ಗಾಂಧೀಜಿ ಚಿಂತನೆಯಿಂದ ದೂರ, ಬಲುದೂರ. ದೇಶದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಮಹಾತ್ಮರ ಅಂತ್ಯೋದಯ ಪರಿಕಲ್ಪನೆಯ ಆಶಯ

– ಹರಿಪ್ರಕಾಶ್‌ ಕೋಣೆಮನೆ
ಭಾರತದ ಸುದೀರ್ಘ ಇತಿಹಾಸದತ್ತ ಕಣ್ಣಾಡಿಸಿದರೆ ಅಲ್ಲಿ ದಾಳಿಕೋರರು ಇಲ್ಲವೇ ಆಕ್ರಮಣಕಾರಿಗಳ ಅಧ್ಯಾಯವೇ ಹೆಚ್ಚು. ದಾಳಿಕೋರರು ನಮ್ಮ ದೇಶದ ಮೇಲೆ ಎರಗಿ ಬಂದಾಗಲೆಲ್ಲಾ, ಸಮಾಜದಲ್ಲಿನ ಕೆಲವು ಗುಂಪುಗಳು ಪ್ರತಿರೋಧ ವ್ಯಕ್ತಪಡಿಸಿವೆ. ಒಂದಿಷ್ಟು ರಾಜರು ಅವರ ವಿರುದ್ಧ ಯುದ್ಧ ನಡೆಸಿ, ಹಿಮ್ಮೆಟ್ಟಿಸಿದ್ದಾರೆ. ಒಟ್ಟಾರೆ 1857ರಲ್ಲಿ ನಿರ್ದಿಷ್ಟವಾಗಿ ರೂಪುಗೊಂಡ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ಶ್ರೀಸಾಮಾನ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆಗಳು ಕಡಿಮೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂಬ ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದವಾದರೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ. ಮನೆಯಲ್ಲಿ ಪೂಜೆಗೆ ಸೀಮಿತವಾಗಿದ್ದ ಗಣೇಶ ಉತ್ಸವವನ್ನು ಸಾರ್ವಜನಿಕಗೊಳಿಸುವ ಮೂಲಕ ಜನಸಾಮಾನ್ಯರನ್ನು ಸ್ವಾತಂತ್ರ್ಯ ಹೋರಾಟದ ಮುಖ್ಯ ವಾಹಿನಿಗೆ ಸೇರಿಸುವ ಬಹುದೊಡ್ಡ ಕಾರ್ಯವನ್ನು ಬಾಲಗಂಗಾಧರ ತಿಲಕರು ಮುಂಬಯಿನಲ್ಲಿ ಯಶಸ್ವಿಯಾಗಿ ನಡೆಸಿದರು. ಅವರ ಬಳಿಕ 1920ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಮೋಹನದಾಸ ಕರಮಚಂದ ಗಾಂಧಿ ಈ ಜನಾಂದೋಲನವನ್ನು ದೇಶದ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಕೊಂಡೊಯ್ದರು. 33 ಕೋಟಿ ಭಾರತೀಯರನ್ನು ಸ್ವಾತಂತ್ರ್ಯದ ಹೆಸರಿನಲ್ಲಿ ಒಗ್ಗೂಡಿಸುವ ಮಹಾನ್‌ ಕೆಲಸವನ್ನು ಗಾಂಧಿ ಮಾಡಿದರು.
ಇದೆಲ್ಲವೂ ಸಾಧ್ಯವಾಗಿದ್ದು ಗಾಂಧಿ ಎಂಬ ಒಬ್ಬ ವ್ಯಕ್ತಿಯಿಂದ ಮಾತ್ರವಲ್ಲ. ಗಾಂಧಿ ಎಂಬ ಚಿಂತನೆಯಿಂದ. ಇದು ಆಬಾಲವೃದ್ಧರನ್ನು ಆಕರ್ಷಿಸಿತು. ಈ ಹೊತ್ತು ಆತ್ಮ ನಿರ್ಭರತೆ ಸೇರಿದಂತೆ ಹೊಸ ಹೊಸ ಪದಪುಂಜದಲ್ಲಿ ಪ್ರತಿಪಾದನೆಯಾಗುತ್ತಿರುವ ಅಭಿವೃದ್ಧಿಪರ ಆಲೋಚನೆಗಳನ್ನು, ಗಾಂಧೀಜಿ ಏಳೂವರೆ ದಶಕದ ಹಿಂದೆಯೇ ಗ್ರಾಮ ಸ್ವರಾಜ್ಯ, ಸ್ವಾವಲಂಬನೆ ಮತ್ತು ಆಡಳಿತ ವಿಕೇಂದ್ರೀಕರಣ ಎಂಬ ಸರಳ ಸೂತ್ರಗಳ ಮೂಲಕ ಹರಿಯಬಿಟ್ಟಿದ್ದರು. ಈ ಎಲ್ಲವೂ ಆಕರ್ಷಣೆಯ ಮಾತುಗಳಾಗಿರಲಿಲ್ಲ. ಕಾರ್ಯಸಾಧ್ಯ ರಚನಾತ್ಮಕ ಕೃತಿಗಳೇ ಆಗಿದ್ದವು.
ಇಂದು ಮಹಾತ್ಮ ಗಾಂಧೀಜಿ ಜನ್ಮದಿನ. ಈ ಬಾರಿ 151ನೇ ವರ್ಷಾಚರಣೆಯ ಗಾಂಧಿ ಜಯಂತಿ. ಕೇಂದ್ರ ಹಾಗೂ ಎಲ್ಲ ರಾಜ್ಯ ಸರಕಾರಗಳು ವರ್ಷ ಪೂರ್ತಿ ಗಾಂಧಿಯನ್ನು ಸ್ಮರಿಸುತ್ತಿವೆ. ಇಂಥ ಹೊತ್ತಲ್ಲಿ, ದೇಶದ ಆಳುವ ಸರಕಾರಗಳು ಕೈಗೊಳ್ಳುತ್ತಿರುವ ನಿರ್ಧಾರಗಳು, ಅವುಗಳ ರೀತಿ ನೀತಿ, ಸರಕಾರದ ಯೋಜನೆಗಳ ಹಿಂದಿನ ಆಲೋಚನೆಗಳನ್ನು ಗಾಂಧಿ ಚಿಂತನೆಯ ಮೂಸೆಯಲ್ಲಿ ಅವಲೋಕಿಸೋಣ.
*ತತ್ವ ರಹಿತ ರಾಜಕಾರಣದ ಮೇಲುಗೈ
ಭಾರತದ ಸಮಸ್ಯೆಗಳಿಗೆ ಮೂಲ ಕಾರಣವನ್ನು ಗಾಂಧೀಜಿ ಗುರುತಿಸಿದ್ದರು. ಅವುಗಳನ್ನು ಪರಿಹರಿಸಬೇಕೆಂದರೆ ಸಪ್ತ ಪಾತಕಗಳಿಂದ ದೂರವಿದ್ದರಷ್ಟೆ ಸಾಧ್ಯ ಎಂದು ತಿಳಿಸಿದ್ದರು. ಅವುಗಳೆಂದರೆ 1. ತತ್ವರಹಿತ ರಾಜಕಾರಣ, 2. ದುಡಿಮೆ ಇಲ್ಲದ ಸಂಪತ್ತು, 3. ಆತ್ಮಸಾಕ್ಷಿ ಇಲ್ಲದ ಸಂತೋಷ, 4. ಚಾರಿತ್ರ್ಯವಿಲ್ಲದ ಶಿಕ್ಷ ಣ, 5. ನೀತಿ ಇಲ್ಲದ ವ್ಯಾಪಾರ, 6. ಮಾನವೀಯತೆ ಇಲ್ಲದ ಜ್ಞಾನ ಹಾಗೂ 7. ತ್ಯಾಗವಿಲ್ಲದ ಪೂಜೆ.
ಇವುಗಳಲ್ಲಿ ಮೊದಲನೆಯ ಅಂಶದಿಂದಲೇ ಇಡೀ ರಾಜಕಾರಣ ಬಹಳಷ್ಟು ದೂರ ಸಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ, ತಮ್ಮನ್ನು ಮಾತ್ರ ದೋಷಪೂರಿತವೆಂದು ಸಮಾಜ ಬೆರಳುಮಾಡಿ ತೋರಿಸಬಾರದೆಂಬ ಕಾರಣಕ್ಕಾಗಿ, ರಾಜಕಾರಣಿಗಳು ಸಮಾಜದ ಎಲ್ಲ ಕ್ಷೇತ್ರಗಳನ್ನೂ ಭ್ರಷ್ಟಗೊಳಿಸುತ್ತಲೇ ಇದ್ದಾರೆ. ಜಾತಿ ಜಾತಿಗಳ ನಡುವೆ ಪೈಪೋಟಿ ತಂದಿಡುವುದು, ಯಾವುದೇ ಕ್ಷೇತ್ರದಲ್ಲಿ ಸಮಸ್ಯೆ ಎದುರಾದ ಕೂಡಲೆ ಶಕ್ತಿ ರಾಜಕಾರಣ ಎಂಬುದು ಅದರಲ್ಲಿ ಮೂಗು ತೂರಿಸಿ, ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಸಮಾಜದಲ್ಲಿ ತಾನು ಮಾತ್ರ ಕೆಟ್ಟವನಲ್ಲ, ಎಲ್ಲರೂ ಹಾಗೆಯೇ ಇದ್ದಾರೆ ಎಂದು ಸಮರ್ಥನೆಯ ಬೀಜವನ್ನೇ ಬಿತ್ತಿ-ಬೆಳೆದಿದೆ! ಗಾಂಧೀಜಿ ಹೇಳಿದ ಸಪ್ತಪಾತಕಗಳಿಂದ ದೂರವಿರುವ ಬದಲಿಗೆ ಈ ಅಂಶಗಳನ್ನೇ ಮತ್ತಷ್ಟು ಗಟ್ಟಿಯಾಗಿ ಅಪ್ಪಿಕೊಳ್ಳುವ ಲಕ್ಷ ಣಗಳು ಕಾಣುತ್ತಿವೆ, ಇದು ದೇಶದ ಏಳಿಗೆ ದೃಷ್ಟಿಯಿಂದ ಆತಂಕಕಾರಿಯೂ ಹೌದು.
*ವ್ಯಾಪಾರಿ ನೀತಿ ಮರೆತ ಸರಕಾರ
ಸಪ್ತ ಪಾತಕಗಳಲ್ಲಿ 5ನೇ ಅಂಶವಾದ ನೀತಿ ಇಲ್ಲದ ವ್ಯಾಪಾರ ಎನ್ನುವುದು ವ್ಯವಹಾರವನ್ನು ಕಸುಬಾಗಿಸಿಕೊಂಡಿರುವ ಶ್ರೀಸಾಮಾನ್ಯರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಆಳುವ ಸರಕಾರಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಸ್ವಾತಂತ್ರ್ಯಪೂರ್ವದಿಂದಲೂ ಸರಕಾರಗಳು ಉದ್ದಿಮೆ ನಡೆಸುತ್ತಿವೆ. ಇಂಥ ಉದ್ದಿಮೆಗಳಲ್ಲಿ ಲಕ್ಷಾಂತರ ಕಾರ್ಮಿಕರು ದುಡಿಯುತ್ತಾರೆ. ಕೆಲವು ಕೈಗಾರಿಕೆಗಳು, ಉದ್ಯಮಗಳು ಸ್ಪರ್ಧಾತ್ಮಕವಾಗಿ ನಡೆಯುತ್ತಿದ್ದರೆ ಬಹುತೇಕ ಸಂಸ್ಥೆಗಳು ಅಧಿಕಾರಿಗಳ ಸೋಮಾರಿತನ, ಆಳುವ ರಾಜಕಾರಣಿಗಳ ದೂರದರ್ಶಿತ್ವದ ಕೊರತೆ, ಖಾಸಗಿಯವರಿಂದ ಲಂಚ ಪಡೆದ ಪರಿಣಾಮವಾಗಿ ಬಿಳಿ ಆನೆಗಳಾಗಿ ಪರಿಣಮಿಸಿವೆ. ಇನ್ನು, ಸರಕಾರಕ್ಕೆ ವಿವಿಧ ಮೂಲಗಳಿಂದ ಆದಾಯ ಲಭಿಸುತ್ತದೆ. ಅದರಲ್ಲಿ ಆದಾಯ ತೆರಿಗೆಯಂತಹ ನೇರ ತೆರಿಗೆ ಒಂದೆಡೆಯಾದರೆ ಜಿಎಸ್ಟಿ, ಅಬಕಾರಿ, ವಿವಿಧ ಸೆಸ್‌ಗಳು, ಇಂಧನ ಮೇಲಿನ ಸುಂಕ ಸೇರಿ ಅನೇಕ ಪರೋಕ್ಷ ತೆರಿಗೆಗಳಿವೆ. ಕೊರೊನಾ ಸಂದರ್ಭದಲ್ಲಿ ಸರಕಾರ ಉಸಿರಾಡುವಂತೆ ಮಾಡಿದ್ದು ಅಬಕಾರಿ ಸುಂಕ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧವಾಗಿತ್ತು ಹಾಗೂ ಇದು ಸತ್ಯವೂ ಆಗಿತ್ತು. ಮದ್ಯಸೇವನೆಯನ್ನು ಗಾಂಧೀಜಿ ವಿರೋಧಿಸಿದ್ದರು, ಸಂಪೂರ್ಣ ಪಾನನಿರೋಧವನ್ನು ಪ್ರತಿಪಾದಿಸಿದ್ದರು. ಅವರ ಒತ್ತಾಸೆಯ ಮೇಲೆಯೇ ಗೋವಧೆ ನಿಷೇಧ, ಪಾನನಿರೋಧದಂತಹ ವಿಷಯಗಳನ್ನು ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಯಿತು.
ಆದರೆ ಇಂದು ಸರಕಾರಗಳು ಮದ್ಯದ ಆದಾಯದಿಂದ ದೂರ ಸರಿಯುವ ಯೋಜನೆಯನ್ನು ಕನಸಿನಲ್ಲೂ ಮಾಡುವುದಿಲ್ಲ. ಸರಕಾರಕ್ಕೆ ಯಾವುದೇ ಶ್ರಮವಿಲ್ಲದೆ ಬಂದು ಬೀಳುವ ಈ ಹಣವನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿಲ್ಲ. ಗುಜರಾತ್‌ನಲ್ಲಿ ಪಾನನಿಷೇಧ ಈ ಹಿಂದಿನಿಂದಲೇ ಜಾರಿಯಲ್ಲಿದೆ, ನಂತರದಲ್ಲಿ ಕೆಲವು ರಾಜ್ಯಗಳು ಇಂತಹ ನಿರ್ಧಾರವನ್ನು ಕೈಗೊಂಡಿವೆ. ಮದ್ಯ ಸೇವನೆಯಿಂದ ಸಾರ್ವಜನಿಕರ ಆರೋಗ್ಯ ಕೆಡುತ್ತದೆ ಎಂಬ ಪ್ರಾಥಮಿಕ ಅಂಶವಿದ್ದರೂ ಸರಕಾರಗಳು ಅದರ ನಿಷೇಧಕ್ಕೆ ಮನಸ್ಸು ಮಾಡುತ್ತಿಲ್ಲ.
ಮದ್ಯದ ಜತೆಗೆ ಸರಕಾರಕ್ಕೆ ಯಾವುದೇ ಶ್ರಮವಿಲ್ಲದೆ ಆದಾಯ ತಂದುಕೊಡುವುದು ಇಂಧನದ ಮೇಲಿನ ತೆರಿಗೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬಿಟ್ಟರೆ ಬಹುಶಃ ದೇಶದಲ್ಲಿ, ತನ್ನ ಮೂಲ ಬೆಲೆಗಿಂತಲೂ ಹೆಚ್ಚಿನ, ಬಹುತೇಕ ದುಪ್ಪಟ್ಟು ತೆರಿಗೆಯನ್ನು ವಿಧಿಸಲಾಗುವ ಮತ್ತಾವ ಉತ್ಪನ್ನವೂ ಇಲ್ಲ. ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿರುವ ವಾಹನಗಳಿಗೆ ಇಂಧನ ಭರ್ತಿ ಮಾಡುವುದನ್ನೆ ಸರಕಾರಗಳು ಆದಾಯದ ಮೂಲವಾಗಿಸಿಕೊಂಡಿವೆ. ತೆರಿಗೆ ವಿಧಿಸುವ ಕುರಿತು ಚಾಣಕ್ಯನಿಗೆ ಸ್ಪಷ್ಟತೆ ಇತ್ತು. ಸರಕಾರದ ಆಡಳಿತ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅವಶ್ಯಕವಾದಷ್ಟು ತೆರಿಗೆಯನ್ನು ವಿಧಿಸಬೇಕು. ಆದರೆ ನಾಗರಿಕರ ಸಾಮರ್ಥ್ಯ‌ಕ್ಕಿಂತಲೂ ಭಾರವಾದ ತೆರಿಗೆಗಳನ್ನು ವಿಧಿಸಿ ಸಾರ್ವಜನಿಕರನ್ನು ಶೋಷಣೆ ಮಾಡಬಾರದು. ದುಂಬಿಯು ಹೂವಿಗೆ ತೊಂದರೆ ಆಗದಂತೆ ಸೂಕ್ತ ಪ್ರಮಾಣದ ಮಧುವನ್ನು ಹೀರುವಂತೆ ಸರಕಾರ ತೆರಿಗೆ ಸಂಗ್ರಹಿಸಬೇಕು ಎಂದು ತಿಳಿಸುತ್ತಾನೆ. ಇಂದು ದೇಶದ ಬಹುತೇಕ ರಾಜ್ಯಗಳು ಇಂಧನದ ಮೇಲಿನ ಆದಾಯವನ್ನು ಬಿಟ್ಟುಕೊಡಲು ತಯಾರಿಲ್ಲ, ಹಾಗಾಗಿಯೇ ಜಿಎಸ್ಟಿ ವ್ಯಾಪ್ತಿಗೆ ಸೇರ್ಪಡೆ ಮಾಡುವ ಹಾಗೂ ಮಾಡದಿರುವ ಒತ್ತಡ ಗುಂಪುಗಳು ಸಕ್ರಿಯವಾಗಿ ಜನಜೀವನ ದುರ್ಬರವಾಗುತ್ತಿದೆ.
ಮದ್ಯ ಹಾಗೂ ಇಂಧನದ ಮೇಲಿನ ಆದಾಯವನ್ನು ಸರಕಾರಗಳು ಪ್ರಮುಖ ಆದಾಯದ ಮೂಲವಾಗಿಸಿಕೊಂಡಿರುವುದು ದೌರ್ಭಾಗ್ಯ. ಇದು ಖಂಡಿತವಾಗಿಯೂ ಉತ್ತಮ ಆರ್ಥಿಕತೆಯ ಮಾದರಿ ಆಗಲು ಸಾಧ್ಯವಿಲ್ಲ. ನೀತಿ ಇಲ್ಲದ ವ್ಯಾಪಾರ ಎಂಬುದನ್ನು ಸರಕಾರಗಳು ತಮಗೇ ಅನ್ವಯಿಸಿಕೊಂಡರೆ ಈ ಸಮಸ್ಯೆ ಬಗೆಹರಿಯುತ್ತದೆ. ಈ ದೃಷ್ಟಿಯಿಂದಲೂ ಗಾಂಧೀಜಿ ಚಿಂತನೆಯಿಂದ ಬಹುದೂರ ಬಂದಿದ್ದೇವೆ.
*ಕೇಂದ್ರೀಕರಣದತ್ತ ಹೆಜ್ಜೆ
ಇನ್ನು, ಗ್ರಾಮೀಣ ಜೀವನದ ಬೆನ್ನೆಲುಬು ಎಂದು ಸಹಕಾರ ಕ್ಷೇತ್ರವನ್ನು ಪರಿಗಣಿಸಬಹುದು. ಅದರಲ್ಲೂ ಸಹಕಾರ ಕ್ಷೇತ್ರ ಸಾಕಷ್ಟು ಬೆಳವಣಿಗೆ ಕಂಡಿರುವ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ನಂತಹ ರಾಜ್ಯಗಳಲ್ಲಿ ಸಣ್ಣ ರೈತರ ಅವಶ್ಯಕತೆಗಳನ್ನು ಪೂರೈಸುವತ್ತ ಸಹಕಾರ ಸಂಘಗಳು, ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಿವೆ.
ಸಹಕಾರ ಸಂಘಗಳು ಇಂದು ಸಂಕಷ್ಟದಲ್ಲಿ ಸಿಲುಕಿಕೊಂಡಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಇರುವಂತೆ ಸಹಕಾರ ಸಂಘಗಳಿಗೆ ಸಂಕಷ್ಟದಲ್ಲಿ ನೆರವು ದೊರಕುವುದಿಲ್ಲ. ಆಡಳಿತ ಮಂಡಳಿಯಲ್ಲಿರುವವರು ಅವ್ಯವಹಾರ ನಡೆಸಿದರೆ, ಅದರ ಪರಿಣಾಮವನ್ನು ಹೂಡಿಕೆದಾರರು ಅನುಭವಿಸಬೇಕಾಗಿದೆ. ಬೆಂಗಳೂರಿನದ್ದೇ ಒಂದು ಬ್ಯಾಂಕಿನ ಉದಾಹರಣೆ ತೆಗೆದುಕೊಂಡರೆ, ತಮ್ಮ ನಿವೃತ್ತಿಯ ಹಣವನ್ನು, ಜೀವನ ಪೂರ್ತಿ ಕೂಡಿಟ್ಟಿದ್ದ ಹಣವನ್ನು ಹಿಂಪಡೆಯಲು ಆಗದೆ ವರ್ಷದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಯಾವುದೇ ರಾಷ್ಟ್ರೀಕೃತ ಅಥವಾ ವಾಣಿಜ್ಯ ಬ್ಯಾಂಕುಗಳು ನಷ್ಟ ಅನುಭವಿಸಿದರೆ ಆರ್‌ಬಿಐ ಸೇರಿ ಎಲ್ಲ ಸಂಸ್ಥೆಗಳೂ ಕೂಡಲೆ ನೆರವಿಗೆ ಬಂದು ಮತ್ತೊಂದು ಬ್ಯಾಂಕ್‌ ಜತೆಗೆ ವಿಲೀನ ಮಾಡುವ ಹಾಗೂ ಹೂಡಿಕೆದಾರರ ಆತಂಕ ನಿವಾರಿಸುವ ಕಾರ್ಯ ನಡೆಯುತ್ತದೆ. ಆದರೆ ಸಹಕಾರ ಬ್ಯಾಂಕುಗಳಿಗೆ ಈ ಅವಕಾಶವಿಲ್ಲ.
ಸಹಕಾರ ಸಂಘ ಎನ್ನುವ ಅಂಶ ಭಾರತೀಯ ಸಂವಿಧಾನದಲ್ಲೆ ಒತ್ತು ಪಡೆದಿದೆ. ರಾಜ್ಯನೀತಿಯ ನಿರ್ದೇಶಕ ತತ್ವಗಳ 43(ಬಿ) ಉಪಬಂಧದಲ್ಲಿ ತಿಳಿಸಿರುವಂತೆ, ‘‘ಸಹಕಾರ ಸಂಘಗಳು ಸ್ವಯಂ ಆಗಿ ರಚನೆಯಾಗುವುದನ್ನು, ಸ್ವಾಯತ್ತೆಯಿಂದ ಕಾರ್ಯನಿರ್ವಹಿಸುವುದನ್ನು, ಅವುಗಳಲ್ಲಿ ಪ್ರಜಾಸತ್ತಾತ್ಮಕವಾದ ನಿಯಂತ್ರಣ ಮತ್ತು ವೃತ್ತೀಯ ನಿರ್ವಹಣೆ ಹೊಂದಿರುವುದನ್ನು ಉತ್ತೇಜಿಸುವುದಕ್ಕೆ ರಾಜ್ಯ ಪ್ರಯತ್ನಿಸತಕ್ಕದ್ದು,’’ ಎಂದು ತಿಳಿಸಲಾಗಿದೆ. ಅಂದರೆ ಸಹಕಾರ ಕ್ಷೇತ್ರದ ಮೇಲೆ ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ. ಸಂವಿಧಾನದ ಭಾಗ 19ಬಿ ‘243ರಿಂದ 243 ಜಡ್‌ ಟಿ’ವರೆಗೆ ಸಹಕಾರ ಸಂಘಗಳ ಸ್ಥಾಪನೆ, ನಿರ್ವಹಣೆ, ನಿಯಮ ರಚನೆಗಳಿಗಾಗಿಯೇ ಮೀಸಲಿಡಲಾಗಿದೆ.
ಸಹಕಾರ ಸಂಘಗಳ ಮೇಲಿನ ಅಧಿಕಾರವನ್ನು ರಾಜ್ಯಗಳ ವಿಧಾನ ಮಂಡಲಗಳಿಗೆ ಸ್ಪಷ್ಟವಾಗಿ ನೀಡಲಾಗಿದೆ. ವಿಕೇಂದ್ರೀಕೃತವಾಗಿಯೇ ಈ ಸಂಸ್ಥೆಗಳನ್ನು ಬಲಪಡಿಸುವ ಕಾರ್ಯ ನಡೆಯಬೇಕಿತ್ತು. ಆದರೆ ಇದೀಗ ಸಹಕಾರ ಕ್ಷೇತ್ರವನ್ನು ಕೇಂದ್ರೀಕರಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರದಲ್ಲಿ ಪ್ರತ್ಯೇಕವಾದ ಸಹಕಾರ ಸಚಿವಾಲಯವನ್ನು ರೂಪಿಸಲಾಗಿದೆ. ಈಗಾಗಲೆ ತಿಳಿಸಿದಂತೆ, ಸಹಕಾರ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿದಾಗ ಬ್ಯಾಂಕನ್ನು ಹಾಗೂ ಹೂಡಿಕೆದಾರರನ್ನು ಸಂರಕ್ಷಿಸಲು ಈ ಸಚಿವಾಲಯ ಬಳಕೆಯಾದರೆ ಸ್ವಾಗತಾರ್ಹ. ಆದರೆ ಕ್ಷೇತ್ರದ ಆಡಳಿತವನ್ನು, ನಿರ್ವಹಣೆಯನ್ನು ಕೇಂದ್ರೀಕರಿಸುವ ಪ್ರಯತ್ನಗಳಿವೆ ಎಂಬ ಅನುಮಾನಗಳು ಅನೇಕ ಕಡೆಗಳಿಂದ ಕೇಳಿಬರುತ್ತಿವೆ. ಈ ರೀತಿ ಆದರೆ ಒಟ್ಟಾರೆ ವಿಕೇಂದ್ರೀಕರಣದ ಆಶಯ ನೆಲಕಚ್ಚುತ್ತದೆ.
ಈಗಾಗಲೆ ವಿದೇಶದ ಮಾದರಿಗಳನ್ನು ಅನುಸರಿಸಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಜಾರಿಯಲ್ಲಿದೆ. ದೇಶದ ಅನೇಕ ರಾಜ್ಯಗಳಲ್ಲಿ ಹಂಚಿಹೋಗಿದ್ದ ಈ ಬ್ಯಾಂಕುಗಳ ಲಾಭವೇನು ಎಂದು ಅರಿಯಲು 2008ರ ಜಾಗತಿಕ ಆರ್ಥಕ ಸಂಕಷ್ಟ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಬೇಕು. ಆರ್ಥಿಕ ಹೊಡೆತಕ್ಕೆ ಸಿಲುಕಿದ ಬೃಹತ್‌ ಬ್ಯಾಂಕುಗಳು ಅಮೆರಿಕದಂತಹ ದೇಶಗಳಲ್ಲೂ ಕದ ಮುಚ್ಚಿ ಹೇಳ ಹೆಸರಿಲ್ಲದಂತೆ ನಶಿಸಿ ಹೋದವು. ಆದರೆ ಭಾರತದಲ್ಲಿ ಒಂದೇ ವಾಣಿಜ್ಯ ಬ್ಯಾಂಕ್‌ ಸಹ ಆರ್ಥಿಕ ಕುಸಿತಕ್ಕೆ ಕದ ಮುಚ್ಚಲಿಲ್ಲ. ಸಂಪೂರ್ಣ ವಿಕೇಂದ್ರೀಕೃತ ವ್ಯವಸ್ಥೆಯಿಂದ ಹೆಚ್ಚು ಹೊಡೆತ ತಿನ್ನುವ ಶಕ್ತಿ ಬರುತ್ತದೆ ಎಂಬುದು ಆರ್ಥಿಕ ಕ್ಷೇತ್ರದ ಮೂಲಪಾಠ. ಆದರೆ ಈ ಬ್ಯಾಂಕುಗಳನ್ನು ವಿಲೀನ ಮಾಡುವ ನಿರ್ಧಾರ ಮಾಡಲಾಯಿತು. ಇದಕ್ಕೆ ಆರ್ಥಿಕ ತಜ್ಞರೆನಿಸಿಕೊಂಡವರು ನೀಡಿದ ಕಾರಣ ಏನು ಗೊತ್ತೇ? ದೇಶದಲ್ಲಿ ದೊಡ್ಡ ಸಾಲಗಳನ್ನು ನೀಡುವ ಮೂರ್ನಾಲ್ಕು ಬ್ಯಾಂಕುಗಳಿರಬೇಕು ಎಂದು! ಆದರೆ ದೊಡ್ಡ ಸಾಲವನ್ನು ಪಡೆಯಲು ಯಾರಿಂದ ಸಾಧ್ಯ? ಬೃಹತ್‌ ಕಾರ್ಪೊರೇಟ್‌ ಸಂಸ್ಥೆಗಳಿಂದ ಅಲ್ಲವೇ? ಈಗಾಗಲೆ ದೊಡ್ಡ ಸಾಲ ಪಡೆದ ವಿಜಯ್‌ ಮಲ್ಯ ಮಾಡಿದ ಅನಾಹುತದಿಂದ ದೊಡ್ಡ ಬ್ಯಾಂಕ್‌ಗಳ ಒಕ್ಕೂಟ ಅನುಭವಿಸುತ್ತಿರುವ ಸಂಕಷ್ಟ ಕಣ್ಣೆದುರಿಗೇ ಇದೆ. ದೊಡ್ಡ ಸಾಲಗಳನ್ನು ನೀಡಿ ಕೆಲವರಿಗೆ ಮಾತ್ರ ಸಹಕಾರ ನೀಡಬೇಕು ಎಂಬುದೇ ಕೆಟ್ಟ ಆರ್ಥಿಕತೆಯ ಮೂಲಾಧಾರ. ಇನ್ನು, ಕರ್ನಾಟಕ ನೆಲದಲ್ಲಿ ಆರಂಭವಾಗಿ, ಸದ್ಯ ಬೇರೆ ಬ್ಯಾಂಕ್‌ಗಳ ಜತೆ ವಿಲೀನವಾಗಿರುವ ಅನೇಕ ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು ತಮ್ಮದೇ ವಿಶಿಷ್ಟ ಕಾರ್ಯ ಸಂಸ್ಕೃತಿಯನ್ನು ಹೊಂದಿದ್ದವು. ಪ್ರತಿ ಬ್ಯಾಂಕ್‌ ಸಹ ಸಮಾಜದ ಪ್ರತ್ಯೇಕ ವರ್ಗದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಬ್ಯಾಂಕುಗಳ ವಿಲೀನದ ಮೂಲಕ ಈ ವೈವಿಧ್ಯತೆಯನ್ನು ಅಳಿಸಿಹಾಕಿ ಏಕರೂಪತೆಯನ್ನು ಹೇರಲಾಯಿತು. ಅಲ್ಲಿಗೆ, ವಿಕೇಂದ್ರೀಕರಣ ಎಂಬ ಗಾಂಧೀಜಿಯ ಮತ್ತೊಂದು ಚಿಂತನೆಯಿಂದಲೂ ನಾವು ಬಹುದೂರ ಬಂದಿದ್ದಾಗಿದೆ.
ಕೊರೊನಾ ಸಮಯದಲ್ಲಿ ಲಕ್ಷಾಂತರ ಸಣ್ಣ ಉದ್ದಿಮೆಗಳು ಬಂದ್‌ ಆದವು. ದೊಡ್ಡ ಉದ್ದಿಮೆಗಳಿಗೆ ಸರಕಾರದ ಕೃಪಾಕಟಾಕ್ಷ ದ ನಂತರವೂ ಸಣ್ಣ ಉದ್ದಿಮೆಗಳೇ ದೇಶದ ಶೇ.35-40 ಜನಸಂಖ್ಯೆಯನ್ನು ಈಗಲೂ ಸಲಹುತ್ತಿವೆ. ಭಾರತೀಯರಲ್ಲಿ ಹಾಸುಹೊಕ್ಕಾಗಿದ್ದ ಸ್ವಾವಲಂಬಿ ಜೀವನ ವಿಧಾನವನ್ನು ದೊಡ್ಡ ಕೈಗಾರಿಕೆಗಳು ಇಲ್ಲವಾಗಿಸುತ್ತವೆ. ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳ ಮೂಲಕ ತಮ್ಮದೇ ಉತ್ಪನ್ನವನ್ನು ದೊಡ್ಡ ಕಂಪನಿಗಳಿಗೆ ಸರಬರಾಜು ಮಾಡುತ್ತ ಹಾಗೂ ಮಾರುಕಟ್ಟೆಯಲ್ಲಿ ನೇರವಾಗಿ ಮಾರಾಟ ನಡೆಸುತ್ತ ಸ್ವಾಭಿಮಾನದ ಜೀವನ ಕಂಡುಕೊಳ್ಳುತ್ತಿರುವ ಉದ್ಯಮವನ್ನು ಸರಕಾರಗಳು ಪ್ರೋತ್ಸಾಹಿಸಬೇಕು.
*ಉಳ್ಳವರಿಗಾಗಿ ಕೃಷಿ
ಕೃಷಿ ಕ್ಷೇತ್ರವೂ ಗಾಂಧೀಜಿ ಚಿಂತನೆಯಿಂದ ವಿಮುಖವಾಗಿ ಸೊರಗುತ್ತಿದೆ ಎಂದು ಹೇಳದೇ ವಿಧಿಯಿಲ್ಲ. ಸರಕಾರದ ನೆರವು, ನೀತಿ ಎಲ್ಲವೂ ದೊಡ್ಡ ಹಿಡುವಳಿ ಗುತ್ತಿಗೆ ಪಡೆದು ಗುತ್ತಿಗೆ ಕೃಷಿ ಮಾಡುವ ದೊಡ್ಡ ಕಂಪನಿಗಳಿಗೆ ಅನುಕೂಲವಾಗುವಂತೆ ರೂಪುಗೊಳ್ಳುತ್ತಿದೆ. ಇದರಿಂದ ದೊಡ್ಡ ಹಿಡುವಳಿ ಇರುವ ಶೇ.20ರಷ್ಟು ಕೃಷಿಕರಿಗೆ ಅಥವಾ ಕೃಷಿ ಗುತ್ತಿಗೆ ಪಡೆಯುವ ಕಂಪನಿಗಳಿಗೆ ಅನುಕೂಲವಾಗಿ ಶೇ.80 ಸಣ್ಣ ಹಿಡುವಳಿ ಕೃಷಿಕರಿಗೆ ಕಂಟಕಪ್ರಾಯವಾಗುತ್ತಿದೆ. ಇದರಿಂದ ಕೃಷಿ, ಕೃಷಿಯಿಂದ ಉದ್ಯಮ, ಆರ್ಥಿಕತೆ ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಸಾಧ್ಯವಿಲ್ಲ.
ಒಟ್ಟಾರೆ ಹೇಳುವುದಾದರೆ ದೇಶದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಆಗಬೇಕು ಎನ್ನುವುದು ಗಾಂಧೀಜಿಯವರ ಅಂತ್ಯೋದಯ ಪರಿಕಲ್ಪನೆಯ ಸಾರಾಂಶ. ಅಂದರೆ ದೇಶದ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಉದ್ದಿಮೆಗಳು, ಉದ್ಯಮಪತಿಗಳು, ಶಿಕ್ಷಿತರು, ಹಣವಂತರು ಕೇಂದ್ರವಾಗಿರಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಲಾಭವಾಗುತ್ತದೆಯೇ ಎಂಬುದನ್ನು ಮನಸ್ಸಿನಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಿದ್ದೇ ಆದರೆ ಭಾರತವು ಸಮಗ್ರ ಅಭಿವೃದ್ಧಿ ಹೊಂದುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಎಲ್ಲ ದುಡಿಯುವ ಕೈಗಳಿಗೆ ಸುಭದ್ರ ಕೆಲಸ, ದುಡಿದು ಸುಸ್ತಾದ ಕೈಗಳಿಗೆ ಜೀವನ ಸುರಕ್ಷ ತೆಯಂತಹ ಮಾರ್ಗವನ್ನು ಅನುಸರಿಸಬೇಕು. ಮದ್ಯ, ಇಂಧನದಂತಹ ಮಾರ್ಗಗಳಿಂದ ಆದಾಯ ಗಳಿಸುವ ಬದಲಿಗೆ ಜನರ ಬೆವರಿನ ಹನಿಯಿಂದ ದೊರೆತ ತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯ ಕೈಗೊಂಡರೆ ನೈತಿಕ ಆರ್ಥಿಕ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂಬುದನ್ನು ಅರ್ಥಶಾಸ್ತ್ರಜ್ಞರು, ಜನಪ್ರತಿನಿಧಿಗಳು ಅರಿತಾಗ ಮಾತ್ರ ನಾವು ಗಾಂಧೀಜಿಯವರಿಗೆ ನಿಜವಾದ ನಮನ ಸಲ್ಲಿಸಿದಂದಾಗುತ್ತದೆ. ಈಗಾಗಲೆ ಗಾಂಧೀಜಿ ಚಿಂತನೆಗಳಿಂದ ದೂರ, ಬಹುದೂರ ಬಂದಿದ್ದೇವೆ, ಮತ್ತೆ ಹತ್ತಿರವಾಗಲು ಪ್ರಯತ್ನಿಸೋಣ.
ಕಡೆ ಮಾತು: 1931ರಲ್ಲಿ ತಮ್ಮ ಯಂಗ್‌ ಇಂಡಿಯಾದಲ್ಲಿ ಗಾಂಧಿ ಭಾರತದ ಆರ್ಥಿಕ ವ್ಯವಸ್ಥೆ ಕುರಿತು ಹೀಗೆ ಬರೆದಿದ್ದಾರೆ-
ತೀರಾ ಬಡವನಾದವನು ಕೂಡ ಇದು ತನ್ನ ದೇಶ, ಇದರ ಏಳಿಗೆಯಲ್ಲಿ ತನ್ನದೂ ಒಂದು ಮುಖ್ಯವಾದ ಪಾಲಿದೆ ಎಂದು ತಿಳಿಯುವಂಥ ಭಾರತಕ್ಕಾಗಿ ನಾನು ದುಡಿಯುವೆ. ನನ್ನ ಕನಸಿನ ಸ್ವರಾಜ್ಯ ಬಡವನ ಸ್ವರಾಜ್ಯವೇ ಆಗಿರುತ್ತದೆ. ಉಳ್ಳವರೊಡನೆ, ಸ್ಥಿತಿವಂತರೊಡನೆ ಸರಿಸಮವಾಗಿ ಜೀವನದ ಅವಶ್ಯಕತೆಗಳನ್ನು ಬಡವನೂ ಹೊಂದಿರಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top