಿಯ ವಿಚಾರ. ವರ್ಷದಲ್ಲಿ ನಾವು ಸುಮಾರು 10 ದಿವಸ ಧರ್ಮಸ್ಥಳವನ್ನು ಕ್ಷೇತ್ರದ ಸಿಬ್ಬಂದಿಗೆ ವಹಿಸಿ ಪ್ರವಾಸ ಹೋಗುತ್ತೇವೆ. ಆಗ ಕುಟುಂಬ ಸದಸ್ಯರೊಂದಿಗೆ ಪ್ರಕೃತಿಯನ್ನು ಆಹ್ಲಾದಿಸುತ್ತಾ ಅದನ್ನೆಲ್ಲ ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ನನಗೊಂದು ಹವ್ಯಾಸವಾಗಿ ಹೋಗಿದೆ. ಜೀವನಕ್ಕೆ ಬೇಲಿಗಳನ್ನು ಹಾಕಿಕೊಳ್ಳದೆ ಅದನ್ನು ಪ್ರೀತಿಸುವುದನ್ನು ಕಲಿಯಬೇಕು. ಒಬ್ಬ ಧರ್ಮಾಧಿಕಾರಿ ಯಾವುದೇ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಬಾರದು. ಹಾಗಂತ ನಾನು ರಾಜಕೀಯ ವಿಚಾರದಿಂದ ದೂರವಿಲ್ಲ. ಎಲ್ಲವನ್ನು ತಿಳಿದುಕೊಳ್ಳುವ ಹಂಬಲ ನನಗಿದೆ. ಹಾಗಾಗಿ ಇಲ್ಲಿಗೆ ಬರುವ ರಾಜಕೀಯ ಧುರೀಣರೊಂದಿಗೆ ಚರ್ಚೆ ಮಾಡುತ್ತೇನೆ. ಆದರೆ ಯಾವುದೇ ನಿರ್ದಿಷ್ಟ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ.

# ತಮ್ಮ ಬಾಲ್ಯದ ನೆನಪುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ತಿಳಿಸುವಿರಾ?

ನನ್ನ ಶಿಕ್ಷಣ ಧರ್ಮಸ್ಥಳದಲ್ಲೇ ಆಯಿತು. 1962ರ ಸಮಯದಲ್ಲಿ ಧರ್ಮಸ್ಥಳದಲ್ಲಿ ಹೈಸ್ಕೂಲ್ ಇರಲಿಲ್ಲ. ಹಾಗಾಗಿ ಉಜಿರೆಗೆ ಹೋಗಬೇಕಾಗಿತ್ತು. ಅಲ್ಲಿ ಸಿದ್ದವನ ಗುರುಕುಲ ಎಂಬುದಿತ್ತು, ಈಗಲೂ ಇದೆ. ನಮ್ಮ ತಂದೆಯವರು ನನ್ನ ಮಗ ಹೆಗ್ಗಡೆಯವರ ಮಗನಾಗಿ ಬೆಳೆಯಬಾರದು. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಬೆಳೆಯಬೇಕು ಎಂಬ ಕಾರಣಕ್ಕಾಗಿ ನನ್ನನ್ನು ಸಿದ್ದವನ ಗುರುಕುಲದ ಹಾಸ್ಟೆಲ್​ನಲ್ಲಿ ಸೇರಿಸಿದರು. ಇದು ನನ್ನ ವ್ಯಕ್ತಿತ್ವ ನಿರ್ವಣಕ್ಕೆ ತುಂಬಾ ಪ್ರಯೋಜನವಾಯಿತು. ಆನಂತರ ನನ್ನನ್ನು ಬೆಂಗಳೂರಿನ ಶಿಕ್ಷಣ ಸಂಸ್ಥೆಗೆ ಸೇರಿಸಿದರು. ಶೇಷಾದ್ರಿಪುರಂ ಹೈಸ್ಕೂಲ್​ನಲ್ಲಿ ಕೆಲ ವರ್ಷವಿದ್ದೆ. ಸೇಂಟ್ ಜೋಸೆಫ್​ನಲ್ಲಿ ಪಿಯುಸಿ ವ್ಯಾಸಂಗ ಮಾಡಿದೆ. ಆಮೇಲೆ ಸರ್ಕಾರಿ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದೆ. ಸಾಮಾನ್ಯ ಜನರೊಂದಿಗೆ ಬೆಳೆಯಬೇಕು ಎಂಬ ಕಾರಣಕ್ಕೆ ನನ್ನನ್ನು ಸರ್ಕಾರಿ ಕಾಲೇಜಿಗೆ ಸೇರಿಸಿದ್ದರು. ತಂದೆಯವರ ದೇಹಾಂತ್ಯವಾದ ಕಾರಣ ನಾನು ಧರ್ಮಸ್ಥಳಕ್ಕೆ ಮರಳಬೇಕಾಯಿತು. ಬಾಲ್ಯದಲ್ಲಿ ಅಜ್ಜಿಯ ಆಶ್ರಯ ನಮಗೆ ಸಿಕ್ಕಿದ್ದು ಸಾಕಷ್ಟು ಪ್ರಯೋಜನಕ್ಕೆ ಬಂತು. ಬಾಲ್ಯದಲ್ಲಿ ನನಗೆ ಕ್ರಿಕೆಟ್ ಎಂದರೆ ಅತಿ ಹೆಚ್ಚು ಪ್ರೀತಿ. ಹಾಗೆಯೇ ಯಕ್ಷಗಾನದ ಗೀಳು ಹೆಚ್ಚಿತ್ತು. ನನ್ನ ವ್ಯಕ್ತಿತ್ವ ನಿರ್ವಣಕ್ಕೂ ಇವು ಸಹಕಾರಿಯಾಗಿದೆ. ಅಂದಿದ್ದ ಸಾಕಷ್ಟು ಜನ ಸ್ನೇಹಿತರು ನನಗೆ ಇಂದಿಗೂ ಸ್ನೇಹಿತರಾಗೇ ಉಳಿದಿದ್ದಾರೆ. ನನಗೆ ಸುಮಾರು 21ನೇ ವಯಸ್ಸಿನಲ್ಲಿಯೇ ಪಟ್ಟಾಭಿಷೇಕವಾದ್ದರಿಂದ ಬಾಲ್ಯ ಬಹು ಬೇಗನೇ ಕಳೆದುಹೋಯಿತು ಎಂದೇ ಹೇಳಬಹುದು.

# ಯೌವನದ ಸಮಯದಲ್ಲೇ ಗುರುತರವಾದ ಹೊಣೆಗಾರಿಕೆ ನಿಮ್ಮ ಹೆಗಲೇರಿತು. ನಿಮ್ಮ ಈ ಅಹರ್ನಿಶಿ ದುಡಿಮೆಯ ಹಿಂದೆ ಅಮ್ಮ ಹಾಗೂ ಕುಟುಂಬಸ್ಥರ ಪಾತ್ರವೆಷ್ಟು?

ಮುಖ್ಯವಾಗಿ ಮೊದಲಿನ ದಿನಗಳಲ್ಲಿ ನನಗೆ ಬೆಂಬಲವಾಗಿ ಇದ್ದಿದ್ದೇ ತಾಯಿ ರತ್ನಮ್ಮ. ನನಗೆ ಪಟ್ಟಾಭಿಷೇಕವಾದ ವರ್ಷವೇ ಬಾಹುಬಲಿ ಮೂರ್ತಿಯ ಸಾಗಾಣಿಕೆ ಮತ್ತು ಇತರೆ ಕೆಲಸವನ್ನು ಮಾಡಬೇಕಾಗಿ ಬಂತು. ನಾನು ಇಲ್ಲಿಯ ಎಲ್ಲ ಚಟುವಟಿಕೆಯಲ್ಲಿ ಸಕ್ರಿಯನಾಗಿ ಭಾಗವಹಿಸಬೇಕಾಗಿ ಬಂದಿದ್ದರಿಂದ ಯೌವನದ ಸಮಯದಲ್ಲಿ ಮನಸ್ಸು ಎಲ್ಲೆಲ್ಲಿಗೋ ಸಂಚರಿಸದಂತೆ ಹತೋಟಿಯಲ್ಲಿಡಲು ಸಹಕಾರಿಯಾಯಿತು ಎನ್ನಬಹುದು. 1972ರಲ್ಲಿ ಹೇಮಾವತಿಯವರೊಂದಿಗೆ ನನ್ನ ವಿವಾಹವಾಯಿತು. ಪತ್ನಿಯೊಂದಿಗೆ ನನ್ನ ಸಹೋದರರಾದ ಸುರೇಂದ್ರಕುಮಾರ್, ಹರ್ಷೆಂದ್ರ, ರಾಜೇಂದ್ರ ಮತ್ತು ಸಹೋದರಿ ಪದ್ಮಲತಾ ನನ್ನೊಂದಿಗೆ ಸೇವೆಗೆ ನಿಂತುಕೊಂಡರು. ಹೇಮಾವತಿಯವರಂತೂ ನನಗೆ ಸೇವಾ ಚಟುವಟಿಕೆಗೆ ಸಂಬಂಧಿಸಿದಂತೆ ಪ್ರೇರಣೆಗಳನ್ನು ಕೊಡುತ್ತಾ ಬಂದಿದ್ದಾರೆ. ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಅವರ ಪಾತ್ರ ದೊಡ್ಡದು. ಹೀಗಾಗಿ ನಮ್ಮ ಕಾರ್ಯಕರ್ತರಿಗೆ ನಿಜವಾದ ಅಮ್ಮ ಅವರೇ. ಕಾರ್ಯಕರ್ತರ ಯೋಗಕ್ಷೇಮ, ಸವಲತ್ತುಗಳು, ವೇತನ ಮತ್ತು ಇನ್ನಿತರೆ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸುವ ಹಾಗೂ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗುವ ವಿಶೇಷ ಗುಣ ಅವರಲ್ಲಿದೆ.

# ಧರ್ಮ ಮತ್ತು ಅಧ್ಯಾತ್ಮ ಇಂದು ಚರ್ಚೆ ಮತ್ತು ಟೀಕೆಗೆ ಗ್ರಾಸವಾಗುತ್ತಿದೆ. ಇವುಗಳ ಪ್ರಸ್ತುತತೆಯ ಬಗ್ಗೆ ನಿಮ್ಮ ನಿಲುವು ಮತ್ತು ಅಭಿಪ್ರಾಯವೇನು?

ಇದು ಹಿಂದೆಯೂ ಇತ್ತು ಮತ್ತು ಈಗಲೂ ಇದೆ. ಬುದ್ಧ, ಮಹಾವೀರರಿಂದ ಹಿಡಿದು ಬಸವಣ್ಣನವರ ಕಾಲದವರೆಗೆ ಗಮನಿಸಿದಾಗ, ಎಲ್ಲಿ ಸಂಘರ್ಷವಾಗಿದೆಯೋ ಅಲ್ಲಿ ಮಾತ್ರ ಅಮೃತ ಮತ್ತು ವಿಷ ಹುಟ್ಟಿದೆ ಮತ್ತು ಪ್ರತ್ಯೇಕವಾಗಿದೆ. ಅಮೃತದ ಬೆಲೆ ಗೊತ್ತಾಗಬೇಕಾದರೆ ಅದು ವಿಷದಿಂದ ಮುಕ್ತವಾಗಿರಬೇಕು. ಹಾಗೆಯೇ ವಿಷದ ಬೆಲೆ ಗೊತ್ತಾಗಬೇಕಾದರೆ ಅದು ಪ್ರತ್ಯೇಕವಾಗಿರಬೇಕು. ಆದರೆ ಜಿಜ್ಞಾಸೆಯ ಬದಲು ಅದು ಈಗ ದ್ವೇಷವಾಗಿ ದೂಷಣೆಯಾಗಿ ಪರಿವರ್ತನೆಗೊಳ್ಳುತ್ತಿರುವುದು ದುರದೃಷ್ಟಕರ. ಆದರೆ ಸಂತೋಷವೇನೆಂದರೆ ಶ್ರೀಸಾಮಾನ್ಯರು ಸಹ ಇಂದು ಧರ್ಮದ ವಿವೇಚನೆ ಮಾಡುತ್ತಿದ್ದಾರೆ. ಅಧ್ಯಾತ್ಮದ ಬಗ್ಗೆ ಸುಮಾರು 40-50 ವರ್ಷಗಳ ಹಿಂದೆ ಇಷ್ಟೊಂದು ಚರ್ಚೆಯಾಗುತ್ತಿರಲಿಲ್ಲ. ಪುಸ್ತಕಗಳು ಪ್ರಕಟವಾಗುತ್ತಿರಲಿಲ್ಲ. ಹಾಗೆಯೇ ಜನರಲ್ಲಿ ಮೂಢನಂಬಿಕೆ ಬೆಳೆಯಲು ಬಿಡಬಾರದು. ಸರ್ಕಾರ ತರಲು ಹೊರಟಿರುವ ಮೂಢನಂಬಿಕೆ ನಿಷೇಧ ಕಾಯ್ದೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಅದರಲ್ಲಿ ಪರಿಷ್ಕರಣೆ ಅವಶ್ಯಕತೆ ಇದೆ.

# ಯುವಭಾರತದ ರೂವಾರಿಗಳಲ್ಲಿಂದು ದುಶ್ಚಟ ಹೆಚ್ಚಾಗುತ್ತಾ ಇವೆ. ಹಾಗೆಯೇ ನೈತಿಕ ಪ್ರಜ್ಞೆ, ಜವಾಬ್ದಾರಿ ಮತ್ತು ದೇಶದ ಕಡೆಗಿನ ಚಿಂತನೆ ಕಡಿಮೆಯಾಗುತ್ತಾ ಇದೆ. ಇಂಥ ಸಂದರ್ಭದಲ್ಲಿ ಯುವಕರಿಗೆ ನೀವು ಹೇಳುವುದೇನು?

ನಿಮ್ಮ ಮಾತು ಸತ್ಯ. ಆದರೆ ಯುವಪೀಳಿಗೆ ಎನ್ನುವುದು ಸತತವಾಗಿ ಬದಲಾಗುವಂತಹದು. ಇವತ್ತಿನ ಯುವಕರಲ್ಲಿ ಹೊಣೆಗಾರಿಕೆಯ ಪ್ರಜ್ಞೆ ಜಾಸ್ತಿಯಾಗಿದೆ. ಹಾಗೆಯೇ ಇನ್ನೊಂದೆಡೆ ಬದುಕನ್ನು ಕಡೆಗಣಿಸುತ್ತಿದ್ದಾರೆ. ಇವರಲ್ಲಿ ಬದುಕು, ಬಾಂಧವ್ಯ, ಪ್ರೀತಿ, ವಿಶ್ವಾಸ, ಸ್ನೇಹ ಮತ್ತು ಭಾವನೆಗಳು ನಶಿಸುತ್ತಿವೆ. ಸಂಪತ್ತೇ ಶ್ರೇಷ್ಠ ಎಂಬ ಭಾವನೆ ಬರುತ್ತಿದೆ. ಪಾಶ್ಚಾತ್ಯರನ್ನು ಮತ್ತು ಅವರ ಸಂಸ್ಕೃತಿಯನ್ನು ಅನುಕರಣೆ ಮಾಡುವುದು ಹೆಚ್ಚಾಗಿದೆ. ಇದರಿಂದ ಸಹಜವಾಗಿ ಸ್ವೇಚ್ಛಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇವರ ಸ್ವಾಸ್ಥ್ಯನ್ನು ಕೆಡಿಸುವಂತಹ ವಸ್ತುಗಳು ಇವರಿಗೆ ಸಿಗುತ್ತಿದೆ. ಅದು ಡ್ರಗ್ಸ್ ಇರಬಹುದು, ಮದ್ಯಪಾನವಿರಬಹುದು, ಇಲ್ಲವೆ, ಇಂಟರ್ನೆಟ್​ನಿಂದ ಸಿಗುವ ಕೆಲ ಮಾಹಿತಿಗಳಿರಬಹುದು. ಹಾಗಾಗಿ ಇವೆಲ್ಲವುಗಳಲ್ಲಿ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂಬ ತೀರ್ವನಕ್ಕೆ ಅವರೇ ಬರಬೇಕು. ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ಮದುವೆಯೇ ತಡವಾಗುತ್ತಿದೆ. ಇದರಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಂಬಂಧಗಳು ಬೆಳೆಯುವ ಅವಶ್ಯಕತೆಗಳು ಕಡಿಮೆಯಾಗುತ್ತಿದೆ. ಹೀಗೆ ಹೆಚ್ಚಾಗುತ್ತಿರುವ ವಿಚ್ಛೇದನಗಳಲ್ಲಿ ಹಲವು ವಿಧ. ಒಂದು ದಾಂಪತ್ಯ ವಿಚ್ಛೇದನವಾದರೆ, ಇನ್ನೊಂದು ಹಿರಿಯವರಿಂದ ವಿಚ್ಛೇದನ. ಇವೆಲ್ಲ ಕಾರಣದಿಂದ ಯುವಕರಲ್ಲಿಂದು ಭಾವನಾತ್ಮಕ ಸಂಬಂಧಗಳು ಕಡಿಮೆಯಾಗಿ ಯಾಂತ್ರಿಕ ಸಂಬಂಧದಲ್ಲಿ ಬೆಳೆಯುವಂತಾಗಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಮತ್ತು ವ್ಯಸನಮುಕ್ತ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಸಾಕಷ್ಟು ಕೆಲಸಗಳು ನಮ್ಮ ಹಲವು ಸಂಘಟನೆಗಳಿಂದ ಸತತವಾಗಿ ನಡೆಯುತ್ತಲೇ ಇದೆ.

# ಕ್ಷೇತ್ರದ ಹಲವು ವಿಶೇಷತೆಗಳಲ್ಲಿ ಪ್ರತಿವರ್ಷ ನಡೆಯುವ ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ವಿಶೇಷವಾದವು. ಈ ಎಲ್ಲ ಕಾರ್ಯಕ್ರಮಗಳು ಮೂಲಭೂತವಾಗಿ ಆಲೋಚನೆ ಮತ್ತು ಆಚರಣೆಯಲ್ಲಿ ಬರಬೇಕು. ಇದನ್ನು ತಾವು ಹೇಗೆ ನಿರ್ವಹಿಸುತ್ತಾ ಇದ್ದೀರಿ? ಏನು ಇದರ ಸಂದೇಶ ಮತ್ತು ಉದ್ದೇಶ?

ಸುಮಾರು 40 ವರ್ಷಗಳ ಹಿಂದೆ ಹಳ್ಳಿಯವರು ಬಂದು ಮದುವೆಗೆಂದು ಸಾಲವನ್ನು ಕೇಳುತ್ತಿದ್ದರು. ಇನ್ನು ಕೆಲವರು ಮದುವೆಗೆಂದು ಮಾಡಿದ್ದ ಸಾಲವನ್ನು ತೀರಿಸಲಾಗದೆ ಮಕ್ಕಳನ್ನು ಜೀತಕ್ಕಾಗಿ ಬೇರೆಯವರಲ್ಲಿ ಬಿಟ್ಟಿದ್ದರು. ಜೀತಪದ್ಧತಿ ನಿವಾರಣೆಗೆ ಸರ್ಕಾರ ತೀವ್ರವಾಗಿ ಪ್ರಯತ್ನ ಪಡುತ್ತಿದ್ದ ಕಾಲವದು. ಮದುವೆಗೆ ಮಾಡಿದ್ದ ಸಾಲದಿಂದಾಗಿ ಈ ರೀತಿಯಾಗಿದೆ ಎಂದು ನಮ್ಮ ಮನಸ್ಸಿಗೆ ಬಂತು. ಹಾಗಾಗಿ ಸಾಮೂಹಿಕ ವಿವಾಹಕ್ಕೆ ಚಾಲನೆ ಕೊಟ್ಟೆವು. ಮೊದಲ ವರ್ಷವೇ ಸುಮಾರು 88 ಮದುವೆ ಆದವು. ಮರುವರ್ಷ 485 ಮದುವೆ ಆದದ್ದು ದಾಖಲೆಯಾಯಿತು. ಹಾಗೆಯೇ ಬಹಳಷ್ಟು ಜನ ಇದಕ್ಕೆಂದು ಸೀರೆ, ಆಭರಣ ಇತ್ಯಾದಿ ವಸ್ತುಗಳನ್ನಿಂದು ದಾನ ಕೊಡುತ್ತಿದ್ದಾರೆ. ಹೀಗಾಗಿ 10 ವರ್ಷಗಳಿಂದ ನಾವು ಸಾಮೂಹಿಕ ವಿವಾಹವನ್ನು ಒಂದರ್ಥದಲ್ಲಿ ನಿರ್ವಹಿಸುತ್ತಿದ್ದೇವೆ. ಇದರ ವೆಚ್ಚವನ್ನೆಲ್ಲ ದಾನಿಗಳು ಕೊಡುತ್ತಿದ್ದಾರೆ. ಸರ್ವಧರ್ಮ ಸಮ್ಮೇಳನವನ್ನು 1933ರಲ್ಲಿ ಪೂಜ್ಯ ಮಂಜೇ ಹೆಗ್ಗಡೆಯವರು ಪ್ರಾರಂಭಿಸಿದರು. ಇಲ್ಲಿಯ ಶೈವ, ವೈಷ್ಣವ ಮತ್ತು ಜೈನರ ಸಮನ್ವಯತೆ ಬಹುಶಃ ಅವರಿಗೆ ಪ್ರೇರಣೆಯಾಗಿರಬಹುದು. ಇನ್ನೊಂದು ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ದೇಶದ ಏಕತೆಗಾಗಿ ಸರ್ವಧರ್ವಿುಯರನ್ನು ಸಂಘಟಿಸುವ ಕಾರ್ಯದಿಂದಲೂ ಅವರು ಪ್ರೇರೇಪಿತರಾಗಿರಬಹುದು. ಇಂದು ಇನ್ನೊಂದು ಧರ್ಮವನ್ನು ದೂಷಣೆ ಮಾಡಿ ಆ ಧರ್ಮ ನನಗಿಂತ ಕೀಳು ಎಂಬುದನ್ನು ಬಿಂಬಿಸುವುದರಿಂದ ನಾನು ಶ್ರೇಷ್ಠ ಅನ್ನುವ ಪ್ರತಿಪಾದನೆಗೆ ಜನ ಹೊರಟಿದ್ದಾರೆ. ಇದು ನೋವಿನ ಸಂಗತಿ. ಇಲ್ಲಿಗೆ ಸಹಾಯ ಕೇಳಿಕೊಂಡು ಬರುವ ಯಾವುದೇ ಧರ್ಮದವರಲ್ಲಿ ನಾವೆಂದೂ ಭೇದಭಾವ ಮಾಡಿಲ್ಲ. ಹಾಗೆಯೇ ನಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಎಲ್ಲ ಧರ್ಮದವರಿದ್ದಾರೆ.

# ಭವ್ಯ ಇತಿಹಾಸವಿರುವ ನಿಮ್ಮಲ್ಲಿ ಒಂದಷ್ಟು ಭವಿಷ್ಯದ ಯೋಜನೆಗಳು ಇರಲೇಬೇಕು. ಅದನ್ನು ಹೇಳುವಿರಾ?

ಯೋಜನೆಗಳಲ್ಲಿ ಎರಡು ರೀತಿ. ಮೊದಲನೆಯದು ಹೊಸದಾಗಿ ಕಲ್ಪನೆ ಮಾಡುವುದು. ಎರಡನೆಯದು ಈಗಿರುವ ಕಾರ್ಯಕ್ರಮದಲ್ಲೇ ಹೊಸ ಕಲ್ಪನೆಯನ್ನು ಮೂಡಿಸುವುದು. ನಮ್ಮದು ದೊಡ್ಡ ಸಂಘಟನೆಯಾಗಿರುವುದರಿಂದ ಸದ್ಯಕ್ಕೆ ಇರುವ ವ್ಯವಸ್ಥೆಯನ್ನೇ ಆಧುನಿಕರಣಗೊಳಿಸಿಕೊಂಡು ಮುನ್ನಡೆಯಲು ಆದ್ಯತೆ ನೀಡುತ್ತಿದ್ದೇವೆ. ನನ್ನ ಪಟ್ಟಾಭಿಷೇಕದ ಸ್ವರ್ಣ ಮಹೋತ್ಸವದ ದಿನದ ಸಂದರ್ಭದಲ್ಲಿ ಭವಿಷ್ಯದ ಒಂದಷ್ಟು ಯೋಜನೆಗಳನ್ನು ಘೊಷಣೆ ಮಾಡಲು ತೀರ್ವನಿಸಿದ್ದೇನೆ.

 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top