ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲು ನಿರ್ಧಾರ

ಅತಿಥಿಗಳ ಕಷ್ಟಕ್ಕೆ ಕಾಯಂ ಉಪನ್ಯಾಸಕರ ಸ್ಪಂದನೆ.

ವಿಕ ಸುದ್ದಿಲೋಕ ಬೆಳಗಾವಿ.
ಕೊರೊನಾ ಹೊಡೆತಕ್ಕೆ ದುಡಿಮೆ ಕಳೆದುಕೊಂಡು ಅತಂತ್ರರಾಗಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ನೆರವಿಗೆ ಕಾಯಂ ಉಪನ್ಯಾಸಕರು ಧಾವಿಸಿದ್ದಾರೆ.
ತಮ್ಮ ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡುವುದಾಗಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಪ್ರಕಟಿಸಿದೆ. ಕೆಲ ಉಪನ್ಯಾಸಕರು ಮೂರು ತಿಂಗಳು ತಲಾ ಒಂದು ದಿನದ ವೇತನ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಕೈ ಜೋಡಿಸಿದ್ದರೆ.
ಸರಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರ ಒಂದು ದಿನದ ವೇತನವನ್ನು ಎಚ್‌ಆರ್‌ಎಂಎಸ್‌ನಲ್ಲಿ ಕಡಿತಗೊಳಿಸಿ ಇಲಾಖೆಯ ನಿರ್ದೇಶಕರ ಮೂಲಕ ಅತಿಥಿ ಉಪನ್ಯಾಸಕರಿಗೆ ಸಮನಾಗಿ ಹಂಚಲು ಸಂಘ ನಿರ್ಧರಿಸಿದೆ. ಈ ಹಣವನ್ನು ಸರಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಫೆಬ್ರವರಿವರೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ ಸಹೋದ್ಯೋಗಿಗಳಿಗೆ ನೇರವಾಗಿ ತಲುಪಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಆರ್ಥಿಕ ಮತ್ತು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರಿಗೂ ನೆರವು ನೀಡಲು ಅನೇಕ ಉಪನ್ಯಾಸಕರು ಆಸಕ್ತಿ ತೋರಿದ್ದಾರೆ. ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ‘ಅತಿಥಿ ಉಪನ್ಯಾಸಕರು ಅತಂತ್ರ’ ಶೀರ್ಷಿಕೆ ಅಡಿ ವಿಕ ಜೂ.30ರ ಸಂಚಿಕೆಯಲ್ಲಿ ವಿಸ್ತ್ರತ ವರದಿ ಪ್ರಕಟಿಸಿತ್ತು.

ಅರೆಕಾಲಿಕ ಉದ್ಯೋಗಕ್ಕೆ ಏಳು ಪದವೀಧರನ ಮೊರೆ
ಬಳ್ಳಾರಿ: ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ತುಂಬ ಕಷ್ಟವಾಗಿದ್ದು, ಅರೆಕಾಲಿಕ ಉದ್ಯೋಗ ನೀಡಬೇಕೆಂದು ಆಗ್ರಹಿಸಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದ ಡಾ.ನಾಗರಾಜ್‌ ತಂಬ್ರಹಳ್ಳಿ ಅವರು, ತಾಲೂಕಾಡಳಿತಕ್ಕೆ ಮನವಿ ಪತ್ರ ಬರೆದಿದ್ದಾರೆ. ‘ ಪಿಎಚ್‌ಡಿ ಸೇರಿ ಒಟ್ಟು ಏಳು ಪದವಿಗಳನ್ನು ಪಡೆದಿದ್ದಾಗಿ ಮನವಿ ಪತ್ರದಲ್ಲಿ ತಿಳಿಸಿರುವ ಡಾ.ನಾಗರಾಜ್‌, ‘‘ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯನ್ನೂ ನಡೆಸುತ್ತಿದ್ದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜಿನಲ್ಲಿ ಸಂಭಾವನೆ ನೀಡುತ್ತಿಲ್ಲ. ಶಾಲೆಯೂ ಆರಂಭವಾಗಿಲ್ಲ. ಇದರಿಂದಾಗಿ ಜೀವನದ ನಿರ್ವಹಣೆ ತೊಂದರೆಯಾಗಿದೆ. ಸದ್ಯ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕಚೇರಿಯಲ್ಲಿ ಅರೆಕಾಲಿಕ ಉದ್ಯೋಗ ನೀಡಬೇಕು,’’ ಎಂದು ಕೋರಿದ್ದಾರೆ.

ಅತಿಥಿ ಉಪನ್ಯಾಸಕರ ಸಮಸ್ಯೆ ಬಗ್ಗೆ ‘ವಿಕ’ದಲ್ಲಿ ಪ್ರಕಟವಾದ ವರದಿ ಮನ ಕಲಕುವಂತೆ ಇತ್ತು. ಹಾಗಾಗಿ ಕಾಯಂ ಉಪನ್ಯಾಸಕರ ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ಕೊಡಲು ನಿರ್ಧರಿಸಿದ್ದೇವೆ. ಪದವಿ ಕಾಲೇಜುಗಳ ಕಾಯಂ ಉಪನ್ಯಾಸಕರು ಸಹ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೆರವಿಗೆ ಬರಲಿ ಎಂದು ಆಶಿಸುತ್ತೇವೆ.
– ನಿಂಗೈಗೌಡ ಎ.ಎಚ್‌, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top