ಸಂಜಯ್ಗೆ ವಿಮಾನ ಹಾರಾಟದ ತರಬೇತಿ ನೀಡುತ್ತಿದ್ದ ಪೈಲಟ್ ಸಕ್ಸೇನಾ ಆವತ್ತೇಕೆ ಹಾರಾಟಕ್ಕೆ ರೆಡಿ ಇರಲಿಲ್ಲ.. ವಿಮಾನದಲ್ಲಿ ಇಂಧನ ಖಾಲಿ ಆಗಿದ್ದು ಸ್ವತಃ ಪೈಲಟ್ಗೂ ಗೊತ್ತಿರಲಿಲ್ಲವೇ? ಸಂಜಯ ಆ ಪರಿ ಹಠಕ್ಕೆ ಬಿದ್ದು ಹೊರಟು ಹೋದರೇ?!
ಇಂದಿರಾ ಗಾಂಧಿ ಜೀವನದ ಒಂದೊಂದು ಘಟನೆಯೂ ರೋಚಕ… ಅವರ ಜೀವನದ ಇಂಟರೆಸ್ಟಿಂಗ್ ತಿರುವುಗಳು ಅವರ ಯೌವನದ ದಿನಗಳಿಂದಲೇ ಆರಂಭವಾಗಿ ಮುಂದೆ ಪ್ರಧಾನಿ ಪಟ್ಟವೇರಿ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ಆಪ್ತೇಷ್ಟರ ಷಡ್ಯಂತ್ರಕ್ಕೆ ಸಿಲುಕಿ ಹಂತಕರ ಗುಂಡಿಗೆ ಪ್ರಾಣಾರ್ಪಣೆ ಮಾಡುವವರೆಗೂ ಮುಂದುವರೆದುಕೊಂಡು ಹೋಗುತ್ತದೆ.
ಪ್ರಧಾನಿ ನೆಹರು ಅವರಿಗೆ ಪ್ರೀತಿಯ ಪುತ್ರಿ ಇಂದಿರಾಳೇ ಉತ್ತರಾಧಿಕಾರಿ ಆಗಬೇಕೆಂಬ ಮಹದಾಸೆ ಇತ್ತು ಖರೆ. ಆದರೆ ಅದಕ್ಕೆ ಬೇಕಾದ ವಿದ್ಯೆ ಮತ್ತು ಪ್ರಬುದ್ಧತೆ ಎರಡೂ ಆಕೆಯಲ್ಲಿಲ್ಲ ಎಂಬ ಕೊರಗು ನೆಹರುರನ್ನು ಬಲವಾಗಿ ಕಾಡುತ್ತಿತ್ತು. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಠಾಕುಠೀಕುಟಾಗಿದ್ದ ನೆಹರುಗೆ ತಮ್ಮ ಪುತ್ರಿಯ ವಿದ್ಯಾಭ್ಯಾಸದ ಕೊರತೆ ಬಗ್ಗೆ ಕೊರಗು ಇದ್ದದ್ದು ಸಹಜ ಆಗಿದ್ದಿರಬಹುದು. ಅದನ್ನು ಅವರು ತಮ್ಮ ಆಪ್ತರಾದ ಕೆ.ಎಂ.ಮುನ್ಶಿ ಅವರಲ್ಲಿ ತೋಡಿಕೊಳ್ಳುತ್ತಿದ್ದರಂತೆ. ನೆಹರು ಇಂಗಿತ ಅರಿತುಕೊಂಡ ಮುನ್ಶಿ, ಚಿಂತೆ ಬಿಡಿ, ಅದನ್ನೆಲ್ಲ ನಾನು ನೋಡಿಕೊಳ್ಳುತ್ತೇನೆಂದು ನೆಹರುಗೆ ಹೇಳಿದ್ದರು. ಮುನ್ಶಿ ತಮಗೆ ಅತ್ಯಂತ ಪ್ರಿಯವಾದ ಭಾರತೀಯ ವಿದ್ಯಾಭವನವನ್ನು ಕಟ್ಟಿ ಆಗಷ್ಟೇ ಅದರ ಕುಲಪತಿಗಳಾಗಿದ್ದರು. ಹೀಗಾಗಿ ಇಂದಿರಾ ಅವರ ಉನ್ನತ ವ್ಯಾಸಂಗಕ್ಕೋಸ್ಕರವೇ ಹೆಸರಾಂತ ವಿದ್ವಾಂಸರನ್ನು ಮುನ್ಶಿ ನೇಮಕ ಮಾಡಿದ್ದರು. ವಿದ್ಯಾಭವನದಿಂದ ಎಲ್.ಎಲ್.ಎಂ ಪದವಿ ಪಡೆದಿದ್ದ ಕರ್ನಾಟಕದವರೇ ಆದ ಸರೋಜಿನಿ ಮಹಿಷಿಯವರನ್ನು ಇಂದಿರಾಗೆ ಕಾರ್ಯದರ್ಶಿಯನ್ನಾಗಿ ಮುನ್ಶಿ ನೇಮಕ ಮಾಡಿದರು. ದೇಶದ ಹೊಣೆ ಹೊರಲು ಅಣಿ ಮಾಡುವುದಕ್ಕಾಗಿಯೇ ನೆಹರು ಇಂದಿರಾಗೆ ದೀರ್ಘವಾದ, ವಿಚಾರಪೂರ್ಣ ಪತ್ರಗಳನ್ನು ಬರೆಯುತ್ತಿದ್ದರು. ಇಂದಿರಾ ಅವರನ್ನು ರಾಜಕೀಯವಾಗಿ ಪರಿಪಕ್ವ ಮಾಡುವಲ್ಲಿ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬರುವಾ, ನೆಹರು ಆಪ್ತರಾಗಿದ್ದ ಮೊರಾರ್ಜಿ ದೇಸಾಯಿ, ಅತುಲ್ಯ ಘೋಷ್, ಎಸ್.ಕೆ.ಪಾಟೀಲ ಮುಂತಾದವರ ಯೋಗದಾನವೂ ದೊಡ್ಡದಿದೆ ಎಂಬ ಅಭಿಪ್ರಾಯವಿದೆ. 1962ರಲ್ಲಿ ಚೀನದೊಂದಿಗೆ ಯುದ್ಧದಲ್ಲಿ ಸೋತ ಒಂದು ಸಂದರ್ಭದಲ್ಲಿ ನೆಹರೂ ಇಂದಿರಾ ಬಳಿ ಹೇಳಿಕೊಂಡಿದ್ದರಂತೆ- ”There is no alternative to good education”. ಆದರೂ ”ಮುನ್ಶಿಯವರ ಗರಡಿಯಲ್ಲಿ ಪಳಗಿ ಯಾವುದೇ ಸ್ಥಾನಮಾನ ನಿಭಾಯಿಸುವ ಅರ್ಹತೆಯನ್ನು ಮಗಳು ಪಡೆದುಕೊಂಡಿರುವುದರಿಂದ ನಾನು ನಿಶ್ಚಿಂತನಾಗಿದ್ದೇನೆ” ಅಂತ ನೆಹರು ನಿಟ್ಟುಸಿರು ಬಿಟ್ಟು ಹೇಳಿದ್ದರಂತೆ.
ನೆಹರು ಮರಣಾಂತರ, ಅವರ ಆಪ್ತರ ಪರಸ್ಪರ ಕಾಲೆಳೆದಾಟದ ನಡುವೆ ದೈವಬಲದಿಂದ ಲಾಲಬಹದ್ದೂರ ಶಾಸ್ತ್ರಿ ಪ್ರಧಾನಿ ಪಟ್ಟ ಏರುತ್ತಾರೆ. ಅದನ್ನು ಕಂಡು ಇಂದಿರಾ ಬಹಳಷ್ಟು ನಿರಾಶರಾಗುತ್ತಾರೆ. ಅದನ್ನು ತಮ್ಮ ತಂದೆಗೆ ಸಮಾನರಾಗಿದ್ದ ಮುನ್ಶಿಯವರ ಬಳಿ ಹೇಳಿಕೊಂಡು “ನೀವು ಕೊಡಿಸಿದ ವಿದ್ಯೆ, ಅಣಿಗೊಳಿಸಿದ ತರಬೇತಿ ಇವೆಲ್ಲ ಯಾತಕ್ಕೂ ಪ್ರಯೋಜನಕ್ಕೆ ಬರಲಿಲ್ಲ” ಎಂದುಬಿಡುತ್ತಾರಂತೆ. “ಹಾಗೆಲ್ಲ ನಿರಾಶೆಗೊಳ್ಳಬೇಡ, ನೀನು ಕಲಿತ ವಿದ್ಯೆ ಶೀಘ್ರದಲ್ಲಿ ಅನುಭವಕ್ಕೆ ಬರುತ್ತದೆ” ಎಂದು ಮುನ್ಶಿ ಸಮಾಧಾನಪಡಿಸುತ್ತಾರೆ. ಅದೇ ಇಂದಿರಾ ರಾಜಕೀಯ ಜೀವನಕ್ಕೆ ಮಹತ್ವದ ತಿರುವು ಕೊಡುವ ಘಳಿಗೆ. ಆ ಕ್ಷಣದಿಂದಲೇ ಎಚ್ಚೆತ್ತುಕೊಳ್ಳುವ ಇಂದಿರಾ, ಶಾಸ್ತ್ರಿ ನಿಧನದ ನಂತರ ಪ್ರಧಾನಿ ಪಟ್ಟ ತಮಗಲ್ಲದೆ ಬೇರಾರಿಗೂ ಸಿಗದಂತೆ ನೋಡಿಕೊಳ್ಳುತ್ತಾರೆ. ನೆಹರು ಸಿಂಡಿಕೇಟ್ನ ಮೊರಾರ್ಜಿ, ಅತುಲ್ಯ ಘೋಷ್, ಎಸ್.ಕೆ.ಪಾಟೀಲರ ಕಾಲಿಗೆರಗುತ್ತಲೇ ಅವರೆಲ್ಲರ ಪ್ರೀತಿ ಸಂಪಾದಿಸುತ್ತಾರೆ. “ನಾನು ನಿಮ್ಮ ಮಗು” ಎನ್ನುತ್ತಲೇ ಎಲ್ಲರನ್ನೂ ನಯವಾಗಿ ಬದಿಗೆ ಸರಿಸಿ ಪ್ರಧಾನಿಪಟ್ಟ ಏರುತ್ತಾರೆ ಇಂದಿರಾ. ಹಾಗೆ ಒಂದು ಯುದ್ಧ ಗೆದ್ದ ಇಂದಿರಾ ಮುಂದೆಂದೂ ತನಗೆ ಸೋಲಾಗಲೇಬಾರದೆಂದು ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನೂ ತಮ್ಮ ಬಳಿಯೇ ಇಟ್ಟುಕೊಂಡು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೆ. ಮುನ್ಶಿಯವರಿಂದ ಕಲಿತ ಮೊದಲ ಪಾಠ ಪಂಚತಂತ್ರವನ್ನು ಇಂದಿರಾ ಆಗ ಪಕ್ಷಾಧ್ಯಕ್ಷರಾಗಿದ್ದ ಜಗಜೀವನ ರಾಂ ಅವರ ಮೇಲೆ ಪ್ರಯೋಗಿಸುತ್ತಾರೆ. ಇಂದಿರಾ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್ ಎಂದು ಪಕ್ಷ ಇಬ್ಭಾಗವಾಗಿದ್ದೂ ಆಗಲೇ. ಇಂಥ ಗಟ್ಟಿಗಿತ್ತಿ ಮುಂದೆ ಹೇಗೆ ಪ್ರತಿ ಹಂತದಲ್ಲಿ ಕರಗುತ್ತಲೇ ಹೋಗುತ್ತಾರೆ ನೋಡಿ. ಅದು ಬಹಳ ಕುತೂಹಲಕರ.
ಅಮ್ಮ ಇಂದಿರಾ ಪಕ್ಷ ಮತ್ತು ದೇಶದ ಚುಕ್ಕಾಣಿ ಹಿಡಿಯಲು ಅನುಸರಿಸಿದ ಸಾಮು ಪಟ್ಟುಗಳನ್ನೆಲ್ಲ ಬುದ್ಧಿವಂತ ಮಗ ರಾಜೀವ ಚೆನ್ನಾಗಿ ತಿಳಕೊಂಡಿದ್ದರು. ಇಂದಿರೆಯ ಪತಿ ಫಿರೋಜ್ ಗಾಂಧಿ ತೀರಿಕೊಂಡಾಗ ರಾಜೀವ್ ಇನ್ನೂ ಹದಿನಾರರ ಹುಡುಗ. ಆಗಲೇ ರಾಜೀವ್ ಸ್ವಂತಿಕೆಯ ಪ್ರವೃತ್ತಿ ಬೆಳೆಸಿಕೊಂಡಿದ್ದ, ನಂತರ ಇಂದಿರಾ ಇಷ್ಟಕ್ಕೆ ವಿರುದ್ಧವಾಗಿ ಸೋನಿಯಾ ಕೈಹಿಡಿದ. ಅವೆಲ್ಲ ಅಮ್ಮ ಇಂದಿರಾಗೆ ಸರಿ ಕಂಡಿರಲಿಲ್ಲ. ಅದೇ ಬುಡ ಅಂತ ತೋರುತ್ತದೆ…ಅಲ್ಲಿಂದ ಇಂದಿರೆಗೆ
ಕೌಟುಂಬಿಕವಾಗಿ ಮತ್ತು ರಾಜಕೀಯವಾಗಿ ಸುತ್ತಿಕೊಳ್ಳುವ ಸವಾಲುಗಳ ಸಂಕೋಲೆ ಕೊನೆಯಾಗುವುದೇ ಇಲ್ಲ..
ನಗರವಾಲ ಪ್ರಕರಣದಲ್ಲಿ ತನ್ನ ಧ್ವನಿ ಅನುಸರಿಸಿ ಸ್ಟೇಟ್ ಬ್ಯಾಂಕ್ ಶಾಖೆಗೆ ಫೋನ್ ಮಾಡಿ ಕ್ಯಾಷ್ ಡ್ರಾ ಮಾಡಿದ ವಿಚಾರವಾಗಿ ಮತ್ತು ಮುಸ್ಲಿಂ ವಿಧವೆಗೆ ವಿಮೆ ಹಣ ಕೊಡಿಸಲು ವಿಮಾ ಕಚೇರಿಗೆ ತನ್ನ ಹೆಸರಲ್ಲಿ ಮನೆಯಿಂದಲೇ ಫೋನ್ ಮಾಡಿದ ಘಟನೆ ತನಿಖೆ ನಡೆಸಲು ಹೋಗಿ ಇಂದಿರಾ ಸಾಕಷ್ಟು ಇರಿಸುಮುರಿಸಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಪ್ರಾಥಮಿಕ ತನಿಖೆಯ ವೇಳೆಯೇ ಗೊತ್ತಾಗುವ ಸಂಗತಿ ತಿಳಿದು ಇಂದಿರಾಗೆ ಜಂಘಾಬಲವೇ ಉಡುಗಿಹೋದ ಅನುಭವವಾಗುತ್ತದೆ. ಅಸಲಿ ವಿಚಾರವನ್ನು ಬಹಿರಂಗವಾಗಿ ಹೇಳಲೂ ಆಗದೆ, ಹಾಗೇ ನುಂಗಿಕೊಳ್ಳಲೂ ಆಗದೆ ಇಂದಿರಾ ಒದ್ದಾಡುತ್ತಾರೆ. ಈ ಎರಡು ಪ್ರಕರಣಗಳಲ್ಲಿ ಆದ ಅನುಭವದಿಂದ ಇಂದಿರಾ ಕೊಂಚ ಹುಷಾರಾಗುತ್ತಾರೆ. ಹೀಗಾಗಿ ಏರ್ ಇಂಡಿಯಾಕ್ಕೆ 31 ಕೋಟಿ ರೂ. ವೆಚ್ಚದಲ್ಲಿ ಮೂರು ಬೋಯಿಂಗ್ 737 ವಿಮಾನಗಳನ್ನು ಸ್ವಿಸ್ ಕಂಪೆನಿಯಿಂದ ಖರೀದಿಸಿದ ಹಗರಣ ಬಯಲಾದ ಬಳಿಕ ತನಿಖೆಗೆ ಆದೇಶಿಸುವ ಬದಲು ಇಂದಿರಾ ಅದನ್ನು ಸಮರ್ಥಿಸಿಕೊಳ್ಳುತ್ತಾರೆ. “ಬಿಡಿ ಭ್ರಷ್ಟಾಚಾರ ಇಂದು ಜಾಗತೀಕರಣಗೊಂಡಿದೆ” ಎಂದು ಪ್ರಕರಣವನ್ನು ತೇಲಿಸಿಬಿಡಲು ಮುಂದಾಗುತ್ತಾರೆ. ಬೋಯಿಂಗ್ ಡೀಲ್ನ ಹಕೀಕತ್ತು ಇಂದಿರಾಗೆ ತಕ್ಷಣ ಹೊಳೆದಿತ್ತು ಅಂತ ಕಾಣುತ್ತದೆ. ಹೀಗಾಗಿ ಆ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಹೋಗಿ ಸ್ವತಃ ತಮ್ಮ ಮೇಲೆ ಭ್ರಷ್ಟಾಚಾರದ ಕಳಂಕವನ್ನು ವಿನಾಕಾರಣ ಅಂಟಿಸಿಕೊಳ್ಳಬೇಕಾಗುತ್ತದೆ.
ಇಂದಿರಾ ಊಹೆ ಸರಿಯಾಗಿತ್ತು. ಮುಂದೆ 1976-77ರಲ್ಲಿ ಪ್ರಕರಣದ ತನಿಖೆ ನಡೆಸಿದ ಜಸ್ಟಿಸ್ ಜೆ.ಸಿ.ಷಾ ಕಮಿಷನ್ ಆ ಹಗರಣದಲ್ಲಿ ರಾಜೀವ್ ಪಾತ್ರವನ್ನು ಉಲ್ಲೇಖಿಸಿತು. ಯಾವುದೇ ಅಧಿಕಾರ ಇಲ್ಲದೇ ಹೋದರೂ ಆಗ ಆರ್ಡಿನರಿ ಪೈಲಟ್ ಆಗಿದ್ದ ರಾಜೀವ್ ಇಂಡಿಯನ್ ಏರಲೈನ್ಸ್ ಚೇರಮನ್ರ ಕಚೇರಿಗೆ ಎಡತಾಕಿದ್ದನ್ನು ಷಾ ಕಮಿಷನ್ ಪ್ರಶ್ನೆ ಮಾಡಿತ್ತು. ವಿಮಾನ ಖರೀದಿ ಡೀಲ್ನಲ್ಲಿ ರಾಜೀವ್ ಕಡೆಯೇ ಆಯೋಗ ಬೊಟ್ಟು ಮಾಡಿತು. ಮುಂದೆ 1976ರಲ್ಲಿ ಪ್ರಕರಣದ ತನಿಖಗೆ ವಿಶೇಷ ಅಧ್ಯಯನ ತಂಡ ರಚನೆ ಮಾಡಲಾಯಿತು. ಅಲ್ಲಿಗೆ ಆ ಕತೆ ಮುಗಿಯಿತು. ಇತ್ತೀಚೆಗೆ ಬಿಡುಗಡೆಯಾದ ವಿಕಿಲೀಕ್ಸ್ ವರದಿ ಸ್ವಿಸ್ ಫೈಟರ್ ಜೆಟ್ ತಯಾರಿಕಾ ಕಂಪನಿ Saab-Scaniaದ ವ್ಯವಹಾರದಲ್ಲಿ ಇಂದಿರಾರ ಹತ್ತಿರದ ಬಂಧುಗಳ ಪಾಲುದಾರಿಕೆಯನ್ನು ಅನಾವರಣ ಮಾಡಿದೆ. ಆ ಬಗ್ಗೆ `ಬಿಸಿನೆಸ್ ಸ್ಟಾಂಡರ್ಡ್’ ಪತ್ರಿಕೆ ನಡೆಸಿದ ತನಿಖಾ ವರದಿಯನ್ನು ಬೇಕಾದರೆ ಈಗಲೂ ಓದಬಹುದು.
ಬೋಯಿಂಗ್ ಖರೀದಿ ಹಗರಣದಿಂದ ಇಂದಿರಾ ಘನತೆಗೆ ಆದ ಹಾನಿಯನ್ನು ಸರಿಪಡಿಸಲು ಸಂಕಲ್ಪ ಮಾಡಿದ ಸಂಜಯ ಗಾಂಧಿ ಒಂದು ಗಟ್ಟಿ ತೀರ್ಮಾನಕ್ಕೆ ಬರುತ್ತಾರೆ. `ಇಂಡಿಯಾ ಅಂದರೆ ಇಂದಿರಾ-ಇಂದಿರಾ ಅಂದರೆ ಇಂಡಿಯಾ”-‘Be Indian – Buy Indian’ ಎಂಬ ಘೋಷಣೆ ಮೊಳಗಿಸಿ ಆದ ಗಾಯವನ್ನು ವಾಸಿ ಮಾಡಲು ಯತ್ನಿಸುತ್ತಾರೆ. ಸರ್ಕಾರಿ ಕಾರುಗಳು ಭಾರತದಲ್ಲೇ ನಿರ್ಮಿಸಿದವಾಗಿರಬೇಕು ಎಂಬುದು ಸಂಜಯ್ ಗಾಂಧಿ ಘೋಷಣೆಯ ಸಾರವಾಗಿತ್ತು. ಅಂದರೆ ಭಾರತದಲ್ಲಿ ಮೊದಲು ವಿದೇಶಿ ಮೂಲದ ಪ್ರಶ್ನೆಯನ್ನು ಎತ್ತಿದ್ದು ಬೇರಾರೂ ಅಲ್ಲ, ಇಂದಿರೆಯ ಕಿರಿಮಗ ಸಂಜಯ ಗಾಂಧಿಯೇ. ವಿದೇಶಿ ಹಸ್ತಕರು ಯಾವ ಕಾರಣಕ್ಕೂ ದೇಶದ ಅಧಿಕಾರ ಸ್ಥಾನದ ಹತ್ತಿರಕ್ಕೆಲ್ಲೂ ಸುಳಿಯಬಾರದೆಂಬುದು ಅವರ ಸಂಕಲ್ಪ ಆಗಿದ್ದಿರಬೇಕು. ಆದರೆ ಸಂಜಯ ಗಾಂಧಿ ಕನಸು ಈಡೇರಿತಾ?
23-06-1980; ವಿಮಾನ ಹಾರಾಟ ಅಭ್ಯಸಿಸಲು ಹೋದ ಸಂಜಯ ಆಕಾಶದಿಂದ ಬಿದ್ದು ಸತ್ತೇಹೋದರು! ಅದಾಗಲೇ ಅಣ್ಣ ರಾಜೀವ್ ವಿಮಾನ ಚಾಲನಾ ಅಧಿಕೃತ ಪರವಾನಗಿ ಪಡೆದುಕೊಂಡಿದ್ದ. ವಿಮಾನದ ಪೈಲಟ್ ಬೇರೆ ಆಗಿದ್ದ. ವಿಮಾನ ಚಾಲನಾ ವಿದ್ಯೆ ಕರಗತ ಮಾಡಿಕೊಳ್ಳಲು ಅಣ್ಣನೊಂದಿಗೆ ಪೈಪೋಟಿಗೆ ಬಿದ್ದ ಸಂಜಯನಿಗೆ ರಾಜೀವ್ ಆಪ್ತ ಕ್ಯಾಪ್ಟನ್ ಸುಭಾಶ್ ಸಕ್ಸೇನಾ ವಿಮಾನ ಚಾಲನಾ ತರಬೇತಿ ನೀಡುತ್ತಿದ್ದ. ಆ ದಿನ ಮುಂಜಾನೆ ಗುರು ಸುಭಾಷ್ ಸಕ್ಸೇನಾ ಸಂಜಯನ ಮನೆಗೆ ಬರಲೇ ಇಲ್ಲ. ಸಂಜಯನೇ ಸಕ್ಸೇನಾನ ಮನೆಗೆ ಹೋಗುತ್ತಾನೆ. ಆಗ ಸಕ್ಸೇನಾ, “ಇಂದು ನನ್ನ ಹುಟ್ಟುಹಬ್ಬ, ನಾನು ಬರಲಾಗದು, ನೀನೊಬ್ಬನೇ ವಿಮಾನ ಹಾರಾಟ ಮಾಡಿಕೊಂಡು ಬಾ” ಎಂದುಬಿಟ್ಟ. ಹುಟ್ಟುಹಬ್ಬ ಇರುವುದನ್ನು ಸಕ್ಸೇನಾ ಹಿಂದಿನ ದಿನವೇ ಸಂಜಯನಿಗೆ ಹೇಳಬಹುದಿತ್ತು, ಹೋಗಲಿ ಮನೆಯಲ್ಲಿ ಹುಟ್ಟುಹಬ್ಬದ ವಾತಾವರಣವಾದರೂ ಇತ್ತೇ? ಊಹೂಂ..ಬಾ ಅರ್ಧಗಂಟೆ ಹಾರಾಟ ಮಾಡಿಕೊಂಡು ಬರೋಣವೆಂದು ಸಕ್ಸೇನಾನ ಕೈಹಿಡಿದು ಎಳೆದುಕೊಂಡ ಹೊರಟ ಸಂಜಯ. ಹಾರಾಟ ಆರಂಭವಾದ ಹತ್ತೇ ನಿಮಿಷದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿತು. ವಿಮಾನ ಬಿದ್ದಾಗ ಅದು ಹೊತ್ತಿ ಉರಿದುಬೀಳಬೇಕಿತ್ತಲ್ಲವೇ? ಹಾಗಾಗಲಿಲ್ಲ. ಯಾಕೆ ಗೊತ್ತೇ? ಉರಿದುಬೀಳಲು ವಿಮಾನದಲ್ಲಿ ಇಂಧನವೇ ಇರಲಿಲ್ಲ. ಆದರೂ ವಿಮಾನದ ಇಂಧನ ಟ್ಯಾಂಕ್ ಭರ್ತಿ ಆಗಿದ್ದನ್ನು ಮೀಟರ್ನಲ್ಲಿ ತೋರಿಸುತ್ತಿತ್ತು. ಇಂಧನ ಖಾಲಿಯಾಗಿದ್ದು ಬಹುಶಃ ಸಕ್ಸೇನಾಗೂ ಗೊತ್ತಿತ್ತೋ ಇಲ್ಲವೋ! ಆಯಿತು, ವಿಮಾನ ದುರ್ಘಟನೆ ಕುರಿತು ಕನಿಷ್ಠಪಕ್ಷ ನಾಗರಿಕ ವಿಮಾನಯಾನ ಇಲಾಖೆಯಿಂದ ತನಿಖೆಯನ್ನಾದರೂ ಮಾಡಿಸಬೇಕಿತ್ತಲ್ಲವೇ? ಇಂದಿರಾ ಅದೇಕೆ ಕೈಚೆಲ್ಲಿದ್ದರು? ಸಂಜಯನ ಕಳೆದುಕೊಂಡ ಇಂದಿರಾ ಐರನ್ ಲೇಡಿ ಆಗಿ ಎಷ್ಟು ದಿನ ಉಳಿಯಬಲ್ಲರಾಗಿದ್ದರು?
ಅಲ್ಲಿ ಶುರುವಾಗುವ ಅನುಮಾನದ ಎಳೆ ಎಲ್ಲಿಯವರೆಗೆ ಎಳೆದುಕೊಂಡು ಬರುತ್ತದೆ ಗೊತ್ತೇ? ಹಾಗಿದ್ದರೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ತಾಷ್ಕೆಂಟ್ನಲ್ಲಿ ಮರಣ ಹೊಂದುವಾಗಲೇ ವಿದೇಶಿ ಹಸ್ತಕರು ಕರಾಮತ್ತು ಶುರುಮಾಡಿಕೊಂಡಿದ್ದರೇ? ನೋಡಿ ಹೇಗಿದೆ ವಿಚಿತ್ರ ಅಂತ! ಇಂದಿರಾ ಹತ್ಯೆಗೆ ಭಿಂದ್ರನ್ವಾಲೆ ಕಾರಣ, ರಾಜೀವ್ ಹತ್ಯೆಗೆ ಎಲ್ಟಿಟಿಇ ದ್ವೇಷ ಕಾರಣ, ರಾಜೇಶ್ ಪೈಲಟ್ ಸಾವಿಗೆ ರಸ್ತೆ ಅಪಘಾತ ಕಾರಣ, ಮಾಧವರಾವ್ ಸಿಂಧಿಯಾ ಸಾವಿಗೆ ವಿಮಾನ ಅಪಘಾತ ಕಾರಣ. ಹೋಗಲಿ… ಯುಪಿಎ ಸರ್ಕಾರದ ಸುಗ್ರೀವಾಜ್ಞೆಗಳಿಗೆ ಸಹಿ ಹಾಕದೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೇಲಿಂದ ಮೇಲೆ ವಾಪಾಸ್ ಕಳಿಸಿಕೊಡುತ್ತಿರುವುದರ ಹಿಂದೆ ಕಾರಣ ಏನಿದೆ ಎಂಬುದನ್ನಾದರೂ ತಿಳಿದುಕೊಳ್ಳುವುದು ಬೇಡವೇ? ಖ್ಯಾತ ಅಣು ವಿಜ್ಞಾನಿ ಹೋಮಿ ಭಾಭಾರನ್ನು ಹೊತ್ತು ಮುಂಬೈನಿಂದ ನ್ಯೂಯಾರ್ಕ್ಗೆ ಹೊರಟ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ್ದು ಇನ್ನೂ ಕೂಡ ನಿಗೂಢ. ಅದರಲ್ಲಿದ್ದ 117 ದುರ್ದೈವಿ ಪ್ರಯಾಣಿಕರಲ್ಲಿ ಭಾಭಾ ಕೂಡ ಒಬ್ಬರು. ಆ ಘಟನೆಗೆ ಸಂಬಂಧಿಸಿ ಫ್ರೆಂಚ್ ಪರ್ವತಾರೋಹಿ ಡೇನಿಯಲ್ ರಾಚೆ ಆರು ವರ್ಷಗಳ ಕಾಲ ಅಧ್ಯಯನ ಮಾಡಿ ಇತ್ತೀಚೆಗೆ ಒಂದು ಥಿಯರಿ ಪ್ರಕಟಿಸಿದ್ದಾರೆ. ಅಂದು ಭಾಭಾ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಆಲ್ಪ್ಸ್ ಪರ್ವತ ಶ್ರೇಣಿಯ ಬಳಿ ಮೌಂಟ್ ಬ್ಲಾಂಕ್ ಎಂಬಲ್ಲಿ ಅಮೆರಿಕದ ಸಿಐಎ ನಿರ್ದೇಶನದಂತೆ ಇಟಲಿ ಫೈಟರ್ ಜೆಟ್ ಡಿಕ್ಕಿ ಹೊಡೆದಿತ್ತು ಅನ್ನುವುದು ಡೇನಿಯಲ್ ರಾಚೆ ಹೇಳಿಕೆ. ಅದಕ್ಕೆ ಬೇಕಾದ ಸಾಕ್ಷಿ ಪುರಾವೆಗಳನ್ನೂ ಅವರು ಕಲೆ ಹಾಕಿದ್ದಾರೆ. ಹಾಗಾದರೆ ಅಮೆರಿಕ ಮತ್ತು ಇಟಲಿ ಕೈ ಎಲ್ಲಿಂದ ಎಲ್ಲಿಯವರೆಗೆ ಇದೆ ಅಂತ ನಿಜಕ್ಕೂ ಅಚ್ಚರಿಯಾಗುತ್ತದೆ ಅಲ್ಲವೇ?