ಎಬೋಲಾ ಜಗತ್ತು ಕಂಡ ಅತ್ಯಂತ ಕ್ರೂರ ಕಾಯಿಲೆ ಎಂಬುದರಲ್ಲಿ ಅನುಮಾನವೇ ಇಲ್ಲ. ಪೂರ್ವ ಆಫ್ರಿಕಾದ ಬಹಳಷ್ಟು ದೇಶಗಳು ಆ ಕಾಯಿಲೆಯಿಂದ ನಲುಗಿಹೋಗಿವೆ. ಎಬೋಲಾ ಸೋಂಕು ಕಾಣಿಸಿಕೊಂಡ ವ್ಯಕ್ತಿಯನ್ನು ಆತ ಜೀವಂತ ಇರುವಾಗಲೇ ಮನೆಯಾಚೆ ಹಾಕಿಬಿಡುತ್ತಾರೆಂಬ ವಿಚಾರವನ್ನು ಕೇಳಿದ್ದೀರಾ…
ಪೋಲಿಯೋ ವಿರುದ್ಧ ಭಾರತ ವಿಕ್ರಮ ಸಾಧಿಸಿದೆ. ಹೀಗಾಗಿ ಆ ಕಾಯಿಲೆ ಭಾರತದ ಮಟ್ಟಿಗೆ ಈಗ ಇತಿಹಾಸ. ಹೃದ್ರೋಗದ ಬಗ್ಗೆ ಜನಸಾಮಾನ್ಯರಿಗೂ ತಿಳಿವಳಿಕೆ ಬಂದು ಹದಿನೈದು ಇಪ್ಪತ್ತು ವರ್ಷಗಳಾಗಿರಬಹುದು. ಅಲ್ಲಿಯವರೆಗೆ ಅದು ಶ್ರೀಮಂತರ ಕಾಯಿಲೆ, ಪಟ್ಟಣವಾಸಿಗಳ ಕಾಯಿಲೆ ಅಂತಲೇ ಭಾವಿಸಲಾಗಿತ್ತು. ಹಳ್ಳಿಗರಲ್ಲಿ ಹೃದ್ರೋಗದ ಬಗ್ಗೆ ಎಷ್ಟು ಅಜ್ಞಾನ ಇತ್ತೆಂದರೆ, ಹಾದಿಮೇಲೆ ಹೋಗುವಾಗ ಹಠಾತ್ತಾಗಿ ಹೃದಯಾಘಾತಕ್ಕೊಳಗಾಗಿ ಯಾರಾದರೂ ಮರಣ ಹೊಂದಿದರೆ ಆತ ಭೂತ ಹೊಡೆದು ಸತ್ತ ಅಂತಲೇ ಜನ ಮಾತಾಡಿಕೊಳ್ಳುತ್ತಿದ್ದರು. ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ ಮನೆಯ ಯಜಮಾನ ಬೆಳಗಾಗುವುದರೊಳಗೆ ಹಾಸಿಗೆಯಲ್ಲೇ ಕೊನೆಯುಸಿರೆಳೆದ ಅಂತಿಟ್ಟುಕೊಳ್ಳಿ, ಆ ಮನುಷ್ಯ ಅದೇನು ಪುಣ್ಯಮಾಡಿದ್ದನೋ ಕಾಣೆ, ಒಂದಿಷ್ಟೂ ನರಳಾಡದೆ ಸುಖದ ಸಾವನ್ನು ಕಂಡ ಎಂದು ಉದ್ಗಾರ ತೆಗೆಯುತ್ತಿದ್ದರು. ಈಗ ಎಲ್ಲಿ ಹೋದರೂ ಮನೆಗೊಬ್ಬರಂತೆ ಹೃದ್ರೋಗಿಗಳು ಸಿಗುತ್ತಾರೆ. ಹೃದ್ರೋಗ ಚಿಕಿತ್ಸೆಯ ಆಸ್ಪತ್ರೆಗಳು, ಯಶಸ್ವನಿಯಂತಹ ಸರ್ಕಾರಿ ವಿಮಾ ಯೋಜನೆಗಳು ಲಭ್ಯ ಇರುವುದರಿಂದ ಬಡಬಗ್ಗರೂ ಹೃದಯ ಕಾಯಿಲೆ ಬಂದರೆ ಹೌಹಾರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರಕ್ತ ದಪ್ಪ ಆಗುವುದು, ರಕ್ತನಾಳ ಕಟ್ಟಿಕೊಳ್ಳುವುದನ್ನು ತಡೆಯುವ ಹೊಸ ಹೊಸ ಮಾತ್ರೆ, ಔಷಧಗಳು ಬೇಕಾದಷ್ಟಿರುವುದರಿಂದ ಹೃದಯಾಘಾತಕ್ಕೊಳಗಾಗಿ ಸಾಯುವವರ ಪ್ರಮಾಣದಲ್ಲಿ ಶೇಕಡಾ ಮೂವತ್ತರಷ್ಟು ಇಳಿಕೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ.
ತದನಂತರದಲ್ಲಿ ಭಯಾನಕ ಅಂತ ಪರಿಗಣಿಸಿದ್ದು ಕ್ಯಾನ್ಸರ್ ಕಾಯಿಲೆಯನ್ನು. ಈಗ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಬಹುತೇಕ ಕ್ಯಾನ್ಸರ್ ಪೀಡಿತರು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಬಾಕಿ ಎಲ್ಲಾ ಯಾಕೆ, ಮದ್ದಿಲ್ಲದ ಕಾಯಿಲೆಯೆಂಬ ಕುಖ್ಯಾತಿಯ ಎಚ್‍ಐವಿ/ಏಡ್ಸ್ ಕೂಡ ಈಗ ಅಷ್ಟು ಭಯಾನಕವಲ್ಲ. ಏಡ್ಸ್‍ಗೆ ಔಷಧ ಕಂಡುಹಿಡಿಯುವುದು ಇದುವರೆಗೆ ಸಾಧ್ಯವಾಗಿಲ್ಲವಾದರೂ ಜರ್ಮನಿ, ಅಮೆರಿಕ ಮುಂತಾದ ದೇಶಗಳ ವಿಜ್ಞಾನಿಗಳು ಏಡ್ಸ್ ರೋಗಿ ನೋವಿಲ್ಲದೆ ಹೆಚ್ಚು ಕಾಲ ಬದುಕುವಂಥ ಔಷಧ ಕಂಡುಹಿಡಿದಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಏಡ್ಸ್ ಮಾರಿಯನ್ನು ಜಯಿಸುವ ಔಷಧ ಶೋಧಿಸಿದರೆ ಅಚ್ಚರಿಪಡಬೇಕಿಲ್ಲ. ಅದಕ್ಕಿಂತ ಖುಷಿ ಸಂಗತಿಯೆಂದರೆ ಏಡ್ಸ್ ಬಗೆಗಿನ ಭೀತಿ ಮತ್ತು ಜನಜಾಗೃತಿಯ ಪರಿಣಾಮ ಅಭಿವೃದ್ಧಿಶೀಲ ದೇಶಗಳಲ್ಲಿ ಏಡ್ಸ್ ಸೋಂಕು ಹರಡುವ ಪ್ರಮಾಣ ಇಳಿಮುಖವಾಗಿದೆ.
ಇನ್ನು ಡೆಂಘೆ, ಮಲೇರಿಯಾ ಹಾವಳಿ ವಿಷಯದಲ್ಲಿ ಭಾರತದಂತಹ ದೇಶದಲ್ಲಿ ತುಸು ಆತಂಕವಿದೆಯಾದರೂ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಸಾವಿನ ಭೀತಿಗೆ ಕಾರಣವಿಲ್ಲ. ಹೀಗಾಗಿ, ಹೇಗೆ ನೋಡಿದರೂ, ಈಗ ಆಫ್ರಿಕಾ, ಫಿಲಿಪ್ಪೀನ್ಸ್ ಮುಂತಾದ ದೇಶಗಳಲ್ಲಿ ಮಾನವ ಸಂತತಿಗೇ ಕಂಟಕವಾಗಿರುವ ಎಬೋಲಾವೇ ಸದ್ಯದ ಮಟ್ಟಿಗೆ ಭಯಾನಕ ಕಾಯಿಲೆ ಎನ್ನಲಡ್ಡಿಯಿಲ್ಲ.
ಯಾಕೆ ಅಂತ ಹೇಳುತ್ತೇನೆ ಕೇಳಿ. ಅಮೆರಿಕ ಪ್ರವಾಸದ ವೇಳೆ ಪರಿಚಯವಾದ ಪೂರ್ವ ಆಫ್ರಿಕಾದ ದೇಶ ಘಾನಾ ರಿಪಬ್ಲಿಕ್‍ನ ಪತ್ರಕರ್ತ ಬರ್ನಾರ್ಡ್ ಅವ್ಲೆ ಹೇಳಿದ ಎಬೋಲಾ ಹೆಮ್ಮಾರಿಯ ಕತೆ ಕೇಳಿ ಮೈಜುಮ್ಮೆಂದಿತು. ಮಾತ್ರವಲ್ಲ ತರಹೇವಾರಿ ಮಾರಕ ಕಾಯಿಲೆಗಳ ಕುರಿತು ಯೋಚನೆಗೆ ಹಚ್ಚಿತು. ಬರ್ನಾರ್ಡ್ ಓರ್ವ ಸಾಹಸಿ ಪತ್ರಕರ್ತ. ಘಾನಾದ ಜನಪ್ರಿಯ ಪತ್ರಿಕೆ `ದಿ ನ್ಯಾಷನಲ್ ಡೇಲಿ’ಗೆ ಈತ ವಿಶೇಷ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ. ಘಾನಾದ ನೆರೆಯ ಸಿಯೆರಾ ಲಿಯೋನ್, ಗಿನಿ ಮತ್ತು ಲೈಬೀರಿಯಾ ದೇಶಗಳು ಎಬೋಲಾದಿಂದ ಜರ್ಝರಿತಗೊಂಡಾಗ ಈತ ಅಲ್ಲಿಗೆ ಹೋಗಿ ಎಬೋಲಾದ ಭೀಕರತೆ ಕುರಿತು ತಿಂಗಳಾನುಗಟ್ಟಲೆ ವರದಿ ಮಾಡಿದ. ಆಫ್ರಿಕಾದ ಮಾಧ್ಯಮಗಳ ಸಾಕ್ಷಾತ್ ವರದಿಯ ಪರಿಣಾಮ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಈ ದೇಶಗಳಲ್ಲಿ ಎಬೋಲಾದ ವಿರುದ್ಧ ಪೂರ್ಣಪ್ರಮಾಣದಲ್ಲಿ ಯುದ್ಧವನ್ನೇ ಸಾರಿವೆ. ಅಮೆರಿಕವೂ ಈ ಮೂರೂ ದೇಶಗಳಲ್ಲಿ ಸಂಪೂರ್ಣ ವೈದ್ಯಕೀಯ ನೆರವಿನ ಕಾರ್ಯಾಚರಣೆಗಿಳಿದಿದ್ದು, ಹೊಸ ಆಸ್ಪತ್ರೆಗಳ ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಬರ್ನಾರ್ಡ್ ಪ್ರಕಾರ, ಸಿಯೆರಾ ಲಿಯೋನ್, ಗಿನಿ ಮತ್ತು ಲೈಬೀರಿಯಾದಲ್ಲಿನ ಎಬೋಲಾ ಹಾವಳಿಯೆದುರು ಜಗತ್ತಿನ ಬೇರಾವುದೇ ಕ್ರೌರ್ಯದ ಇತಿಹಾಸವೂ ಈಗ ಲೆಕ್ಕಕ್ಕಿಲ್ಲ ಎನ್ನುವಂತಾಗಿ ಬಿಟ್ಟಿದೆ. “ತಮ್ಮ ಕೈಲಿ ಸಾಧ್ಯವಿದ್ದುದನ್ನೆಲ್ಲ ಅಲ್ಲಿನ ಸರ್ಕಾರಗಳು ಮಾಡುತ್ತಿದ್ದರೂ, ಎಬೋಲಾ ಸೋಂಕು ಹರಡುವಿಕೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೇಗಾಗಿದೆ ಅಂದರೆ, ಬಿಂದಾಸ್ ಸಂಸ್ಕøತಿ ಮೈಗೂಡಿಸಿಕೊಂಡಿದ್ದ ಈ ದೇಶಗಳಲ್ಲಿ ಈಗ ಯಾರೊಬ್ಬರೂ ಪರಸ್ಪರ ಹಸ್ತಲಾಘವವನ್ನೂ ಮಾಡುವ ಹಾಗಿಲ್ಲ. ಯಾರೇ ಎದುರು ಬಂದರೂ ದೂರದಿಂದಲೇ ಕೈ ಮುಗಿಯುತ್ತಾರೆ. ಅಕಾಸ್ಮಾತ್ ಯಾರಾದರೂ ಕೈಮುಟ್ಟಿದರೆ ಆಗಿಂದಾಗ್ಗೆ ಸಾಬೂನು ಹಚ್ಚಿ ಕೈ ತೊಳೆದುಕೊಳ್ಳುತ್ತಾರೆ. ಜನಜಂಗುಳಿ ಸೇರುವ ಹಾಗಿಲ್ಲ. ಜಾತ್ರೆ, ಸಂತೆ ಯಾವುದಕ್ಕೂ ಬಿಲ್‍ಕುಲ್ ಅವಕಾಶವಿಲ್ಲ. ಕುಟುಂಬಸ್ಥರು, ಸ್ನೇಹಿತರ ಜತೆಗೂ ಬೆರೆಯುವ ಹಾಗಿಲ್ಲ. ಶಾಲಾ ಕಾಲೇಜು, ಸಿನಿಮಾ ಮಂದಿರಗಳು ಬಾಗಿಲು ಮುಚ್ಚಿ ಎಷ್ಟೋ ತಿಂಗಳು ಕಳೆದಿವೆ. ಹೋಟೆಲ್, ಅಂಗಡಿಮುಂಗಟ್ಟುಗಳೆಲ್ಲ ಬೀಗ ಹಾಕಿ ಯಾವುದೋ ಕಾಲವಾಯಿತು. ಜನರು ಕ್ಷೌರದಂಗಡಿಗಳ ಕಡೆಗೆ ಸುಳಿಯದೆ ಆರು ತಿಂಗಳು ಕಳೆದಿದೆ. ಸಿಯೆರಾದ ಆರ್ಥಿಕ ವಹಿವಾಟಿನ ಆಧಾರವಾದ ಬೀಚ್‍ಗಳು ಬಿಕಿನಿ ತೊಟ್ಟವರ ಗಿಜಿಗಿಜಿಯಿಲ್ಲದೆ ಬಿಕೋ ಎನ್ನುತ್ತಿವೆ. ಅದಕ್ಕಿಂತ ಭಯಾನಕವಾದದ್ದು ಅಲ್ಲಿನ ಸರ್ಕಾರ ರೂಪಿಸಿರುವ ಹೊಸ ನಿಯಮಾವಳಿ.
ಹೊಸ ನಿಯಮಾವಳಿ ಪ್ರಕಾರ, ಸಿಯೆರಾದ ಪ್ರಜೆಗಳು ತಮ್ಮ ಸಂಬಂಧಿಗಳನ್ನು ಭೇಟಿ ಮಾಡುವುದಕ್ಕೂ ಪೊಲೀಸರಿಂದ ಸೆಕ್ಯುರಿಟಿ ಪಾಸ್ ಪಡೆಯುವುದು ಕಡ್ಡಾಯ. ಸೆಕ್ಯುರಿಟಿ ಪಾಸ್ ಪಡೆಯಲು ಹೋದ ನನಗೆ, ಮೊದಲ ಬಾರಿಗೆ ಲಂಡನ್‍ಗೆ ಹೋಗುವಾಗ ವೀಸಾ ಪಡೆದುಕೊಂಡಿದ್ದಕ್ಕಿಂತಲೂ ಕಷ್ಟ ಎನ್ನಿಸಿತು. ಇನ್ನು ಜನಸಾಮಾನ್ಯರ ಕತೆ ಹೇಗಿರಬಹುದು ಊಹಿಸಿಕೊಳ್ಳಿ. ಎಬೋಲಾ ಹರಡುವುದನ್ನು ತಡೆಯಲು ಸರ್ಕಾರ ವಿಧಿಸಿರುವ ಕಠಿಣ ನಿರ್ಬಂಧದ ಪರಿಣಾಮ ಜನರು ಹೆಜ್ಜೆಹೆಜ್ಜೆಗೂ ಎಬೋಲಾ ಹೆಮ್ಮಾರಿ ಬೆನ್ನಿಗೆ ಬೀಳುವ ಭ್ರಮೆಯಲ್ಲಿ ಹೌಹಾರುತ್ತಿದ್ದಾರೆ. ಒಬ್ಬರ ಮೈ ಮತ್ತೊಬ್ಬರಿಗೆ ತಾಕಿದರೆ ಬೆಚ್ಚಿ ಮಾರು ದೂರ ಹಾರುತ್ತಾರೆ. ಕೈ ಮುಟ್ಟಿದರೆ ಕೈ ತೊಳೆದುಕೊಳ್ಳಲು ನಲ್ಲಿಯ ಬಳಿಗೆ ಓಡುತ್ತಾರೆ. ನೀರಿಗೆ ಉಪ್ಪು ಬೆರೆಸಿಕೊಂಡು ಸ್ನಾನ ಮಾಡಿದರೆ ಎಬೋಲಾ ಸೋಂಕು ಹತ್ತಿರಕ್ಕೂ ಸುಳಿಯುವುದಿಲ್ಲ ಎಂಬ ಗಾಳಿ ಸುದ್ದಿ ಕೇಳಿ ಇಡೀ ದೇಶದ ಜನರು ಉಪ್ಪು ನೀರಿನ ಸ್ನಾನ ಮಾಡತೊಡಗಿದ್ದಾರೆ. ನಿಯಮಾವಳಿ ಪ್ರಕಾರ ಸ್ಥಳೀಯ ಆಹಾರ, ತರಕಾರಿ ಯಾವುದನ್ನೂ ಜನರು ಮಾರುವಂತಿಲ್ಲ, ಕೊಳ್ಳುವಂತಿಲ್ಲ. ಬಿಗಿಯಾಗಿ ಪ್ಯಾಕ್ ಮಾಡಿದ ಆಮದು ಆಹಾರ ಪದಾರ್ಥಗಳ ಬಳಕೆಗೆ ಮಾತ್ರ ಎಬೋಲಾ ಪೀಡಿತ ದೇಶಗಳಲ್ಲಿ ಅವಕಾಶ. ಹೀಗಾಗಿ ಆಹಾರ ಪದಾರ್ಥ ಒಂದಕ್ಕೆ ಹತ್ತುಪಟ್ಟು ದುಬಾರಿ. ಊಟಕ್ಕೆ ಮನೆಯಲ್ಲಿ ಕಾಳುಕಡಿ ಇಲ್ಲದಿದ್ದರೂ ದುಬಾರಿ ಹ್ಯಾಂಡ್‍ವಾಷ್ ಲಿಕ್ವಿಡ್ ಮಾತ್ರ ಕೈಯಲ್ಲಿ ಇರಲೇಬೇಕು. ಎಲ್ಲಕ್ಕಿಂತ ಹೆಚ್ಚು ನೋವುಂಟು ಮಾಡುವ ಇನ್ನೊಂದು ಸಂಗತಿಯಿದೆ. ಎಬೋಲಾ ಸೃಷ್ಟಿಸಿದ ಕ್ರೌರ್ಯ ಎಂಥದ್ದೆಂದರೆ, ಮಕ್ಕಳು, ಹೆಂಡತಿ, ಗಂಡ ಇತ್ಯಾದಿ ಸಂಬಂಧಗಳೆಲ್ಲ ಎಬೋಲಾ ಸೋಂಕು ತಗಲುವವರೆಗೆ ಮಾತ್ರ. ಒಮ್ಮೆ ಎಬೋಲಾ ಲಕ್ಷಣ ಕಾಣಿಸಿಕೊಂಡಿತು ಎಂದರೆ ಈ ಸಂಬಂಧ, ಪ್ರೀತಿ, ಕಕ್ಕುಲಾತಿಗಳನ್ನೆಲ್ಲ ಮರೆತುಬಿಡಬೇಕು. ಎಬೋಲಾಕ್ಕೆ ಗುರಿಯಾದವರನ್ನು ಪ್ಲಾಸ್ಟಿಕ್ ಹೊದಿಕೆಯೊಳಗಿಟ್ಟು ಮನೆಯವರಿಂದ ಪ್ರತ್ಯೇಕ ಮಾಡಿಬಿಡಬೇಕು. ಸಂಪೂರ್ಣವಾಗಿ ಮೈಗೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡ ಎಬೋಲಾ ಪರಿಹಾರ ಕಾರ್ಯಪಡೆಯವರನ್ನು ಬಿಟ್ಟರೆ ಬೇರಾರೂ ಎಬೋಲಾ ಪೀಡಿತ ವ್ಯಕ್ತಿಯ ಮುಖವನ್ನೂ ನೋಡುವ ಹಾಗಿಲ್ಲ. ಎಬೋಲಾ ಪೀಡಿತ ವ್ಯಕ್ತಿ ಮೃತಪಟ್ಟರೆ ಆತನ ಅಂತ್ಯಸಂಸ್ಕಾರಕ್ಕೂ ಹತ್ತಿರದ ಸಂಬಂಧಿಗಳು ಹೋಗುವ ಹಾಗಿಲ್ಲ. ಇದೆಂಥ ಕಾಯಿಲೆ, ಇದೆಂಥ ಕಷ್ಟ!
ಅದೆಲ್ಲ ಸರಿ, ಆಫ್ರಿಕಾದ ದೇಶಗಳಲ್ಲಿ ಎಬೋಲಾ ಪೀಡಿತರಿಗೆ ಚಿಕಿತ್ಸೆ ಕೊಡುವ ವೈದ್ಯರು, ದಾದಿಯರ ಕತೆ ಹೇಳಿ. ಆ ಕಾಯಿಲೆ ಅದೆಂಥಾ ಕ್ರೂರಿ ಎಂದರೆ ಎಬೋಲಾ ಪೀಡಿತರ ಶುಶ್ರೂಷೆಗೆ ಹೋದ ಲೈಬೀರಿಯಾದ ಖ್ಯಾತ ವೈದ್ಯ ಸ್ಯಾಮ್ಯುಯೆಲ್ ಬ್ರಿಸ್ಬೇನ್ ಅವರನ್ನೇ ಬಲಿ ಪಡೆದುಕೊಂಡಿತು. ಆ ಘಟನೆಯ ಬಳಿಕ ಎಬೋಲಾ ಚಿಕಿತ್ಸೆ ಎಂದರೆ ಬಹಳಷ್ಟು ಮಂದಿ ಕೈ ಮುಗಿದು ದೂರ ಸರಿಯುತ್ತಿದ್ದಾರೆ. ಅಂಥದ್ದರಲ್ಲಿ, ಜೀವವನ್ನು ಕೈಲಿ ಹಿಡಿದುಕೊಂಡಿರುವ ಆಫ್ರಿಕಾ ದೇಶಗಳ ಜನರು ವಿಶ್ವಸಂಸ್ಥೆ ಮತ್ತು ಯುನಿಸೆಫ್‍ನ ವೈದ್ಯಕೀಯ ತಂಡದ ಸದಸ್ಯರಿಗೆ ಅದೆಷ್ಟು ಋಣಿಗಳಾಗಿದ್ದರೂ ಕಡಿಮೆಯೇ” ಎಂದು ವಿವರಿಸಿದ ಪತ್ರಕರ್ತ ಬರ್ನಾರ್ಡ್‍ಗೆ ಮುಂದೆ ಮಾತೇ ಹೊರಡಲಿಲ್ಲ.
ಇಂಥ ಮಾರಣಾಂತಿಕ ಎಬೋಲಾ ಮೊದಲು ಕಾಣಿಸಿಕೊಂಡದ್ದು ಆಫ್ರಿಕಾ ದೇಶಗಳ ಮಂಗ, ಚಿಂಪಾಂಜಿ, ಬಾವಲಿ ಮತ್ತು ಕಾಡುಹಂದಿಯಂತಹ ವನ್ಯಜೀವಿಗಳಲ್ಲಿ. ಕ್ರಮೇಣ, ಎಬೋಲಾ ಮತ್ತು ಮಾರ್ಬರ್ಗ್ ಸೋಂಕು ಮಂಗ, ಬಾವಲಿ ಮುಂತಾದ ಕಾಡುಪ್ರಾಣಿ, ಪಕ್ಷಿಗಳನ್ನು ಹೆಚ್ಚಾಗಿ ತಿನ್ನುವ ಆಫ್ರಿಕಾ ಖಂಡದ ದೇಶಗಳ ಜನರಿಗೆ ಅಂಟಿಕೊಂಡಿತು. ಫಿಲಿಪ್ಪೀನ್ಸ್ ಹಾಗೂ ಪೂರ್ವ ಆಫ್ರಿಕಾದ ದೇಶಗಳಾದ ಲೈಬೀರಿಯಾ, ಸಿಯೆರಾಗಳಿಂದ ಆಮದು ಮಾಡಿಕೊಂಡ ಮಂಗ, ಚಿಂಪಾಂಜಿ ಮತ್ತು ಬಾವಲಿಗಳ ಮೇಲೆ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಮತ್ತು ಆಫ್ರಿಕಾದ ಗಣಿ ಕಾರ್ಮಿಕರ ಮೂಲಕವೂ ಎಬೋಲಾ ಹರಡುತ್ತಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಆಫ್ರಿಕಾದಿಂದ ಬರುವ ಪ್ರವಾಸಿಗರ ಮೂಲಕ, ಎಬೋಲಾ ಚಿಕಿತ್ಸೆಗೆ ತೆರಳಿದ ವೈದ್ಯರ ಮೂಲಕ ಅಮೆರಿಕದಂತಹ ದೇಶಗಳಲ್ಲಿ ಎಬೋಲಾ ಭೀತಿ ಹರಡಿದೆ. ಮುಖ್ಯವಾಗಿ ಎಬೋಲಾ ಮನುಷ್ಯರಿಂದ ಮನುಷ್ಯರಿಗೆ ಹರಡುವುದು ವೀರ್ಯ, ಮೂತ್ರ, ಎಂಜಲು, ರಕ್ತದ ಸಂಪರ್ಕದ ಮೂಲಕ. ಹೀಗಾಗಿ ಎಬೋಲಾ ಮತ್ತು ಮಾರ್ಬರ್ಗ್ ರೋಗಾಣು ಹಾಗೂ ಡೆಂಘೆ, ಲಾಸ್ಸಾ, ಹಳದಿ ಜ್ವರ ಇತ್ಯಾದಿಗಳು ಹರಡಲು ಕಾರಣವಾಗುವ ರೋಗಾಣುಗಳ ನಡುವೆ ತುಸು ಸಾಮ್ಯತೆ ಇದ್ದರೂ ಬೇರೆಲ್ಲವುಗಳಿಗಿಂತ ಎಬೋಲಾ ಹೆಚ್ಚು ಅಪಾಯಕಾರಿ. ಆಫ್ರಿಕಾದ ಬಡ ದೇಶಗಳ ಪರಿಸ್ಥಿತಿ ಅದೆಷ್ಟು ಕನಿಕರಪಡುವ ಹಾಗಿದೆ ಎಂದರೆ ಅಲ್ಲಿನ ಬಹುಪಾಲು ಆಸ್ಪತ್ರೆಗಳಲ್ಲಿ ಬಳಸಿದ ಸಿರಿಂಜ್ ಮತ್ತು ಸೂಜಿಗಳನ್ನೇ ಮತ್ತೊಬ್ಬರಿಗೆ ಚುಚ್ಚುಮದ್ದು ನೀಡಲು ಬಳಸಲಾಗುತ್ತಿದೆ. ಆ ಕಾರಣದಿಂದಲೂ ಎಬೋಲಾ ಸೋಂಕು ವೇಗವಾಗಿ ಹರಡಿದೆ.
ಎಬೋಲಾ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಮೊದಲು ಐದರಿಂದ ಹತ್ತು ದಿನ ವಿಪರೀತ ಶೀತ-ಜ್ವರ ಕಾಣಿಸಿಕೊಳ್ಳುತ್ತದೆ, ದೇಹದ ತೂಕ ಏಕ್‍ದಮ್ ಇಳಿದು ಹೋಗುತ್ತದೆ. ಎರಡನೇ ಹಂತದಲ್ಲಿ ರೋಗಿಯ ಕಣ್ಣು, ಮೂಗು, ಬಾಯಿ, ಹೊಟ್ಟೆ ಮತ್ತು ಇತರ ದ್ವಾರಗಳಲ್ಲಿ ವಿಪರೀತ ರಕ್ತಸ್ರಾವ ಶುರುವಾಗುತ್ತದೆ. ಅದಕ್ಕೆ ಕಾರಣ, ರಕ್ತ ಹೆಪ್ಪುಗಟ್ಟಲು ಕಾರಣವಾಗುವ ಜೀವಕೋಶವನ್ನೇ ಎಬೋಲಾ ಮತ್ತು ಮಾರ್ಬರ್ಗ್ ರೋಗಾಣುಗಳು ನುಂಗಿಹಾಕಿರುತ್ತವೆ. ಆಗ ರೋಗಪೀಡಿತನಿಗೆ ಸಾವನ್ನು ಎದುರುಗೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಯೇ ಇರುವುದಿಲ್ಲ.
ಇಡೀ ಜಗತ್ತಿನಲ್ಲಿ ಭೀತಿ ಹುಟ್ಟಿಸಿರುವ ಎಬೋಲಾ ಸೋಂಕನ್ನು ಕೊಲ್ಲುವ ಔಷಧದ ಹುಡುಕಾಟದಲ್ಲಿ ವಿಜ್ಞಾನಿಗಳು ಮುಳುಗಿದ್ದಾರಾದರೂ, ಇನ್ನೂ ಯಶಸ್ಸು ಸಿಕ್ಕಿಲ್ಲ. ಎಬೋಲಾ ನಿರೋಧಕ ಔಷಧವನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ಯಶ ಕಂಡಿದ್ದೇವೆಂದು ಕೆಲ ವಿಜ್ಞಾನಿಗಳು ಹೇಳಿಕೊಂಡಿದ್ದಾರಾದರೂ, ಮಾನವ ಬಳಕೆಗೆ ಅದು ಇನ್ನೂ ಪ್ರಮಾಣಿತಗೊಂಡಿಲ್ಲ. ಅಮೆರಿಕದ ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ನಿರ್ವಹಣಾ ಕೇಂದ್ರವೂ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಎಬೋಲಾ ಕಾಣಿಸಿಕೊಂಡ ವ್ಯಕ್ತಿಗೆ ಸಾಕಷ್ಟು ದ್ರವಾಹಾರ ಕೊಡುವುದರ ಜತೆಗೆ ರಕ್ತದೊತ್ತಡ ಕಾಯ್ದುಕೊಳ್ಳುವುದು, ಅಗತ್ಯಬಿದ್ದರೆ ಕೃತಕ ಆಮ್ಲಜನಕ ಕೊಡುವುದು, ರಕ್ತದ ಕೊರತೆಯಾದರೆ ಬೇರೆಯವರ ರಕ್ತವನ್ನು ಕೊಡುವುದು, ಎಲ್ಲಕ್ಕಿಂತ ಮುಖ್ಯವಾಗಿ ಎಬೋಲಾ ಪೀಡಿತ ವ್ಯಕ್ತಿಯ ದೇಹದಲ್ಲಿ ಬೇರೆ ರೋಗಾಣು ಸೇರಿಕೊಳ್ಳದಂತೆ ತಡೆಯುವುದನ್ನು ಬಿಟ್ಟರೆ ಬೇರೆ ಉಪಾಯ, ಚಿಕಿತ್ಸೆ ಯಾವುದೂ ಸದ್ಯದ ಮಟ್ಟಿಗೆ ಲಭ್ಯವಿಲ್ಲ ಎಂಬುದು ಎಬೋಲಾ ಭೀತಿ ಹೆಚ್ಚಾಗಲು ಮುಖ್ಯ ಕಾರಣ. ಹೀಗಾಗಿ ಎಬೋಲಾ ಜಯಿಸಲು ಔಷಧಶೋಧದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಆದಷ್ಟು ಬೇಗ ಯಶಸ್ಸು ಸಿಗಲಿ. ಎಬೋಲಾ ಭೀತಿಯಿಂದ ಜಗತ್ತು ಆದಷ್ಟು ಬೇಗ ಮುಕ್ತವಾಗಲಿ ಎಂದು ಆಶಿಸಬಹುದಷ್ಟೆ. ಬೇರೆಲ್ಲವನ್ನೂ ಗೆದ್ದ ಮನುಷ್ಯ ಎಬೋಲಾ ಸವಾಲನ್ನು ಗೆಲ್ಲಲಾರನೇ?