ಸ್ವರ್ಣೋದ್ಯಮ ಇದೀಗ ಭರ್ಜರಿ ಶೈನಿಂಗ್

– ಲಾಕ್‌ಡೌನ್‌ ಸಡಿಲಿಕೆ ಬಳಿಕ ಹಿಂದಿಗಿಂತಲೂ ಹೆಚ್ಚು ಡಿಮ್ಯಾಂಡ್ – ಚಿನ್ನ, ಬೆಳ್ಳಿ ಈಗ ಸಿಕ್ಕಾಪಟ್ಟೆ ಖರೀದಿ.

ಎಚ್ ಪಿ ಪುಣ್ಯವತಿ, ಬೆಂಗಳೂರು : ಲಾಕ್‌ಡೌನ್‌ ಸಡಿಲಿಕೆ ನಂತರ ಚಿನ್ನಾಭರಣಗಳ ಉದ್ಯಮ ನಿರೀಕ್ಷೆಗೂ ಮೀರಿ ಚೇತರಿಕೆ ಕಂಡಿದೆ. ಲಾಕ್‌ಡೌನ್‌ಗೆ ಮೊದಲು ರಾಜ್ಯದಲ್ಲಿ ತಿಂಗಳಿಗೆ ಗರಿಷ್ಠ 850 ಕೆಜಿ ಚಿನ್ನ ಮಾರಾಟವಾಗುತ್ತಿದ್ದರೆ, ಜೂನ್ 1ರಿಂದ 7ರವರೆಗಿನ ಒಂದೇ ವಾರದಲ್ಲಿ 280 ಕೆಜಿ ಚಿನ್ನ ವ್ಯಾಪಾರ ಆಗಿದೆ. ಅಂದರೆ, ಚಿನ್ನ, ಬೆಳ್ಳಿ ಆಭರಣಗಳ ಖರೀದಿ ಪ್ರಮಾಣ ಹಿಂದಿಗಿಂತಲೂ ಶೇ. 40-45ರಷ್ಟು  ಏರಿಕೆಯಾಗಿದೆ. ಆರ್ಥಿಕ ವ್ಯವಸ್ಥೆ ಎಷ್ಟೇ ಅಸ್ಥಿರಗೊಂಡರೂ ಚಿನ್ನದ ಮೇಲಿನ ಜನರ ನಂಬಿಕೆ ಕುಸಿಯುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಜತೆಗೆ ಆಪದ್ಧನ ಎಂಬ ನಂಬಿಕೆಯೂ ಈ ವ್ಯಾಪಾರ ಹೆಚ್ಚಳಕ್ಕೆ ಪ್ರಮುಖ ಕಾರಣ. ಲಾಕ್‌ಡೌನ್‌ ಬಳಿಕ ಚಿನ್ನದ ದರ ಹೆಚ್ಚಾಗಿದೆ. ಆದರೂ ಜನ ವಿಚಲಿತರಾಗಿಲ್ಲ. ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನ ಯೂರೋಪ್ ಮತ್ತಿತರ ರಾಷ್ಟ್ರಗಳಲ್ಲಿ ಚಿನ್ನ ಮಾರಾಟಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಅದೇ ಪರಿಸ್ಥಿತಿ ರಾಜ್ಯದಲ್ಲೂ ಉಂಟಾಗಲಿದೆ ಎಂದೇ ಭಾವಿಸಲಾಗಿತ್ತು. ಹೊಸ ಆಭರಣಗಳ ಖರೀದಿ ವಹಿವಾಟು ಉದ್ಯಮ ನೆಲ ಕಚ್ಚಲಿದೆ ಎಂದು ಮಾರಾಟಗಾರರು ಹೆದರಿದ್ದರು. ಆದರೆ, ಲಾಕ್‌ಡೌನ್‌ ಸಡಿಲಿಕೆ ಆಗುತ್ತಿದ್ದಂತೆಯೇ ವ್ಯಾಪಾರ ಹಿಂದಿಗಿಂತಲೂ ಹೆಚ್ಚಾಗಿದೆ. ‘‘ಕೊರೊನಾ ಹಿನ್ನೆಲೆಯಲ್ಲಿ ಮಾ.23ಕ್ಕೆ ಚಿನ್ನಾಭರಣಗಳ ಮಳಿಗೆಗಳನ್ನು ಮುಚ್ಚಲಾಗಿತ್ತು. ಮೇ ಕೊನೆಯ ವಾರದವರೆಗೂ ವಹಿವಾಟು ಅಷ್ಟೇನೂ ಇರಲಿಲ್ಲ. ಆದರೆ, ಜೂನ್ 1ರ ಬಳಿಕ ಚಿನ್ನ, ಬೆಳ್ಳಿ ಮಾರಾಟ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಇನ್ನೂ ಆರಂಭವಾಗಿಲ್ಲ. ಆ ಮಾರುಕಟ್ಟೆ ತೆರೆದು, ಚಟುವಟಿಕೆಗಳು ಗರಿಗೆದರೆ ಆಗ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ,’’ ಎನ್ನುತ್ತಾರೆ ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ. ರಾಮಾಚಾರಿ.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಏರಿಕೆಯ ಹಾದಿ

ಮಾರ್ಚ್ 23 – ಜೂನ್ 09 

4,254ರೂ  –  4,795ರೂ – ಚಿನ್ನ 24 ಕ್ಯಾರೆಟ್(ಗ್ರಾಂಗೆ)

3,860ರೂ –  4,355 ರೂ – ಚಿನ್ನ 22 ಕ್ಯಾರೆಟ್(ಗ್ರಾಂಗೆ)

37,600ರೂ  – 47,900ರೂ – ಬೆಳ್ಳಿ ಕೆಜಿಗೆ

ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿಲ್ಲ. ಇದಕ್ಕೆ ಕಾರಣ ನಮ್ಮ ಆಭರಣ ಉದ್ಯಮ. ಇದನ್ನು ಆಪದ್ಧನವಾಗಿ ಖರೀದಿಸುವ ಒಂದು ವಿಶೇಷ ಲೋಹವಾಗಿದೆ. – ಡಾ. ಬಿ. ರಾಮಾಚಾರಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ

ಬೆಲೆ ಏರಿಕೆಗೆ ಕಾರಣವೇನು?

ಕೊರೊನಾ ಹಿನ್ನೆಲೆಯಲ್ಲಿ ಆಮದು ಪ್ರಮಾಣ ಸುಮಾರು ಎರಡು ತಿಂಗಳಿನಿಂದ ಶೂನ್ಯವಾಗಿದೆ. ಇದೀಗ ದಾಸ್ತಾನು ಇರುವ ಚಿನ್ನವನ್ನಷ್ಟೇ ಮಾರಲಾಗುತ್ತಿದೆ. ಆಮದು ಇಲ್ಲದೆ, ಪೂರೈಕೆ ಕಡಿಮೆಯಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದೀಚೆಗೆ ಚಿನ್ನದ ಬೆಲೆ ಏರಿಕೆಯಾಗಿದೆ.

ಹೂಡಿಕೆ ಮೇಲೆ ನಂಬಿಕೆ ಇದೀಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಬ್ಯಾಂಕ್‌ಗಳಲ್ಲಿ ಠೇವಣಿ ಬಡ್ಡಿ ದರ ಕಡಿಮೆ ಇರುವುದರಿಂದ ಕೆಲವರು ಚಿನ್ನದ ಮೇಲೆ ಹಣ ಹೂಡಲು ಮುಂದಾಗಿದ್ದಾರೆ. ಅದ್ಧೂರಿ ಮದುವೆಗೆ ಅವಕಾಶ ಇಲ್ಲದಿರುವುದರಿಂದ ಅದಕ್ಕೆ ಖರ್ಚು ಮಾಡಲಿಚ್ಛಿಸಿದ್ದ ಹಣವನ್ನು ಚಿನ್ನ, ಬೆಳ್ಳಿಯ ಮೇಲೆ ಹೂಡುತ್ತಿದ್ದಾರೆ. ಬ್ಯಾಂಕ್‌ಗಳಿಗಿಂತ ಹೆಚ್ಚು ಸುರಕ್ಷತೆಯಿರುತ್ತದೆ. ಚಿನ್ನದ ಮೇಲೆ ಹೂಡಿದರೆ, ನಷ್ಟವಂತೂ ಇಲ್ಲ ಎಂಬ ಅಪಾರ ನಂಬಿಕೆ ಜನರದ್ದು.

50,000- ರಾಜ್ಯದಲ್ಲಿನ ಚಿನ್ನಾಭರಣ ಮಳಿಗೆಗಳು

12,000- ಬೆಂಗಳೂರು ನಗರದಲ್ಲಿನ ಮಳಿಗೆಗಳು

ಮಾರಾಟ ಹೆಚ್ಚಿದ್ದು ಹೀಗೆ

ಲಾಕ್‌ಡೌನ್‌ಗೆ‌ ಮುನ್ನ ಚಿನ್ನ

ರಾಜ್ಯಾದ್ಯಂತ ತಿಂಗಳಿಗೆ 600ರಿಂದ 850 ಕೆಜಿ

ರಾಜ್ಯದ ದಿನದ ಸರಾಸರಿ 20ರಿಂದ 28.33 ಕೆಜಿ

ಬೆಂಗಳೂರು ನಗರ 250ರಿಂದ 300 ಕೆಜಿ

ಜೂನ್ 1-7ರ ನಡುವೆ

ರಾಜ್ಯಾದ್ಯಂತ 280 ಕೆಜಿ

ದಿನದ ಸರಾಸರಿ 40 ಕೆಜಿ

ಬೆಂಗಳೂರು ನಗರ 60 ಕೆಜಿ

ಲಾಕ್‌ಡೌನ್ ಮುನ್ನ ಬೆಳ್ಳಿ

ತಿಂಗಳಿಗೆ 8000 ಕೆಜಿ

ದಿನದ ಸರಾಸರಿ 67 ಕೆಜಿ

ಜೂನ್ 1-7 1500 ಕೆಜಿ

ದಿನದ ಸರಾಸರಿ 214 ಕೆಜಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top