ವಿಕಾಸ್ ದುಬೆ ಎಂಬ ಕುಖ್ಯಾತ ಮಾಫಿಯಾ ದೊರೆಯ ಎನ್‌ಕೌಂಟರ್ ಮಾಡಿದ್ದಾರೆ ಉತ್ತರಪ್ರದೇಶದ ಪೊಲೀಸರು. ಯೋಗಿ ಆದಿತ್ಯನಾಥ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಇಲ್ಲಿ 100ಕ್ಕೂ ಹೆಚ್ಚು ಕ್ರಿಮಿನಲ್‌ಗಳನ್ನು ಗುಂಡಿಕ್ಕಿ ಸಾಯಿಸಲಾಗಿದೆ. ದಶಕಗಳ ಕಾಲ ಮೆರೆದ ನಾನಾ ಗ್ಯಾಂಗ್‌ಸ್ಟರ್‌ಗಳಿಗೆ ಈಗ ಪಾಪಕ್ಕೆ ಫಲ ಪಡೆಯುವ ಕಾಲ.
ಮೂರು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಪರ ನಡೆಸಿದ ಚುನಾವಣೆ ಪ್ರಚಾರದ ವೇಳೆ, ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಸಂಘಟಿತ ಅಪರಾಧ ಗ್ಯಾಂಗ್‌ಗಳಿಂದ ಮುಕ್ತಗೊಳಿಸುವುದಾಗಿ ಹೇಳಿದ್ದರು. ಹೇಳಿದಂತೆಯೇ ಮಾಡಿದ್ದಾರೆ, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಮಾಫಿಯಾದವರಿಗಿಂತಲೂ ಪೊಲೀಸರ ಗನ್ನುಗಳೇ ಹೆಚ್ಚು ಸದ್ದು ಮಾಡುತ್ತಿವೆ. 5178 ಗುಂಡಿನ ಚಕಮಕಿಗಳು ಆಗಿದ್ದು, 103 ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ. 1859 ಮಂದಿ ಗಾಯಗೊಂಡಿದ್ದಾರೆ. 600ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. 17745 ಕ್ರಿಮಿನಲ್‌ಗಳು ಬಂಧಿತರಾಗಿದ್ದಾರೆ ಅಥವಾ ಪೊಲೀಸ್ ಗುಂಡಿಗೆ ಸಿಲುಕಿ ಸಾಯುವ ಗತಿ ಬೇಡವೆಂದು ಶರಣಾಗಿ ಜೈಲಿನಲ್ಲಿದ್ದಾರೆ. ರಾಜ್ಯ ಗ್ಯಾಂಗ್‌ಸ್ಟರ್‌ಗಳಿಂದ ಪಾರಾಗಿದೆ. ಅಪರಾಧದ ಸುಳಿಯಲ್ಲಿ ಸಿಲುಕಿ ನಿಸ್ಸಹಾಯಕನಾಗಿದ್ದ ಶ್ರೀಸಾಮಾನ್ಯ ನಿಟ್ಟುಸಿರು ಬಿಡುತ್ತಿದ್ದಾನೆ.
ಎಲ್ಲಿಂದ ಆರಂಭವೋ?
ಉತ್ತರಪ್ರದೇಶದ ಗ್ಯಾಂಗ್‌ವಾರ್‌ಗಳಿಗೆ ನೂರಾರು ವರ್ಷಗಳ ಇತಿಹಾಸವೇ ಇದೆ. ಇದೇ ಪ್ರಾಂತ್ಯದ ಮೀರತ್‌ನಲ್ಲೇ ಸಿಪಾಯಿ ದಂಗೆ ಎಂದು ಕರೆಯಲ್ಪಡುವ ಮೊದಲ ಸ್ವಾತಂತ್ರ್ಯ ಸಂಗ್ರಾಮ ಹುಟ್ಟಿಕೊಂಡದ್ದು. ಮಹಾಭಾರತ ಕಾಲದಲ್ಲಿ ಇದಯ ಕುರುಕ್ಷೇತ್ರ ಆಗಿತ್ತೆಂದೂ ಹೇಳುತ್ತಾರೆ. ಪ್ರತಿರೋಧದ ಗುಣ ಇಲ್ಲಿನ ಮಣ್ಣಿನಲ್ಲೇ ಇದೆ. ಮೇಲ್ಜಾತಿ- ಕೆಳಜಾತಿಗಳ ಸಂಘರ್ಷ ಇಲ್ಲಿ ಮೊದಲು ಗುಂಪು ಬಡಿದಾಟಗಳನ್ನು ಸೃಷ್ಟಿಸುತ್ತಿದ್ದವು. ಠಾಕೂರರು, ಗುಜ್ಜರರು, ದಲಿತರು, ಯಾದವರು, ತ್ಯಾಗಿಗಳು ಪರಸ್ಪರ ಭೂಮಿಯ ಒಡೆತನಕ್ಕಾಗಿ ಬಡಿದಾಡುತ್ತಲೇ ಇದ್ದಾರೆ. ನಂತರ ಇದಕ್ಕೆ ಹಿಂದೂ- ಮುಸ್ಲಿಂ ಕೋನವೂ ಸೇರಿಕೊಂಡಿತು. ಪೂರ್ವ ಹಾಗೂ ಪಶ್ಚಿಮ ಉತ್ತರ ಪ್ರದೇಶಗಳು ‘ಕಬ್ಬಿನ ವಲಯ’ ಎಂದೇ ಕರೆಯಲ್ಪಡುತ್ತವೆ. ಇಲ್ಲಿ ನೂರಾರು ಕಬ್ಬಿನ ಕಾರ್ಖಾನೆಗಳು ಕಾರ್ಯಾಚರಿಸುತ್ತವೆ. ಈ ಕಾರ್ಖಾನೆಗಳಿಗೆ ಕಾರ್ಮಿಕರನ್ನು ತರಲು, ಹೀಗೆ ತಂದವರನ್ನು ನಿಭಾಯಿಸಲು, ಕಾರ್ಖಾನೆಗಳಿಗೆ ಸ್ಥಳೀಯ ರೈತರಿಂದ ಭೂಮಿ ಕಿತ್ತುಕೊಳ್ಳಲು ಉದ್ಯಮಿಗಳಿಗೂ ರಾಜಕಾರಣಿಗಳಿಗೂ ಸ್ಥಳೀಯ ಡಾನ್‌ಗಳು ಅಗತ್ಯವಾದರು. ಹೀಗೆ ಸೃಷ್ಟಿಯಾದ ಡಾನ್‌ಗಳು ಮುಂದೆ ತಾವೇ ಸ್ವತಂತ್ರವಾಗಿ ಬೆಳೆದರು.
ಡಕಾಯಿತ ರಾಣಿ ಫೂಲನ್ ದೇವಿ
ಉತ್ತರ ಪ್ರದೇಶದ ಡಕಾಯಿತರ ರಾಣಿ ಎನಿಸಿದ ಫೂಲನ್ ದೇವಿ, ಇಲ್ಲಿನ ಗ್ಯಾಂಗ್‌ಸ್ಟರ್‌ಗಳ ಆರಂಭಿಕ ಚರಿತ್ರೆಯಲ್ಲಿ ಎದ್ದು ಕಾಣುವ ಹೆಸರು. ಊರಿನ ಜಮೀನ್ದಾರರು ಹಾಗೂ ಸ್ಥಳೀಯ ಡಕಾಯಿತರ ಗುಂಪಿನಿಂದ ಶೋಷಣೆ ಹಾಗೂ ಅತ್ಯಾಚಾರಕ್ಕೆ ಒಳಗಾದ ಈಕೆ, ನಂತರ ತನ್ನದೇ ಗುಂಪು ಕಟ್ಟಿ ಜಮೀನ್ದಾರರನ್ನು ಸುಲಿಯಲು ಆರಂಭಿಸಿದಳು. 1982ರಲ್ಲಿ ಈಕೆ 21 ಜನ ಮೋಲ್ಜಾತಿಯ ಠಾಕೂರರನ್ನು ಬೆಹಮಾಯಿಯಲ್ಲಿ ಕೊಂದು ಹಾಕಿದಾಗ ಎದ್ದ ಆಕ್ರೋಶಕ್ಕೆ, ಆಗ ಮುಖ್ಯಮಂತ್ರಿಯಾಗಿದ್ದ ವಿ.ಪಿ.ಸಿಂಗರೇ ರಾಜೀನಾಮೆ ನೀಡಬೇಕಾಗಿ ಬಂದಿತ್ತು. 1983ರಲ್ಲಿ ಪೊಲೀಸರಿಗೆ ಶರಣಾದಳು. 1994ರಲ್ಲಿ ಈಕೆಯ ಮೇಲಿದ್ದ ಎಲ್ಲ ಕೇಸುಗಳನ್ನು ಎಸ್‌ಪಿಯ ಮುಲಾಯಂ ಸಿಂಗ್ ಸರಕಾರ ರದ್ದುಪಡಿಸಿತು. ನಂತರ ಈಕೆ ಎಸ್‌ಪಿ ಟಿಕೆಟ್ ಪಡೆದು ಚುನಾವಣೆಗೆ ನಿಂತು ಮಿರ್ಜಾಪುರದಿಂದ ಎರಡು ಬಾರಿ ಲೋಕಸಭೆ ಸದಸ್ಯೆಯಾದಳು. 2001ರಲ್ಲಿ ತನ್ನ ಹಳೇ ವೈರಿಗಳಿಂದಲೇ ಹತಳಾದಳು.
ರಾಜಕೀಯದ ಪೋಷಣೆ
ಉತ್ತರ ಪ್ರದೇಶದ ಭೂಗತ ಡಾನ್‌ಗಳಿಗೂ ರಾಜಕೀಯಕ್ಕೂ ಬಲು ನಿಕಟವಾದ ನಂಟಿದೆ. 1980ರವರೆಗೆ ಈ ಡಾನ್‌ಗಳನ್ನು ಕಾಂಗ್ರೆಸ್ ನಾನಾ ಕಾರಣಗಳಿಗೆ ಪೋಷಿಸಿತು. ನಂತರ ಹುಟ್ಟಿಕೊಂಡ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹಾಗೂ ಸಮಾಜವಾದಿ ಪಾರ್ಟಿ (ಎಸ್‌ಪಿ) ಗಳು ಈ ಡಾನ್‌ಗಳಿಂದಲೇ ತಮ್ಮ ಶಕ್ತಿಯನ್ನು ವರ್ಧಿಸಿಕೊಂಡವು. ರಾಜ್ಯದ ರಾಜಕಾರಣಕ್ಕೆ ಸೀಮಿತವಾಗಿದ್ದ ಈ ಪಕ್ಷಗಳು ಬಲಿಷ್ಠ ಕಾಂಗ್ರೆಸ್‌ನೆದುರು ನಿಲ್ಲಲು ಸ್ಥಳೀಯ ರೌಡಿಸಂ, ಜಾತಿ ವೈಷಮ್ಯಗಳನ್ನು ಮುಂದು ಮಾಡಿಕೊಂಡು ನೆಲೆ ಕಂಡುಕೊಂಡವು. ಇವು ಅಧಿಕಾರಕ್ಕೆ ಬಂದ ಬಳಿಕವೂ ಈ ರೌಡಿಗಳನ್ನು ಪೋಷಿಸಿದವು. ಈ ಡಾನ್‌ಗಳಲ್ಲಿ ಮುಂದೆ ಹೆಚ್ಚಿನವರು ಹಣಬಲ, ತೋಳ್ಬಲ, ಜಾತಿಬಲದಿಂದ ಎಸ್‌ಪಿ, ಬಿಎಸ್‌ಪಿಗಳ ಟಿಕೆಟ್ ಪಡೆದು ಎಂಎಲ್ಎ, ಎಂಎಲ್‌ಸಿ, ಎಂಪಿಗಳೂ ಆದರು. ಬಿಎಸ್‌ಪಿಯ ಮಾಯಾವತಿ, ಎಸ್‌ಪಿ ಮುಲಾಯಂ ಹಲವು ಡಾನ್‌ಗಳನ್ನು ಪೋಷಿಸಿ ಬೆಳೆಸಿ ರಾಜಕೀಯಕ್ಕೂ ತಂದರು. ಒಂದು ಹಂತದಲ್ಲಿ ಉತ್ತರಪ್ರದೇಶ ವಿಧಾನಸಭೆಯಲ್ಲಿ ಶೇ.70ಕ್ಕೂ ಅಧಿಕ ಮಂದಿ ಕ್ರಿಮಿನಲ್ ಕೇಸುಗಳಿರುವವರೇ ಶಾಸಕರಾಗಿದ್ದರು. ಬಿಜೆಪಿಯ ಅನೇಕ ಕಾರ್ಯಕರ್ತರು, ಶಾಸಕರನ್ನು ಈ ಮಾಫಿಯಾಗಳು ಕೊಂದು ಹಾಕಿದವು. ಈ ಕೇಸುಗಳನ್ನು ಅಧಿಕಾರಸ್ಥ ರಾಜಕಾರಣಿಗಳು ಮುಚ್ಚಿಹಾಕಿದರು. ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ಉಭಯ ಪಕ್ಷಗಳ ಕೆಲವು ನಾಯಕರು ಈ ಡಾನ್‌ಗಳನ್ನು ಬಳಸಿಕೊಂಡರು.
ವೈಲ್ಡ್ ವೆಸ್ಟ್, ಬ್ಯಾಡ್ ಈಸ್ಟ್
ಉತ್ತರಪ್ರದೇಶದ ಪೂರ್ವ ಭಾಗ ಹಾಗೂ ಪಶ್ಚಿಮ ಭಾಗಗಳು ಹೆಚ್ಚಾಗಿ ಕ್ರೈಮ್ ಸುಳಿಗೆ ಸಿಲುಕಿದ್ದವು. ಘಾಜಿಯಾಬಾದ್, ನೋಯಿಡಾ, ಮೀರತ್, ಸಹರಾನ್ಪುರ, ಕೈರಾನಾ, ಮುಝಾಫರ್‌ನಗರ ಮುಂತಾದ ಭಾಗಗಳಲ್ಲಿ ಸಾವಿರಾರು ಗ್ಯಾಂಗ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ರಸ್ತೆ ಸುಲಿಗೆ, ದರೋಡೆ, ಅಪಹರಣ, ಸುಪಾರಿ ಕೊಲೆ, ರಾಜಕೀಯ ಕೊಲೆ, ರಿಯಲ್ ಎಸ್ಟೇಟ್ ಬೆದರಿಕೆ, ಸಾಮೂಹಿಕ ಅತ್ಯಾಚಾರ- ಹೀಗೆ ಇವು ಮಾಡದ ಅಪರಾಧಗಳೇ ಇರಲಿಲ್ಲ. ಹೆಚ್ಚಿನ ಗ್ಯಾಂಗ್‌ಗಳು ಲಾಂಗು ಮಚ್ಚಿನಿಂದ ಹಿಡಿದು ಅತ್ಯಾಧುನಿಕ ಎಕೆ-47, ಗ್ರೆನೇಡ್‌ಗಳನ್ನು ಹೊಂದಿದ್ದು ಕಾರ್ಯಾಚರಿಸುತ್ತಿದ್ದವು.
ಕೆಲವು ಕುಖ್ಯಾತ ಡಾನ್‌ಗಳು…
ವಿಕಾಸ್ ದುಬೆ
ಇತ್ತೀಚೆಗೆ ಗುಂಡಿನ ದಾಳಿಯಲ್ಲಿ 7 ಪೊಲೀಸರನ್ನು ಕೊಂದುಹಾಕಿದ, ನಂತರ ಪೊಲೀಸರಿಂದಲೇ ಸತ್ತ ವಿಕಾಸ್ ದುಬೆ ಮೂರು ದಶಕಗಳಿಂದ ಗ್ಯಾಂಗ್‌ಸ್ಟರ್ ಆಗಿದ್ದ. 5 ಕೊಲೆ ಸೇರಿ 62 ಕೇಸುಗಳು ಇವನ ಮೇಲಿವೆ. 2001ರಲ್ಲಿ ಕಾನ್ಪುರ ದೇಹತ್‌ನಲ್ಲಿ ರಾಜ್ಯದ ಸಹಾಯಕ ಸಚಿವನಾಗಿದ್ದ, ಬಿಜೆಪಿ ಮುಖಂಡ ಸಂತೋಷ್ ಶುಕ್ಲಾರನ್ನು ಪೊಲೀಸ್ ಸ್ಟೇಶನ್ ಕಂಪೌಂಡ್‌ನಲ್ಲೇ ಹತ್ಯೆ ಮಾಡಿಸಿದ್ದ. ತನ್ನ ಮೇಷ್ಟ್ರನ್ನೇ ಕೊಲೆ ಮಾಡಿದ ಪಾಪಿ ಇವನು.
ಮುಕ್ತಾರ್ ಅನ್ಸಾರಿ
ಪೂರ್ವ ಯುಪಿಯ ಪ್ರಭಾವಿ ಡಾನ್. ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಅವರನ್ನು 2005ರಲ್ಲಿಕೊಲೆ ಮಾಡಿಸಿದ ಈತ 13 ವರ್ಷ ಜೈಲಿನಲ್ಲಿದ್ದ. ಮಾವು ಕ್ಷೇತ್ರದಿಂದ ಐದು ಬಾರಿ ಬಿಎಸ್‌ಪಿ ಟಿಕೆಟ್ ಪಡೆದು ಗೆದ್ದು ಶಾಸಕನಾಗಿದ್ದಾನೆ. ಈತನನ್ನು ವಿಧಾನಸಭೆ ಪ್ರವೇಶದಿಂದ ನಿಷೇಧಿಸಲಾಗಿದೆ.
ಬ್ರಿಜೇಶ್ ಸಿಂಗ್
ಪೂರ್ವ ಯುಪಿ ಹಾಗೂ ಬಿಹಾರಗಳು ಈತನ ಕಾರ್ಯಕ್ಷೇತ್ರ. ಮುಕ್ತಾರ್ ಅನ್ಸಾರಿಯ ಬದ್ಧ ವೈರಿ. 2001ರಲ್ಲಿ ಅನ್ಸಾರಿಯ ಮೆರವಣಿಗೆಯ ಮೇಲೆ ಗುಂಡಿನ ದಾಳಿ ನಡೆಸಿದ್ದ. ನಂತರ 2017ರಲ್ಲಿ ವಾರಾಣಸಿಯಲ್ಲಿ ಸ್ವತಂತ್ರನಾಗಿ ಚುನಾವಣೆಗೆ ನಿಂತು ಶಾಸಕನಾಗಿದ್ದಾನೆ.
ಮುನ್ನಾ ಬಜರಂಗಿ
1980ರಿಂದ ರಾಜ್ಯದಲ್ಲಿ ನಡೆಯುತ್ತಿರುವ ರಕ್ತದೋಕುಳಿಯಲ್ಲಿ ಈತನದೂ ಪಾತ್ರವಿದೆ. ಈತ ಮುಕ್ತಾರ್ ಅನ್ಸಾರಿಯ ಶಾರ್ಪ್ ಶೂಟರ್ ಆಗಿದ್ದ. ಸುಲಿಗೆ, ಸುಪಾರಿ ಕೊಲೆ, ಅಪಹರಣಗಳ ನೂರಾರು ಪ್ರಕರಣ ಇವನ ಮೇಲಿವೆ. 1998ರಲ್ಲಿ ಪೊಲೀಸ್ ಗುಂಡುಗಳು ಈತನ ದೇಹ ಹೊಕ್ಕರೂ ಬದುಕಿದ್ದ. ಚುನಾವಣೆಗೆ ನಿಂತರು ಸೋತಿದ್ದ. 2018ರಲ್ಲಿ ಬಾಗ್ಪಥ್ ಜೈಲಿನಲ್ಲಿ ವೈರಿಗುಂಪಿನ ಕೈದಿಗಳೇ ಈತನನ್ನು ಗುಂಡಿಕ್ಕಿ ಕೊಂದರು.
ಆತೀಕ್ ಅಹ್ಮದ್
ಅಲಹಾಬಾದ್, ಕೌಶಾಂಬಿಗಳು ಈತನ ಕಾರ್ಯಕ್ಷೇತ್ರ. ಅಲಹಾಬಾದ್‌ನ ಬಿಎಸ್‌ಪಿ ಶಾಸಕನಾಗಿದ್ದ ರಾಜು ಪಾಲ್‌ನನ್ನು ಕೊಲೆ ಮಾಡಿಸಿದವನೀತ. ಮರಳು ಗಣಿಗಾರಿಕೆ, ಭೂಮಾಫಿಯಾ ಇವನ ದಂಧೆಗಳು. ಬಿಎಸ್‌ಪಿಯ ಅಧಿಕಾರದ ಕಾಲದಲ್ಲಿ ಜೈಲಿಗೆ ಹೋಗುತ್ತಿದ್ದ, ಎಸ್‌ಪಿಯ ಕಾಲದಲ್ಲಿ ಅಧಿಕಾರ ಚಲಾಯಿಸುತ್ತಿದ್ದ. 14ನೇ ಲೋಕಸಭೆಯಲ್ಲಿ ಫುಲ್ಪುರದ ಸಂಸದನಾಗಿದ್ದ. ಈಗ ಸಬರಮತಿ ಜೈಲಿನಲ್ಲಿದ್ದಾನೆ.
ಬಬಲಿ ಕೋಲ್
ಬಹುಶಃ ಉತ್ತರಪ್ರದೇಶದ ಕೊನೆಯ ಡಕಾಯಿತ ನಾಯಕ ಇವನಿರಬಹುದು. 2007ರಿಂದ 2018ರವರೆಗೂ ಬುಂದೇಲಖಂಡದ ಹಳ್ಳಿಗಳಲ್ಲಿ ಕೊಲೆ ಸುಲಿಗೆ ಅಪಹರಣ ಅತ್ಯಾಚಾರಗಳನ್ನು ರಾಜಾರೋಷವಾಗಿ ನಡೆಸುತ್ತಿದ್ದ. 2019ರಲ್ಲಿ ಇವನನ್ನು ಎನ್‌ಕೌಂಟರ್ ಮಾಡಲಾಯಿತು.
ಸುಂದರ್ ಭಾಟಿ
ಬಿಜೆಪಿ ನಾಯಕ ಶಿವಕುಮಾರ್ ಯಾದವ್‌ನನ್ನು ನೋಯಿಡಾದಲ್ಲಿ ಕೊಲೆ ಮಾಡಿಸಿದ ಅಪರಾಧದಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, 2014ರಿಂಧ ಜೈಲಿನಲ್ಲಿದ್ದಾನೆ. ಇವನ ಗ್ಯಾಂಗ್ ಅತ್ಯಾಧುನಿಕ ಎಕೆ-47 ಇತ್ಯಾದಿಗಳನ್ನು ಹೊಂದಿದೆ. ಇವನೂ ಲೋಕದಳದಿಂದ ಚುನಾವಣೆಗೆ ನಿಂತು ಸೋತಿದ್ದಾನೆ.