ಗಿಲ್ಗಿಟ್‌ ವಿಚಾರದಲ್ಲಿ ಭಾರತದ ನಿಲುಮೆಗೆ ಚೀನಾ ಗಿರಗಿಟ್ಲೆ

ಸ್ವಾವಲಂಬನೆಯ ಮೂಲಕ ವ್ಯಾಪಾರ ವಹಿವಾಟಿನಲ್ಲೂ ಚೀನಾವನ್ನು ಮಣಿಸಬೇಕು.

– ಹರಿಪ್ರಕಾಶ್‌ ಕೋಣೆಮನೆ.

ಚೀನಾದ ವುಹಾನ್‌ ಪ್ರಾಂತ್ಯದಿಂದ ಹರಡಿದ ಕೊರೊನಾ ಎಂಬ ವೈರಸ್‌ ಇಡೀ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಇಡೀ ಮನುಕುಲಕ್ಕೆ ವೈರಸ್‌ ಹರಡಲು ಕಾರಣವಾದ ಅದೇ ಚೀನಾ ಭಾರತಕ್ಕೆ ಸದಾ ಮಗ್ಗಲು ಮುಳ್ಳು. ಈಗ ಕೊರೊನಾ ಕಾಟದ ಜತೆಗೆ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ.
ಇದಕ್ಕೆ ಭಾರತವೇನು ಹೆದರಿಲ್ಲ. ಈಗಂತೂ ಗಟ್ಟಿ ನಾಯಕತ್ವವೇ ಇರುವುದರಿಂದ, ಹೆದರಿಸುವ ಸ್ಥಾನದಲ್ಲೂ ಇದೆ. ಹಾಗೆ ಸುಮ್ಮನೇ 2017ರ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಳ್ಳೋಣ. ಭಾರತ- ಭೂತಾನ್‌ ಗಡಿಯ ಡೋಕ್ಲಾಂನಲ್ಲಿ ಭಾರತದ ಗಡಿ ಉಲ್ಲಂಘಿಸಿದ ಚೀನಾದ ಸೇನೆ ಕಿಲೋಮೀಟರ್‌ಗಟ್ಟಲೆ ಭಾರತದೊಳಕ್ಕೆ ಬಂದು ಟೆಂಟ್‌ ಹಾಕಿಕೊಂಡಿತ್ತು. ಆಗ ಭಾರತ ಚೀನಾಕ್ಕೆ ಡೊಗ್ಗು ಸಲಾಮು ಹೊಡೆಯಲಿಲ್ಲ. ಬದಲಿಗೆ ಸ್ವಶಕ್ತಿಯಿಂದ ಎದ್ದು ನಿಂತು ಗರ್ಜಿಸಿದಾಗ, ಚೀನಾ ಸೈನಿಕರು ಅಲ್ಲಿಂದ ಕಾಲ್ಕಿತ್ತಿದ್ದರು. ಈಗ ಲಡಾಕ್‌ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ಅಂಥದ್ದೇ ಉಪಟಳವನ್ನು ಶುರು ಮಾಡಿದೆ. ಒಂದು ಸಮಾಧಾನದ ಸಂಗತಿ ಎಂದರೆ, ಭಾರತ ಈಗ ಮಿಲಿಟರಿ ಶಕ್ತಿ ಜತೆಗೆ ರಾಜತಾಂತ್ರಿಕ ಯುಕ್ತಿಯಿಂದಲೂ ಚೀನವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಯಶಸ್ಸು ತಾತ್ಕಾಲಿಕ. ದುಷ್ಟತನವನ್ನೇ ಮೈಗೂಡಿಸಿಕೊಂಡಿರುವ ಕುತಂತ್ರಿ ಚೀನಾದ ಉಪಟಳವನ್ನು ಶಾಶ್ವತವಾಗಿ ನಿವಾರಿಸಿಕೊಂಡರೆ ಮಾತ್ರ ಭಾರತಕ್ಕೆ ನೆಮ್ಮದಿ.
ಭಾರತ ಚೀನದೊಂದಿಗೆ ಸೌಹಾರ್ದ ಸಂಬಂಧ ಹೊಂದಲು 1950ರಿಂದಲೂ ರಾಜತಾಂತ್ರಿಕವಾಗಿ ಉತ್ತಮ ಒಡನಾಟವನ್ನು ಪ್ರದರ್ಶಿಸುತ್ತಲೇ ಬಂದಿದೆ. ಆದರೆ ಚೀನಾ ಮಾತ್ರ ಇಂಥದ್ದೇ ವಿಶ್ವಾಸದ ಒಡನಾಟವನ್ನು ಯಾವತ್ತೂ ಉಳಿಸಿಕೊಂಡಿಲ್ಲ. 1962ರಲ್ಲಿ ಭಾರತದ ಮೇಲೆ ಯುದ್ಧ ಸಾರಿ ತನ್ನ ವಿಶ್ವಾಸಘಾತುಕವಾದ ನೈಜ ಮುಖ ತೋರಿಸಿಬಿಟ್ಟಿತು. ಆದರೂ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರವರೆಗೆ ಎಲ್ಲ ಪ್ರಧಾನಿಗಳು ಕೂಡ ಆ ದೇಶದೊಂದಿಗಿನ ವ್ಯವಹಾರದಲ್ಲಿ ಸಂಯಮದ ಹಾದಿಯನ್ನೇ ತುಳಿಯುತ್ತಾ ಬಂದಿದ್ದಾರೆ. ಆದರೆ, ಚೀನಾದಂಥ ಕಮ್ಯುನಿಸ್ಟ್‌ ಬುದ್ಧಿಯ ದೇಶಕ್ಕೆ ಬರೀ ಸಂಯಮ, ಸೌಜನ್ಯದ ಭಾಷೆ ಅರ್ಥವಾಗುವುದಿಲ್ಲ. ಹಾಗಾಗಿ, ಕಾಲಕಾಲಕ್ಕೆ ನಡೆ-ನುಡಿಯಲ್ಲಿ ವೀರ ಪೌರುಷವನ್ನೂ ಭಾರತ ತೋರುತ್ತಲೇ ಬಂದಿದೆ.
ಭಾರತದ ವಿರುದ್ಧ ಸದಾ ಎರಡಲಗಿನ ಕತ್ತಿ ಝಳಪಿಸುವುದು ಚೀನಾದ ಯೋಜಿತ ವಿದೇಶ ನೀತಿ. ಒಂದೆಡೆ ಭಾರತದ ಆಯಕಟ್ಟಿನ ಭೂ ಪ್ರದೇಶವನ್ನು ನಿರಂತರವಾಗಿ ಅತಿಕ್ರಮಿಸುವುದು, ಮತ್ತೊಂದೆಡೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ಶಕ್ತಿ, ಕುಯುಕ್ತಿ ಬಳಸಿ ಭಾರತಕ್ಕೆ ಮುಖಭಂಗ ಉಂಟು ಮಾಡುವುದು ಚೀನಾದ ದುರ್ಗುಣ. 1962ರ ಯುದ್ಧದ ಸಂದರ್ಭದಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಿಸಿರುವ 92 ಸಾವಿರ ಚದರ ಕಿ.ಮೀ ಹಾಗೂ ಲಡಾಕ್‌ನ ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ಒತ್ತುವರಿ ಮಾಡಿಕೊಂಡಿರುವ 37 ಸಾವಿರ ಚದರ ಕಿ.ಮೀ ಭಾರತೀಯ ಭೂಪ್ರದೇಶ ಈಗಲೂ ಚೀನದ ಕಬ್ಜದಲ್ಲೇ ಉಳಿದುಕೊಂಡಿದೆ. ಅಷ್ಟು ಸಾಲದ್ದಕ್ಕೆ 2008ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಚುರ್ಮೂ ಪ್ರದೇಶದ ಟಿಯಾಪಂಗ್ನಾಕ್‌ ಮತ್ತು ಚಬ್ಜಿ ವ್ಯಾಲಿಯ 250 ಮೀಟರ್‌ ಉದ್ದದ ಡಮ್ಜಾಕ್‌ನ ಜೋರಾವರ ಕೋಟೆಯನ್ನು ಚೀನಾದ ಸೇನೆ ನಾಶಪಡಿಸಿತು. ಹಿಂದೊಮ್ಮೆ ಅದೇ ಪ್ರದೇಶದಲ್ಲಿ ಚೀನಾ ಸೇನೆ ಅಬ್ಸರ್ವಿಂಗ್‌ ಪಾಯಿಂಟನ್ನು ಸ್ಥಾಪಿಸಿ, ಹೊಸದಾಗಿ ಡೆಮ್‌ ಜಾಕ್‌ ಕಾಲನಿಯನ್ನು ನಿರ್ಮಿಸಿತು. 2008ರಿಂದ 2009ರ ಅವಧಿಯಲ್ಲಿ ಡಂಗ್ವಿ ಮತ್ತು ಡೆಮ್ಜಾಕ್‌ ನಡುವಿನ ಡೂಮ್‌ ಚೆಲಿ(ಪ್ರಾಚೀನ ವ್ಯಾಪಾರ ಕೇಂದ್ರ)ಯನ್ನು ಚೀನಾದೆದುರು ಭಾರತ ಕಳೆದುಕೊಂಡಿತು. ಈಗ ಮತ್ತೆ ಪುನಃ ಲಡಾಕ್‌ನ ಹತ್ತಾರು ಕಡೆಗಳಲ್ಲಿ ವಾಸ್ತವ ಗಡಿ ರೇಖೆ(ಎಲ್‌ಎಸಿ) ಉಲ್ಲಂಘಿಸಿ ಟೆಂಟ್‌ ಹಾಕಿಕೊಂಡಿದೆ.
ಭೂ ಅತಿಕ್ರಮಣ ಒಂದೆಡೆಯಾದರೆ, ಮತ್ತೊಂದೆಡೆ ಕಾಶ್ಮೀರದ ವಿಷಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನವನ್ನು ಚೀನಾ ಸದಾ ಎತ್ತಿ ಕಟ್ಟುತ್ತಲೇ ಇದೆ. ಪಾಕಿಸ್ತಾನದ ಸ್ನೇಹ ಗಟ್ಟಿಗೊಳಿಸಿಕೊಂಡು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹೆದ್ದಾರಿಯನ್ನೂ ಚೀನಾ ನಿರ್ಮಿಸುತ್ತಿದೆ. ಭಾರತ ನ್ಯೂಕ್ಲಿಯರ್‌ ಸಪ್ಲೈಯರ್‌ ದೇಶಗಳ ಗುಂಪಿಗೆ (ಎನ್‌ಎಸ್‌ಜಿ)ಗೆ ಸೇರಲು ಪ್ರಬಲ ಪ್ರತಿರೋಧ ತೋರುತ್ತಿದೆ. ಜತೆಗೆ, ಪಾಕಿಸ್ತಾನಕ್ಕೆ ಅದೇ ಸ್ಥಾನಮಾನ ಕೊಡಿಸಲು ವಕಾಲತ್ತು ಬೇರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಕಾಯಂ ಸದಸ್ಯತ್ವ ಪಡೆಯುವುದಕ್ಕೂ ಚೀನಾವೇ ತೊಡಕು.
ಹಾಗಾದರೆ ಚೀನಾದ ಈ ಉಪಟಳಕ್ಕೆ ಶಾಶ್ವತ ಪರಿಹಾರ ಏನು? ಪರಿಹಾರಕ್ಕೆ ಎರಡು ಮಾರ್ಗಗಳಿವೆ. ಒಂದು ಭಾರತದ ಗಡಿಯನ್ನು ಭದ್ರ ಮಾಡಿಕೊಳ್ಳುವುದು. ಎರಡನೆಯದು ವ್ಯಾಪಾರ ವಹಿವಾಟಿನಲ್ಲಿ ಚೀನಾವನ್ನು ಕಟ್ಟಿ ಹಾಕುವುದು. ಗಡಿ ಭದ್ರಪಡಿಸುವ ವಿಚಾರ ಬಂದಾಗ ಅದು ಪಾಕ್‌ ಆಕ್ರಮಿತ ಕಾಶ್ಮೀರ ಪ್ರಾಂತ್ಯದಲ್ಲಿರುವ ಗಿಲ್ಗಿಟ್‌-ಬಾಲ್ಟಿಸ್ತಾನ್‌ನಿಂದಲೇ ಆರಂಭವಾಗಬೇಕು. ಅದಕ್ಕೆ ಎರಡೇ ಎರಡು ಮಾರ್ಗಗಳು. ಮೊದಲನೆಯದ್ದು ಸದಾ ಭಾರತದ ನೆಮ್ಮದಿ ಭಂಗ ಮಾಡುತ್ತಿರುವ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಂಡು ಹಕ್ಕು ಸ್ಥಾಪಿಸುವುದು. ಪಿಒಕೆ ಸುಮ್ಮನೇ ಒಂದು ಭೂ ಪ್ರದೇಶವಲ್ಲ. ಕಾರಣ ಇಷ್ಟೆ, ಐದು ವಿವಿಧ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಜಗತ್ತಿನ ಏಕೈಕ ಪ್ರದೇಶ ಯಾವುದಾದರೂ ಇದ್ದರೆ ಅದು ಪಿಒಕೆ ಮಾತ್ರ. ಆಫಘಾನಿಸ್ತಾನ, ತಜಕಿಸ್ತಾನ (ಈ ಎರಡೂ ಹಿಂದೊಮ್ಮೆ ರಷ್ಯಾದ ಭಾಗವಾಗಿದ್ದವು) ಪಾಕಿಸ್ತಾನ ಮತ್ತು ಭಾರತ ಮತ್ತು ಟಿಬೆಚ್‌-ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪಿಒಕೆ ಇದ್ದರೆ ಮಾತ್ರ ಕಾಶ್ಮೀರಕ್ಕೆ ಅರ್ಥ, ಜಮ್ಮುವಿಗೆ ಮಹತ್ವ. ಅದಿಲ್ಲದೇ ಹೋದರೆ ಮಹತ್ವವೇ ಇಲ್ಲ. ಶಕರು, ಹೂಣರು, ಕುಶಾನರು, ಮೊಘಲರು ಆದಿಯಾಗಿ ಇಂದಿನ ಪಾಕ್‌ ಪ್ರೇರಿತ ಭಯೋತ್ಪಾದಕರವರೆಗೆ ಎಲ್ಲರೂ ಭಾರತವನ್ನು ಪ್ರವೇಶಿಸಿದ್ದು ಮತ್ತು ಪ್ರವೇಶಿಸುತ್ತಿರುವುದು ಇದೇ ಪಿಒಕೆ ಮೂಲಕವೆ. ಪಿಒಕೆ ಒಳಗೊಂಡ ಜಮ್ಮು ಕಾಶ್ಮೀರ ಭಾರತದ ಪಾಲಿಗೆ ರಕ್ಷಾ ಕವಚ ಎಂಬುದು ಭಾರತದ ಪರವಾಗಿ ಆಲೋಚನೆ ಮಾಡುವವರೆಲ್ಲರಿಗೂ ಗೊತ್ತಿರುವ ವಿಚಾರ. ಒಂದು ಕಾಲದಲ್ಲಿ ಅಮೆರಿಕ, ಬ್ರಿಟನ್‌, ರಷ್ಯಾಗಳು ಗಿಲ್ಗಿಟ್‌ನಲ್ಲಿ ನೆಲೆ ಹೊಂದಲು ಬಯಸಿದ್ದವು. 1965 ಗಿಲ್ಗಿಟನ್ನು ರಷ್ಯಾಕ್ಕೆ ಬಿಟ್ಟುಕೊಡುವ ವಾಗ್ದಾನವನ್ನು ಪಾಕಿಸ್ತಾನ ಮಾಡಿತ್ತು. ಈಗ ಚೀನಾ ಅದೇ ಗಿಲ್ಗಿಟ್‌ ಮೇಲೆ ಕಣ್ಣು ಹಾಕಿದೆ. ಭಾರತ ವಿಶ್ವದ ಆರ್ಥಿಕ ಶಕ್ತಿ ಆಗಬೇಕೆಂದು ಬಯಸಿದರೆ ಸಾಲದು. ಹಾಗೆ ವಿಶ್ವದಲ್ಲಿ ತಲೆ ಎತ್ತಿ ನಿಲ್ಲುವ ಹಾದಿಯೂ ಗಿಲ್ಗಿಟ್‌ ಬಾಲ್ಟಿಸ್ತಾನವೇ ಆಗಬೇಕಾಗುತ್ತದೆ. ಪಿಒಕೆಯಿಂದ ರಸ್ತೆ ಮೂಲಕ ತಲುಪುವುದಾದರೆ ದುಬೈ 5000 ಕಿ.ಮೀ, ದಿಲ್ಲಿ 1400 ಕಿ.ಮೀ, ಮುಂಬೈ 2800 ಕಿ.ಮೀ, ಚೆನ್ನೈ 3800 ಕಿ.ಮೀ, ಲಂಡನ್‌ 8000 ಕಿ.ಮೀ. ದೂರದಲ್ಲಿದೆ. ಈ ಹಿಂದೆ ನಮ್ಮ ವ್ಯಾಪಾರ ವಹಿವಾಟೆಲ್ಲವೂ ಇದೇ ಸಿಲ್ಕ… ರೂಟ್‌ ಮೂಲಕವೇ ನಡೆಯುತ್ತಿತ್ತು. ಶೇ.85ರಷ್ಟು ಜನರು ಸೆಂಟ್ರಲ್‌ ಏಷ್ಯಾ, ಯುರೇಶಿಯಾ, ಯೂರೋಪ್‌, ಆಫ್ರಿಕಾ ದೇಶಗಳಿಗೆ ಈ ಮಾರ್ಗವನ್ನೇ ಬಳಸುತ್ತಿದ್ದರು. ಇಂದು ಇರಾನ್‌ ಮೂಲದ ಗ್ಯಾಸ್‌ ಪೈಪ್‌ಲೈನ್‌ ಯೋಜನೆಗೆ ಭಾರತ ಪಾಕಿಸ್ತಾನಕ್ಕೆ ದೇಹಿ ಎನ್ನಬೇಕಾಗಿದೆ. ಈ ಮನವಿಯನ್ನು ಪಾಕಿಸ್ತಾನ ಒಪ್ಪಲು ಸಾಧ್ಯವೇ ಇಲ್ಲ. ಒಂದು ವೇಳೆ ಗಿಲ್ಗಿಟ್‌ ನಮ್ಮ ವಶಕ್ಕೆ ಬಂದರೆ ಪಾಕಿಸ್ತಾನದೆದುರು ಬೇಡುವ ಪ್ರಮೇಯವೇ ಇರುವುದಿಲ್ಲ.
ಇದು ವ್ಯಾಪಾರ, ಆರ್ಥಿಕತೆ, ಆಯಕಟ್ಟಿನ ದೃಷ್ಟಿಯಿಂದಾಯಿತು. ಭೌಗೋಳಿಕವಾಗಿಯೂ ಗಿಲ್ಗಿಟ್‌ ಗೆ ಅಷ್ಟೇ ಮಹತ್ವವಿದೆ. ಹಿಮಾಲಯದಲ್ಲಿ ಹತ್ತು ಪ್ರಮುಖ ಪರ್ವತಗಳಿವೆ. ಅವೆಲ್ಲವೂ ಜಗತ್ತಿನ ಅತಿ ದೊಡ್ಡ ಪರ್ವತಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ. ಅಂಥ ಹತ್ತರಲ್ಲಿ ಎಂಟು ಪರ್ವತಗಳು ಗಿಲ್ಗಿಟ್‌ ಪ್ರದೇಶದಲ್ಲೇ ಇರುವುದು ವಿಶೇಷ. ಗಿಲ್ಗಿಟ್‌ ಪ್ರದೇಶದಲ್ಲಿ 50ರಿಂದ 100 ಯುರೇನಿಯಂ ಮತ್ತು ಬಂಗಾರದ ಬೃಹತ್‌ ನಿಕ್ಷೇಪಗಳಿವೆ. ಪಾಕ್‌ ಸರಕಾರದ ಖನಿಜ ಇಲಾಖೆಯ ವರದಿ ನೋಡಿದರೆ ಇದು ಗೊತ್ತಾಗುತ್ತದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಗಿಲ್ಗಿಟ್‌ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನದ ಕಡು ವಿರೋಧಿ ಜನರಿದ್ದಾರೆ. ಇದು ಭಾರತಕ್ಕೆ ವರದಾನ.
ಪಿಒಕೆ ಬಿಟ್ಟು ಕಾಶ್ಮೀರಕ್ಕೆ ಅಸ್ತಿತ್ವವೇ ಇರುವುದಿಲ್ಲ. ಪಾಕ್‌ ವಶದಲ್ಲಿರುವ ಪಿಒಕೆ ಭೂ ಭಾಗ 79 ಸಾವಿರ ಚದರ ಕಿ.ಮೀನಷ್ಟಿದೆ. ಕಾಶ್ಮೀರದ ವಿಸ್ತೀರ್ಣ ಕೇವಲ 6 ಸಾವಿರ ಚದರ ಕಿ.ಮೀ ಆದರೆ, ಜಮ್ಮುವಿನದ್ದು 9 ಸಾವಿರ ಚ. ಕಿ.ಮೀ. ಲಡಾಕ್‌ ಒಳಗೊಂಡ ಗಿಲ್ಗಿಟ್‌ ಬಾಲ್ಟಿಸ್ತಾನ 64 ಸಾವಿರ ಚ.ಕಿ.ಮೀ. ಇದೆ. ಮೂಲತಃ ಗಿಲ್ಗಿಟ್‌ ಪ್ರದೇಶ ಕಾಶ್ಮೀರದ ಭಾಗವಲ್ಲ, ಬದಲಾಗಿ ಲಡಾಕ್‌ಗೆ ಸೇರಿದ್ದು. ಆ ದೃಷ್ಟಿಯಿಂದ ಲಡಾಕನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಮೋದಿ ಸರಕಾರ ಆ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇಟ್ಟಿದೆ. ಇನ್ನೂ ಒಂದು ವಿಶೇಷ ಗೊತ್ತಾ? ಗಿಲ್ಗಿಟ್‌ ಪ್ರದೇಶದವರ ಜೀವಿತಾವಧಿ ಇಡೀ ಜಗತ್ತಿನಲ್ಲೇ ಅತಿ ದೀರ್ಘ.
ಈ ಭಾಗದ ಜನ ಭಾರತದೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧ ಅರ್ಥವಾಗಬೇಕೆಂದರೆ, ಇತ್ತೀಚೆಗೆ ಭಾರತದಲ್ಲಿ ನಡೆದ ಸೆಮಿನಾರ್‌ನಲ್ಲಿ ನಡೆದ ಸಂಭಾಷಣೆಯನ್ನು ನೆನಪಿಸಿಕೊಳ್ಳೋಣ. ಆ ಸೆಮಿನಾರ್‌ನಲ್ಲಿ ಭಾಗವಹಿಸಿದ್ದ ಗಿಲ್ಗಿಟ್‌ ಬಾಲ್ಟಿಸ್ತಾನದ ವಿದ್ವಾಂಸರೊಬ್ಬರು, ‘‘ನಾವು ಮರೆತು ಹೋದ ಭಾರತದ ಭೂ ಭಾಗವೊಂದರ ಮರೆತುಹೋದ ಭಾರತೀಯ ಜನ. ನಮ್ಮ ದೇಶಕ್ಕೆ ನಮ್ಮ ಬಗ್ಗೆ ಗೊತ್ತಿಲ್ಲ,’’ ಎಂದು ಹೇಳಿದ್ದರು.
ಅದಕ್ಕೆ ಪ್ರತಿಯಾಗಿ ಸಭಿಕರೊಬ್ಬರು ನೀವು ಭಾರತದಲ್ಲಿ ವಾಸಿಸಬಯಸುವಿರಾ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಗಿಲ್ಗಿಟ್‌ನ ವಿದ್ವಾಂಸರು, ‘‘ಎಪ್ಪತ್ತು ವರ್ಷಗಳ ನಂತರ ನನ್ನನ್ನು ಭಾರತಕ್ಕೆ ಆಹ್ವಾನಿಸಿದ್ದೀರಿ. ಒಳ್ಳೆಯದು. ಆದರೆ, ನಿಮಗೆ ಗೊತ್ತಿರಲಿ. ನಾನು ಅಮೆರಿಕನ್‌ ಟೂರಿಸ್ಟ್‌ ವೀಸಾದ ಮೇಲೆ ಇಲ್ಲಿಗೆ ಬಂದಿದ್ದೇನೆ. ಈಗ ಈ ಪ್ರಶ್ನೆ ಕೇಳುತ್ತಿದ್ದೀರಿ,’’ ಎಂದು ಹೇಳಿದ್ದರು. ಭಾರತ ಸರಕಾರ ಇಲ್ಲಿನ ಐಐಟಿ, ಐಐಎಂಗಳಲ್ಲಿ ಓದಲು ಅವಕಾಶ ಮಾಡಿಕೊಡಬೇಕು. ಇಲ್ಲಿನ ಎಐಐಎಂಎಸ್‌ನಲ್ಲಿ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಗಿಲ್ಗಿಟ್‌ನಲ್ಲಿ ಪಾಕ್‌ ಸೇನೆ ಚಿತ್ರಹಿಂಸೆ ಕೊಡುತ್ತದೆ. ಆದರೆ ಅದು ಭಾರತದ ಪತ್ರಿಕೆ, ಟಿವಿಗಳಲ್ಲಿ ವರದಿಯೇ ಆಗುವುದಿಲ್ಲ ಎಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದ್ದರು. ‘‘ಪಾಕ್‌ ಸರಕಾರ ಕಾಶ್ಮೀರಿಗಳಿಗೆ ಎಲ್ಲ ನೆರವನ್ನೂ ಕೊಡುತ್ತದೆ. ಆದರೆ, ಯಾವತ್ತಾದರೂ ಭಾರತದ ನಾಯಕರು ಗಿಲ್ಗಿಟ್‌ ಜನ ತಮ್ಮವರೆಂದು ಘೋಷಿಸಿದ್ದಾರೆಯೇ? ನಮ್ಮ ನೆರವಿಗೆ ಬಂದಿದ್ದುಂಟಾ?,’’ ಎಂದು ಪ್ರಶ್ನೆ ಮಾಡಿದ್ದರು.
ಸ್ವಾತಂತ್ರ್ಯ ಬಂದು 60 ವರ್ಷಗಳ ನಂತರ ಮೊದಲ ಬಾರಿಗೆ ಅಟಲ್‌ ಸರಕಾರ ಗಿಲ್ಗಿಟ್‌ ಭಾರತದ್ದೆಂದು ಹೇಳಿತು, ಅದಾದ ನಂತರ ನರೇಂದ್ರ ಮೋದಿ ಸರಕಾರ ಗಿಲ್ಗಿಟ್‌ ಬಗ್ಗೆ ವಿಶೇಷ ಗಮನ ಕೊಡುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು. ಅದರ ಮುಂದುವರೆದ ಭಾಗವಾಗಿ ಮೋದಿ ಸರಕಾರ ಸಂವಿಧಾನದ ವಿಧಿ 370/35ಎ ರದ್ದು ಪಡಿಸಿತು. ಜತೆಗೆ, ಕಾಶ್ಮೀರವನ್ನು ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಭಾರತೀಯ ಆಳ್ವಿಕೆ ಶುರು ಮಾಡಿತು!
ಚೀನಾ ಹೊತ್ತಲ್ಲದ ಈ ಹೊತ್ತಲ್ಲಿ ಮೈ ಪರಚಿಕೊಳ್ಳಲು ಇದೇ ಕಾರಣ ಎಂಬುದು ನಿಮಗೀಗ ಗೊತ್ತಾಗಿರಬಹುದು. ಅಮೆರಿಕ, ಆಸ್ಪ್ರೇಲಿಯಾದೊಂದಿಗಿನ ರಾಜತಾಂತ್ರಿಕ ಪ್ರತಿತಂತ್ರ ಹೆಣೆದು ಮಣಿಸಿದ ಪರಿಣಾಮ ಚೀನಾ ತತ್‌ಕ್ಷಣಕ್ಕೆ ಹಿಂದಡಿ ಇಟ್ಟಿದೆ. ಪಿಒಕೆ ವಿಷಯದಲ್ಲಿ ಈಗ ಭಾರತ ದಾಪುಗಾಲಿಡಬೇಕು. ಆಗ ಚೀನಾದ ಆಟ ಶಾಶ್ವತವಾಗಿ ಬಂದ್‌ ಆಗುತ್ತದೆ. ಎರಡನೆ ಉಪಾಯ ಚೀನಾವನ್ನು ವ್ಯಾಪಾರ ವಹಿವಾಟಿನಲ್ಲಿ ಕಟ್ಟಿ ಹಾಕುವುದು. ಭಾರತದ ವಿದೇಶ ಸಚಿವಾಲಯದ ಅಧಿಕೃತ ದಾಖಲೆಗಳು ಹೇಳುವ ಪ್ರಕಾರ ಚೀನಾದ ಸರಕಾರಿ ಸ್ವಾಮ್ಯದ ಕಂಪೆನಿಗಳೂ ಸೇರಿ ನೂರಕ್ಕೂ ಹೆಚ್ಚು ಕಂಪೆನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕ್ಸಿಯೋಮಿ, ಹುವೈ, ವಿವೊ, ಒಪ್ಪೊ ಮತ್ತಿತರ ಕಂಪೆನಿಗಳು ಸೇರಿ ಚೀನದ ಮೊಬೈಲ್‌ ತಯಾರಿಕಾ ಕಂಪೆನಿಗಳು ಭಾರತದ ಶೇ.60ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಭಾರತ ಮತ್ತು ಚೀನದ ವ್ಯಾಪಾರ ವಿನಿಮಯದ ಮೊತ್ತ 2009ರ ಅಂಕಿ ಅಂಶಗಳ ಪ್ರಕಾರ ನೂರು ಬಿಲಿಯನ್‌ ಡಾಲರ್‌ಗೂ ಅಧಿಕ. ಅದರಲ್ಲಿ ಚೀನಾ ಭಾರತಕ್ಕೆ ರಫ್ತು ಮಾಡುವ ಪ್ರಮಾಣ 50 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು.
ಚೀನಾ ಈಗಾಗಲೇ ಆರ್ಥಿಕವಾಗಿ ಜರ್ಜರಿತವಾಗಿದೆ. ಅಮೆರಿಕ ಚೀನಾದ ವಿರುದ್ಧ ಬಹು ಆಯಾಮದ ಯುದ್ಧ ಸಾರಿದೆ. ಈ ಸಂದರ್ಭದಲ್ಲಿ ಭಾರತ ಚೀನಾದ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ಮುಂದಾದರೆ, ಚೀನಾಗೆ ಭಾರತದ ಎದುರು ಬಗ್ಗದೆ ಬೇರೆ ವಿಧಿಯೇ ಇರಲಾರದು. ಭಾರತವೂ ಚೀನಾದ ವಿರುದ್ಧ ಬಹು ಆಯಾಮದ ತಂತ್ರಗಾರಿಕೆ ಪ್ರಯೋಗಿಸುವುದು ಉತ್ತಮ ಮಾರ್ಗ. ಈ ವಿಚಾರದಲ್ಲಿ ಸರಕಾರದ ಜೊತೆಗೆ ಭಾರತದ ಜನರ ಪಾಲುದಾರಿಕೆಯೂ ಬೇಕು.

ಓದುಗರ ಒಡಲಾಳ
ನಮ್ಮ ಲಡಾಕ್‌ನಲ್ಲಿ ಚೀನಾ ಸೈನಿಕರು ಕಿರಿಕಿರಿ ಉಂಟು ಮಾಡಿದರೆ, ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಚೀನಾ ಭಾರತದ ಭೂ ಭಾಗವನ್ನು ಅತಿಕ್ರಮಿಸಿಕೊಂಡಿದೆಯಾ ಎಂದು ರಕ್ಷ ಣಾ ಸಚಿವರಿಗೆ ಪ್ರಶ್ನೆ ಮಾಡಿ ದಾಖಲೆ ಸಂಗ್ರಹಿಸಲು ಮುಂದಾಗುತ್ತಾರೆ. ಇವರಿಗೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಗಂಧವೇ ಇಲ್ಲವೇ?
– ಅಶೋಕ ಪವಾರ, ಬಾಗಲಕೋಟ.

ಓದುಗರೊಬ್ಬರ ಟ್ವೀಟ್‌:
ಲಡಾಕ್‌ ವಾಸಕ್ಕೆ ಯೋಗ್ಯವಲ್ಲದ ಭೂಮಿ. ಹುಲ್ಲುಕಡ್ಡಿಯೂ ಅಲ್ಲಿ ಬೆಳೆಯುವುದಿಲ್ಲ.
-ಜವಾಹರಲಾಲ್‌ ನೆಹರು.
ಲಡಾಕ್‌ನಲ್ಲಿ ವಿಶ್ವದ ಅತಿದೊಡ್ಡ ಸೌರಶಕ್ತಿ ಸ್ಥಾವರವನ್ನು ನಿರ್ಮಾಣ ಮಾಡುತ್ತೇವೆ.
-ನರೇಂದ್ರ ಮೋದಿ
ಭೂಮಿ ಯೋಗ್ಯವಾಗಿಯೇ ಇತ್ತು. ಯೋಗ್ಯ ನಾಯಕ ಬೇಕಿತ್ತು, ಅಷ್ಟೇ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top