ಲಾಕ್‌ಡೌನ್‌ನಿಂದ ಕೃಷಿಕರಿಗೆ ಸಂಕಷ್ಟವಾದ ಸಂದರ್ಭದಲ್ಲಿ, ಕೃಷಿಕರಿಗೆ ಕೃಷಿ ಚಟುವಟಿಕೆಗಳಿಗೆ ಹಾಗೂ ತಾವು ಬೆಳೆದ ಬೆಳೆಗಳ ಮಾರಾಟಕ್ಕೆ ಮುಕ್ತ ವಾತಾವರಣ ಕಲ್ಪಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಈ ಭರವಸೆ ಸಕಾಲದಲ್ಲಿ ಈಡೇರದೆ ಇರುವುದರಿಂದ ರೈತರು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಮಾರಾಟ ವ್ಯವಸ್ಥೆ ಸಿಗದೆ ಕೃಷಿಕರ ಸಂಕಟ ಮುಂದುವರಿದಿದೆ. ಸಾವಿರಾರು ರೈತರು ಸರಿಯಾದ ಬೆಲೆ ಇಲ್ಲ ಎಂಬ ಕಾರಣದಿಂದ ನಿಂಬೆ ಹಣ್ಣು, ಕಲ್ಲಂಗಡಿ ಸೇರಿದಂತೆ ಹಲವು ಬೆಳೆಗಳನ್ನು ಗದ್ದೆಯಲ್ಲೇ ಬಿಟ್ಟಿದ್ದಾರೆ. ಈರುಳ್ಳಿ ಬೆಳೆದ ರೈತರು ಬೆಲೆ ಇಲ್ಲದೆ ಅದು ಕೊಳೆಯುವುದನ್ನು ನೋಡುತ್ತಿದ್ದಾರೆ.
ರೈತರೇನೋ ಕೃಷಿ ಚಟುವಟಿಕೆ ನಡೆಸಬಹುದು ಎಂದು ಹೇಳಿಕೆ ನೀಡಿದೆ. ಆದರೆ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಲವಾರು ಇವೆ. ಕೃಷಿ ಅಥವಾ ತೋಟಗಾರಿಕಾ ಇಲಾಖೆಗೆ ರಾಜ್ಯಾದ್ಯಂತ ಬೆಳೆದು ನಿಂತಿರುವ ಕೃಷ್ಯುತ್ಪನ್ನಗಳನ್ನು ವಿಲೇವಾರಿ ಮಾಡುವ ಸಾಮರ್ಥ್ಯ ಇಲ್ಲ. ತೋಟಗಾರಿಕಾ ಇಲಾಖೆ ಹಾಪ್‌ಕಾಮ್ಸ್ ಮೂಲಕ ಶೇ.10ರಷ್ಟು ಕೃಷಿ ಉತ್ಪನ್ನಗಳನ್ನಷ್ಟೇ ಖರೀದಿಸಬಹುದು. ಉಳಿದದ್ದು ಖಾಸಗಿಗೇ ಹೋಗಬೇಕು. ಕೃಷ್ಯುತ್ಪನ್ನ ಮಾರುಕಟ್ಟೆಗಳನ್ನು ನೆಚ್ಚಿಕೊಳ್ಳಬೇಕು. ಸ್ವತಃ ಮಾರಾಟ ಜಾಲವನ್ನು ರೂಪಿಸಿಕೊಂಡ ರೈತರು ವಿರಳ. ಲಾಕ್‌ಡೌನ್‌ನಿಂದಾಗಿ ಹಣ್ಣು ತರಕಾರಿಗಳ ಬೇಡಿಕೆ ಇಳಿದಿರುವುದರಿಂದ ಬೆಲೆ ನೆಲಕಚ್ಚಿದೆ. ಹೊಲದಲ್ಲೇ ಖರೀದಿ ನಡೆಯುತ್ತಿಲ್ಲ. ಹೊರ ರಾಜ್ಯಗಳಿಗೆ ಸಾಗಿಸಲು ಸರಕಾರದ ಅನುಮತಿ ಇದ್ದರೂ ಸಾಮಾನ್ಯ ರೈತರ ಪಾಲಿಗದು ಕಷ್ಟ ಸಾಧ್ಯ. ಅಲ್ಲೂ ಬೇಡಿಕೆಯಿಲ್ಲ. ಹೋಟೆಲ್, ಮದುವೆಗಳಿಲ್ಲದಿರುವುದರಿಂದ ಮಾರುಕಟ್ಟೆ ಕುಸಿದಿದೆ. ಈ ಮಧ್ಯೆ ಮಧ್ಯವರ್ತಿಗಳು ಅರ್ಧ ದುಡ್ಡಿಗೆ ಬೆಳೆ ಕೇಳುತ್ತಾರೆ. ಟೋಲ್ ವಿನಾಯಿತಿ ಕೂಡ ಸಿಕ್ಕಿಲ್ಲ.
ಈಗ ಬೆಳೆ ಕೊಯ್ಲು ಹಂಗಾಮ. ಈ ಹೊತ್ತಿನಲ್ಲಿ ಬೆಳೆಗಳು ರೈತರ ಕೈಗೆ ಬರುತ್ತಿದ್ದು, ಅವುಗಳಿಗೆ ಈಗ ಸೂಕ್ತ ಬೆಲೆ ಹಾಗೂ ಮಾರಾಟದ ಅವಕಾಶ ದೊರೆಯದೆ ಹೋದರೆ, ಇಡೀ ವರ್ಷದ ದುಡಿಮೆ ಮಣ್ಣಾಗುತ್ತದೆ. ಮುಂದಿನ ಹಂಗಾಮಕ್ಕೆ ಉಳಲು, ಬಿತ್ತಲು ಉತ್ಸಾಹ ಹಾಗೂ ಸಾಮರ್ಥ್ಯ ಉಳಿಯುವುದಿಲ್ಲ. ಹೀಗಾಗಿ ತಾನು ನೀಡಿದ ಭರವಸೆಯನ್ನು ಈಡೇರಿಸಲು ಸರಕಾರ ಇನ್ನಷ್ಟು ಹೆಚ್ಚಿನ ಪ್ರಯತ್ನ ಹಾಕುವುದು ಅಗತ್ಯವಾಗಿದೆ. ಪಂಜಾಬ್‌ನಂಥ ಸಣ್ಣ ರಾಜ್ಯದಲ್ಲಿ ನಮಗಿಂತ ದುಪ್ಪಟ್ಟು ಸಂಖ್ಯೆಯ ಖರೀದಿ ಕೇಂದ್ರಗಳಿವೆ. ಸಾಕಷ್ಟು ಖರೀದಿ ಕೇಂದ್ರಗಳನ್ನು ತೆರೆಯುವುದು ಹಾಗೂ ಬೆಳೆಗಳ ಸಂಗ್ರಹಕ್ಕೆ ತಕ್ಕ ವ್ಯವಸ್ಥೆ ಕಲ್ಪಿಸುವುದು; ನಿರ್ದಿಷ್ಟ ಕೇಂದ್ರಗಳಲ್ಲಿ ಶೈತ್ಯಾಗಾರಗಳ ವ್ಯವಸ್ಥೆಗಳು ಆಗಬೇಕಿವೆ. ಹಾಪ್‌ಕಾಮ್ಸ್‌ನ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬೇಕು. ರೈತರು ಮತ್ತು ಗ್ರಾಹಕರ ನಡುವೆ ನೇರ ಖರೀದಿಗೆ ವೇದಿಕೆಗಳ ಕೊರತೆಯಿದ್ದು, ಅವುಗಳಿಗೆ ಉತ್ತೇಜನ ನೀಡಬೇಕು. ಕೆಚಪ್, ವೈನ್ ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳಿಗೆ ಅವಕಾಶ, ಉತ್ತೇಜನ ನೀಡಬೇಕು. ನಂದಿನಿ ಮಳಿಗೆಗಳ ಮೂಲಕ ಹಣ್ಣು, ತರಕಾರಿ ಮಾರಾಟ ಮಾಡುವ ಮತ್ತೊಂದು ಘೋಷಣೆ ಜಾರಿ ಆಗಬೇಕು. ಮಧ್ಯವರ್ತಿಗಳ ಹಾವಳಿಗೆ ಕೊನೆ ಹಾಡಿ, ಎಪಿಎಂಸಿಗಳು ನ್ಯಾಯವಾದ ಬೆಲೆಯನ್ನು ನೀಡುವಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಕುಂಟುನೆವ ಹೇಳುವುದನ್ನು ಹಾಗೂ ಕಾಯಿದೆಯ ಅಡ್ಡಗೋಡೆಗಳನ್ನು ನಿರ್ಮಿಸುವುದನ್ನು ಬಿಟ್ಟು ರೈತರಿಗೆ ಸಹಾಯ ಮಾಡುವ ಏಕೈಕ ಉದ್ದೇಶದಿಂದ ಕ್ಷೇತ್ರಕ್ಕೆ ಇಳಿಯಬೇಕು. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳ ರೈತರ ಬೆಳೆಗಳಿಗೆ ಸೂಕ್ತ ರಕ್ಷಣೆ, ವಿಲೇವಾರಿ, ಬೆಲೆ ಸಿಗುವವರೆಗೆ ವಿಶ್ರಮಿಸುವುದಿಲ್ಲ ಎಂದು ಪಣ ತೊಡಬೇಕು. ಇವೆಲ್ಲವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಕ್ಷಿಪ್ರವಾಗಿ ಮಾಡಿದರಷ್ಟೇ ಅನ್ನದಾತರು ಈ ಹಂಗಾಮದಲ್ಲಿ ಅನ್ನ ಕಾಣಬಹುದು.