ಜಾರ್ಜ್ ಪ್ರತಿಪಾದಿಸಿದ್ದ ಆತ್ಮನಿರ್ಭರ ಮಂತ್ರ

ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ (ಜೂನ್ 25) 45 ವರ್ಷ. ಎಮರ್ಜೆನ್ಸಿ ಹೀರೊ, ಜನನಾಯಕ ಜಾರ್ಜ್ ಫರ್ನಾಂಡಿಸ್ ಅವರು ಪ್ರತಿಪಾದಿಸುತ್ತಿದ್ದ ಸ್ವದೇಶಿ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಆತ್ಮನಿರ್ಭರ ವಿಚಾರಗಳು ಈಗ ಹೆಚ್ಚು ಪ್ರಸ್ತುತವಾಗಿವೆ.

– ಅನಿಲ್ ಹೆಗ್ಡೆ.
1974ರ ಐತಿಹಾಸಿಕ ರೈಲು ಮುಷ್ಕರದ ನೇತೃತ್ವ ವಹಿಸಿದ್ದ ಕರ್ನಾಟಕದ ಹೆಮ್ಮೆಯ ಪುತ್ರ ಜಾರ್ಜ್ ಫರ್ನಾಂಡಿಸ್ ತುರ್ತುಪರಿಸ್ಥಿತಿಯಲ್ಲಿ ಭೂಮಿಗತ ಕ್ರಾಂತಿಕಾರಿ ಆಂದೋಲನ ನಡೆಸಿ ನಂತರ ಬರೋಡಾ ಡೈನಮೈಟ್ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾಗಿ ಜೈಲಿನಿಂದಲೇ ಬಿಹಾರಿನ ಮುಜಫರ್‌ ಪುರದಿಂದ 3.34 ಲಕ್ಷ ದ ಭಾರಿ ಬಹುಮತದಿಂದ ಆರಿಸಿ ಬಂದು ‘ಎಮರ್ಜೆನ್ಸಿ ಹೀರೊ’ ಎನಿಸಿಕೊಂಡಿದ್ದರು. ಜೈಲಿನಿಂದ ಬಿಡುಗಡೆಯಾಗಿ ನೇರವಾಗಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ಸಂಪರ್ಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಂದೆ ಕೆಲವೇ ತಿಂಗಳಲ್ಲಿ ಕೈಗಾರಿಕಾ ಸಚಿವರಾದರು.
ಇಂದು ಕೊರೊನಾ ಕಾಲದಲ್ಲಿ ಆತ್ಮನಿರ್ಭರತೆ, ಸ್ವದೇಶಿ ಉದ್ಯಮ ಸಂರಕ್ಷಣೆ, ವಲಸೆ ಕಾರ್ಮಿಕರು ಮತ್ತು ಚೀನಾದೊಂದಿಗಿನ ಯುದ್ಧದ ವಾತಾವರಣ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಜಾರ್ಜ್ ಅವರ ವಿಚಾರ ಮತ್ತು ಅದಕ್ಕನುಗುಣವಾಗಿ ಕೇಂದ್ರದಲ್ಲಿ ಮಂತ್ರಿಯಾಗಿ ಅವರು ತೆಗೆದುಕೊಂಡ ನಿರ್ಧಾರಗಳು, ಸರಕಾರದಲಿಲ್ಲದಾಗ ಅವರು ನಡೆಸಿದ ಹೋರಾಟ, ಅಂದು ಎಷ್ಟು ಪ್ರಸ್ತುತವಾಗಿತ್ತೋ, ತುರ್ತು ಪರಿಸ್ಥಿತಿ ಘೋಷಣೆಯ 45 ವರ್ಷ ತುಂಬಿದ ಇಂದೂ ಹೆಚ್ಚು ಪ್ರಸ್ತುತವಾಗಿವೆ.
ಉದ್ಯೋಗ ಹುಡುಕಿ ವಲಸೆ ಬಂದ ಕಾರ್ಮಿಕರು ಧಾರಾವಿ ಮತ್ತಿತರ ಕೊಳಚೆ ಪ್ರದೇಶಗಳಲ್ಲಿ ನಡೆಸುತ್ತಿದ್ದ ನರಕ ಜೀವನದ ನೋವನ್ನು ಕಂಡಿದ್ದ ಜಾರ್ಜ್ 1977ರಲ್ಲಿ ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗಾಂಧೀಜಿ ಅವರ ಸ್ವದೇಶಿ ಮತ್ತು ಲೋಹಿಯಾ ಅವರ ಸೂಕ್ತ ತಂತ್ರಜ್ಞಾನ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅಧಿಕ ಉದ್ಯೋಗ ಸೃಷ್ಟಿಯಾಗುವಂತೆ 504 ವಸ್ತುಗಳನ್ನು ಸಣ್ಣ ಮತ್ತು ಗುಡಿ ಕೈಗಾರಿಕೆ ಪಟ್ಟಿಯಲ್ಲಿ ಮೀಸಲಿರಿಸಿ, ದೇಶದ ಉದ್ದಗಲಕ್ಕೂ ಏಕರೂಪದ ಅಭಿವೃದ್ಧಿ ನಡೆಯುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರ (DIC)ಸ್ಥಾಪಿಸಿದರು ಮಾತ್ರವಲ್ಲ, ಕಾರ್ಮಿಕರು ಅನ್ಯ ಪ್ರದೇಶಗಳಲ್ಲಿ ಶೋಷಣೆಗೆ ಒಳಗಾಗುವುದರಿಂದ ಮುಕ್ತಿನೀಡಲು Inter-State Migrant Workmen Act 1979 ಅನುಷ್ಠಾನಗೊಳಿಸಲು ಕಾರಣರಾದರು. ಕಡಿಮೆ ಬಂಡವಾಳವೂ ಹೆಚ್ಚು ದುಡಿಮೆಯ ಕೈಗಳೂ ಇರುವ ಭಾರತದಲ್ಲಿ ಇವೆರಡರ ಪರಿಪೂರ್ಣ ಬಳಕೆಯ ಮೂಲಕ ಅಧಿಕ ಉದ್ಯೋಗ ಸೃಷ್ಟಿಸುವುದು, ದೇಶಿ ಬಂಡವಾಳ ಪಲಾಯನ ನಿಲ್ಲಿಸುವುದು, ಬಾಲ್ಯವಸ್ಥೆಯಲ್ಲಿರುವ ದೇಶಿ ಉದ್ಯಮಗಳು ವಿದೇಶಿ ಕಂಪನಿಗಳಿಗೆ ಪ್ರತಿಸ್ಪರ್ಧೆ ನೀಡಲು ಸಮರ್ಥವಾಗುವಂತೆ ಸಂರಕ್ಷ ಣೆ ನೀಡುವುದು, ದೇಶವನ್ನು ಸ್ವಾವಲಂಬಿ ಮತ್ತು ಆತ್ಮನಿರ್ಭರವನ್ನಾಗಿ ಮಾಡುವುದು ಅವರ ಮೂಲ ಕೆಲಸವಾಗಿತ್ತು. ಇದಕ್ಕಾಗಿ ಕೋಕೋಕೋಲಾ ಮತ್ತು ಐಬಿಎಂ ಅನ್ನು ಅವರು ಹೊರಗಟ್ಟಿದರು. ಇದರಿಂದಾಗಿ ದೇಶದಾದ್ಯಂತ ಹೊಸ ತಂಪುಪಾನೀಯಗಳ ಕಂಪನಿಗಳು ಮಾರುಕಟ್ಟೆಗೆ ಬಂದವು. ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾದವು.
ಐಬಿಎಂ ಹೊರಗಟ್ಟಿದ್ದರಿಂದ ಅಲ್ಲಿಯ ಕೆಲವು ಯುವ ಎಂಜಿನಿಯರ್‌ಗಳು ತಮ್ಮದೇ ಕಂಪನಿಗಳನ್ನು ಪ್ರಾರಂಭಿಸಿದರು. ಟಿಸಿಎಸ್, ಎಚ್‌ಸಿಎಲ್, ಮತ್ತು ಪಟನಿ ಕಂಪ್ಯೂಟರ್ಸ್‌ನಂಥ ಯಾವ ಕಂಪನಿಗಳು ಮೊದಲಿನಿಂದಲೂ ಇದ್ದವೋ ಅವುಗಳಿಗೆ ಇದರಿಂದ ಲಾಭವಾಯಿತು. ಪಟನಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ ಆರ್ ನಾರಾಯಣಮೂರ್ತಿ, ನಂದನ್ ನಿಲೇಕಣಿ ಮತ್ತಿತರರು 1981ರಲ್ಲಿ ಇನ್ಫೋಸಿಸ್ ಪ್ರಾರಂಭಿಸಿದರು. ವನಸ್ಪತಿ ವೆಜಿಟೇಬಲ್ ಆಯಿಲ್ ವ್ಯಾಪಾರ ಮಾಡುತ್ತಿದ್ದ ಅಜೀಮ್ ಪ್ರೇಮ್‌ಜಿ ಅವರ Western India Vegetable Products Ltd (WIPRO),, ಕಂಪ್ಯೂಟರ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿತು. ಇಂದು ಭಾರತದಲ್ಲಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ದೇಸೀ ಕಂಪನಿಗಳು 40 ಲಕ್ಷ ಪ್ರತ್ಯಕ್ಷ ಮತ್ತು ಒಂದು ಕೋಟಿ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. 2019ರಲ್ಲಿ ಇವುಗಳ ಒಟ್ಟು ವ್ಯಾಪಾರ 177 ಶತಕೋಟಿ ಡಾಲರ್. ಐಬಿಎಂ ಹೊರಗಟ್ಟುವ ತನ್ನ ದಿಟ್ಟ ನಿರ್ಧಾರದ ಕಾರಣ ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಲು ಜಾರ್ಜ್ ಕಾರಣರಾದರು.

ಒಪ್ಪಂದಗಳಿಗೆ ವಿರೋಧ
1991ರಲ್ಲಿ ಬೀಜ ಮತ್ತು ಔಷಧ ತಯಾರಿಸುವ ಬಹುರಾಷ್ಟ್ರೀಯ ಕಂಪನಿಗಳು ಟ್ರಿಫ್ಸ್(TRIPS) ಕರಡನ್ನು ಬರೆದು IMF ಮತ್ತು ವಿಶ್ವಬ್ಯಾಂಕ್ ಮೂಲಕ ಭಾರತ ಮತ್ತು ಇತರ ತೃತೀಯ ಜಗತ್ತಿನ ರಾಷ್ಟ್ರಗಳು GATT ಒಪ್ಪಂದಕ್ಕೆ ಸಹಿ ಹಾಕಲು ಒತ್ತಡ ತರುತ್ತಿರುವುದನ್ನು ತಿಳಿದಾಕ್ಷಣ ಜಾರ್ಜ್ ಇದನ್ನು ತೀವ್ರವಾಗಿ ವಿರೋಧಿಸಿದರು. ಇದು ದೇಶದ ಸಾರ್ವಭೌಮತೆಗೆ ಅಪಾಯವೆಂದೂ, ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಎಂದೂ ಹೇಳಿದರು. ದೇಶದ ಸಾರ್ವಭೌಮತೆ ಕಾಪಾಡಲು ದೇಶಪ್ರೇಮಿಗಳು ಸತತವಾಗಿ ಹೋರಾಟ ನಡೆಸುತ್ತಿರಬೇಕು ಎಂಬುದು ಅವರ ನಿಶ್ಚಿತಾಭಿಪ್ರಾಯವಾಗಿತ್ತು. ಈ ಕಾರಣಕ್ಕಾಗಿ ಅವರು ಸಂಚಾಲಕರಾಗಿದ್ದ ಸಮಾಜವಾದಿ ಅಭಿಯಾನ ಸಂಘಟನೆಯ ಕಾರ್ಯಕರ್ತರು GATT ಒಪ್ಪಂದದ ವಿರುದ್ಧ, ಅಲೈಜಮರ್ ಕಾರಣದಿಂದ ಅವರಿಗೆ ನೆನಪುಶಕ್ತಿ ಹೋಗುವ ತನಕ 2008ರ ವರೆಗೆ 14 ವರ್ಷ ನಿರಂತರವಾಗಿ ಪ್ರತಿದಿನ ಸತ್ಯಾಗ್ರಹ ಮಾಡಿ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಸ್ಟೇಷನಿನಲ್ಲಿ ಬಂಧನಕ್ಕೊಳಗಾಗುತ್ತಿದ್ದರು.
1993ರ ಫೆಬ್ರವರಿಯಲ್ಲಿ ಯಾವಾಗ ಗುಜರಾತಿನ ಕಾಂಡ್ಲಾ ಬಂದರಿನ ಸಮೀಪ ಅಮೆರಿಕದ ಅತಿದೊಡ್ಡ ಬೀಜ ಮತ್ತು ಧಾನ್ಯ ವ್ಯಾಪಾರದ ಬಹುರಾಷ್ಟ್ರೀಯ ಕಂಪನಿ ಕಾರ್ಗಿಲ್‌ಗೆ ಉಪ್ಪು ತಯಾರಿಸಲು ಕೇಂದ್ರ ಸರಕಾರ 15 ಸಾವಿರ ಎಕರೆ ಜಮೀನು ಮಂಜೂರು ಮಾಡಿರುವುದು ಇವರಿಗೆ ತಿಳಿಯಿತೋ ಲೋಕಸಭೆಯಲ್ಲಿ ಇದನ್ನು ಕಟುವಾಗಿ ವಿರೋಧಿಸಿದರು. ಸರಕಾರ ಮಣಿಯದಾಗ 1993ರ ಮೇ 19ರಂದು ಕಾಂಡ್ಲಾದಲ್ಲಿ ಸತ್ಯಾಗ್ರಹ ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡವರಲ್ಲಿ ಚಂದ್ರಶೇಖರ್, ವಿ ಪಿ ಸಿಂಗ್, ರಬಿ ರಾಯ, ಮಧು ದಂಡವತೆ, ಮೃಣಾಲ್ ಗೋರೆ ಪ್ರಮುಖರು. ಅದೇ ಹೊತ್ತಿಗೆ ಬಳ್ಳಾರಿಯಲ್ಲಿ ಇದೇ ಕಾರ್ಗಿಲ್ ಕಂಪನಿಯ ಬೀಜ ಘಟಕದ ಗೋದಾಮಿನ ಮೇಲೆ ನಂಜುಂಡಸ್ವಾಮಿ ಅವರ ನೇತೃತ್ವದ ರೈತ ಸಂಘದ ರೈತರು ದಾಳಿ ನಡೆಸಿದರು. ಇದನ್ನು ಸಮರ್ಥಿಸಿ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ 1993ರ ಆ.2ರಂದು ಸಭೆ ನಡೆಸಿದರು.

ಐತಿಹಾಸಿಕ ಜಯ
ಒಂದೇ ವೈರಿಯ ವಿರುದ್ಧ ಹೋರಾಡುತ್ತಿರುವ ಇಬ್ಬರು ಸಮಾಜವಾದಿಗಳು ತಮ್ಮ ಎರಡು ದಶಕಗಳ ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಒಂದೇ ವೇದಿಕೆಯಲ್ಲಿ ಬಂದರು. ಜಾರ್ಜ್ ಅವರ ಕರೆಯನ್ವಯ 1993ರ ಅಕ್ಟೋಬರ್ 2 ರಂದು ಗುಜರಾತಿನ ಕಾಂಡ್ಲಾ ಬಂದರಿನಲ್ಲಿ ನಡೆಯಲಿದ್ದ ಪೋರ್ಟ್ ಬ್ಲಾಕೆ ಡೇಗೆ ಕರ್ನಾಟಕದಿಂದ 25 ಸಾವಿರ ರೈತರು ಭಾಗವಹಿಸುವವರು ಎಂದು ನಂಜುಂಡಸ್ವಾಮಿಯವರು ವೇದಿಕೆಯಿಂದ ಘೋಷಿಸಿದರು. ದೇಶದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರಲ್ಲಿ ಇದರಿಂದ ವಿದ್ಯುತ್ ಸಂಚಾರವಾಯಿತು. ಕಾರ್ಗಿಲ್ ಕಂಪನಿಗೆ ನಡುಕ ಆರಂಭವಾಯಿತು. ಜಾರ್ಜ್‌ಗೆ ಆನೆಬಲ ಸಿಕ್ಕಂತಾಯಿತು. ಗಾಂಧಿನಗರ ಹೈಕೋರ್ಟ್‌ನಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಜಾರ್ಜ್ ಅವರು ಹಾಕಿದ್ದ ಪಿಐಎಲ್ ಸೆಪ್ಟೆಂಬರ್ 27ರಂದು ವಿಚಾರಣೆಗೆ ಬಂತ್ತು. ಜಾರ್ಜ್ ಸ್ವತಃ ತಾವೇ ಕೋರ್ಟಿನಲ್ಲಿ ವಾದಿಸಿದರು. ಕಾರ್ಗಿಲ್ ಕಂಪನಿ ತಮ್ಮ ಉಪ್ಪಿನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು. 4 ತಿಂಗಳು ನಡೆದ ಈ ಹೋರಾಟಕ್ಕೆ ಐತಿಹಾಸಿಕ ಜಯ ದೊರಕಿತು.

ಒಂದೇ ವೇದಿಕೆಗೆ ಬಂದರು
ಗ್ಯಾಟ್ ಒಪ್ಪಂದದ ವಿರುದ್ಧ 1994ರ ಮಾ.1ರಂದು ಸಮಾಜವಾದಿ ಅಭಿಯಾನ ವೇದಿಕೆಯಿಂದ ಜಾರ್ಜ್ ಸಂಸತ್ತಿನ ಮುಂದೆ ಸತ್ಯಾಗ್ರಹ ಪ್ರಾರಂಭಿಸಿದರು. ಇದರ ಪೂರ್ವಭಾವಿ ಸಿದ್ಧತೆಗಾಗಿ 1994ರ ಜನವರಿ 20ರಂದು ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದಿಂದ ಸಿದ್ದರಾಮಯ್ಯ ಮತ್ತು ಬಿ.ಆರ್. ಪಾಟೀಲ್ ಭಾಗವಹಿಸಿದ್ದರು. 14 ವರ್ಷ ನಿರಂತರವಾಗಿ ಪ್ರತಿನಿತ್ಯ ನಡೆದ ಈ ಸತ್ಯಾಗ್ರಹಕ್ಕಾಗಿ ಸಂಸತ್ತು ಮಾರ್ಗ – ಜಂತರ್ ಮಂತರ್ ಬಳಿ ಪ್ರತಿನಿತ್ಯ 3-4 ತಾಸು ಇರುತ್ತಿದ್ದ ಕಾರ್ಯಕರ್ತರು ಆ ಸಮಯ, ಆ ಇಲಾಖೆಯಲ್ಲಿ ಪೆಪ್ಸಿ-ಕೋಕೋಕೋಲಾ ಇತ್ಯಾದಿ ಬಹುರಾಷ್ಟ್ರೀಯ ಕಂಪನಿಗಳ ವಾಹನಗಳು ಅಂಗಡಿಗಳಿಗೆ ತಮ್ಮ ಸಾಮಾನನ್ನು ಕೊಡಲು ಬಿಡುತ್ತಿರಲಿಲ್ಲ. ಸತ್ಯಾಗ್ರಹಿಗಳನ್ನು ನೋಡಿ ದೂರದಿಂದಲೇ ವಾಹನಗಳು ವಾಪಸಾಗುತ್ತಿದ್ದವು. ಈ ಸತ್ಯಾಗ್ರಹ ಪ್ರಾರಂಭವಾದ 4ನೇ ದಿನ ದಿಲ್ಲಿಯ 105 ಪತ್ರಕರ್ತರು ಪ್ರೆಸ್ ಕ್ಲಬ್ ಆಫ್ ಇಂಡಿಯಾದಿಂದ ಮೆರವಣಿಗೆಯಲ್ಲಿ ಬಂದು ಹಿರಿಯ ಪತ್ರಕರ್ತ ರಾಮ್ ಬಹದ್ದೂರ್ ರಾಯ್ ಅವರ ನೇತೃತ್ವದಲ್ಲಿ ಸಂಸತ್ತಿನ ಗೇಟ್ ನಂ.2ರ ಮುಂದೆ ಬಂಧನಕ್ಕೊಳಗಾದರು. ಗಾಂಧಿವಾದಿಗಳಿಂದ ಹಿಡಿದು ನಕ್ಸಲವಾದಿ ಮತ್ತು ಸಂಘಪರಿವಾರದವರೆಗೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರುವುದು ಜಾರ್ಜ್ ಅವರ ಉದ್ದೇಶವಾಗಿತ್ತು. 1994ರ ಮೇ 28ರಂದು ಧನಬಾದ್‌ನಲ್ಲಿ ಜಾರ್ಜ್ ಅವರು ಆಯೋಜಿಸಿದ ಸಭೆಯಲ್ಲಿ ಗಾಂಧಿವಾದಿ ಸಿದ್ದರಾಜ್ ಧಡ್ಡ, ನಕ್ಸಲ್‌ವಾದಿ ನಾಯಕರಾದ ವಿನೋದ್ ಮಿಶ್ರಾ, ಸಮಾಜವಾದಿಗಳಾದ ನಿತೀಶ್ ಕುಮಾರ್, ಕಾರ್ಮಿಕ ಮುಖಂಡ ಶರದ್ ರಾವ್ ಇವರು ಒಂದೇ ವೇದಿಕೆಗೆ ಬಂದರು. ಇದಲ್ಲದೆ ಸಂಘ ಪರಿವಾರದ ಮುಖಂಡರಾದ ಮುರಳಿ ಮನೋಹರ್ ಜೋಶಿ, ದತ್ತೋಪಂತ್ ತೆಂಗಡಿ, ಕೆ ಎನ್ ಗೋವಿಂದಾಚಾರ್ಯ, ಮುರಳೀಧರ್ ರಾವ್ ರೊಂದಿಗೆ ಮತ್ತು ಗಾಂಧಿವಾದಿಗಳಾದ ಪ್ರೊ. ಭನ್ವಾರಿಲಾಲ್ ಶರ್ಮ, ರಾಜೀವ್ ದೀಕ್ಷಿತ್ ಅವರ ಸಂಘಟನೆಯಾದ ಅಜಾದಿ ಬಚಾವೋ ಆಂದೋಲನದಲ್ಲಿ ಸಕ್ರಿಯವಾಗಿ ಜಾರ್ಜ್ ಭಾಗವಹಿಸಿದರು.
ಯುಪಿಎ-2ರ ಸಮಯದಲ್ಲಿ ಅದೇ ಸರಕಾರದಲ್ಲಿ ಮಂತ್ರಿಯಾಗಿದ್ದ ಜಯರಾಮ್ ರಮೇಶ್‌ರ ಸಚಿವಾಲಯ, ಸಂಸದೀಯ ಸ್ಥಾಯಿ ಸಮಿತಿ, ಸೋಪೋರಿ ಸಮಿತಿ ಮತ್ತು ಸುಪ್ರೀಂ ಕೋರ್ಟ್‌ನ ತಾಂತ್ರಿಕ ಸಮಿತಿ ಕುಲಾಂತರಿ ಬೆಳೆಗಳನ್ನು ಬೆಳೆಯುವುದಕ್ಕೆ ತಡೆ ನೀಡಿದವು. ಆ ಹೊತ್ತಿಗೆ ಜಾರ್ಜ್ ಜೀವಂತವಿದ್ದರೂ ಅಲ್ಜೈಮರ್ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಆದರೆ, ಅವರ ಪಕ್ಷದ ಸಿಎಂ ನಿತೀಶ್ ಕುಮಾರ್ ಬಿಹಾರದಲ್ಲಿ ಕುಲಾಂತರಿ ಬೆಳೆಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದರು. ಮದ್ಯಪಾನ ನಿಷೇಧಿಸುವ ಮೂಲಕ ಕಾರ್ಮಿಕರ, ರೈತ-ಕಾರ್ಮಿಕರ ಕುಟುಂಬಕ್ಕೆ ನೆಮ್ಮದಿ ದೊರಕಿಸಿಕೊಟ್ಟರು. 1998ರಿಂದ 2004ರ ಅವಧಿಯಲ್ಲಿ ಜಾರ್ಜ್ ದೇಶದ ರಕ್ಷಣಾ ಸಚಿವರಾಗಿದ್ದರು. ತಮ್ಮ ಅನುಭವದಿಂದ ಹೇಳುತ್ತಿದ್ದರು ಹಾರ್ವರ್ಡ್, ಆಕ್ಸ್‌ಫರ್ಡ್‌, ಐಎಂಎಫ್ ಮತ್ತು ವಿಶ್ವಬ್ಯಾಂಕ್ ಅರ್ಥ ಶಾಸ್ತ್ರಿಗಳು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯಾವ ಉಪಾಯವನ್ನು ಕಂಡು ಕೊಳ್ಳಲಾಗಲಿಲ್ಲ. ಗಾಂಧೀಜಿಯ ಚರಕ ಆತ್ಮನಿರ್ಭರತೆಯ ಪ್ರತೀಕ. ನಿರುದ್ಯೋಗ ನಿವಾರಣೆ ಆತ್ಮನಿರ್ಭರತೆಯ ಮೊದಲ ಮೆಟ್ಟಲು ಎಂದೂ, ಗುಡಿ ಕೈಗಾರಿಕೆಯ ವಸ್ತುಗಳಿಗೆ ಬೇಡಿಕೆ ಹೆಚ್ಚುವುದರಿಂದ ಮಾತ್ರ ನಿರುದ್ಯೋಗ ನಿವಾರಣೆ ಸಾಧ್ಯ ಎಂದೂ ಇದಕ್ಕಾಗಿ ದೇಶದಲ್ಲಿ ಸ್ವದೇಶಿ ವಸ್ತುಗಳ ಪರವಾಗಿ ನಡೆಯುವ ಅಭಿಯಾನದ ಜೊತೆಜೊತೆಗೆ ಚೀನಾದಲ್ಲಿ ನಡೆಯುತ್ತಿರುವ ಮಾನವಾಧಿಕಾರ ಉಲ್ಲಂಘನೆಯ ವಿರುದ್ಧ ಕೂಡ ಹೋರಾಟ ಮಾಡುವ ಅಗತ್ಯತೆಯನ್ನು ಅವರು ಒತ್ತಿ ಹೇಳುತ್ತಿದ್ದರು.

ಚೀನಾದ ವಿರುದ್ಧ ಆಕ್ರೋಶ: ಚೀನಾ ದೇಶ ಇಂಟರ್ನ್‌ಶಿಪ್ ಹೆಸರಿನಲ್ಲಿ ಸುಮಾರು 2 ಕೋಟಿ ಪ್ರೌಢ ಶಾಲೆಯ ಮಕ್ಕಳನ್ನು ದಿನಕ್ಕೆ ಹತ್ತು ಗಂಟೆ ನಿಲ್ಲಿಸಿ ತಮ್ಮ ಪಠ್ಯಕ್ರಮಕ್ಕೆ ದೂರದೂರದಿಂದಲೂ ಸಂಬಂಧವಿಲ್ಲದ ಕೆಲಸಗಳನ್ನು ಈ ಮಕ್ಕಳ ಶೋಷಣೆ ಮಾಡುತ್ತಾ, ಬಾಲ ಕಾರ್ಮಿಕರ, ಅಲ್ಪ ಸಂಖ್ಯಾತ ಉಯುರ್ಗ ಮುಸಲ್ಮಾನರ, ಕ್ರಿಶ್ಚಿಯನ್ನರ ಮತ್ತು ಇನ್ನಿತರರ ಮಾನವಾಧಿಕಾರ ಉಲ್ಲಂಘಿಸಿ ಜೀತಪದ್ಧತಿಯ ಲಾಭ ಪಡೆದುಕೊಂಡು ಕಡಿಮೆ ಬೆಲೆಯಲ್ಲಿ ಸಾಮಾನು ಉತ್ಪಾದಿಸಿ ಭಾರತ ಮತ್ತು ಜಗತ್ತಿನಾದ್ಯಂತ ಮಾರಾಟ ಮಾಡುತ್ತಿದೆ. ಈ ಕಾರಣ ಭಾರತದ ಸಣ್ಣ ಉದ್ಯಮಗಳು ಚೀನಾದ ಈ ಕಂಪನಿಗಳೊಂದಿಗೆ ಪ್ರತಿಸ್ಪರ್ಧೆ ನೀಡಲಾಗುತ್ತಿಲ್ಲ ಎಂಬುದು ಜಾರ್ಜ್ ಅವರ ದೃಢ ನಂಬಿಕೆಯಾಗಿತ್ತು.
1998ರ ಮೇನಲ್ಲಿ ರಕ್ಷ ಣಾ ಸಚಿವರಾಗಿ ಎರಡನೇ ತಿಂಗಳಲ್ಲಿ ಜಾರ್ಜ್ ಹೇಳಿದರು ನಮ್ಮ ದೇಶಕ್ಕೆ ಅಪಾಯ ಒಡ್ಡಲು ಕ್ಷಮತೆಯುಳ್ಳ ದೇಶಗಳಲ್ಲಿ ಚೀನಾ ಸಂಭವದ ಮೊದಲ ರಾಷ್ಟ್ರ ಎಂದು. ಇದು ವಿವಾದಕ್ಕೆ ಕಾರಣವಾಗಿತ್ತು. ಕಳೆದ ಕೆಲವು ದಿನಗಳಿಂದ ಇದ್ದಕ್ಕಿದ್ದಂತೆ ಎರಡು ದೇಶಗಳ ಗಡಿಗಳಲ್ಲಿ ಉದ್ಭವವಾಗಿರುವ ಸ್ಥಿತಿಯ ಕಾರಣ ಜಾರ್ಜ್ ಮಾತನ್ನು ಸ್ಮರಿಸಲಾಗುಗುತ್ತಿದೆ.

ಸ್ವದೇಶಿ ಮಂತ್ರ ಜಪಿಸಿ
ಅನೇಕ ರಾಜಕೀಯ ಪಕ್ಷಗಳ ಸದಸ್ಯರಾಗಬೇಕಾದರೆ ಶುದ್ಧ ಖಾದಿ ತೊಡುವುದು, ಮಧ್ಯಪಾನ ನಿಷೇಧಿಸುವುದು ಕಡ್ಡಾಯ ಎಂದು ಈ ಪಕ್ಷಗಳು ತಮ್ಮ ಪಕ್ಷ ಗಳ ಸಂವಿಧಾನದಲ್ಲಿಯೇ ಹೇಳಿಕೊಂಡಿವೆ. ಮಾರುಕಟ್ಟೆಯಲ್ಲಿ ಸಿಗುವ ಖಾದಿ ಬಟ್ಟೆಗಳಲ್ಲಿ ಶೇ.75 ನಕಲಿ ಖಾದಿ. ಕಡಿಮೆ ಬಂಡವಾಳದಿಂದ ಅಧಿಕ ಉದ್ಯೋಗ ಸೃಷ್ಟಿಯಾಗಬೇಕಾದರೆ ಶುದ್ಧ ಖಾದಿ, ಕೈಮಗ್ಗದ ಬಟ್ಟೆ ಮತ್ತು ಕುಶಲಕರ್ಮಿಗಳು ತಯಾರಿಸಿದ ಸಾಮಾನುಗಳನ್ನು ಎಲ್ಲ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದಲೇ ಬಳಸಬೇಕಾಗಿದೆ. ದೇಸಿ ಬೀಜ ಉಳಿಸುವ ಕೆಲಸಗಳಲ್ಲಿ ತೊಡಗುವುದರಿಂದ ಈ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಏಕಸ್ವಾಮ್ಯತೆಯನ್ನು ತಡೆಯಬಹುದು.
ಉದಾಹರಣೆಗೆ ಮಂಡ್ಯ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ವಸ್ತುಗಳು, ಉಡುಪಿ ಸೀರೆ, ಇಳಕಲ್ ಸೀರೆ, ಹೆಗ್ಗೋಡಿನ ಚರಕ ಸಂಸ್ಥೆಯ ಬಟ್ಟೆಗಳು ಮತ್ತು ತನಗೆ ಅಗತ್ಯವಾದ ವಸ್ತುಗಳಲ್ಲಿ ಕರಕುಶಲ ವಸ್ತುಗಳನ್ನು, ಖರೀದಿಸುವುದರಿಂದ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಈ ಕೆಲಸ ಮಾಡಲು ಯಾವುದೇ ಸೈದ್ಧಾಂತಿಕ ಬದ್ಧತೆಯುಳ್ಳ ಸರಕಾರಗಳ ಅನುಮತಿ ಅಗತ್ಯವಿಲ್ಲ. ನಿರುದ್ಯೋಗ ಮತ್ತು ಪರಿಸರದ ಬಗ್ಗೆ ಕಾಳಜಿ ಉಳ್ಳವರು ಈ ಕೆಲಸ ಮಾಡುವುದರಿಂದ ಪರಿಸರ ಸ್ನೇಹಿ ಕೆಲಸದ ಕಡೆ ಒಂದು ಹೆಜ್ಜೆ ಮುಂದೆ ಇಟ್ಟಂತೆ ಮತ್ತು ಗಾಂಧಿಗೆ ಕೊಡಬಹುದಾದ ನಿಜವಾದ ಶೃದ್ಧಾಂಜಲಿ ಎಂಬುದು ಕೊನೆಯ ತನಕ ಜಾರ್ಜ್ ನಂಬಿಕೆಯಾಗಿತ್ತು.
(ಲೇಖಕರು ಜಾರ್ಜ್ ನಿಕಟವರ್ತಿ ಹಾಗೂ ಸ್ವದೇಶಿ ಕಾರ್ಯಕರ್ತರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top